ತುರ್ತಾಗಿ ಹೋಟೆಲ್ ರೂಂ ಬೇಕಾ..? ಹೋಟೆಲ್ಸ್ ಅರೌಂಡ್ ಯು ಆ್ಯಪ್ ಇನ್​ಸ್ಟಾಲ್​​ಸ್ಟಾಲ್​​ ಮಾಡಿಕೊಳ್ಳಿ..!

ಕೃತಿಕಾ

0

ಈಗಂತೂ ಓಡಾಟವೇ ವ್ಯವಹಾರ, ವ್ಯವಹಾರವೇ ಉದ್ಯಮ ಅನ್ನಿಸುವಷ್ಟರಮಟ್ಟಿಗೆ ಓಡಾಟ, ತಿರುಗಾಟಗಳು ಹೆಚ್ಚಾಗಿಬಿಟ್ಟಿವೆ. ಕೆಲಸದ ನಿಮಿತ್ತ ಇಂದಿನ ಕಂಪನಿಯ ಉದ್ಯೋಗಿಗಳು ಒಂದು ನಗರದಿಂದ ಮತ್ತೊಂದು ನಗರಗಳಿಗೆ ಓಡಾಡುತ್ತಿರಲೇಬೇಕು. ಮೊದಲೆಲ್ಲಾ ಯಾವುದೋ ಕಂಪನಿಯಲ್ಲಿ ಕೆಲಸ ಸಿಕ್ಕರೆ ಸಾಕು. ಬೆಳಗ್ಗೆ ಹೋಗಿ ಸಂಜೆ ಮನೆಗೆ ಬಂದರಾಯಿತು ಅನ್ನುವ ಕಾಲವಿತ್ತು. ಆದ್ರೆ ಈಗ ಆ ಕಾಲ ಮುಗಿಯುವ ಹಂತಕ್ಕೆ ಬಂದು ನಿಂತಿದೆ. ಈಗೇನಿದ್ದರೂ ಉದ್ಯೋಗಿಗಳು ತಮ್ಮ ಕಂಪನಿಯ ವ್ಯವಹಾರದ ವಿಚಾರವಾಗಿ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡಾಟ ಮಾಡುತ್ತಲೇ ಇರಬೇಕು. ವ್ಯಾಪಾರ, ಪ್ಲಾನಿಂಗ್, ಮೀಟಿಂಗ್ ಅಂತ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವವರಿಗೆ ಹೋದಲ್ಲಿ ಬಂದಲ್ಲಿ ಹೋಟೆಲ್ ಗಳು ಇರಬೇಕಲ್ಲ. ಇದರ ಜೊತೆಗೆ ಪ್ರವಾಸ ಅಂತ ಊರು ಸುತ್ತುವ ಜನರೂ ಈ ಆ್ಯಪ್ ನ ಅನುಕೂಲಗಳನ್ನು ಬಳಸಿಕೊಳ್ಳಬಹುದು. ಯಾವ ಹೋಟೆಲ್ ಗಳು ಚೆನ್ನಾಗಿದೆ ಎಂಬ ಮಾಹಿತಿ ನೀಡಬಲ್ಲ ಮೊಬೈಲ್ ಆ್ಯಪ್ ಅನ್ನು ಮೂವರು ಯುವಕರ ತಂಡ ಅಭಿವೃದ್ದಿಪಡಿಸಿದೆ.

ಮುಂಬೈ ಮೂಲದ ಮೂವರು ಸ್ನೇಹಿತರ ತಂಡ ಇಂತದ್ದೊಂದು ಆ್ಯಪ್ ಅಭಿವೃದ್ದಿಪಡಿಸಿದೆ. ಮೋಸಿನ್‌ ದಿಂಡಿಕರ್‌, ಅನಿಮೇಶ್‌ ಚೌಧರಿ ಮತ್ತು ಹರ್ಷ ಎಂಬ ಮೂವರು ಈ ಆ್ಯಪ್ ಅಭಿವೃದ್ದಿಪಡಿಸಿ ಸ್ಟಾರ್ಟ್ ಅಪ್ ಇಂಡಿಯಾ ಅನ್ನೋ ಪರಿಕಲ್ಪನೆ ಬರುವ ಮೊದಲೇ ಒಂದು ಸ್ಟಾರ್ಟ್ ಅಪ್ ಆರಂಭಿಸಿ ಯಶಸ್ವಿಯಾಗಿದ್ದಾರೆ.

ತುರ್ತಾಗಿ ಕಚೇರಿ ಅಥವಾ ಕಂಪೆನಿ ಕೆಲಸದ ನಿಮಿತ್ತ ದೂರದ ಪ್ರದೇಶಗಳಿಗೆ ತೆರಳುವ ಉದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು ಈ ಆ್ಯಪ್‌ ಸಿದ್ಧಪಡಿಸಲಾಗಿದೆ. ಈ ಆ್ಯಪ್ ಮೂಲಕ ಉತ್ತಮ ಗುಣಮಟ್ಟದ ಹೋಟೆಲ್ ಹಾಗೂ ರುಚಿಕರ ಊಟವನ್ನು ಬುಕ್‌ ಮಾಡಬಹುದು. ರೂಮ್‌, ಊಟ, ತಿಂಡಿ ಬುಕ್‌ ಮಾಡುವ ನೂರಾರು ಮೊಬೈಲ್‌ ಆ್ಯಪ್‌ಗಳು ಮಾರುಕಟ್ಟೆಯಲ್ಲಿವೆ. ಆದರೆ ‘ಹೋಟೆಲ್ಸ್‌ ಅರೌಂಡ್‌ ಯು’ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಆ್ಯಪ್‌ಗಳಿಗಿಂತ ಭಿನ್ನವಾಗಿದೆ.

ಈ ಆ್ಯಪ್‌ ಮೂಲಕ ಬುಕ್‌ ಮಾಡುವುದರಿಂದ ಶೇ.70 ರ ವರೆಗಿನ ರಿಯಾಯಿತಿ ಮತ್ತು ಉಚಿತ ಕೊಡುಗೆಗಳ ಸೌಲಭ್ಯ ಪಡೆಯಬಹುದು. ಇಲ್ಲಿನ ಕೊಡುಗೆಗಳು ಮತ್ತು ರಿಯಾಯಿತಿ ನೋಡಿದರೆ ಇದು ಗ್ರಾಹಕ ಸ್ನೇಹಿ ಆ್ಯಪ್‌ ಆಗಿದೆ. ಸಾಮಾನ್ಯವಾಗಿ ಮೊಬೈಲ್ ಆ್ಯಪ್ ಗಳ ಮೂಲಕ 12 ಗಂಟೆ ಅಥವಾ 24 ಗಂಟೆ ಮೊದಲು ಹೋಟೆಲ್ ರೂಂ ಬುಕ್ ಮಾಡಬೇಕು. ಆದರೆ ಹೋಟೆಲ್ಸ್ ಅರೌಂಡ್ ಯು ಆ್ಯಪ್ ನಲ್ಲಿ ಕೇವಲ ನಾಲ್ಕು ಗಂಟೆ ಮೊದಲು ರೂಮ್‌ ಬುಕ್‌ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ. ಈ ವಿಶೇಷದಿಂದಲೇ ಈ ಆ್ಯಪ್ ಮಾರುಕಟ್ಟೆಯಲ್ಲಿರುವ ಉಳಿದ ಆ್ಯಪ್ ಗಳಿಗಿಂತಲೂ ಭಿನ್ನವಾಗಿದೆ. ದಿನದ 24 ಗಂಟೆಯೂ ರೂಮ್‌, ಊಟ ತಿಂಡಿ ಬುಕಿಂಗ್ ಸೌಲಭ್ಯವಿದೆ. ಈ ಆ್ಯಪ್‌ ಮೂಲಕ ರೂಮ್‌ಗಳನ್ನು ಬುಕ್‌ ಮಾಡಿದವರಿಗೆ ಚಿಕನ್ ಖಾದ್ಯಗಳಲ್ಲಿ ವಿಶೇಷ ರಿಯಾಯಿತಿ ನೀಡಲಾಗುತ್ತದೆ. ಆ ಮೂಲಕ ಹೋಟೆಲ್ ಹುಡುಕುವವರಿಗೆ ಚಿಕನ್ ತಿನ್ನುವ ಸೌಭಾಗ್ಯವನ್ನೂ ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ಕೇವಲ ಒಂದು ಸಾವಿರ ರೂಪಾಯಿಯಲ್ಲಿ ಪೈವ್ ಸ್ಟಾರ್ ಹೋಟೆಲ್ ರೂಂಗಳನ್ನು ಈ ಆ್ಯಪ್ ಮೂಲಕ ಬುಕ್ ಮಾಡಬಹುದು.

ನಾವು ಮೂವರೂ ಸ್ನೇಹಿತರು ಎಂಜಿನಿಯರಿಂಗ್ ಮುಗಿಸಿದ ನಂತರ ಏನಾದರೂ ಮಾಡಬೇಕು ಅಂತ ಸಾಕಷ್ಟು ಪ್ರಯತ್ನ ಪಟ್ಟೆವು. ಆದ್ರೆ ತಂತ್ರಜ್ಞಾನದ ಸಹಾಯದಿಂದ ಏನೇನೆಲ್ಲಾ ಮಾಡಬಹುದು ಎಂದು ಯೋಚಿಸಿದಾಗ ಈ ಆ್ಯಪ್ ಮಾಡುವ ನಿರ್ಧಾರ ಮಾಡಿದೆವು. ನಾವು ಆರಂಭಿಸಿದ ಸ್ಟಾರ್ಟ್ ಅಪ್ ಇವತ್ತು ನಮ್ಮ ನಿರೀಕ್ಷೆಗೂ ಮೀರಿ ಬೆಳೆಯುತ್ತಿದೆ. ಪ್ರಮುಖ 300 ಕ್ಕೂ ಹೆಚ್ಚು ಹೋಟೆಲ್ ಗಳೊಂದಿಗೆ ನಾವು ಒಪ್ಪಂದ ಮಾಡಿಕೊಂಡಿದ್ದೇವೆ. ಸದ್ಯಕ್ಕೆ ದೇಶದ ಹತ್ತು ನಗರಗಳಲ್ಲಿ ನಮ್ಮ ಸೇವೆಗಳು ಲಭ್ಯವಿದೆ. ಮುಂದಿನ ದಿನಗಳಲ್ಲಿ ನಾವು ಎಲ್ಲ ನಗರಗಳಿಗೂ ಈ ಸೌಲಭ್ಯವನ್ನು ವಿಸ್ತರಿಸಲಿದ್ದೇವೆ ಅಂತಾರೆ ಆ್ಯಪ್ ಅಭಿವೃದ್ದಿಪಡಿಸಿರುವ ಹರ್ಷ.

ಈ ಆ್ಯಪ್ ನಲ್ಲಿ ಪ್ರಮುಖ ಹೋಟೆಲ್‌ಗಳು, ಲಾಡ್ಜ್‌ಗಳ ಮಾಹಿತಿ ನೀಡಲಾಗಿದೆ. ಇವುಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ‘ಹೋಟೆಲ್ಸ್‌ ಅರೌಂಡ್‌ ಯು’ ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಯಶಸ್ವಿಯಾಗಿದೆ. 2015 ರ ಫೆಬ್ರವರಿಯಲ್ಲಿ ಆಂಡ್ರಾಯ್ಡ್‌ ಆ್ಯಪ್‌ ಬಿಡುಗಡೆ ಮಾಡಿದ್ದು ಇಲ್ಲಿಯವರೆಗೂ 25 ಸಾವಿರಕ್ಕೂ ಹೆಚ್ಚು ಗ್ರಾಹಕರು ಈ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ.ಕೇವಲ ಒಂದು ವರ್ಷದ ಅವದಿಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಪ್ರಸ್ತುತ ಬೆಂಗಳೂರು, ಮುಂಬೈ, ಪುಣೆ ಮತ್ತು ದೆಹಲಿ ಸೇರಿದಂತೆ ಹತ್ತು ನಗರಗಳಲ್ಲಿ ಮಾತ್ರ ‘ಹೋಟೆಲ್ಸ್‌ ಅರೌಂಡ್‌ ಯು’ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ನಗರಗಳಿಗೂ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸುವ ಕನಸು ಈ ಯುವಕರದ್ದು. ತಂತ್ರಜ್ಞಾನ ಬಳಸಿಕೊಂಡು ಶೂನ್ಯ ಬಂಡವಾಳದಲ್ಲಿ ಉದ್ಯಮ ಆರಂಭಿಸಿದ ಈ ಯುವಕರ ಸಾಧನೆ ನಿಜಕ್ಕೂ ಮಾದರಿ.

Related Stories