ಅಂದು ವರದಕ್ಷಿಣೆ ಪಿಡುಗಿಗೆ ಬಲಿಪಶು, ಇಂದು 26 ಪಂಚಾಯತ್‍ಗಳ ಮುಖ್ಯಸ್ಥೆ..!

ಟೀಮ್​​ ವೈ.ಎಸ್​​.ಕನ್ನಡ

ಅಂದು ವರದಕ್ಷಿಣೆ ಪಿಡುಗಿಗೆ ಬಲಿಪಶು, ಇಂದು 26 ಪಂಚಾಯತ್‍ಗಳ ಮುಖ್ಯಸ್ಥೆ..!

Thursday November 19, 2015,

3 min Read

ಮೋರಮ್ ಬಾಯಿ ತನ್ವರ್‍ಗೆ ಇನ್ನೂ ಓದುವ ಆಸೆಯಿತ್ತು. ಆದ್ರೆ ಬಡತನ ಅದಕ್ಕೆ ಅವಕಾಶವನ್ನೇ ಕೊಡಲಿಲ್ಲ. ಮೋರಮ್ ತೀರಾ ಬಡ ಕುಟುಂಬದಲ್ಲಿ ಹುಟ್ಟಿ ಬೆಳದವರು. ತಂದೆ ಒಬ್ಬ ವಿನಮ್ರ ರೈತ. ಮೋರಮ್ 8 ಜನ ಒಡಹುಟ್ಟಿದವರನ್ನು ನೋಡಿಕೊಳ್ಳಬೇಕಿತ್ತು. 8ನೇ ತರಗತಿಯಲ್ಲಿ ತೇರ್ಗಡೆಯಾಗಿದ್ದ ಮೋರಮ್ ಭಾರವಾದ ಹೃದಯದಿಂದ ಶಾಲೆಯನ್ನೇ ಬಿಡಬೇಕಾಯ್ತು. ಕೂಡಲೇ ಮದುವೆಯಾಗುವಂತೆ ಕುಟುಂಬದವರು ಒತ್ತಾಯಿಸಿದ್ರು. ಆದ್ರೆ ಮದುವೆ ಸಂದರ್ಭದಲ್ಲಿ ವರದಕ್ಷಿಣೆ ಎಂಬ ಪಿಡುಗಿಗೆ ಸಿಕ್ಕಿ ಮೋರಮ್ ಅವರ ತಂದೆ ಹೈರಾಣಾದ್ರು. ಮೋರಮ್ ಕೂಡ ಪತಿಯ ಮನೆಯವರ ದೌರ್ಜನ್ಯಕ್ಕೆ ಬಲಿಪಶುವಾದ್ರು. ಕೊನೆಗೆ ಗಂಡನ ಮನೆಯವರು ಆಕೆಯನ್ನು ಹೊರದಬ್ಬಿದ್ರು. ಹಾಗಂತ ಮೋರಮ್ ಬದುಕಿನಲ್ಲಿ ಭರವಸೆಯನ್ನು ಕಳೆದುಕೊಳ್ಳಲಿಲ್ಲ.

image


ಶಿಕ್ಷಣ ಮುಂದುವರಿಸಲು ನಿರ್ಧರಿಸಿದ ಮೋರಮ್, ಕಂಪ್ಯೂಟರ್ ತರಬೇತಿ ಪಡೆದುಕೊಂಡ್ರು. 10ನೇ ಕ್ಲಾಸ್ ಪಾಸ್ ಮಾಡಿ ಮೋರಮ್ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಲು ಶುರು ಮಾಡಿದ್ರು. ಅವರ ಗುರಿ ಒಂದೇ, ತನಗೆ ಬಂದಂತಹ ಕಷ್ಟ ಇನ್ಯಾರಿಗೂ ಬರಬಾರದು ಎಂಬ ಕಾರಣಕ್ಕೆ ಮಹಿಳಾ ಸಬಲೀಕರಣ ಮಾಡುವುದು. ಗ್ರಾಮೀಣ ಪ್ರದೇಶದ ಮಹಿಳೆಯರೆಲ್ಲ ಸ್ವಾಭಿಮಾನಿಗಳಾಗಬೇಕು ಅನ್ನೋದು ಅವರ ಆಶಯವಾಗಿತ್ತು.

ಈಗ ಮೋರಮ್ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಮನೋಹರ್ ಥಾಣಾದ ಪಂಚಾಯ್ತಿ ಕಾರ್ಯದರ್ಶಿ. ಅಷ್ಟೇ ಅಲ್ಲ, ಈ ಭಾಗದ 26 ಪಂಚಾಯ್ತಿ ಸಮಿತಿಗಳ ಮುಖ್ಯಸ್ಥೆಯೂ ಹೌದು. ಮೋರಮ್ ಅವರ ಪರಿಶ್ರಮದಿಂದ ಶಿಕ್ಷಣ ಹಾಗೂ ಸ್ವಚ್ಛತೆಯಲ್ಲಿ ಈ ಗ್ರಾಮಗಳು ಮುಂಚೂಣಿಯಲ್ಲಿವೆ. ಆದ್ರೆ ಇವತ್ತಿಗೂ ಅವರದ್ದು ಸರಳ ಜೀವನ ಹಾಗೂ ದೊಡ್ಡ ಆಲೋಚನೆ. ಅವರ ಜೀವನ ನಿಜಕ್ಕೂ ಇತರರಿಗೆ ಮಾದರಿಯಾಗುವಂಥದ್ದು. 9 ಮಂದಿ ಒಡಹುಟ್ಟಿದವರ ಪೈಕಿ ಮೋರಮ್ ಹಿರಿ ಮಗಳು. ಶಾಲೆ ಬಿಟ್ಟು ಚಿಕ್ಕ ವಯಸ್ಸಿನಲ್ಲೇ ವಿವಾಹ ಬಂಧನಕ್ಕೊಳಗಾಗಿ, ಪತಿ ಮನೆಯವರ ದೌರ್ಜನ್ಯಕ್ಕೆ ನಲುಗಿ ಹೋದ್ರೂ ಮೋರಮ್, ತಮ್ಮ ಕನಸುಗಳಿಗೆ ಕೊಳ್ಳಿ ಇಡಲಿಲ್ಲ. ಓದು ಮುಂದುವರಿಸುವ ಸಲುವಾಗಿಯೇ ಅವರು `ಲಿಟ್ರಸಿ ಇಂಡಿಯಾ'ವನ್ನು ಸೇರಿಕೊಂಡ್ರು. ಸಮಾಜದಲ್ಲಿರುವ ಅನಾಥರು ಮತ್ತು ಕೆಳವರ್ಗದವರಿಗೆ ಶಿಕ್ಷಣ ನೀಡುವ ಎನ್‍ಜಿಓ ಇದು. ಪ್ರತಿ ದಿನ ಮೋರಮ್ ತನ್ನ ಗ್ರಾಮದಿಂದ 16 ಕಿಲೋ ಮೀಟರ್ ದೂರ ನಡೆದುಕೊಂಡೇ ಹೋಗಬೇಕಿತ್ತು. ಹೊಲಿಗೆ ಕಲಿತ ಮೋರಮ್ ಅದರಲ್ಲಿ ನಿಪುಣರಾಗಿಬಿಟ್ರು. ನಂತರ ಕಂಪ್ಯೂಟರ್ ಕಲಿತ್ರು. ಅದೇ ಎನ್‍ಜಿಓನಲ್ಲೇ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿಕೊಂಡ್ರು. ಮೋರಮ್ ಸ್ವಾವಲಂಬಿಯಾಗಿ ಬದುಕಲು ಬಯಸುವ ತಮ್ಮ ಗ್ರಾಮದ ಮಹಿಳೆಯರಿಗೆ ಜೀವನ ಕೌಶಲ್ಯವನ್ನು ಕಲಿಸಿದ್ದಾರೆ.

ಕಂಪ್ಯೂಟರ್ ಆಪರೇಟರ್ ಆಗಿ ಗ್ರಾಮ ಪಂಚಾಯ್ತಿ ಸಮಿತಿಯನ್ನು ಸೇರಲು ಮೋರಮ್ ಬಯಸಿದ್ರು. ಆದರೆ ಅದಕ್ಕೆ 10ನೇ ತರಗತಿಯಲ್ಲಿ ತೇರ್ಗಡೆಯಾಗಿರಲೇಬೇಕೆಂಬ ನಿಯಮವಿತ್ತು. ಜೊತೆಗೆ ಕಂಪ್ಯೂಟರ್ ಕೋರ್ಸ್‍ನ ಪ್ರಮಾಣಪತ್ರವೂ ಬೇಕಿತ್ತು. ಹಾಗಾಗಿ ಮೋರಮ್ ಮರಳಿ ಮತ್ತೆ ಶಾಲೆಗೆ ಸೇರಿಕೊಂಡ್ರು. 10ನೇ ತರಗತಿ ಪಾಸ್ ಮಾಡಿದ ಮೋರಮ್ ಗ್ರಾಮ ಪಂಚಾಯ್ತಿ ಸಮಿತಿಯಲ್ಲಿ ಕೆಲಸ ಗಿಟ್ಟಿಸಿಕೊಂಡ್ರು. ಆದ್ರೆ ಅದೃಷ್ಟ ಅವರ ಜೊತೆಗಿರಲಿಲ್ಲ. ಒಂದು ವರ್ಷದ ಬಳಿಕ ಕೌಟುಂಬಿಕ ಸಮಸ್ಯೆಯಿಂದಾಗಿ ಮೋರಮ್ ಕೆಲಸ ಬಿಡಬೇಕಾಯ್ತು. ಆದ್ರೆ ಶಿಕ್ಷಕ ವೃತ್ತಿ ಮುಂದುವರಿಸಿದ ಅವರು, ಮಹಿಳೆಯರಿಗೆ ತರಬೇತಿ ಕೊಡೋದನ್ನೂ ನಿಲ್ಲಿಸಲಿಲ್ಲ.

image


ತಮ್ಮ ಜಿಲ್ಲೆಯಲ್ಲಿ ಪಂಚಾಯ್ತಿ ಚುನಾವಣೆ ನಡೀತಾ ಇದೆ ಅನ್ನೋದನ್ನು ದಿನಪತ್ರಿಕೆ ನೋಡಿ ತಿಳಿದುಕೊಂಡ ಮೋರಮ್, ರಾಜಕೀಯದಲ್ಲಿ ಆಸಕ್ತಿಯಿಲ್ಲದಿದ್ರೂ ನಾಮಪತ್ರ ಸಲ್ಲಿಸಿದ್ರು. ಮಹಿಳೆಯರ ಶ್ರೇಯೋಭಿವೃದ್ಧಿ ಹಾಗೂ ಗ್ರಾಮದ ಜೀವನ ಮಟ್ಟ ಸುಧಾರಿಸುವ ಸಲುವಾಗಿ ಚುನಾವಣಾ ಕಣಕ್ಕಿಳಿದ್ರು. ಶಿಕ್ಷಕಿಯಾಗಿದ್ರಿಂದ ಸುತ್ತಮುತ್ತಲ ಪ್ರದೇಶಗಳಲ್ಲಿ ಮೋರಮ್ ಅವರ ಬಗ್ಗೆ ಸದಭಿಪ್ರಾಯವಿತ್ತು. ಹಾಗಾಗಿ ಚುನಾವಣೆಯಲ್ಲಿ 10,000 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ರು. ಶೀಘ್ರದಲ್ಲೇ ತಮ್ಮ ಜಿಲ್ಲೆಯ ಪಂಚಾಯತ್ ಕಾರ್ಯದರ್ಶಿ ಹುದ್ದೆಯನ್ನೂ ಅಲಂಕರಿಸಿದ್ರು. ಹುದ್ದೆಯ ಆಸೆಯಿಂದ ಅವರು ಚುನಾವಣಾ ಕಣಕ್ಕಿಳಿಯಲಿಲ್ಲ, ಸರ್ಕಾರದ ಪ್ರತಿ ಯೋಜನೆಯೂ ಜನರನ್ನು ತಲುಪಬೇಕು, ಬಡವರ ಕಲ್ಯಾಣವಾಗಬೇಕು ಅನ್ನೋದು ಮೋರಮ್ ಅವರ ಅಭಿಲಾಷೆಯಾಗಿತ್ತು.

ಸ್ವಚ್ಛಭಾರತ ಅಭಿಯಾನದಡಿಯಲ್ಲಿ ಪ್ರತಿ ಮನೆಯಲ್ಲೂ ಶೌಚಾಲಯ ಕಟ್ಟಿಸಲು ಮೋರಮ್ ಪರಿಶ್ರಮಪಡ್ತಿದ್ದಾರೆ. ತಾವು ಉಸ್ತುವಾರಿ ಹೊತ್ತಿರುವ 26 ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಗುರಿ ತಲುಪಿದ್ದಾರೆ. ಮಕ್ಕಳ ಹಸಿವು ಹಾಗೂ ಅಪೌಷ್ಠಿಕತೆ ನೀಗಿಸುವಲ್ಲಿ ಅಲ್ಲಿನ ಅಂಗನವಾಡಿಗಳು ಕೂಡ ಯಶಸ್ವಿಯಾಗಿವೆ. ಮಹಿಳಾ ಕಲ್ಯಾಣ ಹಾಗೂ ಶಿಕ್ಷಣಕ್ಕಾಗಿ ಇನ್ನೂ ಅನೇಕ ಕ್ರಮಗಳನ್ನು ಕೈಗೊಂಡಿದ್ದಾರೆ. ಸರ್ಕಾರದ ಯೋಜನೆಗಳಾದ ಪಡಿತರ ಚೀಟಿ, ಪಿಂಚಣಿ, ವಿದ್ಯಾರ್ಥಿ ವೇತನ, ನಿರುದ್ಯೋಗ ಭತ್ಯೆ ಬಡವರಿಗೆ ತಲುಪುತ್ತಿಲ್ಲ ಅನ್ನೋದು ಅವರ ಅಳಲು. ಇದರಲ್ಲಿ ಪಾರದರ್ಶಕತೆ ತರುವ ಜೊತೆಗೆ ತಮ್ಮ ಹಕ್ಕುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮೋರಮ್ ಶ್ರಮಿಸುತ್ತಿದ್ದಾರೆ.

image


ಮಹಿಳೆಯರಿಗೆ ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಮೋರಮ್ ನೆರವಾಗ್ತಾರೆ. ನರೇಗಾ ಸೇರಿದಂತೆ ವಿವಿಧ ಯೋಜನೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಲ್ಳುತ್ತಾರೆ. ಬದುಕಿನಲ್ಲಿ ಅನುಭವಿಸಿದ ಕಷ್ಟ, ನೋವನ್ನೆಲ್ಲ ಮೆಟ್ಟಿ ನಿಂತು ಮೋರಮ್, ಮಾದರಿ ಜೀವನ ನಡೆಸುತ್ತಿದ್ದಾರೆ. ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಶ್ರಮ ವಹಿಸ್ತಿದ್ದಾರೆ.

ಲೇಖಕರು: ಸೌರವ್​​​​​ ರಾಯ್​​

ಅನುವಾದಕರು: ಭಾರತಿ ಭಟ್​​