ಮನೆ ಬಾಗಿಲಿಗೆ ಮಾವು- ಹಣ್ಣುಗಳ ರಾಜನ ಮಾರಾಟಕ್ಕೆ ಹೊಸ ಪ್ಲಾನ್​ 

ಟೀಮ್​ ವೈ.ಎಸ್​. ಕನ್ನಡ

1

ಬೆಂಗಳೂರಿನಲ್ಲಿ ಯಾವುದಕ್ಕೂ ಸಮಯವಿಲ್ಲ. ಎಲ್ಲವನ್ನೂ ನಮ್ಮ ಮನೆ ಮುಂದೆಯೇ ಕೊಂಡುಕೊಳ್ಳಬೇಕು ಎನ್ನುತ್ತಾರೆ ಇಲ್ಲಿನ ಜನ. ಆನ್​ಲೈನ್ ಜಮಾನ ಆರಂಭವಾದ ಮೇಲಂತೂ ಎಲ್ಲವೂ ಮನೆಬಾಗಿಲಿಗೆ ಬಂದು ಬೀಳುತ್ತಿದೆ. ಅಷ್ಟೇ ಅಲ್ಲ ನಿಮಗಿಷ್ಟವಾದ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವ ಆಯ್ಕೆಯೂ ಗ್ರಾಹಕರ ಕೈಯಲ್ಲೇ ಇರುತ್ತದೆ. ಹಾಲು, ತರಕಾರಿ, ಬಟ್ಟೆ, ಅಷ್ಟೇ ಅಲ್ಲ ದಿನನಿತ್ಯದ ದಿನಸಿ ವಸ್ತುಗಳು ಈಗ ಮನೆಬಾಗಿಲಿನಲ್ಲೇ ಲಭ್ಯವಿದೆ.   ಈಗ ಪಟ್ಟಿಗೆ ಮಾವಿನ ಹಣ್ಣು ಕೂಡ ಸೇರ್ಪಡೆಯಾಗಿದೆ. ಮಾವಿನ ಹಣ್ಣನ್ನು  ಸಂಚಾರಿ ಮಾವು ಮಳಿಗೆ ಮೂಲಕ ಜನರಿಗೆ ತಲುಪಿಸುವ ಯೋಚನೆಯನ್ನು ಮಾವು ನಿಗಮ ಮಾಡುತ್ತಿದೆ.

ಹಣ್ಣುಗಳ ರಾಜ ಮಾವಿನ ದರ್ಬಾರೂ ಶುರುವಾಗಿದೆ. ಬಾಯಲ್ಲಿ ನೀರೂರಿಸುವ, ರುಚಿ ರುಚಿಯಾದ ಮಾವಿನಹಣ್ಣುಗಳನ್ನು ತಿನ್ನಬೇಕು ಅನ್ನುವ ಆಸೆ ಎಲ್ಲರಿಗೂ ಇದ್ದೇ ಇದೆ.  ಆದರೆ, ಬಿರುಬಿಸಿಲಿನ ಕಾರಣದಿಂದ ಪೇಟೆಗೋ, ಮಾವು ಮಳಿಗೆಗೋ ಹೋಗಿ ಮಾವು ಖರೀದಿಸಲು ಹಲವರು ಹಿಂದೇಟು ಹಾಕುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಬಗೆಬಗೆಯ ಮಾವಿನ ಹಣ್ಣುಗಳನ್ನು ಗ್ರಾಹಕರ ಮನೆಬಾಗಿಲಿಗೇ ತಲುಪಿಸುವ ವಿಶಿಷ್ಟ ಯೋಜನೆಯಾಗಿರುವ ಸಂಚಾರಿ ಮಾವು ಮಳಿಗೆಯನ್ನು ಆರಂಭಿಸಲು ಸಿದ್ಧತೆಯನ್ನು ನಡೆಸಿದೆ.

ಇದನ್ನು ಓದಿ: ಜಾನಪದ ಕಲೆಯ ರಾಯಭಾರಿ ದೀಪಶ್ರೀ...

ಈಗಾಗಲೇ ನಗರದ ಸುಮಾರು 50ಕ್ಕೂ ಹೆಚ್ಚು ಜಾಗಗಳಲ್ಲಿ ಮಾವು ಮಾರಾಟ ಮಳಿಗೆ ಆರಂಭಿಸಿ, ಮಾವು ಮೇಳ ಆಯೋಜಿಸಲು ಮಾವು ನಿಗಮ ಸಿದ್ಧತೆ ನಡೆಸಿದೆ. ಜತೆಗೆ ಸಿಲಿಕಾನ್ ಸಿಟಿ ಜನರ ಮನೆ ಬಾಗಿಲಿಗೆ ಮಾವು ತಲುಪಿಸಿ ಮಾವಿನ ಮಾರುಕಟ್ಟೆ ವಿಸ್ತರಿಸುವ ಉದ್ದೇಶವೂ ಮಾವು ನಿಗಮದ ಅಕಾರಿಗಳಿಗಿದೆ. ಈ ಬಾರಿ 5 ಮೊಬೈಲ್ ಮ್ಯಾಂಗೋ ವೆಹಿಕಲ್‍ಗಳನ್ನು ಪ್ರಾಯೋಗಿಕವಾಗಿ ಬಿಡುವ ಕುರಿತು ಯೋಜನೆ ರೂಪಿಸಲಾಗುತ್ತಿದೆ. ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಹೆಚ್ಚು ಮೊಬೈಲ್ ಮ್ಯಾಂಗೋ ವೆಹಿಕಲ್‍ನ್ನು ವ್ಯವಸ್ಥೆ  ಮಾಡುವ ಪ್ಲಾನ್​​ ಮಾವು ಅಭಿವೃದ್ಧಿ ನಿಗಮದ್ದು.

" ಸಂಚಾರಿ ಮಾವು ಮಳಿಗೆಗಳಲ್ಲಿ ಖರೀದಿ ಮಾಡುವ ಗ್ರಾಹಕರಿಗೆ ಶೇ.5ರಿಂದ ಶೇಕಡಾ10ರಷ್ಟು ರಿಯಾಯಿತಿ ನೀಡುವ ಉದ್ದೇಶವಿದೆ. ಬೇಡಿಕೆಗೆ ಅನುಗುಣವಾಗಿ ಸಂಚಾರಿ ಮಾವು ಮಳಿಗೆಯನ್ನು ಸ್ಥಾಪಿಸಲಾಗುವುದು." 
ಕದಿರೇಗೌಡ, ಎಂ.ಡಿ. ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ

ಸಾಕಷ್ಟು ಕಂಪನಿಗಳು, ಅಪಾರ್ಟ್‍ಮೆಂಟ್ ನಿವಾಸಿಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಸಂಚಾರಿ ಮಾವು ಮಳಿಗೆ ವ್ಯವಸ್ಥೆ ಮಾಡಲು ತಯಾರಿ ನಡೆಸಿದೆ. ದಿನವಿಡೀ ಕೆಲಸ ಮಾಡಿ ಮನೆಗೆ ಸುಸ್ತಾಗಿ ಬರುವವರಿಗೆ ಮಾರುಕಟ್ಟೆಗೆ ಹೋಗಿ ಮಾವು ಖರೀದಿಸುವಷ್ಟು ತಾಳ್ಮೆ ಇರುವುದಿಲ್ಲ. ಅಂತಹವರಿಗೆ ಮನೆ ಬಾಗಿಲಿನಲ್ಲೇ ಮಾವು ಸಿಗುವಂತೆ ಮಾಡಲು ದೊಡ್ಡ ಮಟ್ಟದಲ್ಲಿ ಸಿದ್ಧತೆ ನಡೆಯುತ್ತಿದೆ.

ಅಭಿಪ್ರಾಯ ಸಂಗ್ರಹಣೆ

ಈ ಯೋಜನೆಯನ್ನು ಜಾರಿಗೆ ತರುವ ಮೊದಲು ಬೆಂಗಳೂರಿನಲ್ಲಿರುವ ಅಪಾರ್ಟ್‍ಮೆಂಟ್‍ಗಳ ಅಸೋಸಿಯೇಷನ್‍ಗಳನ್ನು ಸಂಪರ್ಕಿಸಿ, ಮಾತುಕತೆ ನಡೆಸುತ್ತಾರೆ. ಅಪಾರ್ಟ್‍ಮೆಂಟ್‍ನಲ್ಲಿ ಸಂಚಾರಿ ಮಾವು ಮಳಿಗೆಗೆ ಅವಕಾಶ ಕಲ್ಪಿಸಲು ಅಪಾರ್ಟ್‍ಮೆಂಟ್ ಅಸೋಸಿಯೇಷನ್‍ನವರನ್ನು ಕೇಳುತ್ತಾರೆ. ಇನ್ನು ರೈತರನ್ನು ಸಹ ಆಸಕ್ತಿ ಇರುವವರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂಬುದು ನಿಗಮದ ಯೋಜನೆ.

ಖಾಸಗಿ ಸಹಭಾಗಿತ್ವ

ಸಂಚಾರಿ ಮಾವು ಮಳಿಗೆ ಸ್ಥಾಪಿಸಲು ಖಾಸಗಿ ಸಹಭಾಗಿತ್ವವನ್ನು ತೆಗೆದುಕೊಳ್ಳಲು ತೀರ್ಮಾನ ಮಾಡಲಾಗಿದೆ. ದಿನಕ್ಕೆ ಇಂತಿಷ್ಟು ಬಾಡಿಗೆ ನಿಗದಿಪಡಿಸಿ, ವಾಹನಗಳನ್ನು ನಿಗಮವೇ ರೈತರಿಗೆ ಉಚಿತವಾಗಿ ಕೊಡಲಿದೆ. ಪ್ರಾಯೋಗಿಕವಾಗಿ ಐದು ಸಂಚಾರಿ ಮಾವು ಮಳಿಗೆ ತೆರೆಯಲು ಅವಕಾಶವಿದ್ದು, ಮಾವಿನ ಸೀಜನ್ ಆರಂಭವಾದ ಕೂಡಲೇ ಸಂಚಾರಿ ಮಾವು ಮಳಿಗೆ ಆರಂಭಿಸುವ ಪ್ಲಾನ್​​ ನಡೆಯುತ್ತಿದೆ. 

ಆನ್‍ಲೈನ್‍ನಲ್ಲೂ ಮಾರಾಟ

ಕಳೆದ ಬಾರಿಯಂತೆ ಈ ಬಾರಿಯೂ ಆನ್‍ಲೈನ್‍ನಲ್ಲಿ ಮಾವು ಮಾರಾಟ ಮಾಡಲಾಗುವುದು . ನಿಗಮವು ಮಾವು ಆನ್‍ಲೈನ್ ಮಾರಾಟಕ್ಕಾಗಿಯೇ ವೆಬ್‍ಸೈಟ್ ಆರಂಭಿಸಲಿದ್ದು, ಮಾವು ಸೀಜನ್ ಸಂದರ್ಭದಲ್ಲಿ ಇದು ಕಾರ್ಯೋನ್ಮುಖವಾಗಲಿದೆ. ಗ್ರಾಹಕರು ರೈತರಿಂದ ದೊರೆಯುವ ಮಾವು ತಳಿಗಳನ್ನು ಗುರುತಿಸಿ, ತಮಗೆ ಬೇಕಾದಷ್ಟು ಮತ್ತು ಬೇಕಾಗುವ ವೆರೈಟಿ ಹಣ್ಣುಗಳಿಗೆ ಬೇಡಿಕೆ ಸಲ್ಲಿಸಬಹುದು. ಅದೇ ಮಾದರಿಯಲ್ಲಿ ಸಂಚಾರಿ ಮಾವು ಮಳಿಗೆಗಳಲ್ಲಿ ಸಿಗುವಂತಹ ಹಣ್ಣುಗಳ ಮಾಹಿತಿಯನ್ನು ಕೂಡ ಈ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡುವ ಗುರಿ ಇದೆ. ಒಟ್ಟಿನಲ್ಲಿ ಮಾವು ಮಾರಾಟಕ್ಕೆ ಉತ್ತೇಜನ ನೀಡಿ, ಮಾವು ಬೆಳೆದವರಿಗೆ ನೆರವಾಗುವ ಯೋಜನೆಗಳು ತಯಾರಾಗುತ್ತಿವೆ. 

ಇದನ್ನು ಓದಿ:

1. ಪ್ರವಾಸಿಗರನ್ನು ಸೆಳೆಯಲು ವರ್ಚುವಲ್​ ರಿಯಾಲಿಟಿ- ರಾಮನಗರದಲ್ಲಿ "ಶೋಲೆ"ಮರು ಸೃಷ್ಟಿ..!

2. ಕನ್ನಡಿಗರ ಒಡನಾಡಿ- ಕೃಷಿಕರ ಜೀವನಾಡಿ- ಕೇವಲ ನೆನಪಾಗಿ ಉಳಿಯಲಿದೆ ಮೈಸೂರು ಬ್ಯಾಂಕ್

3. ನವರಸ ಸಾಧನಗಳ ಪರಿಣಿತ- ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವ ಕನ್ನಡಿಗ
Related Stories