2000 ಅಂಧರ ಬಾಳಿಗೆ ಬೆಳಕಾದ ಮೀರಾ..

ಟೀಮ್​ ವೈ.ಎಸ್​. ಕನ್ನಡ

0


ಅಂಧರ ಕೈಯಲ್ಲಿದೆ `ಟೆಕ್ ವಿಜನ್' ಸಾಫ್ಟ್​ವೇರ್​​ ಕಂಪನಿ ಚುಕ್ಕಾಣಿ..

ಹಲವು ಅಂಧರು ಬ್ಯಾಂಕಿನಲ್ಲಿ ಪ್ರೊಬೇಶನ್ ಅಧಿಕಾರಿಗಳು..

8 ರಿಂದ 80 ಸಾವಿರ ರೂಪಾಯಿ ದುಡಿಯುತ್ತಿರುವ ಅಂಧರು..

ಪಿಎಚ್​ಡಿ ಮತ್ತು ಲಾ ಓದುತ್ತಿರುವ ಅಂಧ ವಿದ್ಯಾರ್ಥಿಗಳು..

ವಿಜನ್ ಅನ್​​ಲಿಮಿಟೆಡ್​ನಲ್ಲಿ 5 ಸಾವಿರಕ್ಕಿಂತ ಹೆಚ್ಚು ಪುಸ್ತಕಗಳು ಬ್ರೈಲ್ ಲಿಪಿಯಲ್ಲಿವೆ..

ಅಂಧರ ಉನ್ನತ ವ್ಯಾಸಾಂಗಕ್ಕಾಗಿ ಹೆಚ್ಚಿದ ಒತ್ತು..


ಯಾರು ಈ ಬಣ್ಣ-ಬಣ್ಣದ ಲೋಕವನ್ನು ನೋಡಲು ಸಾಧ್ಯವಿಲ್ಲವೋ ಅವರಿಗೆ, ಅದ್ಭುತ ಕನಸುಗಳನ್ನುತೋರಿಸುತ್ತಿದ್ದಾರೆ. ಅವರಿಗೆ ಸಹಾಯಕಾರಿ ಆಗುವುದರ ಜೊತೆ-ಜೊತೆಗೆ ಪ್ರೇರಣೆಯಾಗುತ್ತಿದ್ದಾರೆ ಮೀರಾ ಬಾಂಡವೆ. ಕಳೆದ ಎರಡು ದಶಕಗಳಿಂದ ಅಂಧರ ಭವಿಷ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮೀರಾ ಇಂದು 2000 ಮಕ್ಕಳ ಆಶಾಕಿರಣವಾಗಿದ್ದಾರೆ. ಅವರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಸಫಲವಾಗಿದ್ದಾರೆ. ಈ ಮಕ್ಕಳು ನೃತ್ಯ, ಸಂಗೀತದಿಂದ ಹಿಡಿದು ಸಾಫ್ಟ್​ವೇರ್​ಇಂಜಿನಿಯರಿಂಗ್​ನಲ್ಲಿ ತಮ್ಮ ಕರಿಯರ್ ಮುಂದುವರೆಸಿದ್ದಾರೆ. ಜೊತೆಗೆ ಬೇಕರಿ ಮತ್ತು ಲೈಬ್ರರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಮೀರಾ ಬಾಂಡವೆರ ನಿವಂತ್ ಅಂಧ ಮುಕ್ತ ವಿಕಾಸಾಲಯದಲ್ಲಿ ಓದುವ ಮಕ್ಕಳು ವಿವಿಧ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ. ಈ ವಿಕಾಸಾಲಯದಲ್ಲಿ ವ್ಯಾಸಾಂಗ ಮಾಡಿರುವಂತಹ ಮಕ್ಕಳು ಇಂದು 8 ಸಾವಿರದಿಂದ ಹಿಡಿದು 80 ಸಾವಿರ ರೂಪಾಯಿವರೆಗೆ ದುಡಿಯುತ್ತಿದ್ದಾರೆ. ಇದೇ ವರ್ಷ 52 ಅಂಧ ಮಕ್ಕಳಿಗೆ ವಿವಿಧ ಬ್ಯಾಂಕಿನಲ್ಲಿ ಕೆಲಸ ಸಿಕ್ಕಿದೆ. ವಿಶೇಷವೆಂದರೆ ಇದರಲ್ಲಿ 30ಕ್ಕಿಂತ ಹೆಚ್ಚು ಮಕ್ಕಳು ಪ್ರೊಬೆಶನ್ ಆಫೀಸರ್ ಆಗಿ ನಿಯುಕ್ತರಾಗಿದ್ದಾರೆ.

"ಯಾರ ಬಳಿ ರೆಕ್ಕೆಯಿದೆಯೋ ಅವರು ಆಕಾಶದಲ್ಲಿ ಹಾರಾಡುತ್ತಾರೆ. ಆದರೆ ಯಾರು ನೆಲದಲ್ಲಿ ಇರುತ್ತಾರೋ ನಾವು ಅವರಿಗಾಗಿ ಜೀವಿಸುತ್ತೇವೆ". ಇದು ಪುಣೆಯ ವಿದ್ಯಾನಗರದಲ್ಲಿರುವ ಮೀರಾ ಬಾಂಡವೆ ಅವರ ಅಭಿಪ್ರಾಯ. ಕಳೆದ ಎರಡು ದಶಕಗಳಿಂದ ಅಂಧರಿಗೆ ತಮ್ಮ ಕಾಲ ಮೇಲೆ ನಿಂತುಕೊಳ್ಳಲು ಕಲಿಸುತ್ತಿದ್ದಾರೆ. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿ.ಎಡ್ ಮಾಡಿರುವ ಮೀರಾ, `ನಿವಾಂತ್ ಅಂಧ ಮುಕ್ತ ವಿಕಾಸಾಲಯ' ಆರಂಭಿಸುವ ಮೊದಲು ಹಲವು ಶಾಲೆ-ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ರು. ಒಂದು ಸಲ ಮೀರಾ ತಮ್ಮ ಪತಿಯ ಜೊತೆ ಪುಣೆಯಲ್ಲಿರುವ ಅಂಧ ವಿದ್ಯಾಲಯಕ್ಕೆ ಬೇಟಿ ನೀಡಿದ್ರು. ಅಲ್ಲೊಂದು ಮಗು ಬಂದು ಅವರನ್ನು ತಮ್ಮ ತಾಯಿ ಎಂದು ಭಾವಿಸಿ ಅಪ್ಪಿಕೊಳ್ತು. ಆ ಅಂಧ ಮಗುವಿಗೆ ಸತ್ಯ ತಿಳಿದ ನಂತರ ಅಳಲು ಆರಂಭಿಸಿತು. ಈ ಘಟನೆಯಿಂದ, ಮೀರಾ ಮನಸ್ಸು ಬದಲಾಯ್ತು. ಅಂಧ ಮಕ್ಕಳಿಗೆ ಏನಾದ್ರು ಮಾಡಬೇಕೆಂಬ ಸಂಕಲ್ಪದಿಂದ ತಮ್ಮ ಕೆಲಸಕ್ಕೆ ವಿದಾಯ ಹೇಳಿದ್ರು.

ಇದಾದ ನಂತರ ಮೀರಾ ಸ್ವಯಂ ಪ್ರೇರಣೆಯಿಂದ ಅಂಧ ಮಕ್ಕಳಿಗೆ ಇಂಗ್ಲೀಷ್ ಕಲಿಸಲು ಆರಂಭಿಸಿದ್ರು. ನಿರಂತರ ಮೂರು ವರ್ಷಗಳ ಕಾಲ ಮಕ್ಕಳಿಗೆ ಇಂಗ್ಲಿಷ್ ಕಲಿಸಿದ್ರು. ಅದಾದ ನಂತರ ಅವರಿಗೆ ತಿಳಿದಿದ್ದು, ಅಂಧ ಮಕ್ಕಳಿಗೆ ಶಿಕ್ಷಣಕ್ಕಿಂತ ಹೆಚ್ಚು ಬದಕುವ ಕಲೆ ಕಲಿಸಬೇಕು ಎಂಬುದು. ಹದಿಹರೆಯದ ವಯಸ್ಸಿನ ಅಂಗವಿಕಲ ಮಕ್ಕಳನ್ನು ಮನೆಯವರು ಹೊರ ಹಾಕಿದ್ರೆ, ಸಮಾಜ ಕೂಡ ಅವರನ್ನು ತಬ್ಬಿಕೊಳ್ಳುವುದಿಲ್ಲ. "ಇಂತಹದೆ ಓರ್ವ ಹುಡುಗ ನಮ್ಮ ಮನೆಯ ಹತ್ತಿರದ ಫುಟ್​ಪಾತ್​ನಲ್ಲಿ ಅಂಧ ಸಿದ್ದಾರ್ಥ್ ಗಾಯಕವಾಡ್ ನೋಡಿದೆ. 10-15 ದಿನದಿಂದ ಈ ಹುಡುಗ ಊಟ ಮಾಡಿರಲಿಲ್ಲ. ಆ ಹುಡುಗನಿಗೆ 20 ವರ್ಷದ ಹಿಂದೆ ಅವರ ತಂದೆ-ತಾಯಿ ಅಂಧರ ಶಾಲೆಯಲ್ಲಿ ಬಿಟ್ಟು-ಬಿಟ್ಟಿದ್ರು. ಅದಾದ ನಂತರ ಅವನನ್ನು ಕರೆದುಕೊಂಡು ಹೋಗಲು ಯಾರು ಬಂದಿರಲಿಲ್ಲ. ಮೀರಾ ಅವರ ಪ್ರಕಾರ ಆ ಹುಡುಗನ ಪರಿಸ್ಥಿತಿ ತುಂಬಾ ಕೆಟ್ಟದಾಗಿತ್ತು. ಆ ಹುಡುಗನಿಗೆ ನಡೆಯಲು ಕೂಡ ಆಗುತ್ತಿರಲಿಲ್ಲ". ಅಂತಹ ಸಮಯದಲ್ಲಿ ಮೀರಾ ಆ ಹುಡುಗನನ್ನು ತಾಯಿಯಂತೆ ನೋಡಿಕೊಂಡ್ರು. ಆಗ ಅಂಧರ ಬದುಕಿನಲ್ಲಿರುವ ಕಷ್ಟ ಎಂತಹುದು ಎಂಬುದನ್ನು ಮೀರಾ ತಿಳಿದುಕೊಂಡ್ರು. ಆನಂತರ ಮೀರಾ ಆ ಹುಡುಗನಿಗೆ ಶಿಕ್ಷಣ ನೀಡುವುದರ ಜೊತಗೆ ತನ್ನ ಕಾಲಿನ ಮೇಲೆ ಸಿದ್ದಾರ್ಥ್ ನಿಂತುಕೊಳ್ಳುವುದನ್ನು ಕಲಿಸಿದ್ರು. ತಾಯಿ ಪ್ರೀತಿಯನ್ನು ಕೂಡ ನೀಡಿದ್ರು. ಇಂದು 200ಕ್ಕಿಂತ ಹೆಚ್ಚು ಅಂಧ ಮಕ್ಕಳ ತಾಯಿಯಾಗಿದ್ದಾರೆ ಮೀರಾ. ಈ ಮಕ್ಕಳು ಅವರ ಪರಿವಾರದ ಅವಿಭಾಜ್ಯ ಅಂಗವಾಗಿದ್ದಾರೆ.

ಇಂದು ಮೀರಾ ಎರಡು ಸಾವಿರಕ್ಕಿಂತ ಹೆಚ್ಚು ಅಂಧ ಮಕ್ಕಳಿಗೆ ಪುನರ್ವಾಸ ಕಲ್ಪಿಸಿದ್ದಾರೆ. ಮೀರಾ ಹೇಳುವ ಪ್ರಕಾರ " ಅವರಿಗೂ ಕೆಲ ಆಸೆ ಆಕಾಂಕ್ಷೆಗಳು ಇರುತ್ತವೆ. ಅದಕ್ಕಾಗಿ ನನಗೆ ಸಮಾಜದ ವಿರುದ್ಧವೂ ಹೋರಾಡುವ ಪರಿಸ್ಥಿತಿ ಎದುರಾಯ್ತು". ಇಂದು ಅವರ ಬಳಿ ಕಲಿತ ಮೂವರು ಅಂಧ ಮಕ್ಕಳು ಪಿಎಚ್​ಡಿ ಮಾಡುತ್ತಿದ್ದಾರೆ. ಕೆಲವರು ಕಾನೂನಿನ ವಿದ್ಯಾರ್ಥಿಯಾಗಿದ್ದಾರೆ. ಕಳೆದ 14 ವರ್ಷದಿಂದ ಮೀರಾ 22 ವಿಷಯಗಳನ್ನು ಮಕ್ಕಳಿಗೆ ಕಲಿಸಿದ್ದಾರೆ. ನಿವಾಂತ್ ಅಂಧ ಮುಕ್ತ ವಿಕಾಸಾಲಯ ತನ್ನದೇ ಆದ ಮುದ್ರಣಾಲಯವನ್ನು ಹೊಂದಿದೆ. ಇಲ್ಲಿ ಪ್ರತಿ ವರ್ಷ 2 ಲಕ್ಷಕ್ಕಿಂತ ಹೆಚ್ಚು ಬ್ರೈಲ್ ಲಿಪಿಯ ಕಾಗದಗಳು ಮುದ್ರಣವಾಗುತ್ತವೆ. ಅವರ ಸಂಸ್ಥೆ ಉನ್ನತ ಶಿಕ್ಷಣಕ್ಕಾಗಿ ಹೆಚ್ಚಿನ ಮಹತ್ವ ನೀಡುತ್ತದೆ. ಇಲ್ಲಿ ಮುದ್ರಣವಾದ ಬ್ರೈಲ್ ಪುಸ್ತಕ, ಮಹಾರಾಷ್ಟ್ರದ ಹಲವು ಕಾಲೇಜಿನಲ್ಲಿ ಬೋಧನೆ ಮಾಡಲಾಗುತ್ತದೆ. ಸಂಸ್ಥೆ ಇದನ್ನು ಉಚಿತವಾಗಿ ಹಂಚುತ್ತದೆ. ಮೀರಾ ಹೇಳುವಂತೆ "ಇವರು ಅಂಧರ ಸಲುವಾಗಿ ಸಕ್ರೀಯವಾಗಿ ಕೆಲಸ ಮಾಡುವ ವೇಳೆ ಹಲವು ಸಮಸ್ಯೆಗಳ ಅರಿವಿಗೆ ಬಂದವಂತೆ. ಆಗ ಭಾರತದಲ್ಲಿ ಎಲ್ಲೂ ಬ್ರೈಲ್ ಲಿಪಿಯ ಪುಸ್ತಕಗಳೇ ಇರಲಿಲ್ಲವಂತೆ. ಎಷ್ಟೋ ಅಂಧ ಮಕ್ಕಳು ಇವರ ಕೆಲಸದ ಬಗ್ಗೆ ಕೇಳಿ. ಅವರಿಗೆ ಬೇಕಾದ ಪುಸ್ತಕ ಮುದ್ರಿಸಿ ಕೊಡುವಂತೆ ಕೇಳಿಕೊಳ್ಳುತ್ತಿದ್ರಂತೆ. ಅವರಿಗೆ ನಾವು ಸ್ಪಂದಿಸುತ್ತಿದ್ದೇವೆ ಎಂತಾರೆ ಮೀರಾ. ಬ್ರೈಲ್ ಅಂಧರ ಬಾಳಿನ ಜ್ಞಾನ ಜ್ಯೋತಿ. ಹಾಗಾಗಿ ಬ್ರೈಲ್ ಲಿಪಿ ಪುಸ್ತಕಗಳ ಮುದ್ರಣ ಅವರ ಬಾಳಿಗೆ ಬೆಳಕಾಗಲಿದೆ ಎಂದು ಅಭಿಪ್ರಾಯ ಪಡುತ್ತಾರೆ".

`ನಿವಾಂತ್ ಅಂಧ ಮುಕ್ತ ವಿಕಾಸಾಲಯ' ತನ್ನದೆಯಾದ ಚಾಕೊಲೇಟ್ ಫ್ಯಾಕ್ಟರಿ ಹೊಂದಿದೆ. ಅದರ ಹೆಸರು `ಚೋಕೋ ನಿವಾಂತ್'. ಕಳೆದ ನಾಲ್ಕು ವರ್ಷದಿಂದ ಈ ಫ್ಯಾಕ್ಟರಿಯನ್ನು ಅಂಧರೆ ನಡೆಸುತ್ತಿದ್ದಾರೆ. ಈ ಫ್ಯಾಕ್ಟರಿಯಲ್ಲಿ 35 ರಿಂದ 40 ಅಂಧರು ಕೆಲಸ ಮಾಡ್ತಾರೆ. ಇದರಲ್ಲಿ ಯಾರಿಗಾದ್ರು ಬೇರೆಡೆ ಕೆಲಸ ಸಿಕ್ಕರೆ, ಅವರ ಸ್ಥಾನಕ್ಕೆ ಇನ್ನೋರ್ವ ಅಂಧನಿಗೆ ಕೆಲಸ ನೀಡಲಾಗುತ್ತೆ. ಚೋಕೋ ನಿವಾಂತ್ ಇಂದು ಒಂದು ಬ್ರ್ಯಾಂಡ್ ಆಗಿದೆ. ಹಾಗಾಗಿ ಕಾರ್ಪೋರೇಟ್ ವಿಭಾಗದಲ್ಲಿ ಈ ಚಾಕೋಲೆಟ್​ಗಳಿಗೆ ಭಾರೀ ಬೇಡಿಕೆಯಿದೆ. ಈ ವರ್ಷ ದೀಪಾವಳಿಯಲ್ಲೇ ಚೋಕೋ ನಿವಾಂತ್ 4 ಲಕ್ಷ ವ್ಯಾಪಾರ ಮಾಡಿದೆ.

ಈ ಸಂಸ್ಥೆಯ ಒಂದು ಸಾಫ್ಟ್​ವೇರ್​ ಕಂಪನಿ ಕೂಡ ಇದೆ. ಅದರ ಹೆಸರು `ಟೆಕ್ ವಿಜನ್'. ಸಿಲಿಕಾನ್ ವ್ಯಾಲಿಯಿಂದ ಈ ಕಂಪನಿಗೆ ಪ್ರಾಜೆಕ್ಟ್ ಸಿಗುತ್ತವೆ. ಇಲ್ಲಿ ಸಾಮಾನ್ಯ ವ್ಯಕ್ತಿಗಳಿಗೂ ಕೆಲಸ ನೀಡಲಾಗಿದೆ. ಯಾವ ಸಮಾಜ ಇವರನ್ನು ನಿರಾಕರಿಸಿದೇಯೋ ಅದೇ ಸಮಾಜವನ್ನು ಈ ಮಕ್ಕಳು ಅಪ್ಪಿಕೊಂಡಿದ್ದಾರೆ. ಹಲವರ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ. ಸಂಸ್ಥೆಯ ಬ್ರೈಲ್ ಲಿಪಿ ಲೈಬ್ರರಿ ಕೂಡ ಇದೆ. `ವಿಜನ್ ಅನ್​ಲಿಮಿಟೆಡ್​​'ನಲ್ಲಿ 5 ಸಾವಿರಕ್ಕಿಂತ ಹೆಚ್ಚು ಬ್ರೈಲ್ ಲಿಪಿಯ ಪುಸ್ತಕಗಳಿವೆ. ಈ ಎಲ್ಲಾ ಪುಸ್ತಕಗಳು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದವುಗಳಾಗಿವೆ. ಇಂದು ಈ ಲೈಬ್ರರಿಯ 17 ಬ್ರ್ಯಾಂಚ್​ಗಳು ಮಹಾರಾಷ್ಟ್ರದ ವಿಭಿನ್ನ ನಗರದಲ್ಲಿವೆ. ಸಣ್ಣ-ಸಣ್ಣ ಗ್ರಾಮದಲ್ಲಿರುವ ಅಂಧ ಮಕ್ಕಳಿಗೆ ಉನ್ನತ ಶಿಕ್ಷಣ ಸಿಗಬೇಕು ಎಂಬುದು ಇದರ ಉದ್ದೇಶವಾಗಿದೆ. ಅವಶ್ಯಕತೆಗೆ ಅನುಗುಣವಾಗಿ, ಬ್ರೈಲ್ ಲಿಪಿಯಲ್ಲಿ ಬರೆದಿರುವ ಪುಸ್ತಕ ಇಡಲಾಗಿದೆ.

ಇಂದು ಮೀರಾ ಅವರ ತಂದೆ ಕೂಡ ತಮ್ಮ ಕೆಲಸ ಬಿಟ್ಟು, ಅಂಧ ಮಕ್ಕಳ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಕೆಲಸ ಮಾಡ್ತಿದ್ದಾರೆ. ಅಪ್ಪ-ಅಮ್ಮ ಮತ್ತು ಪತಿ ಎಲ್ಲರೂ ಅಂಧ ಮಕ್ಕಳ ಪುನರ್ವಸತಿ ಕಲ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇಷ್ಟೆ ಅಲ್ಲ ಅವರು ಈ ಮಕ್ಕಳ ಮದುವೆಯನ್ನು ಮಾಡಿಸುತ್ತಿದ್ದಾರೆ. 18 ರಿಂದ 25 ವರ್ಷದೊಳಗಿನ ಮಕ್ಕಳು ನಿವಾಂತ​ದಲ್ಲಿರುತ್ತಾರೆ. ನಿವಾಂತದಲ್ಲಿರುವ ಮಕ್ಕಳು ತಾವು ಓದುವುದರ ಜೊತೆಗೆ ಬೇರೆ ಮಕ್ಕಳಿಗೂ ಓದಿಸುವ ಕೆಲಸ ಮಾಡ್ತಾರೆ. ಇಲ್ಲಿ ಪ್ರತಿ ಅಂಧ ಮಗುವಿನ ಕೆಲಸ ಮತ್ತು ಪಾತ್ರವೇನೆಂದು ಹಂಚಲಾಗಿದೆ. ಹಾಗಾಗಿ ಇಂದು ಈ ಮಕ್ಕಳಲ್ಲೂ ಆತ್ಮ ಸಮ್ಮಾನ ಎನ್ನುವುದು ಸಾಮಾನ್ಯ ಮನುಷ್ಯರಿಗಿಂತ ಕಮ್ಮಿಯೇನಿಲ್ಲ.


ವೆಬ್​ಸೈಟ್​: www.niwantvision.com


ಲೇಖಕರು: ಹರೀಶ್ ಬಿಶ್ತ್

ಅನುವಾದಕರು: ಎನ್.ಎಸ್.ರವಿ

Related Stories

Stories by YourStory Kannada