ಪೆನ್ಸಿಲ್ ಸಂಗ್ರಹದಲ್ಲಿ ಸಾಧನೆ –ಗಿನ್ನಿಸ್ ಬುಕ್ ಸೇರಿದ 17 ವರ್ಷದ ತುಷಾರ್

ಟೀಮ್​​ ವೈ.ಎಸ್​​.ಕನ್ನಡ

0

ಪ್ರಪಂಚದಾದ್ಯಂತ ಅನೇಕ ಜನರಿಗೆ ಹಳೇ ನಾಣ್ಯ, ನೋಟು, ಅಂಚೆ ಚೀಟಿ, ಹಸ್ತಾಕ್ಷರ ಸೇರಿದಂತೆ ಅನೇಕ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸವಿರುತ್ತದೆ. ಹಾಗೇ ಹವ್ಯಾಸದಿಂದ ಶುರುವಾದ ವಸ್ತುವೊಂದರ ಸಂಗ್ರಹ ಈಗ ಗಿನ್ನೀಸ್ ಬುಕ್ ಸೇರಿದೆ. ನಾವು ಹೇಳ್ತಾ ಇರೋದು ದೆಹಲಿಯ 17 ವರ್ಷದ ಹುಡುಗನ ಕಥೆ. 20 ಸಾವಿರಕ್ಕೂ ಹೆಚ್ಚು ಬಗೆಯ ಪೆನ್ಸಿಲ್ ಸಂಗ್ರಹಿಸಿ ಗಿನ್ನಿಸ್ ರೆಕಾರ್ಡ್ ಮಾಡಿದ್ದಾರೆ ತುಷಾರ್. ಇನ್ನೊಂದು ಕುತೂಹಲಕಾರಿ ವಿಷಯವೆಂದ್ರೆ ಅವರ ಸಂಗ್ರಹದಲ್ಲಿ ಭಾರತವೊಂದೇ ಅಲ್ಲ ಜಗತ್ತಿನ 60ಕ್ಕೂ ಹೆಚ್ಚು ದೇಶಗಳ ಪೆನ್ಸಿಲ್ ಗಳಿವೆ.

ವಸಂತ್ ಕುಜ್ ಪಬ್ಲಿಕ್ ಸ್ಕೂಲ್ ನಲ್ಲಿ 12ನೇ ವರ್ಷದಲ್ಲಿ ಓದುತ್ತಿರುವ ತುಷಾರ್ ಉರುಗ್ವೆಯ ಎಮಿಲಿಯೋ ಅರಿನಾಸ್ ದಾಖಲೆಯನ್ನು ಮುರಿದಿದ್ದಾರೆ. ಎಮಿಲಿಯೋ 72 ರಾಷ್ಟ್ರಗಳ 16260 ಪೆನ್ಸಿಲ್ ಗಳನ್ನು ಸಂಗ್ರಹಿಸಿದ್ದು, ತುಷಾರ್ 19824 ಪೆನ್ಸಿಲ್ ಸಂಗ್ರಹಿಸಿ ಗಿನ್ನಿಸ್ ಬುಕ್ ಸೇರಿದ್ದಾರೆ. 1998 ಏಪ್ರಿಲ್ 14ರಂದು ಜನಿಸಿರುವ 17 ವರ್ಷದ ತುಷಾರ್ ಪೆನ್ಸಿಲ್ ಸಂಗ್ರಹ ಪ್ರಾರಂಭಿಸಿ ಕೇವಲ 14 ವರ್ಷ ಕಳೆದಿದೆ. ಎಮಿಲಿಯೋ 1956ರರಿಂದಲೇ ಪೆನ್ಸಿಲ್ ಸಂಗ್ರಹ ಕಾರ್ಯದಲ್ಲಿ ನಿರತರಾಗಿದ್ದಾರೆ. ಒಂದೇ ರೀತಿಯ ಎರಡು ಪೆನ್ಸಿಲ್ ತುಷಾರ್ ಸಂಗ್ರಹಣೆಯಲ್ಲಿಲ್ಲ.

ಮೂರು ವರ್ಷ ವಯಸ್ಸಿನಲ್ಲಿಯೇ ತುಷಾರ್ ಪೆನ್ಸಿಲ್ ಸಂಗ್ರಹಿಸುವಲ್ಲಿ ಆಸಕ್ತಿ ಹೊಂದಿದ್ದ. ಚಿಕ್ಕ ಹುಡುಗನಿರುವಾಗಲೇ ಪೆನ್ಸಿಲ್ ಬಗ್ಗೆ ಪ್ರೀತಿ ಹೊಂದಿದ್ದ ತುಷಾರ್, ಉಡುಗೋರೆಯಾಗಿ ಪೆನ್ಸಿಲ್ ಸಿಕ್ಕರೆ ಅದನ್ನು ಬರೆಯಲು ಬಳಸುತ್ತಿರಲಿಲ್ಲವಂತೆ. ಬದಲಾಗಿ ಅದನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದರಂತೆ.ಸಮಯ ಕಳೆದಂತೆ ಹವ್ಯಾಸ ಪ್ಯಾಶನ್ ಆಗಿ ಬದಲಾಯ್ತು. ಪೆನ್ಸಿಲ್ ಸಂಗ್ರಹ ಕಾರ್ಯ ಶುರುವಾಯ್ತು. ಅದೇ ಉತ್ಸಾಹ ನನ್ನನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ ಎನ್ನುತ್ತಾರೆ ತುಷಾರ್.

ಕಳೆದ ಆರು ವರ್ಷಗಳಿಂದ ತುಷಾರ್ ಲಿಮ್ಕಾ ಬುಕ್ ನಲ್ಲಿ ಹೆಸರು ದಾಖಲಿಸಿಕೊಂಡು ಬರ್ತಾ ಇದ್ದಾರೆ. ತುಷಾರ್ ಪ್ರಕಾರ 2014ರಲ್ಲಿ 60 ದೇಶಗಳ 14279 ಪೆನ್ಸಿಲ್ ತುಷಾರ್ ಸಂಗ್ರಹಣೆಯಲ್ಲಿತ್ತಂತೆ. 2009ರಲ್ಲಿ ಮೊದಲ ಬಾರಿ ತುಷಾರ್ ಹೆಸರು ಲಿಮ್ಕಾ ಬುಕ್ ರೆಕಾರ್ಡ್ ಸೇರಿತು. ದೇಶದಲ್ಲಿ ಅತಿ ಹೆಚ್ಚು ಪೆನ್ಸಿಲ್ ಸಂಗ್ರಹಣೆಯ ಹೆಗ್ಗಳಿಕೆ ಗಳಿಸಿದ್ರು. ನಂತರ 2010,2011,2012,2013,2014 ಹಾಗೂ 2015ರಲ್ಲಿ ತುಷಾರ್ ಲಿಮ್ಕಾ ಬುಕ್ ರೆಕಾರ್ಡ್ ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡು ಬರ್ತಾ ಇದ್ದಾರೆ. ಏಷ್ಯನ್, ಆಫ್ರಿಕನ್, ಕೆರಿಬಿಯನ್, ಯುರೋಪಿಯನ್, ಮಧ್ಯಪ್ರಾಚ್ಯ ಹಾಗೂ ಉತ್ತರ ಮತ್ತು ದಕ್ಷಿಣ ಅಮೆರಿಕ ಪೆಸಿಫಿಕ್ ದೇಶಗಳಲ್ಲಿ ತಯಾರಿಸಿದ ಪೆನ್ಸಿಲ್ ಗಳು ತುಷಾರ್ ಸಂಗ್ರಹಣೆಯಲ್ಲಿವೆ.

ತುಷಾರ್ ಸಂಗ್ರಹಣೆಯಲ್ಲಿ ಸಾಮಾನ್ಯದಿಂದ ಹಿಡಿದು ಅಸಮಾನ್ಯ ಪೆನ್ಸಿಲ್ ಗಳು ಇವೆ. ಕೆಲವೊಂದು ಪೆನ್ಸಿಲ್ ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಅಂತ ಆಕಾರದಲ್ಲಿವೆ. ಅತಿ ಚಿಕ್ಕ ಎಂದರೆ 25 ಮಿಲಿಮೀಟರ್ ಉದ್ದದ,2 ಮಿಲಿಮೀಟರ್ ಸುತ್ತಳತೆಯೆ ಪೆನ್ಸಿಲ್. ಅತಿ ದೊಡ್ಡ ಎಂದರೆ 548 ಸೆಂಟಿಮೀಟರ್ ಅಂದರೆ 18 ಫೀಟ್ ಹಾಗೂ 29 ಸೆಂಟಿಮೀಟರ್ ಸುತ್ತಳತೆಯದ್ದಾಗಿದೆ. ವಿಭಿನ್ನ ಬಣ್ಣ ಹಾಗೂ ಆಕಾರದ ಪೆನ್ಸಿಲ್ ಗಳಲ್ಲದೇ, ವಿಭಿನ್ನ ವಾಸನೆಯ,ಪ್ರಸಿದ್ಧ ವ್ಯಕ್ತಿಗಳ ರೂಪದ, ಹಳೆ ಕಟ್ಟಡದ ರೂಪದಲ್ಲಿರುವ ಪೆನ್ಸಿಲ್ ಗಳು ಇವೆ. ತಾಪಮಾನವನ್ನು ಗುರುತಿಸುವ, ಸ್ಪೈಡರ್ಮ್ಯಾನ್, ಬಾರ್ಬಿ, ಟಾಮ್ ಮತ್ತು ಜೆರ್ರಿ ಕಾರ್ಟೂನ್ ಪಾತ್ರಗಳ ಪೆನ್ಸಿಲ್ ಗಳು ಇವೆ ಎನ್ನುತ್ತಾರೆ ತುಷಾರ್.

ತುಷಾರ್ ಬಳಿ ಚಿನ್ನ ಲೇಪಿತ ಪೆನ್ಸಿಲ್ ಇದೆ. ಇದನ್ನು ಖರೀದಿಸಲು ತುಷಾರ್ ಪಾಲಕರು 400 ಪೌಂಡ್ ಖರ್ಚು ಮಾಡಿದ್ದಾರಂತೆ. ಕಾಗದದಿಂದ ಮಾಡಿದ ಹ್ಯಾಂಡ್ ಮೇಡ್ ಪೆನ್ಸಿಲ್ ಕೂಡ ತುಷಾರ್ ಸಂಗ್ರಹಣೆಯಲ್ಲಿದೆ. ಬರೆಯಲು ಬಾರದ ಮಕ್ಕಳಿಗಾಗಿ ತಯಾರಿಸುವ ವಿಶೇಷ ಪೆನ್ಸಿಲ್ ನ್ನು ಸಂಗ್ರಹಿಸಿದ್ದಾರೆ ತುಷಾರ್.

ಅಷ್ಟು ದೊಡ್ಡ ಸಂಗ್ರಹಣೆಯಲ್ಲಿ ಎರಡು ಪೆನ್ಸಿಲ್ ತುಷಾರ್ ಹೃದಯಕ್ಕೆ ಹತ್ತಿರವಾಗಿದೆ. ಬ್ರಿಟನ್ ರಾಣಿ ಎಲಿಜಬೆತ್ II ಬರೆಯಲು ಬಳಸುತ್ತಿದ್ದ ಪೆನ್ಸಿಲ್ ನನ್ನ ಹೃದಯಕ್ಕೆ ಹತ್ತಿರವಾಗಿದ್ದು, ಅದು ಹೆಚ್ಚು ಬೆಲೆ ಬಾಳುತ್ತದೆ ಎನ್ನುತ್ತಾರೆ ತುಷಾರ್.

ವಿಶ್ವದ 67 ದೇಶಗಳಲ್ಲಿ ಸಿದ್ಧವಾಗುವ ವಿವಿಧ ಬಗೆಯ ಪೆನ್ಸಿಲ್ ಗಳು ತುಷಾರ್ ಸಂಗ್ರಹಣೆಯಲ್ಲಿವೆ. ಭೂಪಟದಲ್ಲಿರುವ ಎಲ್ಲ ದೇಶಗಳ ಪೆನ್ಸಿಲ್ ಗಳನ್ನು ಸಂಗ್ರಹಿಸುವುದು ತುಷಾರ್ ಕನಸು. ನನ್ನ ಕುಟುಂಬ ಹಾಗೂ ಹಿತೈಷಿಗಳ ಆಶೀರ್ವಾದ ಇದ್ದರೆ ಕನಸು ನನಸಾಗುವುದರಲ್ಲಿ ಎರಡು ಮಾತಿಲ್ಲ ಎನ್ನುತ್ತಾರೆ ತುಷಾರ್. ತುಷಾರ್ ಗಂಟೆಗಳ ಕಾಲ ಇಂಟರ್ ನೆಟ್ ನಲ್ಲಿ ಪೆನ್ಸಿಲ್ ಗಳ ಬಗ್ಗೆ ಮಾಹಿತಿ ಜಾಲಾಡುತ್ತಾರೆ. ನಂತರ ತಂದೆ ತಾಯಿಗೆ ತಿಳಿಸುತ್ತಾರೆ. ಅವರ ತಂದೆ ತಾಯಿ ಹೊರಗಡೆ ಹೋದಾಗ ವಿಭಿನ್ನ ಪೆನ್ಸಿಲ್ ಗಳು ಕಂಡರೆ ತರುತ್ತಾರಂತೆ. ಸ್ನೇಹಿತರು, ಪರಿಚಯಸ್ತರು ಕೂಡ ಪೆನ್ಸಿಲ್ ತಂದು ಕೊಡುತ್ತಾರಂತೆ. ವಿದೇಶಕ್ಕೆ ಹೋದ ಪರಿಚಯಸ್ತರು ಕೂಡ ಪೆನ್ಸಿಲ್ ತಂದು ಕೊಡ್ತಾರೆ ಎನ್ನುತ್ತಾರೆ ತುಷಾರ್.

ಅಕ್ಟೋಬರ್ 14ರಂದು ವಿಶ್ವ ಗಿನ್ನಿಸ್ ಪುಸ್ತಕ ಸೇರಿದ್ದಾರೆ ತುಷಾರ್. ಉರುಗ್ವೆಯ ಎಮಿಲಿಯೋ ಅರಿನಾಸ್ ದಾಖಲೆಯನ್ನು ಹಿಂದಿಕ್ಕಿ, ಗಿನ್ನಿಸ್ ಬುಕ್ ನಲ್ಲಿ ತಮ್ಮ ಹೆಸರು ದಾಖಲಿಸಿಕೊಂಡಿದ್ದಾರೆ. ಲಂಡನ್ ನಲ್ಲಿರುವ ಗಿನ್ನಿಸ್ ಬುಕ್ ಕಾರ್ಯಾಲಯ ತನ್ನದೇ ಮಾನದಂಡದಿಂದ ನನ್ನ ಸಾಧನೆಯನ್ನು ಪರಿಶೀಲಿಸಿದೆ. ಪೆನ್ಸಿಲ್ ತಯಾರಿಸುವ ಕಂಪನಿಯೊಂದರ ಪ್ರತಿನಿಧಿ, ಸರ್ಕಾರಿ ಅಧಿಕಾರಿ ಹಾಗೂ ಸಾಮಾನ್ಯ ನಾಗರಿಕರೊಬ್ಬರ ಮೇಲ್ವಿಚಾರಣೆಯಲ್ಲಿ ಪೆನ್ಸಿಲ್ ಗಳ ವಿಡಿಯೋ ಹಾಗೂ ಫೋಟೋ ತೆಗೆಯಲಾಯ್ತು. ಗಿನ್ನಿಸ್ ಬುಕ್ ತನ್ನ ವೆಬ್ ಸೈಟ್ ನಲ್ಲಿ ಅಕ್ಟೋಬರ್ 14ರಂದು ಅದನ್ನು ದಾಖಲಿಸುವ ಮೂಲಕ ಪುಸ್ತಕದಲ್ಲಿ ತನಗೊಂದು ಸ್ಥಾನ ನೀಡಿದೆ ಎನ್ನುತ್ತಾರೆ ತುಷಾರ್.

17 ವರ್ಷದ ತುಷಾರ್ ಪೆನ್ಸಿಲ್ ಮ್ಯೂಸಿಯಂ ಸ್ಥಾಪಿಸುವ ಕನಸು ಹೊಂದಿದ್ದಾರೆ. ಯುಕೆಯಲ್ಲಿ ಈಗಾಗಲೇ ಒಂದು ಮ್ಯೂಸಿಯಂ ಇದ್ದು, ತಮ್ಮದು ವಿಶ್ವದಲ್ಲಿ ಎರಡನೇ ಪೆನ್ಸಿಲ್ ಮ್ಯೂಸಿಯಂ ಆಗಲಿದೆ ಎನ್ನುತ್ತಾರೆ ತುಷಾರ್.

ಲೇಖಕರು: ನಿಶಾಂತ್​​ ಗೋಯೆಲ್​​
ಅನುವಾದಕರು: ರೂಪಾ ಹೆಗಡೆ

Related Stories