ಗುಬ್ಬಿಗಳು ಬಂದ್ವು.. ದಾರಿ ಬಿಡಿ.. !

ಪಿ.ಆರ್​​.ಬಿ

ಗುಬ್ಬಿಗಳು ಬಂದ್ವು.. ದಾರಿ ಬಿಡಿ.. !

Friday October 30, 2015,

2 min Read

ಸಾಮಾನ್ಯವಾಗಿ ಪ್ರಾಣಿ ಪಕ್ಷಿಗಳು ಮನುಷ್ಯರನ್ನು ಕಂಡರೆ ಓಡಿ ಹೋಗೋದೇ ಹೆಚ್ಚು. ಆದ್ರೆ ಗುಬ್ಬಚ್ಚಿಗಳು ಮಾತ್ರ ಹಾಗಲ್ಲ. ಮನುಷ್ಯನ ಸುತ್ತಾ ಬದುಕಲು ಇಷ್ಟ ಪಡೋ ಪುಟ್ಟ ಜೀವಿಗಳವು. ಇವುಗಳು ಸ್ವಲ್ಪವೇ ಸ್ವಲ್ಪ ಜಾಗದಲ್ಲಿ, ಸಿಕ್ಕ ಕಾಳು ಕಡ್ಡಿ, ಹುಳು ಹುಪ್ಪಟೆಗಳನ್ನು ತಿನ್ನುತ್ತಾ, ಸಂಸಾರ ಹೂಡುವ ಗುಬ್ಬಿಗಳು ಅಂದ್ರೆ ಮನುಷ್ಯರಿಗೂ ಅಚ್ಚುಮೆಚ್ಚು. ಆದ್ರೆ ಆಧುನಿಕತೆಯ ಭರಾಟೆಯಲ್ಲಿ ಗುಬ್ಬಕ್ಕನನ್ನು ಹುಡುಕಾಡೋದೇ ಇವತ್ತು ಕಷ್ಟವಾಗಿದೆ. ಇನ್ನು ಬೆಂಗಳೂರೆಂಬ ಕಾಂಕ್ರೀಟ್ ಕಾಡಿನೊಳಗೆ ಪ್ರಾಣಿ ಪಕ್ಷಿಗಳು ಕಾಣ ಸಿಗೋದೇ ಅಪರೂಪ. ಅದರಲ್ಲೂ ನಗರದಲ್ಲೇ ಹೆಚ್ಚಾಗಿ ಕಾಣಿಸುತ್ತಿದ್ದ ಗುಬ್ಬಚ್ಚಿಗಳು ಇವತ್ತು ಸಿಲಿಕಾನ್ ಸಿಟಿಯಲ್ಲಿ ಹುಡುಕಿದ್ರೂ ಸಿಗಲ್ಲ. ಆದ್ರೆ ಈ ಕಾಂಕ್ರೀಟ್ ಕಾಡಿನೊಳಗಿದ್ದುಕೊಂಡೇ ಇಲ್ಲೊಬ್ಬರು ಒಂದಷ್ಟು ಗುಬ್ಬಚ್ಚಿಗಳನ್ನು ಸಲಹೋ ಕೆಲಸ ಮಾಡುತ್ತಿದ್ದಾರೆ. ತಮ್ಮ ಮನೆ ಮಕ್ಕಳಿಗೆ ತೋರುವಷ್ಟೇ ಪ್ರೀತಿ ಕಾಳಜಿಯನ್ನ ತೋರಿಸುತ್ತಾರೆ.

image


ಫ್ರೇಜರ್ ಟೌನ್ ನ ಎಡ್ವಿನ್ ಜೋಸೆಫ್.. ವ್ಯಕ್ತಿ ಹಾಗೂ ವ್ಯಕ್ತಿತ್ವ ಎರಡೂ ಡಿಫರೆಂಟ್. ಬೆಂಗಳೂರಿನಲ್ಲಿ ಕಂಡುಬರುವ ಈ ಅಪೂರ್ವವಾದ ಗುಬ್ಬಿ ಸಂಸಾರಕ್ಕೆ ಇವರೇ ಆಧಾರ, ಇವ್ರೇ ಆಶ್ರಯದಾತ.. ಇನ್ನು ಇವ್ರ ಮನೆಗೆ ಭೇಟಿ ನೀಡಿದ್ರೆ ನಿಮ್ಮನ್ನು ಮೊದಲು ಸ್ವಾಗತಿಸೋದು ಗುಬ್ಬಚ್ಚಿಗಳೇ.. ಚಿಲಿಪಿಲಿ ಗುಟ್ಟುತ್ತಾ ಮನೆತುಂಬಾ ಇರುವ ಗುಬ್ಬಿಗಳು ಅತಿಥಿಗಳ ಆಗಮನದ ಸೂಚನೆ ಕೊಡುತ್ತವೆ. ಗುಬ್ಬಿಗಳು ಸುಳಿವು ಕೊಟ್ಟ ನಂತ್ರವಷ್ಟೇ ಮನೆಯವರು ಆಚೆ ಬರೋದು, ನಿಮ್ಮನ್ನು ಮಾತನಾಡಿಸುವುದು..

ಜೋಸೆಫ್ ಕುಟುಂಬಸ್ಥರ ದಿನ ಆರಂಭವಾಗೋದೇ ಗುಬ್ಬಿಗಳ ಮೂಲಕ. ಗುಬ್ಬಿಗಳಿಗಾಗಿಯೇ ಜೋಸೆಫ್ ಅವರ ಮನೆಯಲ್ಲಿ ವೇಳಾಪಟ್ಟಿ ತಯಾರಿಸಿಕೊಂಡಿದ್ದಾರೆ. ಆ ವೇಳಾಪಟ್ಟಿಯ ಆಧಾರದಲ್ಲಿ ಅವುಗಳಿಗೆ ಆಹಾರ ನೀಡಲಾಗುತ್ತೆ. ಜೊತೆಗೆ ಅವುಗಳಿಗಿಯೇ ಪುಟ್ಟ ಪುಟ್ಟ ಗೂಡುಗಳನ್ನು ನಿರ್ಮಿಸಲಾಗಿದೆ.

ಜೋಸೆಫ್ ಕುಟುಂಬಕ್ಕೆ ಗುಬ್ಬಿಗಳ ಮೇಲೆ ಪ್ರೀತಿ ಶುರುವಾಗಲು ಹಿಂದಿರುವ ಕಾರಣ ತುಂಬಾ ಇಂಟರೆಷ್ಟಿಂಗ್. ಜೋಸೆಫ್ ಪತ್ನಿ ಸಾರಾ ಪ್ರತಿದಿನ ಕಾಳು ಆರಿಸುವಾಗ ಸ್ವಲ್ಪ ಸ್ವಲ್ಪ ಕಾಳುಗಳನ್ನು ಗುಬ್ಬಚ್ಚಿಗಳಿಗೆ ಹಾಕುತ್ತಿದ್ದರಂತೆ. ಆರಂಭದಲ್ಲಿ ಆ ಕಾಳುಗಳನ್ನ ತಿನ್ನಲು ಕೆಲವೇ ಗುಬ್ಬಿಗಳು ಆಗಮಿಸುತ್ತಿದ್ದವು. ಆದ್ರೆ ದಿನಗಳೆದಂತೆ ಗುಬ್ಬಿಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು. ಗುಬ್ಬಿಗಳ ಮುದ್ದತನ , ಮುಗ್ಧತೆಗೆ ಮನಸೋತ ಈ ಕುಟುಂಬ ಈ ಹವ್ಯಾಸವನ್ನ ಮುಂದುವರಿಸಿತು. ಕ್ರಮೇಣ ಗುಬ್ಬಿಗಳ ಬಗ್ಗೆ ಹೆಚ್ಚಿನ ಆಸಕ್ತಿ ತಳೆದ ಜೋಸೆಫ್, ಗುಬ್ಬಿಗಳ ಬಗ್ಗೆ ಸ್ವಲ್ಪ ಅಭ್ಯಸಿಸಿದ್ರು. ನಗರದ ಪ್ರದೇಶದಲ್ಲಿ ವಿವಿಧ ಕಾರಣಗಳಿಂದ ಅಳಿವಿನಂಚಿನಲ್ಲಿರುವ ಗುಬ್ಬಿಗಳಿಗೆ ಆಶ್ರಯ ನೀಡಲು ಹಾಗೂ ಅವುಗಳನ್ನ ಕಾಯಲು ನಿರ್ಧರಿಸಿದ್ರು. ಅವರ ನಿರ್ಧಾರಕ್ಕೆ ಇಡೀ ಕುಟುಂಬವೇ ಸಾಥ್ ನೀಡಿದ್ದು, ಗುಬ್ಬಿಗಳ ರಕ್ಷಣೆಗೆ ಜೋಸೆಫ್ ಅಂಡ್ ಫ್ಯಾಮಿಲಿ ಟೊಂಕಕಟ್ಟಿ ನಿಂತಿದೆ. ಇದೀಗ ಇವ್ರ ಮನೆ ಸೂರೇ ಗುಬ್ಬಿಗಳ ಸಾಮ್ರಾಜ್ಯವಾಗಿದೆ.

ಗುಬ್ಬಿಗಳ ಆಶ್ರಯದಾತ ಜೋಸೆಫ್ ಹಿಂದೆಯೂ ಒಂದು ಇಂಟರೆಸ್ಟಿಂಗ್ ಕಹಾನಿಯಿದೆ. ಬಿಎಂಎಲ್ ನಲ್ಲಿ ಉದ್ಯೋಗಿಯಾಗಿದ್ದ ಜೋಸೆಫ್ 5 ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ರು. ರಾಷ್ಟ್ರಮಟ್ಟದ ಕ್ರೀಡಾಪಟುವಾಗಿರುವ ಜೋಸೆಫ್ ಗೆ ಗುಬ್ಬಿಗಳನ್ನು ಸಾಕೋದರ ಜೊತೆಗೆ ಇವತ್ತಿಗೂ ನೂರಾರು ಮಕ್ಕಳಿಗೆ ಉಚಿತವಾಗಿ ಕ್ರೀಡಾ ತರಬೇತಿ ನೀಡುತ್ತಾರೆ. ಪ್ರತಿ ತಿಂಗಳು 1625 ರೂಪಾಯಿ ನಿವೃತ್ತಿ ವೇತನ ಪಡೆಯೋ ಜೋಸೆಫ್ ಅದನ್ನ ಗುಬ್ಬಿಗಳಿಗಾಗಿಯೇ ವಿನಿಯೋಗಿಸುತ್ತಾರೆ.

image


ತನಗೇನಾದ್ರೂ ಪರವಾಗಿಲ್ಲ, ತನ್ನ ಮನೆಯಲ್ಲಿರುವ ಗುಬ್ಬಿಗಳಿಗೆ ಸಣ್ಣ ತೊಂದರೆಯಾದ್ರೂ ಜೋಸೆಫ್ ಉಗ್ರರೂಪ ತಾಳುತ್ತಾರೆ. ಮನೆಯಲ್ಲಿ ಏನೇ ಅಡುಗೆ ಮಾಡಿದ್ರೂ ಅದರಲ್ಲಿ ಒಂದು ಪಾಲು ಗುಬ್ಬಚ್ಚಿಗಳಿಗೆ ಮೀಸಲು ಅಂತಾರೆ ಜೋಸೆಫ್ ಪತ್ನಿ ಸಾರಾ. ಸದ್ಯ ಇನ್ನೂರಕ್ಕೂ ಹೆಚ್ಚು ಗುಬ್ಬಚ್ಚಿಗಳಿಗೆ ಆಶ್ರಯ ನೀಡಿರುವ ಜೋಸೆಫ್, ಅವುಗಳಿಗಾಗಿಯೇ ಮನೆ ತುಂಬಾ ವಿಶೇಷ ಸೌಲಭ್ಯಗಳನ್ನು ಒದಗಿಸಿದ್ದಾರೆ. ಯಾರಿಂದಲೂ ಗುಬ್ಬಚ್ಚಿಗಳನ್ನು ಪೋಷಿಸಲು ಬಿಡಿಗಾಸು ನಿರೀಕ್ಷಿಸದ ಜೋಸೆಫ್, ನಿಮಗೇನಾದ್ರೂ ಸಹಾಯ ಮಾಡಬೇಕು ಅಂದ್ರೆ, ಗುಬ್ಬಚ್ಚಿಗಳು ಕಂಡ್ರೆ ಸಾಧ್ಯವಾದರೆ ಅವುಗಳನ್ನು ರಕ್ಷಿಸಿ ಅಷ್ಟು ಸಾಕು ಅಂತಾರೆ. ಜೋಸೆಫ್ ಕೇವಲ ಗುಬ್ಬಿಗಳ ಪ್ರೇಮಿಯಷ್ಟೇ ಅಲ್ಲ. ಪರಿಸರ, ಮರಗಿಡಗಳು, ಹೂ ಗಿಡಗಳು ಅಂದ್ರೆನೂ ಇವರಿಗೆ ಪ್ರೀತಿ.

ತಾವು ಬದುಕಿದ್ರೆ ಸಾಲದು, ನಮ್ಮ ಜೊತೆ ಇನ್ನಷ್ಟು ಜೀವಿಗಳಿಗೂ ಬದುಕೋ ಅವಕಾಶ ಕೊಡಬೇಕು ಅನ್ನೋದು ಜೋಸೆಫ್ ಅವರ ನಂಬಿಕೆ. ಅದರಂತೆಯೇ ಬದುಕುತ್ತಾ ಜೋಸೆಫ್ ಅಳಿವಿನಂಚಿನಲ್ಲಿರುವ ಗುಬ್ಬಿಗಳನ್ನು ಬದುಕಿಸೋ ಮಹತ್ಕಾರ್ಯದಲ್ಲಿ ತೊಡಗಿದ್ದಾರೆ.