ಹೊಸ ಉದ್ಯಮಕ್ಕೆ ನಾಂದಿ ಹಾಡಿತು ಆಫೀಸ್ ಗೆಳೆತನ....

ನಿನಾದ

0

ಆಫೀಸ್ ಅಂದ್ರೆ ಹಾಗೇನೇ. ಸದಾ ಒತ್ತಡದ ಕೆಲಸ. ಕೊಂಚ ಸಮಯ ಸಿಕ್ರೆ ಒಂಚೂರು ಹರಟೆ. ಅದರಲ್ಲೂ ಹೆಣ್ಮಕ್ಕಳು ಒಂದೆಡೆ ಸೇರಿದ್ರೆ ಕೇಳ್ಬೇಕಾ ಒಡವೆ,ಬಟ್ಟೆ ಮುಂತಾದ ವಿಚಾರಗಳ ಚರ್ಚೆ ನಡೆದೇ ನಡೆಯುತ್ತೆ. ಇದೇ ಹರಟೆ ಚರ್ಚೆಗಳು ಪರಸ್ಪರ ಸ್ನೇಹಕ್ಕೂ ನಾಂದಿಯಾಗುತ್ತೆ. ಇವರದ್ದು ಅದೇ ಕಥೆ. ಆಫೀಸ್ ನಲ್ಲಿ ಹುಟ್ಟಿಕೊಂಡ ಸ್ನೇಹ ಇವರನ್ನು ಇವತ್ತು ಹೊಸ ಸಾಹಸವೊಂದಕ್ಕೆ ಕೈ ಹಾಕುವಂತೆ ಮಾಡಿದೆ.

ಅಂದ್ಹಾಗೆ ಸುಮನ್ ಹಾಗೂ ಶಾಲಿನಿ ಪ್ರಕಾಶ್ ಇಬ್ಬರೂ ಬಿಬಿಎಂ ಪದವೀಧರರು. ಬೆಂಗಳೂರಿನ ರಾಜಾಜಿನಗರ ನಿವಾಸಿಗಳಾದ ಇವರು ತಮ್ಮ ಒಂದು ಮುಗಿಯುತ್ತಿದ್ದಂತೆ ಒರಾಕಲ್ ನಲ್ಲಿ ಕೆಲಸಕ್ಕೆ ಸೇರಿದ್ರು. ಇವರಿಬ್ಬರು ಪರಸ್ಪರ ಪರಿಚಿತರಾದದ್ದೂ ಇಲ್ಲೇ. ಒರ್ಯಾಕಲ್ ನಲ್ಲಿ ಕೆಲಸ ಮಾಡುತ್ತಿದ್ದಾಗಲೇ ಶಾಲಿನಿ ಅವರಿಗೆ ಸ್ವಂತ ಉದ್ಯಮ ಆರಂಭಿಸುವ ಆಲೋಚನೆ ಹುಟ್ಟಿತ್ತು. ಈ ಬಗ್ಗೆ ಗೆಳತಿ ಸುಮನ್ ಅವರೊಂದಿಗೆ ಚರ್ಚಿಸಿದ್ರು. ಅದರಂತೆ ಮೊದಲಿನಿಂದಲೂ ಅವರಿಗೆ ಜ್ಯುವೆಲ್ಲರಿ ಮೇಕಿಂಗ್ ಬಗ್ಗೆ ಸಾಕಷ್ಟು ಆಸಕ್ತಿ ಇರೋದರಿಂದ ಅದನ್ನೇ ಯಾಕೆ ಆರಂಭಿಸಬಾರದು ಅಂತಾ ನಿರ್ಧರಿಸಿ ಕೆಲಸಕ್ಕೆ ರಾಜೀನಾಮೆ ನೀಡಿದ್ರು. ಬಳಿಕ ಶಾಲಿನಿ ಜ್ಯುವೆಲ್ಲರಿ ಮೇಕಿಂಗ್ ಬಗ್ಗೆ ಅನೇಕ ಅನುಭವಿಗಳಿಂದ ತರಬೇತಿ ಪಡೆದುಕೊಂಡ್ರು. ಶಾಲಿನಿ ತರಬೇತಿ ಪಡೆದುಕೊಳ್ಳುತ್ತಿದ್ದಂತೆ ಸುಮನ್ ಕೂಡ ಕೆಲಸಕ್ಕೆ ರಾಜೀನಾಮೆ ನೀಡಿದ್ರು. ಸುಮನ್ ಅವರಿಗೆ ಶಾಲಿನಿ ಅವರೇ ತರಬೇತಿ ನೀಡಿ ಇಬ್ಬರೂ ಸೇರಿ ಜ್ಯುವೆಲಿನ್ ಅನ್ನೋ ಪುಟ್ಟ ಸಂಸ್ಥೆಯೊಂದನ್ನು ಆರಂಭಿಸಿದ್ರು.

ಇದನ್ನು ಓದಿ: ರೋಗಿಗಳ ಆಪತ್ಕಾಲದಲ್ಲಿ ನೆರವಾಗುವ ಸಂಜೀವಿನಿ MediSOS..

ಇವತ್ತು ಜ್ಯುವೆಲ್ಲಿನ್ ನಲ್ಲಿ ಎಲ್ಲಾ ರೀತಿಯ ಆಭರಣಗಳು ಲಭ್ಯವಿದೆ. ವಿವಿಧ ರೀತಿ ಸ್ಟೋನ್ ಆಭರಣಗಳು, ಹ್ಯಾಂಡಿ ಕ್ರಾಫ್ಟ್ ಮೆಟಲ್ ಆಭರಣಗಳು, ರಾಜಸ್ಥಾನದ ವೈಟ್ ಮೆಟಲ್ ಆಭರಣಗಳು, ಗ್ಲಾಸ್ ಹ್ಯಾಂಡ್ ವರ್ಕ್ ಆಭರಣಗಳು, ಕುಚ್ ಆಭರಣಗಳು, ಟೆರಾಕೋಟಾ ಆಭರಣಗಳು ಹೀಗೆ ಎಲ್ಲಾ ರೀತಿಯ ಆಭರಣಗಳು ಇಲ್ಲಿ ಲಭ್ಯವಿದೆ.

ಜ್ಯುವೆಲಿನ್ ನಲ್ಲಿ ತಯಾರಾಗೋದು ಪಕ್ಕಾ ದೇಸಿ ಸ್ಟೈಲ್ ನ ಆಭರಣಗಳು. ಇವತ್ತು ದೇಶದ ಪಾರಂಪರಿಕ ಆಭರಣಗಳನ್ನು ಧರಿಸುವವರು ಸಂಖ್ಯೆ ಕಡಿಮೆಯಾಗುತ್ತಿದೆ. ಜೊತೆಗೆ ಅದರ ಲಭ್ಯತೆಯೂ ಕಡಿಮೆಯಿದೆ. ಹೀಗಿರುವಾಗ ಹಳೆಯ ಪಾರಂಪರಿಕ ಆಭರಣಗಳನ್ನು ಉಳಿಸುವ ಜೊತೆಗೆ ಅದಕ್ಕೆ ಆಧುನಿಕ ಟಚ್ ನೀಡಿ ಗ್ರಾಹಕರನ್ನು ಖುಷಿ ಪಡಿಸುವಂತೆ ಮಾಡುತ್ತಿದ್ದಾರೆ ಶಾಲಿನಿ ಹಾಗೂ ಸುಮನ್. ಇನ್ನು ನಮ್ಮದೇ ಬ್ಯುಸಿನೆಸ್ ಆದ್ರೆ ನಮಗೆ ಸಾಕಷ್ಟು ಪ್ರಯೋಗಗಳನ್ನು ಮಾಡೋದಕ್ಕೆ ಅವಕಾಶವಿರುತ್ತೆ ಅನ್ನೋ ಶಾಲಿನಿ ಈಗಗಾಲೇ ನಾವು ನಮ್ಮದೇ ಕ್ರಿಯೇಟಿವಿಯಲ್ಲಿ ಸಾಕಷ್ಟು ಆಭರಣಗಳನ್ನು ತಯಾರಿಸಿದ್ದೇವೆ. ಅದಕ್ಕೆ ಜನರಿಂದ ಸಾಕಷ್ಟು ರೆಸ್ಪಾನ್ಸ್ ಕೂಡ ಬಂದಿದೆ. ಈ ವರ್ಷ ಇನ್ನಷ್ಟು ಹೊಸ ಹೊಸ ಪ್ರಯೋಗಗಳನ್ನು ಮಾಡುವ ಕಡೆಗೆ ಹೆಜ್ಜೆ ಇಡುತ್ತಿದ್ದೇವೆ. ಇದಕ್ಕೆಲ್ಲಾ ನಮ್ಮ ಕುಟುಂಬದವರ ಸಹಕಾರ ಪ್ರಮುಖ ಕಾರಣ ಅಂತಾರೆ ಶಾಲಿನಿ ಪ್ರಕಾಶ್.

ಇನ್ನು ಶಾಲಿನಿ ಹಾಗೂ ಸುಮನ್ ಈ ಟೆರಕೋಟಾ ಆಭರಣಗಳಲ್ಲೇ ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದಾರೆ. ಸಾಮಾನ್ಯವಾಗಿ ಟೆರಕೋಟಾದಲ್ಲಿ ವೆರೈಟಿ ವೆರೈಟಿ ಜುಮ್ಕಾಗಳು, ಸ್ಟಡ್ಸ್ ಇಲ್ಲಾ ಸೆಟ್ ಗಳು ಲಭ್ಯವಿರುತ್ತೆ.ಆದ್ರೆ ಇವರಿಬ್ಬರು ಟೆರಕೋಟಾದಲ್ಲಿ ಪಾರ್ಟಿ ವೇರ್ ಆಭರಣಗಳು ತಯಾರಿಸಿ ಗ್ರಾಹಕರ ಮೆಚ್ಚುಗೆ ಪಾತ್ರವಾಗಿದ್ದಾರೆ. ಜೊತೆಗೆ ಮೆಟಲ್ ಹಾಗೇ ಸ್ಟೋನ್ ಆಭರಣಗಳ ತಯಾರಿಕೆಯಲ್ಲೂ ಇವರು ಸೈ ಅನ್ನಿಸಿಕೊಂಡಿದ್ದಾರೆ. ತಮ್ಮ ಉದ್ಯಮ ಆರಂಭವಾಗಿ ಇನ್ನು ಒಂದು ವರ್ಷವಾಗುವ ಮೊದಲೇ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತರೋದರಿಂದ ನಮಗೆ ಇನ್ನಷ್ಟು ಹೊಸ ಪ್ರಯತ್ನಕ್ಕೆ ಕೈ ಹಾಕೋದಕ್ಕೆ ಸ್ಫೂರ್ತಿ ಸಿಗುತ್ತೆ ಅಂತಾರೆ ಜುವೆಲ್ಲಿನ್ ಮತ್ತೋರ್ವ ಮಾಲೀಕರಾದ ಸುಮನ್.

ಜ್ಯುವೆಲಿನ್ ನಲ್ಲಿ ರೆಡಿಯಾಗುವಂತಹ ಆಭರಣಗಳು ಪಕ್ಕಾ ಹ್ಯಾಂಡ್ ಮೇಡ್ ಆಭರಣಗಳು. ಸುಮನ್ ಹಾಗೂ ಶಾಲಿನಿ ತಮ್ಮ ಮನೆಯಲ್ಲೇ ಕುಳಿತು ಈ ಆಭರಣಗಳನ್ನು ತಯಾರಿಸುತ್ತಾರೆ. 50 ರೂಪಾಯಿಯಿಂದ ಹಿಡಿದು ಜುವೆಲಿನ್ ನಲ್ಲಿ ಸಾವಿರಾರು ರೂಪಾಯಿವರೆಗಿನ ವಿವಿಧ ಆಭರಣಗಳು ಲಭ್ಯವಿದೆ. ಇನ್ನು ಹೊರ ದೇಶಗಳಿಗೂ ಇವರು ಮಾಡಿರುವ ಆಭರಣಗಳು ರವಾನೆಯಾಗಿವೆ.ಅದರಲ್ಲಿ ದುಬೈನಿಂದ ಬಂದ ಆರ್ಡರ್ ಯಾವತ್ತು ಮರೆಯಲಾರದ್ದು ಅಂತಾರೆ ಇವರಿಬ್ಬರು.

ಸದ್ಯ ತಮ್ಮ ಮನೆಯಲ್ಲೇ ಆಭರಣ ತಯಾರಿಕೆಯಲ್ಲಿ ತೊಡಗಿಸಿರುವ ಇವರಿಬ್ಬರಿಗೆ ಮುಂದೆ ತಮ್ಮದೇ ಆದ ಸ್ಟುಡಿಯೋ ಒಂದನ್ನು ಆರಂಭಿಸಬೇಕು ಅನ್ನೋ ಗುರಿಯಿದೆ. ಇನ್ನು ತಮ್ಮಂತೆಯೇ ಸ್ವಉದ್ಯೋಗ ಮಾಡ ಬಯಸುವವರಿಗೆ ಇವರಿಬ್ಬರು ಕೆಲ ಸಲಹೆಗಳನ್ನು ನೀಡುತ್ತಾರೆ. ನಿಮಗೆ ಸ್ವಉದ್ಯೋಗ ಮಾಡೋ ಆಸೆಯಿದ್ದರೆ ಅದಕ್ಕಾಗಿ ಕಾಯುತ್ತಾ ಕೂರಬೇಡಿ. ಅಡೆತಡೆಗಳು ಇವತ್ತು ಕೂಡ ಇರುತ್ತವೆ ಹಾಗೇ ಹತ್ತು ವರ್ಷ ಕಳೆದ್ರೂ ಕಷ್ಟಗಳು ಇದ್ದೇ ಇರುತ್ತವೆ. ಈಗ ನಮ್ಮ ಕನಸುಗಳಂತೆ ಬದುಕು ಕಾಲ. ಹಾಗಾಗಿ ಕಾಯುತ್ತಾ ಕೂರಬೇಡಿ ಅಂತಾರೆ.

ಮುಂದೆ ತಮ್ಮದೇ ಆದ ಜ್ಯುವೆಲ್ಲರಿ ಸ್ಟುಡಿಯೋ ಆರಂಭಿಸುವ ಯೋಜನೆಯಲ್ಲಿದ್ದಾರೆ. ಆ ಮೂಲಕ ಒಂದಷ್ಟು ಹೆಣ್ಣುಮಕ್ಕಳಿಗೆ ಉದ್ಯೋಗ ಕಲ್ಪಿಸುವ ಕನಸು ಶಾಲಿನಿ ಹಾಗೂ ಸುಮನ್ ಅವರದ್ದು. ಅವರ ಹೊಸ ಯೋಜನೆಗೆ ನಮ್ಮ ಕಡೆಯಿಂದಲೂ ಆಲ್ ದಿ ಬೆಸ್ಟ್. ಇನ್ನು ನಿಮಗೂ ಜ್ಯುವೆಲಿನ್ ನಿಂದ ವೆರೈಟಿ ವೆರೈಟಿ ಆಭರಣಗಳನ್ನು ಖರೀದಿ ಮಾಡಬೇಕು ಅಂತಿದ್ರೆ 9739945866 ಈ ನಂಬರ್ ಗೆ ಕಾಲ್ ಮಾಡಿ ಬುಕ್ ಮಾಡ್ಬಹುದು.

ಇದನ್ನು ಓದಿ: 

1. ಗರ್ಭಿಣಿಯರ ಆರೋಗ್ಯದ ಕಾಳಜಿವಹಿಸುವ mhealth

2. ಏನನ್ನೂ ಮಾಡದೇ ಒಂದೇ ದಿನದಲ್ಲಿ 6 ಕೋಟಿ ಗಳಿಸೋದು ಹೇಗೆ?

3. ಮನೆ ಹುಡುಕಲು ಬಂತು ಮೊಬೈಲ್ ಆ್ಯಪ್!!!


Related Stories