ವೈಜ್ಞಾನಿಕ ಸಂಶೋಧನೆಗೆ ಆಸ್ತಿ ದಾನ ಮಾಡಿದ IAS ಅಧಿಕಾರಿ – ಸಾವಿನಲ್ಲೂ ಸಾರ್ಥಕತೆ ಮೆರೆದ ಶಾರ್ವರಿ  

ಟೀಮ್ ವೈ.ಎಸ್.ಕನ್ನಡ 

1

ಶಾರ್ವರಿ ಗೋಖಲೆ ಮಹಾರಾಷ್ಟ್ರದ ಮಾಜಿ ಐಎಎಸ್ ಅಧಿಕಾರಿ. ಸತತ ಮೂರು ವರ್ಷಗಳಿಂದ ಹೊಟ್ಟೆ ಕ್ಯಾನ್ಸರ್ ಜೊತೆ ಹೋರಾಡಿದ ಶಾರ್ವರಿ, ಕಳೆದ ವರ್ಷ ಇಹಲೋಕ ತ್ಯಜಿಸಿದ್ದಾರೆ. ಶಾರ್ವರಿ ಮುಂಬೈನ ಮೊದಲ ಮಹಿಳಾ ಜಿಲ್ಲಾ ಕಲೆಕ್ಟರ್ ಎಂಬ ಗೌರವಕ್ಕೂ ಪಾತ್ರರಾಗಿದ್ದರು. ವೈಜ್ಞಾನಿಕ ಸಂಶೋಧನೆ ಮತ್ತು ಬೆಳವಣಿಗೆಗಳಲ್ಲಿ ಅವರಿಗೆ ಅಪಾರ ಆಸಕ್ತಿಯಿತ್ತು. ಮರಣದ ನಂತರವೂ ತಾವು ಕಷ್ಟಪಟ್ಟು ದುಡಿದ ಬಹುತೇಕ ಹಣವನ್ನೆಲ್ಲ ಅವರು ವೈಜ್ಞಾನಿಕ ಸಂಶೋಧನೆಗೆ ಕೊಡುಗೆಯಾಗಿ ನೀಡಿದ್ದಾರೆ.

ಶಾರ್ವರಿ 1974ರ ಬ್ಯಾಚ್​ನ ಐಎಎಸ್ ಅಧಿಕಾರಿ. ಸುಮಾರು 36 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ರು. ನಿವೃತ್ತಿ ಸಂದರ್ಭದಲ್ಲಿ ಅವರು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ರು. ನಿವೃತ್ತಿಯ ನಂತರ ಅವರಿಗೆ ಹೊಟ್ಟೆಯ ಕ್ಯಾನ್ಸರ್ ಇರೋದು ಗೊತ್ತಾಗಿತ್ತು. ಆರಂಭದಲ್ಲಿ ಕ್ಯಾನ್ಸರ್​ನಿಂದ ಪಾರಾಗಲು ಶಾರ್ವರಿ ಹತ್ತಾರು ಬಗೆಯ ಚಿಕಿತ್ಸೆಗಳನ್ನು ಪಡೆದಿದ್ರು. ಆದ್ರೆ ಈ ಮಾರಕ ಖಾಯಿಲೆ ಗುಣವಾಗುವ ಲಕ್ಷಣವಿಲ್ಲ ಎಂಬುದನ್ನು ಅರಿತ ಅವರು, ತಮ್ಮ ಆಸ್ತಿಪಾಸ್ತಿಯನ್ನೆಲ್ಲ ವೈಜ್ಞಾನಿಕ ಸಂಶೋಧನೆಗೆ ಮೀಸಲಾಗಿಟ್ರು. ಮುಂಬೈನ ಅಂಧೇರಿಯಲ್ಲಿರುವ ತಮ್ಮ ಅಪಾರ್ಟ್ಮೆಂಟ್ ಅನ್ನು ಸೆಂಟರ್ ಫಾರ್ ಬ್ರೈನ್ ರಿಸರ್ಚ್ ಕೇಂದ್ರಕ್ಕೆ ಕೊಡುಗೆಯಾಗಿ ನೀಡಿದ್ರು.

ಮಹಾರಾಷ್ಟ್ರದ ಮಾಜಿ ಕಾರ್ಯದರ್ಶಿ ಚಂದ್ರ ಐಯ್ಯಂಗಾರ್, ಶಾರ್ವರಿ ಅವರ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ''ಕಿಮೋಥೆರಪಿ, ಶಸ್ತ್ರಚಿಕಿತ್ಸೆ ಸೇರಿದಂತೆ 3 ವರ್ಷಗಳ ಕಾಲ ಶಾರ್ವರಿ ಹಲವು ಬಗೆಯ ಚಿಕಿತ್ಸೆ ಪಡೆದಿದ್ದಾರೆ. ಆದ್ರೆ ಕ್ಯಾನ್ಸರ್ ವಿರುದ್ಧದ ಹೋರಾಟ ನಿರರ್ಥಕ ಅನ್ನೋದು ಅರಿವಾಗುತ್ತಿದ್ದಂತೆ ತಮ್ಮ ಆಸ್ತಿಯ ಸದ್ಭಳಕೆ ಹೇಗೆ ಎಂಬ ಬಗ್ಗೆ ಅಧ್ಯಯನ ಮಾಡಿದ್ರು. ನನ್ನ ಹಣ ದೇಶದಲ್ಲೇ ಇರಬೇಕು, ಸಂಶೋಧನೆಗೆ ಬಳಕೆಯಾಗಬೇಕು ಎನ್ನುತ್ತಿದ್ರು''.

ಎನ್ ಜಿ ಓ ಅಥವಾ ಸಾಮಾಜಿಕ ಕಾರ್ಯಗಳಿಗೆ ಹಣವನ್ನು ದಾನವಾಗಿ ಕೊಡುವಂತೆ ಸ್ನೇಹಿತರೆಲ್ಲ ಶಾರ್ವರಿ ಅವರಿಗೆ ಸಲಹೆ ನೀಡಿದ್ರು. ಆದ್ರೆ ಹಣವನ್ನು ಸೆಂಟರ್ ಫಾರ್ ಬ್ರೈನ್ ರಿಸರ್ಚ್ ಕೇಂದ್ರಕ್ಕೇ ಕೊಡಬೇಕೆಂದು ಶಾರ್ವರಿ ದಿಟ್ಟ ನಿರ್ಧಾರ ಮಾಡಿದ್ರು. ಇದರಿಂದ ತಮ್ಮ ಹಣ ಸದ್ಭಳಕೆಯಾಗಲಿದೆ ಅನ್ನೋದು ಅವರ ನಂಬಿಕೆ. ಪುಣೆಯ ಮಾಜಿ ಪೊಲೀಸ್ ಆಯುಕ್ತರಾದ ಮೀರನ್ ಬೋರ್ವಂಕರ್ ಕೂಡ ಶಾರ್ವರಿ ಅವರೊಂದಿಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ. ''ಸಿಬಿಆರ್ ಗೆ ಆಸ್ತಿ ದಾನ ಮಾಡಬೇಕೆಂದು ಶಾರ್ವರಿ ತೀರ್ಮಾನಿಸಿದ್ದರು. ಆ ಸಂಸ್ಥೆಯಲ್ಲಿ ತಮ್ಮ ಹಣವನ್ನು ಬುದ್ಧಿವಂತಿಕೆಯಿಂದ ಬಳಸಿಕೊಳ್ಳಲಾಗುತ್ತದೆ ಎಂಬ ನಂಬಿಕೆ ಅವರಲ್ಲಿತ್ತು. ಹಾಗಾಗಿ ವಿಲ್ ಬರೆಯುವ ಮುನ್ನ ಸಾಕಷ್ಟು ಸಂಶೋಧನೆ ನಡೆಸಿದ್ದರು.''

ಆಸ್ತಿ ದಾನಕ್ಕೆ ಬೇಕಾದ ಅಗತ್ಯ ದಾಖಲೆಗಳಿಗೆಲ್ಲ ಶಾರ್ವರಿ ಸಹಿ ಮಾಡಿದ್ದರು. ಅದಾಗಿ ಕೇವಲ 6 ದಿನಗಳ ನಂತರ 2016ರ ಜನವರಿ 15ರಂದು ಅವರು ಮೃತಪಟ್ಟಿದ್ದಾರೆ. ದಾಖಲೆಗಳ ಪರಿಶೀಲನೆ ಬಳಿಕ ಆಸ್ತಿ ಸಿಬಿಆರ್ ಗೆ ಹಸ್ತಾಂತರವಾಗಲಿದೆ. ಮಾನವನ ದೇಹದ ಅತ್ಯಂತ ಸಂಕೀರ್ಣ ಅಂಗ ಎನಿಸಿಕೊಂಡಿರುವ ಮೆದುಳಿನ ಸಂಶೋಧನೆಗೆ ಶಾರ್ವರಿ ಗೋಖಲೆ ತಮ್ಮ ಆಸ್ತಿಯನ್ನೇ ದಾನ ಮಾಡಿರುವ ಬಗ್ಗೆ ಸಿಬಿಆರ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ.

ಮನುಕುಲದ ಸುಧಾರಣೆ ಮತ್ತು ವೈಜ್ಞಾನಿಕ ಸಂಶೋಧನೆಗೆ ತಾವು ದುಡಿದ ಹಣವನ್ನೆಲ್ಲ ಮೀಸಲಾಗಿಟ್ಟಿ ಶಾರ್ವರಿ ಘೋಖಲೆ ಇಡೀ ಸಮಾಜಕ್ಕೆ ಮಾದರಿ. ಸಾವಿನಲ್ಲೂ ಸಾರ್ಥಕತೆ ಮೆರೆದ ನಿಷ್ಠಾವಂತ ಅಧಿಕಾರಿ.  

ಇದನ್ನೂ ಓದಿ.. 

31 ವರ್ಷಗಳ ಬಳಿಕ ತಂದೆ ಸಾವಿಗೆ ಸಿಕ್ತು ನ್ಯಾಯ – ಎಲ್ಲರಿಗೂ ಮಾದರಿ ಐಎಎಸ್ ಅಧಿಕಾರಿಯ ಈ ಹೋರಾಟ 

ರಾಷ್ಟ್ರೀಯತೆಯ ಹೆಸರಿನಲ್ಲಿ ಸಿದ್ಧಾಂತಗಳ ಸಂಘರ್ಷ- ಕಾನೂನು ಮರೆತಿರುವ ವಿದ್ಯಾರ್ಥಿಗಳು 

Related Stories

Stories by YourStory Kannada