ಸೈಕಲ್​ನಲ್ಲಿ ಹಣ್ಣು ಮಾರುತ್ತಿದ್ದ ಸುರಿಂದರ್ ಸಿಂಗ್ ಕೋಟ್ಯಾಧಿಪತಿಯಾದ ಕಹಾನಿ..  

ಟೀಂ ವೈ.ಎಸ್.ಕನ್ನಡ 

1

ಪರಿಶ್ರಮ, ಕಠಿಣ ನಿರ್ಣಯ ಮತ್ತು ಸಮರ್ಪಣಾ ಮನೋಭಾವವಿದ್ರೆ ಯಾರು ಬೇಕಾದ್ರೂ ಅಂದುಕೊಂಡಿದ್ದನ್ನೆಲ್ಲ ಸಾಧಿಸಬಹುದು. ಕಡು ಬಡತನವನ್ನು ಮೆಟ್ಟಿ ನಿಂತು ಯಶಸ್ಸು ಸಾಧಿಸಿದ ಈ ಉದ್ಯಮಿಯೇ ಅದಕ್ಕೆ ಸಾಕ್ಷಿ. ಸೈಕಲ್ ಮೇಲೆ ಹಣ್ಣುಗಳನ್ನು ಮಾರಿ ಬದುಕು ಸಾಗಿಸುತ್ತಿದ್ದವರೀಗ ಮಿಲಿಯನ್ ಡಾಲರ್ ಮೌಲ್ಯದ ಬ್ಯುಸಿನೆಸ್​ಗೆ ಒಡೆಯ. 12 ರಾಷ್ಟ್ರಗಳಲ್ಲಿ ಅವರ ಸಂಸ್ಥೆಯ ಶಾಖೆಗಳಿವೆ. ಇದು ಪಂಜಾಬ್​ನ  ಅಬೋಹರ್ ಮೂಲದ ಸುರಿಂದರ್ ಸಿಂಗ್ ಅವರ ಯಶಸ್ಸಿನ ಕಹಾನಿ.

ಸುರಿಂದರ್ ಸಿಂಗ್ ಬಡ ಕುಟುಂಬದಲ್ಲಿ ಜನಿಸಿದವರು, 5ನೇ ತರಗತಿ ಮುಗಿಸಿ ಶಾಲೆ ಬಿಟ್ಟರು. ಆಗಿನಿಂದ್ಲೂ ಸೈಕಲ್​ನಲ್ಲಿ ಹಣ್ಣುಗಳನ್ನು ಮಾರುವುದೇ ಅವರ ಕಾಯಕವಾಗಿತ್ತು. ಹಣ್ಣಿನ ಉದ್ಯಮದ ಮಹತ್ವ ಹಾಗೂ ಅದರಲ್ಲಿರುವ ವಿಪುಲ ಅವಕಾಶಗಳನ್ನು ಅರ್ಥಮಾಡಿಕೊಂಡ ಸುರಿಂದರ್ ಸಿಂಗ್, ಸ್ಥಳೀಯ ಮಾರ್ಕೆಟ್ ನಲ್ಲಿ ಚಿಕ್ಕ ಅಂಗಡಿಯೊಂದನ್ನು ತೆರೆದ್ರು. ಹಣ್ಣಿನ ಉದ್ಯಮ ತಮ್ಮ ಕೈಹಿಡಿದಿದೆ ಅನ್ನೋದು ಗೊತ್ತಾಗ್ತಿದ್ದಂತೆ ಅದನ್ನು ಇನ್ನಷ್ಟು ವಿಸ್ತರಿಸಲು ನಿರ್ಧರಿಸಿದ್ರು. ಆದ್ರೆ ಅದಕ್ಕೆ ಬೇಕಾದ ಹಣ ಸಿಂಗ್ ಬಳಿ ಇರಲಿಲ್ಲ. ಹಾಗಂತ ಅವರು ನಿರಾಶರಾಗಿ ಕೂರಲಿಲ್ಲ. 

ಬ್ಯಾಂಕ್ ನಿಂದ ಸಾಲ ಪಡೆದು ವ್ಹೋಲ್ ಸೇಲ್ ಮಳಿಗೆ ಶುರುಮಾಡಿದ್ರು. ತಮ್ಮ ಬ್ರಾಂಡ್ ಅನ್ನು ಪ್ರಚಾರ ಮಾಡಲೆಂದೇ ಸುತ್ತಮುತ್ತಲ ಪ್ರದೇಶಗಳಿಗೆ ಕಿತ್ತಳೆ ಹಣ್ಣಿನ ಪೂರೈಕೆ ಹಾಗೂ ಮಾರಾಟ ಆರಂಭಿಸಿದ್ರು. ಆಗಿನಿಂದ ಅವರ ಹಣ್ಣಿನ ಉದ್ಯಮ ಯಶಸ್ಸಿನ ಹಾದಿಯಲ್ಲಿ ಸಾಗಲಾರಂಭಿಸಿತ್ತು. ಹೆಚ್ಹೆಚ್ಚು ಆರ್ಡರ್ ಗಳು ಸಿಗಲಾರಂಭಿಸಿದ್ವು. ಸುರಿಂದರ್ ಸಿಂಗ್ ಅವರ ಹೆಸರು ಎಷ್ಟು ಪ್ರಚಲಿತಕ್ಕೆ ಬಂತಂದ್ರೆ ವಿದೇಶಗಳಿಂದ್ಲೂ ಹಣ್ಣುಗಳಿಗೆ ಬೇಡಿಕೆ ಬಂದಿತ್ತು. ಈಗ ಅವರು ಬ್ರೆಜಿಲ್, ಬಾಂಗ್ಲಾದೇಶ, ದುಬೈ, ಉಕ್ರೇನ್ ಸೇರಿದಂತೆ ಹಲವು ರಾಷ್ಟ್ರಗಳಿಗೆ ತಮ್ಮ ಹಣ್ಣಿನ ಉದ್ಯಮವನ್ನು ವಿಸ್ತರಿಸಿದ್ದಾರೆ.

ಸುರಿಂದರ್ ಸಿಂಗ್ ಒಂದು ಉತ್ಪಾದನಾ ಘಟಕವನ್ನು ಕೂಡ ತೆರೆದಿದ್ದಾರೆ. ಅಲ್ಲಿ ಹಣ್ಣುಗಳನ್ನು ಸಾಗಿಸಲು ಬಳಸುವ ಪೆಟ್ಟಿಗೆಗಳನ್ನು ತಯಾರಿಸಲಾಗುತ್ತದೆ. ಅವರ ಬಳಿ 4 ದೊಡ್ಡ ದೊಡ್ಡ ಲಾರಿಗಳಿವೆ. ಪ್ರತಿ ಲಾರಿಯ ಬೆಲೆ ತಲಾ 40 ಲಕ್ಷ ರೂಪಾಯಿ. ದಕ್ಷಿಣ ಭಾರತದಾದ್ಯಂತ ಸುರಿಂದರ್ ಸಿಂಗ್ ಕಿತ್ತಳೆ ಹಣ್ಣುಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಹಣ್ಣುಗಳನ್ನು ಸಂಗ್ರಹಿಸಿಡಲು ಬೇಕಾದ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದಾರೆ. 

ಈಗ ಸುರಿಂದರ್ ಸಿಂಗ್ ಪ್ರತಿವರ್ಷ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ. ಸಣ್ಣ ಸಣ್ಣ ವಿವರಗಳು, ಆದ್ಯತೆ, ಗುಣಮಟ್ಟ ಇವನ್ನೆಲ್ಲ ಅರ್ಥಮಾಡಿಕೊಂಡಿದ್ದರಿಂದ್ಲೇ ಯಶಸ್ಸು ಸುರಿಂದರ್ ಸಿಂಗ್ ಅವರ ಪಾಲಾಗಿದೆ. ಈಗ 400 ಮಂದಿ ಸುರಿಂದರ್ ಅವರ ಕೈಕೆಳಗೆ ಕೆಲಸ ಮಾಡುತ್ತಿದ್ದಾರೆ. ಸಂಸ್ಥೆಯ ಸಿಬ್ಬಂದಿಗೆ ಅವರು ಮಾದರಿಯಾಗಿದ್ದಾರೆ. ಅಷ್ಟೇ ಅಲ್ಲ ಕೃಷಿಯನ್ನೇ ವೃತ್ತಿಯನ್ನಾಗಿ ಸ್ವೀಕರಿಸಲು ಇಚ್ಛಿಸುವವರ ಪಾಲಿಗೆ ಕೂಡ ಸುರಿಂದರ್ ಸಿಂಗ್ ಮಾದರಿಯಾಗಿ ನಿಲ್ಲುತ್ತಾರೆ.

ಇದನ್ನೂ ಓದಿ... 

ಕನ್ನಡ ಬೆಳಸಲು ಆರಂಭವಾಯ್ತು "ಡಿಂಡಿಮ" 

ಬಿಹಾರದ "ವಿದ್ಯುತ್ ಭವನ"ದಲ್ಲಿದೆ ವಿಭಿನ್ನ ಕೆಫೆ- ತ್ಯಾಜ್ಯಗಳಿಂದಲೇ ತಯಾರಾಗಿದೆ ಕುರ್ಚಿ, ಟೇಬಲ್..!

Related Stories

Stories by YourStory Kannada