ಶಾಪವನ್ನೇ ವರವಾಗಿ ಬದಲಿಸಿಕೊಂಡ ಗಟ್ಟಿಗಿತ್ತಿ..!

ವಿಸ್ಮಯ

1

ಸಾಧನೆ ಯಾರಪ್ಪನ ಸ್ವತ್ತಲ್ಲ. ಇದಕ್ಕೆ ನಾವು ಬೇಕಾದಷ್ಟು ಉದಾಹರಣೆ ಕೊಡಬಹುದು. ಅವರೆಲ್ಲರು ಇನ್ನೊಬ್ಬರ ಬದುಕಿನಿಂದ ಸ್ಫೂರ್ತಿ ಪಡೆದು ನಮಗೆ ಸ್ಫೂರ್ತಿ ಆಗಬಹುದು. ಆದ್ರೆ ಈ ಕಥೆ ಎಲ್ಲರ ಬದುಕಿಗೂ ಸ್ಫೂರ್ತಿ. ಗುರಿ ಮುಟ್ಟೋದಿಕ್ಕೆ, ಅಂದುಕೊಂಡಿದ್ದನ್ನು ಸಾಧಿಸೋದಿಕ್ಕೆ ಶ್ರದ್ಧೆ. ಪರಿಶ್ರಮ ಇದ್ರೆ ಸಾಕು. ಇಡೀ ಪ್ರಪಂಚವನ್ನೇ ಗೆಲ್ಲಬಹುದು. ದೇವರು ಜೀವನದಲ್ಲಿ ಎಲ್ಲವನ್ನೂ ನೀಡಿ, ಯಾವುದೋ ಒಂದು ಕೊರತೆಯನ್ನು ನೀಡುತ್ತಾನೆ. ದೇಹದಲ್ಲಿ ಎಲ್ಲವೂ ಸರಿ ಇದ್ರೂ ಕೂಡ ಕೆಲಸವನ್ನು ಮಾಡಲು ಕೆಲವರು ಸೋಮರಿತನವನ್ನು ತೋರತ್ತಾರೆ. ಆದ್ರೆ ಇದಕ್ಕೆಲ್ಲ ಸರಿಸಾಟಿ ಎಂಬಂತೆ ಯಾರು ಏನೇ ಹೇಳಿದ್ರೂ ನಾನು ಯಾರಿಗೂ ತಲೆ ತಗ್ಗಿಸೋದಿಲ್ಲ ಅಂತಾರೆ. ದೇವರು ನಮ್ಮನ್ನು ಮನುಷ್ಯರಾಗಿ ಮಾಡಿರೋದು ಸಾಧನೆ ಮಾಡೋಕ್ಕೆ. ನಾನು ಜನ್ಮ ತಾಳಿದ್ದೇ ಏನಾನ್ನದ್ರೂ ಮಾಡಿ ಸಾಧನೆಯನ್ನು ಮಾದರಿ ಆಗಬೇಕು, ಅನ್ನೋದು ಇವ್ರ ಧ್ಯೇಯ.

ನೋಡೋಕ್ಕೆ ಥೇಟ್ ಪುಟ್ಟ ಹುಡುಗಿಯಂತೆ ಇರೋ ಇವ್ರ ಹೆಸರು ಗೌತಮಿ. ಪಟಪಟನೇ ಮಾತನಾಡಿ ಎಲ್ಲರನ್ನು ಆಕರ್ಷಿಸಿ ಬಿಡತ್ತಾರೆ. ವಯಸ್ಸು 29 ವರ್ಷ. ಅಚ್ಚರಿ ಎನ್ನಿಸಿದ್ರೂ ಇದು ನಿಜ. ಎಲ್ಲೇ ಹೋದ್ರೂ ಇವ್ರನ್ನ ನೋಡಿದವರು ಮುದ್ದು ಮಾಡತ್ತಾರೆ. ತಮ್ಮ ವಿವಿಧ ಪ್ರತಿಭೆಗಳಿಂದಲ್ಲೇ ಗುರುತಿಸಿಕೊಂಡಿರೋ ಗಟ್ಟಿಗಿತ್ತಿ. ಯಾವುದೋ ಅನಾರೋಗ್ಯದಿಂದ ದೇಹದ ಬೆಳೆವಣಿಗೆ ಆಗಿಲ್ಲ. ಆದ್ರೆ ಇದಕ್ಕೆಲ್ಲ ತಲೆಕೆಡಿಸಿಕೊಳ್ಳದೇ ತನ್ನ ತಾಯಿ ತಂಗಿಯೊಂದಿಗೆ ಸುಂದರ ಜೀವನವನ್ನು ನಡೆಸುತ್ತಿದ್ದಾರೆ. ನೃತ್ಯ ಅಂದ್ರೆ ಪಂಚಪ್ರಾಣ. ಚಿಕ್ಕ ವಯಸ್ಸಿನಿಂದಲ್ಲೂ ನೃತ್ಯವನ್ನು ಮಾಡುತ್ತಾ ಈಗ ಬೇರೆ ಮಕ್ಕಳಿಗೆ ನೃತ್ಯವನ್ನು ಹೇಳಿಕೊಡೋ ಟೀಚರ್ ಆಗಿದ್ದಾರೆ.

ಗೌತಮಿ ಚಿಕ್ಕ ವಯಸ್ಸಿನಲ್ಲಿರುವಾಗ ಅಕ್ಕಪಕ್ಕದ ಮನೆಯ ಮಕ್ಕಳು ಕುಳ್ಳಿ ಕುಳ್ಳಿ ಎಂದು ರೇಗಿಸುತಿದ್ದಾಗ ಮೊದಮೊದಲು ಬೇಸರ ಮಾಡಿಕೊಳ್ಳುತಿದ್ದಾರಂತೆ. ಆನಂತ್ರ ಇದೇ ಅಭ್ಯಾಸವಾಗಿ ಹೋಯಿತು. ಯಾರು ಏನೇ ಹೇಳಿದ್ರೂ ಅವರಿಗೆ ನಗುವಿನ ಪ್ರತಿಕ್ರಿಯೆ ನೀಡಿ ಮುಂದೆ ಸಾಗುತ್ತಿದ್ದಾರು. ದಿನಗಳು ಕಳೆದಂತೆ ಅದೇ ಹುಡುಗಿಯನ್ನು ಕಂಡು ಎಲ್ಲರೂ ಹೆಮ್ಮೆಯಿಂದ ಕೊಂಡಾಡುವಂತಾಯಿತ್ತು. ಯಾಕೆಂದರೆ ಆಕೆ ತೆಲಗು ಭಾಷೆಯ ಒಂದು ಧಾರವಾಹಿಯಲ್ಲಿ ನಟಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ್ರು. ಅದೇ ಪ್ರೇಮಕ್ಕಿ ಪೆಳ್ಳಿ ಎಂಬ ಧಾರವಾಹಿ ಮೂಲಕ ಸಿನಿ ಲೋಕಕ್ಕೂ ಕಾಲಿಟ್ಟರು. ಆ ಧಾರವಾಹಿಯಲ್ಲಿ ಈಕೆಯ ಜೀವನವನ್ನೇ ಕಥೆಯ ಆಧಾರವಾಗಿ ಪಾತ್ರವಾಗಿ ಬಿಂಬಿಸಿ ತೆಗೆದ ಧಾರವಾಹಿ. ಇದಕ್ಕೂ ಮೊದಲು ಖಾಸಗಿ ವಾಹಿನಿಯಲ್ಲಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. ತಮಿಳು, ತೆಲಗು, ಕನ್ನಡ ಮೂರು ಭಾಷೆಯಲ್ಲೂ ಪರಿಚಿತರಾದ್ರು. ಶೋನಲ್ಲಿದ್ದ ಜಡ್ಜ್​​ಗಳೆಲ್ಲಾ ಗೌತಮಿ ಪ್ರತಿಭೆಯನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ರು.

ಗೌತಮಿ ನೋಡಲು ಪುಟ್ಟ ಹುಡುಗಿಯಂತೆ ಇದ್ರೂ ಹಲವು ಪ್ರತಿಭೆಗಳನ್ನು ಹೊಂದಿದ್ದಾರೆ. ಭರತನಾಟ್ಯದಲ್ಲಿ ಪ್ರಾವಿಣ್ಯತೆಯನ್ನು ಪಡೆದಿದ್ದಾರೆ. ಇವ್ರ ಗುರುಗಳಾದ ಸ್ವಾಮಿಯವರು ತಮ್ಮ ವಿದ್ಯೆಯೆನೆಲ್ಲ ಧಾರೆಯೆರಿದ್ದಾರೆ. ಗೌತಮಿ ಪತ್ರಿಕೋದ್ಯಮದಲ್ಲಿ ಬಿಎ ಪದವಿ ಹೊಂದಿದ್ದು, ಮೆಹಂದಿ, ಬ್ಯೂಟಿಪಾರ್ಲರ್​​ ಕೋರ್ಸ್, ಟೈಲರಿಂಗ್, ಸಂಗೀತ, ನಟನೆಯ ಜೊತೆಗೆ ಎಲ್ಲ ಬಗೆಯ ನೃತ್ಯಗಳನ್ನು ಮಾಡುತ್ತಾರೆ. ಅಮ್ಮನ ಮುದ್ದು ಮಗಳಾಗಿ, ತಂಗಿಗೆ ಒಳ್ಳೆಯ ಅಕ್ಕನಾಗಿ, ಸ್ನೇಹಿತರಿಗೆ ಸ್ಪೂರ್ತಿಯಾಗಿ ಇದ್ದಾರೆ.

ಸದ್ಯಕ್ಕೆ ಬಾಳ ಪಯಣದಲ್ಲಿ ನೃತ್ಯವೇ ನನ್ನ ಉಸಿರು ಎಂದು ಜೀವಿಸುತ್ತಿದ್ದಾರೆ. ನೂರಾರು ಮಕ್ಕಳಿಗೆ ತನ್ನಲ್ಲಿರೋ ವಿದ್ಯೆಯನ್ನು ಧಾರೆಯೆರೆಯುತಿದ್ದಾರೆ. ಗೌತಮಿಯಂತಹವರಿಗೆ ಬೇಕಿರುವುದು ಅನುಕಂಪದ ಮಾತುಗಳಲ್ಲ. ಬದಲಿಗೆ ಉತ್ತಮ ಅವಕಾಶಗಳು ಬೇಕಿದೆ. ಈ ಪ್ರತಿಭೆಗೆ ನಮ್ಮದೊಂದು ಸಲಾಂ.