ಕೆರೆಯ ನೀರಿನಿಂದಾಗಿ ಕಲ್ಲಾದ ಪ್ರಾಣಿ ಪಕ್ಷಿಗಳು...

ನಿನಾದ

0

ದೇವರು ಶಾಪ ಕೊಟ್ಟು ರಾಕ್ಷಸರು ಕಲ್ಲಾದ್ರು. ಮನುಷ್ಯರು ಮಾತು ಬರದಂತಾದ್ರೂ ಅಂತಾ ನಾವು ಪೌರೌಣಿಕ ಕಥೆಗಳಲ್ಲಿ ಕೇಳಿದ್ದೇವೆ.ಆದ್ರೆ ಇವತ್ತು ಇಂತಹ ಕಥೆ ಹೇಳಿದ್ರೆ ಜನ ನಂಬೋದು ಕಷ್ಟ. ಆದ್ರೆ ಉತ್ತರ ತಾನ್ಜೇನಿಯಾದಲ್ಲಿರುವ ಕೆರೆಯೊಂದರಲ್ಲಿ ವಿಜ್ಞಾನ ಲೋಕಕ್ಕೆ ಸವಾಲೆಸೆಯುವಂತಹ ಒಂದು ವಿಸ್ಮಯ ನಡೆದಿದೆ.

ಅಂದ್ಹಾಗೆ ಈ ಅದ್ಭುತ ನಡೆದಿರೋದು ಉತ್ತರ ತಾನ್ಜೇನಿಯಾದಲ್ಲಿರುವ ಲೇಕ್ ನಾಟ್ರನ್ ಕೆರೆಯಲ್ಲಿ. ಅದನ್ನು ಪತ್ತೆ ಹಚ್ಚಿರೋದು ನಿಕ್ ಬ್ರಾಂಡ್ ಅನ್ನುವ ಛಾಯಾಗ್ರಾಹಕ. ಒಂದು ಬಾರಿ ನಿಕ್ ಬ್ರಾಂಡ್ ಫೋಟೋಗ್ರಫಿ ಮಾಡಲೆಂದು ಲೇಕ್ ನಾಟ್ರನ್ ಬಳಿಗೆ ಬಂದಿದ್ದರಂತೆ. ಈ ವೇಳೆ ಕೆರೆಯಲ್ಲಿ ಶಿಲೆಗಳಂತೆ ನಿಂತಿದ್ದ ಬಾವಲಿಗಳು ಹಾಗೂ ಕೆಲ ಪಕ್ಷಿಗಳನ್ನು ನೋಡಿದ್ರಂತೆ. ಇದರಿಂದ ಅಚ್ಚರಿಗೊಳಗಾದ ನಿಕ್ ಗೆ ಇವುಗಳು ಯಾಕೆ ಹೀಗಾಗಿವೆ ಅಂತಾ ಅನುಮಾನ ಮೂಡಿದೆ. ಅದೇ ಅನುಮಾನದಿಂದ ಸಂಶೋಧನೆಗೆ ಮುಂದಾಗಿದ್ದಾರೆ. ಅದಕ್ಕಾಗಿ ಕೆಲ ದಿನಗಳ ಕಾಲ ನಿಕ್ ಬ್ರಾಂಡ್ ಕೆರೆಯ ಬಳಿಯೇ ಬೀಡು ಬೀಡು ಬಿಟ್ಟಿದ್ದಾರೆ.

ಹತ್ತು ದಿನಗಳ ಕಾಲ ಕೆರೆಯ ಬಗ್ಗೆ ನಿರಂತರವಾಗಿ ಅಧ್ಯಯನ ನಡೆಸಿದಾಗ ನಿಕ್ ಅವರಿಗೆ ಕೆರೆಯ ನೀರಿನಲ್ಲಿ ರಾಸಾಯನಿಕ ಅಂಶಗಳು ಬೆರೆತು ಹೋಗಿವೆ ಅನ್ನೋ ಅಂಶ ಗೊತ್ತಾಗಿದೆ. ಜೊತೆಗೆ ಕೆರೆಯಲ್ಲಿ ನಿಂತ ನೀರು ಮುಂದೆ ಸಾಗೋದಿಲ್ಲ. ಅದು ನಿಂತೇ ಇರುತ್ತೆ ಅನ್ನೋದು ಗೊತ್ತಾಗುತ್ತೆ. ಆದರೆ ಇದಕ್ಕೆ ನಿಜವಾದ ಕಾರಣ ಏನು ಅನ್ನೋದು ಮಾತ್ರ ನಿಕ್ ಗೆ ಗೊತ್ತಾಗಲೇ ಇಲ್ಲ.

ಇನ್ನು ಕೆರೆಯಲ್ಲಿ ಪ್ರಾಣಿ ಪಕ್ಷಿಗಳು ನೀರು ಸೋಕಿ ಈ ರೀತಿಯಾಗಿದೆ ಅನ್ನೋ ವಿಚಾರ ಕೆರೆಯ ಸುತ್ತಮುತ್ತಲಿನ ಜನರಿಗೂ ಗೊತ್ತಿತ್ತು. ಆದರೆ ಇಲ್ಲಿನ ನಿವಾಸಿಗಳು ಮಾತ್ರ ಇದು ಭೂತ, ಪಿಶಾಚಿಗಳ ಉಪಟಳದಿಂದ ಹೀಗಾಗಿದೆ ಅಂದುಕೊಂಡು ಕೆರೆಯತ್ತ ಬರೋದನ್ನೇ ನಿಲ್ಲಿಸಿದ್ದರು. ಜೊತೆಗೆ ಅಸಲೀ ಕಾರಣವನ್ನು ಹುಡುಕುವ ಗೋಜಿಗೂ ಅವರು ಹೋಗಿರಲಿಲ್ಲ. ಆದ್ರೆ ವಿಜ್ಞಾನಿಗಳ ಸಂಶೋಧನೆಯ ಬಳಿಕ ಇದೀಗ ಇದಕ್ಕೆ ಅಸಲೀ ಕಾರಣ ಏನು ಅನ್ನೋದು ಗೊತ್ತಾಗಿದೆ.

ಈ ಕೆರೆಯಲ್ಲಿ ಅತಿಯಾದ ಸೋಡಾ ಹಾಗೂ ಉಪ್ಪಿನ ಅಂಶವಿದೆಯಂತೆ.ಹಾಗಾಗಿ ಈ ಕೆರೆಯ ನೀರು ರಾಸಾಯನಿಕ ತೊಟ್ಟಿಯಂತಾಗಿದೆ.ಜೊತೆಗೆ ವಿಷಯುಕ್ತ ಖನಿಜಗಳು ಇದರಲ್ಲಿ ಬೆರೆತು ಹೋಗಿವೆ. ಈ ನೀರನ್ನು ಕೆರೆಗೆ ನೀರು ಅರಸಿ ಬರುವ ಪ್ರಾಣಿ ಹಾಗೂ ಪಕ್ಷಿಗಳು ಕುಡಿದಿವೆ. ಇದರ ಪರಿಣಾಮ ಪ್ರಾಣಿ ಪಕ್ಷಿಗಳ ದೇಹ ಬಡಕಲಾಗಿ ಅವು ಅಸ್ಥಿಪಂಜರದಂತಾಗಿ ಸಾವನ್ನಪ್ಪಿವೆ. ಅಲ್ಲದೇ ಬಿಸಿಲಿಗೆ ಒಣಗಿ ಶಿಲೆಯಂತಾಗಿವೆ. ಈಗಲೂ ಲೇಕ್ ನಾಟ್ರನ್ ಕೆರೆಯಲ್ಲಿ ಇದೇ ರೀತಿಯ ಶಿಲಾ ರೂಪದ ಹಕ್ಕಿಗಳು ಕಾಣ ಸಿಗುತ್ತಿವೆ. ಇನ್ನು ಅಸಲಿ ಕಾರಣ ಗೊತ್ತಾಗಿ ಸುತ್ತಮುತ್ತಲಿನ ಜನ ಕೂಡ ಈಗ ಧೈರ್ಯದಿಂದ ಕೆರೆಯ ಸುತ್ತಮುತ್ತ ಧೈರ್ಯದಿಂದ ಓಡಾಡುತ್ತಿದ್ದಾರಂತೆ.