ಕ್ಯಾಲರಿ ಲೆಕ್ಕ ಹಾಕಿಕೊಂಡೇ ಊಟ ಮಾಡಿ....

ಟೀಮ್​ ವೈ.ಎಸ್​​.

ಕ್ಯಾಲರಿ ಲೆಕ್ಕ ಹಾಕಿಕೊಂಡೇ ಊಟ ಮಾಡಿ....

Monday September 28, 2015,

3 min Read

ನಿಮಗೆ ಆರೋಗ್ಯದ ಬಗ್ಗೆ ಕಾಳಜಿ ಇದೆಯೇ? ತುಂಬಾ ದಪ್ಪಗಿದ್ದು ನ್ಯೂಟ್ರಿಷನ್, ಕ್ಯಾಲರಿ ಅಂತ ಪಥ್ಯ ಮಾಡೋಕ್ಕೆ ಡಾಕ್ಟರ್ ಹೇಳಿದ್ದಾರಾ? ಡೋಂಟ್ ವರಿ. ನಿಮ್ಮಂಥವರಿಗಾಗಿಯೇ ಈ ಆ್ಯಪ್ ಇರೋದು. ಅದರ ಹೆಸರು ತಂದುರಸ್ತ್ ! 2014ರ ಡಿಸೆಂಬರ್‍ನಲ್ಲಿ ಪುಷ್ಪೇಶ್ ದತ್ ಮತ್ತು ಸುಧಾಂಶು ಶರ್ಮಾ ಎಂಬವರು ತಂದುರಸ್ತ್ ಸ್ಥಾಪಿಸಿದರು. ಆರೋಗ್ಯಕಾರಿ ಆಹಾರ ಸೇವನೆ ಮಾಡುವವರಿಗಾಗಿ ಈ ಸಂಸ್ಥೆ ಪೌಷ್ಟಿಕಾಂಶ ಮತ್ತು ಕ್ಯಾಲರಿ ಲೆಕ್ಕ ಮಾಡಿಯೇ ನಿಮಗೆ ಆಹಾರ ಸರಬರಾಜು ಮಾಡುತ್ತದೆ.

ಆರೋಗ್ಯಕಾರಿ ದೇಹ ಮತ್ತು ಮನಸ್ಸು ಇದ್ದಲ್ಲಿ ಅತ್ಯುತ್ತಮ ಜೀವನ ಸಾಗಿಸಬಹುದು ಅಂತಾರೆ ತಂದುರಸ್ತ್ ಸಂಸ್ಥಾಪಕರು. ಆರಂಭದಲ್ಲಿ ತಮ್ಮ ಗೆಳೆಯರು, ಸಹೋದ್ಯೋಗಿಗಳ ಜೊತೆ ಪ್ರಯೋಗ ನಡೆಸಿದ ಇವರು, ಬಳಿಕ ತಂದುರಸ್ತ್​ನ ಬಿಟಾ ಬಿಡುಗಡೆ ಮಾಡಿದರು.

ತಂದುರಸ್ತ್​​ನ ಪುಷ್ಪೇಷ್​ ದತ್ತಾ ಮತ್ತು ಸುಧಾಂಶು ಶರ್ಮಾ

ತಂದುರಸ್ತ್​​ನ ಪುಷ್ಪೇಷ್​ ದತ್ತಾ ಮತ್ತು ಸುಧಾಂಶು ಶರ್ಮಾ


ತಂದುರಸ್ತ್ ಆರಂಭಿಸುವ ಮುನ್ನ ಸಹ ಸಂಸ್ಥಾಪಕರಾದ ಸುಧಾಂಶು, ಕೃಷಿ ಉತ್ಪನ್ನಗಳನ್ನು ರಫ್ತು ಮಾಡುವ ನವ್ಯೋದ್ಯಮವೊಂದನ್ನು ಆರಂಭಿಸಿದ್ದರು. ಇದಕ್ಕೂ ಮುನ್ನ ಅವರು ಎಂಫಸಿಸ್ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. ಮತ್ತೊಬ್ಬ ಸಂಸ್ಥಾಪಕ ಪುಷ್ಪೇಷ್ ಅವರು ಹೆಚ್‍ಎಸ್‍ಬಿಸಿಯಲ್ಲಿ ರೀಸರ್ಚ್ ಅನಾಲಿಸ್ಟ್ ಆಗಿ ಕೆಲಸ ಮಾಡಿದ್ದರು.

ಆರೋಗ್ಯಕಾರಿ ಆಹಾರ ಒದಗಿಸುವ ಚಿಂತನೆಯೊಂದಿಗೆ ಪುಷ್ಟೇಷ್, ಆರು ತಿಂಗಳ ಅವಧಿಯಲ್ಲಿ ಆಹಾರ ಪದಾರ್ಥಗಳ ಪಟ್ಟಿ ರೆಡಿ ಮಾಡಿದರು. ಅವುಗಳನ್ನು ತಯಾರಿಸುವ ವಿಧಾನವನ್ನು ರೂಪಿಸಿದರು. ತಂದುರಸ್ತ್ ಹೆಸರಿನಲ್ಲಿ ಅವುಗಳನ್ನು ಮಾರುಕಟ್ಟೆಗೆ ಪರಿಚಯಿಸಿದರು.

ಜೀವನಶೈಲಿಯಲ್ಲಿ ಸರಿಯಾದ ಪ್ರಮಾಣದಲ್ಲಿ ಪೌಷ್ಟಿಕಾಂಶ ದೊರೆಯುವ ಆಹಾರಗಳನ್ನು ಸೇವಿಸಿದರೆ ಬಹಳಷ್ಟು ಉಪಯೋಗ ಪಡೆದುಕೊಳ್ಳಬಹುದು. ನಾನು ಪೌಷ್ಟಿಕಾಂಶದ ವಿಚಾರದಲ್ಲಿ ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದೇನೆ. ಸಮತೋಲಿತ ಆಹಾರ ಪದ್ಧತಿ ಮತ್ತು ಸರಿಯಾದ ದೈಹಕ ಕಸರತ್ತಿನಿಂದಾಗಿ ಮೂರು ತಿಂಗಳಿನಲ್ಲಿ 12 ಕಿಲೋಗ್ರಾಂ ತೂಕ ಕಡಿಮೆ ಮಾಡಿಕೊಂಡಿದ್ದೆ ಎನ್ನುತ್ತಾರೆ ಸುಧಾಂಶು.

ಸುಧಾಂಶು ಮತ್ತು ಪುಷ್ಟೇಶ್ ಅವರು ತಮ್ಮ ಸ್ವಂತ ಜೇಬಿನಿಂದ, ಗೆಳೆಯರು, ಕುಟುಂಬಿಕರ ಸಹಕಾರದೊಂದಿಗೆ ಈ ಉದ್ಯಮಕ್ಕೆ 13 ಲಕ್ಷ ರೂಪಾಯಿಗಳನ್ನು ತೊಡಗಿಸಿದ್ದಾರೆ.

ಮಾರುಕಟ್ಟೆಯಲ್ಲಿ ತಂದುರಸ್ತ್​​ ಆಕರ್ಷಣೆ..!

ದಿನಂಪ್ರತಿ ಮಾರಾಟವಾಗುವ ಪ್ರತೀ 6 ಊಟದಲ್ಲಿ ನಾಲ್ಕನ್ನು ತಂದುರಸ್ತ್ ಸರಬರಾಜು ಮಾಡಬೇಕು ಎನ್ನುವ ಮಹತ್ತರ ಹೆಗ್ಗುರಿ ಇಟ್ಟುಕೊಂಡಿದ್ದಾರೆ. ಸಧ್ಯಕ್ಕೆ ತಂದುರಸ್ತ್ 170-180 ಊಟವನ್ನು ಸರಬರಾಜು ಮಾಡುತ್ತಿದೆ. ಹೆಸ್‍ಬಿಸಿ, ಗೋಲ್ಡ್​ಮ್ಯಾನ್​​ ಸ್ಯಾಷ್, ಸಿಸ್ಕೋ, ನಾರಾಯಣ ಹೃದಯಾಲಯ ಮೊದಲಾದ ಸಂಸ್ಥೆಗಳು ತಂದುರಸ್ತ್ ಗ್ರಾಹಕರಾಗಿವೆ. ಶೇಕಡಾ 80ರಷ್ಟು ಗ್ರಾಹಕರು ಮತ್ತೆ ಮತ್ತೆ ಆರ್ಡರ್ ಮಾಡುತ್ತಿದ್ದಾರೆ.

ಮೊದಲ 7 ತಿಂಗಳಲ್ಲೇ ತಂದುರಸ್ತ್ ಸುಮಾರು 10 ಸಾವಿರಕ್ಕೂ ಹೆಚ್ಚು ಆರ್ಡರ್‍ಗಳನ್ನು ಸರಬರಾಜು ಮಾಡಿದೆ. ಅಲ್ಲದೆ ಗ್ರಾಹಕರ ಉಪಯೋಗಕ್ಕಾಗಿ ಸಬ್‍ಸ್ಕ್ರಿಪ್ಷನ್ ಮಾದರಿಯನ್ನೂ ತಂದುರಸ್ತ್ ಅಳವಡಿಸಿಕೊಂಡಿದೆ. ಅಂದರೆ, ವಾರಕ್ಕೆ, ತಿಂಗಳಿಗೆ ಊಟದ ಕೂಪನ್ ಗಳನ್ನು ಪಡೆದುಕೊಳ್ಳಬಹುದು. ಪ್ರತಿ ಊಟಕ್ಕೆ 60ರಿಂದ 120 ರೂಪಾಯಿ ದರ ನಿಗದಿಪಡಿಸಲಾಗಿದೆ.

ಸುಧಾಂಶು ಅವರ ಪ್ರಕಾರ, ಆರೋಗ್ಯಕಾರಿ ಆಹಾರಪದ್ಧತಿಯಲ್ಲಿ ಕನಿಷ್ಟ 6 ಸಮತೋಲಿತ ಊಟ ಸೇರಿರಬೇಕು. ಪೌಷ್ಟಿಕಾಂಶದ ಮಾಹಿತಿ ಕೊರತೆ, ಪೌಷ್ಟಿಕ ಆಹಾರಗಳ ಅಲಭ್ಯತೆ, ಸಮಯಾವಕಾಶದ ಕೊರತೆಯಿಂದಾಗಿ ಬಹುತೇಕ ಜನರಿಗೆ ಆಹಾರ ಪದ್ಧತಿ ಅನುಸರಿಸಲು ಕಷ್ಟವಾಗುತ್ತಿದೆ. ತಂದುರಸ್ತ್​​ನಲ್ಲಿ ಕೇಂದ್ರೀಯ ಅಡುಗೆ ಕೋಣೆಯಿದ್ದು, ಗುಣಮಟ್ಟ ಮತ್ತು ನಿರಂತರ ಕಾರ್ಯಾಚರಣೆಯನ್ನು ಖಾತರಿಪಡಿಸಲಾಗುತ್ತಿದೆ. ಅಲ್ಲದೆ, ಬ್ಯುಸಿನೆಸ್ ಟು ಬ್ಯುಸಿನೆಸ್ ಮಾದರಿಯಲ್ಲೂ ಕಾರ್ಯಾಚರಣೆ ಮಾಡುತ್ತಿದ್ದೇವೆ. ಜಿಮ್‍ಗೆ ಹೋಗುವಂತಹ ಯುವಕರಿಗೆ ತಂದುರಸ್ತ್ ನಂಬಿಕಸ್ಥ ಫುಡ್​ ಪಾರ್ಟ್​ನರ್​​ ಆಗಿರಲಿದೆ. ಅವರು ಫಿಟ್‍ನೆಸ್ ಗುರಿ ಈಡೇರಿಸಿಕೊಳ್ಳುವಲ್ಲಿ ಇದು ನೆರವಾಗುತ್ತಿದ್ದೇವೆ.

ಅಷ್ಟೇ ಅಲ್ಲ, ಫೇಸ್‍ಬುಕ್ ಪೇಜ್, ವೆಬ್‍ಸೈಟ್‍ಗಳ ಮೂಲಕ, ರಸಪ್ರಶ್ನೆ, ವಿಶೇಷ ಕಾರ್ಯಕ್ರಮಗಳ ಮೂಲಕ ಪೌಷ್ಟಿಕಾಂಶ ಮತ್ತು ಆರೋಗ್ಯಕಾರಿ ಜೀವನಶೈಲಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಜನರು ಪಿಡ್ಜಾ ಮತ್ತಿತರ ಅನಾರೋಗ್ಯಕಾರಿ ಆಹಾರ ಉತ್ಪನ್ನಗಳ ಮೇಲೆ ಅಧಿಕವಾಗಿ ಖರ್ಚು ಮಾಡುತ್ತಿದ್ದಾರೆ. ಆದರೆ, ಪೌಷ್ಟಿಕ ಆಹಾರಗಳಿಗೆ 20 ರೂಪಾಯಿ ಖರ್ಚು ಮಾಡಲೂ ಎರಡೆರಡು ಬಾರಿ ಯೋಚನೆ ಮಾಡುತ್ತಾರೆ. ಇದರರ್ಥ ಕೇವಲ ಕೆಲವೇ ಕೆಲವು ಮಂದಿ ಮಾತ್ರ ಆರೋಗ್ಯಕಾರಿ ಆಹಾರ ಪದ್ಧತಿ ಅಳವಡಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಾರೆ. ನಾವು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಒಂದಿಷ್ಟು ಹೆಚ್ಚು ಹಣವನ್ನು ಪೌಷ್ಟಿಕ ಆಹಾರಗಳಿಗೆ ವಿನಿಯೋಗಿಸುವ ಮೂಲಕ ಬೊಜ್ಜು, ಹೃದಯ ಕಾಯಿಲೆ ಮತ್ತಿತರ ಕಾಯಿಲೆಗಳಿಗೆ ಖರ್ಚು ಮಾಡುವ ಹಣವನ್ನು ಉಳಿಸಬಹುದು.

ಅಹಾರ ತಂತ್ರಜ್ಞಾನ

2016ರ ವೇಳೆಗೆ ಆಹಾರ ತಂತ್ರಜ್ಞಾನ ಕ್ಷೇತ್ರದ ಮೌಲ್ಯ ಸುಮಾರು 18 ಲಕ್ಷ ಕೋಟಿಗೆ ಏರುವ ನಿರೀಕ್ಷೆ ಇದೆ. ಉದ್ಯೋಗದಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಭಾರತೀಯರು ಈಗ ಆರೋಗ್ಯಕಾರಿ ಆಹಾರದತ್ತ ವಾಲುತ್ತಿದ್ದಾರೆ. ಅವರ ಮನೆಗೆ ಅಥವಾ ಕಚೇರಿಗೆ ಆಹಾರವನ್ನು ತರಿಸಿಕೊಳ್ಳುತ್ತಿದೆ. ಈ ಬೇಡಿಕೆಯೇ ಆನ್‍ಲೈನ್ ಆಹಾರ ಮಾರಾಟಗಾರರಿಗೆ ಅವಕಾಶ ಒದಗಿಸಿಕೊಡುತ್ತಿದೆ.

ಅಷ್ಟೇ ಅಲ್ಲ, ಕೇಂದ್ರೀಕೃತ ಕಿಚನ್ ನಿಂದಾಗಿ ಉತ್ಪಾದನಾ ಖರ್ಚು ಕಡಿಮೆಯಾಗುತ್ತಿದ್ದು, ಕಾರ್ಯಾಚಣೆ ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ.

ಆದಾಗ್ಯೂ ಈ ಉದ್ಯಮ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಬೇಯಿಸಿದ ಉತ್ಪನ್ನಗಳು ಬೇಗನೇ ಹಾಳಾಗುತ್ತವೆ. ಹೀಗಾಗಿ ಅತ್ಯಂತ ವೇಗದಲ್ಲಿ ಮತ್ತು ಸಮರ್ಥವಾಗಿ ಆಹಾರೋತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕಾಗಿದೆ. ಇ-ಕಾಮರ್ಸ್ ಸಂಸ್ಥೆಗಳಂತೆ, ಇ-ಹೊಟೇಲ್‍ಗಳು ದರ ಕಡಿಮೆ ಮಾಡುವಲ್ಲಿ ವೈಫಲ್ಯ ಅನುಭವಿಸುತ್ತವೆ. ಹೀಗಾಗಿ, ಇತರ ಸಾಂಪ್ರದಾಯಿಕ ಹೊಟೇಲ್‍ಗಳು ಮತ್ತು ರೆಸ್ಟೋರೆಂಟ್‍ಗಳಿಂದ ಭಾರೀ ಸ್ಪರ್ಧೆ ಎದುರಿಸಬೇಕಾಗಿದೆ. ಒಂದು ಟ್ರಿಪ್‍ಗೆ ಎಷ್ಟು ಡೆಲಿವರಿ ಆಗುತ್ತೆ ಎನ್ನುವುದು ನಿರ್ದಿಷ್ಟವಾಗಿರುವುದಿಲ್ಲ. ಹೀಗಾಗಿ ಡೆಲಿವರಿ ವೆಚ್ಚ, ಇ- ಹೊಟೇಲ್‍ಗಳಿ ದುಬಾರಿಯಾಗಿ ಪರಿಣಮಿಸಿವೆ.

ಮುಂದೇನು ತಂದುರಸ್ತ್​​ ದಾರಿ..?

ಬೆಂಗಳೂರು ಮತ್ತು ಇತರ ನಗರಗಳಲ್ಲಿ ಮತ್ತಷ್ಟು ಕಿಚನ್‍ಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. 2017ರಲ್ಲಿ ಎರಡು ಮತ್ತು 2018ರಲ್ಲಿ 4 ಕಿಚನ್ ಸ್ಥಾಪಿಸಲು ನಿರ್ಧರಿಸಿದೆ. ಮುಂದಿನ 12 ತಿಂಗಳಲ್ಲಿ ಪ್ರತಿನಿತ್ಯ 1000 ಪ್ಯಾಕೆಟ್‍ಗಳನ್ನು ಸರಬರಾಜು ಮಾಡುವ ಸಾಮರ್ಥ್ಯ ಪಡೆಯಲು ಸಂಸ್ಥೆ ಗುರಿಹಾಕಿಕೊಂಡಿದೆ.

ಜನರು ಆರೋಗ್ಯಕರ, ಚಿಂತೆ, ಒತ್ತಡ ಮುಕ್ತ ಜೀವನ ನಡೆಸಲು, ಉತ್ತಮವಾದ ಸಮತೋಲಿತ ಆಹಾರದ ಆಯ್ಕೆಗಳನ್ನು ಒದಗಿಸುವ ಮೂಲಕ ಪಾರದರ್ಶಕ, ವ್ಯವಸ್ಥಿತ ಉದ್ಯಮವನ್ನಾಗಿ ಪರಿವರ್ತಿಸಲು ತೀರ್ಮಾನಿಸಿದ್ದೇವೆ. ಆರೋಗ್ಯಕಾರಿ ಆಹಾರವನ್ನು ಸರಬರಾಜು ಮಾಡುವ ಮೂಲಕ, ಪೌಷ್ಟಿಕಾಂಶದ ಬಗ್ಗೆ ಜಾಗೃತಿಯನ್ನೂ ಮೂಡಿಸುತ್ತಿದ್ದೇವೆ ಎನ್ನುತ್ತಾರೆ ಸುಧಾಂಶು. ಒಟ್ಟಿನಲ್ಲಿ ತಂದರಸ್ತ್​​ ಇ-ಫುಡ್​​ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದೆ.