ಇದು ವೈಕಲ್ಯವನ್ನೇ ಗೆದ್ದವನ ಕಥೆ..!

ಕೃತಿಕಾ

0

ತಾನೊಬ್ಬ ವಿಕಲ ಚೇತನ ಎಂಬುದನ್ನು ಮೆಟ್ಟಿನಿಂತು ತನ್ನ ವೈಕಲ್ಯವನ್ನೇ ಗೆಲ್ಲುವುದಿದೆಯಲ್ಲಾ ಅದು ಜಗತ್ತನ್ನು ಗೆದ್ದ ಸಂಭ್ರಮಕ್ಕಿಂತಲೂ ಮಿಗಿಲು. ಹಾಗೆ ತನ್ನ ವೈಕಲ್ಯವನ್ನೇ ಗೆದ್ದವನ ಕಥೆ ಇದು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸುರೇಶ್ ನಾಯಕ್ ಈ ಕಥೆಯ ನಾಯಕ. ಹುಟ್ಟುತ್ತಲೆ ಡೌನ್ಸಿಂಡ್ರೋಮ್ ಎಂಬ ಬುದ್ಧಿಮಾಂದ್ಯ ಖಾಯಿಲೆಯಿಂದ ಬಳಲುತ್ತಿರುವ ಸುರೇಶ್ ನಾಯಕ್​ಗೆ ಈಗ 43 ವರ್ಷ.

ಜಯಾ, ಜಗನ್ನಾಥ್ ನಾಯಕ್ ದಂಪತಿಯ ಮೂರನೆ ಮಗನಾದ ಸುರೇಶ್ ನಾಯಕ್ ಹುಟ್ಟಿದಾಗ ಇತರ ಸಹಜ ಮಕ್ಕಳಂತೆ ಸಹಜವಾಗಿಯೆ ಇದ್ದರು. ಒಂದು ವರ್ಷದ ನಂತರ ವೈದ್ಯರಲ್ಲಿ ತಪಾಸಣೆ ಮಾಡಿಸಿದಾಗ ಸುರೇಶ ಡೌನ್ ಸಿಂಡ್ರೋಮ್ ಬುದ್ಧಿಮಾಂದ್ಯತೆಯ ಸ್ಥಿತಿಯಲ್ಲಿ ಇದ್ದಾನೆ ಅನ್ನೋದು ಗೊತ್ತಾಯಿತು. ಸುರೇಶ್ ತನ್ನ ಸಹೋದರ ಉಮೇಶ್ ನಾಯಕ್ ಜೊತೆಗೂಡಿ ಪುತ್ತೂರಿನ ಮಾಯ್ದೆದೇವುಸ್ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿವರೆಗೆ ಓದುತ್ತಾರೆ. ಅದೃಷ್ಟವಶಾತ್ ಶಾಲೆಯವರು ಬುದ್ಧಿಮಾಂದ್ಯ ಎಂಬ ಕಾರಣಕ್ಕೆ ತಾರತಮ್ಯ ಮಾಡದೆ, ಹೊರಗೆ ಹಾಕದೆ, ಪ್ರೀತಿಯಿಂದ ಸುರೇಶನಿಗೂ ಪಾಠ ಮಾಡಿದರು. ಇದರ ಫಲದಿಂದಲೇ ಇವತ್ತು ಸುರೇಶ್ ನಾಯಕ್ ಹೆಸರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ.

ಉಡುಪಿಯ ‘ಆಶಾ ನಿಲಯ’ವೆಂಬ ವಿಶೇಷ ಮಕ್ಕಳ ಶಾಲೆಯಲ್ಲಿ ಹದಿನೂರು ವರ್ಷ ತರಬೇತಿ ಪಡೆದು, ತನ್ನ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಿಕೊಳ್ಳುವ ಹಾಗೂ ಅಂಕೆ ಸಂಖ್ಯೆಗಳನ್ನು ಗುರುತಿಸುವುದನ್ನೆಲ್ಲಾ ಸುರೇಶ್ ನಾಯಕ್ ಕಲಿತರು. ಇದರ ಜೊತೆಗೆ ಯೋಗಾಸನ, ಸಂಗೀತ, ತಾಳ ಹಾಕುವುದು, ಗೆಜ್ಜೆ, ಇತ್ಯಾದಿ ಹಿನ್ನೆಲೆ ವಾದ್ಯ ನುಡಿಸುವ ಕಲೆಗಳನ್ನು ಮೈಗೂಡಿಸಿಕೊಂಡು ತಾನು ಎಲ್ಲರಂತಲ್ಲ ಅನ್ನೋದನ್ನ ಸಾಭೀತು ಮಾಡಿದರು.

ತಮ್ಮ ಕಣ್ಣಳತೆಯ ವ್ಯಾಪ್ತಿಗೆ ಬರುವ ವಸ್ತುಗಳ ಬಗ್ಗೆ ಸುರೇಶ್ ನಾಯಕ್​​ಗೆ ಅದೇನೋ ಕುತೂಹಲ. ಇಂತಹ ಗುಣದಿಂದಾಗಿ ಅವರೊಬ್ಬ ಜಾದೂಗಾರನಾಗಿಯೂ ಕೂಡ ಪರಿಣಿತರಾಗಿದ್ದಾರೆ. ಕಳೆದ 20 ವರ್ಷಗಳಿಂದ 1000ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ‘ಭಿನ್ನ ಸಾಮರ್ಥ್ಯದ ವ್ಯಕ್ತಿಯಿಂದ ಶಿಕ್ಷಣ’ ಎಂಬ ಹೆಸರಿನಲ್ಲಿ ಜನಜಾಗೃತಿ ಕಾರ್ಯಕ್ರಮ ನೀಡುತ್ತಿದ್ದಾರೆ. ಲಕ್ಷಾಂತರ ಜನತೆ ಎದುರು ಜಾದೂ ಪ್ರದರ್ಶನ ನೀಡಿ ತಮ್ಮ ಬಲೆಗೆ ಬೀಳಿಸಿಕೊಂಡು ಖುಷಿ ಪಟ್ಟಿದ್ದಾರೆ. ವಿಕಲಚೇತನ ದುರ್ಬಲನಲ್ಲ. ಬದಲಾಗಿ ಅವಕಾಶ ನೀಡಿದರೆ ತಾನೂ ಒಬ್ಬ ಸಬಲ ಎಂದು ತಮ್ಮ ಕೆಲಸದ ಮೂಲಕ ಸಾರಿದ್ದಾರೆ.

ಆದರೆ ಇಷ್ಟಕ್ಕೆ ಸುರೇಶ್ ನಾಯಕರನ್ನು ವಿಶೇಷ ಸಾಮರ್ಥ್ಯದ ವ್ಯಕ್ತಿಯೆಂದು ಹೇಳಿದ್ದರೆ ನಂಬುವುದಕ್ಕೆ ಕಷ್ಟವಾಗುತ್ತಿತ್ತೇನೋ. ಆದರೆ ಸುರೇಶ್ ನಾಯಕ್ ತಮ್ಮಲ್ಲಿರುವ ಮಾನಸಿಕ ಹಾಗೂ ದೈಹಿಕವಾದ ಎರಡೂ ವಿಶಿಷ್ಟತೆಗಳನ್ನು ಸಮರ್ಥವಾಗಿ ಬಳಸಿಕೊಂಡು ಒಂದು ಲಿಮ್ಕಾ ವಿಶ್ವ ದಾಖಲೆ, ನಾಲ್ಕು ರಾಷ್ಟ್ರೀಯ ದಾಖಲೆಗಳನ್ನು ಸ್ಥಾಪಿಸಿದ್ದಾರೆ. ರಾಷ್ಟ್ರೀಯ ಲಿಮ್ಕಾ ಸಂಸ್ಥೆಯ ಅಜೀವ ಸದಸ್ಯತ್ವ ಗಳಿಸಿರುವ ಸಾಧನೆ ಸಾಮಾನ್ಯವೇನಲ್ಲ. ಸಾಮಾನ್ಯರಿಗೇ ಅಸಮಾನ್ಯವಾಗುವ ಇಂತಹ ಸಾಧನೆಯನ್ನ ಒಬ್ಬ ವಿಕಲಚೇತನ ಮಾಡಿದ್ದಾರೆ.

ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ 25 ರಿಂದ 50 ಫೋನ್ ಅಥವಾ ಮೊಬೈಲ್ ಸಂಖ್ಯೆ ನೆನಪಿರಬಹುದು. ಆದರೆ ಸುರೇಶ್ 500ಕ್ಕೂ ಹೆಚ್ಚು ಟೆಲಿಫೋನ್ ಸಂಖ್ಯೆಗಳನ್ನು ಪಟಪಟನೆ ಹೇಳುತ್ತಾರೆ. 1 ಘಂಟೆ 12 ನಿಮಿಷಗಳಲ್ಲಿ 514 ದೂರವಾಣಿ ಸಂಖ್ಯೆಗಳನ್ನು ಅದು ಯಾವ ವ್ಯಕ್ತಿ ಅಥವಾ ಸಂಸ್ಥೆಯದ್ದು ಎಂದು ಗುರುತಿಸುವುದರ ಮೂಲಕ ತಮ್ಮ ಅಸಾಧಾರಣ ಸ್ಮರಣ ಶಕ್ತಿಗಾಗಿ 2013ನೆ ಸಾಲಿನ ‘ದಿ ಲಿಮ್ಕಾ ಬುಕ್ ಆಫ್ ರೆಕಾರ್ಡ್​ಗೆ ಸೇರ್ಪಡೆ ಆಗಿದ್ದಾರೆ. ಜೊತೆಗೆ 30 ನಿಮಿಷದಲ್ಲಿ 204 ದೂರವಾಣಿ ಸಂಖ್ಯೆಗಳು ಇಂತಹ ವ್ಯಕ್ತಿಗೆ ಸಂಬಂಧಿಸಿದವು ಎಂದು ಹೆಸರಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲೂ ತಮ್ಮ ಹೆಸರು ದಾಖಲಿಸಿಕೊಂಡಿದ್ದಾರೆ.

‘ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ’ ವಿಶ್ವದ ಅತಿ ಉದ್ದನೆಯ ನಾಲಗೆ ಹೊಂದಿರುವ ವಿಶ್ವ ದಾಖಲೆ ಸುರೇಶ್ ನಾಯಕ್ ಅವರ ಹೆಸರಿನಲ್ಲಿದೆ. ಸುರೇಶ್ ನಾಯಕ್ ಅವರ ನಾಲಿಗೆ ಬರೊಬ್ವರಿ ಹತ್ತು ಸೆಂಟೀ ಮೀಟರ್ ಉದ್ದವಿದೆ..! ತನ್ನ ಕೈ ಬೆರಳಿನಲ್ಲಿರುವ 4 ವಿಶಿಷ್ಟ ರೇಖೆಗಳಿಗಾಗಿ ವಿಶೇಷ ಹಸ್ತ ಹೊಂದಿರುವ ವ್ಯಕ್ತಿ ಎಂದು ‘ಲಿಮ್ಕಾ ಬುಕ್ ಆಫ್ ರೆಕಾರ್ಡ್’ನಲ್ಲಿ ದಾಖಲೆ ಹೊಂದಿ ತಮ್ಮ ದೈಹಿಕ ವಿಶಿಷ್ಟ ಶಕ್ತಿಯನ್ನೂ ಸಾಭೀತು ಮಾಡಿದ್ದಾರೆ. ಆದರೆ ಇಷ್ಟೆಲ್ಲ ಸಾಧನೆ ಮಾಡಿರುವ ಸುರೇಶ್ ನಾಯಕ್ ತಮ್ಮ ಬೆನ್ನು ತಾವೆ ತಟ್ಟಿಕೊಳ್ಳದೆ ತಮ್ಮ ಈ ಸಾಧನೆಯ ಮೂಲಕ ಯಾವುದೇ ರೀತಿಯ ವಿಕಲಚೇತನ ವ್ಯಕ್ತಿ ಯಾವುದೇ ದೊಡ್ಡ ಸಾಧನೆ ಮಾಡಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

ನನ್ನ ಮಗ ಹುಟ್ಟಿದ ಒಂದು ವರ್ಷಕ್ಕೇ ಆತ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದಾನೆ ಅನ್ನೋದು ತಿಳಿದು ಆಘಾತವಾಗಿತ್ತು. ಆದರೆ ಏನು ಮಾಡುವುದು. ಪಾಲಿಗೆ ಬಂದಿದ್ದನ್ನು ಸ್ವೀಕರಿಸಲೇ ಬೇಕಾಗಿತ್ತು. ಆದರೂ ಆತ ಎಲ್ಲ ಬುದ್ಧಿಮಾಂದ್ಯರಂತಾಗುವುದು ನನಗೆ ಬೇಕಿರಲಿಲ್ಲ. ಅದಕ್ಕಾಗಿಯೇ ಸುರೇಶ್ ಗೆ ಹಲವು ತರಬೇತಿಗಳನ್ನು ಕೊಡಿಸಿದೆ. ಇವತ್ತು ಆತ ನನ್ನ ಪಾಲಿಗೆ ಹೆಮ್ಮೆಯ ಮಗ ಅಂತಾರೆ ಸುರೇಶ್ ನಾಯಕ್ ತಂದೆ ಜಗನ್ನಾಥ ನಾಯಕ್.

ನನ್ನ ಮಗನಂತೆ ಇರುವ ಲಕ್ಷಾಂತರ ಮಂದಿ ಬುದ್ಧಿಮಾಂದ್ಯರಾಗಿಯೇ ಉಳಿಯಬೇಕಿಲ್ಲ. ಹಾಗಾಗಿ ನಾನು ನನ್ನ ಮಗನೊಂದಿಗೆ ಸೇರಿ ‘ವಿಕಲಚೇತನ ಜನಜಾಗೃತಿ’ ಅಭಿಯಾನ ನಡೆಸುತ್ತಿದ್ದೇವೆ. ರಾಜ್ಯದ ಪ್ರಮುಖ ನಗರಗಳಿಗೂ ಹೋಗಿ ಪ್ರತಿಯೊಬ್ಬ ವಿಕಲಚೇತನ ವ್ಯಕ್ತಿಯಲ್ಲೂ ಪ್ರತಿಭೆ ಇದೆ. ಅವರಿಗೆ ಸಮಾನ ಅವಕಾಶ ನೀಡಿ ಗೌರವಯುತ ಜೀವನ ನಡೆಸಲು ಅನುವು ಮಾಡಿಕೊಡಿ ಎಂದು ಜನಸಾಮಾನ್ಯರಿಗೆ ಮನವಿ ಮಾಡುವ ಅಭಿಯಾನ ನಡೆಸುತ್ತಿದ್ದೇವೆ ಅಂತಾರೆ ಜಗನ್ನಾಥ ನಾಯಕ್.

ವಿಕಲಚೇತನರನ್ನೂ ಸಮಾಜ ಸ್ವೀಕರಿಸಿ ಮುಖ್ಯವಾಹಿನಿಗೆ ತರಲು ಸುರೇಶ ನಾಯಕ್ ಹೋರಾಟ ಮಾಡುತ್ತಿದ್ದಾರೆ. ತನ್ನ ದೈಹಿಕ ನ್ಯೂನತೆಯನ್ನೆ ಧನಾತ್ಮಕವಾಗಿ ಪರಿವರ್ತಿಸಿ, ವಿಕಲಚೇತನನೂ ವಿಶ್ವ ದಾಖಲೆಯನ್ನು ನಿರ್ಮಿಸಲು ಸಾಧ್ಯ ಎನ್ನುವುದನ್ನು ಸಾಧಿಸಿದ್ದಾರೆ. ಆದರೆ ಅದಕ್ಕಿಂತಲೂ ಮುಖ್ಯವಾದದ್ದು ಬದುಕು ಹಾಗೂ ಮಾನವೀಯತೆ ಎಂದು ಸಂದೇಶ ನೀಡುತ್ತಿದ್ದಾರೆ. ಆ ಮೂಲಕ ಬುದ್ದಿವಂತರು ಎಂದು ಹೇಳಿಕೊಳ್ಳುವವರಿಗೂ ಸ್ಫೂರ್ತಿಯಾಗಿದ್ದಾರೆ.