ಐಎಎಸ್ ಅಧಿಕಾರಿಗಳಿಂದ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ

ಉಷಾಹರೀಶ್

0

ಸಾಕಷ್ಟು ವಿದ್ಯಾರ್ಥಿಗಳು ನಾಗರೀಕ ಸೇವೆಯಲ್ಲಿ ಉನ್ನತ ಮಟ್ಟದ ಅಧಿಕಾರಿಯಾಗಬೇಕು ಎಂದು ಕನಸು ಕಾಣುತ್ತಾರೆ. ಆದರೆ ಪ್ರತಿಭೆ ಇದ್ದು ಉತ್ತಮ ಗುಣಮಟ್ಟದ ತರಬೇತಿ ಸಿಗದೆ ಅವಕಾಶ ವಂಚಿತರಾಗಿರುತ್ತಾರೆ. ಅಂತಹ ಪ್ರತಿಭಾವಂತರ ಸಹಾಯಕ್ಕಾಗಿ ರಾಜ್ಯ ಮತ್ತು ನೆರೆ ರಾಜ್ಯದ ಕೆಲ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಒಟ್ಟಾಗಿ ಆನ್​ಲೈನ್ ಟ್ರೈನಿಂಗ್ ಸೆಂಟರ್ ಆರಂಭ ಮಾಡಿದ್ದಾರೆ.

ಹೌದು ಪ್ರತಿಭಾವಂತರು ಸಿವಿಲ್ ಸರ್ವೀಸ್​​ಗೆ ಸೇರಬೇಕು ಎನ್ನುವ ಉದ್ದೇಶದಿಂದ 1997ರ ಬ್ಯಾಚ್​ನ ಐಆರ್​ಎಸ್ ಅಧಿಕಾರಿ ಬಾಲಮುರುಗನ್, ಚೆನ್ನೈನ 2000ನೇ ಬ್ಯಾಚ್​ನ ರವಿಚಂದ್ರನ್ ಎಂ, ಐಆರ್​ಟಿಎಸ್ ಅಧಿಕಾರಿ ಸೇರಿದಂತೆ ರಾಜ್ಯದ ಮುಖ್ಯ ಹುದ್ದೆಗಳಲ್ಲಿರುವ ಕೆಲ ಐಎಎಸ್ ಅಧಿಕಾರಿಗಳು ಮತ್ತು ಐಪಿಎಸ್ ಅಧಿಕಾರಿಗಳು ಒಟ್ಟಾಗಿ ಸಿವಿಲ್ ಸರ್ವೀಸ್ ಎಕ್ಸಾಂ ಡಾಟ್ ಗುರು’ ಎಂಬ ಆನ್​ಲೈನ್ ಕೋಚಿಂಗ್ ಕ್ಲಾಸ್ ಪ್ರಾರಂಭ ಮಾಡಿದ್ದಾರೆ.

ನಾಗರಿಕ ಸೇವಾ ಪರೀಕ್ಷೆ ತೆಗೆದುಕೊಂಡಿರುವ ಅಭ್ಯರ್ಥಿಗಳು ಈ ವೆಬ್ ಸೈಟ್​​ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಬಳಿಕ ಅಲ್ಲಿ ನೀಡುವ ಆನ್​ಲೈನ್ ಎಂಟ್ರೆನ್ಸ್ ಟೆಸ್ಟ್ ಪಾಸಾದರೆ, ಮಾತ್ರ ಕೋಚಿಂಗ್ ಕ್ಲಾಸ್​ಗೆ ಅರ್ಹತೆ ಪಡೆಯುತ್ತಾರೆ. ಈ ಕೋರ್ಸ್​ಗೆ  ಯಾವುದೇ ಶುಲ್ಕವಿಲ್ಲ. ದೇಶದ ಯಾವುದೇ ಭಾಗದ ವಿದ್ಯಾರ್ಥಿಗಳು ತರಬೇತಿಗೆ ಸೇರಿಕೊಳ್ಳಬಹುದು.

ಕ್ಲಾಸ್​ಗಳು ಹೇಗೆ..?

ಪ್ರವೇಶ ಪರೀಕ್ಷೆ ಪಾಸಾದವರನ್ನು ಇವರ ಕ್ಲಾಸಿನ ವಿದ್ಯಾರ್ಥಿಗಳೆಂದು ಪರಿಗಣಿಸುತ್ತಾರೆ.  ವರ್ಷದ 365 ದಿನಗಳು ಇಲ್ಲಿ ಕೋಚಿಂಗ್ ಕ್ಲಾಸ್​ಗಳು ಟೆಲಿಗ್ರಾಮ್ ಎಂಬ ಮೆಸೆಂಜರ್ ಆ್ಯಪ್​ನಲ್ಲಿ ನಡೆಯುತ್ತವೆ. ಸಿವಿಲ್ ಸರ್ವಿಸ್ ಕೋಚಿಂಗ್ ಕ್ಲಾಸಿಗೆ ಸೇರಿಕೊಂಡ ವಿದ್ಯಾರ್ಥಿಗಳನ್ನು ಈ ಮೆಸೆಂಜರ್ ಆ್ಯಪ್​ನಲ್ಲಿ ಗ್ರೂಪ್ ಮಾಡಿ ಅದರಲ್ಲಿ ಆ್ಯಡ್ ಮಾಡಲಾಗುತ್ತದೆ ಆ ಗ್ರೂಪ್​ನಲ್ಲಿ ಎಲ್ಲಾ ವಿದ್ಯಾರ್ಥಿಗಳು ಇರುತ್ತಾರೆ. ಬೆಳಗ್ಗೆ 6 ರಿಂದ 9 ಗಂಟೆಯವರೆಗೂ ಆನ್​ಲೈನ್ ತರಗತಿಗಳು ನಡೆಯುತ್ತವೆ. ಅಂದರೆ ಬೆಳಗ್ಗೆ 6 ಗಂಟೆಗೆ ಆನ್​​ಲೈನ್​ಗೆ  ಬರುವ ಎಲ್ಲಾ ವಿಭಾಗದ ಅಧಿಕಾರಿಗಳು ಈ ಗ್ರೂಪಿನಲ್ಲೇ  ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. ಅಧಿಕಾರಿಗಳು ಆಕಾಂಕ್ಷಿಗಳೊಂದಿಗೆ ಸಂವಹನ ನಡೆಸುತ್ತಾರೆ. ಯಾವುದೇ ಸಮಯದಲ್ಲಿ ಯಾವುದೇ ವಿಭಾಗಕ್ಕೆ ಸಂಬಂಧಿಸಿದ ಅನುಮಾನಗಳನ್ನು ಈ ಗ್ರೂಪಿನಲ್ಲಿ ಪರಿಹರಿಸಲಾಗುತ್ತದೆ.

" ನಾವು ಈ ಸಮಾಜದಲ್ಲೆ ಹುಟ್ಟಿ ಬೆಳೆದು ಇಂದು ಭಾರತೀಯ ನಾಗರೀಕ ಸೇವೆಯಲ್ಲಿ ಉನ್ನತ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದೇವೆ. ನಮ್ಮಿಂದ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು ಎಂದು ಯೋಚಿಸುತ್ತಿದ್ದಾಗ ಈ ಆಲೋಚನೆ ನಮಗೆ ಹೊಳೆಯಿತು. ನಮ್ಮ ಕೋಚಿಂಗ್ ಕ್ಲಾಸಿನಿಂದ ವರ್ಷಕ್ಕೆ ಕಡೇಪಕ್ಷ 100 ಉತ್ತಮ ಅಧಿಕಾರಿಗಳು ನಾಗರೀಕ ಸೇವೆಗೆ ನಿಯೋಜನೆಗೊಂಡರೆ ನಮ್ಮ ಪ್ರಯತ್ನ ಸಾರ್ಥಕ ಈಗಾಗಲೇ ನಾವು ಸಾಕಷ್ಟು ಮಂದಿಗೆ ಮಾರ್ಗದರ್ಶನ ನೀಡಿದ್ದೇವೆ. ಮುಂದಿನ ಹಾದಿ ದೊಡ್ಡದಿದೆ ಅದನ್ನು ಸಾಧಿಸುತ್ತೇವೆ"
                           - ಬಾಲಮುರಗನ್, ಐಆರ್​​ಎಸ್ ಅಧಿಕಾರಿ, ಸಿವಿಲ್ ಸರ್ವಿಸ್ ಎಕ್ಸಾಂ ಡಾಟ್​ಕಾಮ್ ಮಾರ್ಗದರ್ಶಕ

ಸಾಮಾನ್ಯವಾಗಿ ಹಿರಿಯ ಅಧಿಕಾರಿಗಳೆಂದರೆ ಅವರಿಗೆ ಕೆಲಸದ ಒತ್ತಡ ಸಾಕಷ್ಟಿರುತ್ತದೆ. ಅದಕ್ಕಾಗಿ ತರಗತಿಗಳಿಗೆ ಹೋಗಿ ಪಾಠ ಮಾಡುವಷ್ಟು ಸಮಯ ಇರುವುದಿಲ್ಲ. ಆದರೆ ಈ ಕೋಚಿಂಗ್ ಪ್ರಾರಂಭ ಮಾಡಿರುವ ಎಲ್ಲ ಅಧಿಕಾರಿಗಳಿಗೂ ನಾಗರೀಕ ಸೇವೆಗೆ ಉತ್ತಮ ಮತ್ತು ದಕ್ಷ ಅಧಿಕಾರಿಗಳನ್ನು ಕೊಡುಗೆಯಾಗಿ ನೀಡಬೇಕು ಎಂಬ ಮಹಾತ್ವಾಕಾಂಕ್ಷೆ ಇದೆ. ಆ ಮಹತ್ವಾಕಾಂಕ್ಷೆಯೆ ಈ ಆನ್ ಲೈನ್ ಕೋಚಿಂಗ್ ಕ್ಲಾಸ್. ಈ ಆನ್ ಲೈನ್ ಕೋಚಿಂಗ್​ನಲ್ಲಿ ಮತ್ತೊಂದು ಉಪಯೋಗವೆಂದರೆ ಕುಳಿತಿದ್ದಲ್ಲೆ ತರಗತಿ ತೆಗೆದುಕೊಳ್ಳಲು ಅವಕಾಶವಿರುವುದರಿಂದ ಬೆಳಗ್ಗೆ ಮತ್ತು ಸಂಜೆ ದೇಶದ ಸಾಕಷ್ಟು ಅಧಿಕಾರಿಗಳು ಸಿವಿಲ್ ಸರ್ವಿಸ್ ಡಾಟ್ ಕಾಮ್​ನಲ್ಲಿ ಹಾಜರಿದ್ದು ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾರೆ..

ಟೈಮ್ ಟೇಬಲ್ ಪ್ರಕಾರ ಕ್ಲಾಸ್​​ಗಳು

ಈ ಕೋಚಿಂಗ್ ಕ್ಲಾಸ್​​ಗಳು ಪಕ್ಕಾ ಟೈಮ್ ಟೇಬಲ್ ಪ್ರಕಾರವೇ ನಡೆಯುತ್ತವೆ. ಸಧ್ಯಕ್ಕೆ ಈಗ ಪ್ರಿಲಿಮ್ಸ್ ನಡೆಯುತ್ತಿದ್ದು ಅದಕ್ಕೆ ಅನುಗುಣವಾಗಿ ತರಬೇತಿ ನಡೆಯುತ್ತಿವೆ. ಹೋಮ್ ವರ್ಕ್, ಅಸೈನ್​ಮೆಂಟ್ಸ್ ಎಲ್ಲವನ್ನು ಆನ್​ಲೈನ್​ನಲ್ಲೇ ನೀಡುತ್ತಾರೆ. ವಿದ್ಯಾರ್ಥಿಗಳು ಸಹ ಆನ್​ಲೈನ್​ನಲ್ಲೇ ಉತ್ತರ ನೀಡಬೇಕು. ಅಣುಕು ಸಂದರ್ಶನ ಮಾತ್ರ ಬೆಂಗಳೂರಿನ ಆಯ್ದ ಪ್ರದೇಶದಲ್ಲಿ ನಡೆಸುತ್ತಾರೆ.

ಯಾವ ಬ್ಯಾಚಿನ ಅಧಿಕಾರಿಗಳು ತರಬೇತಿ ನೀಡುತ್ತಾರೆ..?

1982ರ ಬ್ಯಾಚಿನ ಅಧಿಕಾರಿಗಳಿಂದ ಹಿಡಿದು 2014ರ ಬ್ಯಾಚಿನ ಅಧಿಕಾರಿಗಳು ಈ ಸಿವಿಲ್ ಸರ್ವಿಸ್ ಡಾಟ್ ಕಾಮ್​​ನಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇವರ ಈ ಉಚಿತ ಕೋಚಿಂಗ್ ತರಗತಿಗಳು ಸತತ ಮೂರು ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಪ್ರತಿ ವರ್ಷದ ಜನವರಿಯಲ್ಲಿ ಪ್ರವೇಶಾತಿ ಆರಂಭವಾಗುತ್ತದೆ. ಸಧ್ಯಕ್ಕೆ 2016ರ ಪ್ರವೇಶಾತಿಗಳು ಮುಗಿದು ಹೋಗಿವೆ.

ಎಲ್ಲೆಲ್ಲಿಯ ವಿದ್ಯಾರ್ಥಿಗಳು ಮಾರ್ಗದರ್ಶನ ಪಡೆಯುತ್ತಿದ್ದಾರೆ..?

ಈ ಆನ್ ಲೈನ್ ಕೋಚಿಂಗ್ ಕ್ಲಾಸ್​​ನಲ್ಲಿ ಈಗಾಗಲೇ ದೇಶಾದ್ಯಂತ ಸಾವಿರ ಜನ ವಿದ್ಯಾರ್ಥಿಗಳು ವಿವಿಧ ವಿಭಾಗಗಳಿಗೆ ರಿಜಿಸ್ಟರ್​  ಮಾಡಿಸಿಕೊಂಡಿದ್ದಾರೆ. ಅದರಲ್ಲಿ ಪ್ರಿಕೋಚಿಂಗ್, ವೇಟಿಂಗ್ ಲೀಸ್ಟ್ ಮತ್ತು ಈಶಾನ್ಯ ಭಾಗದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಕ್ಲಾಸ್​ಗಳು ಹೀಗೆ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಎಲ್ಲಾ ರಾಜ್ಯಗಳ ವಿದ್ಯಾರ್ಥಿಗಳು ಮಾರ್ಗದರ್ಶನ ಪಡೆಯುತ್ತಿದ್ದಾರೆ.

ಒಟ್ಟಿನಲ್ಲಿ ಅರ್ಹತೆ, ವಿದ್ಯೆ ಇದ್ದೂ ಸೂಕ್ತ ಮಾರ್ಗದರ್ಶನವಿರದೇ ಉನ್ನತ ಅಧಿಕಾರಿಯಾಗಲ ಸಾಧ್ಯವಾಗದ ಪ್ರತಿಭಾವಂತರಿಗೆ ದೇಶದ ಉನ್ನತ ಅಧಿಕಾರಿಗಳ ತಂಡ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಧಾರೆಯರೆಯುತ್ತಿದೆ.


Related Stories

Stories by YourStory Kannada