ಡೆಬಿಟ್-ಕ್ರೆಡಿಟ್ ಕಾರ್ಡ್ ಇಲ್ಲದಿದ್ರು ವಹಿವಾಟು ಸಾಧ್ಯ- ಇದು ಡಿಜಿಟಲ್​ ಇಂಡಿಯಾ ಕಾನ್ಸೆಪ್ಟ್​ ಕನಸು

ಟೀಮ್​ ವೈ.ಎಸ್​. ಕನ್ನಡ

1

ಇನ್ಮುಂದೆ ನೀವು ಶಾಪಿಂಗ್‍ಗೆ ಹೋದಾಗ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಕ್ಯಾಶ್ ಕೂಡ ತೆಗೆದುಕೊಂಡು ಹೋಗಿಲ್ಲ ಅಂದ್ರೆ ಯೋಚಿಸಬೇಡಿ. ಯಾಕಂದ್ರೆ, ಇದ್ಯಾವುದು ಇಲ್ಲದೆಯೇ ನೀವು ಆರಾಮಾಗಿ ನಿಮಗೆ ಬೇಕಾದ್ದನ್ನು ಕೊಂಡು ಕೊಳ್ಳಬಹುದು. ವ್ಯಾಪಾರಿಗಳಿಗೆ ಹಣವನ್ನು ಡಿಜಿಟಲ್ ರೂಪದಲ್ಲಿ ಶುಲ್ಕ ರಹಿತವಾಗಿ ಪಾವತಿಸಲು, ಡೆಬಿಟ್-ಕ್ರೆಡಿಟ್ ಕಾರ್ಡ್​ಗಳು, ಮೊಬೈಲ್ ಫೋನ್‍ಗಳು ಇಲ್ಲದೆಯೂ ನಗದು ರಹಿತ ವಹಿವಾಟು ನಡೆಸಲು ಸಾಧ್ಯವಾಗುವ ಹೊಸ ಆಪ್ ಸಿದ್ಧವಾಗಿದೆ. ಆಧಾರ್ ಸಂಖ್ಯೆ ಆಧರಿಸಿ ಹಣ ಪಾವತಿ ಮಾಡಲು ಕೇಂದ್ರ ಸರ್ಕಾರ ಈ ಮೊಬೈಲ್ ಆ್ಯಪ್ ಸಿದ್ಧಪಡಿಸಿದೆ. ಈ ಆ್ಯಪ್ ಬಳಸಿ ಇದರ ಉಪಯೋಗ ಪಡೆದ್ರೆ ಅದಕ್ಕೆ ಗ್ರಾಹಕರು ಶುಲ್ಕ ಪಾವತಿಸಬೇಕಿಲ್ಲ. ಈ ಸೇವೆ ಉಚಿತವಾಗಿರೋದ್ರಿಂದ ಬಡವರು ಕೂಡ ಈ ಸೇವೆಯನ್ನು ಪಡೆಯಬಹುದು. ಕೇಂದ್ರ ಸರ್ಕಾರದ ಉದ್ದೇಶವೇ ಇದು, ಬಡವರು ಕೂಡ ಡಿಜಿಟಲ್ ಪಾವತಿ ವ್ಯವಸ್ಥೆ ವ್ಯಾಪ್ತಿಗೆ ಬರಬೇಕು, ಬ್ಯಾಂಕಿಂಗ್ ವ್ಯವಸ್ಥೆ ಇಲ್ಲದ ಹಳ್ಳಿಗಳಲ್ಲೂ ಡಿಜಿಟಲ್ ಪಾವತಿ ಸಾಧ್ಯವಾಗಬೇಕು ಎಂಬುದು.

ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯಲ್ಲಿ ಗ್ರಾಹಕನ ಬಳಿ ಯಾವುದೇ ಕಾರ್ಡ್ ಇರಬೇಕೆಂದೇನಿಲ್ಲ. ಡಿಜಿಟಲ್ ರೂಪದಲ್ಲಿ ಹಣ ಪಾವತಿ ಮಾಡಬಹುದು. ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಿಸಿರುವ ಯಾವುದೇ ವ್ಯಕ್ತಿ ಈ ಹೊಸ ಆ್ಯಪ್‍ನಲ್ಲಿ ಹಣ ಪಾವತಿಸಬಹುದು. ಹಾಗಂತ ಐಡಿಎಫ್‍ಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರಾಜೀವ್‍ಲಾಲ್ ತಿಳಿಸಿದ್ದಾರೆ.

ಇದನ್ನು ಓದಿ: ಟಿ ಶರ್ಟ್ ಮೇಲೆ ಕನ್ನಡ ಅಭಿಮಾನ- ಸ್ಟಾರ್ಟ್​ಅಪ್​ನ ಸಾಧನೆಗೆ ಗ್ರಾಹಕರು ಕೊಟ್ರು ಬಹುಮಾನ..!

ಆ್ಯಪ್ ಮೂಲಕ ಪಾವತಿ ಮಾಡೋದು ಕೂಡ ಅಷ್ಟೇ ಸುಲಭ. ವ್ಯಾಪಾರಿಗಳು ಈ ಆ್ಯಪ್‍ನ್ನು ತಮ್ಮ ಸ್ಮಾರ್ಟ್ ಫೋನ್‍ನಲ್ಲಿ ಹಾಕಿಕೊಳ್ಳಬೇಕು. ನಂತ್ರ ಆ ಫೋನನ್ನು ಬಯೋಮೆಟ್ರಿಕ್ ರೀಡರ್ ಯಂತ್ರಕ್ಕೆ ಜೋಡಿಸಬೇಕು. ಹಾಗಂತ ಯಂತ್ರಕ್ಕೆ ಹೆಚ್ಚು ಬಂಡವಾಳದ ಅವಶ್ಯಕತೆಯಿಲ್ಲ. ಬಯೋಮೆಟ್ರಿಕ್ ರೀಡರ್ ಯಂತ್ರದ ಬೆಲೆ 2 ಸಾವಿರ ರೂಪಾಯಿಯಷ್ಟೆ. ಹಣ ಪಾವತಿಸಬೇಕಾಗಿರುವ ಗ್ರಾಹಕ ಹಣದ ಮೊತ್ತದ ಜೊತೆ ತನ್ನ ಆಧಾರ್ ಸಂಖ್ಯೆಯನ್ನು ಈ ಆ್ಯಪ್‍ನಲ್ಲಿ ಎಂಟ್ರಿ ಮಾಡಬೇಕು. ನಂತ್ರ ತನ್ನ ಅಕೌಂಟ್ ಇರುವ ಬ್ಯಾಂಕ್‍ನ ಹೆಸರು ಆಯ್ಕೆ ಮಾಡಿಕೊಳ್ಳಬೇಕು. ನಂತ್ರ ತನ್ನ ಬಯೋಮೆಟ್ರಿಕ್ ಮಾಹಿತಿಯನ್ನು ಬಯೋಮೆಟ್ರಿಕ್ ಯಂತ್ರದ ಮೂಲಕ ನೀಡಬೇಕು. ಯಂತ್ರಕ್ಕೆ ನೀಡುವ ಮಾಹಿತಿ ಗ್ರಾಹಕನ ಪಾಸ್‍ವರ್ಡ್ ರೀತಿ ಕೆಲಸ ಮಾಡುತ್ತೆ. ನಂತರ ಯಂತ್ರ ವ್ಯಾಪಾರಿಗೆ ಗ್ರಾಹಕ ಕೊಡಬೇಕಾಗಿರೋ ಮೊತ್ತವನ್ನ ಆತನ ಅಕೌಂಟ್‍ನಿಂದ ಕಟ್ ಮಾಡಿಕೊಳ್ಳುತ್ತದೆ. ಈ ಯಂತ್ರ ಬಳಕೆ ಮಾಡುವ ವ್ಯಾಪಾರಸ್ಥ ಪಿಓಎಸ್ ಮೆಷಿನ್ ಅಂದ್ರೆ ಸ್ವೈಪ್ ಮೆಷಿನ್ ಬಳಸೋ ಅಗತ್ಯವೂ ಇರೋದಿಲ್ಲ.

ಯುಐಡಿಐ ಹಾಗೂ ರಾಷ್ಟ್ರೀಯ ಪಾವತಿ ನಿಗಮ, ಐಡಿಎಫ್‍ಸಿ ಬ್ಯಾಂಕ್ ಜೊತೆಯಾಗಿ ಈ ಹೊಸ ಆ್ಯಪ್ ಅನ್ನು ಅಭಿವೃದ್ಧಿಪಡಿಸಿವೆ. ಆಧಾರ್ ಸಂಖ್ಯೆ ಆಧರಿಸಿದ ಈ ಸೇವೆ ಎಲ್ಲಾ ಆಂಡ್ರಾಯ್ಡ್ ಮೊಬೈಲ್ ಫೋನ್‍ನಲ್ಲಿ ಕೆಲಸ ಮಾಡುವಂತೆ ಸರ್ಕಾರ ಹಾಗೂ ಮೊಬೈಲ್ ತಯಾರಿಕಾ ಕಂಪೆನಿಗಳ ಈ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಅಂತ ನೀತಿ ಆಯೋಗದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಅಮಿತಾಭಾಕಾಂತ್ ತಿಳಿಸಿದ್ದಾರೆ. ಇನ್ನು ಈ ಹೊಸ ಸೇವೆಯನ್ನು ಎಲ್ಲೆಡೆ ವಿಸ್ತರಿಸೋ ಮುಂದಿನ ಗುರಿಗಾಗಿ, ಈ ವ್ಯವಸ್ಥೆ ಅಳವಡಿಸಿಕೊಳ್ಳಲು ವ್ಯಾಪಾರಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಅದಕ್ಕಾಗಿ 100 ಕೋಟಿ ರೂಪಾಯಿ ಹಣ ಮೀಸಲಿಡಲಾಗಿದೆ. ಈಗಾಗಲೇ 40 ಕೋಟಿ ಆಧಾರ್ ಸಂಖ್ಯೆಗಳನ್ನು ಬ್ಯಾಂಕ್ ಖಾತೆಗಳಿಗೆ ಜೋಡಿಸಲಾಗಿದೆ. 108 ಕೋಟಿ ಜನರ ಬಳಿ ಈಗ ಆಧಾರ್ ಸಂಖ್ಯೆ ಇದೆ. ಮಾರ್ಚ್ 17ರೊಳಗೆ ಬ್ಯಾಂಕ್ ಅಕೌಂಟ್ ಜೊತೆ ಎಲ್ಲರ ಆಧಾರ್ ಕಾರ್ಡ್ ಸಂಖ್ಯೆಯನ್ನು ಜೋಡಣೆ ಕೆಲಸವನ್ನು ಸಂಪೂರ್ಣಗೊಳಿಸುವ ಗುರಿ ಸರ್ಕಾರದ್ದು. ಈ ಹೊಸ ಸೇವೆಯಿಂದ ಕಾರ್ಡ್ ಮರೆತು, ಹಣ ಮರೆತು ಶಾಪಿಂಗ್‍ಗೆ ಬಂದೆ ಅನ್ನೋ ಮರೆವಿನ ಜನರಿಗೆ ತುಂಬಾ ಸಹಾಯವಾಗಲಿದೆ. ಕಾರ್ಡ್, ಪರ್ಸ್ ಮರೆಯುವವರು ಇದ್ದಾರೆಯೇ ವಿನಃ, ಮೊಬೈಲ್ ಮರೆತು ಮನೆಯಿಂದ ಹೊರಗೆ ಬರೋರ ಸಂಖ್ಯೆ ತುಂಬಾ ವಿರಳ. ಹಾಗಾಗಿ ಈ ಸೇವೆ ಜನ್ರಲ್ಲೂ ಹೆಚ್ಚು ನಿರಾಳತೆ ಮೂಡಿಸೋದ್ರಲ್ಲಿ ಅನುಮಾನವಿಲ್ಲ.

ಇದನ್ನು ಓದಿ:

1.  ಎಂಜಿನಿಯರಿಂಗ್​ಗೆ ಬೈಬೈ- ಕುದುರೆ ಸವಾರಿಗೆ ಹಾಯ್ ಹಾಯ್​- ಹವ್ಯಾಸವೇ ಫುಲ್‍ ಟೈಂ ಜಾಬ್ ಆದ ಕಥೆ..!

2. ಸ್ಮಾರ್ಟ್​ಫೋನ್​ನಲ್ಲೇ ಆರೋಗ್ಯ ಸಮಸ್ಯೆಗೆ ಉತ್ತರ- ಇದು "ಡಾಕ್ಟರ್ಸ್​ ಲೈವ್​" ಮ್ಯಾಜಿಕ್​

3. ಕಾಫಿ ಪುಡಿ, ಟೀ ಪೌಡರ್​ ಖಾಲಿ ಆದ್ರೆ ಚಿಂತೆ ಬೇಡ- ಹಾಲಿನ ಜೊತೆಗೆ ಅಗತ್ಯವಸ್ತುಗಳು ಕೂಡ ಬಂದೇ ಬರುತ್ತದೆ..!

Related Stories