`ಹೌಸ್‍ಜೊಯ್'ಗೆ `ಅಮೇಝಾನ್'ನಿಂದ 150 ಕೋಟಿ ನೆರವು...

ಟೀಮ್​​ ವೈ.ಎಸ್​. ಕನ್ನಡ

`ಹೌಸ್‍ಜೊಯ್'ಗೆ `ಅಮೇಝಾನ್'ನಿಂದ 150 ಕೋಟಿ ನೆರವು...

Wednesday December 23, 2015,

3 min Read

`ಹೌಸ್‍ಜೊಯ್' ಮನೆ ಮನೆಗೂ ಆನ್‍ಲೈನ್ ಸೇವೆ ಒದಗಿಸುವ ಸಂಸ್ಥೆ. ಸಿರೀಸ್ ಬಿ ಸುತ್ತಿನ ಫಂಡಿಂಗ್‍ನಲ್ಲಿ `ಹೌಸ್‍ಜೊಯ್' 150 ಕೋಟಿ ರೂಪಾಯಿ ಸಂಗ್ರಹಿಸಿದೆ. ಈ ಸುತ್ತನ್ನು `ಅಮೇಝಾನ್' ಮುನ್ನಡೆಸಿದ್ದು, `ವೆರ್ಟೆಕ್ಸ್ ವೆಂಚರ್ಸ್', `ಕ್ವಾಲ್ಕಮ್' ಮತ್ತು `ರು-ನೆಟ್ ಟೆಕ್ನಾಲಜಿ ಪಾರ್ಟ್‍ನರ್ಸ್' ಕೂಡ ಹೂಡಿಕೆ ಮಾಡಿವೆ. ಈ ಹೊಸ ಸುತ್ತಿನಲ್ಲಿ ಈಗಾಗ್ಲೇ ಅಸ್ತಿತ್ವದಲ್ಲಿರುವ `ಮ್ಯಾಟ್ರಿಕ್ಸ್ ಪಾರ್ಟ್‍ನರ್ಸ್ ಇಂಡಿಯಾ' ಕೂಡ ಪಾಲ್ಗೊಂಡಿತ್ತು.

ಸರ್ವೀಸ್ ಇಂಡಸ್ಟ್ರಿಯಲ್ಲಿ ಅಪಾರ ಅನುಭವ ಗಳಿಸಿರುವ ಸುನಿಲ್ ಗೋಯೆಲ್ ಮತ್ತು ಅರ್ಜುನ್ ಕುಮಾರ್ ಜೊತೆಯಾಗಿ, 2015ರ ಜನವರಿಯಲ್ಲಿ `ಹೌಸ್‍ಜೊಯ್' ಅನ್ನು ಸ್ಥಾಪಿಸಿದ್ದಾರೆ. ಆರಂಭದಲ್ಲಿ 40-50 ಉದ್ಯೋಗಗಳಷ್ಟಿದ್ದ ರನ್ ರೇಟ್, ಕಳೆದ ನವೆಂಬರ್ ವೇಳೆಗೆ 10 ನಗರಗಳಲ್ಲಿ ಪ್ರತಿದಿನ 4000ಕ್ಕೆ ತಲುಪಿತ್ತು. ಫ್ಲಿಪ್‍ಕಾರ್ಟ್‍ನ ಮಾಜಿ ಪ್ರಾಡಕ್ಟ್ಸ್ ವಿಪಿ ಆಗಿದ್ದ ಸರಣ್ ಚಟರ್ಜಿ ಇತ್ತೀಚೆಗಷ್ಟೇ `ಹೌಸ್‍ಜೊಯ್' ಆಡಳಿತ ಮಂಡಳಿಯನ್ನು ಸೇರಿದ್ದಾರೆ. `ಹೌಸ್‍ಜೊಯ್'ನ ಸಿಇಓ ಆಗಿ ಅವರನ್ನು ನೇಮಕ ಮಾಡಲಾಗಿದೆ. 150 ಕೋಟಿ ನಿಧಿ ಸಂಗ್ರಹ `ಹೌಸ್‍ಜೊಯ್' ಪಯಣದಲ್ಲಿ ಮಹತ್ವದ ಮೈಲುಗಲ್ಲು ಅನ್ನೋದು ಸರಣ್ ಅವರ ಅಭಿಪ್ರಾಯ. ಈ ಸುತ್ತಿನಿಂದ ಸಂಸ್ಥೆಯ ಬೆಳವಣಿಗೆ, ತಂಡದ ಬಲ ಹಾಗೂ 9 ತಿಂಗಳುಗಳಲ್ಲಿ ಯಶಸ್ವಿ ಕಾರ್ಯನಿರ್ವಹಣೆಗೆ ಮತ್ತಷ್ಟು ಮೌಲ್ಯ ದೊರೆತಂತಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಪಾಲುದಾರಿಕೆ ಅವಕಾಶವನ್ನು ಮುಕ್ತವಾಗಿಟ್ಟಿದ್ದು, ಆಕ್ರಮಣಕಾರಿ ತಂಡವನ್ನು ಕಟ್ಟಲು ಆದ್ಯತೆ ನೀಡುವುದಾಗಿ ಸರಣ್ ತಿಳಿಸಿದ್ದಾರೆ.

image


ನಿರ್ವಹಣೆ, ಮನೆಯ ದುರಸ್ತಿ, ಕೊಳಾಯಿ ಜೋಡಿಸುವ ಕೆಲಸ, ವಿದ್ಯುತ್ ಸೇವೆಗಳು, ಮನೆಯ ಸ್ವಚ್ಛತೆ, ಕಂಪ್ಯೂಟರ್ ರಿಪೇರಿ, ಲಾಂಡ್ರಿ, ಡ್ರೈ ಕ್ಲೀನಿಂಗ್ ಸೇರಿದಂತೆ ಎಲ್ಲಾ ಬಗೆಯ ಸೇವೆಗಳನ್ನು `ಹೌಸ್‍ಜೊಯ್' ಒದಗಿಸುತ್ತಿದೆ. ಸೌಂದರ್ಯ ವರ್ಧನೆ, ಮದುಮಗಳ ಅಲಂಕಾರ ಸೇರಿದಂತೆ ವಿಶಿಷ್ಟ ಬಗೆಯ ಸೇವೆಗಳು ಕೂಡ ಇಲ್ಲಿ ಲಭ್ಯವಿವೆ. ಭವಿಷ್ಯದಲ್ಲಿ ಮನೆ ಆಧಾರಿತ ವಾಹನಗಳ ಸರ್ವೀಸಿಂಗ್ ಮತ್ತು ರಿಪೇರಿಯನ್ನು ಕೂಡ ಮಾಡುವ ಆಲೋಚನೆ `ಹೌಸ್‍ಜೊಯ್' ತಂಡದ ಮುಂದಿದೆ. 2015ರ ಆರಂಭದಲ್ಲಿ ಹೌಸ್‍ಜೊಯ್, ಸಿರೀಸ್ ಎ ಫಂಡಿಂಗ್‍ನಲ್ಲಿ `ಮ್ಯಾಟ್ರಿಕ್ಸ್ ಪಾರ್ಟ್‍ನರ್ಸ್'ನಿಂದ 4 ಮಿಲಿಯನ್ ಡಾಲರ್ ನೆರವನ್ನು ಪಡೆದುಕೊಂಡಿತ್ತು.

ಫ್ಲಿಪ್‍ಕಾರ್ಟ್ 1 ಬಿಲಿಯನ್ ಡಾಲರ್ ನಿಧಿಯನ್ನು ಹೆಚ್ಚಿಸಿಕೊಂಡ ಬೆನ್ನಲ್ಲೇ ಅದಕ್ಕೆ ಪೈಪೋಟಿ ಒಡ್ಡಲು 2014ರ ಜುಲೈನಲ್ಲಿ `ಅಮೇಝಾನ್' ಕೂಡ 2 ಬಿಲಿಯನ್ ಡಾಲರ್ ಫಂಡಿಂಗ್ ಬಗ್ಗೆ ಪ್ರಕಟಿಸಿತ್ತು. 2015ರ ಜುಲೈನಲ್ಲಿ ಅಮೇಝಾನ್, `ಬ್ಯಾಂಕ್ ಬಾಝಾರ್ ಡಾಟ್ ಕಾಮ್'ನಲ್ಲಿ 375 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಇತ್ತೀಚಿನ ಬಂಡವಾಳ ಹೂಡಿಕೆ ಬಗ್ಗೆ ಮಾತನಾಡಿದ ಅಮೇಝಾನ್ ಇಂಡಿಯಾದ ಉಪಾಧ್ಯಕ್ಷ ಹಾಗೂ ಕಂಟ್ರಿ ಮ್ಯಾನೇಜರ್ ಅಮಿತ್ ಅಗರ್ವಾಲ್, ಹೌಸ್‍ಜೊಯ್ ಕಾರ್ಯವೈಖರಿಯನ್ನು ಮೆಚ್ಚಿಕೊಂಡಿದ್ದಾರೆ. ಮನೆಗೆ ಅಗತ್ಯವಾದ ಸೇವೆ ಒದಗಿಸುವ ಮೂಲಕ ಗ್ರಾಹಕರಿಗೆ ಹೌಸ್‍ಜೊಯ್ ವಿಭಿನ್ನ ಅನುಭವ ಮೂಡಿಸುತ್ತಿದೆ. ಭಾರತದಲ್ಲಿ ಖರೀದಿ ಹಾಗೂ ಮಾರಾಟದ ವಿಧಾನದಲ್ಲಿ ಬದಲಾವಣೆ ತರುವ ತಮ್ಮ ಪ್ರಯತ್ನಕ್ಕೆ ಇದು ಪೂರಕವಾಗಿದೆ ಎನ್ನುತ್ತಾರೆ ಅಮಿತ್ ಅಗರ್ವಾಲ್.

ಹೌಸ್‍ಜೊಯ್ ತನ್ನ ವೇದಿಕೆ ಮೂಲಕ 11 ನಗರಗಳಲ್ಲಿ ಸುಮಾರು 10,000ಕ್ಕೂ ಹೆಚ್ಚು ಸರ್ವೀಸ್ ಪ್ರೊವೈಡರ್‍ಗಳ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಇತ್ತೀಚೆಗಷ್ಟೇ ಚಂಡೀಗಢಕ್ಕೂ ತನ್ನ ಸೇವೆಯನ್ನು ವಿಸ್ತರಿಸಿದೆ. ಹೊಸ ಹೂಡಿಕೆ ಪಾಲುದಾರರು, ಮಾರುಕಟ್ಟೆ ವಿಸ್ತರಣೆ, ಹೊಸ ಪಾಲುದಾರಿಕೆಯ ಪರಿಚಯ, ಸಮರ್ಥನೀಯ ವ್ಯಾಪಾರ ನಡೆಸುವ ಅತ್ಯುತ್ತಮ ಆಚರಣೆಗಳಿಗೆ ಇನ್ನಷ್ಟು ಅವಕಾಶಗಳನ್ನು ಮುಕ್ತವಾಗಿ ಕಲ್ಪಿಸಿಕೊಟ್ಟಿದ್ದಾರೆ ಅನ್ನೋದು `ಹೌಸ್‍ಜೊಯ್' ಸಹ ಸಂಸ್ಥಾಪಕ ಸುನಿಲ್ ಅವರ ಅಭಿಪ್ರಾಯ. ಮುಂದಿನ ಹಂತದ ಬೆಳವಣಿಗೆಯತ್ತ ಚಿತ್ತ ನೆಟ್ಟಿರುವುದಾಗಿ ಅವರು ತಿಳಿಸಿದ್ದಾರೆ.

ವಲಯ ಅವಲೋಕನ ಮತ್ತು ಭವಿಷ್ಯದ ಯೋಜನೆಗಳು...

ಸ್ಥಳೀಯ ಆನ್‍ಲೈನ್ ಸರ್ವೀಸ್ ಇಂಡಸ್ಟ್ರಿ ಭಾರೀ ವಿಸ್ತರಣೆಗೆ ಸಾಕ್ಷಿಯಾಗಿದೆ. ಈ ಮಾರುಕಟ್ಟೆಯ ಅಂದಾಜು ಮೌಲ್ಯ 50 ಬಿಲಿಯನ್ ಡಾಲರ್. ಈ ವರ್ಷ ಹೋಮ್ ಸರ್ವೀಸ್‍ನ ಆರ್ಥಿಕತೆ ಸುಧಾರಣೆ ಕಾಣಲಿದೆ, ಜೊತೆಗೆ ಹೌಸ್‍ಜೊಯ್ ಕೂಡ ಲಾಭ ಗಳಿಸಲಿದೆ ಅನ್ನೋ ವಿಶ್ವಾಸ ಮ್ಯಾಟ್ರಿಕ್ಸ್ ಇಂಡಿಯಾದ ಎಂಡಿ ವಿಕ್ರಮ್ ವಿದ್ಯಾನಾಥನ್ ಅವರದ್ದು. ಭಾರೀ ಪೈಪೋಟಿಯ ಮಧ್ಯೆಯೂ ಆರಂಭದಲ್ಲೇ ಹೌಸ್‍ಜೊಯ್ ನಾಯಕನಂತೆ ತನ್ನನ್ನು ತಾನು ಗುರುತಿಸಿಕೊಂಡಿದೆ ಎನ್ನುತ್ತಾರೆ ಅವರು.

`ಅರ್ಬನ್ ಕ್ಲಾಪ್' ಇತ್ತೀಚೆಗಷ್ಟೆ `ಬೆಸ್ಸೆಮರ್', `SಂIಈ' ಮತ್ತು `ಎಕ್ಸೆಲ್ ಪಾರ್ಟ್‍ನರ್ಸ್'ನಿಂದ 25 ಮಿಲಿಯನ್ ಡಾಲರ್ ಸಿರೀಸ್ ಬಿ ನಿಧಿಯನ್ನು ಗಳಿಸಿದೆ. ಹೌಸ್‍ಜಾಯ್‍ನ ಪ್ರಮುಖ ಪ್ರತಿಸ್ಪರ್ಧಿ ರತನ್ ಟಾಟಾ ಕೂಡ ಅರ್ಬನ್ ಕ್ಲಾಪ್ ಅನ್ನು ಬೆಂಬಲಿಸಿದ್ದಾರೆ. `ಡೋರ್‍ಮಿಂಟ್', `ಲೋಕಲ್ ಓಯ್', `ಟಾಸ್ಕ್‍ಬಾಬ್', `ಅರ್ಬನ್ ಪ್ರೋ', `ಟೈಮ್ ಸೇವರ್', `ಮಿಸ್ಟರ್ ರೈಟ್' ಮತ್ತು `ದಿ ಮೇಕ್‍ಓವರ್' ಕೂಡ ಇದೇ ವಿಭಾಗದಲ್ಲಿವೆ. ಏಪ್ರಿಲ್‍ನಲ್ಲಿ `ಟೈಗರ್ ಗ್ಲೋಬಲ್' ಮತ್ತು `ಲೈಟ್ ಸ್ಪೀಡ್ ವೆಂಚರ್ಸ್ ಪಾರ್ಟ್‍ನರ್ಸ್'ನಿಂದ `ಲೋಕಲ್ ಓಯ್' 5 ಮಿಲಿಯನ್ ಡಾಲರ್ ನಿಧಿಯನ್ನು ಸಂಗ್ರಹಿಸಿದೆ. ಇನ್ನೊಂದೆಡೆ `ಟಾಸ್ಕ್‍ಬೊಬ್' ಇತ್ತೀಚೆಗಷ್ಟೆ `ಝೆಪ್ಪರ್' ಅನ್ನು ಸ್ವಾಧೀನಪಡಿಸಿಕೊಂಡಿದ್ದು, `ಓರಿಯಸ್' ಮತ್ತು `ಮೇಫೀಲ್ಡ್'ನಿಂದ 1.2 ಮಿಲಿಯನ್ ಡಾಲರ್ ಹಣಕಾಸು ನೆರವನ್ನು ಗಿಟ್ಟಿಸಿಕೊಂಡಿದೆ.

ಉತ್ತಮ ತಂತ್ರಜ್ಞಾನಗಳ ನೆರವಿನಿಂದ ಸೇವೆಯಲ್ಲಿ ಹೊಸತನವನ್ನು ತರಲು ಮತ್ತು ಸಂಸ್ಥೆಯ ಅಭಿವೃದ್ಧಿಗಾಗಿ ಸಂಗ್ರಹವಾಗಿರುವ ನಿಧಿಯನ್ನು `ಹೌಸ್‍ಜೊಯ್' ಬಳಸಿಕೊಳ್ಳಲಿದೆ. ಆಳವಾದ ಕಾರ್ಯಾಚರಣೆಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸುವುದು, ಆಯಕಟ್ಟಿನ ಸ್ವಾಧೀನಗಳು, ಪಾಲುದಾರಿಕೆ ಹಾಗೂ ತಂಡವನ್ನು ಕಟ್ಟಲು ಕೂಡ ಬಂಡವಾಳವನ್ನು ಉಪಯೋಗಿಸಿಕೊಳ್ಳಲಿದೆ. 10ಕ್ಕೂ ಹೆಚ್ಚು ನಗರಗಳಲ್ಲಿ, 50,000ಕ್ಕೂ ಅಧಿಕ ಸರ್ವೀಸ್ ಪ್ರೊವೈಡರ್‍ಗಳ ಜೊತೆ ಪಾಲುದಾರಿಕೆ ಮಾಡಿಕೊಂಡು, ದಿನಕ್ಕೆ 100,000 ಉದ್ಯೋಗ ಸೃಷ್ಟಿಸುವ ಗುರಿಯನ್ನು ಹೊಂದಿದೆ.

`ಯುವರ್‍ಸ್ಟೋರಿ' ಮಾಹಿತಿ

39 ಮಿಲಿಯನ್ ಡಾಲರ್ ಬಂಡವಾಳ ಸಂಗ್ರಹದ ಹೊರತಾಗಿಯೂ ಅಮೆರಿಕದ `ಹೋಮ್‍ಜೊಯ್' ಈ ವರ್ಷಾರಂಭದಲ್ಲಿ ತನ್ನ ಮಳಿಗೆಗೆ ಬೀಗ ಜಡಿದಿದೆ. ಕಾರ್ಯಾರಚಣೆಯನ್ನು ಸ್ಥಗಿತಗೊಳಿಸಿದೆ. ಉದ್ಯೋಗಿಗಳ ನಿರ್ವಹಣೆ ಮತ್ತು ಲಾಭ ಗಳಿಕೆಯಲ್ಲಿ ಅವರು ವಿಫಲರಾಗಿದ್ದಾರೆ. ಹಾಗಾಗಿ ಹೋಮ್ ಸರ್ವೀಸ್ ಸಂಸ್ಥೆಗಳ ಭವಿಷ್ಯದ ಬಗ್ಗೆ ಪ್ರಶ್ನೆಗಳೆದ್ದಿವೆ. ಆದ್ರೆ ಭಾರತದ ಉದ್ಯಮಗಳು ಬಂಡವಾಳ ಸಂಗ್ರಹದ ಜೊತೆಗೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಫಲವಾಗಿವೆ. ಅಮೇಝಾನ್ ಬೆಂಬಲದೊಂದಿಗೆ `ಹೌಸ್‍ಜೊಯ್' ಪೈಪೋಟಿಯಲ್ಲೂ ಮುನ್ನಡೆ ಸಾಧಿಸಿದೆ.

ಲೇಖಕರು: ಹರ್ಷಿತ್ ಮಲ್ಯ

ಅನುವಾದಕರು: ಭಾರತಿ ಭಟ್