ಬೆಂಗಳೂರಿನಲ್ಲೂ ಇದೆ ತಾಜ್​ಮಹಲ್

ಎನ್​ಎಸ್​ಆರ್​

0

ವಿಶ್ವದ ಏಳು ಅದ್ಬುತಗಳಲ್ಲಿ ಆಗ್ರಾದಲ್ಲಿರುವ ಅಮೃತಶಿಲೆಯ ತಾಜ್​​ಮಹಲ್ ಕೂಡ ಒಂದು. ಈ ಪ್ರೇಮಸೌಧ ನೋಡೋಕೆ ವಿಶ್ವದ ಮೂಲೆ-ಮೂಲೆಯಿಂದ ಜನರು ಆಗಮಿಸುತ್ತಾರೆ. ಸಾಯೋದ್ರಲ್ಲಿ ಒಮ್ಮೆ ನೋಡುವಂತಹ ಸ್ಥಳ ತಾಜ್​ಮಹಲ್, ಕನ್ನಡಿಗರು ಸಹ ಈ ಅದ್ಭುತ ಪ್ರೇಮಸೌಧಕ್ಕೆ ಮನಸೋತವರು ಅನೇಕರಿದ್ದಾರೆ. ತಾಜ್ ಮುಂದೆ ಒಂದು ಪೋಸ್ ಕೊಟ್ಟು, ಅಥವಾ ಸೆಲ್ಫಿ ತೆಗೆದುಕೊಂಡು ವಾಹ್ ತಾಜ್ ಎನ್ನುವುದು ವಾಡಿಕೆ. ಆದರೆ ಅಂತಹ ತಾಜ್​ಮಹಲ್ ಇದೀಗ ಬೆಂಗಳೂರಿಗೂ ಬಂದಿದೆ. ಹೌದು ಬರೋಬ್ಬರಿ ಒಂದು ಕೋಟಿ ವೆಚ್ಚದಲ್ಲಿ ಮರದಲ್ಲಿ ನಿರ್ಮಾಣವಾದ ಈ ತಾಜ್​ಮಹಲ್, ಅರ್ಧ ಎಕರೆ ಪ್ರದೇಶದಲ್ಲಿ ತಲೆಯೆತ್ತಿದೆ. ಇದರ ಸೌಂದರ್ಯ ಈಗ ನಗರ ಜನತೆಯ ಮನಸೂರೆಗೊಳ್ತಿದೆ. ಜೊತೆಗೆ ಅನೇಕರು ಇದರ ಮುಂದೆ ಸೆಲ್ಫಿಫೋಟೋ ತೆಗೆದುಕೊಂಡು ತಮ್ಮ ಬಹುದಿನದ ಕನಸನ್ನು ಈಡೇರಿಸಿಕೊಳ್ಳುತ್ತಿದ್ದಾರೆ.

ಒಳಹೋಗುತ್ತಿದ್ದಂತೆ ಬೃಹತ್ ಗಾತ್ರದ ತಾಜ್​ಮಹಲ್.. ಮುಂಭಾಗದಲ್ಲಿ ಫತೇಘರ್ ಸಿಕ್ರಿಯ ಬುಲಂದ್ ದರ್ವಾಜಾ.. ಅದರ ಮುಂದೆ ಹರಿಯುತ್ತಿರುವ ಜಲಧಾರೆ. ಅಂದ ಹಾಗೆ ಇವೆಲ್ಲದರ ನಡುವೆ ಇರುವ ತಾಜ್​ಮಹಲ್ ಸೌಂದರ್ಯ ನೋಡ್ತಿದ್ರೆ ಆಗ್ರಾದಲ್ಲಿದ್ದೇವೇನೋ ಅನ್ಸೋದಂತು ಖಂಡಿತ. ಆದ್ರೆ ಇದು ಸಿಲಿಕಾನ್ ಸಿಟಿಯಲ್ಲಿ ನಿರ್ಮಾಣವಾದ ಮರದ ತಾಜ್​ಮಹಲ್. ನಿಜವಾದ ತಾಜ್​ಮಹಲ್ ರೆಪ್ಲಿಕಾದಂತೆ ಇದನ್ನು ನಿರ್ಮಾಣಮಾಡಲಾಗಿದೆ.

ಇದನ್ನು ಓದಿ: ದೇಶಕ್ಕೆ ಮಾದರಿ ಬನ್ನೇರುಘಟ್ಟ ಜೈವಿಕ ಉದ್ಯಾನವನ

ಈ ತಾಜ್​ಮಹಲ್ ಆಮೃತಶಿಲೆಯಲ್ಲಿ ನಿರ್ಮಿಸಿದಲ್ಲ, ಮರದಲ್ಲಿ ನಿರ್ಮಿಸಿದ ಈ ತಾಜ್​ಮಹಲ್ ಕಲಾವಿದನ ಸ್ಪೂರ್ತಿಯಿಂದ ಮೈದಳೆದ ಕಲಾಕೃತಿಯಾಗಿದೆ. ಸುಮಾರು 60 ಅಡಿ ಎತ್ತರವಿರುವ ತಾಜ್​ಮಹಲ್ನ್ನು 150ಕಲಾವಿದರು ಜೊತೆಗೂಡಿ ಮರ ಬಳಸಿ ನಿರ್ಮಿಸಿದ್ದಾರೆ. ನಗರದ ಹಲಸೂರಿನ ಆರ್​ಬಿಎನ್ಎಮ್ ಶಾಲೆ ಮೈದಾನದಲ್ಲಿ ಈ ತಾಜ್​ಮಹಲ್ ನಿರ್ಮಾಣವಾಗಿದೆ. ತಾಜ್​ಮಹಲ್ ಪ್ರತಿಕೃತಿಗೆ ಬರೋಬ್ಬರಿ 1ಕೋಟಿ ಖರ್ಚಾಗಿದೆ. ಎಂತಾರೆ ಆಯೋಜಕರಾದ ಗೌತಮ್ ಅಗರ್ವಾಲ್. ಇದರ ವಿಶೇಷತೆಯೆಂದರೆ ಈ ತಾಜ್​ಮಹಲ್​ನ್ನು ಯಾವಾಗ ಬೇಕಾದ್ರು ಸುಲಭವಾಗಿ ಸ್ಥಳಾಂತರಿಸಬಹುದು.

ಈ ತಾಜ್​ಮಹಲ್ ನಿರ್ಮಾಣಕ್ಕೆ ವಿಶೇಷವಾಗಿ ಥರ್ಮಾಕೋಲ್, ಮರ ಕಬ್ಬಿಣ, ಸ್ಟೀಲ್, ಫೈಬರ್ ಗ್ಲಾಸ್ ಬಳಸಲಾಗಿದೆ. ಇನ್ನು 150ಕ್ಕೂ ಹೆಚ್ಚು ಜನರ ತಂಡ ಮೂರು ತಿಂಗಳ ಕಾಲ ಶ್ರಮಿಸಿದ್ದಾರೆ. ನ್ಯಾಷನಲ್ ಕನ್ಷ್ಯೂಮರ್ ಫೇರ್(ಎನ್​ಸಿಎಫ್) ಸಂಸ್ಥೆ ಆಯೋಜಿಸಿರುವ, ಬೃಹತ್ ಪ್ರದರ್ಶನ ಮೇಳಕ್ಕೆ ಈಗಾಗಲೆ ಪುಟ್ಟ ಮಕ್ಕಳಿಂದ ಹಿಡಿದು ವೃದ್ದರು ಕೂಡ ಭೇಟಿ ನೀಡಿ ಪ್ರೀತಿಯ ದ್ಯೋತಕವಾದ ತಾಜ್​ಮಹಲ್​ನ್ನು ಕಣ್ತುಂಬಿಕೊಳ್ಳೋದ್ರ ಜೊತೆಗೆ ಸೆಲ್ಫಿ ತಗೊಂಡು ಎಂಜಾಯ್ ಮಾಡುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳಷ್ಟೇ ನವದಂಪತಿಗಳು ಇಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟೆಕ್ಕಿಗಳು ವಿಕೇಂಡ್​ನಲ್ಲಿ ಇಲ್ಲಿ ಬಂದು ಅದ್ಭುತವಾದ ರೀತಿಯಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

ಇಷ್ಟೆ ಅಲ್ಲ ಇಲ್ಲಿನ ಪ್ರದರ್ಶನ ಮಳಿಗೆಗಳು, ಮಕ್ಕಳಿಗೆ ಮನರಂಜನಾ ಕಾರ್ಯಕ್ರಮಗಳು ಕೂಡ ಗಮನಸೆಳೆಯುತ್ತಿದ್ದು. ಯುವಕರು, ಐಟಿ ಉದ್ಯಮಿಗಳು ಮತ್ತು ಕುಟುಂಬ ಸಮೇತ ಆಗಮಿಸುವವರಿಗೂ ಇದು ಸಖತ್ ಮನರಂಜನೆ ನೀಡುತ್ತಿದೆ. ಅಂದ ಹಾಗೆ ಮೇ 30ರವರೆಗೆ ನಡೆಯಲಿರೋ ಪ್ರದರ್ಶನ ಸಂಜೆ ನಾಲ್ಕರಿಂದ ರಾತ್ರಿ 9ರವರೆಗೆ ವೀಕ್ಷಿಸಲು ಅವಕಾಶವಿದೆ. ಆಗ್ರಾದಲ್ಲಿ ತಾಜ್​ಮಹಲ್ ನೋಡದೆ ಇರೋರು ಇಲ್ಲಿ ಪ್ರವೇಶ ಶುಲ್ಕ 40 ರೂಪಾಯಿ ನೀಡಿ ಅಂದ ಸವಿಬಹುದು. ನಿಮ್ಮ ವೀಕೆಂಡ್ನ್ನು ಉತ್ತಮ ರೀತಿಯಲ್ಲಿ ಎಂಜಾಯ್ ಮಾಡಬಹುದು.

ಇದನ್ನು ಓದಿ: 

1. ವೈದ್ಯರ ಮಾಹಿತಿಗಾಗಿ ಇದೆ ಪ್ರಾಕ್ಟೋ ಆ್ಯಪ್

2. ಮಹಿಳೆಯರ ಸ್ವಯಂ ಅನುಭೂತಿಯ ಪರಿಕಲ್ಪನೆ : ಇದು ಬ್ಯುಸಿನೆಸ್​​ನಲ್ಲೂ ಅಡಕವಾದ ಚಿಂತನೆ

3. ರಾಸಾಯನಿಕ ಐಟಂಗಳಿಗಿಂತ- ಹ್ಯಾಂಡ್‍ಮೇಡ್ ಐಟಂಗಳಿಗೆ ಭಾರೀ ಡಿಮ್ಯಾಂಡ್​​..!

Related Stories

Stories by YourStory Kannada