ನೈಸರ್ಗಿಕ ಸೌಂದರ್ಯವರ್ಧಕ ವಸ್ತುಗಳ ಉತ್ಪಾದನೆಯನ್ನೇ ಉದ್ಯಮವಾಗಿಸಿಕೊಂಡ ಶ್ರೇಯಾ ಶರಣ್‌ರ ಯಶೋಗಾಥೆ

ಟೀಮ್​​ ವೈ.ಎಸ್​.

ನೈಸರ್ಗಿಕ ಸೌಂದರ್ಯವರ್ಧಕ ವಸ್ತುಗಳ ಉತ್ಪಾದನೆಯನ್ನೇ ಉದ್ಯಮವಾಗಿಸಿಕೊಂಡ ಶ್ರೇಯಾ ಶರಣ್‌ರ ಯಶೋಗಾಥೆ

Thursday October 08, 2015,

3 min Read

ನೈಸರ್ಗಿಕ, ಸಸ್ಯಾಹಾರ, ಕೈಯಿಂದ ಮಾಡಲ್ಪಟ್ಟಿದ್ದು ಇದೆಲ್ಲವೂ ಸೇರಿದರೆ ಶ್ರೇಯಾ ಶರಣ್‌ರ ಸಂತೋಷಕ್ಕೆ ಕಾರಣ ದೊರೆಯುತ್ತದೆ.

27 ವರ್ಷದ ಶ್ರೇಯಾ, ಆರೋಗ್ಯ ಸಮಸ್ಯೆ, ಅಲರ್ಜಿ, ಚರ್ಮದ ಸಮಸ್ಯೆ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಹೀಗಾಗಿ ತಮ್ಮ ಸ್ನಾನಗೃಹ ಹಾಗೂ ದೇಹೋತ್ಪನ್ನಗಳಲ್ಲಿ ಬದಲಾವಣೆ ತರುವ ಮೂಲಕ ಆರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಬದಲಾವಣೆ ತಂದು ಆರೋಗ್ಯವೃದ್ಧಿಸಿಕೊಳ್ಳುವತ್ತ ಗಮನ ಹರಿಸಿದರು. ತಮ್ಮ ಉತ್ಪನ್ನಗಳನ್ನು ಶ್ರೇಯಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು. ಇದರಿಂದ ಉತ್ತಮ ಪ್ರತಿಕ್ರಿಯೆ ಬಂದ ಕಾರಣ, ನೈಸರ್ಗಿಕವಾಗಿ ಉತ್ಪಾದಿಸಲಾಗುವ ವಸ್ತುಗಳಿಗೆ ಮಾರುಕಟ್ಟೆ ನಿರ್ಮಿಸಲು ಶ್ರೇಯಾ ಚಿಂತಿಸಿದರು.

image


ಕೆಲಸಕ್ಕೆ ರಾಜೀನಾಮೆ ನೀಡಿದ ಬಳಿಕ ಶ್ರೇಯಾ ಸೋಪ್ ಮಾಡುವ ವಿಧಾನ, ಸ್ಕಿನ್ ಕೇರ್ ಉತ್ಪನ್ನಗಳನ್ನು ಮಾಡುವ ವಿಧಾನ ಮತ್ತು ಭಾರತದಲ್ಲಿ ಸೌಂದರ್ಯವರ್ಧಕ ಉದ್ಯಮದ ಕುರಿತು ಅಧ್ಯಯನ ಮಾಡಿದರು.

2010ರಲ್ಲಿ ಸ್ಕಿನ್ ಕೇರ್ ಉತ್ಪನ್ನಗಳ ಕುರಿತು ಆಳವಾದ ಅಭ್ಯಾಸ ಮಾಡಿದ ಶ್ರೇಯಾ ಮನೆಯಲ್ಲೇ ಉತ್ಪನ್ನಗಳನ್ನು ಮಾಡಲಾರಂಭಿಸಿದರು. ಹೀಗೆ 2012ರ ವೇಳೆಗೆ ಬರ್ಸ್ಟ್ ಆಫ್ ಹ್ಯಾಪಿನೆಸ್ ಸಂಸ್ಥೆ ರೂಪುಗೊಂಡಿತು.

ರಾಜಸ್ತಾನದ ಭೈವಾಡಿಯಲ್ಲಿ ಉತ್ಪಾದನಾ ಘಟಕ ಆರಂಭವಾಯಿತು. ಇಲ್ಲಿನ ಎಲ್ಲಾ ಉತ್ಪನ್ನಗಳು ಸಸ್ಯಾಹಾರ ಮತ್ತು ರಾಸಾಯನಿಕ ಮುಕ್ತವಾಗಿದೆ.

ಇಲ್ಲಿ ವಸ್ತುಗಳನ್ನು ಗ್ರಾಹಕರ ಬೇಡಿಕೆಯಂತೆ ಉತ್ಪಾದಿಸಲಾಗುತ್ತದೆ. ಕಾಲಕಾಲಕ್ಕೆ ತಕ್ಕಂತೆ ಗ್ರಾಹಕರಿಗೆ ಬೇಕಾದ ಉತ್ಪನ್ನಗಳ ಕುರಿತು ತಿಳಿದುಕೊಳ್ಳಲಾಗುತ್ತದೆ. ಇದರಿಂದ ಜನರು ಯಾವ ಉತ್ಪನ್ನವನ್ನು ಹೆಚ್ಚು ಬಯಸುತ್ತಿದ್ದಾರೆ ಎಂದು ತಿಳಿದುಕೊಂಡು ಅದರಂತೆ ಉತ್ಪಾದನೆ ಮಾಡಲಾಗುತ್ತದೆ ಎನ್ನುತ್ತಾರೆ ಶ್ರೇಯಾ.

ಒಂದು ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಬೇಕಾದರೆ ಅದು ಹಲವು ತಿಂಗಳು ತೆಗೆದುಕೊಳ್ಳುತ್ತದೆ. ಅದಕ್ಕೆ ಗ್ರಾಹಕರ ಬೇಡಿಕೆಯೂ ಅತ್ಯಂತ ಅಗತ್ಯವಾಗಿರುತ್ತದೆ. ನಂತರ ಉತ್ಪನ್ನಕ್ಕೆ ಅಗತ್ಯವಿರುವ ವಸ್ತುಗಳನ್ನು ಶೋಧಿಸಲಾಗುತ್ತದೆ ಎನ್ನುತ್ತಾರೆ ಶ್ರೇಯಾ. ಇದರಲ್ಲಿ, ಉತ್ಪನ್ನಕ್ಕೆ ಅಗತ್ಯವಿರುವ ವಸ್ತುಗಳು, ಎಣ್ಣೆಗಳ ಉಪಯೋಗ, ಅಗತ್ಯವಿರುವ ಸಸ್ಯಮೂಲ, ಪರಿಮಳಯುಕ್ತ ಎಣ್ಣೆಗಳ ಅಧ್ಯಯನವೂ ಸೇರುತ್ತದೆ. ಪ್ರತಿಯೊಂದೂ ಉತ್ತಮ ವಸ್ತುಗಳಿಂದ ಉತ್ಪನ್ನವನ್ನು ತಯಾರಿಸುವವರಿಗೆ ಶಹಬ್ಬಾಸ್ ಗಿರಿ ನೀಡುವ ಮೂಲಕ ಉತ್ಪನ್ನವನ್ನು ಅತ್ಯುತ್ತಮ ಮಟ್ಟಕ್ಕೇರಿಸುವಂತೆ ಕಾರ್ಯನಿರ್ವಹಿಸಲು ಪ್ರೇರೇಪಿಸಲಾಗುತ್ತದೆ. ಹೀಗೆ ತಯಾರಾದ ಉತ್ಪನ್ನವನ್ನು ಬೇರೆ ಬೇರೆ ಕಾಲಗಳಿಗೆ ಅನ್ವಯಿಸಿ ಪರೀಕ್ಷಿಸಲಾಗುತ್ತದೆ. ಯಾವುದೇ ರಾಸಾಯನಿಕ ವಸ್ತುಗಳನ್ನು ಬಳಸದ ಕಾರಣ, ಕಾಲ ಬದಲಾದಂತೆ ಉತ್ಪನ್ನವೂ ತನ್ನ ಗುಣವನ್ನು ಬದಲಿಸಿಕೊಳ್ಳುತ್ತದೆ. ಈ ಉತ್ಪನ್ನಗಳನ್ನು ಸ್ವಯಂ ಸೇವಕರು, ಕುಟುಂಬಸ್ಥರು, ಸ್ನೇಹಿತರಿಗೆ ನೀಡಿ ಅವರಿಂದ ಪ್ರತಿಕ್ರಿಯೆ ಪಡೆದು ಉತ್ಪನ್ನವನ್ನು ಉತ್ತಮಗೊಳಿಸುವ ಕುರಿತು ಚಿಂತಿಸಲಾಗುತ್ತದೆ ಎನ್ನುತ್ತಾರೆ ಶ್ರೇಯಾ. ಹಳೇ ಕಾಲದ ಹಾಗೂ ಆಯುರ್ವೇದಿಕ್ ಉತ್ಪನ್ನಗಳಿಂದಲೂ ಸ್ಪೂರ್ತಿ ಪಡೆದು ಉತ್ಪನ್ನಗಳನ್ನು ಮಾಡಲಾಗುತ್ತದೆ ಎನ್ನುತ್ತಾರೆ ಶ್ರೇಯಾ.

image


ಪರಿಮಳಯುಕ್ತ ಎಣ್ಣೆಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ ಶ್ರೇಯಾ.ಈ ಎಣ್ಣೆಗಳನ್ನು ಪರಿಮಳದ್ರವ್ಯವಾಗಿ ಪರಿವರ್ತಿಸಲು ಶ್ರೇಯಾಗೆ ಬಹಳಾ ಇಷ್ಟ. ಆದರೆ ಈ ಎಣ್ಣೆಗಳನ್ನು ಸ್ಕಿನ್ ಕೇರ್ ಉತ್ಪನ್ನಗಳಿಗೆ ಬಳಸಿಕೊಳ್ಳುವಾಗ ಯಾವ ಕಾರಣದಿಂದ ಉತ್ಪನ್ನ ಮಾಡಲಾಗುತ್ತಿದೆಯೋ ಆ ಉತ್ಪನ್ನಕ್ಕೆ ಎಣ್ಣೆ ಹೊಂದಿಕೊಳ್ಳುವುದು ಬಹಳ ಮುಖ್ಯ. ಈ ಕುರಿತು ವಿವರವಾಗಿ ಪರಿಶೀಲಿಸಬೇಕಾದ ಅಗತ್ಯವೂ ಇದೆ. ರೂಮ್ ಫ್ರೆಶನರ್, ಪರ್‌ಫ್ಯೂಮ್‌ಗಳು, ಡಿಯೋಡ್ರೆಂಟ್‌ಗಳಂತಹ ವಸ್ತುಗಳಿಂದ ಶ್ರೇಯಾಗೆ ಸದಾ ಅಲರ್ಜಿಯಾಗುತ್ತಿತ್ತು. ಹೀಗಾಗಿ ಉತ್ಪನ್ನಗಳನ್ನು ಮಾಡುವಾಗ ಶ್ರೇಯಾ ಬಹಳಷ್ಟು ಎಚ್ಚರಿಕೆ ವಹಿಸುತ್ತಾರೆ.

ಸ್ನೇಹಿತರು ಹಾಗೂ ಕುಟುಂಬ ಸದಸ್ಯರು ಇವರಿಗೆ ಸಹಕಾರ ನೀಡುತ್ತಾರೆ. ಕೆಲಸ ಹೆಚ್ಚಿದ್ದಾಗ ಸೋಪ್ ಕಟ್ಟಿಂಗ್, ಪ್ಯಾಕೇಜಿಂಗ್, ಲೇಬಲಿಂಗ್ ಮತ್ತು ಬೇಡಿಕೆಗಳನ್ನು ನಿಗದಿತ ಸಮಯದಲ್ಲಿ ಪೂರೈಸಲು ಸಹಕಾರ ನೀಡುತ್ತಾರೆ. ವೆಬ್‌ಸೈಟ್ ಪ್ರೊವೈಡರ್ ಮತ್ತು ಕೆಲ ಟೆಕ್ಕಿ ಸ್ನೇಹಿತರು ಶ್ರೇಯಾರಿಗೆ ಸಂಪೂರ್ಣ ಸಹಕಾರ ನೀಡುತ್ತಾರೆ.

ಶ್ರೇಯಾ ಉದ್ಯಮ ಯಾತ್ರೆಯಲ್ಲಿ ಹಲವು ಸವಾಲುಗಳನ್ನು ಶ್ರೇಯಾ ಎದುರಿಸಿದ್ದಾರೆ. ಈಗಾಗಲೇ ಉದ್ಯಮದಲ್ಲಿ ತಮ್ಮದೇ ಆದ ಹೆಜ್ಜೆಗುರುತನ್ನು ಮೂಡಿಸಿದ್ದಾರೆ ಶ್ರೇಯಾ. ಎಲ್ಲವನ್ನೂ ಸ್ವಂತವಾಗಿಯೇ ಮಾಡಿದ್ದಾರೆ. ತಮ್ಮ ಕೆಲಸಗಳನ್ನು ಹೊರಗುತ್ತಿಗೆ ಪಡೆಯುವ ಜನರನ್ನು ಹುಡುಕುವುದು ಅತ್ಯಂತ ದೊಡ್ಡ ಕೆಲಸ. ಇದಲ್ಲದೇ ಅಗತ್ಯ ನ್ಯಾಯಬದ್ಧ ಮಾಹಿತಿಯನ್ನು ಪಡೆಯುವಲ್ಲಿಯೂ ಅನೇಕ ಸವಾಲುಗಳನ್ನು ಎದುರಿಸಿದ್ದಾರೆ. ಸಂಶೋಧನಾತ್ಮಕ, ಅನುಭವವಿರುವ ಇತರ ವ್ಯಕ್ತಿಗಳ ಮಾರ್ಗದರ್ಶನ ಮತ್ತು ಅಧಿಕಾರಿಗಳ ಮೂಲಕ ಸರಿಯಾದ ದಾರಿಯಲ್ಲಿ ನಡೆಯಬೇಕಾದ ಅಗತ್ಯ ಇರುತ್ತದೆ.

ಪುಣೆಯಲ್ಲಿ ತಮ್ಮ ಮನೆ ಇದೆ ಎಂದು ಹೇಳಿಕೊಳ್ಳುವ ಶ್ರೇಯಾ ದೇಶದ ಹಲವು ದೊಡ್ಡ ಹಾಗೂ ಸಣ್ಣ ನಗರಗಳಲ್ಲಿ ವಾಸಿಸಿದ್ದಾರೆ. ಪುಣೆಯ ಫರ್ಗ್ಯುಸನ್ ಕಾಲೇಜ್‌ನಲ್ಲಿ ಅರ್ಥಶಾಸ್ತ್ರ ವಿಚಾರದಲ್ಲಿ ಬಿಎ ಮಾಡಿದ್ದಾರೆ. ಅಲ್ಲದೇ ಮುಂಬೈನ ಕ್ಸೇವಿಯರ್ ಇನ್ಸಿಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಸಂಸ್ಥೆಯಲ್ಲಿ ಜಾಹೀರಾತು ಮತ್ತು ಮಾರ್ಕೆಟಿಂಗ್ ವಿಚಾರದಲ್ಲಿ ಪಿಜಿಡಿಎಂ ಮತ್ತು ಪುಣೆಯ ಸಿಂಬಿಯೋಸಿಸ್ ಇನ್ಸಿಟಿಟ್ಯೂಟ್​ನಲ್ಲಿ ಮ್ಯಾನೇಜ್‌ಮೆಂಟ್‌ ಸ್ಟಡೀಸ್ ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.

ಈ ಮಧ್ಯದಲ್ಲಿ ಜಾಹೀರಾತು ವಿಭಾಗದಲ್ಲಿ ಕಾರ್ಯನಿರ್ವಹಿಸಿರುವ ಶ್ರೇಯಾ ಕೆಲ ಈವೆಂಟ್ ಮ್ಯಾನೇಜ್ ಮೆಂಟ್ ಕಾರ್ಯಗಳನ್ನೂ ಮಾಡಿದ್ದಾರೆ. ಎಂಬಿಎ ಮಾಡುತ್ತಿದ್ದಾಗ ತಮ್ಮ ಪ್ರೇಮಿಯೊಂದಿಗೆ ವಿವಾಹವಾದರು. ಕಾರ್ಪೋರೇಟ್ ಸಂಸ್ಥೆಯ ಉದ್ಯೋಗವನ್ನು ನಿರಾಕರಿಸಿದ ಅವರು ಪತಿಯೊಂದಿಗೆ ಪಂಜಾಬ್‌ನ ಸಣ್ಣ ನಗರಕ್ಕೆ ತೆರಳಿದರು.

ಹೃದಯಾಂತರಾಳದಲ್ಲಿ ತಮ್ಮೊಳಗೊಬ್ಬ ಜಿಪ್ಸಿಯ ಇರುವಿಕೆಯನ್ನು ಗುರುತಿಸಿರುವ ಅವರು ಕೆಲ ತಿಂಗಳಿಗೊಮ್ಮೆ ಹೊಸ ಜಾಗಗಳಿಗೆ ಭೇಟಿ ನೀಡುತ್ತಿರುತ್ತಾರೆ. ಪತಿಯೊಂದಿಗೆ ಹೊಸ ಜಾಗಗಳಿಗೆ ಭೇಟಿ ನೀಡಲು ಅವರು ಇಷ್ಟಪಡುತ್ತಾರೆ.

ಚೆರ್ರಿ ಬ್ಲೇರ್ ವುಮೆನ್ ಮೆಂಟರಿಂಗ್(ಸಣ್ಣ ಉದ್ಯಮಗಳನ್ನು ನಡೆಸುವ ಮಹಿಳೆಯರಿಗಾಗಿ ಇರುವ ಕಾರ್ಯಕ್ರಮ) ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ ಶ್ರೇಯಾ. ತಮ್ಮ ಕಾಯಕದಿಂದ ಉತ್ತಮ ಸಾಮಾಜಿಕ ಪರಿಣಾಮವನ್ನು ತರುವುದು ಹಾಗೂ ಸಣ್ಣ ಆದಾಯವಿರುವ ಮಹಿಳೆಯರಿಗೆ ತಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡುವುದು ಶ್ರೇಯಾರ ಉದ್ದೇಶ. ಈ ಮಹಿಳೆಯರು ಉತ್ಪನ್ನಗಳನ್ನು ತಯಾರಿಸುವ ತಂತ್ರಜ್ಞಾನವನ್ನು ಬಹಳ ಬೇಗ ಕಲಿಯುತ್ತಾರೆ. ಆದರೆ ಉತ್ಪನ್ನದ ಲೇಬಲ್‌ಗಳು, ಮತ್ತು ಇಂಗ್ಲೀಷ್‌ನಲ್ಲಿ ದಾಖಲೆಗಳ ನಿರ್ವಹಣೆ ಇವರಿಂದ ಸಾಧ್ಯವಿಲ್ಲ. ಹೀಗಾಗಿ ಅವರದೇ ಕಾರ್ಯವಿಧಾನವನ್ನು ಅನುಸರಿಸಲು ಅವರಿಗೆ ಸ್ವಾತಂತ್ರ್ಯ ನೀಡಲಾಗುತ್ತದೆ. ಅಲ್ಲದೇ ಅವರಿಗೆ ಕಂಪ್ಯೂಟರ್ ಶಿಕ್ಷಣವನ್ನೂ ಸಹ ನೀಡಲಾಗುತ್ತಿದೆ.

25ರಿಂದ35 ವರ್ಷ ವಯೋಮಾನದವರು, ಅವಿವಾಹಿತರು, ಮದುವೆಗೆ ಸಿದ್ಧರಾಗಿರುವವರು, ಹೊಸತಾಗಿ ಮದುವೆಯಾದವರು ಇಲ್ಲವೇ ಮೊದಲ ಬಾರಿ ತಾಯಿಯಾದವರು ಇವರೆಲ್ಲಾ ಶ್ರೇಯಾ ಗ್ರಾಹಕರು.

ಶ್ರೇಯಾರ ಸಂಸ್ಥೆಯಲ್ಲಿ ಉತ್ಪಾದಿಸಲಾಗುವ ಉತ್ಪನ್ನಗಳು ಗ್ರಾಹಕರಿಗೆ ಹೇಗೆ ಪ್ರಯೋಜನಕಾರಿಯಾಗಿದೆ ಅಥವಾ ಅವರ ಕುಟುಂಬಸ್ಥರ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಎಂದು ಹೇಳಿದಾಗಲೆಲ್ಲಾ ಶ್ರೇಯಾರಿಗೆ ತುಂಬ ಸಂತೋಷವಾಗುತ್ತದೆ. ಇದು ಅವರು ಇನ್ನಷ್ಟು ಮುಂದುವರೆಯಲು ಸಹಕಾರಿಯಾಗಿದೆ. ಶೀಘ್ರದಲ್ಲೇ ಮಕ್ಕಳ ಉತ್ಪನ್ನಗಳನ್ನು ಬಿಡುಗಡೆ ಮಾಡಲಿದ್ದಾರೆ ಶ್ರೇಯಾ. ಅಲ್ಲದೇ ಉತ್ಪಾದನೆಯನ್ನು ಹೆಚ್ಚಿಸಲು ಪುಣೆಯಲ್ಲಿ ಘಟಕವೊಂದನ್ನು ತೆರೆಯಲೂ ಸಹ ಚಿಂತಿಸುತ್ತಿದ್ದಾರೆ.