ಪರಿಸರ ಸ್ನೇಹಿ ಕಡಲೆಕಾಯ್ . . .

ಪಿ.ಅಭಿನಾಷ್​​

0

ಸಿಲಿಕಾನ್ ಸಿಟಿ ವೇಗವಾಗಿ ಬೆಳೆಯುತ್ತಿದೆ. ಈಗಾಗ್ಲೇ ಐಟಿಬಿಟಿಯ ತವರು ಅನಿಸಿಕೊಂಡಿರುವ ಗ್ರೀನ್ ಸಿಟಿ ಬೆಂಗಳೂರು ಎಂದಿಗೂ ತನ್ನ ಸಂಸ್ಕೃತಿ ಹಾಗೂ ಸಂಪ್ರದಾಯವನ್ನ ಮಾತ್ರ ಮರೆತಿಲ್ಲ. ಹಾಗಾಗೇ ಇಂದಿಗೂ ನೂರಾರು ಆಚರಣೆಗಳು ಶತಕಗಳಿಂದಲೂ ನಡೆದುಕೊಂಡು ಬಂದಿವೆ. ಅದ್ರಲ್ಲಿ ಒಂದು ಬೆಂಗಳೂರಿಗರ ಫೇವರೆಟ್ ಕಡ್ಲೆಕಾಯ್ ಪರಿಷೆ. ಪ್ರತಿ ವರ್ಷ ಕಡೇ ಕಾರ್ತಿಕದ ಸೋಮವಾರ ಹಾಗೂ ಮಂಗಳವಾರ, ಬುಲ್ ಟೆಂಪಲ್ ರಸ್ತೆಯಲ್ಲಿ ಆಚರಿಸಲ್ಪಡುವ ಕಡಲೆಕಾಯಿ ಪರಿಷೆಯಲ್ಲಿ ನೂರಾರು ವ್ಯಾಪಾರಿಗಳು ಪಾಲ್ಗೊಳ್ಳುತ್ತಾರೆ. ಸಾವಿರಾರು ಮಂದಿ ಭೇಟಿ ಕೊಡ್ತಾರೆ. ಸಾವಿರಾರು ಕ್ವಿಂಟಾಲ್‍ನಷ್ಟು ಕಡಲೆಕಾಯಿ ಕೂಡ ಸೇಲ್ ಆಗತ್ತೆ. ಆದ್ರೆ ಪ್ರತಿಬಾರಿ ಕಡಲೆಕಾಯಿ ಪರಿಷೆಗಿಂತ ಈ ಕಡಲೆಕಾಯ್ ಪರಿಷೆ ಸ್ಪೆಷಲ್ ಆಗಿದೆ. ಯಾಕಂದ್ರೆ, ಇದು ಪರಿಸರಸ್ನೇಹಿ ಕಡಲೆಕಾಯ್ ಪರಿಷೆ.

ಹೌದು, ಕಡಲೆಕಾಯಿ ಪರಿಷೆಯಲ್ಲಿ ಸಾವಿರಾರು ಪ್ಲ್ಯಾಸ್ಟಿಕ್‍ಬ್ಯಾಗ್‍ಗಳನ್ನ ಬಳಸಲಾಗ್ತಾ ಇತ್ತು. ಕಡಲೆಕಾಯಿ ಕೊಡುವ ವ್ಯಾಪಾರಿಗಳು, ಗ್ರಾಹಕರಿಗೆ ಕಡಿಮೆ ಮೈಕ್ರಾನ್‍ನ ಪ್ಲ್ಯಾಸ್ಟಿಕ್ ಬ್ಯಾಗ್‍ಗಳಲ್ಲಿ ಕಡಲೆಕಾಯಿ ನೀಡ್ತಾ ಇದ್ರು. ಆ ಪ್ಲ್ಯಾಸ್ಟಿಕ್ ಕವರ್‍ಗಳನ್ನ ಪುನರ್‍ಬಳಕೆ ಮಾಡೋದು ಅಸಾಧ್ಯ. ಹೀಗಾಗಿ ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ಮುಗೀತು ಅಂದ್ರೆ ಸಾಕು ಎಲ್ಲಿ ನೋಡಿದ್ರಲ್ಲಿ ಪ್ಲ್ಯಾಸ್ಟಿಕ್ ಬ್ಯಾಗ್‍ಗಳೇ ಕಾಣಸಿಗ್ತಾ ಇದ್ವು. ಆದ್ರೆ, ಈ ಬಾರಿ ಪ್ಲ್ಯಾಸ್ಟಿಕ್ ಬ್ಯಾಗ್‍ಗಳಿಗೆ ಇತಿಶ್ರೀ ಹಾಡಿ ಬಟ್ಟೆ ಬ್ಯಾಗ್‍ಗಳನ್ನ ವಿತರಿಸಲಾಗ್ತಾ ಇದೆ. ಈ ಕಾರ್ಯಕ್ಕೆ ಮುಂದಾಗಿರೋದು ಬಸವನಗುಡಿಯಲ್ಲಿರುವ ಬಿಎಮ್‍ಎಸ್ ಇಂಜಿನಿಯರಿಂಗ್ ಕಾಲೇಜು. ಎರಡು ಲಕ್ಷ ಪುನರ್‍ಬಳಕೆ ಮಾಡಬಹುದಾದಂತ ಬಟ್ಟೆ ಬ್ಯಾಗ್‍ಗಳನ್ನ ವಿತರಿಸಲಾಗ್ತಾ ಇದೆ. ವ್ಯಾಪಾರಿಗಳಿಗೆ ನೇರವಾಗಿ ಹಂಚಲಾಗಿದ್ದು, ಕಡ್ಡಾಯವಾಗಿ ಇದೇ ಬ್ಯಾಗ್‍ಗಳನ್ನೇ ಗ್ರಾಹಕರಿಗೆ ವಿತರಿಸುವಂತೆ ಸೂಚನೆ ನೀಡಲಾಗಿದೆ. ಕಳೆದ ಬಾರಿ 75 ಸಾವಿರ ಬ್ಯಾಗ್‍ಗಳನ್ನ ವಿತರಿಸಲಾಗಿತ್ತು. ಆದ್ರೆ ಗ್ರಾಹಕರಿಗೆ ಅಷ್ಟು ಬ್ಯಾಗ್‍ಗಳು ಸಾಕಾಗಿರಲಿಲ್ಲ. ಹೀಗಾಗಿ ಈ ಬಾರಿ ಈ ಸಂಖ್ಯೆಯನ್ನ ಹೆಚ್ಚಿಸಲಾಗಿದೆ. ಬಿಎಮ್‍ಎಸ್ ಕಾಲೇಜು ವಿದ್ಯಾರ್ಥಿಗಳೇ ಖುದ್ದು ವ್ಯಾಪಾರಿಗಳಲ್ಲಿ ಅರಿವು ಮೂಡಿಸಿ ಪರಿಸರಸ್ನೇಹಿ ಬ್ಯಾಗ್‍ಗಳನ್ನೇ ನೀಡುವಂತೆ ಕರೆ ನೀಡಿದ್ದಾರೆ.

ಬಟ್ಟೆ ಬ್ಯಾಗ್‍ಗಳನ್ನೇ ವಿತರಿಸುವ ಯೋಚನೆ ಹೊಳೆದದ್ದು ಬಿಎಮ್‍ಎಸ್ ಕಾಲೇಜಿನ ಆಡಳಿತ ಮಂಡಳಿಗೆ. ಪ್ರತಿಬಾರಿ ಪರಿಷೆಯ ನಂತ್ರ ಉಂಟಾಗ್ತಾ ಇದ್ದ ಮಾಲಿನ್ಯವನ್ನ ನೋಡಿ, ಕಳೆದ ವರ್ಷ ಈ ಅಭಿಯಾನವನ್ನ ಆರಂಭಿಸಲಾಗಿತ್ತು. ತನ್ನ ಸ್ವಂತ ಖರ್ಚಿನಲ್ಲೇ ಬ್ಯಾಗ್‍ಗಳನ್ನ ತರಿಸಲಾಗಿತ್ತು. ಕಳೆದ ವರ್ಷ ಸಿಕ್ಕ ರೆಸ್ಪಾನ್ಸ್ ನೋಡಿದ ಆಡಳಿತ ಮಂಡಳಿ ಈ ಬಾರಿ ಸಂಪೂರ್ಣವನ್ನ ಬಟ್ಟೆ ಬ್ಯಾಗ್‍ಗಳನ್ನೇ ಬಳಸುವಂತೆ ಸೂಚನೆ ನೀಡ್ತಾ ಇದೆ. ಇದಕ್ಕೆ ರಾಜ್ಯ ಮುಜರಾಯಿ ಇಲಾಖೆ ಕೂಡ ಸಾಥ್ ಕೊಟ್ಟಿದ್ದು, ಈ ಬಾರಿ ಪೂರ್ಣಪ್ರಮಾಣದಲ್ಲಿ ಪರಿಸರ ಸ್ನೇಹಿ ಬ್ಯಾಗ್‍ಗಳನ್ನೇ ಬಳಸಲಾಗ್ತಾ ಇದೆ.

ಎರಡು ಲೀಟರ್, ನಾಲ್ಕು ಲೀಟರ್ ಹಾಗೂ ಆರು ಲೀಟರ್‍ನ ವಿವಿಧ ಸೈಜ್‍ನ ಬ್ಯಾಗ್‍ಗಳನ್ನ ನೀಡಲಾಗ್ತಾ ಇದೆ. ಒಂದು ಬ್ಯಾಗ್‍ಗೆ ಬಿದ್ದಿರುವ ಖರ್ಚು ಎರಡು ರೂಪಾಯಿ ಆದ್ರೆ, ಆಡಳಿತ ಮಂಡಳಿ ವ್ಯಾಪಾರಿಗಳಿಮದ ಒಂದು ಬ್ಯಾಗ್‍ಗೆ ಕೇವಲ 30ರಿಂದ50 ಪೈಸೆಯನ್ನ ಕಲೆಕ್ಟ್ ಮಾಡಿಕೊಂಡಿದ್ದಾರೆ. ಹಣ ಪಡೆಯುವುದಕ್ಕೂ ಒಂದು ಕಾರಣವಿದೆ. ಹಣ ಕೊಟ್ಟು ಕೊಂಡುಕೊಂಡ ಬ್ಯಾಗ್‍ಗಳ ಮೇಲೆ ಹೆಚ್ಚು ನಿಗಾ ಇಡ್ತಾರೆ ಅನ್ನೋ ಒಂದೇ ಕಾರಣಕ್ಕೆಹಣವನ್ನ ಪಡೆದುಕೊಳ್ಳಲಾಗ್ತಾ ಇದೆ.

'ಪ್ರತಿ ಬಾರಿ ಪ್ಲ್ಯಾಸ್ಟಿಕ್ ಬ್ಯಾಗ್‍ಗಳನ್ನ ನೋಡಿ ಅದ್ರಿಂದಾಗುವ ಮಾಲಿನ್ಯವನ್ನ ಕಂಡು ಬೇಸರವಾಗ್ತಾ ಇತ್ತು. ಹಾಗಾಗಿ ಮರುಬಳಕೆ ಮಾಡಬಹುದಾದಂತ ಬ್ಯಾಗ್‍ಗಳನ್ನ ವಿತರಿಸುವ ಬಗ್ಗೆ ಯೋಚನೆ ಮಾಡಿದ್ವಿ. ಇದಕ್ಕೆ ಆಡಳಿತ ಮಂಡಳಿಯಿಂದಲೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಹೀಗಾಗಿ ತಕ್ಷಣವೇ ಬಟ್ಟೆ ಬ್ಯಾಗ್‍ಗಳನ್ನ ನೀಡಲು ಮುಂದಾದೆವು' ಅಂತಾರೆ ಕಾಲೇಜು ಉಪನ್ಯಾಸಕಿ ಅರ್ಚನಾ ಶೆಟ್ಟಿ.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ತಮಿಳುನಾಡಿನಿಂದ ಬರುವ ಕಡಲೆಕಾಯಿ ಕೊಳ್ಳಲು ಬೆಂಗಳೂರಿನ ಜನ ಮುಗಿಬೀಳ್ತಾರೆ. ಅದ್ರಲ್ಲೂ, ಕಸಿಕಡಲೆಕಾಯಿ, ಬೇಯಿಸಿದ ಕಡಲೆಕಾಯಿ, ಹಾಗೂ ಹುರಿದ ಕಡಲೆಕಾಯಿ ಹೀಗೆ ವಿಶೇಷ ಕಡಲೆಕಾಯಿಯನ್ನ ವರ್ಷಕ್ಕೊಮ್ಮೆ ನಡೆಯುವ ಕಡಲೆಕಾಯಿ ಪರಿಷೆಯಲ್ಲಿ ಖರೀದಿಸೋದು ಅಂದ್ರೆ ಎಲ್ಲರಿಗೂ ಬಲು ಇಷ್ಟ.

ಇನ್ನು ಕೆಂಪೇಗೌಡರ ಕಾಲದಿಂದ ಆಚರಣೆಯಲ್ಲಿರುವ ಕಡಲೆಕಾಯಿ ಪರಿಷೆ ಹಾಗೂ ಜಾತ್ರೆ, ಸಂಪೂರ್ಣ ಪರಿಸರಸ್ನೇಹಿಯಾದ್ರೆ, ಭವಿಷ್ಯದಬೆಂಗಳೂರು ಹಸಿರು ಬೆಂಗಳೂರಾಗತ್ತೆ.