ಉದ್ಯಮ ಲೋಕದಲ್ಲಿ ಯಶಸ್ವಿ `ಸಫಾರಿ'-ವನ್ಯಜೀವಿ ಪ್ರಿಯರಿಗೆ ರಹದಾರಿ..

ಟೀಮ್​​ ವೈ.ಎಸ್​​.

0

ಅದೆಷ್ಟೋ ಜನರಿಗೆ ಕಾಡು ಮೇಡು ಅಲೆಯೋ ಹವ್ಯಾಸ ಇರುತ್ತೆ. ವನ್ಯಜೀವಿಗಳೆಂದ್ರೆ ಅವರಿಗೆ ಪಂಚಪ್ರಾಣ. ನಿಸರ್ಗದ ರಮಣೀಯತೆ ಜೊತೆಗೆ ದಟ್ಟಡವಿಯ ಗಾಢ ಮೌನ ಪ್ರೀಯವೆನಿಸುತ್ತೆ. ಗೊಂಡಾರಣ್ಯದಲ್ಲಿನ ಪ್ರಾಣಿ-ಪಕ್ಷಿಗಳ ಕಲರವವೂ ಇಷ್ಟವಾಗುತ್ತವೆ. ಎಂಬಿಎ ಪದವೀಧರರಾದ ತನ್ಮಯ್ ಕೇಶವ್ ಮತ್ತು ಮೌಲಿಕ್ ದೇಸಾಯಿ ಕೂಡ ವನ್ಯಜೀವಿ ಪ್ರಿಯರು. 2006ರಲ್ಲಿ ಭೇಟಿಯಾಗಿದ್ದ ತನ್ಮಯ್ ಹಾಗೂ ಮೌಲಿಕ್ ಇದುವರೆಗೆ ಭಾರತದಲ್ಲಿರುವ ಎಲ್ಲಾ ಅಭಯಾರಣ್ಯಗಳನ್ನು ಸುತ್ತಿ ಬಂದಿದ್ದಾರೆ.

ಬದುಕನ್ನೇ ಬದಲಾಯಿಸಿದ ಪ್ರವಾಸ..

ಪ್ರತಿ ಪ್ರವಾಸದಲ್ಲೂ ತನ್ಮಯ್ ಹಾಗೂ ಮೌಲಿಕ್‍ಗೆ ಬೇಸರ ತಂದ ವಿಚಾರ ಅಂದ್ರೆ ಪ್ರಯಾಣಿಕರ ಕೊರತೆ. ಖರ್ಚು ಹಾಗೂ ವನ್ಯಜೀವಿಗಳೊಂದಿಗಿನ ಒಡನಾಟದ ಬಗ್ಗೆ ಚರ್ಚೆ ಮಾಡಲು ಯಾರೂ ಸಿಗುತ್ತಿಲ್ಲ ಎಂಬ ಕೊರಗು ಇವರಿಗಿತ್ತು. ತಮ್ಮಂತಹ ಪ್ರಯಾಣಿಕರನ್ನು ಒಂದುಗೂಡಿಸಲು ವೇದಿಕೆ ಕಲ್ಪಿಸಬೇಕೆಂಬ ಆಲೋಚನೆ ಬರುತ್ತಿತ್ತು. ಅದು 2013ರ ಸಮಯ. ಕನ್ಹಾ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಮುಗಿಸಿ ತನ್ಮಯ್ ಹಾಗೂ ಮೌಲಿಕ್ ಮಾತಿಗೆ ಕುಳಿತಿದ್ರು. ವನ್ಯಜೀವಿ ಪ್ರವಾಸಿಗರಿಗೆಲ್ಲ ತಾವೇ ಒಂದು ವೇದಿಕೆ ಕಲ್ಪಿಸಬೇಕೆಂದು ಇಬ್ಬರೂ ನಿರ್ಧರಿಸಿಬಿಟ್ರು. ಹೀಗೆ ಮಾಡಿದಲ್ಲಿ ಸಮಾನ ಮನಸ್ಕ ಪ್ರವಾಸಿಗರನ್ನು ಭೇಟಿಯಾಗಬಹುದು ಎಂಬ ಆಲೋಚನೆಯೂ ಅವರಿಗೆ ಬಂದಿತ್ತು. `ದಿ ಸಫಾರಿಸ್ಟ್' ಹೆಸರಿನ ವೆಬ್‍ಸೈಟ್ ಒಂದನ್ನು ಆರಂಭಿಸಿದ್ರು. ನಮ್ಮ ನಿಮ್ಮೊಳಗಿರುವ ಪ್ರಕೃತಿ ಹಾಗೂ ವನ್ಯಜೀವಿ ಪ್ರೇಮಿಗಳ ಪರ ದಿ ಸಫಾರಿಸ್ಟ್ ನಿಲ್ಲುತ್ತದೆ ಎನ್ನುತ್ತಾರೆ ತನ್ಮಯ್.

ಸಮುದಾಯ ಏನು ಮಾಡುತ್ತದೆ..?

ದಿ ಸಫಾರಿಸ್ಟ್ ಒಟ್ಟಿಗೆ ಸಂಚರಿಸುವ ವನ್ಯಜೀವಿ ಪ್ರೇಮಿಗಳ ಸಮುದಾಯ. ಅದರಲ್ಲೂ ಕೆಲ ಸವಾಲು ಹಾಗೂ ಸಮಸ್ಯೆಗಳಿವೆ.

1. ವನ್ಯಜೀವಿ ವೀಕ್ಷಣೆಯ ಹುಮ್ಮಸ್ಸಿನಲ್ಲಿರುವವರನ್ನು ಸಂಪರ್ಕಿಸಲು ಮತ್ತು ಒಟ್ಟಾಗಿ ಸಂಚರಿಸಲು ಒಂದು ವೇದಿಕೆಯಿಲ್ಲ : ವನ್ಯಜೀವಿ ಪ್ರಯಾಣದ ಉತ್ಸಾಹವಿರುವವರು ಅಪರೂಪ. ಜೊತೆಗೆ ಇದು ದುಬಾರಿಯೂ ಹೌದು. ವನ್ಯಜೀವಿ ಪ್ರೇಮಿಗಳನ್ನೆಲ್ಲ ಒಟ್ಟುಗೂಡಿಸಿದರೆ ವೆಚ್ಚವನ್ನು ಹಂಚಿಕೊಳ್ಳಬಹುದು. ಹಾಗಾಗಿ ದಿ ಸಫಾರಿಸ್ಟ್ ವೆಬ್‍ಸೈಟ್‍ನಲ್ಲಿ ಬಳಕೆದಾರರು ಹೊಸ ಪ್ರವಾಸವೊಂದನ್ನು ಆಯೋಜಿಸಬಹುದು. ಅಥವಾ ಮೊದಲೇ ನಿಗದಿಯಾಗಿರುವ ಪ್ರವಾಸಕ್ಕೂ ಹೋಗಬಹುದು. ಅವರಿಗಿಷ್ಟವಾದ ತಾಣಗಳ ಪಟ್ಟಿಯೊಂದನ್ನು ಮಾಡಿಟ್ರೆ, ಉಳಿದವರಿಗೂ ಆ ಜಾಗ ಇಷ್ಟವಾದಲ್ಲಿ ಎಲ್ಲರೂ ಜೊತೆಯಾಗಿ ಸಫಾರಿಗೆ ಹೋಗುವ ಅವಕಾಶವಿದೆ.

2. ವನ್ಯಜೀವಿ ಮತ್ತು ನಿಸರ್ಗದ ಬಗ್ಗೆ ಕೇಂದ್ರೀಕೃತವಾದ ಸಮುದಾಯವಿಲ್ಲ : ದಿ ಸಫಾರಿಸ್ಟ್​​ನಲ್ಲಿ ಫೋಟೋಗಳನ್ನು ಕೂಡ ಶೇರ್ ಮಾಡಬಹುದು. ಸಫಾರಿಯ ಅನುಭವವನ್ನು ಹಂಚಿಕೊಳ್ಳುವುದರ ಜೊತೆಗೆ ಬೇರೆ ಬೇರೆ ತಾಣಗಳ ಬಗ್ಗೆ ಮಾಹಿತಿ ಪಡೆಯಬಹುದು. ಇದಕ್ಕಾಗಿಯೇ ವೆಬ್‍ಸೈಟ್‍ನಲ್ಲಿ ಪ್ರತ್ಯೇಕ ವಿಭಾಗಗಳಿವೆ.

3. ಸಫಾರಿ ತಾಣಗಳು ಮತ್ತು ಬುಕ್ಕಿಂಗ್ ವಿಧಾನದ ಬಗ್ಗೆ ಮಾಹಿತಿ ಕೊರತೆ : ಭಾರತದಲ್ಲಿ 160 ರಾಷ್ಟ್ರೀಯ ಉದ್ಯಾನವನಗಳಿವೆ. 500ಕ್ಕೂ ಹೆಚ್ಚು ಪಕ್ಷಿಧಾಮ ಮತ್ತು ಅಭಯಾರಣ್ಯಗಳಿವೆ. ಟ್ರೆಕ್ಕಿಂಗ್‍ಗೆ ಮೀಸಲಾದ ತಾಣಗಳಿವೆ. ಇವುಗಳ ಬಗ್ಗೆ ವನ್ಯಜೀವಿ ಪ್ರಿಯರಿಗೆ ಸರಿಯಾದ ಮಾಹಿತಿಯೇ ಸಿಗ್ತಾ ಇರ್ಲಿಲ್ಲ. ಆದ್ರೆ ದಿ ಸಫಾರಿಸ್ಟ್​​ನಲ್ಲಿ ರೋಡ್ ಮ್ಯಾಪ್ ಸಹಿತ ಮಾಹಿತಿಯನ್ನು ಪ್ರಕಟಿಸಲಾಗ್ತಿದೆ. ಇದಕ್ಕಾಗಿ ಡೆಸ್ಟಿನೇಶನ್ ಡಿಸ್ಕವರಿ ಎಂಬ ವಿಭಾಗವೇ ಇದೆ.

`ದಿ ಸಫಾರಿಸ್ಟ್' ಮುಂದಿರುವ ಸವಾಲು..

ತನ್ಮಯ್ ಹಾಗೂ ಮೌಲಿಕ್ ಅವರ ಸಫಾರಿ ಯೋಜನೆಯ ಬಗ್ಗೆ ವಿಶ್ವಾಸವಿಟ್ಟ ಬಳಕೆದಾರರನ್ನು ಸಂಪಾದಿಸುವುದೇ ದೊಡ್ಡ ಸವಾಲಾಗಿತ್ತು. ಜೊತೆಗೆ ಇವರ ಯೋಜನೆಯನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಕೂಡ ಕಷ್ಟಕರವಾಗಿತ್ತು. ವಿಭಿನ್ನ ಆಚಾರ-ವಿಚಾರ ಹಾಗೂ ಆಸಕ್ತಿಯುಳ್ಳವರನ್ನು ಒಂದುಗೂಡಿಸುವುದು ನಿಜಕ್ಕೂ ಕಠಿಣ ಕೆಲಸ ಎನ್ನುತ್ತಾರೆ ತನ್ಮಯ್. ಇದನ್ನೆಲ್ಲ ಸಮರ್ಥವಾಗಿ ಎದುರಿಸಲು ತನ್ಮಯ್ ಹಾಗೂ ಮೌಲಿಕ್ ಫೇಸ್‍ಬುಕ್ ಪೇಜ್ ಒಂದನ್ನು ಆರಂಭಿಸಿದ್ರು. ಅಲ್ಲಿ ದಿ ಸಫಾರಿಸ್ಟ್ ಕಾರ್ಯಾಚರಣೆ ಬಗ್ಗೆ ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಟ್ಟಿದ್ರು.

ಭವಿಷ್ಯದ ಯೋಜನೆ..

ಸದ್ಯ ದಿ ಸಫಾರಿಸ್ಟ್ ವೆಬ್‍ಸೈಟ್‍ನಲ್ಲಿ 300 ಬಳಕೆದಾರರಿದ್ದಾರೆ. ಮೊದಲ ಒಂದು ತಿಂಗಳಲ್ಲೇ 40 ಟ್ರಿಪ್‍ಗಳನ್ನು ಆಯೋಜಿಸಿದ್ದು ಇವರ ಹೆಗ್ಗಳಿಕೆ. ಇದರಲ್ಲಿ 13 ಪ್ರವಾಸಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಇನ್ನಷ್ಟು ಹೊಸ ಹೊಸ ಸೌಲಭ್ಯಗಳನ್ನು ಕಲ್ಪಿಸುವುದು ತನ್ಮಯ್ ಹಾಗೂ ಮೌಲಿಕ್ ಮುಂದಿರುವ ಅತಿ ದೊಡ್ಡ ಯೋಜನೆ. ಅದು ಯಶಸ್ವಿಯಾದಲ್ಲಿ ಆದಾಯದ ಕೊರೆತೆ ಇರುವುದಿಲ್ಲ ಎಂಬ ವಿಶ್ವಾಸ ಅವರದ್ದು. ಪ್ರವಾಸೋದ್ಯಮ, ವನ್ಯಜೀವಿ ಛಾಯಾಗ್ರಾಹಕರು, ಜಂಗಲ್ ಲಾಡ್ಜ್​​ಗಳು ಹಾಗೂ ಟ್ರಾವೆಲ್ಸ್​​​ಗೂ ಪ್ರಯೋಜನವಾಗುವಂತಹ ಕಾರ್ಯಾಚರಣೆಗೆ ದಿ ಸಫಾರಿಸ್ಟ್ ಸಜ್ಜಾಗಿದೆ.

ಮಾರುಕಟ್ಟೆ ಮತ್ತು ಬೆಳವಣಿಗೆ...

ಭಾರತದಲ್ಲಿ ರಜಾ ಕಾಲದಲ್ಲಿ ಪ್ರವಾಸ ಹೋಗುವವರ ಸಂಖ್ಯೆಯೇ ಹೆಚ್ಚು. ಪ್ರವಾಸ ಪ್ರಿಯರ ಸಂಖ್ಯೆ ಪ್ರತಿವರ್ಷ ಶೇಕಡಾ 11ರಷ್ಟು ಅಧಿಕವಾಗ್ತಿದೆ. ಚೀನಾ ಹೊರತುಪಡಿಸಿದ್ರೆ ಪ್ರವಾಸೋದ್ಯಮ ಅತ್ಯಂತ ವೇಗವಾಗಿ ಬೆಳೆಯುತ್ತಿರುವುದು ಭಾರತದಲ್ಲೇ. ಭಾರತದಲ್ಲಿ ಅತ್ಯಂತ ಜನಪ್ರಿಯರವಾಗಿರುವ 20 ರಾಷ್ಟ್ರೀಯ ಉದ್ಯಾನವನಗಳಿಗೆ ಪ್ರತಿ ವರ್ಷ ತಲಾ 1,50,000 ಪ್ರವಾಸಿಗರು ಬರ್ತಾರೆ. ವನ್ಯಜೀವಿ ಪ್ರವಾಸವೇ ಪ್ರಮುಖ ಆದಾಯದ ಮೂಲವೂ ಹೌದು.

Related Stories