ಯುದ್ಧ ವಿಮಾನಕ್ಕೆ ಮಹಿಳಾ ಸಾರಥಿ !

ಟೀಮ್​​ ವೈ.ಎಸ್​​.

0

ಬಹುಷಃ ಮಹಿಳೆಯರು ಕೆಲಸ ಮಾಡದ ಜಾಗಗಳಿಲ್ಲ. ಮನೆಯ ಅಡುಗೆ ಮನೆಯಿಂದ ಹಿಡಿದು ಭಾರತೀಯ ವಾಯುಪಡೆಯ ತನಕ ಮಹಿಳ ತನ್ನದೇ ಆದ ಸ್ಥಾನ ಪಡೆದುಕೊಂಡಿದ್ದಾಳೆ. ಈಗ ಯುದ್ಧ ವಿಮಾನವನ್ನು ಹಾರಿಸೋದ್ರಲ್ಲೂ ಕೈ ಜೋಡಿಸಿದ್ದಾಳೆ

ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೇ ಛಾಪು ಮೂಡಿಸಿರುವ ಭಾರತೀಯ ಮಹಿಳೆಯರು ಈಗ ವಾಯುಪಡೆಯ ಯುದ್ಧ ವಿಮಾನಗಳ ಚಾಲನೆಯಲ್ಲೂ ತಮ್ಮ ಹೆಗ್ಗುರುತು ಮೂಡಿಸಲು ಮುಂದಾಗಿದ್ದಾರೆ. ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳಿಗೆ ಮಹಿಳಾ ಪೈಲಟ್​​ಗಳ ನೇಮಕಾತಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈ ಮೂಲಕ ಭಾರತದ ರಕ್ಷಣಾ ಕ್ಷೇತ್ರದ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದಕ್ಕೆ ಮುನ್ನುಡಿ ಬರೆದಂತಾಗಿದೆ. ಪ್ರಪ್ರಥಮ ಬಾರಿಗೆ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳಲ್ಲಿ ಮಹಿಳೆಯರು ತಮ್ಮ ಸಾಧನೆಯನ್ನು ತೋರಲಿದ್ದಾರೆ.

ಈ ಐತಿಹಾಸಿಕ ನಿರ್ಧಾರದೊಂದಿಗೆ ಭಾರತೀಯ ಮಹಿಳೆಯರ ಅನೇಕ ವರ್ಷಗಳ ಆಸೆ, ಆಕಾಂಕ್ಷೆ ನೆರವೇರಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಥದಲ್ಲಿಯೇ ಭಾರತೀಯ ಸೇನೆ ಕೂಡಾ ದಾಪುಗಾಲು ಹಾಕಲಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ. ಇಲ್ಲಿಯವರೆಗೆ ವಾಯುಪಡೆಯಲ್ಲಿ ಸರಕು ಸಾಗಾಣೆ ವಿನಿಮಯ, ಹೆಲಿಕಾಪ್ಟರ್​​ಗಳ ಹಾರಾಟದಲ್ಲಿ ಮಹಿಳೆಯರ ಪಾತ್ರ ಗಮರ್ನಾಹವಾಗಿದ್ದು, ಪ್ರಶಂಸಗೆ ಪಾತ್ರವಾಗಿದೆ ಎಂದು ಕೂಡಾ ರಕ್ಷಣಾ ಸಚಿವಾಲಯ ಹೇಳಿದೆ.

ವಾಯುಪಡೆಯ ಯುದ್ಧ ವಿಭಾಗಕ್ಕೆ ಮೊದಲ ಮಹಿಳಾ ಪೈಲಟ್​​ಗಳನ್ನು ಪ್ರಸ್ತುತ ವಾಯುಪಡೆಯಲ್ಲಿ ತರಬೇತಿ ಪಡೆಯುತ್ತಿರುವ ತಂಡಗಳಿಂದ ಆಯ್ಕೆ ಮಾಡಲಾಗುವುದು. ಸದ್ಯ ವಾಯುಪಡೆ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ತಂಡ 2016ರಲ್ಲಿ ತರಬೇತಿ ಪೂರ್ಣಗೊಳಿಸಲಿದೆ. ಅದರಲ್ಲಿ ಆಯ್ಕೆಯಾದವರು ಒಂದು ವರ್ಷದ ಕಠಿಣ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಬಳಿಕ 2017ರಲ್ಲಿ ಮೊದಲ ಬಾರಿಗೆ ಯುದ್ಧ ವಿಮಾನದ ಕಾಕ್​​ಪಿಟ್ ಪ್ರವೇಶಿಸಲಿದ್ದಾರೆ.

ಪ್ರಸ್ತುತ ಸರಬರಾಜು ವಿಭಾಗ, ಶಿಕ್ಷಣ, ವೈಮಾನಿಕ ಎಂಜಿನಿಯರಿಂಗ್, ತಾಂತ್ರಿಕ, ಎಲೆಕ್ಟ್ರಿಕಲ್, ಆಡಳಿತ ಮತ್ತು ಲೆಕ್ಕಪತ್ರ ಎಂಜಿನಿಯರ್ಸ್, ಆಡಳಿತ ಮತ್ತು ಲೆಕ್ಕಪತ್ರ ಹೀಗೆ ಹಲವು ವಿಭಾಗಗಳಲ್ಲಿ ಮಹಿಳಾ ಪೈಲಟ್​​ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

ನೌಕಾ ದಳದಲ್ಲಿ ಕೂಡಾ ಈಗಾಗಲೇ ಮಹಿಳೆಯರು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದೇ ರೀತಿ ವಾಯುಪಡೆಯಲ್ಲಿಯೂ ಮಹಿಳೆಯರಿಗೆ ಅವಕಾಶ ಕಲ್ಪಿಸಲು ಪೈಲಟ್​​ಗಳ ನೇಮಕಾತಿಗೆ ರಕ್ಷಣಾ ಇಲಾಖೆ ಮುಂದಾಗಿದೆ. ಈ ಮೂಲಕ ಭಾರತೀಯ ವಾಯುಪಡೆಯ ಎಲ್ಲಾ ವಿಭಾಗಗಳಿಗೆ ಮಹಿಳೆಯರು ಅರ್ಹತೆ ಪಡೆದುಕೊಳ್ಳಲು ರಕ್ಷಣಾ ಇಲಾಖೆ ಅವಕಾಶ ಕಲ್ಪಿಸಿಕೊಡುತ್ತಿದೆ.

ಇಲ್ಲಿಯವರೆಗೆ ಸಾಗಾಟ ವಿಮಾನ ಮತ್ತು ಹೆಲಿಕಾಪ್ಟರ್​​ಗಳಲ್ಲಿ ಮಾತ್ರ ಮಹಿಳಾ ಪೈಲಟ್​​ಗಳು ಕಾರ್ಯನಿರ್ವಹಿಸುತ್ತಿದ್ದರು. ಸೇನಾಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರ ಕಾರ್ಯವೈಖರಿ ಬಗ್ಗೆ ಈಗಾಗಲೇ ರಕ್ಷಣಾ ಸಚಿವರು ವ್ಯಾಪಕ ಅವಲೋಕನ ನಡೆಸಿ ಮಾಹಿತಿ ಪಡೆದಿದ್ದಾರೆ. ಭಾರತದ ಸಶಸ್ತ್ರ ಸೇನಾಪಡೆಗಳಲ್ಲಿ ಮಹಿಳೆಯರಿಗೆ ಮಹತ್ವದ ಹುದ್ದೆಗಳನ್ನು ನೀಡುವ ಬಗ್ಗೆ ಕೂಡಾ ಕೇಂದ್ರ ಸರ್ಕಾರ ಪರಾಮರ್ಶೆ ನಡೆಸುತ್ತಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಅಲ್ಪಾವಧಿ ಹಾಗೂ ಖಾಯಂ ಹುದ್ದೆಗಳಿಗೆ ಮಹಿಳಾ ಸಿಬ್ಬಂದಿಗಳನ್ನು ನಿಯೋಜಿಸುವ ಕುರಿತು ಚರ್ಚೆ ನಡೆಯುತ್ತಿದೆ. ಈ ಆದೇಶ ಪ್ರಕಟವಾದಲ್ಲಿ ಸೇನೆಯಲ್ಲಿ ಮಹಿಳೆಯರಿಗೆ ಮತ್ತಷ್ಟು ಅವಕಾಶಗಳು ಲಭ್ಯವಾಗಲಿವೆ.

ಒಟ್ಟು 1500 ಮಹಿಳೆಯರು ವಾಯುಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರದಲ್ಲಿ 94 ಪೈಲಟ್​​ಗಳು ಮತ್ತು 14 ಮಂದಿ ನೌಕಾದಳ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.

ಇನ್ನು ಮುಂದೆ ವಾಯುಪಡೆಯ ವಿವಿಧ ವಿಭಾಗಗಳಲ್ಲಿ ಮಹಿಳೆಯರನ್ನು ಹಂತಹಂತವಾಗಿ ಸೇರ್ಪಡೆಗೊಳಿಸಲಾಗುವುದು. ಉಗ್ರ ಸಂಘಟನೆ ಐಸಿಸ್ ಮೇಲೆ ದಾಳಿ ನಡೆಸುತ್ತಿರುವ ಅರಬ್ ರಾಷ್ಟ್ರಗಳ ವಾಯುಪಡೆಯಲ್ಲಿ ಮಹಿಳಾ ಪೈಲಟ್​​ಗಳು ಕೆಲಸ ಮಾಡುತ್ತಿರುವ ಬಗ್ಗೆ ಈಗಾಗಲೇ ಎಲ್ಲಾ ಕಡೆಯಿಂದಲೇ ಶ್ಲಾಘನೆ ವ್ಯಕ್ತವಾಗುತ್ತಿದೆ.