ಭಾರತದಲ್ಲಿ ಸಾಮರ್ಥ್ಯದ ದೊಡ್ಡ ಭಂಡಾರವಿದೆ- ಫ್ಲಿಪ್ ಕಾರ್ಟ್ ಉತ್ಪನ್ನಗಳ ಮುಖ್ಯ ನಿರ್ವಾಹಕ ಪುನೀತ್ ಸೋನಿ ಅಭಿಪ್ರಾಯ

ಟೀಮ್​ ವೈ.ಎಸ್​. ಕನ್ನಡ

ಭಾರತದಲ್ಲಿ ಸಾಮರ್ಥ್ಯದ ದೊಡ್ಡ ಭಂಡಾರವಿದೆ- ಫ್ಲಿಪ್ ಕಾರ್ಟ್ ಉತ್ಪನ್ನಗಳ ಮುಖ್ಯ ನಿರ್ವಾಹಕ ಪುನೀತ್ ಸೋನಿ ಅಭಿಪ್ರಾಯ

Tuesday December 15, 2015,

4 min Read

2007ರಲ್ಲಿ ಶುರುವಾದ ಸಂಸ್ಥೆ 12 ಸುತ್ತುಗಳ ಮಾತುಕತೆಗಳ ಬಳಿಕ 16 ಹೂಡಿಕೆದಾರರ ಮನವೊಲಿಸಿ 3.15 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಪಡೆದಿದ್ದು ಸಣ್ಣ ಸಂಗತಿಯೇನಲ್ಲ. ಫ್ಲಿಪ್ ಕಾರ್ಟ್ ಇಂದು 15 ಬಿಲಿಯನ್ ಡಾಲರ್ ಮೌಲ್ಯ ಹೊಂದಿದೆ. ಭಾರತದ ಅತೀ ದೊಡ್ಡ ಇ-ಕಾಮರ್ಸ್ ಕ್ರಾಂತಿ ಮಾಡಿದ ಸಂಸ್ಥೆ ಫ್ಲಿಪ್ ಕಾರ್ಟ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೋಟೋರೋಲಾದ ಮಾಜಿ ಉಪಾಧ್ಯಕ್ಷ ಹಾಗೂ ಗೂಗಲ್ ಸಂಸ್ಥೆಯ ಉತ್ಪನ್ನ ಮುಖ್ಯ ಕಾರ್ಯನಿರ್ವಾಹಕರಾದ ಪುನೀತ್ ಸೋನಿಯವರನ್ನು ತನ್ನ ಸಂಸ್ಥೆಗೆ ಬರಮಾಡಿಕೊಂಡಿದ್ದು ಫ್ಲಿಪ್‌ಕಾರ್ಟ್‌ನ ಈ ವರ್ಷದ ಅತೀ ದೊಡ್ಡ ಸಾಧನೆ. ಮಾರ್ಚ್‌ನಿಂದ ಪುನೀತ್ ಸೋನಿ ಫ್ಲಿಪ್ ಕಾರ್ಟ್‌ನ ಮುಖ್ಯ ಉತ್ಪನ್ನಗಳ ನಿರ್ವಹಣಾ ಜವಾಬ್ದಾರಿ ಹೊಂದಿದ್ದಾರೆ. ಯುವರ್ ಸ್ಟೋರಿಯ ಸಂಸ್ಥಾಪಕಿ ಶ್ರದ್ಧಾ ಶರ್ಮಾರೊಂದಿಗೆ ಮಾತನಾಡಿದ ಪುನೀತ್ ದಿ ಮಾರ್ಕೆಟ್ ಪ್ಲೇಸ್ 2015 ಕಾರ್ಯಕ್ರಮದ ಕುರಿತು ಮುಕ್ತವಾಗಿ ಮಾಹಿತಿ ನೀಡಿದ್ದಾರೆ. ಸುಮಾರು 100 ಸ್ಟಾರ್ಟ್ ಅಪ್ ಸಂಸ್ಥೆಗಳಿಗೆ ನೆರವಾಗುವಂತೆ ತಂತ್ರಜ್ಞಾನ ಅಭಿವೃದ್ಧಿ ಇತ್ಯಾದಿ ವಿಷಯಗಳ ಬಗ್ಗೆ ಕಾರ್ಯಕ್ರಮದಲ್ಲಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

image


2020ರ ವೇಳೆಗೆ ಭಾರತದಲ್ಲಿ ಆನ್‌ಲೈನ್‌ ಮಾರುಕಟ್ಟೆ ವಹಿವಾಟು 60 ಬಿಲಿಯನ್ ಡಾಲರ್ ತಲುಪುವ ಸಾಧ್ಯತೆ ಇದೆ. ಪುನೀತ್ ಹೇಳುವಂತೆ ಮುಂಬರುವ ದಿನಗಳಲ್ಲಿ ಅತೀ ದೊಡ್ಡ ವ್ಯಾವಹಾರಿಕ ಅವಕಾಶ ಇರುವುದೇ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ. ಈಗಾಗಲೇ ಫ್ಲಿಪ್ ಕಾರ್ಟ್ ಭಾರತದ ಇ-ಕಾಮರ್ಸ್ ಕ್ಷೇತ್ರದಲ್ಲಿ ಅರ್ಧದಷ್ಟು ಪ್ರಗತಿ ಸಾಧಿಸಿದೆ. ಅಂದರೆ ಶೇ. 1ರಷ್ಟು ಕಾಮರ್ಸ್ ಅವಕಾಶಗಳನ್ನು ಫ್ಲಿಪ್ ಕಾರ್ಟ್ ಬಾಚಿಕೊಂಡಿದೆ. ಟಯರ್ 2 ಹಾಗೂ ಟಯರ್ 3 ಉಪ ನಗರಗಳ ಮಾರುಕಟ್ಟೆಯಲ್ಲಿ ಫ್ಲಿಪ್ ಕಾರ್ಟ್ ತನ್ನ ಪ್ರಚಾರ ಹಾಗೂ ವ್ಯವಹಾರ ಈಗಷ್ಟೇ ಅಧಿಕಗೊಳಿಸುತ್ತಿದೆ. ಭಾರತದಲ್ಲಿ ಸುಮಾರು 50 ರಿಂದ 60 ರಾಷ್ಟ್ರಗಳ ಗ್ರಾಹಕರಿದ್ದಾರೆ. ಜೊತೆಗೆ ಬೇರೆ ಬೇರೆ ರಾಜ್ಯಗಳ ಗ್ರಾಹಕರ ಅಭಿರುಚಿಗೆ ತಕ್ಕಂತೆ ಮಾರುಕಟ್ಟೆಯನ್ನು ವಿನ್ಯಾಸಗೊಳಿಸುವ ಅಗತ್ಯವಿದೆ. ಪ್ರತಿಯೊಂದು ರಾಜ್ಯಗಳಿಗೆ ತನ್ನದೇ ಆದ ಮಾರುಕಟ್ಟೆಯ ನಾಯಕ ಬೇಕಿದೆ. ಇದು ಫ್ಲಿಪ್ ಕಾರ್ಟ್ ಮುಂದಿರುವ ಅವಕಾಶವೂ ಹೌದು, ಸವಾಲು ಹೌದು ಎನ್ನುತ್ತಾರೆ ಪುನೀತ್. ನಂಬಿಕೆ, ಭದ್ರತೆ ಹಾಗೂ ಗ್ರಾಹಕರಿಗೆ ಉತ್ಪನ್ನಗಳಲ್ಲಿ ವಂಚನೆಗಳಾಗದಂತೆ ತಡೆಯುವುದು ಕೆಲವು ಅತೀ ಮುಖ್ಯ ಸವಾಲುಗಳು ಎನ್ನುವುದು ಪುನೀತ್ ರ ಅಭಿಪ್ರಾಯ.

ಶ್ರದ್ಧಾ ಕೇಳಿದ, ಯಾವ ಮಾರುಕಟ್ಟೆ ಮುಂದೆ ಅತೀ ಹೆಚ್ಚು ಅವಕಾಶಗಳನ್ನು ಹೊಂದಿದೆ ಎಂಬ ಪ್ರಶ್ನೆಗೆ ಪುನೀತ್ ಅಚ್ಚರಿಯ ಉತ್ತರ ಕೊಟ್ಟಿದ್ದಾರೆ. ಅವರ ಪ್ರಕಾರ ಎಂದಿಗೂ ನಿಲ್ಲಿಸಲು ಸಾಧ್ಯವಿಲ್ಲದ ಕಾರ್ಯಕ್ರಮಗಳಲ್ಲಿ ಮದುವೆ ಸಮಾರಂಭಗಳೂ ಪ್ರಮುಖವಾದುದು. ಇವೆಂಟ್ ನಿರ್ವಹಣೆ ಮಾಡಬಲ್ಲ ಸ್ಟಾರ್ಟ್ ಅಪ್‌ ಸಂಸ್ಥೆಗಳ ಮುಂದೆ ಸಾಕಷ್ಟು ಅವಕಾಶಗಳಿವೆ. ಆದರೆ ಈ ಮಾರುಕಟ್ಟೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ವರ್ತಕರ ಪಾಲಿಗೆ ಪ್ಯಾಕೇಜಿಂಗ್‌ನಂತಹ ದೊಡ್ಡ ತೊಡಕಿದೆ. ವರ್ತಕರನ್ನು ಹೊರತುಪಡಿಸಿ ಉದ್ಯಮಿಯಾಗಿ ಯೋಚಿಸಿದಾಗ ಇದು ಸವಾಲಿನ ಜೊತೆ ಅವಕಾಶವೂ ಹೌದು. ಪುನೀತ್ ಹೇಳಿರುವ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.

ಸೆಕೆಂಡ್ ಹ್ಯಾಂಡ್ ಅನ್ನುವುದೇ ಹೊಸ ಟ್ರೆಂಡ್

ದಿ ಮಾರ್ಕೆಟ್ ಪ್ಲೇಸ್ 2015 ಇವೆಂಟ್‌ನಲ್ಲಿ 6 ಸ್ಟಾರ್ಟ್ ಅಪ್‌ಗಳಲ್ಲಿ ಅಂತಿಮವಾಗಿ ಆಯ್ಕೆಯಾಗಿದ್ದು ಒಂದು. ಅದು ಝಪೈಲ್, ಇದು ಫ್ಯಾಷನ್ ಉದ್ಯಮದ ಕಡೆ ಗಮನಹರಿಸಿರುವ ಸಂಸ್ಥೆ. ರಾಶಿ ಮೆಂಡಾ ಇದರ ಸಂಸ್ಥಾಪಕಿ. ಪ್ರಸ್ತುತ ಇದರ ಮಾರುಕಟ್ಟೆ ವಿಸ್ತಾರ ಸುಮಾರು 2.61 ಬಿಲಿಯನ್ ಡಾಲರ್ ಮೌಲ್ಯ ಹೊಂದಿದೆ. ಒಎಲ್ಎಕ್ಸ್ ಹಾಗೂ ಕ್ವಿಕರ್‌ಗಳು ಈಗಾಗಲೇ ಬಳಸುತ್ತಿರುವ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ಗ್ರಾಹಕರಿಗೆ ಒದಗಿಸುತ್ತಿವೆ.

ಭವಿಷ್ಯದ ಮಾರುಕಟ್ಟೆ ಬಗ್ಗೆ ಮಾತನಾಡುತ್ತಾ ಪುನೀತ್, ಗ್ರಾಹಕರಿಂದ ಗ್ರಾಹಕರಿಗೆ ಸಂಪರ್ಕ ಕಲ್ಪಿಸುವ ವೇದಿಕೆ ಸೃಷ್ಟಿಸುವುದು ಉದ್ಯಮಗಳ ಪಾಲಿನ ಹೊಸ ಆಯಾಮ ಎಂದಿದ್ದಾರೆ. ಇದರಿಂದ ಉತ್ಪನ್ನಗಳ ಗುಣಮಟ್ಟ ಹಾಗೂ ಉತ್ಪಾದನೆ ಬಗ್ಗೆ ಉದ್ಯಮಿಗಳು ತಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಅದರ ಬದಲಿಗೆ ಎರಡು ಕಡೆಯ ಗ್ರಾಹಕರ ಮಧ್ಯೆ ಸಂಪರ್ಕ ಸೇತುವೆ ಕಲ್ಪಿಸಿ ಸಂವಹನ ನಡೆಸುವುದರಿಂದ ನೇರ ವ್ಯವಹಾರ ಸಾಧ್ಯ.

ಮೊಬೈಲ್ ಹೇಗೆ ಅತೀ ಮುಖ್ಯ?

ಫ್ಲಿಪ್ ಕಾರ್ಟ್ ಕೇವಲ ಆ್ಯಪ್ ನಿಂದ ಮಾತ್ರ ಕಾರ್ಯಾಚರಿಸುತ್ತವೆ ಎಂಬ ವದಂತಿಗಳಿವೆ. ಆದರೆ ಫ್ಲಿಪ್ ಕಾರ್ಟ್‌ಗೆ ತನ್ನದೇ ಆದ ವೆಬ್‌ಸೈಟ್‌ ಇದೆ. ಕೆಲವು ವಾರಗಳ ಹಿಂದಷ್ಟೇ ಫ್ಲಿಪ್ ಕಾರ್ಟ್ ಮೊಬೈಲ್ ಸೈಟ್ ಫ್ಲಿಪ್ ಕಾರ್ಟ್ ಲೈಟ್‌ ಅನ್ನು ರೀ ಲಾಂಚ್ ಮಾಡಿತು. ಪುನೀತ್ ಹೇಳುವಂತೆ ಫ್ಲಿಪ್ ಕಾರ್ಟ್ ಹಾಗೂ ಇನ್ನಿತರ ಇಂಟರ್‌ನೆಟ್ ಆಧಾರಿತ ವ್ಯವಹಾರಗಳು ಮೊಬೈಲ್ ಮೂಲಕ ಹೆಚ್ಚಿನ ವ್ಯವಹಾರ ನಿರ್ವಹಿಸುತ್ತವೆ. ಆದರೆ ಭಾರತದಲ್ಲಿ ಸುಮಾರು 20 ಮಿಲಿಯನ್‌ಗೂ ಹೆಚ್ಚು ಲ್ಯಾಪ್‌ಟಾಪ್ ಬಳಕೆದಾರ ಗ್ರಾಹಕರಿದ್ದಾರೆ. ಮಿಲಿಯನ್‌ಗಟ್ಟಲೆ ಗ್ರಾಹಕರು ಲ್ಯಾಪ್‌ಟಾಪ್ ಅಥವಾ ಡೆಸ್ಕ್ ಟಾಪ್ ಬಳಸುವುದಿಲ್ಲ ಎಂದರೆ ಅವರಿಗೆ ನಿಮ್ಮ ಸೇವೆಗಳನ್ನು ತಲುಪಿಸುವುದು ಹೇಗೆ? ಹಾಗಾಗಿ ಕಡಿಮೆ ಮೊತ್ತದ ಆ್ಯಂಡ್ರಾಯ್ಡ್‌ ಫೋನ್‌ನ ಕಡಿಮೆ ಮೆಮೋರಿ ಸಾಮರ್ಥ್ಯದಲ್ಲಿ, 2ಜಿಯಂತಹ ಕಡಿಮೆ ಗುಣಮಟ್ಟದ ಇಂಟರ್ನೆಟ್‌ ಸಿಗ್ನಲ್‌ಗಳಲ್ಲೂ ಕೆಲಸ ಮಾಡುವ ಆ್ಯಪ್ ಅವಶ್ಯಕತೆ ಇರುತ್ತದೆ. ಫ್ಲಿಪ್ ಕಾರ್ಟ್ ಸಂಸ್ಥೆಯ ಫ್ಲಿಪ್ ಕಾರ್ಟ್ ಲೈಟ್ ಕೇವಲ 10 ಕೆಬಿ ಸಾಮರ್ಥ್ಯದಲ್ಲಿಯೂ ಕೆಲಸ ನಿರ್ವಹಿಸಬಲ್ಲದು ಅನ್ನುವುದು ಪುನೀತ್‌ರ ಭರವಸೆ.

ಯುವ ಸ್ಟಾರ್ಟ್ ಅಪ್ ಉದ್ಯಮಿಗಳಿಗೆ ಕಿವಿಮಾತು ಹೇಳಿರುವ ಪುನೀತ್, ಮೊದಲು ಒಂದು ನಿರ್ದಿಷ್ಟ ಔದ್ಯಮಿಕ ವಲಯವನ್ನು ಗುರುತಿಸಿ, ಯಾವ ಸಮುದಾಯದವರಿಗೆ ನೀವು ಸೇವೆ ಒದಗಿಸಬೇಕೆಂದು ತೀರ್ಮಾನಿಸಿದ್ದೀರಿ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಿ. ನಿರ್ದಿಷ್ಟ ಸಮುದಾಯ ಅಥವಾ ಪೀಳಿಗೆಯನ್ನು ಗುರುತಿಸುವುದು ತನ್ಮೂಲಕ ಗ್ರಾಹಕರನ್ನು ನಿರ್ಧರಿಸುವುದು ಕಷ್ಟವಾದರೂ ಅತ್ಯುತ್ತಮ ವಿಧಾನ.

ಸಣ್ಣ ಮೊಬೈಲ್ ಸ್ಕ್ರೀನ್‌ನಲ್ಲಿ ಸಾಕಷ್ಟು ಉತ್ಪನ್ನಗಳನ್ನು ನೋಡುವುದು ಮತ್ತು ಮಾಹಿತಿ ಸಂಗ್ರಹಿಸುವುದು ಕಷ್ಟ ಎನ್ನುವುದು ಬಹುತೇಕ ಗ್ರಾಹಕರ ಅಳಲು. ಪುನೀತ್ ಅದಕ್ಕೆ ಫ್ಲಿಪ್‌ಕಾರ್ಟ್‌ನ ಅಧಿಕೃತ ವೆಬ್‌ಸೈಟ್ ಸಹಾಯ ಮಾಡುತ್ತದೆ. ಫ್ಲಿಪ್ ಕಾರ್ಟ್‌ನ ತಾಂತ್ರಿಕ ತಂಡ ಈ ಸಮಸ್ಯೆಗಳನ್ನು ಪರಿಹರಿಸುವ ಕೆಲಸದಲ್ಲಿದೆ ಎಂದು ಪುನೀತ್ ಹೇಳಿದ್ದಾರೆ. ಮೊಬೈಲ್‌ ಸ್ಕ್ರೀನ್‌ಗಳಿಗೆ ಸಂಬಂಧಿಸಿದ ಈ ಸಮಸ್ಯೆ ಫ್ಲಿಪ್‌ಕಾರ್ಟ್‌ ಪಾಲಿನ ಅತೀ ದೊಡ್ಡ ಸವಾಲು ಎಂಬುದು ಪುನೀತ್‌ರ ಅಂಬೋಣ.

image


ಇನ್‌ಕ್ರೆಡಿಬಲ್ ಇಂಡಿಯಾ

20 ವರ್ಷಗಳ ಬಳಿಕ ಭಾರತೀಯ ಮಾರುಕಟ್ಟೆಯಲ್ಲಿ ಸಾಂಸ್ಕೃತಿಕ ಬದಲಾವಣೆ ಕಂಡುಬಂದಿದ್ದು ಅವರಿಗೆ ಅಚ್ಚರಿ ತರಿಸಿತ್ತು. ಬೌದ್ಧಿಕ ತುಡಿತ ಹಾಗೂ ಆಸಕ್ತಿದಾಯಕ ಆಲೋಚನೆಗಳು ನಮ್ಮ ಮಾರುಕಟ್ಟೆಯನ್ನು ಯಾವತ್ತೂ ಕ್ರಿಯಾಶೀಲಗೊಳಿಸಿವೆ. ಅದರಲ್ಲೂ ಭಾರತ ಯುವ ಶಕ್ತಿಗಳಿಂದ ಕೂಡಿದ ರಾಷ್ಟ್ರವಾಗಿದ್ದು, ಇಲ್ಲಿ ಅಸಂಖ್ಯಾತ ಆಲೋಚನೆಗಳ ಹಾಗೂ ಸಾಮರ್ಥ್ಯದ ಭಂಡಾರವೇ ಇದೆ. ಪ್ರಬುದ್ಧ ಯೋಚನೆ ಹಾಗೂ ಹೊಸತನ್ನು ಕಲಿಯುವ ವಾತಾವರಣವೂ ಇಲ್ಲಿದೆ. ಯಾವುದೇ ಔದ್ಯಮಿಕ ಪ್ರಗತಿಯಾಗಬೇಕಾದರೆ ಇವುಗಳೇ ಮುಖ್ಯ ಮಾನದಂಡ ಎನ್ನುವುದು ಪುನೀತ್ ಅಭಿಪ್ರಾಯ.

ಪ್ರಾದೇಶಿಕ ಭಾಷೆಗಳ ಆ್ಯಪ್ ಬಗ್ಗೆ ಮಾತನಾಡುತ್ತಾ ಪುನೀತ್ ಹೀಗೆ ಹೇಳಿದ್ದಾರೆ, ಮೊದ ಮೊದಲು ತಂತ್ರಜ್ಞಾನ ಸಂಬಂಧಿ ಉದ್ಯಮಗಳು ಅನಿವಾರ್ಯವಾಗಿ ಇಂಗ್ಲೀಷ್ ಭಾಷೆಯನ್ನು ಆ್ಯಪ್‌ನಲ್ಲಿ ಹೊಂದಬೇಕಿತ್ತು. ಆದರೆ ನಿಧಾನವಾಗಿ ಸೇವಾ ಕ್ಷೇತ್ರಗಳ ವಿಸ್ತಾರವಾಯಿತು, ಮಾರುಕಟ್ಟೆ ವಿಶಾಲ ಸ್ವರೂಪ ಪಡೆಯತೊಡಗಿತು, ಇ-ಕಾಮರ್ಸ್ ಮಾರುಕಟ್ಟೆ ವಿಸ್ತಾರವಾಗತೊಡಗಿತು. ಕ್ರಮೇಣ ಬೇರೆ ಬೇರೆ ಶಾಖೆಗಳಾಗಿ ಟಯರ್ 2, ಟಯರ್ 3ಯಂತಹ ಉಪಪಟ್ಟಣಗಳಲ್ಲೂ ಹರಡಿಕೊಳ್ಳಲಾರಂಭಿಸಿತು. ಈ ಸಂದರ್ಭದಲ್ಲಿ ಇಂಗ್ಲೀಷ್ ಭಾಷೆಗೆ ಪರ್ಯಾಯವಾಗಿ ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ನೀಡಬೇಕಾಯಿತು. ಗ್ರಾಹಕರ ಸಂಪರ್ಕ ಹಾಗೂ ಸಂವಹನಕ್ಕೆ ಇದು ಅತ್ಯಗತ್ಯವಾಗಿತ್ತು.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ

ಉದ್ಯಮಗಳ ಪ್ರಚಾರದಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರ ಏನು? ಅನ್ನುವ ವೀಕ್ಷಕರ ಇನ್ನೊಂದು ಪ್ರಶ್ನೆಗೆ ಪುನೀತ್ ವ್ಯಾವಹಾರಿಕ ಆಯಾಮದಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರ ಮಹತ್ವದ್ದು ಎಂದಿದ್ದಾರೆ. ಅದರಲ್ಲೂ ಆನ್‌ಲೈನ್ ಶಾಪಿಂಗ್‌ನಲ್ಲಿ ಇದು ನಿರ್ಣಾಯಕ. ಆಫ್‌ಲೈನ್ ಶಾಪಿಂಗ್‌ನಲ್ಲಿ ಗ್ರಾಹಕರು ನೇರವಾಗಿ ಮಾರುಕಟ್ಟೆಗೆ ತೆರಳುತ್ತಾರೆ. ಆದರೆ ಆನ್‌ಲೈನ್ ನಲ್ಲಿ ಮಾರುಕಟ್ಟೆಯೇ ಗ್ರಾಹಕರ ಬಳಿ ಬರುತ್ತದೆ. ಇಲ್ಲಿ ಗ್ರಾಹಕರ ಶಾಪಿಂಗ್‌ನಲ್ಲಿ ಕುಟುಂಬಸ್ಥರು, ಸ್ನೇಹಿತರು ಪ್ರಭಾವ ಬೀರುತ್ತಾರೆ. ವೈಯಕ್ತಿಕ ಅನುಭವಗಳನ್ನು ಉತ್ತಮಪಡಿಸಿಕೊಳ್ಳಲು ಸಾಮಾಜಿಕ ಮಾಧ್ಯಮಗಳು ನೆರವಾಗುತ್ತಿವೆ. ಮೊಬೈಲ್ ಕ್ರಾಂತಿಯಾದ ನಂತರ ಸಾಮಾಜಿಕ ಮಾಧ್ಯಮಗಳು ಆನ್‌ಲೈನ್ ಮಾರುಕಟ್ಟೆಯನ್ನು ಶೇ.100ರಷ್ಟು ಉತ್ತೇಜಿಸಿವೆ ಎನ್ನುವುದು ಪುನೀತ್ ಅಭಿಮತ.

ವರ್ತಕರಿಗೆ ಆನ್‌ಲೈನ್ ವ್ಯವಹಾರ ಕಲಿಕೆ

ಆನ್‌ಲೈನ್‌ ಬಿಸಿನೆಸ್‌ನಲ್ಲಿ ಹೇಗೆ ವ್ಯವಹಾರ ನಿರ್ವಹಿಸಬೇಕು ಎನ್ನುವ ಬಗ್ಗೆ ವರ್ತಕರಿಗೆ ಅರಿವು ಮೂಡಿಸುವುದು ಈ ಕ್ಷೇತ್ರದ ದೊಡ್ಡ ಸಮಸ್ಯೆ. ವರ್ತಕರಲ್ಲಿ ಬಹಳಷ್ಟು ಜನ ಅತ್ಯಂತ ಕಡಿಮೆ ತಾಂತ್ರಿಕ ಅನುಭವ ಹೊಂದಿರುತ್ತಾರೆ. ಪುನೀತ್ ಹೇಳುವಂತೆ ಯುವ ಸಮುದಾಯದ ವರ್ತಕರಲ್ಲಿ ಈ ಸಮಸ್ಯೆ ಇಲ್ಲ. ಈ ಮಾರುಕಟ್ಟೆಯಲ್ಲಿ ಗ್ರಾಹಕರಷ್ಟೇ ವರ್ತಕರೂ ಕೂಡ ಅತೀ ಮುಖ್ಯ. ಇಲ್ಲಿ ವರ್ತಕರು ಬಳಕೆದಾರರೂ ಸಹ ಆಗಿರುತ್ತಾರೆ. ಅವರನ್ನು ಹೇಗೆ ಪ್ರೇರೇಪಿಸಿ, ಅವರಿಂದ ಸೇವೆಗಳನ್ನು ಪಡೆದುಕೊಳ್ಳಬಹುದು ಎಂದು ಆನ್‌ಲೈನ್ ಉದ್ಯಮಿಗಳು ಅರಿತಿರಬೇಕು. ಇನ್ನೊಂದರ್ಥದಲ್ಲಿ ವರ್ತಕರನ್ನು ಆನ್‌ಲೈನ್‌ ವ್ಯವಹಾರಗಳ ಬಗ್ಗೆ ಸೂಕ್ತ ಮಾಹಿತಿ, ತರಬೇತಿ, ಶಿಕ್ಷಣ ನೀಡಿ ಬಳಸಿಕೊಳ್ಳಬೇಕು. ವರ್ತಕರಿಗೆ ಬೇಕಾಗಿರುವುದೇನು ಎನ್ನುವ ಸರಳ ಪ್ರಶ್ನೆಯನ್ನು ಮೊದಲ ಬಾರಿಗೇ ಉದ್ಯಮಿಗಳು ಕೇಳಿಕೊಂಡಿರೆ ಈ ಉದ್ಯಮದ ಆರಂಭಿಕ ಸಂಕಷ್ಟ ದೂರ ಆಗುತ್ತದೆ ಅನ್ನುವುದು ಪುನೀತ್ ಅಭಿಪ್ರಾಯ.


ಲೇಖಕರು: ಅಥಿರ ಎ. ನಾಯರ್​

ಅನುವಾದಕರು: ವಿಶ್ವಾಸ್​​