ಕಂದಾಚಾರಗಳನ್ನು ಧಿಕ್ಕರಿಸಿದ ಮಹಿಳೆ ಸಪ್ನಾ ಭವಾನಿಯ ಸಮಾಜಮುಖಿ ಕಾರ್ಯ

ಟೀಮ್​ ವೈ.ಎಸ್​.

ಕಂದಾಚಾರಗಳನ್ನು ಧಿಕ್ಕರಿಸಿದ ಮಹಿಳೆ ಸಪ್ನಾ ಭವಾನಿಯ ಸಮಾಜಮುಖಿ ಕಾರ್ಯ

Wednesday October 07, 2015,

4 min Read

ಎಲ್ಲರಿಗಿಂತ ಭಿನ್ನವಾಗಿರುವುದು ಅಂದರೆ ಎಲ್ಲರಿಗಿಂತ ಸುಂದರವಾಗಿರುವುದು ಅಂದುಕೊಂಡಿದ್ದವರು ಸಪ್ನಾ ಭವಾನಿ. ಶಾರ್ಟ್ ಹೇರ್ಸ್, ಟ್ಯಾಟೂಗಳು ಮುಂತಾದ ಭಿನ್ನತೆಯಿಂದಾಗಿ ಸಪ್ನಾ ಭಿನ್ನವಾಗಿಯೇ ಗುರುತಿಸಿಕೊಂಡಿದ್ದಾರೆ. ಆಕರ್ಷಕ ವ್ಯಕ್ತಿತ್ವದವರಾದ ಸಪ್ನಾ ನೋಡಲು ಸುಂದರವಾಗಿ, ಬುದ್ಧಿವಂತರಾಗಿಯೂ ಕಾಣಿಸಿಕೊಳ್ಳುತ್ತಾರೆ. ಅವರಷ್ಟೇ ಸುಂದರವಾದ ಹಾಗೂ ಆಸಕ್ತಿಕರ ಕಥಾನಕ ಇಲ್ಲಿದೆ.

image


ಮುಂಬೈನಲ್ಲಿ ಬೆಳೆದ ಸಪ್ನಾ

ಬ್ರೀಚ್ ಕ್ಯಾಂಡಿ ಶಾಲೆಯಲ್ಲಿ ತಮ್ಮ 3ನೇ ತರಗತಿಯವರೆಗೆ ಕಲಿತ ಸಪ್ನಾ ನಂತರ ಬಾಂದ್ರಾಕ್ಕೆ ಸ್ಥಳಾಂತರಗೊಂಡರು. 70ರ ದಶಕದಲ್ಲಿ ಬಾಂದ್ರಾ ನಿಜಕ್ಕೂ ಸುಂದರವಾಗಿತ್ತು ಎನ್ನುವ ಸಪ್ನಾ ಅಲ್ಲಿ ತಾವು ನಿತ್ಯವೂ ಸೈಕಲ್ ಸವಾರಿ ಮಾಡುತ್ತಿದ್ದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಚಿಕ್ಕ ವಯಸ್ಸಿನಿಂದಲೇ ಸಪ್ನಾ ಎಲ್ಲಾ ಸಾಂಪ್ರದಾಯಿಕ ಧೋರಣೆಗಳನ್ನು ಧಿಕ್ಕರಿಸಿ ಬೆಳೆಯತೊಡಗಿದ್ದರು. ಮಾಮೂಲಿ ಹುಡುಗಿಯರಂತೆ ಇರದೇ ಸಣ್ಣದಾಗಿ ಕತ್ತರಿಸಿದ ತಲೆಕೂದಲು, ಮಿನಿಸ್ಕರ್ಟ್ ಧರಿಸುವುದು, ಸಿಗರೇಟ್ ಸೇವನೆ ಅಭ್ಯಾಸ, ಹುಡುಗರೊಂದಿಗೆ ಮುಕ್ತವಾಗಿ ವ್ಯವಹರಿಸುವುದು ಈ ಎಲ್ಲವೂ ರೂಢಿಸಿಕೊಂಡರು. ಬೇರೆ ಹುಡುಗಿಯರು ಮಾಡಲು ಹೆದರುವುದನ್ನು ಮಾಡಲು ಸಪ್ನಾ ಮುಂದಾಗಿದ್ದರು. ಆ ಜೀವನದ ಆರಂಭದ ದಿನಗಳು ತಮ್ಮನ್ನು ತಾವು ಹುಡುಕಿಕೊಳ್ಳುವ ಪ್ರಯತ್ನ ಎಂದು ಅವರು ವರ್ಣಿಸಿಕೊಂಡಿದ್ದಾರೆ. ಮುಗ್ಧತೆ ಅವರ ಜೀವನದಲ್ಲಿ ಬಹುದೊಡ್ಡ ಪಾಠ ಕಲಿಸಿತು. ಕಾಳಜಿ ಇಲ್ಲದೇ ಬೆಳೆಯುವ ಯಾರಾದರೂ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಕಷ್ಟಸಾಧ್ಯ ಅನ್ನುವ ವಿಷಯ ಸ್ವತಃ ಅವರ ಅನುಭವಕ್ಕೆ ಬಂದಿತು. ಹುಡುಗಿಯರ ಶಾಲೆಯಲ್ಲಿ ಕಲಿಯುತ್ತಿದ್ದಾಗಲೂ ಅವರ ಆತ್ಮೀಯ ಗೆಳೆಯರೆನಿಸಿಕೊಂಡಿದ್ದವರು ಹುಡುಗರೇ ಆಗಿದ್ದರು. ಆ ಹುಡುಗರೇ ಅವರಿಗೆ ಮೋಟರ್ ಸೈಕಲ್ ಚಲಾಯಿಸುವುದನ್ನು ಕಲಿಸಿದ್ದರು. ಈ ವೇಳೆ ಅವರಿಗೆ ಕಲಿಯಲು ಇನ್ನೂ ಬಹಳಷ್ಟಿದೆ ಎಂಬುದು ಅರಿವಾಯಿತು.

ಜೀವನ ಒಂದು ಕಥೆಯಷ್ಟೇ..

ಕಥೆಗಳ ಪ್ರಾಧಾನ್ಯತೆಯನ್ನು ಸಮರ್ಥಿಸುತ್ತಿದ್ದ ಅವರ ಅಜ್ಜಿಯಿಂದ ಸಪ್ನಾ ಪ್ರಭಾವಿತರಾಗಿದ್ದರು. ಅವರು ಸಾಕಷ್ಟು ಕಥೆಗಳನ್ನು ಹೇಳುತ್ತಿದ್ದರು. ಅವೆಲ್ಲವೂ ಕಾಲ್ಪನಿಕವಾಗಿದ್ದರೂ ಸುಂದರವಾಗಿರುತ್ತಿದ್ದವು. ಈ ಕಥೆಗಳು ಸಪ್ನಾರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದವು. ನಿನಗೆ ಮಕ್ಕಳಾಗಬೇಕೆಂದರೆ ನಿನ್ನ ಬಳಿ ಸಾಕಷ್ಟು ಕಥೆಗಳ ಕಣಜವಿರಬೇಕು ಎಂದು ಸಪ್ನಾರ ಅಜ್ಜಿ ಸದಾ ಹೇಳುತ್ತಿದ್ದರು. ಅಜ್ಜಿ ಹೇಳುವ ಕಥೆಗಳ ನಾಟಕೀಯತೆ ಹಾಗೂ ರೋಚಕತೆಯಂತೆ ತಮ್ಮ ಬದುಕಿನ ಕಥೆಯನ್ನೂ ರೋಚಕಗೊಳಿಸುವ ಕನಸು ಸಪ್ನಾದ್ದಾಗಿತ್ತು. ಇಂದಿಗೂ ಅವರು ಅದೇ ರೀತಿಯ ರೋಚಕತೆಯಲ್ಲೇ ಬದುಕುತ್ತಿದ್ದಾರೆ. ಅವರ ಕಥೆಗಳ ಕಲ್ಪನೆಗೆ ತಕ್ಕಂಥ ಪ್ರಯತ್ನ ಅವರಿಂದ ಸಾಧ್ಯವಾಗುತ್ತಿದೆ. ಟ್ಯಾಟೂಗಳೇ ಕಥೆ ಹೇಳುವಂತೆ ಹೊಸ ಪ್ರಯತ್ನವನ್ನು ಸಪ್ನಾ ಆರಂಭಿಸಿದ್ದಾರೆ. ಅವರ ಅಜ್ಜಿ ಹೇಳಿದ್ದ ಕಥೆಗಳ ಅಂಶವನ್ನು ಹೋಲುವ ಸೃಜನಾತ್ಮಕ ಟ್ಯಾಟೂಗಳನ್ನು ಸೃಷ್ಟಿಸಿರುವುದಾಗಿ ಅವರು ಹೇಳಿಕೊಳ್ಳುತ್ತಾರೆ.

ಅನುಭವಗಳು

1989ರಲ್ಲಿ ಸಪ್ನಾರ ತಂದೆ ನಿಧನರಾಗಿದ್ದು ಅವರ ಜೀವನದಲ್ಲಿ ಬದಲಾವಣೆ ಸಂಭವಿಸಿದ ಘಟನೆ. ತಂದೆಯ ಸಾವಿನ ಬಳಿಕ ಅವರು ಅಮೆರಿಕಾದಲ್ಲಿ ವಾಸಿಸುತ್ತಿರುವ ತಮ್ಮ ಚಿಕ್ಕಮ್ಮನ ಮನೆಗೆ ಕಳುಹಿಸಲ್ಪಟ್ಟರು. ಸಪ್ನಾ ನಿಯಂತ್ರಿಸಲು ಸಾಧ್ಯವಿಲ್ಲದಷ್ಟು ಹಠಮಾರಿಯಾಗಿದ್ದಿದು ಅವರನ್ನು ಅವರ ತಾಯಿ ಅಮೆರಿಕಾಗೆ ಕಳಿಸಲು ಮುಖ್ಯ ಕಾರಣ. ಅಮೆರಿಕಾದಲ್ಲಿ ಸುಮಾರು 14 ವರ್ಷಗಳ ಕಾಲ ಇದ್ದಿದ್ದೇ ಸಪ್ನಾರ ಅಸಂಪ್ರದಾಯಿಕ ನಡವಳಿಕೆಗೆ ಕಾರಣ ಎಂದು ಜನ ಹೇಳುತ್ತಾರೆ. ಆದರೆ ಸಪ್ನಾ ಇದನ್ನು ಅಲ್ಲಗಳೆದು, ಚಿಕಾಗೋದಲ್ಲಿ ಬದುಕಿದ ದಿನಗಳು ತಮಗೆ ಸಾಕಷ್ಟು ಬದುಕಿನ ಅನುಭವಗಳನ್ನು ಗಳಿಸಿಕೊಟ್ಟಿತು. ತಮ್ಮ ವ್ಯಕ್ತಿತ್ವದಂತೆ ತಾವು ಬದುಕುವುದೇ ವಿನಃ ಸ್ಥಳ ಅಥವ ವ್ಯಕ್ತಿಗಳ ಪ್ರಭಾವದಿಂದಲ್ಲ ಅನ್ನುವುದು ಸಪ್ನಾರ ಅಭಿಮತ. ಮುಂಬೈಗೆ ಬರುವ ಮುನ್ನವೇ ಫ್ಯಾಷನ್ ಬಗ್ಗೆ ಅಧ್ಯಯನ ಮಾಡಿದ್ದ ಸಪ್ನಾ ಅಮೆರಿಕಾದಲ್ಲಿ ವಿನ್ಯಾಸಕಿಯಾಗಿ ಕಾರ್ಯನಿರ್ವಹಿಸಿದ್ದರು.

image


ಮ್ಯಾಡ್ ಓ ವಾಟ್?

ಭಾರತಕ್ಕೆ ಮರಳಿದ ನಂತರ ಫ್ಯಾಷನ್ ಉದ್ಯಮ ಅಷ್ಟೇನೂ ಲಾಭದಾಯಕವಾಗಿಲ್ಲದ್ದನ್ನು ಗಮನಿಸಿದರು. ಹೀಗಾಗಿ ಫ್ಯಾಷನ್ ಉದ್ಯಮ ಹಾಗೂ ವಿನ್ಯಾಸ ಕ್ಷೇತ್ರದಲ್ಲಿ ಹೊಸತೇನಾದರೂ ಸೃಷ್ಟಿಸುವ ದಿಕ್ಕಿನಲ್ಲಿ ಯೋಚಿಸತೊಡಗಿದ್ದರು. ಆದರೆ ಇದರ ಬಗ್ಗೆ ಯಾವುದೇ ಮಾಹಿತಿ ಅವರಿಗಿರಲಿಲ್ಲ. ಬಾಲ್ಯದಿಂದಲೂ ತಮ್ಮ ಕೇಶವಿನ್ಯಾಸದ ಕುರಿತಾಗಿ ಅನೇಕ ಪ್ರಯೋಗಗಳನ್ನು ನಡೆಸಿದ್ದ ಸಪ್ನಾಗೆ ಈ ಸವಾಲು ಸ್ವೀಕರಿಸುವುದು ಇಷ್ಟವಾಯಿತು. ಯಾವುದೇ ಪೂರ್ವತರಬೇತಿಗಳಿಲ್ಲದೇ ಓರ್ವ ವಿನ್ಯಾಸಕಿಯಾಗುವುದು ಅವರ ಕನಸಾಗಿತ್ತು. ಭಾರತದ ಪ್ರಖ್ಯಾತ ಕೇಶ ವಿನ್ಯಾಸಕ ಅಧುನಾ ಅಕ್ತರ್ ಅವರ ಬಳಿ ತರಬೇತಿ ಪಡೆದ ಸಪ್ನಾ, ನಂತರ ಅಮೆರಿಕಾದಲ್ಲಿ ತರಬೇತಿ ಪಡೆದರು.

ಸಪ್ನಾ ತಮ್ಮದೇ ಸ್ವಂತ ಸಲೂನ್ ಹುಟ್ಟುಹಾಕಿದ್ದ ಕಥೆಯೇ ವಿಚಿತ್ರ. ಒಂದು ದಿನ ಸಪ್ನಾರ ಗುರು ಅಧುನಾ ತಮ್ಮ ಸಂಸ್ಥೆಯ ಎಲ್ಲಾ ವಿನ್ಯಾಸಕರು ಸಮವಸ್ತ್ರ ಧರಿಸುವಂತೆ ಆದೇಶ ನೀಡಿದ್ದರು. ಸಪ್ನಾಗೆ ಈ ರೀತಿ ಒಂದೇ ಬಗೆಯ ಸಮವಸ್ತ್ರ ಧರಿಸುವುದು ಇಷ್ಟವಿರಲಿಲ್ಲ. ಸದಾ ಭಿನ್ನತೆಯನ್ನು ಬಯಸುವ ಸಪ್ನಾ ಇದನ್ನು ಧಿಕ್ಕರಿಸಿ ಹೊರಬಂದರು. ಆಗ ಹುಟ್ಟಿಕೊಂಡಿದ್ದೇ ಮ್ಯಾಡ್ ಓ ವಾಟ್. ಸಪ್ನಾ ಹೇಳುವಂತೆ ಬಹುತೇಕ ಪ್ರೀಮಿಯರ್ ಸಲೂನ್‌ಗಳಲ್ಲಿ ಸಮವಸ್ತ್ರದ ನಿಯಮ ಕಡ್ಡಾಯವಾಗಿದೆ. ಸೃಜನಶೀಲ ವೃತ್ತಿಪರರಿಗೆ ಅವರ ಕೆಲಸವಷ್ಟೇ ಮುಖ್ಯವೇ ಹೊರತು ಈ ರೀತಿಯ ನಿಯಮಗಳಲ್ಲ. ಇಂದು ಭಾರತದ ಅತೀ ಪ್ರಸಿದ್ಧ ಕೇಶ ವಿನ್ಯಾಸಕಿ ಎನಿಸಿಕೊಂಡಿರುವ ಸಪ್ನಾರ ವಿನ್ಯಾಸಗಳನ್ನು ಮಹೇಂದ್ರ ಸಿಂಗ್ ಧೋನಿ, ಪ್ರಿಯಾಂಕ ಚೋಪ್ರಾ, ರಣವೀರ್ ಸಿಂಗ್ ಮುಂತಾದವರು ಇಷ್ಟಪಟ್ಟಿದ್ದಾರೆ.

ಚಿನ್ನದಂತಹ ವಿಶಾಲ ಹೃದಯವಂತಿಕೆ

ನೀವು ಸರಿ ಇದ್ದರೆ ಜಗತ್ತಿಗೆ ನಿಮ್ಮದೇ ಉದಾಹರಣೆ ನೀಡಬಹುದು ಅನ್ನುವುದು ಸಪ್ನಾರ ಧೋರಣೆ. ಅವರು ದೇಶಾದ್ಯಂತ ಮಹಿಳಾ ಸಬಲೀಕರಣ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆಗಳನ್ನು ಅಭಿವೃದ್ಧಿಪಡಿಸಬೇಕು ಎನ್ನುವ ಆಶಯ ಹೊಂದಿದ್ದಾರೆ. ಸಪ್ನಾ ಶೆರೋಸ್ ಅನ್ನುವ ಸಂಸ್ಥೆಯಲ್ಲಿ ಅವರ ಆತ್ಮೀಯ ಸ್ನೇಹಿತರಾದ ಅಲೋಕ್ ದೀಕ್ಷಿತ್ ಜೊತೆ ಗುರುತಿಸಿಕೊಂಡಿದ್ದಾರೆ. ಈ ಶೆರೋಸ್ ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತ ಮಹಿಳೆಯರೇ ನಡೆಸುತ್ತಿರುವ ಸಂಸ್ಥೆಯಾಗಿದೆ. ಅಲ್ಲದೇ ಸಪ್ನಾ ಮಹಾರಾಷ್ಟ್ರದ ಗ್ರಾಮವೊಂದನ್ನು ದತ್ತು ಸ್ವೀಕರಿಸಿದ್ದು, ಅಲ್ಲಿ ಗುಣಾತ್ಮಕ ಕೆಲಸಗಳು, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಜೊತೆಗೆ ಅಲ್ಲಿ ಮಕ್ಕಳಿಗಾಗಿ ಶಾಲೆಯೊಂದನ್ನು ತೆರೆದಿದ್ದಾರೆ. ಮಹಿಳೆಯರ ಸಬಲೀಕರಣ ಹಾಗೂ ಸುರಕ್ಷತೆಗಾಗಿ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಐ ಹ್ಯಾವ್ ಎ ಡ್ರೀಮ್ ಅನ್ನುವ ಅಭಿಯಾನದ ಮೂಲಕ ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತ ಮಹಿಳೆಯರ ನೆರವಿಗೆ ನಿಲ್ಲುವ ಜೊತೆಗೆ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ, ಸಾರ್ವಜನಿಕ ಸಹಭಾಗಿತ್ವದ ಧನಸಂಗ್ರಹಣೆಯಿಂದ ಆ ಮಹಿಳೆಯರಿಗೆ ಗೌರವಾನ್ವಿತ ಬದುಕು ಕೊಡುವ ಸಮಾಜಮುಖಿ ಕೆಲಸದಲ್ಲಿಯೂ ಸಪ್ನಾ ತೊಡಗಿಕೊಂಡಿದ್ದಾರೆ.

image


ನಿಜವಾದ ಮಾದರಿ

ತಮ್ಮ ತಾರುಣ್ಯದಲ್ಲೇ ವೇಶ್ಯೆ ಎಂದು ಕರೆಸಿಕೊಂಡಿದ್ದು ಆಘಾತಕಾರಿಯಾಗಿದ್ದರೂ ಸಪ್ನಾ ಇದರಿಂದ ಸಾಕಷ್ಟು ವಿಷಯಗಳನ್ನು ಚಿಕ್ಕವಯಸ್ಸಿನಲ್ಲೇ ಅರಿತುಕೊಂಡರು.

ಮಿನಿಸ್ಕರ್ಟ್ ಧರಿಸುವುದು, ಸಣ್ಣದಾಗಿ ಕೂದಲು ಕತ್ತರಿಸಿಕೊಳ್ಳುವುದು, ಹುಡುಗರೊಂದಿಗೆ ಸಂಕೋಚವಿಲ್ಲದೇ ಮುಕ್ತವಾಗಿ ಮಾತನಾಡುವುದನ್ನು ನಮ್ಮ ಸಮಾಜ ಸಹಿಸದೇ ವೇಶ್ಯೆ ಎನ್ನುವ ಪಟ್ಟ ಕಟ್ಟುತ್ತದೆ. ಹಾಗೂ ಇಂತಹ ನಡವಳಿಕೆ ಭಾರತೀಯತೆ ಅಲ್ಲ ಎನ್ನುವ ಮಾತಿದೆ. ಆದರೆ ನನಗೆ ದೇಶದೊಂದಿಗೆ ಥಳುಕು ಹಾಕಿಕೊಳ್ಳಬೇಕಾದ ಅಗತ್ಯ ಇಲ್ಲ. ಧರಿಸುವ ಬಟ್ಟೆ, ವೇಷಭೂಷಣ ಅಥವಾ ನಡವಳಿಕೆಗಳು ನಿಮ್ಮ ವ್ಯಕ್ತಿತ್ವವನ್ನು ವ್ಯಾಖ್ಯಾನಿಸಲಾರವು. ಮಾತನಾಡುವ ಮಂದಿ ಮಾತನಾಡುತ್ತಲೇ ಇರುತ್ತಾರೆ. ಇವರನ್ನು ಹಾಗೂ ಈ ಕಟ್ಟಾ ಕಂದಾಚಾರಗಳ ಸಮಾಜವನ್ನು ಧಿಕ್ಕರಿಸಿ ನೀವು ಅಂದುಕೊಂಡದ್ದನ್ನು ಸಾಧಿಸುವುದೇ ನಿಜವಾದ ಸವಾಲು ಹಾಗೂ ನಿಮ್ಮ ಬದುಕಿನ ಗುರಿಯಾಗಿರಬೇಕು. ಆದರೆ ಬಹುತೇಕ ಜನರು ಇದನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗುತ್ತಾರೆ ಎಂದು ತಮ್ಮ ಜೀವನದ ಅನುಭವಗಳನ್ನು ಹೇಳಿಕೊಂಡಿದ್ದಾರೆ ಸಪ್ನಾ.

ಪ್ರಪಂಚದಲ್ಲಿ ಏನು ಬದಲಾಗಬೇಕು ಎನ್ನುವ ಪ್ರಶ್ನೆಗೆ ಸಪ್ನಾ ಏನೂ ಇಲ್ಲ ಎಂದುತ್ತರಿಸುತ್ತಾರೆ. ಹಾಗೆ ಏನೂ ಇಲ್ಲ ಅನ್ನುವ ಉತ್ತರದೊಂದಿಗೆ ಇನ್ನೊಂದು ಏನೂ ಇಲ್ಲ ಸೇರಿಕೊಳ್ಳುತ್ತದೆ. ಸಪ್ನಾರ ಪ್ರಕಾರ ಹೃದಯವನ್ನು ವಿಶಾಲವಾಗಿ ತೆರೆದಿಟ್ಟುಕೊಳ್ಳುವುದು ಮುಖ್ಯ. ಯೋಗದಂತಹ ವಿಶ್ರಾಂತಿ ದೊರಕಿಸಿಕೊಡುವ ಹವ್ಯಾಸ ಪ್ರತಿಯೊಬ್ಬರಿಗೂ ಅವರ ಅಂತಃಸತ್ವದ ಅರಿವು ಮೂಡಿಸುತ್ತದೆ. ಇಂತಹ ಅಭ್ಯಾಸಗಳಿಂದಲೇ ಇಂದು ಸಪ್ನಾ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಏನನ್ನೇ ಒಳ್ಳೆಯದನ್ನು ಮಾಡಿದರೂ ಅದು ತಿರುಗಿ ನಿಮಗೆ ಲಭಿಸುತ್ತದೆ. ನಿಮಗೆ ಇಷ್ಟವಿಲ್ಲದ್ದನ್ನು ಕೂಡಲೇ ತಿರಸ್ಕರಿಸಿ, ಬದಲಾವಣೆಗೆ ಹೊಂದಿಕೊಳ್ಳಿ ಎನ್ನುವುದು ಸಪ್ನಾ ಇಲ್ಲಿಯವರೆಗೆ ಪಾಲಿಸಿರುವ ಕೆಲವು ಅಮೂಲ್ಯವಾದ ತತ್ವಗಳು.

ಅವರ ಈ ಧೋರಣೆ ಅವರ ಭೌತಿಕ ನಿಲುವಿಗಿಂತ ಭಿನ್ನ. ಅವರ ಕಥೆ ಓದಿದವರಿಗೆ ಹಾಗೂ ಕೇಳುವವರಿಗೆ ಪ್ರೀತಿಯ ಅಗತ್ಯತೆ, ಹುಡುಕಾಟ ಹಾಗೂ ಶಾಂತಿಯುತ ಬದುಕಿನ ಮಹತ್ವ ತಿಳಿಸುತ್ತದೆ. ಮೊದಲು ನಮ್ಮ ಬದುಕು ನಂತರ ಜಗತ್ತಿನೊಂದಿಗೆ ಬದುಕು ಅನ್ನುವುದು ಇದರ ಸಾರಾಂಶ. ಸಪ್ನಾ ತಮ್ಮ ಬದುಕಿನ ಕಥೆಯನ್ನು ಬುಲ್ಲೇ ಶಾ ಅನ್ನುವ ದಾರ್ಶನಿಕನ ವಾಣಿಯೊಂದಿಗೆ ಮುಗಿಸುತ್ತಾರೆ.

“ ಜೋ ನ ಜಾನೆ, ಹಕ್ ಕಿ ತಾಕತ್ ರಬ್ ನ ದೇವೇ ಉಸ್ಕೋ ಹಿಮ್ಮತ್ ರಬ್‌ ನ ದೇವೇ ಉಸ್ಕೋ ಹಿಮ್ಮತ್ ”

ಅಂದರೆ ನೀವು ಹೊರಗಿನ ದೇವರನ್ನು ಹುಡುಕಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಆ ದೇವರು ನಿಮ್ಮೊಳಗೆ ಇದ್ದಾನೆ.