ನಿಮ್ಮ ಕಾಲೇಜಿಗೂ ಬರುತ್ತೆ ಟೆಲಿ ಎಜುಕೇಷನ್​..!

ಅಗಸ್ತ್ಯ

0

ಬದಲಾಗುತ್ತಿರುವ ಜಗತ್ತಿನಲ್ಲೀಗ ಎಲ್ಲವೂ ತಂತ್ರಜ್ಞಾನ ಆಧಾರಿತವಾಗಿದೆ. ಅದು ಶಿಕ್ಷಣ ವ್ಯವಸ್ಥೆಗೂ ಕಾಲಿಟ್ಟಿದ್ದು ಈಗಾಗಲೆ ಉಪಗ್ರಹ ಆಧಾರಿತ ದೂರಶಿಕ್ಷಣ ವ್ಯವಸ್ಥೆ ಜಾರಿಗೆ ಬಂದಿದೆ. ಆದರೆ, ಪಠ್ಯ-ಪುಸ್ತಕಗಳೇ ದೊರೆಯದ ಸರ್ಕಾರಿ ಶಾಲಾ ಮಕ್ಕಳಿಗೆ ಉಪಗ್ರಹ ಆಧಾರಿತ ದೂರಶಿಕ್ಷಣ ಗಗನಕುಸುಮವಾಗಿದೆ. ಸರ್ಕಾರಿ ಶಾಲಾ ಮಕ್ಕಳ ಈ ಕೊರತೆ ನೀಗಿಸಲು ಇಂಡಿಯನ್ ಇನ್ಸ್​​ ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಹೊಸದೊಂದು ಮಾರ್ಗ ಕಂಡುಹಿಡಿದಿದೆ. ಅದಕ್ಕಾಗಿಯೇ ಸರ್ಕಾರದೊಂದಿಗೆ ಸೇರಿ 1 ಸಾವಿರ ಸರ್ಕಾರಿ ಶಾಲೆಗಳಲ್ಲಿ ಉಪಗ್ರಹ ಆಧಾರಿತ ದೂರಶಿಕ್ಷಣ ನೀಡಲು ನಿರ್ಧರಿಸಲಾಗಿದೆ.

ಐಐಎಂ ಆರಂಭಿಸಿದ ಉಪಗ್ರಹ ಆಧಾರಿತ ಟೆಲಿ ಎಜುಕೇಷನ್ ಕಾರ್ಯಕ್ರಮ ಇನ್ನು ಮುಂದೆ ಸರ್ಕಾರಿ ಶಾಲೆಯ 2 ಲಕ್ಷ ಮಕ್ಕಳಿಗೆ ತಲುಪುತ್ತದೆ. ಅದು ವಿದ್ಯಾರ್ಥಿಗಳ ಫಲಿತಾಂಶ ಮತ್ತು ಬುದ್ಧಿಮತ್ತೆಯನ್ನು ಹೆಚ್ಚಿಸುವ ಉದ್ದೇಶದಿಂದ ಯೋಜನೆ ಜಾರಿಯಾಗುತ್ತಿದೆ. ಆಮೂಲಕ ಉಪಗ್ರಹ ಆಧಾರಿತ ಈ ಶೈಕ್ಷಣಿಕ ಕಾರ್ಯಕ್ರಮದ ಮೂಲಕ ಐಐಎಂನಲ್ಲಿರುವ ಶೈಕ್ಷಣಿಕ ತಜ್ಞರ ವಿಷಯ ತಜ್ಞತೆಯು ರಾಜ್ಯಾದ್ಯಂತ ಸರ್ಕಾರಿ ಶಾಲೆಯ ಮಕ್ಕಳಿಗೆ ದೊರೆಯುತ್ತದೆ. ಈ ಕಾರ್ಯಕ್ರಮಕ್ಕೆ ಸ್ಯಾಟಲೈಟ್​​  ಆ್ಯಂಡ್ ಅಡ್ವಾನ್ಸ್ಡ್ ಮಲ್ಟಿಮೀಡಿಯಾ ಎಜುಕೇಷನ್ ಅಥವಾ ಸೇಮ್ ಎಂಬ ಹೆಸರನ್ನಿಡಲಾಗಿದೆ. ಸದ್ಯ 5ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುವರಿಗೆ ಗಣಿತ, ಇಂಗ್ಲೀಷ್ ಮತ್ತು ವಿಜ್ಞಾನ ವಿಷಯಗಳನ್ನು ಟೆಲಿ ಎಜುಕೇಷನ್ ಮೂಲಕ ಪಾಠ ಮಾಡಲಾಗುತ್ತದೆ.

ಟಿವಿ ನೋಡಿದ ಹಾಗೆ ಪಾಠ ಕೇಳಬಹುದು

ಟೆಲಿ ಎಜುಕೇಷನ್ ಟಿವಿ ನೋಡಿದ ರೀತಿ ಮಕ್ಕಳಿಗೆ ಭಾಸವಾಗುತ್ತದೆ. ಅದಕ್ಕಾಗಿ ಶಾಲೆಗಳಲ್ಲಿ ವಿಶೇಷ ತರಗತಿ ಕೊಠಡಿಗಳನ್ನು ಸಿದ್ಧಪಡಿಸಲಾಗುತ್ತದೆ. ಅಲ್ಲಿ ದೊಡ್ಡ ಸ್ಕ್ರೀನ್ ವ್ಯವಸ್ಥೆ ಮಾಡಲಾಗುತ್ತದೆ. ಐಐಎಂ ಸ್ಟುಡಿಯೊದಿಂದ ತಜ್ಞರು ನೇರವಾಗಿ ಶಾಲಾ ಮಕ್ಕಳಿಗೆ ಪಾಠ ಹೇಳಿಕೊಡುತ್ತಾರೆ. ಶಾಲಾ ವಿದ್ಯಾರ್ಥಿಗಳು ನೇರ ಪ್ರಸಾರದ ಮೂಲಕ ಪಾಠವನ್ನು ಆಲಿಸಬಹುದಾಗಿದೆ. ಈ ಕಾರ್ಯಕ್ರಮ ಅನುಷ್ಟಾನ ಯಶಸ್ವಿಯಾಗಲು ಪಠ್ಯ ಸಾಮಗ್ರಿ ತಯಾರಿಸಿದವರು ಮತ್ತು ತಂತ್ರಜ್ಞಾ ನ ಅಭಿವೃದ್ಧಿಪಡಿಸಿದವರು ಸದಾ ನೆರವಿಗಿರುತ್ತಾರೆ.

2 ವರ್ಷದ ಹಿಂದೆಯೇ ಜಾರಿ

ಐಐಎಂ ರಾಜ್ಯ ಸರ್ಕಾರದ ನೆರವಿನೊಂದಿಗೆ ಇದೇ  ಕಾರ್ಯಕ್ರಮವನ್ನು ಪೈಲಟ್​ ಯೊಜನೆಯಾಗಿ 2014ರಲ್ಲಿ ಜಾರಿಗೆ ತಂದಿತು. ತರಗತಿ ಆರಂಭಿಸಿದ ಬಳಿಕ ಗ್ರಾಮಾಂತರ ಪ್ರದೇಶದ 10ನೇ ತರಗತಿ ಫಲಿತಾಂಶದಲ್ಲಿ ಗಣನೀಯ ಬದಲಾವಣೆಯಾಗಿದೆ. ಆರಂಭದ ಯಶಸ್ಸಿನಿಂದ ಉತ್ತೆಜಿತಗೊಂಡ ರಾಜ್ಯ ಸರ್ಕಾರ, ಸಾವಿರ ಶಾಲೆಗಳಿಗೆ ವಿಸ್ತರಿಸಲು ಮುಂದಾಯಿತು. ಇದೀಗ ಮತ್ತೆ 1 ಸಾವಿರ ಶಾಲೆ ಸೇರ್ಪಡೆಗೊಳ್ಳುವ ಮೂಲಕ 2 ಸಾವಿರ ಶಾಲೆಗಳಿಗೆ ತಂತ್ರಜ್ಞಾನ ಆಧರಿತ ಶೈಕ್ಷಣಿಕ ಕಾರ್ಯಕ್ರಮ ತಲುಪಿಸಲಾಗುತ್ತಿದೆ.

ಕಾಲೇಜುಗಳಿಗೂ ವಿಸ್ತರಣೆ

ಸರ್ಕಾರಿ ಶಾಲೆಗಳಂತೆಯೆ ಕಾಲೇಜುಗಳಲ್ಲೂ ಟೆಲಿ ಶಿಕ್ಷಣ ವ್ಯವಸ್ಥೆ ಜಾರಿಗೆ ತರುವ ಚಿಂತನೆ ನಡೆಸಲಾಗಿದೆ. ಅದರಂತೆ ರಾಜ್ಯದ 73 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಈ ವ್ಯವಸ್ಥೆಯನ್ನು ಈ ವರ್ಷ ಪ್ರಾಯೋಗಿಕವಾಗಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಆದರೆ ಶೈಕ್ಷಣಿಕ ವರ್ಷ ಮುಕ್ತಾಯಗೊಂಡಿರುವ ಕಾರಣ ಮುಂದಿನ ವರ್ಷದಿಂದ ಟೆಲಿ ಎಜುಕೇಷನ್ ಕಾಲೇಜುಗಳಿಗೂ ತಲುಪಲಿದೆ. ಸದ್ಯ ಈ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿರುವ 73 ಕಾಲೇಜುಗಳ ಪೈಕಿ 64 ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿವೆ. ಇತರ ಜಿಲ್ಲೆಗಳಲ್ಲಿ 1ರಿಂದ 2 ಕಾಲೇಜುಗಳನ್ನು ಆಯ್ಕೆ ಮಾಡಲಾಗಿದ್ದು, ಅಲ್ಲಿ ಇಂಟರ್‍ನೆಟ್ ಸೌಲಭ್ಯ ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೆ ಟೆಲಿಶಿಕ್ಷಣ ಅನುಷ್ಠಾನ ಗೊಳಿಸಬೇಕಿರುವ ಕಡೆ ನಿತ್ಯ ಮಧ್ಯಾಹ್ನ 12ರಿಂದ 1 ಗಂಟೆಯವರೆಗೆ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಟೆಲಿಶಿಕ್ಷಣ ತರಗತಿ ನಡೆಸುವಂತೆ ಈಗಾಗಲೆ ತಿಳಿಸಲಾಗಿದೆ.

Related Stories