ಸಮಸ್ಯೆಯಿಂದ ಕಲಿತ ಪಾಠ: ಶಿಕ್ಷಕಿಯಾಗಿದ್ದವರು ಈಗ ರಿಯಲ್​​ ಎಸ್ಟೇಟ್​ ಉದ್ಯಮಿ

ಟೀಮ್​​ ವೈ.ಎಸ್​​.

ಸಮಸ್ಯೆಯಿಂದ ಕಲಿತ ಪಾಠ: ಶಿಕ್ಷಕಿಯಾಗಿದ್ದವರು ಈಗ ರಿಯಲ್​​ ಎಸ್ಟೇಟ್​ ಉದ್ಯಮಿ

Sunday October 04, 2015,

3 min Read

ಮೋನಿಕಾ ಕನ್ವಾರ್. ಪತಿ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೋನಿಕಾ ತನ್ನ ಗಂಡನೊಂದಿಗೆ ದೇಶದ ಬಹುತೇಕ ಭಾಗಗಳಲ್ಲಿ ನೆಲೆಸಿದ್ದರು. ಹೀಗಾಗಿ ಮೋನಿಕಾಗೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಾದ ಕಹಿ ಅನುಭವ ಬದುಕಿನಲ್ಲಿ ಹೊಸ ದಿಕ್ಕನ್ನು ತೋರಿಸಿತ್ತು.

ಮೋನಿಕಾ ಕನ್ವಾರ್ ಹಾಗೂ ಅವರ ಪತಿ ದೆಹಲಿಯಲ್ಲಿರುವ ತಮ್ಮ ಆಸ್ತಿಯನ್ನು ಮಾರಲು ಪ್ರಯತ್ನಿಸಿದ ಸಂದರ್ಭ ಅದು . ದಲ್ಲಾಳಿಗಳಿಂದ ಭೂಮಿ ವ್ಯವಹಾರದಲ್ಲಿ ಸಾಕಷ್ಟು ತೊಂದರೆಯುಂಟಾಯಿತು. ರಿಯಲ್ ಎಸ್ಟೇಟ್ ಏಜೆಂಟ್ಸ್​​ ಭೂಮಿಗೆ ನ್ಯಾಯುತವಾದ ಬೆಲೆ ನೀಡುವ ಬದಲು ತಮ್ಮ ಕಮಿಷನ್ ಹೆಚ್ಚಿಸಿಕೊಳ್ಳಲು ಅತ್ಯಂತ ಕಡಿಮೆ ದರ ಸೂಚಿಸುತ್ತಿದ್ದರು. ಅವರಿಬ್ಬರು ಅನೇಕ ದಲ್ಲಾಳಿ ಅಥವಾ ಮಧ್ಯವರ್ತಿಗಳನ್ನು ಭೇಟಿ ಮಾಡಿದರೂ, ಪರಿಸ್ಥಿತಿಯೇನು ಬದಲಾಗಲಿಲ್ಲ. ಕೊನೆಗೆ ಈ ಭೂಮಿ ಮಾರಾಟ ಮಾಡಲು ಅವರು ಸಾಕಷ್ಟು ಪರಿಶ್ರಮಪಡಬೇಕಾಯಿತು. ಬಳಿಕ ಗುರ್​ಗಾಂವ್​​ನಲ್ಲಿ ಮತ್ತೊಂದು ಭೂಮಿ ಖರೀದಿಯ ವ್ಯವಹಾರದಲ್ಲೂ ಅವರಿಗೆ ಎದುರಾಗಿದ್ದು ಇಂತಹದ್ದೇ ಮಧ್ಯವರ್ತಿಗಳ ತೊಂದರೆ. ತಮ್ಮ ಈ ಎರಡೂ ಅತ್ಯಂತ ಕಹಿ ಅನುಭವಗಳೊಂದಿಗೆ ಯಾವುದೇ ತಿಳುವಳಿಕೆ ಇಲ್ಲದಿದ್ದರು ಅವರು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೆಜ್ಜೆ ಇಡಲು ನಿರ್ಧರಿಸಿದ್ದರು.

image


ಗುರ್​ಗಾಂವ್​​ನಲ್ಲಿ ಸಾಕಷ್ಟು ವಿಚಾರಿಸಿ ಕೆಲವು ಮೂಲಗಳಿಂದ ಸಹಾಯ ಪಡೆದು ಮೋನಿಕಾ ಹಾಗೂ ಅವರ ಪತಿ ಭೂಮಿಯ ಮೇಲೆ ಹಣ ಹೂಡಿಕೆ ಮಾಡಿದರು. ಅಂತರ್ಜಾಲದಲ್ಲಿ ಈ ವಿಷಯದ ಬಗ್ಗೆ ಸಾಕಷ್ಟು ವಿವರಣೆಗಳು ಹಾಗೂ ಮಾಹಿತಿ ಸಿಗುತ್ತದೆ. ಆದರೆ ಒಂದು ನಿರ್ದಿಷ್ಟ ಪ್ರದೇಶದ ಮಾರುಕಟ್ಟೆಯ ಅಂದಾಜು, ಅವಲೋಕನ ಹಾಗೂ ವ್ಯತ್ಯಾಸಗಳ ಬಗ್ಗೆ ಸಣ್ಣ ಸಹಾಯವೂ ಇಂಟರ್ನೆಟ್​​ಗಳಲ್ಲಿ ಸಿಗಲು ಸಾಧ್ಯವಿಲ್ಲ ಅನ್ನುವುದು ಮೋನಿಕಾರ ಅಭಿಪ್ರಾಯ. ಹೀಗಾಗಿ ಮೋನಿಕಾ ಪ್ರಾಪ್ಚಿಲ್.ಕಾಮ್ ಸಂಸ್ಥೆಯನ್ನು ಆರಂಭಿಸಿದರು. ಮುಖ್ಯವಾಗಿ ಭೂಮಿ ಖರೀದಿಸುವವರಿಗೆ ಭೂಮಿಗೆ ಸಂಬಂಧಪಟ್ಟ ಸಂಪೂರ್ಣ ವಿವರಣೆ, ಮಾಹಿತಿ ಹಾಗೂ ಮಾರುಕಟ್ಟೆಯ ಅವಲೋಕನ ಒದಗಿಸುವುದು ಇದರ ಉದ್ದೇಶ. 2013ರಲ್ಲಿ ಸಣ್ಣ ಮಟ್ಟಿಗೆ ಶುರುವಾದ ಈ ಯೋಜನೆ ಸತತ ಪರಿಶ್ರಮದ ಕಾರಣ 2014ರಲ್ಲಿ ಕಚೇರಿ ಉದ್ಘಾಟಿಸುವ ತನಕ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಕಂಡಿತು.

ರಿಯಲ್ ಎಸ್ಟೇಟ್ ಉದ್ಯಮದಲ್ಲೊ ಮಹಿಳಾ ಉದ್ಯಮಿಗಳ ಮುಂದಿರುವ ಸವಾಲುಗಳು:

ತಮ್ಮ 40ನೇ ವಯಸ್ಸಿನಲ್ಲಿ ಯಾವುದೇ ಹಿನ್ನೆಲೆ ಹಾಗೂ ಅನುಭವಗಳನ್ನು ಗಳಿಸದೇ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕಾಲಿಟ್ಟಿದ್ದ ಮೋನಿಕಾರ ಮುಂದೆ ಕೇವಲ ಸವಾಲುಗಳೇ ಇದ್ದವು.

ಪ್ರಾಪ್ಚಿಲ್​​ನ ಸಂಸ್ಥಾಪಕಿ ಹಾಗೂ ನಿರ್ದೇಶಕಿಯೂ ಆಗಿರುವ ಮೋನಿಕಾ ಮಾತಿನಂತೆ ರಿಯಲ್ ಎಸ್ಟೇಟ್​ನಂತಹ ಕ್ಷೇತ್ರಗಳಲ್ಲಿ ಮಹಿಳೆಯರು ಕಾಲಿಡುತ್ತಾರೆಂದರೆ ಅದನ್ನು ಎಲ್ಲರೂ ಲಘುವಾಗಿ ಸ್ವೀಕರಿಸುತ್ತಾರೆ. ಮಹಿಳೆಯರಿಂದ ಇಂತಹ ಉದ್ಯಮಗಳನ್ನು ನಡೆಸುವುದು ದುಸ್ತರ ಅನ್ನುವ ಅಭಿಪ್ರಾಯ ಸಮಾಜದ್ದು. ಹಾಗಾಗಿ ಮೊದಮೊದಲು ಸಂಸ್ಥೆಯನ್ನು ಕಟ್ಟಿ ನಿಲ್ಲಿಸುವುದು ಅಷ್ಟು ಸುಲಭದ ಸಂಗತಿಯೇನಾಗಿರಲಿಲ್ಲ.

ಐಟಿ ಕ್ಷೇತ್ರದ ಅನುಭವಿ ವೃತ್ತಿಪರರ ದೊಡ್ಡ ಹೆಸರು ಮಾಡಿರುವ ಸಂಸ್ಥೆಗಳಿಗೆ ಮನ್ನಣೆ ನೀಡುತ್ತಾರೇ ವಿನಃ, ಹೊಸದಾಗಿ ಆರಂಭಿಸುವ ಸಂಸ್ಥೆಗಳತ್ತ ಒಲವು ತೋರಿಸುವುದಿಲ್ಲ ಅನ್ನುವ ಸಂಗತಿ ಅವರಿಗೆ ಆರಂಭದಲ್ಲೇ ಮನವರಿಕೆಯಾಗಿತ್ತು.

ಕೇವಲ ಕಠಿಣ ಪರಿಶ್ರಮದ ಮೂಲಕ ಸಂಸ್ಥೆಯನ್ನು ಬಲಪಡಿಸುವುದು ಬಿಟ್ಟರೆ ಅವರಿಗೆ ಬೇರೆ ಮಾರ್ಗಗಳಿರಲಿಲ್ಲ. ಆದರೆ ಛಲ ಬಿಡದ ಮೋನಿಕಾ ಹಾಗೂ ಅವರ ಪತಿ ಪ್ರೋಪ್ಚಿಲ್ ಸಂಸ್ಥೆಯ ಮೂಲಕ ಪ್ರಾಥಮಿಕವಾಗಿ ಉದ್ಯಮದ ವ್ಯಾಪ್ತಿಯಲ್ಲಿರುವ ಭೂಮಿಯನ್ನು ವರ್ಗೀಕರಿಸುವ, ವ್ಯತ್ಯಾಸ ಗುರುತಿಸುವ, ಮಾರುಕಟ್ಟೆಯ ಬೇಡಿಕೆ ಅನ್ವಯ ದರ ನಿಗದಿಪಡಿಸುವ ಮುಂತಾದ ಅತ್ಯಗತ್ಯ ಕೆಲಸಗಳನ್ನು ಶ್ರದ್ಧೆಯಿಂದ ಮಾಡತೊಡಗಿದರು. ಜೊತೆಗೆ ಸಂಸ್ಥೆಯ ಮೇಲೆ ನಂಬಿಕೆ ಇಟ್ಟು ಹಣ ಹೂಡುವವರಿಂದ ಪರಿಣಿತ ಸಲಹೆ ಸೂಚನೆಗಳನ್ನೂ ಪಡೆದುಕೊಳ್ಳತೊಡಗಿದರು. ನಿಧಾನವಾಗಿ ಅವರ ಸಂಸ್ಥೆ ಮಾರುಕಟ್ಟೆಯ ಪ್ರಕಾರ ನಿಗದಿತ ಸ್ಥಳದ ವಿವರಣೆ, ಭೂಮಿಯ ಬೇಡಿಕೆ, ಅವಲೋಕನ, ವಿಶ್ಲೇಷಣೆ, ಅಂದಾಜು ದರ ಮುಂತಾದ ಸಮರ್ಪಕ ಮಾಹಿತಿ ಕೊಡುವ ಸಂಸ್ಥೆಯಾಯಿತು.

ಪ್ರಾಪ್ಚಿಲ್​​ ​​​​.ಕಾಮ್​​ ಕೆಲಸವೇನು?

ಮೋನಿಕಾ ತಮ್ಮ ಮೊದಲ ಒಂದು ವರ್ಷವನ್ನು ಕೇವಲ ಮಾರುಕಟ್ಟೆಯ ಸಂಶೋಧನೆ, ಅವಲೋಕನ, ಬೇರೆ ಬೇರೆ ವರ್ಗಗಳ ಮಾಹಿತಿಯ ಕ್ರೂಢೀಕರಣ, ಅನುಕೂಲಕರ ಸಂಗತಿಗಳ ವರ್ಗೀಕರಣ ಹಾಗೂ ಬೆಲೆ ವ್ಯೆತ್ಯಾಸ ಹಾಗೂ ರೇಟಿಂಗ್ಸ್ ನಿಗದಿಯಂತಹ ಕೆಲಸಗಳಿಗೆ ಗಮನ ನೀಡಿದರು.

ಆಸ್ತಿಗಳಿಗೆ ಸಂಬಂಧಿಸಿದಂತೆ ರೇಟಿಂಗ್ಸ್ ಹಾಗೂ ಇಂಡೆಕ್ಸಿಂಗ್ ಅಭಿವೃದ್ಧಿಪಡಿಸುವ ಜೊತೆಗೆ ಮುಂದಿನ ಒಂದು ವರ್ಷ ಕಾಲ ಪೋರ್ಟಲ್ ಫ್ಲಾಟ್​​ಫಾರಂ ಬೆಳವಣಿಗೆಯತ್ತಲೂ ಗಮನಹರಿಸಿದರು. ಫಲವಾಗಿ ಫೆಬ್ರವರಿ-2015ರಲ್ಲಿ ಸಂಸ್ಥೆಯ ಮೊದಲ ಫೇಸ್ ಹಾಗೂ ಜುಲೈ-2015ರಲ್ಲಿ ಎರಡನೇ ಫೇಸ್ ಲಾಂಚ್ ಆಯಿತು.

ಪ್ರಾಪ್ಚಿಲ್​​​.ಕಾಮ್ ತಂಡ ಈಗಾಗಲೆ ಗುರ್​​ಗಾಂವ್​​ನ ರಿಯಲ್ ಎಸ್ಟೇಟ್ ವಿಂಗಡನೆ ಹಾಗೂ ಮಾರುಕಟ್ಟೆಯ ವ್ಯತ್ಯಾಸ ಮುಗಿಸಿದ್ದು, ಇದೇ ರೀತಿ, ನೋಯ್ಡಾ, ಬೆಂಗಳೂರು, ಚೆನ್ನೈ, ಭೂಪಾಲ್, ಇಂದೂರ್, ಭಿವಾಡಿ, ನೀಮ್ರಾನಾ ಹಾಗೂ ಇನ್ನಿತರೆ ರಿಯಲ್ ಎಸ್ಟೇಟ್ ಚಾಲ್ತಿಯಲ್ಲಿರುವ ಹತ್ತಿರದ ಪಟ್ಟಣಗಳಲ್ಲಿ ವರ್ಗೀಕರಣ ಹಾಗೂ ಮಾಹಿತಿ ನೀಡುವ ಕೆಲಸ ಮಾಡಿದೆ.

ಉದ್ಯಮಿಯಾಗಿ ಬದಲಾದ ಶಿಕ್ಷಕಿ

ಸೈನ್ಸ್​​ನಲ್ಲಿ ಪದವೀದರೆ ಹಾಗೂ ವಿವಿಧ ಕಂಪ್ಯೂಟರ್ ಕೋರ್ಸ್​ಗಳನ್ನು ಕಲಿತಿರುವ ಮೋನಿಕಾ ಒಂದು ಕಡೆ ನಿರ್ದಿಷ್ಟವಾಗಿ ಒಂದೇ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಿಲಿಟರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಗಂಡ ಆಗಾಗ ವರ್ಗಾವಣೆಗೊಳ್ಳುತ್ತಿದ್ದ ಕಾರಣ ಅವರು ಒಂದೇ ಕಡೆ ಗಮನ ಕೇಂದ್ರಿಕರಿಸಲು ಸಾಧ್ಯವಾಗಲಿಲ್ಲ. ಇದು ಅವರಿಗೆ ಸಂತೋಷದ ವಿಷಯವೂ ಆಗಿತ್ತು. ಮೋನಿಕಾ ತಾವು ವಾಸ ಮಾಡುತ್ತಿದ್ದಲ್ಲೆಲ್ಲಾ ಸೇನೆಯ ಶಾಲೆಗಳ ಮಕ್ಕಳಿಗೆ ಕಲಿಸುತ್ತಿದ್ದರು. ಹೀಗೆ ಮೋನಿಕಾ ಸುಮಾರು 15 ವರ್ಷಗಳ ಕಾಲ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದರು.

ನಮ್ಮ ಬದುಕಿನ ಪ್ರಯಾಣದಲ್ಲಿ ಉದ್ಯಮ ಅನ್ನುವುದು ಒಂದು ಮನಃಸ್ಥಿತಿ ಹಾಗೂ ಇದಕ್ಕೂ ವಯಸ್ಸಿಗೂ ಸಂಬಂಧವಿಲ್ಲ. ನಮ್ಮ ವೃತ್ತಿಪರ ಅನುಭವ, ಬದ್ಧತೆ, ಕಠಿಣ ಪರಿಶ್ರಮ, ಪ್ರಭುದ್ಧತೆ, ಮಾನಸಿಕ ಸಮತೋಲನಗಳು ಸಾಮಾನ್ಯವಾಗಿ ಉದ್ಯಮಶೀಲತೆಯ ಯಶಸ್ಸಿಗೆ ಕಾರಣ. ಹಾಗಾಗಿ ನಾವು ನಮ್ಮ ಮಧ್ಯವಯಸ್ಸಿನಲ್ಲಿ ಉದ್ಯಮ ಆರಂಭಿಸಲು ಹಿಂದೆ ಮುಂದೆ ಯೋಚಿಸಲಿಲ್ಲ ಅಂತಾರೆ ಮೋನಿಕಾ.

ಉತ್ತರಖಾಂಡ್​​ನ ರೂರ್​ಕೇಲಾದಲ್ಲಿ ಜನಿಸಿದ ಮೋನಿಕಾ ಅವರ ತಂದೆ ಫಾರ್ಮಾಸ್ಯುಟಿಕಲ್ಸ್ ಉದ್ಯಮದಲ್ಲಿದ್ದರು. ತಂದೆಯ ವ್ಯವಹಾರ ನೋಡಿಕೊಂಡೇ ಬೆಳೆದ ಮೋನಿಕಾಗೆ ಒಂದಲ್ಲ ಒಂದು ದಿನ ತಾವೊಬ್ಬರು ಯಶಸ್ವಿ ಉದ್ಯಮಿಯಾಗಬೇಕು ಅನ್ನುವ ಕನಸಿತ್ತು.

ಪ್ರಾಪ್ಚಿಲ್​​​.ಕಾಮ್​​ನಲ್ಲಿ ನಿರ್ದೇಶಕಿಯಾದ ಬಳಿಕ ಮೋನಿಕಾ ತಮ್ಮ ಪತಿಯೊಂದಿಗೆ ನಗರದ ಮುಖ್ಯ ಸ್ಥಳಗಳ ಭೂಮಿಗಳನ್ನು ಗುರುತು ಹಾಕಿಕೊಂಡು, ಬೇಡಿಕೆಯನ್ವಯ ಅವುಗಳನ್ನು ವರ್ಗೀಕರಿಸುವ ಯೋಜನೆಯಲ್ಲಿ ತೊಡಗಿದರು. ರಿಯಲ್ ಎಸ್ಟೇಟ್​​ನಲ್ಲಿ ಆಳ ಅಗಲಗಳು ಗೊತ್ತಿಲ್ಲದಿದ್ದರೂ, ಯಾವುದೇ ಮಹತ್ವದ ಅನುಭವಗಳಿಲ್ಲದಿದ್ದರೂ ಮೋನಿಕಾ ಹಾಕಿಕೊಂಡ ಈ ಸಣ್ಣ ಪುಟ್ಟ ಯೋಜನೆಗಳ ರೂಪುರೇಶೆಯೇ ಅವರಿಗೆ ಈ ಕ್ಷೇತ್ರದಲ್ಲಿ ಕ್ರಮೇಣ ಪ್ರಭುದ್ಧತೆ ಸಾಧಿಸಲು ನೆರವಾಯಿತು. ಹಿಂದೆ ಶಿಕ್ಷಕಿ ಮೋನಿಕಾ ಇಂದು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಒಬ್ಬ ಯಶಸ್ವಿ ಮಹಿಳಾ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.