ಪತ್ರೊಡೆ, ಕೊಟ್ಟೆ ಕಡುಬಿನ ಘಮ ಘಮ.. ಕೊಡಿಯಾಲದಲ್ಲಿ ಕರಾವಳಿ ತಿಂಡಿಗಳ ಸಂಗಮ

ಪ್ರಶಾಂತ್​​​ ಬಿ.ಆರ್​​.

0

ಕೆಲಸ, ಬದುಕು ಅಂತ ಊರು ಬಿಟ್ಟು ಬೆಂಗಳೂರು ಸೇರಿದವರು ಅದೆಷ್ಟೋ ಜನ. ಹೀಗೆ ಬಂದವರು ಊಟ ತಿಂಡಿ ವಿಚಾರಗಳಲ್ಲಂತೂ ಒಗ್ಗಿಕೊಳ್ಳುವುದು ಅನಿವಾರ್ಯ. ಅದು ಖಡಕ್ ರೊಟ್ಟಿಯನ್ನಷ್ಟೇ ಸವಿಯುತ್ತಾ ಬಂದ ಉತ್ತರ ಕರ್ನಾಟಕದ ಮಂದಿ ಇರಲಿ, ಕುಚಲಕ್ಕಿ ಗಂಜಿಯೂಟದ ಕರಾವಳಿ ಜನರೇ ಇರಲಿ, ಅವರು ಬೆಂಗಳೂರಿಗೆ ಬಂದ ಮೇಲೆ ರೈಸ್ ಬಾತ್ ಗಳಿಗೆ ಒಗ್ಗಿಕೊಳ್ಳಲೇಬೇಕು..

ಹೀಗಿದ್ರೂ ಉತ್ತರ ಕರ್ನಾಟಕ ಮಂದಿ ಬಯಸಿದ್ರೆ ಖಾನಾವಳಿಗಳು, ರೊಟ್ಟಿಯೂಟದ ಮೆಸ್ ಗಳಿಗೇನೂ ಬರವಿಲ್ಲ. ಆದ್ರೆ ತಮ್ಮೂರಿನ ಸಂಪ್ರಾದಾಯಿಕ ತಿನಿಸುಗಳನ್ನ ನಿರೀಕ್ಷಿಸುವ ಕರಾವಳಿ ಮಂದಿ ಸ್ವಲ್ವ ಹುಡುಕಾಡಬೇಕು. ಅಲ್ಲಸ್ಸಿ ಕೆಲವು ಕರಾವಳಿ ಶೈಲಿಯ ಹೊಟೇಲ್ ಗಳು ಇದ್ರೂ, ಅಲ್ಲಿ ಸಾಂಪ್ರದಾಯಿಕ ಶೈಲಿಯ ಭಕ್ಷ್ಯಗಳು ಸಿಗುವುದು ವಿರಳ.. ಹಾಗಂತ ಬೆಂಗಳೂರಿನಲ್ಲಿರುವ ಮಂಗಳೂರಿಗರು ಬೇಸರ ಪಡಬೇಕಾಗಿಲ್ಲ.. ಮಲ್ಲೇಶ್ವರಂನ ಲಿಂಕ್ ರೋಡ್ ನಲ್ಲಿರುವ ಈ ಹೋಟೆಲ್ ಗೆ ಒಮ್ಮೆ ನೀವು ಭೇಟಿ ಕೊಟ್ರೆ ಸಾಕು ಖುಷಿಯಿಂದ ಉಂಡ ತೃಪ್ತಿ ನಿಮಗೆ ಸಿಗಲಿದೆ..

ಹೊಟೇಲ್ ಕೊಡಿಯಾಲಾ... ಕರಾವಳಿ ಸೊಗಡಿನ ಸಾಂಪ್ರದಾಯಿಕ ತಿನಿಸುಗಳು ಸಿಗುವ ಅಪರೂಪದ ಹೊಟೇಲ್ ಇದು.. ಮರೆತೇ ಹೋಗಿರುವ ಮಂಗಳೂರು ಶೈಲಿಯ ತಿಂಡಿಗಳನ್ನ ಸವಿಯಬಹುದಾದ ಜಾಗವಿದು. ಬನ್ಸ್, ಬಿಸ್ಕೂಟ್ ಅಂಬೊಡೆ, ಅಂಬೊಡೆ, ಬಿಸ್ಕೂಟ್ ರೊಟ್ಟಿ, ಕೊಟ್ಟೆ ಕಡುಬು, ನೀರ್ ದೋಸೆ, ಮೂಡೆ, ಒತ್ತು ಶ್ಯಾವಿಗೆ, ಪತ್ರೊಡೆ, ವಿವಿಧ ನಮೂನೆಯ ಗೊಜ್ಜು – ಗಸಿಗಳು ಹೀಗೆ ಪಟ್ಟಿಮಾಡುತ್ತಾ ಹೋದರೆ ಕೊಡಿಯಾಲದಲ್ಲಿ ಸಿಗುವ ಕರಾವಳಿಯ ಸಾಂಪ್ರದಾಯಿಕ ತಿಂಡಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.. ಇಲ್ಲಿನ ತಿಂಡಿಗಳ ರುಚಿಯನ್ನ ಒಮ್ಮೆ ನೋಡಿದ್ರೆ ಬಿಡುವ ಮಾತೇ ಇಲ್ಲ..

“ ವೆರೈಟಿ ತಿಂಡಿಗಳನ್ನ ತಿನ್ನುವುದಂದ್ರೆ ನನಗೆ ತುಂಬಾ ಇಷ್ಟ.. ಅದ್ರಲ್ಲೂ ಕೊಡಿಯಾಲಕ್ಕೆ ಬಂದ್ರೆ ಮನೆಯಲ್ಲೇ ಕುಳಿತು ಊಟ ಮಾಡಿದ ರೀತಿ ಅನಿಸುತ್ತದೆ. ಇಲ್ಲಿನ ವೆರೈಟಿ ತಿಂಡಿಗಳು ಹಾಗೂ ಅವುಗಳ ಗುಣಮಟ್ಟ ಬೇರೆಡೆ ಸಿಗುವುದು ಕಷ್ಟ. ಹೀಗಾಗಿ ವೀಕೆಂಡ್, ರಜೆಗಳಲ್ಲಿ ಗೆಳೆಯರೊಂದಿಗೆ ಆಗಮಿಸಿ ಇಲ್ಲಿ ನನ್ನ ಫೇವರಿಟ್ ತಿಂಡಿಗಳನ್ನ ತಿನ್ನುತ್ತೇನೆ ” ಅಂತಾರೆ ಸುಳ್ಯ ಮೂಲದ ಗ್ರಾಹಕ ರಾಮ್ ಜೀವನ್. ಹಾಗಂತ ಕೊಡಿಯಾಲ ಹೊಟೇಲ್ ಕೇವಲ ಮಂಗಳೂರು ಮೂಲದವರಿಗೆ ಮಾತ್ರ ಅಚ್ಚುಮೆಚ್ಚಲ್ಲ.. ಬೆಂಗಳೂರು ಸೇರಿದಂತೆ ಇತರೆಡೆಯಿಂದ ಆಗಮಿಸಿದ ಅದೆಷ್ಟೋ ವ್ಯಕ್ತಿಗಳು ಇಲ್ಲಿಗೆ ಖಾಯಂ ಗಿರಾಕಿಗಳು “ ಕೊಡಿಯಾಲ ಹೊಟೇಲ್ ಬಗ್ಗೆ ನನಗೆ ತಿಳಿದಿರಲಿಲ್ಲ.. ಆದ್ರೆ ಗೆಳೆಯರೊಬ್ಬರ ಜೊತೆಗೆ ಇಲ್ಲಿಗೆ ಬಂದು ಕುಡ್ಲ ತಿಂಡಿಗಳನ್ನ ತಿಂದೆ. ನನಗೆ ಅದು ತುಂಬಾ ಇಷ್ಟವಾಯ್ತು.. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿನ ಸ್ವಚ್ಛತೆ ಹಾಗೂ ಗ್ರಾಹಕರನ್ನ ಸುಧಾರಿಸುವ ರೀತಿ ವಿಶೇಷ” ಅಂತ ಇಲ್ಲಿನ ಗ್ರಾಹಕರಾದ ಸಾಗರ್ ಹಾಗೂ ಸಾಯಿಸಂದೇಶ್ ಮೆಚ್ಚುಗೆ ವ್ಯಕ್ತಪಡಿಸ್ತಾರೆ.

ಕೊಡಿಯಾಲ ಹೊಟೇಲ್ ನಲ್ಲಿ ಕೇವಲ ಕರಾವಳಿ ಶೈಲಿಯ ತಿಂಡಿಗಳಷ್ಟೇ ಅಲ್ಲ, ವಿಶೇಷ ಊಟದ ಮೆನು ಕೂಡ ಇಲ್ಲಿದೆ. ಸ್ಪೆಷಲ್ ಪಲ್ಯ, ಸಂಬಾರ್ ನ ಜೊತೆ ಬಡಿಸುವ ಕುಚಲಕ್ಕಿ ಅನ್ನ ಇಲ್ಲಿನ ಗ್ರಾಹಕರಿಗೆ ಭಾರೀ ಇಷ್ಟ.. ಊಟವಾದ ಮೇಲೆ ಇಲ್ಲಿ ಕೋಕಂ ಜ್ಯೂಸ್ ಕುಡಿದರಷ್ಟೇ ನೆಮ್ಮದಿ. ಹೀಗೆ ಕಳೆದ 18 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆನಿಂತಿರುವ ಕೊಡಿಯಾಲ್ ನ ಹಿಂದೆಯೂ ಸಾಕಷ್ಟು ಸವಾಲಿನ ಕಥೆಗಳಿವೆ. ಆದ್ರೂ ಅದನ್ನೆಲ್ಲಾ ಮೀರಿ ಅದೆಷ್ಟೋ ಗ್ರಾಹಕರನ್ನ ಸಂತೃಪ್ತಿಗೊಳಿಸಿದ ನೆಮ್ಮದಿ ಹೊಟೇಲ್ ಮಾಲಿಕ ಗಣೇಶ್ ನಾಯಕ್ ಅವರಿಗಿದೆ.

“ ಕೊಡಿಯಾಲ್ ಹೊಟೇಲ್ ಶುರುಮಾಡಿದ ಮೊದಲ 2 ವರ್ಷ ಸಾಕಷ್ಟು ಕಷ್ಟಗಳನ್ನ ಅನುಭವಿಸಬೇಕಾಯ್ತು.. ಮಂಗಳೂರು ಶೈಲಿಯನ್ನಷ್ಟೇ ಇಟ್ಟುಕೊಂಡು ಹೊಟೇಲ್ ಮಾಡುವುದು ಸುಲಭವಾಗಿರಲಿಲ್ಲ. ಆದ್ರೆ ದಕ್ಷಿಣ ಕನ್ನಡ ಜಿಲ್ಲೆಯ ಜನರ ಪ್ರೀತಿ ಹಾಗೂ ಇತರರು ನೀಡಿದ ಬೆಂಬಲದಿಂದ ಕೊಡಿಯಾಲ್ ನ ಯಶಸ್ಸು ಸಾಧ್ಯವಾಯ್ತು.. ಈ ಉದ್ದಿಮೆಯಲ್ಲಿ ಸಾಕಷ್ಟು ನಷ್ಟವಾದ್ರೂ, ಕರಾವಳಿಯ ಸಂಪ್ರದಾಯ ಹಾಗೂ ವೈಶಿಷ್ಟ್ಯಗಳನ್ನ ಬೆಂಗಳೂರಿಗೆ ಪರಿಚಯಿಸಲೇಬೇಕು ಅನ್ನೋ ಉದ್ದೇಶ ವಿಫಲವಾಗಲಿಲ್ಲ ” ಅಂತ ಗಣೇಶ್ ನಾಯಕ್ ಆ ದಿನಗಳನ್ನ ನೆನಪಿಸಿಕೊಳ್ಳುತ್ತಾರೆ.

ಕೊಡಿಯಾಲದಲ್ಲಿ ಸುಮಾರು 30 ಮಂದಿ ನೌಕರರಿದ್ದಾರೆ. ಇವರಿಗೆಲ್ಲಾ ವಿಶೇಷ ತರಬೇತಿ ಹಾಗೂ ಸೌಕರ್ಯಗಳನ್ನ ಕಲ್ಪಿಸಲಾಗಿದೆ. ವಿಶೇಷ ಕಾರ್ಯಕ್ರಮಗಳು, ಪಾರ್ಟಿಗಳಿಗೆ ಇಲ್ಲಿ ಕ್ಯಾಟರಿಂಗ್ ಸರ್ವೀಸ್ ಕೂಡ ಇದೆ. ಬೆಂಗಳೂರಿನ ಯಶಸ್ಸಿನ ನಂತ್ರ ಕೊಡಿಯಾಲದ ಸವಿ ಈಗ ಇಂಗ್ಲೆಂಡ್ ಹಾಗೂ ಕೆನಡಾದಲ್ಲೂ ಹಬ್ಬಿದೆ. ಇನ್ನೇನು ಯೋಚನೆ, ಕುಡ್ಲ ಶೈಲಿಯನ್ನ ನೆನಪಿಸಿಕೊಂಡು ಬಾಯಿಯಲ್ಲಿ ನೀರು ಸುರಿಸುವವರು ಒಮ್ಮೆ ಕೊಡಿಯಾಲಕ್ಕೆ ಭೇಟಿ ಕೊಟ್ರೆ ನಿಮ್ಮಿಷ್ಟದ ತಿಂಡಿಗಳನ್ನ ತಿಂದು ತೃಪ್ತರಾಗಬಹುದು.

Related Stories