ಮಹಿಳಾ ಉದ್ಯಮ ಯಶಸ್ಸಿನ ಗುಟ್ಟು ರಟ್ಟಾದಾಗ..!

ಟೀಮ್​ ವೈ.ಎಸ್​. ಕನ್ನಡ

0


ಯಾರಾದ್ರು ಬಂದು ನಮಗೆ ಯಶಸ್ಸಿನ ಗುಟ್ಟು ಹೇಳಿದ್ರೆ ಹೇಗೀರುತ್ತೆ? ಮಹಿಳಾ ಉದ್ಯಮದಲ್ಲಿ ಯಶಸ್ವಿಯಾದ ಐವರು ಮಹಿಳೆಯರ ಯಶಸ್ಸಿನ ಮಂತ್ರ ಇಲ್ಲಿದೆ ನೋಡಿ..

ಮಹಿಳಾ ಉದ್ಯಮ ಯಶಸ್ವಿಯಾಗಲು ಬೇಕಾದ ಒಂದು ಗುಣ ಯಾವುದು ಎಂಬ ಪ್ರಶ್ನೆಯನ್ನು ನಾವು ಯಶಸ್ವಿ ಮಹಿಳಾ ಉದ್ಯಮಿಗಳಿಗೆ ಕೇಳಿದ್ವಿ. ಅದಕ್ಕೆ ನಾವು ಪಡೆದ ಉತ್ತರ ಇಲ್ಲಿದೆ..

ಯಶಸ್ಸು

'ಕ್ಯಾಶ್ಕರೋ' ಸಂಸ್ಥೆಯ ಸಹ-ಸಂಸ್ಥಾಪಕಿ (ಒಡತಿ) ಸ್ವಾತಿ ಭಾರ್ಗವ್. ಎರಡು ದಿನಗಳ ಹಿಂದೆ ಅಷ್ಟೆ 25 ಕೋಟಿ ಬಂಡವಾಳವನ್ನು ಇರುವುದಾಗಿ ಸಂಸ್ಥೆ ಪ್ರಕಟಿಸಿತು. 25 ಕೋಟಿ ನಿಧಿ ಹೊಂದಿರುವ ಈ ಸಂಸ್ಥೆ, ಕಲಾರಿ ಕ್ಯಾಪಿಟಲ್​ನಿಂದ ಸರಣಿ ಸುತ್ತಿನ ಬಂಡವಾಳ ಸಂಗ್ರಹದಿಂದ 25 ಕೋಟಿ ರೂಪಾಯಿ ಸಂಗ್ರಹಿಸಿದೆ. ಸ್ವಾತಿ ಅವರು ಹೇಳುವ ಪ್ರಕಾರ "ಯಶಸ್ಸಿನ ಮಂತ್ರ ಬಹು ಬಗೆಯದ್ದಾಗಿರುತ್ತೆ. ಆದರೆ ಮಹಿಳೆಯರ ವಿಷಯಕ್ಕೆ ಬಂದರೆ ಅದು ತುಂಬಾ ವಿಭಿನ್ನ. ಮಹಿಳೆಯರು ಹಲವು ಜವಾಬ್ದಾರಿಯನ್ನು ನಿಭಾಯಿಸುತ್ತಿರುತ್ತಾರೆ. ಮನೆ ಮತ್ತು ವೃತ್ತಿಯಲ್ಲೂ ಅವರು ಉತ್ತಮ ಕಾರ್ಯ ನಿರ್ವಹಿಸುತ್ತಾರೆ. ಆದರೆ ಮಹಿಳಾ ಉದ್ಯಮ ಸ್ಥಾಪಿಸುವುದು ಕೂಡ ನಿಜಕ್ಕೂ ದೊಡ್ಡ ಸಂಗತಿ. ಅದರಲ್ಲೂ ಹೊಸ ಉದ್ಯಮ ಪ್ರಾರಂಭ ಮಾಡಬೇಕಾದ್ರೆ ಅವರು 200 ಪ್ರತಿಶತ ಶ್ರಮ ಹಾಕಬೇಕು. ಮನೆಯ ಜೊತೆ-ಜೊತೆಗೆ ಎಲ್ಲವನ್ನೂ ನಿಭಾಯಿಸುವ ಧೃಡವಿಶ್ವಾಸ, ಎಲ್ಲವನ್ನು ಗಮನಿಸುವಂತಹ ಗುಣ ಅವರಲ್ಲಿರಬೇಕು. ಇದು ನಿಜಕ್ಕೂ ಸವಾಲೇ ಸರಿ. ಮಹಿಳೆಯರು ಬಹುಮುಖ ಪ್ರತಿಭೆ ಹೊಂದಿರುವವರು, ಹಾಗಾಗಿ ಅವರು ಯಾವಾಗಲು ಗಂಡಸರಿಗಿಂತ ಉತ್ತಮರು".

ಗ್ರಾಮೀಣ ಪ್ರದೇಶದ ಮಹಿಳೆಯರಿಗೆ, ಮುಟ್ಟಿನ ಸಮಯದಲ್ಲಿ ಹೈಜೆನಿಕ್ ಎಕೋ-ಸಿಸ್ಟಮ್ ವಾತಾವರಣ ಪ್ರದಾನ ಮಾಡುವಂತಹ, ಉತ್ತಮ ಪರಿಸ್ಥಿತಿ ನಿರ್ಮಿಸುವಂತಹ ಸಂಸ್ಥೆ `ವಾತ್ಸಲ್ಯ ಫೌಂಡೇಶನ್'. ಈ ಸಂಸ್ಥೆಯ ಮುಖ್ಯಸ್ಥೆ ಸ್ವಾತಿ ಬೆಡೆಕರ್ ಹೇಳುವುದು ಹೀಗೆ. "ಮಹಿಳಾ ಉದ್ಯಮ ಆರಂಭಿಸುವವರು ಮೊದಲು ಆತ್ಮವಿಶ್ವಾಸ ಹೊಂದಿರಬೇಕು. ಉತ್ತಮ ಸಾಮರ್ಥ್ಯ, ಅವರದೇ ಆದ ಒಂದು ಗುರಿ ಮತ್ತು ಛಲ ಅವರಿಗಿರುವುದು ಅವಶ್ಯಕ".

'ಬಿಟ್​​ಗಿವಿಂಗ್ಸ್​​'ನ ಸಿಇಓ ಮತ್ತು ಸಹ-ಸಂಸ್ಥಾಪಕಿ 26 ವರ್ಷದ ಇಶಿತಾ ಆನಂದ್. ಅವರ ಪ್ರಕಾರ "ಮಹಿಳೆಯರಿಗೆ ಛಲವಿರಬೇಕು. ಜೊತೆಗೆ ಸ್ವಲ್ಪ ದಪ್ಪ ಚರ್ಮವಿರಬೇಕು. ಆಗ ಮಾತ್ರ ಸ್ತ್ರೀಯರು ಉದ್ಯಮದಲ್ಲಿ ಮುಂದೆ ಬರಲು ಸಾಧ್ಯ. ಮಹಿಳೆಯರು ತುಂಬಾ ಗಟ್ಟಿಯಾಗಿರಬೇಕು. ಅವರಷ್ಟಕ್ಕೆ ಅವರು ಅತಿ ಉತ್ಸಾಹ, ಏನೂ ಬೇಕಾದ್ರು ಮಾಡಬಲ್ಲೇ ಎಂಬ ಧೃಡ ಸಂಕಲ್ಪವೊಂದಿದ್ದರೆ, ಉದ್ಯಮ ಆರಂಭಿಸುವ ಈ ಪಯಣದಲ್ಲಿ ಕೆಲಸಕ್ಕೆ ಬರುತ್ತದೆ. ಯಾವುದೇ ಕಾರಣಕ್ಕೂ ಆತ್ಮವಿಶ್ವಾಸ ಕಳೆದುಕೊಳ್ಳುವುದು, ಅವರ ಸಾಮರ್ಥ್ಯದ ಬಗ್ಗೆ ಅವರೇ ಸಂದೇಹ ಪಡುವಂತಹ ಪ್ರಸಂಗಗಳು ಬರದಂತೆ ನೋಡಿಕೊಂಡರೆ ಯಶಸ್ಸು ಖಚಿತ".

" ನಮ್ಮಷ್ಟಕ್ಕೆ ನಾವೇ ಕಡಿವಾಣ ಹಾಕಿಕೊಳ್ಳುವುದು ತಪ್ಪು. ಜೀವನದಲ್ಲಿ ನಮ್ಮ ಗುರಿ ನಮ್ಮ ವ್ಯಾಪ್ತಿಯೇನು ಎಂಬುದನ್ನು ಒಂದು ಸಲ ನಾವೇ ನಿರ್ಧರಿಸಿಕೊಳ್ಳಬೇಕು. ದುಃಖಕರ ಸಂಗತಿಯೆಂದರೆ ಸ್ತ್ರೀಯರು ಯಾವುದರಲ್ಲೂ ಹೆಚ್ಚು ಬಂಡವಾಳ ತೊಡಗಿಸುವುದಿಲ್ಲ. ಸೂಕ್ತ ಕಾರ್ಯಮಾಡದೆ ಸುಖಾಸುಮ್ಮನೆ ದೊಡ್ಡ-ದೊಡ್ಡ ಕನಸು ಕಾಣುವುದನ್ನು ನಿಲ್ಲಿಸಬೇಕು. ಯಶಸ್ಸು ಬೇಕಾದಲ್ಲಿ ಅನುಸರಿಸಬೇಕಾದ ಮಹತ್ವದ ಗುಣಗಳಲ್ಲೊಂದು ತಮ್ಮ ಸಾಮರ್ಥ್ಯದ ಬಗ್ಗೆ ಅವರು ವಿಶ್ವಾಸವಿಟ್ಟುಕೊಳ್ಳುವುದು. ಆಗ ಮಾತ್ರ ಮಹಿಳೆಯರು ಉದ್ಯಮ ಪ್ರಾರಂಭಿಸಬಹುದು. ಯಶಸ್ವಿಯಾಗಿ ನಡೆಸಬಹುದು. ನಾಲ್ಕು ಗೋಡೆಗಳ ಮಧ್ಯೆ ಸಿಲುಕಿಕೊಂಡು ನಮ್ಮನ್ನು ನಾವು ಶಪಿಸಿಕೊಳ್ಳುವುದನ್ನು ಬಿಟ್ಟು ಹೊರಬರಬೇಕು. ನಮ್ಮನ್ನು ನಾವು ಬಂಧಿಸಿಕೊಂಡಿರುವ ಜಾಗದಿಂದ ಹೊರಬರಬೇಕು, ನಮ್ಮ ಹಕ್ಕನ್ನು ನಾವು ಪಡೆಯಬೇಕು ಆಗಮಾತ್ರ ಸಫಲತೆ ಸಿಗಲಿದೆ"ಯೆಂದು `ಜಾಬ್ಸ್​ಫಾರ್​​ಹರ್​' ಸಂಸ್ಥೆಯ ಸಂಸ್ಥಾಪಕಿ ನೇಹ ಬಗಾರಿಯಾ ಹೇಳುತ್ತಾರೆ. ಮಹಿಳೆಯರಿಗೆ ತಮ್ಮ ವೃತ್ತಿಯಲ್ಲಿ ಮುಂದುವರೆಯುವುದು ಕಷ್ಟವಾಗುತ್ತದೆ. ಮದುವೆಗಾಗಿ ರಜೆ, ತಾಯ್ತನದ ರಜೆ ಇನ್ನಿತರ ಸಮಯದಲ್ಲಿ ಹಲವು ಕಾರಣಗಳಿಗೆ ಮಹಿಳೆಯರು ಕೆಲಸದಿಂದ ದೂರ ಉಳಿಯಬೇಕಾಗುತ್ತದೆ. ಅಂತಹ ಸಮಯದಲ್ಲೂ ಮಹಿಳೆಯರಿಗೆ ಸೂಕ್ತ ಉದ್ಯೋಗ ಹುಡುಕಿ ಕೊಡುವಂತಹ ಕಾರ್ಯ ಜಾಬ್ಸ್​ಫಾರ್​ಹರ್​​ ಸಂಸ್ಥೆ ಮಾಡುತ್ತದೆ.

"ಮಹಿಳೆಯರಿಗೆ ಇರಲೇಬೆಕಾದ ಒಂದು ಗುಣವೆಂದರೆ. ಅವರದೇ ಆದ ಒಂದು ಗುರಿ ಇರಬೇಕು. ತಮ್ಮ ಗುರಿಯನ್ನು ಸಾಧಿಸುವಂತಹ ಬದ್ಧತೆ ಹೊಂದಿರಬೇಕು. ಇಂತಹ ಒಂದು ಛಲ ಮಹಿಳೆಯರಲ್ಲಿ ಬಂದರೆ ಎಂತಹ ಸಮಸ್ಯೆಯನ್ನು ಮೆಟ್ಟಿ ನಿಲ್ಲುವಂತಹ ಶಕ್ತಿ ಅವರಿಗೆ ಬರುತ್ತದೆ. ಆಗ ಮಾತ್ರ ಅವರು ಈ ಉದ್ಯಮ ಕ್ಷೇತ್ರದಲ್ಲಿ ಬರುವ ಭಿನ್ನ-ವಿಭಿನ್ನ, ಸಮಸ್ಯೆ-ಸವಾಲುಗಳನ್ನು ಸುಲಭವಾಗಿ ಎದುರಿಸಬಲ್ಲರು", ಅಂತಾರೆ `ಹೈಜೀನ್ ಎಂಡ್ ಯು' ಸಂಸ್ಥೆಯ ಸಹ-ಸಂಸ್ಥಾಪಕಿ ಪ್ರಿಯಾಂಕ ಜೈನ್.

ಹಾಗಾದ್ರೆ, ನೀವೆ ನಿಮ್ಮ ಪ್ರಕಾರ ಯಶಸ್ಸಿನ ಮಂತ್ರವೇನು..?


ಲೇಖಕರು: ತನ್ವಿ ದುಬೆ

ಅನುವಾದಕರು: ರವಿ.ಎಸ್