ಒಳವಸ್ತ್ರಗಳ ವಿನ್ಯಾಸದಲ್ಲಿ ಹೊಸ ಹೆಜ್ಜೆ: ಕ್ಲೋವಿಯಾ ಸಂಸ್ಥೆಯ ಸಂಸ್ಥಾಪಕಿ ನೇಹಾಕಾಂತ್‌ರ ಸಾಧನೆ

ಟೀಮ್​​ ವೈ.ಎಸ್​​. ಕನ್ನಡ

0

ಒಳವಸ್ತ್ರಗಳು ತೊಡಲು ಆರಾಮದಾಯಕವಾಗಿರಬೇಕು. ಆ ಆರಾಮದಾಯಕತೆ ಹೇಗಿರಬೇಕು ಎಂದರೆ ಅದನ್ನು ಧರಿಸಿಯೇ ಅನುಭವಿಸಬೇಕು. ಸರಿಯಾದ ಫಿಟ್ಟಿಂಗ್ ಇರುವ ಒಳವಸ್ತ್ರಗಳನ್ನು ಧರಿಸುವುದರಿಂದ ನಿಮ್ಮ ಆತ್ಮವಿಶ್ವಾಸ ಮತ್ತು ಮೂಡ್ ಎರಡೂ ಉನ್ನತ ಮಟ್ಟದಲ್ಲಿರುತ್ತದೆ. ಇದು ನೇಹಾ ಕಾಂತ್ ಅವರ ಸರಳವಾದ ಬಿಸಿನೆಸ್ ಮಂತ್ರ.

ಒಳ ವಸ್ತ್ರಗಳನ್ನು ಹೊಲಿಯುವ ಸಂಸ್ಥೆಯಾಗಿ ನೇಹಾ ಕ್ಲೋವಿಯಾ ಎಂಬ ಸಂಸ್ಥೆಯನ್ನು ರೂಪಿಸಿದ್ದಾರೆ. ನೇಹಾ ಅವರು ವಿದೇಶಕ್ಕೆ ಹೋದಾಗ ಅವರಿಗೆ ಭಾರತದ ಮಹಿಳೆಯರು ಉಡುಪಿನ ವಿಚಾರದಲ್ಲಿ ಇನ್ನೂ ಸಾಂಪ್ರದಾಯಿಕ ರೀತಿಯನ್ನೇ ಅನುಸರಿಸುತ್ತಿದ್ದಾರೆ. ಇದರಲ್ಲಿ ಬದಲಾವಣೆಯಾಗಬೇಕು ಎಂಬ ಅಂಶವನ್ನು ಕಂಡುಕೊಂಡರು. ಈ ಆಲೋಚನಾ ಸರಣಿಯನ್ನನುಸರಿಸಿ ಅವರು ಉತ್ತಮ ಗುಣಮಟ್ಟದ, ಈಗಿನ ಫ್ಯಾಶನ್‌ಗೆ ಹೊಂದುವ ಮತ್ತು ಕೈಗೆಟುಕುವ ದರದಲ್ಲಿ ಭಾರತೀಯ ಮಹಿಳೆಯರಿಗೆ ಉಡುಪಿನ ವೈವಿಧ್ಯ ಒದಗಿಸುವ ಒಳಉಡುಪುಗಳನ್ನು ಹೊಲಿಯುವ ಸಂಸ್ಥೆಯಾಗಿ ಕ್ಲೋವಿಯಾ ಸಂಸ್ಥೆಯನ್ನು ರೂಪಿಸಿದ್ದಾರೆ.

ಮಾಮೂಲಿ ಬಟ್ಟೆ ಅಂಗಡಿಗಳಿಗೆ ಹೋಗಿ ಒಳವಸ್ತ್ರಗಳನ್ನು ಖರೀದಿಸುವ ವ್ಯವಸ್ಥೆಗೆ ಮಹಿಳೆಯರು ಹೊಂದಿಕೊಂಡಿದ್ದಾರೆ. ಇಲ್ಲಿನ ಮಾರಾಟಗಾರರು ಮಹಿಳೆಯರಿಗೆ ಸಹಾಯ ಮಾಡುವ ಬದಲು ಮಹಿಳೆಯರ ಆರಾಮದಾಯಕತೆಯ ಬಗ್ಗೆ ತಾವೇ ತೀರ್ಮಾನ ತೆಗೆದುಕೊಂಡು ತೀರ್ಪು ನೀಡಿಬಿಡುತ್ತಾರೆ. ಇದರಿಂದ ಮಹಿಳೆಯರಿಗೆ ಮುಜುಗರವುಂಟಾಗುತ್ತದೆ ಎನ್ನುವ ನೇಹಾ ಅವರು ಒಳಉಡುಪುಗಳ ವಿನ್ಯಾಸ ಮತ್ತು ಶೈಲಿಯಲ್ಲಿ ಕೊರತೆಯಿರುವುದನ್ನು ಕಂಡುಕೊಂಡಿದ್ದಾರೆ.

ಉದ್ಯಮದ ಆರಂಭ

ದೆಹಲಿಯಲ್ಲಿ ಜನಿಸಿದ ನೇಹಾ ಬೆಳೆದಿದ್ದು ಹರಿದ್ವಾರದಲ್ಲಿ. ನೇಹಾರ ತಂದೆ ಬಿಹೆಚ್‌ಇಎಲ್‌ನ ಉದ್ಯೋಗಿಯಾಗಿದ್ದರು. ತಮ್ಮಂತೆಯೇ ತಮ್ಮ ಮಕ್ಕಳೂ ಆಗಬೇಕೆಂಬ ಇಚ್ಛೆ ಹೊಂದಿದ್ದ ಇಂಜಿನಿಯರ್ಗಳ ಮಧ್ಯೆಯೇ ನೇಹಾ ಬೆಳೆದರು. ಯಶಸ್ಸಿಗೆ ಕಠಿಣ ಪರಿಶ್ರಮ ತುಂಬಾ ಅಗತ್ಯ. ಇದರಿಂದ ಆರಂಭದಿಂದಲೇ ಸ್ಪರ್ಧಾತ್ಮಕವಾಗಿ ಮತ್ತು ಮಹತ್ವಾಕಾಂಕ್ಷಿಯಾಗಿ ಬೆಳೆಯಲು ಸಾಧ್ಯವಾಯಿತು ಎನ್ನುತ್ತಾರೆ ನೇಹಾ.

ಶಾಲಾದಿನಗಳಲ್ಲಿ ವಿಜ್ಞಾನ ವಿಷಯವನ್ನು ಇಷ್ಟಪಡುತ್ತಿದ್ದ ನೇಹಾ ಇಂಜನಿಯರಿಂಗ್ ಓದಲು ಇಚ್ಛಿಸಲಿಲ್ಲ. ನಂತರ ದೆಹಲಿ ವಿವಿಯ ಮಿರಾಂಡಾ ಹೌಸ್‌ನಲ್ಲಿ ಪದವಿ ಮತ್ತು ಎಂಬಿಎ ವಿದ್ಯಾಭ್ಯಾಸ ಮುಗಿಸಿದರು.

ಕಾರ್ಪೋರೇಟ್ ಇಂಡಿಯಾದಲ್ಲಿ ದಶಕಗಳ ಅನುಭವ ಪಡೆದ ಬಳಿಕ ಅವರು ಒಳಉಡುಪುಗಳ ಮಾರುಕಟ್ಟೆಯನ್ನು ಪ್ರವೇಶಿಸಲು ಇಚ್ಛಿಸಿದರು ಮತ್ತು ತಮ್ಮ ಪತಿಯೊಂದಿಗೆ ಸೇರಿ ಕ್ಲೋವಿಯಾ ಸಂಸ್ಥೆಯನ್ನು ಆರಂಭಿಸಿದರು.

ಕ್ಲೋವಿಯಾ

ತಮ್ಮದೇ ಆದ ವಿನ್ಯಾಸಕಾರರ ತಂಡ ಮತ್ತು ಹೊರಗುತ್ತಿಗೆದಾರರ ತಂಡ ಹೊಂದಿರುವ ಕ್ಲೋವಿಯಾ ಸಂಸ್ಥೆ ಆಮದು ಮಾಡಿಕೊಂಡ ಫ್ಯಾಬ್ರಿಕ್‌ಗಳು, ಲೇಸ್‌ಗಳು ಮತ್ತು ಸ್ಯಾಟಿನ್‌ ವಸ್ತ್ರಗಳ ಮೂಲಕ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಅವರ ಉತ್ಪಾದನೆಯನ್ನು ಹೊರಗುತ್ತಿಗೆ ನೀಡಲಾಗುತ್ತದೆ. ಆದರೆ ಸಂಸ್ಥೆ ಮೇಕ್ ಇನ್ ಇಂಡಿಯಾ ಕ್ಯಾಂಪೇನ್‌ನಲ್ಲಿ ನಂಬಿಕೆ ಇಟ್ಟಿದೆ. ಹೀಗಾಗಿ ಇವರ ಎಲ್ಲಾ ಉತ್ಪನ್ನಗಳು ದೇಶದೊಳಗೆ ಉತ್ಪಾದನೆಯಾಗುತ್ತದೆ. ಕ್ಲೋವಿಯಾದಲ್ಲಿ ಉತ್ಪಾದಿಸಲಾಗುವ ಒಳಉಡುಪುಗಳು ಕಟ್ಸ್, ಫಿಟ್ಟಿಂಗ್‌ಗಳು, ಆಕಾರ ಮತ್ತು ವಿನ್ಯಾಸಗಳ ವಿಚಾರದಲ್ಲಿ ಸಮರ್ಪಕವಾಗಿರುತ್ತದೆ ಎಂಬುದರ ಬಗ್ಗೆ ನೇಹಾ ಭರವಸೆ ನೀಡುತ್ತಾರೆ.

ತಮ್ಮ ಸ್ಥಾನವನ್ನು ಕಾಯ್ದುಕೊಳ್ಳುವತ್ತ...

ಕ್ಲೋವಿಯಾದಲ್ಲಿ ಗ್ರಾಹಕರಿಗೆ ವಿಭಿನ್ನ ವಿನ್ಯಾಸದ ಒಳಉಡುಪುಗಳು ಲಭ್ಯವಿರುತ್ತದೆ. ಪ್ರತಿ ತಿಂಗಳಿಗೆ 200ಕ್ಕೂ ಹೆಚ್ಚು ವಿನ್ಯಾಸಗಳನ್ನು ನೀಡುತ್ತಾರೆ. 30 ದಿನದಲ್ಲಿ ಶೇ. 75ರಷ್ಟು ಉಡುಪುಗಳ ಮಾರಾಟವಾಗುತ್ತವೆ. ಯಾವುದೇ ಸಂಸ್ಥೆ ಒಂದು ವರ್ಷಕ್ಕೆ ತನ್ನ ಬ್ರಾಂಡ್‌ನಡಿ 100ಕ್ಕೂ ಹೆಚ್ಚು ಶೈಲಿಯಲ್ಲಿ ವಿನ್ಯಾಸಗೊಳಿಸಿ ಬಿಡುಗಡೆ ಮಾಡುವುದು ಸಾಧ್ಯವಿಲ್ಲ. ಸ್ಪರ್ಧೆಯಲ್ಲಿ ಉಳಿಯಬೇಕಾದರೆ ಕ್ಲೋವಿಯಾ ಸಂಸ್ಥೆ 100ಕ್ಕೂ ಹೆಚ್ಚು ವಿನ್ಯಾಸದ ಒಳ ಉಡುಪುಗಳನ್ನು ಪ್ರತಿ ತಿಂಗಳೂ ಬಿಡುಗಡೆ ಮಾಡಲೇಬೇಕು. ಹೀಗಾಗಿ ಉತ್ಪಾದನಾ ವಿಭಾಗದ ಪಾಲುದಾರರನ್ನು ಮನವೊಲಿಸಬೇಕಾಗುತ್ತದೆ. ಅವರು ವಿಭಿನ್ನ ರೀತಿಯ ಉತ್ಪಾದನಾ ಯೋಜನೆಗಳನ್ನು ಹಾಕಿಕೊಳ್ಳಲು ಅನುವಾಗುವಂತೆ ಮಾಡಬೇಕಾಗುತ್ತದೆ ಎನ್ನುತ್ತಾರೆ ನೇಹಾ.

ಒಳಉಡುಪುಗಳ ಮಾರುಕಟ್ಟೆಯಲ್ಲಿ ಮೈಲಿಗಲ್ಲು ಸ್ಥಾಪಿಸಲು ತಂತ್ರಜ್ಞಾನವೂ ಕಾರಣವಾಗಿದೆ. ತಂತ್ರಜ್ಞಾನದಿಂದ ಮಾರಾಟದ ಟ್ರೆಂಡ್‌ಗಳು, ಹೊಸ ವಿನ್ಯಾಸಗಳು ಯಾವುದಿದೆ ಎಂಬುದನ್ನು ವೆಬ್‌ಸೈಟ್ ಮುಖಾಂತರ ತಿಳಿದುಕೊಳ್ಳಲು ಸಾಧ್ಯವಿದೆ. ಇದರಿಂದ ಕಾರ್ಯವಿಧಾನದ ಖರ್ಚು ಉಳಿಯುತ್ತದೆ. ಕ್ಲೋವಿಯಾದಲ್ಲಿ ಅತ್ಯುತ್ತಮ ತಂತ್ರಜ್ಞರ ತಂಡವಿದೆ. ಇದರ ಮುಖ್ಯಸ್ಥರು ಆದಿತ್ಯ. ಸಂಸ್ಥೆಯ ವಿವಿಧ ವಿಭಾಗಗಳಲ್ಲಿ 100ಕ್ಕೂ ಹೆಚ್ಚು ಜನ ಕಾರ್ಯನಿರ್ವಹಿಸುತ್ತಿದ್ದಾರೆ.

ಸವಾಲುಗಳು

ಮಾಡು ಅಥವಾ ಮಾಡಲೇಬೇಡ. ಪ್ರಯತ್ನ ಎಂಬುದಕ್ಕೆ ಅರ್ಥವೇ ಇಲ್ಲ ಎಂಬ ಜೇಡಿ ಮಾಸ್ಟರ್ ಅವರ ಮಾತಿನಂತೆ ನೇಹಾ ತಮ್ಮ ಗುರಿಯನ್ನು ರೂಪಿಸಿಕೊಂಡಿದ್ದಾರೆ. ತಮ್ಮ ದಿನನಿತ್ಯದ ಜೀವನದಲ್ಲಿ ಉದ್ಯಮದ ಸವಾಲುಗಳನ್ನು ಎದುರಿಸಲು ನೇಹಾರಿಗೆ ಅತ್ಯುತ್ತಮ ತಂಡದ ಬೆಂಬಲವಿದೆ. ಹೀಗಾಗಿ ಹೂಡಿಕೆದಾರರು ಮತ್ತು ಗ್ರಾಹಕರನ್ನು ಹುಡುಕುವುದು, ಉತ್ಪಾದನಾ ಘಟಕ ಸ್ಥಾಪನೆ ಮುಂತಾದ ಸಮಸ್ಯೆಗಳನ್ನು ಎದುರಿಸುವುದು ನೇಹಾರಿಗೆ ಬಹಳಾ ಸುಲಭವಾಗಿದೆ.

ಒಬ್ಬ ತಾಯಿ ಹಾಗೂ ಉದ್ಯಮಿಯಾಗಿ ಮುಂದುವರಿಯಲು ಸಾಕಷ್ಟು ದೀರ್ಘಕಾಲಿಕ ಯೋಜನೆ ಮತ್ತು ಅದರ ನಿರ್ವಹಣೆಯ ಅಗತ್ಯವಿದೆ ಎಂಬುದನ್ನು ನೇಹಾ ಮನಗಂಡಿದ್ದಾರೆ. ಬಹಳಷ್ಟು ಪ್ರಯತ್ನ ಮತ್ತು ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸುವುದರಿಂದ ಮಾತ್ರ ಕುಟುಂಬ ಮತ್ತು ಉದ್ಯಮ ಎರಡನ್ನೂ ನಿಭಾಯಿಸಬಹುದು ಎಂಬುದು ನೇಹಾರ ಅಭಿಪ್ರಾಯ.

ಭವಿಷ್ಯದ ಯೋಜನೆಗಳು

ಕ್ಲೋವಿಯಾದ ಬೆಳವಣಿಗೆ ಮತ್ತು ವಿಕಾಸ ನೇಹಾರಿಗೆ ತಮ್ಮ ನಿಲುವಿನ ಬಗ್ಗೆ ಸಾಕಷ್ಟು ಆತ್ಮವಿಶ್ವಾಸ, ಸ್ಪೂರ್ತಿ ಒದಗಿಸಿದೆ. ಒಂದು ಅಂತರಾಷ್ಟ್ರೀಯ ಬ್ರಾಂಡ್ ಜೊತೆ ಸೇರಿ ವಿಶೇಷ ಹಾಗೂ ಸೀಮಿತ ಆವೃತ್ತಿಯ ಒಳಉಡುಪುಗಳ ಸಂಗ್ರಹವನ್ನು ಬಿಡುಗಡೆ ಮಾಡುವುದು ನೇಹಾರ ಮುಂದಿನ ಗುರಿ. ಸಾಗರೋತ್ತರ ಮಾರುಕಟ್ಟೆಯಲ್ಲೂ ತಮ್ಮ ಉತ್ಪನ್ನವನ್ನು ಬಿಡುಗಡೆ ಮಾಡುವುದು ಇವರ ಮುಂದಿನ ಹೆಜ್ಜೆ. ಶೀಘ್ರದಲ್ಲೇ ಕ್ಲೋವಿಯಾ ಸಂಸ್ಥೆಯ ಉತ್ಪನ್ನಗಳು ಆಫ್‌ಲೈನ್‌ ಸ್ಟೋರ್‌ಗಳಲ್ಲೂ ಲಭ್ಯವಿರುವಂತೆ ಯೋಜನೆ ರೂಪಿಸಲಾಗುತ್ತಿದೆ.

ಲೇಖಕರು: ತಾನ್ವಿ ದುಬೇ
ಅನುವಾದಕರು: ವಿಶ್ವಾಸ್​​​​

Related Stories