ರಕ್ತದಾನಕ್ಕೊಂದು "ಬ್ಲಡ್ ಫಾರ್ ಶ್ಯೂರ್" ಆ್ಯಪ್..!

ಕೃತಿಕಾ

ರಕ್ತದಾನಕ್ಕೊಂದು "ಬ್ಲಡ್ ಫಾರ್ ಶ್ಯೂರ್" ಆ್ಯಪ್..!

Tuesday January 05, 2016,

2 min Read

image


'ರಕ್ತದಾನ ಮಹಾದಾನ' ಅನ್ನೋ ಮಾತಿದೆ. ಆದ್ರೆ ತುರ್ತು ಸಂದರ್ಭಗಳಲ್ಲಿ ಸರಿಯಾದ ಸಮಯಕ್ಕೆ ಅಗತ್ಯವಾದ ರಕ್ತ ಸಿಗದೇ ಅದೆಷ್ಟೋಈ ಜನರು ಪ್ರತಿ ದಿನ ಸಾವನ್ನಪ್ಪುತ್ತಿದ್ದಾರೆ. ತಂತ್ರಜ್ಣಾನ, ವೈದ್ಯಕೀಯ ಜಗತ್ತು ಎಷ್ಟೇ ಮುಂದುವರೆದಿದ್ದರೂ ರಕ್ತದ ಅಲಭ್ಯತೆಯ ಸಮಸ್ಯೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂಥ ಸಂದರ್ಭಗಳಲ್ಲಿ ಸ್ಮಾರ್ಟ್ ಫೋನ್ ಅಪ್ಲಿಕೇಷನ್ ಎಂಬ ಮೊಬೈಲ್ ಅಪ್ಲಿಕೇಷನ್ ಜೀವರಕ್ಷಕ ಆ್ಯಪ್ ಆಗಲಿದೆ. ರಕ್ತದಾನವನ್ನು ಉತ್ತೇಜಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಅಗತ್ಯತೆ ಇರುವವರಿಗೆ ರಕ್ತ ಸಿಗಬೇಕಲು ಎಂಬ ಉದ್ದೇಶದಿಂದ ಮೂವರು ಸಾಫ್ಟ್ ವೇರ್ ಎಂಜಿನಿಯರ್ ಗಳ ತಂಡ ಈ ಆಂಡ್ರಾಯ್ಡ್ ಆ್ಯಪ್ ಅಭಿವೃದ್ದಿಪಡಿಸಿದೆ.

image


ಅಪಘಾತದಿಂದಾಗಿ ಎಷ್ಟೋ ವ್ಯಕ್ತಿಗಳು ರಕ್ತದ ಕೊರತೆಯಿಂದಾಗಿ ಜೀವ ಕಳೆದುಕೊಂಡಿದ್ದಾರೆ. ಅಪಘಾತವಾದ ಸಂದರ್ಭದಲ್ಲಿ ಡಾಕ್ಟರ್ ಇಂತಹ ಗ್ರೂಪ್​ನ ರಕ್ತ ಬೇಕು ಎಂದ ತಕ್ಷಣ ಎಲ್ಲಾ ಸಮಯದಲ್ಲೂ ಬ್ಲಡ್ ಬ್ಯಾಂಕ್​ನಲ್ಲೂ ಸಿಗುವುದಿಲ್ಲ, ಹಾಗೆ ಹುಡುಕಿದರೂ ಗೂಗಲ್​ನಲ್ಲೂ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ರಕ್ತ ಸಿಗುವಷ್ಟರೊಳಗೆ ವ್ಯಕ್ತಿಯ ಪ್ರಾಣವೇ ಇರುವುದಿಲ್ಲ. ಈ ಸಮಸ್ಯೆಗೆ ಪರಿಹಾರವಾಗಿ ಬೆಂಗಳೂರು ಮೂಲದ ಅರೇರಾ ಟೆಕ್ನಾಲಜೀಸ್​ನ ಯುವಕರು "ಬ್ಲಡ್ ಫಾರ್ ಶ್ಯೂರ್" ಅಪ್ಲಿಕೇಶನ್ ಅಭಿವೃದ್ದಿಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಖಾಸಗಿ ಕಂಪನಿ ನಡೆಸುತ್ತಿರುವ ಸಾಫ್ಟ್​​ವೇರ್ ಎಂಜಿನಿಯರ್​ಗಳಾದ ದರ್ಶನ್ ಎಂ.ಕೆ, ಪ್ರವೀಣ್ ಗೌಡ ಮತ್ತು ಕಾರ್ತಿಕ್ ಈ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಇದು ರಕ್ತದಾನಿಗಳು ಮತ್ತು ರಕ್ತದ ಅಗತ್ಯವಿರುವವರ ನಡುವೆ ಸಂಪರ್ಕ ಕಲ್ಪಿಸುತ್ತಿದೆ.

ಗೂಗಲ್ ಪ್ಲೇ ಸ್ಟೋರ್​ನಿಂದ ಬ್ಲಡ್ ಫಾರ್ ಶ್ಯೂರ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ನಂತರ ಅದನ್ನು ರಿಜಿಸ್ಟರ್ ಮಾಡಿಕೊಳ್ಳಬೇಕು. ಈ ಅಪ್ಲಿಕೇಶನ್ ಜಿಪಿಎಸ್ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತದೆ. ಬ್ಲಡ್ ಫಾರ್ ಶ್ಯೂರ್ ಅಪ್ಲಿಕೇಶನ್​​ನಿಂದ ತುರ್ತು ಸಂದರ್ಭದಲ್ಲಿ ನಮ್ಮ ಸುತ್ತ ಲಭ್ಯ ಇರುವಂತಹ ರಕ್ತ ದಾನಿಗಳು ಮತ್ತು ರಕ್ತ ನಿಧಿಗಳನ್ನು ಕ್ಷಣಾರ್ದಾದಲ್ಲಿ ಪತ್ತೆ ಹಚ್ಚಿ, ಅವರಿಗೆ ಪರಿಸ್ಥಿತಿಯ ಅನಿವಾರ್ಯತೆಯನ್ನು ತಿಳಿಸಬಹುದು. ಇದರಿಂದ ಆಸಕ್ತಿಯುಳ್ಳ ಮತ್ತು ಹತ್ತಿರದಲ್ಲಿರುವ ರಕ್ತ ದಾನಿಗಳು ಸರಿಯಾದ ಸಮಯಕ್ಕೆ ರಕ್ತದಾನ ಮಾಡಿ ಅಮೂಲ್ಯವಾದ ಜೀವವನ್ನು ಉಳಿಸಬಹುದು.

image


ಜಿಪಿಎಸ್ ಆಧಾರದಲ್ಲಿ ಆ್ಯಪ್ ಕೆಲಸ ಮಾಡುವ ಕಾರಣ, ಸಮೀಪದಲ್ಲಿ ಎಷ್ಟು ರಕ್ತದಾನಿಗಳಿದ್ದಾರೆ ಎಂಬುದನ್ನು ಮೊಬೈಲ್ ಪರದೆಯ ಮೇಲೆ ತಿಳಿಯಬಹುದು. ಆಯಾ ರಕ್ತದ ಗುಂಪಿನ ದಾನಿಗಳಿಗೆ ರಕ್ತದ ಅಗತ್ಯವಿರುವವರ ಬಗ್ಗೆ ಮಾಹಿತಿ ಬರುತ್ತದೆ. ಕನಿಷ್ಠ 4 ಕಿ.ಮೀ ನಿಂದ ಗರಿಷ್ಠ 60 ಕಿ.ಮೀ ವ್ಯಾಪ್ತಿಯಲ್ಲಿರುವ ರಕ್ತದಾನಿಗಳನ್ನು ಆ್ಯಪ್ ಮೂಲಕ ಪತ್ತೆ ಮಾಡಬಹುದು ಎಂದು ವಿವರ ನೀಡ್ತಾರೆ ಆ್ಯಪ್ ಅಭಿವೃದ್ದಿಪಡಿಸಿದ ದರ್ಶನ್ ಎಂ.ಕೆ

ಈ ಆ್ಯಪ್ ಇನ್ಸ್ ಸ್ಟಾಲ್ ಮಾಡಿಕೊಂಡ ನಂತರ ರಕ್ತ ಬೇಕಾದವರು ನಿಮ್ಮ ಸುತ್ತಾ ಮುತ್ತಾ ಇರುವ ರಕ್ತದಾನಿಗಳ ವಿವರ ಪಡೆದುಕೊಳ್ಳಬಹುದಾಗಿದೆ. ರಕ್ತದಾನ ಮಾಡುವವರು ತಮ್ಮ ಹೆಸರು, ರಕ್ತದ ಗುಂಪು, ನೀವಿರುವ ಪ್ರದೇಶದ ಹೆಸರು ಹೀಗೆ ವಿವರವನ್ನು ನೋಂದಾಯಿಸಿಕೊಳ್ಳಿ. ಇದರಲ್ಲಿ ಬ್ಲಡ್ ಬ್ಯಾಂಕ್​ಗಳ ವಿವರಗಳನ್ನು ಸಹ ನೀಡಲಾಗಿದೆ.

image


ಇದೊಂದು ಉಚಿತ ಅಪ್ಲಿಕೇಷನ್. ಇಲ್ಲಿ ನೊಂದಾಯಿಸಿಕೊಂಡವರು ಉಚಿತವಾಗಿ ರಕ್ತದಾನ ಮಾಡಬಹುದು ಮತ್ತು ರಕ್ತವನ್ನು ಪಡೆಯಲೂ ಬಹುದು. ರಕ್ತದ ಅವಶ್ಯಕತೆ ಇರುವವರು ಮತ್ತು ರಕ್ತದಾನ ಮಾಡುವವರನ್ನು ಕೊಂಡಿಯಾಗಿ ಬೆಸೆಯುವ ಉದ್ದೇಶದಿಂದ ಈ ಅಪ್ಲಿಕೇಷನ್ ಅನ್ನು ನಾವು ಅಭಿವೃದ್ದಿಪಡಿಸಿದ್ದೇವೆ ಅಂತಾರೆ ಆ್ಯಪ್ ಡೆವಲಪರ್ ಪ್ರವೀಣ್ ಗೌಡ.

ಅಪ್ಲಿಕೇಷನ್ ನಲ್ಲಿರುವ ‘ಫೈಂಡ್ ಬ್ಲಡ್’ ಆಯ್ಕೆ ಕ್ಲಿಕ್ ಮಾಡಿದರೆ ಅಗತ್ಯವಿರುವ ರಕ್ತದ ಗುಂಪು, ರಕ್ತದ ಪ್ರಮಾಣ, ಯಾವಾಗ ಬೇಕು ಎಂಬ ವಿವರಗಳನ್ನು ನೀಡಿದರೆ ಸಾಕು. ತಕ್ಷಣ ಆ್ಯಪ್ ನಲ್ಲಿ ಆ ಗುಂಪಿನ ರಕ್ತದ ದಾನಿಗಳ ಬಗ್ಗೆ ಮಾಹಿತಿ ಸಿಗುತ್ತದೆ. ರಕ್ತದಾನಿಗಳು ಲಭ್ಯವಿದ್ದರೆ ಅವರ ದೂರವಾಣಿ ಸಂಖ್ಯೆಯನ್ನು ರಕ್ತದ ಅಗತ್ಯವಿರುವವರಿಗೆ ನೀಡಲಾಗುತ್ತದೆ. ಈ ಮೂಲಕ ತುರ್ತು ಸಂದರ್ಭಗಳಲ್ಲಿ ರಕ್ತಕ್ಕಾಗಿ ಪರದಾಡುವವರಿಗೆ ಈ ಆ್ಯಪ್ ಸಂಜೀವಿನಿಯಾಗಿದೆ. ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ಮಂದಿ ಈ ಆ್ಯಪ್ ನಲ್ಲಿ ನೊಂದಾಯಿಸಿಕೊಮಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಿದರೆ ರಕ್ತದಾನ ಮಹಾದಾನ ಅನ್ನೋ ಮಾತಿಗೊಂದು ಅರ್ಥ ಸಿಗುತ್ತದೆ.