ಗೊಂಬೆಗಳ ಲೋಕದಲ್ಲಿ...

ಟೀಮ್​​ ವೈ.ಎಸ್​​.ಕನ್ನಡ

ಗೊಂಬೆಗಳ ಲೋಕದಲ್ಲಿ...

Wednesday November 18, 2015,

2 min Read

ಸಾಮಾನ್ಯವಾಗಿ ಗೊಂಬೆ ಹಾಳಾಯ್ತು ಅಥವಾ ಹಳೆಯದಾಯ್ತು ಅಂದ್ರೆ ಮಕ್ಕಳು ಅವನ್ನು ಎಸೆದುಬಿಡ್ತಾರೆ. ಆದ್ರೆ ಇಲ್ಲೊಬ್ಬರು ಅಂತಹ ವಿರೂಪಗೊಂಡ ಗೊಂಬೆಗಳಿಗೆ ಹೊಸ ರೂಪ ಕೊಡುವ ಮೂಲಕ, ಮಕ್ಕಳು ಮತ್ತೊಮ್ಮೆ ಅವುಗಳೊಂದಿಗೆ ಆಡುವಂತೆ ಮಾಡುತ್ತಿದ್ದಾರೆ.

ಇವರು ಸೋನಿಯಾ ಸಿಂಗ್. ಮೂಲತಃ ಭಾರತೀಯರಾದ ಇವರು ಸದ್ಯ ಆಸ್ಟ್ರೇಲಿಯಾದ ತಾಸ್ಮೇನಿಯಾ ನಿವಾಸಿ. ಹಾಳಾದ ಅಥವಾ ಹಳೆಯ ಗೊಂಬೆಗಳಿಗೆ ಹೊಸ ರೂಪ ಕೊಟ್ಟು, ಮರುಬಳಕೆಗೆ ಸಿದ್ಧಪಡಿಸಿ ಮಾರುವುದು ಇವರ ಕೆಲಸ. ಸೋನಿಯಾರ ಈ ಕೆಲಸ ಅವರಿಗೆ ಪ್ರತಿಷ್ಠಿತ ‘ಇಟ್ಸಿ ಡಿಸೈನ್ ಅವಾರ್ಡ್’ ದೊರಕಿಸಿದೆ. ವಿಂಟೇಜ್ ಸರಕುಗಳನ್ನು ಆನ್‍ಲೈನ್‍ನಲ್ಲಿ ಮಾರಾಟ ಮಾಡುವ ಇಟ್ಸಿ.ಕಾಮ್ ಆಯೋಜಿಸಿದ್ದ ಸ್ಪರ್ಧೆಯಲ್ಲಿ, ಸೋನಿಯಾ 52 ಸ್ಪರ್ಧಿಗಳನ್ನು ಸೋಲಿಸಿದ್ದಾರೆ. ಸೋನಿಯಾರ ಟ್ರೀ ಚೇಂಜ್ ಡಾಲ್ಸ್ ಪ್ರಾಜೆಕ್ಟ್​​​ಗೆ ಈ ಅತ್ಯುನ್ನತ ಪ್ರಶಸ್ತಿ ದೊರೆತಿದೆ.

image


ಈ ಮೂಲಕ ಸೋನಿಯಾ ಮಕ್ಕಳು, ಪೋಷಕರು ಹಾಗೂ ಕರಕುಶಲಗಳ ಕುರಿತು ಉತ್ಸಾಹ ಹೊಂದಿದವರಿಗೆ ಸ್ಫೂರ್ತಿಯಾಗಿದ್ದಾರೆ ಸೋನಿಯಾ. ಟ್ರೀ ಚೇಂಜ್ ಪ್ರಾಜೆಕ್ಟ್ ಮೂಲಕ ಹಳೆಯ ಮತ್ತು ಹಾಳಾದ ಗೊಂಬೆಗಳಿಗೆ ನವನವೀನ ಶೈಲಿಯ ವಿನ್ಯಾಸಗಳಿಂದ ಹೊಸ ರೂಪ ಕೊಡುತ್ತಾ ಹೊಸ ಚಳುವಳಿಯನ್ನೇ ಹುಟ್ಟುಹಾಕಿದ್ದಾರೆ. ಹಾಗೇ ಗೊಂಬೆಗಳ ಮರುವಿನ್ಯಾಸ ಮತ್ತು ಮರುಬಳಕೆಯ ವಿಷಯದಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಸೋನಿಯಾ ಕುರಿತು ದಿ ಹೆರಾಲ್ಡ್ ಸನ್ ವರದಿ ಮಾಡಿದೆ.

ಕಳೆದ ವರ್ಷ ಆಸ್ಟ್ರೇಲಿಯಾ ಸರ್ಕಾರ ವೈಜ್ಞಾನಿಕ ಸಂಶೋಧನೆಗೆ ನೀಡುತ್ತಿದ್ದ ಹಣವನ್ನು ಕಡಿತಗೊಳಿಸಿತು. ಇದರಿಂದಾಗಿ ವಿಜ್ಞಾನ ಸಂವಹನ ವಿಭಾಗದಲ್ಲಿದ್ದ ಸೋನಿಯಾ 2014ರ ಸೆಪ್ಟೆಂಬರ್‍ನಲ್ಲಿ ಕೆಲಸ ಕಳೆದುಕೊಳ್ಳಬೇಕಾಯ್ತು. ಆಗಲೇ ಅವರು ಏನಾದರೂ ಮಾಡಬೇಕು ಅಂತ ಹೊಸ ಹೊಸ ಐಡಿಯಾ ಮಾಡತೊಡಗಿದರು ಸಓನಿಯಾ. ಆಗ ಅವರಿಗೆ ಹೊಳೆದಿದ್ದೇ ಈ ಡಾಲ್ ಪ್ರಾಜೆಕ್ಟ್ ಅಥವಾ ಗೊಂಬೆ ಯೋಜನೆ. ‘ನಾನು ಮತ್ತು ನನ್ನ ಸಹೋದರಿಯರು ಹುಟ್ಟಿ ಬೆಳೆದಿದ್ದು ತಾಸ್ಮೇನಿಯಾದ ಹಸಿರಿನಿಂದ ಕೂಡಿದ ಪರಿಸರದಲ್ಲಿ. ಬಾಲ್ಯದಲ್ಲಿ ನಾವು ಸೆಕೆಂಡ್ ಹ್ಯಾಂಡ್ ಗೊಂಬೆಗಳು ಮತ್ತು ಮನೆಯಲ್ಲೇ ತಯ್ಯಾರಿಸಿದ ಆಟಿಕೆಗಳೊಂದಿಗೆ ಹೆಚ್ಚಾಗಿ ಆಟವಾಡುತ್ತಿದ್ದೆವು. ಹಾಳಾದ ಮತ್ತು ಹಳೆಯ ವಸ್ತುಗಳನ್ನು ಸರಿಪಡಿಸಿ, ಹೊಸ ರೂಪದೊಂದಿಗೆ ಮರುಜೀವ ಕೊಟ್ಟು, ಮತ್ತೆ ಬಳಸೋದರಿಂದ ನನಗೇನೋ ಒಂಥರಾ ಖುಷಿ ಮತ್ತು ಸಮಾಧಾನವಾಗುತ್ತಿತ್ತು’ ಅಂತ ತಮ್ಮ ಬ್ಲಾಗ್‍ನಲ್ಲಿ ಹೇಳಿಕೊಂಡಿದ್ದಾರೆ ಸೋನಿಯಾ.

ಹಾಳಾದ ಅಥವಾ ವಿರೂಪಗೊಂಡ ಗೊಂಬೆಯ ಮುಖವನ್ನು ತೆಗೆದು, ಬಣ್ಣ ಬಳಿದು ಹೊಸ ವಿನ್ಯಾಸ ನೀಡ್ತಾರೆ ಸೋನಿಯಾ. ಪ್ರತಿ ತಿಂಗಳು ಮರುಬಳಕೆಗೆ ಸಿದ್ಧಗೊಂಡ ಒಂದೊಂದೇ ಗೊಂಬೆಯನ್ನು ಹರಾಜು ಹಾಕೋದು ಅವರ ರೂಢಿ. ಹೀಗೆ ಹರಾಜು ಮೂಲಕವೇ ಕೇವಲ ಒಂದೇ ಗೊಂಬೆಯಿಂದ ಒಮ್ಮೊಮ್ಮೆಯಂತೂ ಬರೊಬ್ಬರಿ ಒಂದು ಸಾವಿರ ಡಾಲರ್‍ವರೆಗೂ ಹಣ ಗಳಿಸಿದ್ದಿದೆ. ‘ಗೊಂಬೆಗಳಿಗೆ ನಾವು ಹೊಸ ಬಟ್ಟೆಯನ್ನೂ ಹೊಲಿದು ತೊಡಿಸುತ್ತೇವೆ. ನನ್ನಮ್ಮ ಅಂತೂ ಅತ್ಯದ್ಭುತವಾಗಿ ಬಟ್ಟೆ ಹೊಲಿಯುತ್ತಾರೆ. ಈಗ ನನ್ನೊಂದಿಗೆ ಅವರೂ ಕೈ ಜೋಡಿಸಿದ್ದು, ಇಬ್ಬರೂ ಸೇರಿ ಗೊಂಬೆಗಳಿಗೆ ಹೊಸ ರೂಪ ನೀಡುವ ಕೆಲಸ ಮಾಡುತ್ತಿದ್ದೇವೆ’ ಅಂತಾರೆ ಸೋನಿಯಾ ಸಿಂಗ್. ಅವರ ಈ ವಿಭಿನ್ನ ಹಾಗೂ ವಿಶೇಷ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿರುವುದು, ಅವರಲ್ಲಿ ಮತ್ತಷ್ಟು ಸ್ಫೂರ್ತಿ ನೀಡಿದೆ.

ಎಸ್‍ಬಿಎಸ್2 ಆಸ್ಟ್ರೇಲಿಯ ಮಾಧ್ಯಮದವರು ಯೂಟ್ಯೂಬ್‍ಗೆ ಅಪ್‍ಲೋಡ್ ಮಾಡಿರುವ ಸೋನಿಯಾ ಸಿಂಗ್ ಅವರ ವೀಡಿಯೋವನ್ನು ಬರೊಬ್ಬರಿ 1 ಕೋಟಿ 80 ಲಕ್ಷ ಜನ ವೀಕ್ಷಿಸಿದ್ದಾರೆ. ಹಾಗೇ ಟ್ರೀ ಚೇಂಜ್ ಡಾಲ್ಸ್​​ನ ಫೇಸ್‍ಬುಕ್ ಪೇಜ್‍ಗೆ 4 ಲಕ್ಷದ 40 ಸಾವಿರಕ್ಕಿಂತಲ ಹೆಚ್ಚು ಜನ ಫ್ಯಾನ್‍ಗಳಿದ್ದಾರೆ. ‘ನನಗೆ ಗೊತ್ತಿಲ್ಲದೆಯೇ ನಾನು ಜನರಲ್ಲಿ ಸ್ಫೂರ್ತಿ ತುಂಬುತ್ತಿದ್ದೇನೆ, ಪ್ರೇರೇಪಣೆ ನೀಡುತ್ತಿದ್ದೇನೆ ಅನ್ನಿಸುತ್ತೆ’ ಅಂತ ನಗುತ್ತಾರೆ ಸೋನಿಯಾ.

‘ನಾನು ಪ್ರತಿತಿಂಗಳು ಹೆಚ್ಚೆಂದರೆ ಕೇವಲ 20 ಗೊಂಬೆಗಳಿಗೆ ಹೊಸ ರೂಪ ಕೊಡ್ತೀನಿ. ವಿಶೇಷ ಅಂದ್ರೆ ಕೆಲವೇ ದಿನಗಳಲ್ಲಿ ಆ ಗೊಂಬೆಗಳು ಮಾರಾಟವಾಗಿಬಿಡ್ತವೆ. ಹೀಗಾಗಿಯೇ ನನ್ನಂತೆಯೇ ಗೊಂಬೆಗಳ ಬಗ್ಗೆ ಒಲವು ಹೊಂದಿರುವವರಿಗೂ ಪ್ರೋತ್ಸಾಹಿಸಬೇಕು ಅನ್ನೋದು ನನ್ನ ಬಯಕೆ’ ಅಂತ ತಮ್ಮ ಅಭಿಲಾಷೆ ವ್ಯಕ್ತಪಡಿಸುತ್ತಾರೆ ಸೋನಿಯಾ.

ಸದ್ಯ ಸೋನಿಯಾ ಸಿಂಗ್ ಇಟ್ಸಿ ಅವಾರ್ಡ್‍ನ ಭಾಗವಾಗಿ ಬ್ರೂಕ್ಲಿನ್‍ನ ಇಟ್ಸಿ ಕೇಂದ್ರ ಕಚೇರಿಗೆ ಭೇಟಿ ನೀಡಲು ರೆಡಿಯಾಗುತ್ತಿದ್ದಾರೆ.

ಅನುವಾದಕರು: ವಿಶಾಂತ್​​​