‘ಗ್ರ್ಯಾಬ್​​​ಹೌಸ್​ ಡಾಟ್ ಕಾಮ್’ ಮಧ್ಯವರ್ತಿಗಳಿಲ್ಲದೆ ಮನೆಯ ಹುಡುಕಾಟ

ಟೀಮ್​​ ವೈ.ಎಸ್​.ಕನ್ನಡ

‘ಗ್ರ್ಯಾಬ್​​​ಹೌಸ್​ ಡಾಟ್  ಕಾಮ್’ ಮಧ್ಯವರ್ತಿಗಳಿಲ್ಲದೆ ಮನೆಯ ಹುಡುಕಾಟ

Tuesday November 24, 2015,

3 min Read

ವಿದ್ಯಾಭ್ಯಾಸದ ನಿಮಿತ್ತ ಅಥವಾ ವೃತ್ತಿ ಬದುಕಿಗಾಗಿ ಮಹಾನಗರಕ್ಕೆ ಕಾಲಿಡುವ ಜನರು ಎದುರಿಸುವ ಸಮಸ್ಯೆಗಳು ಹಲವಾರು. ಬೇರೆ ನಗರ ಅಥವಾ ಗ್ರಾಮೀಣ ಪ್ರದೇಶದಿಂದ ಬಂದಿರುವ ಜನರು ಹೊಸ ಹವಾಮಾನಕ್ಕೆ, ಆಹಾರ ಪದ್ಧತಿಗೆ ಹೊಂದಿಕೊಳ್ಳಲು ಕಷ್ಟಪಡಬೇಕಾಗುತ್ತದೆ. ಹೊಸ ಮುಖಗಳೊಂದಿಗೆ ಬೆರೆಯಬೇಕಾಗುತ್ತದೆ. ಆದ್ರೆ ಇದೆಲ್ಲಕ್ಕಿಂತಲೂ ಕಷ್ಟದ ವಿಚಾರ ಅಂದ್ರೆ ಮಹಾನಗರಗಳಲ್ಲಿ ಮನೆ ಹುಡುಕುವುದು.

image


ನಗರದಲ್ಲಿ ಸಂಬಂಧಿಕರು, ಸ್ನೇಹಿತರು ಇದ್ದರೂ ಅವರ ಮನೆಯಲ್ಲಿ ಎರಡು-ಮೂರು ದಿನಗಳ ಕಾಲ ಉಳಿದುಕೊಳ್ಳುವುದಷ್ಟೇ ಸಾಧ್ಯ. ಮತ್ತೆ ಹೊಸ ಗೂಡು ಹುಡುಕಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆದ್ರೆ ಮಹಾನಗರಗಳಲ್ಲಿ ಮನೆಯನ್ನು ಹುಡುಕುವುದೇ ತುಂಬಾ ಕಷ್ಟಕರವಾದ ಕೆಲಸ. ಇದ್ದ ಕೆಲಸವನ್ನೆಲ್ಲಾ ಬಿಟ್ಟು ದಿನವಿಡೀ ಅಲೆದರೂ ನಿಗದಿತ ಬಜೆಟ್​ನಲ್ಲಿ ಆರಾಮದಾಯಕವೆನಿಸಿರುವ ಮನೆ ಸಿಗುವುದು ಕಷ್ಟ.

ಇತ್ತೀಚಿನ ದಿನಗಳಲ್ಲಿ ರಿಯಲ್ ಎಸ್ಟೇಟ್ ಏಜೆಂಟ್​ಗಳು, ದಲ್ಲಾಳಿಗಳು ಮನೆ ಹುಡುಕಿ ಕೊಡ್ತಾರಾದ್ರೂ ಅವರಿಗೆ ದುಪ್ಪಟ್ಟು ಹಣ ಪಾವತಿಸಬೇಕಾದ ಪರಿಸ್ಥಿತಿ. ಪಂಕುರಿ ಶ್ರೀವಾಸ್ತವ, ಟೀಚ್ ಇಂಡಿಯಾ ಫೆಲೋಶಿಪ್​ಗಾಗಿ ಮುಂಬೈಗೆ ಆಗಮಿಸಿದಾಗಲೂ ಇದೇ ಸಮಸ್ಯೆಯನ್ನು ಎದುರಿಸಿದ್ದರು. ಸ್ನೇಹಿತರು, ಸಂಬಂಧಿಕರ ಮನೆಯಲ್ಲಿ ಉಳಿದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿತ್ತು. ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿಯೇ ಪಂಕುರಿ ಮತ್ತು ಸ್ನೇಹಿತರಿಂದ ಹುಟ್ಟಿಕೊಂಡಿದ್ದು ಗ್ರ್ಯಾಬ್​ಹೌಸ್​ ಡಾಟ್ ಕಾಮ್.

ಗ್ರ್ಯಾಬ್​ಹೌಸ್​ ಡಾಟ್ ಕಾಮ್ ಕಟ್ಟಿದ ತಂಡ

ಪಂಕುರಿ ಹಾಗೂ ಪ್ರತೀಕ್ ಮುಂಬೈನಲ್ಲಿ ಮನೆ ಹುಡುಕಲು ಸಾಕಷ್ಟು ತೊಂದರೆ ಅನುಭವಿಸಿದ್ರು. ‘ಮನೆ ಹುಡುಕಾಟಕ್ಕೆ ಹಲವು ವೆಬ್​ಸೈಟ್​ಗಳಿದ್ದರೂ ಅದ್ಯಾವುವೂ ನಿಮಗೆ ಸೂಕ್ತವಾದ ಮನೆಗಳನ್ನು ಹುಡುಕಿಕೊಡುವುದಿಲ್ಲ. ಹೀಗಾಗಿ ನಾವು ಈ ಸಮಸ್ಯೆಗೆ ಏನಾದರೂ ಪರಿಹಾರ ಕಂಡುಕೊಳ್ಳಬೇಕೆಂದು ಯೋಚಿಸಿ ಗ್ರ್ಯಾಬ್​ಹೌಸ್​ ಡಾಟ್ ಕಾಮ್​ಗೆ ಚಾಲನೆ ನೀಡಿದೆವು‘ ಅಂತಾರೆ ಪ್ರತೀಕ್ . ಈ ಯೋಜನೆಯ ರೂಪೀಕರಣಕ್ಕೆ ಪ್ರತೀಕ್ ಬಾಲ್ಯ ಗೆಳೆಯ ಅಂಕಿತ್ ಕೂಡಾ ಸಾಥ್ ನೀಡಿದ್ರು.

ದೆಹಲಿ ಐಐಟಿ ವಿದ್ಯಾರ್ಥಿಯಾಗಿದ್ದ ಅಂಕಿತ್​ಗೆ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡಿದ ಅನುಭವವಿತ್ತು. ಪ್ರತೀಕ್ ಐಐಟಿ ಕಾನ್ಪುರದಲ್ಲಿ ವಿದ್ಯಾಭ್ಯಾಸ ಮುಗಿಸಿದ್ದರು. ಮಹಾನಗರದಲ್ಲಿ ಮನೆಯ ಹುಡುಕಾಟ ಅದೆಷ್ಟು ಕಷ್ಟ ಅಂತ ತಿಳಿದುಕೊಂಡ ಈ ಯುವ ತಂಡ ಗ್ರ್ಯಾಬ್​ಹೌಸ್​ ಡಾಟ್ ಕಾಮ್​ ಅನ್ನು ಸಿದ್ಧಗೊಳಿಸಿತು.

ಗ್ರ್ಯಾಬ್​ಹೌಸ್​ ಡಾಟ್ ಕಾಮ್ ಅನ್ನೋ ಈ ವೆಬ್​ಸೈಟ್​ ಮನೆ ಹುಡುಕುವವರನ್ನು, ಮನೆ ನೀಡುವವರನ್ನು ಒಂದೇ ಸೂರಿನಡಿ ತರುವ ಕೆಲಸ ಮಾಡುತ್ತಿದೆ. ನೀವು ಮನೆ ಮಾಡಿಕೊಂಡಿದ್ದು, ರೂಮ್​ಮೇಟ್​ಗಳ ಹುಡುಕಾಟದಲ್ಲಿದ್ದರೆ ಈ ವೆಬ್​ಸೈಟ್​ನಲ್ಲಿ ಹಾಕಬಹುದು. ನಿಮ್ಮ ಆಸಕ್ತಿ, ಆಯ್ಕೆ, ಷರತ್ತುಗಳಿಗೆ ಬದ್ಧವಾಗಿ ರೂಮ್​ಮೇಟ್​ಗಳ ಆಯ್ಕೆ ಮಾಡಿಕೊಳ್ಳಬಹುದು. ಮನೆಯನ್ನು ಹುಡುಕುವವರು ಸಹ ಈ ವಿಭಾಗದಲ್ಲಿ ತಮ್ಮ ಬೇಡಿಕೆಯನ್ನು ಇಡಬಹುದಾಗಿದೆ.

ಗ್ರ್ಯಾಬ್​ಹೌಸ್​ ಡಾಟ್ ಕಾಮ್ ಆರಂಭಗೊಂಡ ಕೆಲವೇ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ತನ್ನತ್ತ ಸೆಳೆದಿದೆ. ಮಧ್ಯವರ್ತಿಗಳಿಲ್ಲ ಅನ್ನೋ ಕಾರಣಕ್ಕಾಗಿಯೇ ಈ ವೆಬ್​ಸೈಟ್​ನಲ್ಲಿ ಮನೆ ಹುಡುಕಲು ಜನರು ಆಸಕ್ತಿ ತೋರಿಸುತ್ತಿದ್ದಾರೆ. ಮಧ್ಯವರ್ತಿಗಳು ಮನೆ ಹುಡುಕಿಕೊಡಲು ಸಾವಿರಾರು ರೂಪಾಯಿ ವಸೂಲಿ ಮಾಡ್ತಾರೆ. ಆದ್ರೆ ನಾವು ಜನರಿಗೆ ಯಾವುದೇ ರೀತಿಯ ಶುಲ್ಕ ವಿಧಿಸಿಲ್ಲ, ಹೀಗಾಗಿಯೇ ಗ್ರ್ಯಾಬ್​ಹೌಸ್​ ಡಾಟ್​ ಕಾಮ್​ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಅಂತಾರೆ ಪ್ರತೀಕ್.

‘ಜನರಿಗೆ ಅನುಕೂಲವಾಗುಂತೆ ನಾವೇನಾದರೂ ಮಾಡಬೇಕೆಂದು ನಿರ್ಧರಿಸಿದೆವು. ಇದರ ಫಲವಾಗಿಯೇ ರೂಪುಗೊಂಡಿದ್ದು ಗ್ರ್ಯಾಬ್​ ಹೌಸ್ ಡಾಟ್ ಕಾಮ್. ನಾವು ಮನೆಯ ಹುಡುಕಾಟಕ್ಕೆ ಜನರಿಂದ ದುಡ್ಡು ತೆಗೆದುಕೊಳ್ಳುವುದಿಲ್ಲ. ಬದಲಾಗಿ ವೆಬ್​ಸೈಟ್​ಗೆ ಬರುವ ಜಾಹೀರಾತುಗಳಿಂದ ನಾವು ಆದಾಯ ಗಳಿಸುತ್ತಿದ್ದೇವೆ’ ಅಂತ ಖುಷಿಯಿಂದ ಹೇಳ್ತಿದೆ ಗ್ರ್ಯಾಬ್​ಹೌಸ್​ ತಂಡ.

ಸಾಮಾಜಿಕ ಜಾಲತಾಣಗಳನ್ನು ಕೂಡಾ ಗ್ರ್ಯಾಬ್​ಹೌಸ್​ ಡಾಟ್ ಕಾಮ್ ತಂಡ ಯಶಸ್ವಿಯಾಗಿ ಬಳಸಿಕೊಂಡಿದೆ. ಜಾಲತಾಣಗಳಲ್ಲಿ ಹೆಚ್ಹೆಚ್ಚು ಜನರ ಸಂಪರ್ಕ ಸಾಧ್ಯವಾಗುವುದರಿಂದ ಇಲ್ಲಿ ಅದೆಷ್ಟೋ ಜನರು ತಮಗೆ ಬೇಕಾದ ಮನೆಯನ್ನು ಹುಡುಕಿಕೊಂಡಿದ್ದಾರೆ.

image


ಗ್ರ್ಯಾಬ್​ಹೌಸ್​ ಡಾಟ್ ಕಾಮ್, ಮನೆಯನ್ನು ಹುಡುಕುವ ಸಾವಿರಾರು ಮಂದಿಗೆ ನೆರವಾಗಿದೆ. ದಿನಗಟ್ಟಲೆ ಮನೆಗಾಗಿ ಅಲೆಯುತ್ತಿದ್ದ ಜನರು ಕಡಿಮೆ ಸಮಯದಲ್ಲಿ, ಕಡಿಮೆ ವೆಚ್ಚದಲ್ಲಿ ಉತ್ತಮ ಮನೆ ಸಿಗುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ 750 ಮಂದಿ ರಿಜಿಸ್ಟರ್ಡ್ ಸದಸ್ಯರು ಈ ವೆಬ್​ಸೈಟ್​ನ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಮನೆ ಬೇಕಾಗಿದೆ ಹಾಗೂ ಮನೆ ಖಾಲಿಯಿದೆ ವಿಭಾಗಗಳಲ್ಲಿ ನೂರಾರು ಜನರು ಹೆಸರು ದಾಖಲಿಸಿಕೊಳ್ಳುತ್ತಿದ್ದಾರೆ. ಈ ವೆಬ್​ಸೈಟ್​ನಿಂದಾಗಿ ಜನರು ಮಧ್ಯವರ್ತಿಗಳಿಗೆ ನೀಡುವ ದೊಡ್ಡ ಮೊತ್ತದ ಹಣವನ್ನು ಉಳಿಸಬಹುದು.

ಕೇವಲ 10 ಲಕ್ಷ ಬಂಡವಾಳದೊಂದಿಗೆ ಆರಂಭಗೊಂಡಿರುವ ಗ್ರ್ಯಾಬ್​ಹೌಸ್​ ಡಾಟ್ ಕಾಮ್ ಈಗ ಜನ ಮೆಚ್ಚುವ ಸೇವೆ ನೀಡುತ್ತಿದೆ. ಅಷ್ಟೇ ಅಲ್ಲ ಉತ್ತಮ ಆದಾಯವನ್ನೂ ಗಳಿಸುತ್ತಿದೆ. ಮುಂದಿನ ದಿನಗಳಲ್ಲಿ ಇತರ ಮೆಟ್ರೋ ಪಾಲಿಟನ್ ಸಿಟಿಗಳಲ್ಲೂ ಕೂಡಾ ಈ ಸೇವೆಯನ್ನು ಆರಂಭಿಸಲು ಗ್ರ್ಯಾಬ್​ಹೌಸ್​ ಡಾಟ್ ಕಾಮ್​ನ ಯುವ ತಂಡ ಸಿದ್ಧತೆ ನಡೆಸ್ತಿದೆ.

ಲೇಖಕರು: ಸಂಕೇತ್ ಶೇಠ್​

ಅನುವಾದಕರು : ವಿನುತಾ