ಹೆಲಿಕಾಪ್ಟರ್ ವಿನ್ಯಾಸಕಿ, ಸಾರಸ್ವತ ಲೋಕದ ಸಾಧಕಿ.. ಗಂಡುಮೆಟ್ಟಿದ ನೆಲದ ದಿಟ್ಟ ವನಿತೆ ನೇಮಿಚಂದ್ರ  

ವಿಶ್ವಾಸ್​ ಭಾರದ್ವಾಜ್​

0

ಮನೆಯ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿ ಕುಟುಂಬದ ಇಷ್ಟ ಕಷ್ಟಗಳಿಗೆ ತನ್ನ ಕನಸುಗಳನ್ನು ತ್ಯಾಗ ಮಾಡಿ ಬದುಕುತ್ತಿದ್ದ ಹೆಣ್ಣು, ಇಂದು ಚಂದ್ರಲೋಕಕ್ಕೆ ಕಾಲಿಟ್ಟಿದ್ದಾಳೆ. ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವನಿತೆ ತಾನು ಪುರುಷರಿಗೆ ಸರಿಸಮ ಎನ್ನುವುದನ್ನು ಮತ್ತೆ ಸಾರಿ ಸಾರಿ ಹೇಳ್ತಿದ್ದಾಳೆ. ವೃತ್ತಿ ಹಾಗೂ ಪ್ರವೃತ್ತಿಯನ್ನು ಸರಿಯಾಗಿ ತೂಗಿಸಿಕೊಂಡು ಹೋಗಬಲ್ಲ ಹಲವು ಮಹಿಳಾ ಸಾಧಕಿಯರು ನಮ್ಮಲ್ಲಿದ್ದಾರೆ.

ಹಾಗೇ ಗಮನಾರ್ಹ ಸಾಧನೆ ಮಾಡಿರುವವರಲ್ಲಿ ಕರ್ನಾಟಕದ ಯಶಸ್ವಿ ಮಹಿಳೆ ಪ್ರಸಿದ್ಧ ಲೇಖಕಿ ನೇಮಿಚಂದ್ರ ಕೂಡಾ ಒಬ್ಬರು. ಕನ್ನಡದ ವೈಶಿಷ್ಟ್ಯ ಪೂರ್ಣ, ಸಣ್ಣಕಥೆ, ಕಾದಂಬರಿ ಹಾಗೂ ವಿಚಾರಪೂರ್ಣ ಲೇಖನಗಳ ಮೂಲಕ ಹೆಸರಾದ ಮಹಿಳಾ ಬರಹಗಾರ್ತಿ ನೇಮಿಚಂದ್ರ. ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿರುವ ನೇಮಿಚಂದ್ರ, ಕನ್ನಡದಲ್ಲಿ ಚಿಂತನಪೂರ್ಣ ಲೇಖನಗಳನ್ನು ಹಾಗೂ ಪುಸ್ತಕಗಳನ್ನು ಬರೆಯುತ್ತಿದ್ದಾರೆ. ನೇಮಿಚಂದ್ರ ಜನಿಸಿದ್ದು 7 ಸುತ್ತಿನ ಕೋಟೆ ಇರುವ ಗಂಡುಮೆಟ್ಟಿದ ನೆಲ ಚಿತ್ರದುರ್ಗದಲ್ಲಿ, ಜುಲೈ ೧೬, ೧೯೫೯ರಲ್ಲಿ. ಇವರ ತಂದೆ ಪ್ರೊಫೆಸರ್ ಜಿ. ಗುಂಡಣ್ಣ ಹಾಗೂ ತಾಯಿ ತಿಮ್ಮಕ್ಕ.

ನೇಮಿಚಂದ್ರರ ಪ್ರಾರಂಭಿಕ ಶಿಕ್ಷಣ ಮುಗಿದಿದ್ದು ತುಮಕೂರು ಹಾಗೂ ಮೈಸೂರಿನಲ್ಲಿ. ಮೈಸೂರಿನ ನ್ಯಾಷನಲ್ ಇನ್ಸ್​ಟಿಟ್ಯೂಟ್​ ಆಫ್​ ಎಂಜನಿಯರಿಂಗ್ನಲ್ಲಿ ಬಿ.ಇ. ಪದವಿ ಪಡೆದ ಅವರು, ಬೆಂಗಳೂರಿನ ಇಂಡಿಯನ್ ಇನ್ಸ್​ಟಿಟ್ಯೂಟ್​ ಆಫ್ ಸೈನ್ಸ್​ನಲ್ಲಿ ಎಂ.ಎಸ್ ಪದವಿ ಗಳಿಸಿದರು. ಕಲಿಕೆ ಮುಗಿದ ನಂತರ ಉದ್ಯೋಗಕ್ಕಾಗಿ ಸೇರಿದ್ದು ಹಿಂದೂಸ್ಥಾನ್ ಕಾರ್ಖಾನೆ. ಬೆಂಗಳೂರಿನ ಎಚ್.ಎ.ಎಲ್ ಸಂಸ್ಥೆಯಲ್ಲಿ ಉನ್ನತ ತಂತ್ರಜ್ಞ ಅಧಿಕಾರಿಯಾಗಿ ನೇಮಿಚಂದ್ರ ಹಲವು ವರ್ಷಗಳ ಕಾಲ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಹೆಲಿಕಾಪ್ಟರ್ ಡಿಸೈನ್ ಬ್ಯೂರೊದಲ್ಲಿ ಮುಖ್ಯ ವ್ಯವಸ್ಥಾಪಕಿಯಾಗಿ ಕಾರ್ಯ ನಿರ್ವಹಿಸಿದ್ದು ನೇಮಿಚಂದ್ರರ ಅಸಾಧಾರಣ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ.

ಇದನ್ನೂ ಓದಿ...

ಹಳೆಯ ಅಮೂಲ್ಯ ವಸ್ತುಗಳಿಗೆ ಸಖತ್​ ರೇಟ್​..!

1976ರಲ್ಲಿ ಎಂಜಿಯರಿಂಗ್ ಮುಗಿಸಿದ ನೇಮಿಚಂದ್ರ ಪುರುಷರ ಕಾರ್ಯ ಪ್ರಪಂಚದೊಳಗೆ ನಿರ್ಭೀತಿಯಿಂದ ಕಾಲಿಟ್ಟ ದಿಟ್ಟ ಮಹಿಳೆ. ಮೈಸೂರಿನ ನ್ಯಾಷನಲ್ ಇನ್ಸ್​ಟಿಟ್ಯೂಟ್​ ಆಫ್ ಎಂಜಿನಿಯರಿಂಗ್ನಲ್ಲಿ ನೇಮಿಚಂದ್ರ ಕಲಿಯುತ್ತಿದ್ದಾಗ ಅಲ್ಲಿದ್ದಿದ್ದು ಕೇವಲ ಮೂವರು ಮಹಿಳೆಯರು. ಆದ್ರೆ ನೇಮಿಚಂದ್ರ ಪುರುಷ ವಿದ್ಯಾರ್ಥಿಗಳಿಗೆ ಸವಾಲೊಡ್ಡಿ ವಿಶ್ವವಿದ್ಯಾನಿಲಯಕ್ಕೇ ಮೊದಲ ಶ್ರೇಣಿಯಲ್ಲಿ ಪಾಸಾದ್ರು. ನೇಮಿಚಂದ್ರ ಉನ್ನತ ವ್ಯಾಸಂಗ ಮುಗಿಸುವ ಸಂದರ್ಭದಲ್ಲಿ ಭಾರತದಲ್ಲಿ ಮಹಿಳಾ ವಿಜ್ಞಾನಿ, ವಿಮಾನ ಚಾಲಕಿ, ಸಂಶೋಧಕಿ, ಅಥವಾ ಮಹಿಳಾ ಎಂಜಿನಿಯರ್ಗಳು ಇರಲೇ ಇಲ್ಲ. 20ನೇ ಶತಮಾನದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಮುಗಿಸಿ ಕಾರ್ಯಸಾಧನೆ ನಿರ್ವಹಿಸಿದ ಕೆಲವೇ ಭಾರತೀಯ ಸಾಧಕಿಯರಲ್ಲಿ ನಮ್ಮ ಕನ್ನಡದ ನೇಮಿಚಂದ್ರ ಅವರೂ ಒಬ್ಬರು. ಸಂವೇದನಾ ಸೂಕ್ಷ್ಮತೆ, ಸಂಯಮ, ಇವು ನೇಮಿಚಂದ್ರರ ವ್ಯಕ್ತಿತ್ವದ ಸೂಚಕಗಳು ಅನ್ನುವ ಮಾತಿದೆ. ತಮ್ಮ ಬದುಕು, ವೃತ್ತಿ, ಬರವಣಿಗೆ, ಸಾಧನೆಗಳಿಂದ ಈ ಮಾತು ಸತ್ಯವೆಂದು ನೇಮಿಚಂದ್ರ ಸಾಬೀತು ಮಾಡಿದ್ದಾರೆ.

ನೇಮಿಚಂದ್ರ ಕಳೆದ ಮೂರು ದಶಕಗಳಿಂದ ಕನ್ನಡ ಸಾರಸ್ವತ ಲೋಕಕ್ಕೆ ಸೃಜನಪೂರ್ಣ ಬರಹಗಳನ್ನು ನೀಡುತ್ತಾ ಬಂದಿದ್ದಾರೆ. ‘ನೇಮಿಚಂದ್ರರ ಕಥೆಗಳು’ ಕನ್ನಡದ ಸಾಹಿತ್ಯಾಭಿಮಾನಿಗಳು ಇಷ್ಟಪಟ್ಟ ದೊಡ್ಡ ಕಥಾ ಸಂಕಲನ. ನಮ್ಮ ಕನಸುಗಳಲ್ಲಿ ನೀವಿದ್ದೀರಿ, ಮತ್ತೆ ಬರೆದ ಕಥೆಗಳು, ಕಳೆಯ ಬೇಕಿದೆ ನಿನ್ನ ಜೊತೆಯಲಿ ಒಂದು ಶ್ಯಾಮಲ ಸಂಜೆ ಮುಂತಾದ ಬಿಡಿ ಕಥಾ ಸಂಕಲನಗಳು ಕನ್ನಡದ ಓದುಗರನ್ನು ಅಪಾರವಾಗಿ ಆಕರ್ಷಿಸಿವೆ. ವಿಜ್ಞಾನದ ವಸ್ತುಗಳನ್ನು ಒಳಗೊಂಡ ಅವರ ಕಥಾ ಮಾದರಿ ಕನ್ನಡ ಸಾಹಿತ್ಯ ಲೋಕಕ್ಕೇ ಹೊಸ ಮೆರುಗು ತಂದಿದೆ.

ಯಾವುದೇ ಕಥಾ ವಸ್ತುವನ್ನು ನಿರೂಪಿಸುವಾಗ ಅದರ ಹಿನ್ನೆಲೆಯನ್ನು ಅತ್ಯಂತ ಸನಿಹದಲ್ಲಿ ಅನುಭವಿಸಿ ಬರೆಯುವುದು ನೇಮಿಚಂದ್ರರ ಬರವಣಿಗೆಯ ವಿಶೇಷತೆ. ಅವರು ನಡೆಸಿದ ತಿರುಗಾಟ ಮತ್ತು ಅಭಿವ್ಯಕ್ತಿಸಿರುವ ರೀತಿ ಅಚ್ಚರಿ ಹುಟ್ಟಿಸುವಂತದ್ದು. ಕನ್ನಡಿಗರ ಮನಸಿನಲ್ಲಿ ಅಚ್ಚಳಿಯದೇ ನೆಲೆಗೊಂಡಿರುವ ನೇಮಿಚಂದ್ರರ ‘ಯಾದ್ ವಶೇಮ್’ ಕಾದಂಬರಿ ಇದಕ್ಕೆ ಸೂಕ್ತ ನಿದರ್ಶನ. ಮಹಾಯುದ್ಧ ಕಾಲದ ಹಿನ್ನೆಲೆಯನ್ನು ಇಟ್ಟುಕೊಂಡು ಚಿತ್ರಿತವಾಗಿರುವ ಕಾದಂಬರಿಯೇ ಯಾದ್ ವಶೇಮ್..

ಈ ಕಾದಂಬರಿಯಲ್ಲಿ ಕಥಾನಾಯಕಿ ಹುಡುಗಿ ಜರ್ಮನ್ ನಾಜಿ ರಾಕ್ಷಸರ ಕೈಯಿಂದ ತಪ್ಪಿಸಿಕೊಂಡು ಬೆಂಗಳೂರಿಗೆ ಬಂದವಳಾಗಿರುತ್ತಾಳೆ. ತನ್ನ ಕಳೆದುಹೋದ ಕುಟುಂಬವನ್ನು ಅರಸುತ್ತ ಹೊರಟ ಈ ಹುಡುಗಿ ಜರ್ಮನಿ, ಅಮೆರಿಕವನ್ನು ಸುತ್ತಿ, ಕಡೆಗೆ ಯುದ್ಧಗ್ರಸ್ಥವಾದ ಇಸ್ರೇಲ್-ಪ್ಯಾಲೆಸ್ತೇನ್ಗೆ ಬರುತ್ತಾಳೆ. ಓದುಗರಿಗೆ ಇಲ್ಲಿನ ವಾತಾವರಣವನ್ನು ಕಣ್ಣಿಗೆ ಕಟ್ಟುವಂತೆ ನೇಮಿಚಂದ್ರ ಕಟ್ಟಿಕೊಡುತ್ತಾರೆ. ಅವರ ಈ ಓದಿಸಿಕೊಂಡು ಹೋಗುವ ರೋಚಕ ನಿರೂಪಣಾ ಶೈಲಿಯೇ ವಿಭಿನ್ನ. ಇದಕ್ಕಾಗಿ ನೇಮಿಚಂದ್ರರು ಯುದ್ಧಕ್ಕೆ ಸಂಬಂಧಿಸಿದ ಎಲ್ಲಾ ದೇಶಗಳೂ ಹಾಗೂ ಸ್ಥಳಗಳಿಗೆ ಅಲೆದಿದ್ದಾರೆ.

ನೇಮಿಚಂದ್ರರ ವೈಜ್ಞಾನಿಕ ಬರಹಗಳಲ್ಲಿ ಜೀವನ ಚರಿತ್ರೆಗಳು ವಿಶೇಷವಾಗಿವೆ. ಮೇರಿ ಕ್ಯೂರಿ, ವೆಲ್ಲೂರು ಆಸ್ಪತ್ರೆಯ ಸಂಸ್ಥಾಪಕ ಡಾ.ಇದಾಸ್ಕಡರ್, ಥಾಮಸ್ ಆಲ್ವ ಎಡಿಸನ್, ನೊಬೆಲ್ ವಿಜೇತ ಮಹಿಳೆಯರು, ಮಹಿಳಾ ವಿಜ್ಞಾನಿಗಳು ಮುಂತಾದ ಜನಪ್ರಿಯ ಪುಸ್ತಕಗಳನ್ನು ನೇಮಿಚಂದ್ರ ಬರೆದಿದ್ದಾರೆ. ನೇಮಿಚಂದ್ರರ ವೈವಿಧ್ಯಪೂರ್ಣ ಹಾಗೂ ಚಿಂತನಶೀಲ ಮನಸ್ಸು ಸಾಮಾಜಿಕ ಚಿಂತನೆಗಳಲ್ಲಿಯೂ ಗಮನಾರ್ಹ ಪಾತ್ರ ನಿರ್ವಹಿಸಿವೆ. ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು ಅನ್ನುವುದು ನೇಮಿಚಂದ್ರರ ಪರಿಪೂರ್ಣ ಕೃತಿ. ನನ್ನ ಕಥೆ-ನಮ್ಮ ಕಥೆ ಎಂಬುದು ಮಹಿಳೆಯೊಬ್ಬಳು ಮನೆಯಲ್ಲಿನ ದೌರ್ಜನ್ಯದ ವಿರುದ್ಧ ಬಂಡೇಳುವ ಕಥೆಯೊಂದರ ಅನುವಾದ.

ಹೇಮಲತಾ ಮಹಿಷಿ ಅವರೊಡನೆ ನೇಮಿಚಂದ್ರ ನಿರೂಪಿಸಿರುವ ಕೃತಿಯೇ ‘ನ್ಯಾಯಕ್ಕಾಗಿ ಕಾದ ಭಾಂವ್ರಿ ದೇವಿ’.. ಸಮಾಜದ ರಾಕ್ಷಸೀಯ ದೌರ್ಜನ್ಯಕ್ಕೆ ಬಲಿಯಾದ ಭಾಂವ್ರಿ ದೇವಿ ನ್ಯಾಯಕ್ಕಾಗಿ ಕಾದು ಕುಳಿತ ಕಥೆ ಕ್ರೌರ್ಯ ಸಾಮ್ರಾಜ್ಯದ ಕರಾಳತೆಯನ್ನು ಅನಾವರಣಗೊಳಿಸುತ್ತದೆ. ನೇಮಿಚಂದ್ರ ಅನೇಕ ಸಾಧಕರ ಜೀವನ ಚರಿತ್ರೆಗಳನ್ನು ಪದಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಸ್ವಾತಂತ್ರ ಪೂರ್ವದ ಕನ್ನಡದ ಮಹಾನ್ ಕವಯತ್ರಿ ಬೆಳಗೆರೆ ಜಾನಕಮ್ಮರ ಬದುಕು ನೇಮಿಚಂದ್ರರ ಸಂಪಾದಿತ ಬರಹ, ನೋವಿಗದ್ದಿದ ಕುಂಚ- ಪ್ರಸಿದ್ಧ ಚಿತ್ರಕಾರ ವ್ಯಾನ್ ಗೋ ಜೀವನ ಚಿತ್ರ, ಬೆಳಕಿಗೊಂದು ಕಿರಣ ಮೇರಿ ಕ್ಯೂರಿ, ಥಾಮಸ್ ಆಲ್ವಾ ಎಡಿಸನ್, ಡಾ.ಈಡಾ ಸ್ಕಡರ್, ನನ್ನ ಕಥೆ- ನಮ್ಮ ಕಥೆ, ಮಹಿಳಾ ವಿಜ್ಞಾನಿಗಳು ಸಾಧನೆಯನ್ನು ಬಿಂಬಿಸುವ ಕಾಲು ಹಾದಿಯ ಕೋಲ್ಮಿಂಚುಗಳು, ಇತ್ಯಾದಿ ಪುಸ್ತಕಗಳು ಅವರ ನಿರಂತರ ಸಾಹಿತ್ಯ ಕೃಷಿಯ ಸಾಕ್ಷಿಯ ಕುರುಹುಗಳು.

ಒಂದು ಕನಸಿನ ಪಯಣ ಹಾಗೂ ಪೆರುವಿನ ಪವಿತ್ರ ಕಣಿವೆಯಲ್ಲಿ ನೇಮಿಚಂದ್ರ ಬರೆದಿರುವ ಅತ್ಯುತ್ತಮ ಪ್ರವಾಸ ಕಥನ ಬರವಣಿಗೆ. ಇದರ ಜೊತೆಗೆ ಸಾಹಿತ್ಯ ಮತ್ತು ವಿಜ್ಞಾನ ನೇಮಿಚಂದ್ರರ ವೈಜ್ಞಾನಿಕ ಬರಹಗಳು. ಬದುಕು ಬದಲಿಸಬಹುದು ಅನ್ನುವುದು ಅವರ ಅಂಕಣ ಸಂಗ್ರಹ, ದುಡಿವ ಹಾದಿಯಲಿ ಜೊತೆಯಾಗಿ ಅನ್ನುವುದು ಕೇವಲ ದುಡಿವ ದಂಪತಿಗಳಿಗಾಗಿಯೇ ಬರೆದಿರುವ ಕೃತಿ, ಮಹಿಳಾ ಅಧ್ಯಯನ, ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ಸ್, ನಿಮ್ಮ ಮನೆಗೊಂದು ಕಂಪ್ಯೂಟರ್ ಮುಂತಾದವುಗಳು ಇನ್ನಿತರೆ ವೈಜ್ಞಾನಿಕ ಕೃತಿಗಳು. ಮಹಿಳಾ ಲೋಕ ನೇಮಿಚಂದ್ರರ ಇನ್ನೊಂದು ಪ್ರಮುಖ ಸಂಪಾದಿತ ಕೃತಿ.

ಸಾಹಿತ್ಯ ಹಾಗೂ ಪ್ರವಾಸ ನೇಮಿಚಂದ್ರರ ಅಚ್ಚುಮೆಚ್ಚಿನ ಪ್ರವೃತ್ತಿ. ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ, ಅಚಲಾ ಅನ್ನುವ ಮಹಿಳಾ ಅಧ್ಯಯನ ಮಾಸಪತ್ರಿಕೆಯ ಸಂಪಾದಕೀಯ ಮಂಡಲಿಯ ಸದಸ್ಯೆಯಾಗಿ ನೇಮಿಚಂದ್ರ ಕೆಲವು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ನೆರವು ಅನ್ನುವ ಜಾಗೃತಿ ಮಹಿಳಾ ಅಧ್ಯಯನ ಕೇಂದ್ರದ ಮೂಲಕ ಹಿತರಕ್ಷಣಾ ವೇದಿಕೆಗಳ ನಿಕಟ ಸಂಪರ್ಕ ಮತ್ತು ಒಡನಾಟ ಸಂಪಾದಿಸಿದ್ದಾರೆ. ವಿಜ್ಞಾನ, ಸಾಹಿತ್ಯ, ಮಹಿಳಾ ಅಧ್ಯಯನ ಕುರಿತಂತೆ ನೇಮಿಚಂದ್ರರ ಹಲವಾರು ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ನೇಮಿಚಂದ್ರರ ವೈಚಾರಿಕ ಬರವಣಿಗೆಗಳ ವಿಶಾಲತೆ, ಆಳ, ಬದುಕಿನ ಕುರಿತಾದ ವಿಶಾಲ ದೃಷ್ಟಿಗಳನ್ನು ಅಭಿವ್ಯಕ್ತಿ ಪಡಿಸುತ್ತವೆ. ನೇಮಿಚಂದ್ರ ತರಂಗ ಸೇರಿದಂತೆ ಕರುನಾಡಿನ ಅನೇಕ ನಿಯತ ಕಾಲಿಕೆಗಳಲ್ಲಿ ಆಗಾಗ ಸಂದರ್ಶನ ಲೇಖನಗಳ ಮೂಲಕ ಓದುಗರಿಗೆ ಹತ್ತಿರವಾಗಿದ್ದಾರೆ. ಇದರೊಂದಿಗೆ ನೇಮಿಚಂದ್ರ ಉದಯವಾಣಿ ಮುಂತಾದ ಪತ್ರಿಕೆಗಳಲ್ಲಿ ಕೆಲವು ಕಾಲ ಅಂಕಣ ಬರಹಗಳನ್ನು ಬರೆದಿದ್ದಾರೆ. ನೇಮಿಚಂದ್ರರ ಬೆಳಕಿನೊಂದು ಕಿರಣ ಮೇರಿ ಕ್ಯೂರಿ ಹಾಗೂ ಪೆರುವಿನ ಪವಿತ್ರ ಕಣಿವೆಯಲ್ಲಿ ಪುಸ್ತಕಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ದೊರೆತಿದೆ. ಯಾದ್ ವಶೇಮ್ ಕಾದಂಬರಿಗೆ 2007ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಲಭಿಸಿದೆ. 2009ರಲ್ಲಿ ಈ ಕಾದಂಬರಿಗೆ ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಪ್ರತಿಷ್ಠಾನದ ಅಕ್ಕ ಪ್ರಶಸ್ತಿ ದೊರೆತಿದೆ. ಮತ್ತೆ ಬರೆದ ಕಥೆಗಳು ಕಥಾಸಂಕಲನಕ್ಕೆ ಆರ್ಯಭಟ ಪ್ರಶಸ್ತಿ, ವಿಜ್ಞಾನ ಸಾಹಿತ್ಯ, ಮಹಿಳಾ ಅಧ್ಯಯನಕ್ಕಾಗಿ ಸಂದೇಶ ಪ್ರಶಸ್ತಿ ಅರಸಿಕೊಂಡು ಬಂದಿವೆ. ಒಂದು ಕನಸಿನ ಪಯಣ ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ' ಪ್ರಶಸ್ತಿಯ ಪುರಸ್ಕಾರ ನೇಮಿಚಂದ್ರರಿಗೆ ದೊರೆತಿದೆ.

ನಮ್ಮ ನೆಲದಲ್ಲಿ ಆಗಾಗ ಅಪರೂಪದ ವಜ್ರಗಳು ಸಿಗುತ್ತವೆ, ತಮ್ಮ ಹೊಳಪಿನ ಗುಣದಿಂದ ಪ್ರತಿಫಲಿಸುತ್ತವೆ. ಅಂತಹ ಅಪೂರ್ವ ವಜ್ರಗಳು ಯಾವಾಗಲೂ ಹೊಳೆಯುತ್ತಲೇ ಇರುತ್ತವೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲೂ ನೇಮಿಚಂದ್ರರಂತಹ ಬರಹಗಾರ್ತಿಯರೂ ಅಂತಹ ವಜ್ರಗಳಂತೆ ತಮ್ಮ ವೈಚಾರಿಕ ಹಾಗೂ ಚಿಂತನಪೂರ್ಣ ಬರಹಗಳ ಮೂಲಕ ಸದಾ ಕಾಲ ಪ್ರಜ್ವಲಿಸುತ್ತಲೇ ಇರುತ್ತಾರೆ.

ಇದನ್ನೂ ಓದಿ...

ಪದ್ದತಿಯೂ ಹೌದು ವ್ಯಾಪಾರವೂ ಹೌದು

50 ರೂಪಾಯಿಗೆ ಸಿಗಲಿದೆ ಧ್ವನಿ ಪೆಟ್ಟಿಗೆ: ಪ್ರಾಯೋಗಿಕ ಪರೀಕ್ಷೆ ಯಶಸ್ವಿ