3 ಮಿಲಿಯನ್ ಡಾಲರ್ ಬಂಡವಾಳ ಗಿಟ್ಟಿಸಿಕೊಂಡ ‘Teewe’

ಟೀಮ್​ ವೈ.ಎಸ್​. ಕನ್ನಡ

0

ಬೆಂಗಳೂರು ಮೂಲದ ಗ್ರಾಹಕ ತಂತ್ರಜ್ಞಾನ ಸ್ಟಾರ್ಟ್ಅಪ್ CREO 3 ಮಿಲಿಯನ್ ಡಾಲರ್ ಬಂಡವಾಳವನ್ನು ಗಿಟ್ಟಿಸಿಕೊಂಡಿದೆ. ಇಂಡಿಯಾ ಸೀಕ್ವೊಯಾ, ಬೀನೆಕ್ಸ್ಟ್ ವೆಂಚರ್ಸ್ ಹಾಗೂ India Quotient ಸಂಸ್ಥೆಗಳು CREO ನಲ್ಲಿ ಹಣ ತೊಡಗಿಸಿವೆ. ಮ್ಯಾಂಗೋ ಮ್ಯಾನ್ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಎಂದೇ ಕರೆಯಲ್ಪಡುವ CREOದ ಮೊದಲ ಉತ್ಪನ್ನ Teewe. ಇದೊಂದು HDMI ಮೀಡಿಯಾ ಸ್ಟ್ರೀಮಿಂಗ್ ಡಿವೈಸ್. 2014ರಲ್ಲಿ Teewe ಡಿವೈಸ್ ಅನ್ನು ಬಿಡುಗಡೆ ಮಾಡಲಾಗಿದೆ. 2015ರ ಮೇನಲ್ಲಿ Teewe2 ಡಿವೈಸ್ ಅನ್ನು ಕೂಡ ಲಾಂಚ್ ಮಾಡಲಾಯ್ತು. ಇದು ಭಾರತದಾದ್ಯಂತ 50,000ಕ್ಕೂ ಹೆಚ್ಚು ಮನೆಗಳಲ್ಲಿ ಗುರುತಿಸಿಕೊಂಡಿದೆ. ವಿಶೇಷ ಅಂದ್ರೆ CREO 2013ರ ಟೆಕ್​ಸ್ಪಾರ್ಕ್​ನಲ್ಲಿ 30 ಸ್ಟಾರ್ಟ್ಅಪ್​​ಗಳ ಪೈಕಿ ಒಂದಾಗಿತ್ತು.

ಮ್ಯಾಂಗೋ ಮ್ಯಾನ್ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಅನ್ನು ಸಾಯಿ ಶ್ರೀನಿವಾಸ್ ಕಿರಣ್ ಜಿ ಮತ್ತು ಶುಭಂ ಮಲ್ಹೋತ್ರಾ ಜೊತೆಯಾಗಿ 2013ರಲ್ಲಿ ಆರಂಭಿಸಿದ್ದರು. ಈ ಕಂಪನಿ 2015ರ ಮಾರ್ಚ್​ನಲ್ಲಿ ಸೀಕ್ವೊಯಾ ಕ್ಯಾಪಿಟಲ್ ಮತ್ತು India Quotient ನಿಂದ 11 ಕೋಟಿ ರೂಪಾಯಿ ನಿಧಿಯನ್ನು ಪಡೆದಿದೆ. ಇದಕ್ಕೂ ಮೊದಲು ಕೆವಿನ್ ಭಾರ್ತಿ ಮಿತ್ತಲ್, ಭಾರ್ತಿ ಸಾಫ್ಟ್ ಬ್ಯಾಂಕ್​​ನ ಪವನ್ ಒಂಗೊಲ್, ಅರುಣ್ ಸೇಠ್ ಹಾಗೂ ಪಲಾಶ್ ವೆಂಚರ್ಸ್​ನಿಂದ ಏಂಜೆಲ್ ಹೂಡಿಕೆಗೂ ಸಾಕ್ಷಿಯಾಗಿದೆ.

CREO ಕಂಪನಿಯ ಆರಂಭದ ಬಗ್ಗೆ ಮಾತನಾಡಿದ ಸಿಇಓ ಸಾಯಿ ಶ್ರೀನಿವಾಸ್ ಕಿರಣ್ ಜಿ, ‘ಪ್ರಸ್ತುತ ಮಾರುಕಟ್ಟೆಗೆ ಅನುಗುಣವಾಗಿ ಸ್ಮಾರ್ಟ್​ಫೋನ್​​ಗೆ ಬೇಕಾದ ಆ್ಯಂಡ್ರಾಯ್ಡ್ ಆಧಾರಿತ ಆಪರೇಟಿಂಗ್ ಸಿಸ್ಟಮ್ ಅನ್ನು ನಿರ್ಮಿಸುವ ಕಲ್ಪನೆ ಹುಟ್ಟಿಕೊಂಡಿತ್ತು. ಹಾರ್ಡ್​ವೇರ್ ಕ್ಷೇತ್ರ ಅತ್ಯಂತ ವೇಗವಾಗಿ ಬೆಳೆಯುತ್ತಿದೆ, ಆದ್ರೆ ಸಾಫ್ಟ್​ವೇರ್ ವಿಭಾಗದಲ್ಲಿ ಅಷ್ಟೇನೂ ಭಿನ್ನತೆಯಿಲ್ಲ. ಈ ಅಂತರವನ್ನು ಕಡಿಮೆ ಮಾಡಲು ಸೇತುವೆಯಂತೆ ಕಾರ್ಯನಿರ್ವಹಿಸುವುದು ನಮ್ಮ ಉದ್ದೇಶವಾಗಿತ್ತು'' ಎನ್ನುತ್ತಾರೆ. ತಮ್ಮ ಆ್ಯಂಡ್ರಾಯ್ಡ್ ಆಧಾರಿತ ಆಪರೇಟಿಂಗ್ ಸಿಸ್ಟಮ್ ಸ್ವಾಮ್ಯದ ಸಾಫ್ಟ್​ವೇರ್ ಅನುಭವ ನಿರ್ಮಿಸುವ ನಿಟ್ಟಿನಲ್ಲಿ ಹೆಚ್ಚಿನ ಹೂಡಿಕೆ ಮಾಡಲು CREO ಮುಂದಾಗಿದೆ. ಈ ವರ್ಷಾಂತ್ಯದೊಳಗೆ CREO ಸ್ಮಾರ್ಟ್​ಫೋನ್ ಒಂದನ್ನು ಕೂಡ ಲಾಂಚ್ ಮಾಡಲಿದೆ. ಭವಿಷ್ಯದ ಯೋಜನೆಗಳ ಬಗ್ಗೆ ಕೂಡ ಸಾಯಿ ಶ್ರೀನಿವಾಸ್ ಯುವರ್​ಸ್ಟೋರಿ ಜೊತೆ ಮಾತನಾಡಿದ್ದಾರೆ. ‘ಪ್ರತಿ ತಿಂಗಳು ಗ್ರಾಹಕರಿಗೆ ಹೊಸ ಅನುಭವ ನೀಡಬಲ್ಲ ಸ್ಮಾರ್ಟ್​ಫೋನ್ ಮತ್ತು ಆಪರೇಟಿಂಗ್ ಸಿಸ್ಟಮ್ ಅನ್ನು ತಯಾರಿಸುವಲ್ಲಿ ನಮ್ಮ ತಂಡ ನಿರತವಾಗಿದೆ. ಕೇವಲ ಭಾರತ ಮಾತ್ರವಲ್ಲ ಜಗತ್ತಿನಾದ್ಯಂತ, ಉಳಿದ OS ಗಳಿಗೆ OEM ಲೈಸನ್ಸ್ ಪಡೆಯಲು ಪ್ರಯತ್ನಿಸುತ್ತಿದ್ದೇವೆ'' ಅಂತಾ ತಿಳಿಸಿದ್ದಾರೆ.

ವಲಯ ಅವಲೋಕನ...

ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿ ಕೂಡ ಸ್ಮಾರ್ಟ್​ಫೋನ್ ಮಾರುಕಟ್ಟೆ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯುವ ಏಕೈಕ ಉಪಾಯ ಅಂದ್ರೆ ಸಾಫ್ಟ್​​ವೇರ್ ಮತ್ತು ಹಾರ್ಡ್​ವೇರ್ ಎರಡರ ಮೇಲೂ ಹಿಡಿತ ಸಾಧಿಸುವುದು ಎಂಬುದನ್ನು ಬಹುತೇಕ ಕಂಪನಿಗಳು ಅರ್ಥಮಾಡಿಕೊಂಡಿವೆ. ಆರಂಭದಿಂದಲೂ ಆ್ಯಪಲ್ ಸಂಸ್ಥೆ ಇದೇ ತತ್ವವನ್ನು ಪಾಲಿಸುತ್ತ ಬಂದಿದೆ. 2012ರಲ್ಲಿ ಸಾರ್ವಕಾಲಿಕ ಶ್ರೇಷ್ಠ ಕಂಪನಿ ಎಂಬ ಹೆಗ್ಗಳಿಕೆಗೂ ಆ್ಯಪಲ್ ಪಾತ್ರವಾಗಿದೆ.

ಆರಂಭದಲ್ಲಿ ಬಹುತೇಕ ಕಂಪನಿಗಳು ಈ ಮುಚ್ಚಿದ ವ್ಯವಸ್ಥೆಯ ವಿರುದ್ಧವಾಗಿದ್ದವು. ಆದ್ರೆ ಆ್ಯಪಲ್ ಸಂಸ್ಥೆಯ ಯಶಸ್ಸಿನಿಂದಾಗಿ ಎಲ್ಲರೂ ಈ ತಂತ್ರದ ಬಗ್ಗೆ ಮತ್ತೊಮ್ಮೆ ಯೋಚನೆ ಮಾಡುವಂತಾಯ್ತು. ತನ್ನ ಸ್ವಂತ ಆಪರೇಟಿಂಗ್ ಸಿಸ್ಟಮ್ `ಟಿಝೆನ್ ಓಎಸ್' ಮೂಲಕ ಸ್ಯಾಮ್ಸಂಗ್ ಈ ಕ್ಷೇತ್ರವನ್ನು ಪ್ರವೇಶಿಸಿದೆ. ಗೂಗಲ್ ತನ್ನ ಓಎಸ್-ಆ್ಯಂಡ್ರಾಯ್ಡ್ ಪರವಾನಿಗೆಯನ್ನು ಉತ್ಪಾದಕರಿಗೆ ನೀಡಿದೆ, ಆದ್ರೆ ತನ್ನದೇ ಸ್ವಂತ ನೆಕ್ಸಸ್ ಡಿವೈಸ್ ಅನ್ನು ಹೊಂದಿದೆ. ನೆಕ್ಸಸ್ ಡಿವೈಸ್ ಸಾಫ್ಟ್​​ವೇರ್ ಅಪ್ಡೇಟ್​ಗಳನ್ನು ಮೊದಲು ಪಡೆದುಕೊಳ್ಳುತ್ತದೆ.

ಕಸ್ಟಮ್ ಆ್ಯಂಡ್ರಾಯ್ಡ್ ಆಪರೇಟಿಂಗ್ ವ್ಯವಸ್ಥೆಯ ಮೇಲೆ ಹತೋಟಿ ಹೊಂದಿರುವ ಉಳಿದ ಕಂಪನಿಗಳೆಂದರೆ ವನ್​ಪ್ಲಸ್ ಮತ್ತು ಕ್ಸಿಯೋಮಿ. ವನ್​ಪ್ಲಸ್ ತನ್ನ ಡಿವೈಸ್​ಗಾಗಿ ಸೈನೋಜೆನ್ ಮತ್ತು ಆಕ್ಸಿಜನ್ ಓಎಸ್​ಗಳನ್ನು ಬಳಸಿಕೊಂಡಿದೆ. ಕ್ಸಿಯೋಮಿ ಆ್ಯಂಡ್ರಾಯ್ಡ್​​ನ ಟಾಪ್​​ನಲ್ಲಿ MIUI ಅನ್ನು ಸೇರಿಸುತ್ತದೆ.

‘ಯುವರ್​ಸ್ಟೋರಿ' ಮಾಹಿತಿ...

ಈಗ ಎಲ್ಲೆಲ್ಲೂ IoT ಕ್ರಾಂತಿ ಶುರುವಾಗಿದೆ. ಸಾಫ್ಟ್​ವೇರ್ ಮತ್ತು ಹಾರ್ಡ್​ವೇರ್ ಎರಡರ ಮೇಲೂ ನಿಯಂತ್ರಣ ಸಾಧಿಸುವ ಮೂಲಕ ಕಂಪನಿಗಳು ಯಶಸ್ಸಿನತ್ತ ಮುನ್ನಡೆದಿವೆ. ಅಷ್ಟೇ ಅಲ್ಲ ಗ್ರಾಹಕರಿಗೆ ಅತ್ಯುತ್ತಮ ಹಾಗೂ ಅನನ್ಯ ಅನುಭವಗಳನ್ನು ಒದಗಿಸುತ್ತಿವೆ. ಈ ವಲಯದಲ್ಲಿ ಭಾರತೀಯ ಕಂಪನಿಗಳ ಪ್ರಗತಿ ನಿಜಕ್ಕೂ ಖುಷಿಯ ವಿಚಾರ. ಈ ಹಂತದಲ್ಲಿ CREOದ ಯೋಜನೆಗಳ ಬಗ್ಗೆ ಅಷ್ಟೇನೂ ಮಾಹಿತಿಯಿಲ್ಲ ಆದ್ರೆ ಅಲ್ಲಿರುವ ಅನುಭವಿಗಳ ತಂಡ Teewe ಮೂಲಕ ಯಶಸ್ಸನ್ನು ತಂದುಕೊಟ್ಟಿದೆ. ಇಂಡಿಯಾ ಸೀಕ್ವೊಯಾ, ಬೀನೆಕ್ಸ್ಟ್ ಮತ್ತು India Quotient ನಂತಹ ಘಟಾನುಘಟಿ ಹೂಡಿಕೆದಾರರು CREOನತ್ತ ತಿರುಗಿ ನೋಡುವಂತಾಗಿದೆ. CREO ಬಿಡುಗಡೆ ಮಾಡುತ್ತಿರುವ ಸ್ಮಾರ್ಟ್​ಫೋನ್ ಹಾಗೂ ಓಎಸ್​​ಗೆ ಮಾರುಕಟ್ಟೆಯಲ್ಲಿ ಯಾವ ರೀತಿ ಪ್ರತಿಕ್ರಿಯೆ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕು.

ಲೇಖಕರು: ಹರ್ಷಿತ್ ಮಲ್ಯ
ಅನುವಾದಕರು: ಭಾರತಿ ಭಟ್

Related Stories