ಜಾಗತಿಕ ಮಟ್ಟದಲ್ಲಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಅಮೀರಾರ ಕಾರ್ಯವೈಖರಿಯೇ ವಿಭಿನ್ನ:

ಟೀಮ್​​ ವೈ.ಎಸ್​​.

ಜಾಗತಿಕ ಮಟ್ಟದಲ್ಲಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಅಮೀರಾರ ಕಾರ್ಯವೈಖರಿಯೇ ವಿಭಿನ್ನ:

Tuesday November 10, 2015,

7 min Read

ಡಾ ಸುಶೈಲ್ ಶಾ 1980ರ ಸಮಯದಲ್ಲಿ ವೈದ್ಯಕೀಯ ಪದವಿ ಪಡೆದುಕೊಂಡರು. ಆದರೆ ಆಗ ಭಾರತದಲ್ಲಿದ್ದ ವೈದ್ಯಕೀಯ ಕ್ಷೇತ್ರಗಳ ನಿರ್ವಹಣೆ ಅವರ ಅಸಮಧಾನಕ್ಕೆ ಕಾರಣವಾಗಿತ್ತು. ಅದರಲ್ಲೂ ಮುಖ್ಯವಾಗಿ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುತ್ತಿದ್ದ ವಿಧಾನ ಅವರಿಗೆ ಇಷ್ಟವಾಗಿರಲಿಲ್ಲ. ರೋಗಿಗಳು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಚಿಕಿತ್ಸೆ ಕೊಡಿಸಲು ಅವರು ಯೋಚಿಸುತ್ತಿದ್ದರು. ಆದರೆ ಭಾರತದಲ್ಲಿ ಈ ಸೌಕರ್ಯವಿರಲಿಲ್ಲ. ಹಾಗಾಗಿ ಅವರು ಆಧುನಿಕ ವೈದ್ಯಕೀಯ ವಿಧಾನಗಳನ್ನು ಅಭ್ಯಾಸ ನಡೆಸಲು ಅಮೇರಿಕಾಗೆ ತೆರಳಿದರು. ಅಲ್ಲಿಂದ ಭಾರತಕ್ಕೆ ಮರಳಿದ ಬಳಿಕ ಅವರು ತಮ್ಮದೇ ಸ್ವಂತ ಪ್ಯಾಥೋಲಜಿ ಲ್ಯಾಬೋಲೆಟರಿ ತೆರೆದರು. ತಮ್ಮ ಅಡುಗೆಮನೆಯನ್ನೇ ಕ್ಲಿನಿಕ್ ಆಗಿಸಿ ಕಾರ್ ಗ್ಯಾರೇಜ್​​ನಲ್ಲಿ ಆರಂಭಿಸಿದ ಸಣ್ಣ ವೈದ್ಯಕೀಯ ಸಂಸ್ಥೆಯೇ ಡಾ. ಸುಶೈಲ್ ಶಾಹ್ ಲ್ಯಾಬೋಲೆಟರಿ.

image


ಸುಶೈಲ್ ಶಾರ ಪುತ್ರಿ ಅಮೀರಾ ಶಾ ಹೇಳುವಂತೆ, ಇಂದು ಥೈರಾಯ್ಡ್ ಪರೀಕ್ಷೆಗಳು ಹಾಗೂ ವಿವಿಧ ಭಗೆಯ ಹಾರ್ಮೋನ್ ಸಂಬಂಧಿ ಸಮಸ್ಯೆಗಳ ಪರೀಕ್ಷೆ ಸುಲಭವಾಗಿ ನಡೆಸಲಾಗುತ್ತಿದೆ. ಆದರೆ 80ರ ದಶಕದಲ್ಲಿ ಭಾರತದ ತಂತ್ರಜ್ಞಾನ ಇಷ್ಟು ಮುಂದುವರೆದಿರಲಿಲ್ಲ. ಆಗ ಇಷ್ಟು ಸರಳವಾಗಿ ವೈದ್ಯಕೀಯ ಪರೀಕ್ಷೆಗಳನ್ನು ನಿರ್ವಹಿಸುವ ಸೌಲಭ್ಯಗಳಿರಲಿಲ್ಲ. ಥೈರಾಯ್ಡ್​​ನಂತಹ ಪರೀಕ್ಷೆಗಳನ್ನು ಮೊದಲ ಬಾರಿ ಭಾರತದಲ್ಲಿ ಆಯೋಜನೆ ಮಾಡಿದ್ದೇ ಸುಶೈಲ್ ಲ್ಯಾಬೊಲೆಟರಿ ಅಂತ ಹೆಮ್ಮೆಯಿಂದ ಅವರು ಹೇಳಿಕೊಳ್ಳುತ್ತಾರೆ.

ಕೇವಲ 21 ವರ್ಷದ ಅನನುಭವಿಯಾಗಿದ್ದ ಅಮೀರಾ ತಮ್ಮ ಮುಂದಿನ ಬದುಕು ಹೇಗಿರಬೇಕು ಎಂದು ತೀರ್ಮಾನಿಸಿಕೊಳ್ಳುವ ಮೊದಲೆ ಅಪ್ಪನೊಂದಿಗೆ ಕೈ ಜೋಡಿಸಿದ್ದರು. ಅದರ ಫ್ರತಿಫಲವಾಗಿ ಇಂದು ಸುಮಾರು ಸುಮಾರು 2 ಸಾವಿರ ಕೋಟಿ ಬೆಲೆ ಬಾಳುವ ಜಾಗತಿಕ ಪ್ಯಾಥೋಲಜಿ ಲ್ಯಾಬ್ ಅನ್ನು ನಿರ್ವಹಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಅಮೀರಾ ಶಾಗೆ ಈಗ 35 ವರ್ಷ.

ಬದುಕಿನಲ್ಲಿ ಮಾಡಬೇಕಾಗಿದ್ದೇನು?

ಅಮೀರಾ ನ್ಯೂಯಾರ್ಕ್​ನ ಗೋಲ್ಡ್​​ಮನ್ ಸ್ಯಾಚ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಅದು ಅವರಿಗೆ ತೃಪ್ತಿದಾಯಕ ಕೆಲಸವೂ ಆಗಿತ್ತು. ಆದರೆ ಅವರಿಗೆ ಅದರಿಂದ ಸಮಾಧಾನವಿರಲಿಲ್ಲ. ನ್ಯೂಯಾರ್ಕ್ ಜೀವನ ಅವರಿಗೆ ಇಷ್ಟವಾಗುತ್ತಿದ್ದಾರೂ ಹಣಕಾಸಿನ ಸಂಸ್ಥೆ ಅವರಿಗೆ ಸಮಾಧಾನಕರವಾಗಿರಲಿಲ್ಲ. ಹಣ ಮಾಡುವುದಷ್ಟೇ ಅವರ ಉದ್ದೇಶವೂ ಆಗಿರಲಿಲ್ಲ. ಪ್ರಾರಂಭಿಕ ಸಂಸ್ಥೆಯಲ್ಲಿ ಕೆಲಸ ಮಾಡಬೇಕು ಅನ್ನುವ ಉಮೇದು ಅವರಲ್ಲಿತ್ತು. ಹಾಗಾಗಿ ಅದನ್ನೇ ಹುಡುಕಿಕೊಂಡು ಹೊರಟರು. ಕೇವಲ ಐವರು ಉದ್ಯೋಗಿಗಳಿಂದ ಸಣ್ಣ ಸಂಸ್ಥೆಯೊಂದನ್ನು ಆರಂಭಿಸಿದ್ರು. ಆರಂಭಿಕ ಪರಿಶ್ರಮ ಯಶಕೊಡುವಂತದ್ದಾಗಿರಲಿಲ್ಲ. ಆದರೆ ಸಣ್ಣ ತೊಂಡದೊಂದಿಗೆ ಕ್ರಿಯಾಶೀಲ ಕೆಲಸ ಮಾಡುವುದು ಅವರ ನೆಚ್ಚಿನ ಅಂಶವಾಗಿತ್ತು. ಅದರಲ್ಲಿನ ಹೊಸ ಹೊಸ ಸವಾಲುಗಳು ಅವರಿಗೆ ಇಷ್ಟವಾಗುತ್ತಿತ್ತು. ಬದುಕಿನಲ್ಲಿ ಅಂತಹ ಸಣ್ಣ ಸಂಗತಿಗಳನ್ನು ಕಳೆದುಕೊಳ್ಳುವುದು ಅವರಿಗೆ ಇಷ್ಟವಿರಲಿಲ್ಲ.

21 ವರ್ಷದ ಅಮೀರಾ ನ್ಯೂಯಾರ್ಕ್​ನಲ್ಲಿ ತಕ್ಕ ಮಟ್ಟಿನ ಪ್ರತಿಕ್ರಿಯೆ ಪಡೆದುಕೊಳ್ಳಲು ವಿಫಲರಾದಾಗ ಕೊನೆಗೆ ತಮ್ಮ ತಂದೆಯ ಸಲಹೆ ಕೋರಿದರು. ಮಗಳ ಹಂಬಲಕ್ಕೆ ನೀರೆರೆಯುವಂತೆ ಡಾ ಸುಶೈಲ್ ತಮ್ಮ ಉದ್ದಿಮೆಯ ರೂಪುರೇಷೆಗಳನ್ನು ವಿವರಿಸಿ ನೋಡಿಕೊಳ್ಳುವಂತೆ ಸಲಹೆ ನೀಡಿದರು.

ಕಾರ್ಯನಿರ್ವಹಣಾಧಿಕಾರಿ ಅಥವಾ ಉದ್ಯಮಿ

ಅಮೇರಿಕಾದಂತಹ ನಾಡಿನಲ್ಲಿ ಅತ್ಯುತ್ತಮ ಕೆಲಸ, ಭವಿಷ್ಯ, ಅವಕಾಶಗಳು ಹಾಗೂ ಗೌರವ ಸಂಪಾದಿಸಿಕೊಳ್ಳಬಹುದು ಆದರೆ ಗುರುತರವಾದ ಹಾಗೂ ಗಮನಾರ್ಹ ಸಾಧನೆ ಮಾಡಬೇಕೆಂದರೆ ಭಾರತದಂತ ಔದ್ಯಮಿಕ ವ್ಯವಸ್ಥೆ ಅತ್ಯುತ್ತಮ ಅನ್ನುವುದು ತಂದೆ ಅಮೀರಾಗೆ ಕೊಟ್ಟ ಅತ್ಯಮೂಲ್ಯ ಸಲಹೆ. ಉದ್ಯಮಿಯಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದ ಅಮೀರಾ 2001ರಲ್ಲಿ ಭಾರತಕ್ಕೆ ಮರಳಿದರು.

ಆಗ ನಿರ್ಧಾರ ತೆಗೆದುಕೊಳ್ಳಲೂ ಯೋಚಿಸಬೇಕಾಗಿದ್ದ ಸ್ಥಿತಿಯಿತ್ತು. ಈಗಿನಂತೆ ಇಂಡಿಯಾ ಶೈನಿಂಗ್ ವಾತಾವರಣ ಆಗಿರಲಿಲ್ಲ. ಭಾರತ ತನ್ನ ಸಾಂಪ್ರದಾಯಿಕ ಚೌಕಟ್ಟು ದಾಟಿರಲಿಲ್ಲ. ಜೊತೆಗೆ ಔದ್ಯಮಿಕ ಪ್ರಗತಿಯ ಅವಕಾಶಗಳು ಈಗಿನಷ್ಟು ವಿಸ್ಕೃತವಾಗಿರಲಿಲ್ಲ. ತಮ್ಮ ಲ್ಯಾಬೋಲೆಟರಿಯನ್ನು ಅಪ್ಪ ಹಾಗೂ ಅವರ ನಂಬಿಕಸ್ತ ಮಿತ್ರ ಇಬ್ಬರೇ ನೋಡಿಕೊಳ್ಳುತ್ತಿದ್ದರು. ಕಚೇರಿಯಲ್ಲಿ ಕಂಪ್ಯೂಟರ್​ಗಳಾಗಲೀ, ಇ-ಮೇಲ್ ವ್ಯವಸ್ಥೆಯಾಗಲೀ, ಇನ್ನಿತರೇ ಮೂಲಭೂತ ಸೌಕರ್ಯಗಳಾಗಲೀ ಇರಲಿಲ್ಲ. ಕೇವಲ ಟೆಲಿಫೋನ್ ಮೂಲಕ ಸಂಪರ್ಕಿಸಿ ರೋಗಿಗಳ ಟ್ರೀಟ್ ಮಾಡುವ ಸರಳ ವಿಧಾನವನ್ನು ಮಾತ್ರ ಅನುಸರಿಸಲಾಗುತ್ತಿತ್ತು. ಅದು ಉದ್ಯಮದ ಬೆಳವಣಿಗೆಗೆ ಸಾಕಾಗುತ್ತಿರಲಿಲ್ಲ. ಅದರಿಂದ ವ್ಯಾಪ್ತಿಯನ್ನು ವಿಸ್ತರಿಸಲು ಸಾಧ್ಯವಿರಲಿಲ್ಲ. ಹಾಗಾಗಿ ಹೊಸ ಯೋಜನೆ ರೂಪಿಸಲು ಆಗಲೇ ತೀರ್ಮಾನಿಸಿದ್ದೆ ಅಂದಿದ್ದಾರೆ ಅಮೀರಾ.

ಈಗ ಮುಂಬೈನ ದಕ್ಷಿಣದಲ್ಲಿರುವ ಡಾ.ಸುಶೈಲ್ ಶಾ ಲ್ಯಾಬೊಲೆಟರಿ 1500 ಚದರಡಿ ವಿಸ್ತಾರದಲ್ಲಿ ಹರಡಿಕೊಂಡಿದೆ. ಕಳೆದ 25 ವರ್ಷದಿಂದ ಹಂತ ಹಂತವಾಗಿ ಬೆಳವಣಿಗೆ ಹೊಂದಿ ಕಾರ್ಯಾಚರಣೆ ನಡೆಸತೊಡಗಿದೆ. ಸುಶೈಲ್ ಭಾರತದಾದ್ಯಂತ ಶಾಖೆಗಳನ್ನು ವಿಸ್ತರಿಸಿ ಚೈನ್​​ಲಿಂಕ್ ಮಾಡಲು ಯೋಜಿಸಿದ್ದರು. ಆದರೆ ಸೌಕರ್ಯ ಹಾಗೂ ಯೋಜನೆಯ ಕೊರತೆಯಿಂದ ಅದು ಸಾಧ್ಯವಾಗದ ಮಾತಾಗಿತ್ತು. ಜೊತೆಗೆ ಅದರಿಂದ ಸಂಸ್ಥೆಯ ಬೆಳವಣಿಗೆ ಸಾಧ್ಯವಿರಲಿಲ್ಲ.

ಕ್ರಾಂತಿ

ಅಮೀರಾ ಹೇಳಿಕೊಳ್ಳುವಂತೆ, ಮೊದಲನೆಯದಾಗಿ ಅವರ ಉದ್ದೇಶ ಲ್ಯಾಬ್ರೋಟರಿಯನ್ನು ಕಂಪೆನಿಯನ್ನಾಗಿ ನೊಂದಣಿ ಮಾಡಿಸುವುದಾಗಿತ್ತು. ಜೊತೆಗೆ ಲ್ಯಾಬ್ರೋಟರಿ ಕೆಲಸಕ್ಕಾಗಿ ಹೊಸ ಹೊಸ ಪ್ರತಿಭೆಗಳನ್ನು ಗುರುತಿಸಿ ನೇಮಿಸಿಕೊಳ್ಳಲಾಯಿತು. ಹೊಸ ವಿಭಾಗಗಳನ್ನು ತೆರೆಯಲಾಯಿತು. ಡಿಜಿಟಲ್ ಸಂಪರ್ಕ ವ್ಯವಸ್ಥೆಯನ್ನು ಆರಂಭಿಸಲಾಯಿತು. ಕ್ರಮೇಣ ಎಸ್ಒಪಿ ವಿಧಾನವನ್ನು ಅಳವಡಿಸಲಾಯಿತು. ಆದರೆ ಇವೆಲ್ಲವೂ ಅಮೀರಾ ಪಾಲಿಗೆ ಹೊಸ ಹೊಸ ಕೆಲಸಗಳಾಗಿದ್ದವು. ಎಕ್ಸೆಲ್ ಶೀಟ್​​ನಲ್ಲಿ ಲೆಕ್ಕಾಚಾರ ಮಾಡಲು ಗೊತ್ತಿದ್ದ ಹಾಗೂ ಕ್ಯಾಶ್ ಸ್ಟೇಟ್​​ಮೆಂಟ್​​ಗಳ ಬಗ್ಗೆ ಕೊಂಚ ಅರಿತಿದ್ದ ಅವರಿಗೆ ದೊಡ್ಡ ಸಂಸ್ಥೆಯೊಂದನ್ನು ಕಟ್ಟುವ ಜವಬ್ದಾರಿ ಸಿಕ್ಕಿತ್ತು. ಇದರಿಂದ ಧೃತಿಗೆಡದೇ ಕಲಿಯುತ್ತಾ ಹೋದ ಅಮೀರಾ ಕ್ರಮೇಣ ವ್ಯಾವಹಾರಿಕ ನೀತಿಗಳನ್ನು ಅರಿಯತೊಡಗಿದರು. ನಿಧಾನವಾಗಿ ಗ್ರಾಹಕರನ್ನು ಆಕರ್ಷಿಸುವುದು ಹೇಗೆ, ವ್ಯವಹರಿಸುವುದು ಹೇಗೆ ಅನ್ನುವ ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡರು.

image


ಡಾ ಸುಶೈಲ್ ಮೊದಲಿಗೇ ಅಮೀರಾಗೆ ಉನ್ನತ ಹುದ್ದೆ ನೀಡಲಿಲ್ಲ. ಮೊದಲು ಗ್ರಾಹಕರ ಸಂಪರ್ಕ ವಿಭಾಗದಲ್ಲಿ ಕರೆಗಳನ್ನು ಸ್ವೀಕರಿಸುವುದು, ಖಾಯಿಲೆಗಳನ್ನು ವಿಚಾರಿಸುವುದು, ರೋಗಿಗಳ ಸಮಸ್ಯೆ ಆಲಿಸುವುದು ಮುಂತಾದ ಕೆಲಸ ಮಾಡಿದ ಅಮೀರಾ ಈ ವಿಭಾಗದಲ್ಲಿದ್ದ ತೊಡಕನ್ನು ಸರಿಪಡಿಸಿ ಸಂಪರ್ಕ ಹಾಗೂ ಸಂವಹನ ಉತ್ತಮಪಡಿಸಿದರು. ಜೊತೆ ಜೊತೆಗೆ ಸಂಸ್ಥೆಯ ಬೇರೆ ಬೇರೆ ವಿಭಾಗಗಳ ಪ್ರಗತಿಗೂ ಆದ್ಯತೆ ನೀಡುತ್ತಾ ಸಾಗಿದರು. ಕೆಲವೇ ವರ್ಷಗಳಲ್ಲಿ ಈ ರೀತಿ ಗಮನಾರ್ಹ ಕೆಲಸ ಮಾಡಿದ ಪರಿಣಾಮವಾಗಿ ಸಂಸ್ಥೆಯ ಉನ್ನತ ಹುದ್ದೆಗೇರಿದರು.

ಪ್ರಗತಿಯ ಹಿಡಿತ

ಎರಡು ವರ್ಷಗಳ ಈ ಪರದಾಟದ ನಂತರ ಅಮೀರಾ ತಮ್ಮ ಸಂಸ್ಥೆಯನ್ನು ಅಭಿವೃದ್ಧಿಪಡಿಸಲು ಗಂಭೀರವಾಗಿ ಚಿಂತಿಸಿದರು. ದಕ್ಷಿಣ ಮುಂಬೈನಲ್ಲಿ ಕಳೆದ 25 ವರ್ಷಗಳಿಂದ ಡಾ ಸುಶೈಲ್ ನಂಬಿಕೆ ಹಾಗಾ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದ್ದರು. ಆದರೆ ಶಾಖೆಗಳನ್ನು ವಿಸ್ತಾರಪಡಿಸುವ ಜೊತೆಗೆ ಸಂಸ್ಥೆಯನ್ನು ಅಂತರಾಷ್ಟ್ರೀಯ ಲ್ಯಾಬೊಲೆಟರಿಗಳ ಜೊತೆ ಸ್ಫರ್ಧೆಗೆ ಒಡ್ಡಬೇಕಿತ್ತು. ಮೊದಲು ಅವರ ತಂದೆ ಇಟ್ಟಿದ್ದ ಡಾ ಸುಶೈಲ್ ಲ್ಯಾಬೊಲೆಟರಿಸ್ ಹೆಸರನ್ನು ಬದಲಾಯಿಸಿ ಮೆಟ್ರೋಪೋಲೀಸ್ ಅಂತ ನಾಮಕರಣ ಮಾಡಲಾಯಿತು. ಆ ಬಳಿಕ ಬೇರೆ ಬೇರೆ ನಗರಗಳಲ್ಲಿದ್ದ ಸ್ವತಂತ್ರ ಲ್ಯಾಬ್ರೋಟರಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಯಿತು. ಕೆಲವು ಕಡೆ ಮೈತ್ರೀ ಹಾಗೂ ಕೆಲವು ಕಡೆ ವಿಲೀನ ಪ್ರಕ್ರಿಯೆಗಳೂ ನಡೆದವು. ಮಲ್ಟಿನ್ಯಾಷನಲ್ ಪರೀಕ್ಷಾಲಯಗಳ ಜೊತೆ ಮೆಟ್ರೋಪೋಲೀಸ್ ನೆರಳಿನಲ್ಲಿ ಸ್ವತಂತ್ರ ಲ್ಯಾಬ್ರೋಟರಿಗಳು ಪೈಪೋಟಿ ನಡೆಸಬೇಕಿದ್ದರಿಂದ ಈ ಕ್ರಮ ಅತ್ಯಗತ್ಯವಾಗಿತ್ತು.

2004ರಲ್ಲಿ ಮೆಟ್ರೋಪೋಲಿಸ್ ತನ್ನ ಮೊದಲ ಪಾರ್ಟನರ್ಶಿಪ್ ಒಡಂಬಡಿಕೆಗೆ ಸಹಿ ಹಾಕಿತು. ಚೆನ್ನೈನ ಶ್ರೀನಿವಾಸನ್ ಎನ್ನುವವರ ಲ್ಯಾಬ್ರೋಟರಿ ಮೆಟ್ರೋಪೋಲೀಸ್ ಜೊತೆ ಗುರುತಿಸಿಕೊಂಡಿತು. ಅದಾದ ಬಳಿಕ ಈ ಕ್ರಿಯೆ ಮುಂದುವರೆಯಿತು. ಈಗ ಮೆಟ್ರೋಪೋಲೀಸ್ 25 ಸಹಭಾಗಿತ್ವ ಸ್ವತಂತ್ರ ಲ್ಯಾಬ್ರೋಟರಿಗಳನ್ನು ತನ್ನೊಡನೆ ಹೊಂದಿದೆ.

ಐಸಿಐಸಿಐ ಬ್ಯಾಂಕ್​​ನಿಂದ ನೆರವು ಪಡೆದು 2006ರಲ್ಲಿ ಮೆಟ್ರೋಪೋಲಿಸ್ ಹೆಚ್ಚುವರಿ ಹೂಡಿಕೆ ಮಾಡಿತು. 2010ರಲ್ಲಿ ಅಮೆರಿಕನ್ ಮೂಲದ ಈಕ್ವಿಟಿ ಕಂಪೆನಿ ವಾರ್ಬರ್ಗ್ ಪಿನ್ಕಸ್ ದೊಡ್ಡ ಪ್ರಮಾಣದ ಹಣವನ್ನು ಮೆಟ್ರೋಪೋಲೀಸ್​ನಲ್ಲಿ ಹೂಡಿತು. ಸಣ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವ ಹಾಗೂ ಹೆಚ್ಚುವರಿ ಹಣ ಹೂಡಲು ಸಾಧ್ಯವಿಲ್ಲ ಸಂಸ್ಥೆಗಳ ಶೇರ್​​ಗಳನ್ನು ಪಡೆದುಕೊಂಡು ಸರ್ವಾಂಗೀಣ ಪ್ರಗತಿಯ ಉದ್ದೇಶದಿಂದ ಮೆಟ್ರೋಪೋಲೀಸ್ ಹೂಡಿಕೆಯನ್ನು ಅಧಿಕಗೊಳಿಸಿತು. ನಮ್ಮದು ವ್ಯವಹಾರಸ್ಥ ಕುಟುಂಬವಲ್ಲದ ಕಾರಣ ಪ್ರತಿ ಬಾರಿ ಹೂಡಿಕೆ ಮಾಡುವಾಗಲೂ ಯೋಚಿಸಬೇಕಿತ್ತು. ಹೂಡಿಕೆಗೆ ತಕ್ಕ ಆದಾಯವನ್ನು ಗಣನೆಯಲ್ಲಿಟ್ಟುಕೊಂಡು ಮುಂದೆ ಹೆಜ್ಜೆ ಇಡಬೇಕಿತ್ತು. ಇಂದು ಇ-ಕಾಮರ್ಸ್ ಉದ್ಯಮಗಳು ಅಥವಾ ಇನ್ನಿತರೆ ಪ್ರಾರಂಭಿಕ ಸಂಸ್ಥೆಗಳು ತಿಂಗಳಿಗೆ 100 ಕೋಟಿ ಹೂಡಿಕೆ ಮಾಡಿ ಕೇವಲ 2 ಕೋಟಿ ಆದಾಯ ತರುತ್ತಿವೆ. ಆದರೆ ನಮ್ಮ ಪರಿಸ್ಥಿತಿ ಹೀಗಿರಲಿಲ್ಲ. ನಾವು ಅಂದಾಜಿಸಿದಷ್ಟೇ ಪ್ರಮಾಣದಲ್ಲಿ ನಾವು ಪ್ರಗತಿ ಸಾಧಿಸಲು ಸಾಧ್ಯವಿತ್ತು ಎಂದು ತಮ್ಮ ಪ್ರಗತಿಯ ಬಗ್ಗೆ ವಿವರಣೆ ನೀಡಿದ್ದಾರೆ ಅಮೀರಾ.

image


2002ರಲ್ಲಿ ಕೇವಲ 7 ಕೋಟಿ ಆದಾಯ ತರುತ್ತಿದ್ದ ಅವರ ಲ್ಯಾಬ್​​ನಲ್ಲಿ 40ರಿಂದ 50 ಉದ್ಯೋಗಿಗಳಿದ್ದರು. ಈಗ ಈ ಸಂಸ್ಥೆ 7 ರಾಷ್ಟ್ರಗಳ 800 ಕೇಂದ್ರಗಳಲ್ಲಿ 125 ಪ್ರಯೋಗಾಲಯಗಳ ಮೂಲಕ ಕಾರ್ಯಾಚರಣೆ ನಡೆಸುತ್ತಿದೆ. ಪ್ರಸ್ತುತ ಸಂಸ್ಥೆಯ ಮೌಲ್ಯ ಸುಮಾರು 2000 ಕೋಟಿ ಹಾಗೂ ವಾರ್ಷಿಕ ಆದಾಯ 500 ಕೋಟಿ ರೂಪಾಯಿ. ಇದು ನಿಜವಾದ ಸಂಘರ್ಷಪೂರ್ಣ ಹಾಗೂ ಬದ್ಧತೆಯ ಪ್ರಗತಿ ಅಂತ ವಿಶ್ವಾಸದಿಂದ ಹೇಳಿಕೊಳ್ಳುತ್ತಾರೆ ಅಮೀರಾ.

ಅಂತರಾಷ್ಟ್ರೀಯ ಕಾರ್ಯಾಚರಣೆ

ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಸ್ಥೆಯನ್ನು ಬಳಸಿಕೊಳ್ಳುವುದು ಅವಕಾಶ ಕೇಂದ್ರಿತ ನಿರ್ಧಾರ. ಮೊದಲು ಮುಂಬೈ, ಚೆನ್ನೈ ಹಾಗೂ ಕೇರಳಗಳಲ್ಲಿದ್ದ ಸಂಸ್ಥೆಯ ಶಾಖೆಗಳನ್ನು ಶ್ರೀಲಂಕಾದಲ್ಲಿ ಆರಂಭಿಸುವ ಮೂಲಕ ಜಾಗತಿಕವಾಗಿ ಮೊದಲ ಹೆಜ್ಜೆ ಇಡಲಾಯಿತು. ಭಾರತದಲ್ಲಿ ಪೈಪೋಟಿ ಹಾಗೂ ಮಾರುಕಟ್ಟೆಯ ತಿಕ್ಕಾಟಗಳು ಕಠಿಣವಾಗುತ್ತಿದ್ದ ಸಂದರ್ಭದಲ್ಲಿ ಶ್ರೀಲಂಕಾದಲ್ಲಿ ಕಾರ್ಯಾಚರಣೆ ನಡೆಸುವುದು ಸುಲಭವಾಗಿತ್ತು. ಅದರ ಜೊತೆಗೆ ಶ್ರೀಲಂಕಾ ತನ್ನ ವೈದ್ಯಕೀಯ ಅಗತ್ಯತೆಗಳ ಹೊರಗುತ್ತಿಗೆಯನ್ನು ಸಿಂಗಾಪುರದಂತಹ ರಾಷ್ಟ್ರಗಳಿಗೆ ನೀಡುತ್ತಿತ್ತು. 2005ರಲ್ಲಿ ಶ್ರೀಲಂಕಾಗೆ ಕಾಲಿಟ್ಟ ಸಂಸ್ಥೆ ನಂತರ 206ರಲ್ಲಿ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಹಾಗೂ 2007ರಲ್ಲಿ ಆಫ್ರಿಕಾ ರಾಷ್ಟ್ರಗಳಿಗೆ ಕಾಲಿಟ್ಟಿತು.

ವಿವಿಧ ರಾಷ್ಟ್ರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಅಮೀರಾ ಅಲ್ಲಿನ ಕೆಲಸದ ಮಿತಿ ಹಾಗೂ ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಶ್ರೀಲಂಕಾ ವಿರಾಮತಾಣವೆಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳು ಜಾಗತಿಕವಾಗಿ ವ್ಯಾವಹಾರಿಕ ತಾಣವೆಂದಾಗಿ ಗುರುತಿಸಿಕೊಳ್ಳುತ್ತಿದೆ. ಆದರೆ ದಕ್ಷಿಣಾ ಆಫ್ರಿಕಾ ರಾಷ್ಟ್ರಗಳ ಪರಿಸ್ಥಿತಿ ಭಿನ್ನ. ಅಲ್ಲಿ ವ್ಯಾವಹಾರಿಕವಾಗಿ ವೃತ್ತಿಪರತೆ ಅತಿ ಮುಖ್ಯ. ಭಾರತದಂತೆ ಕೆಲಸ ಮಾಡುವ ಅವಧಿ ಕೊಂಚವೂ ಹೆಚ್ಚು ಕಡಿಮೆಯಾಗದೇ ಅಲ್ಲಿ ನಿಗದಿತವಾಗಿ 9ರಿಂದ 5ರವರೆಗೆ ಮಾತ್ರ ಕೆಲಸ ಮಾಡಲಾಗುತ್ತದೆ. ಇದರಿಂದ ಉತ್ಪಾದನೆ ಕಡಿಮೆಯಾದರೂ ಅವರು ತಮ್ಮ ಮಿತಿಯನ್ನು ಮೀರುವುದಿಲ್ಲ. ಹೀಗೆ ಬೇರೆ ಬೇರೆ ರಾಷ್ಟ್ರಗಳಲ್ಲಿ ಕೆಲಸ ಮಾಡುವಾಗ ಅಲ್ಲಿನ ಔಧ್ಯಮಿಕ ವಾತಾವರಣವನ್ನು ಗಮನಿಸಿ ಮುಂದಿನ ಯೋಜನೆ ರೂಪಿಸಲಾಗಿದೆ ಎಂದು ಅಮೀರಾ ಹೇಳಿದ್ದಾರೆ.

ಅತಿ ಮುಖ್ಯವಾಗಿ ಜಾಗತಿಕವಾಗಿ ಹಬ್ಬುತ್ತಿರುವ ಮೆಟ್ರೋಪೋಲೀಸ್ ಸಂಸ್ಥೆಯಲ್ಲಿ ಏಕರೂಪದ ಶಿಸ್ತು ಜಾರಿಗೆ ತರುವತ್ತ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಉದಾಹರಣೆಗೆ ಕೀನ್ಯಾದ ಉದ್ಯೋಗಿ ಹಾಗೂ ಭಾರತೀಯ ಉದ್ಯೋಗಿಗಳ ನಡುವೆ ಸಾಮರಸ್ಯ ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ. ಯಾವುದೇ ರಾಷ್ಟ್ರದ ಸಂಸ್ಥೆಯ ಉದ್ಯೋಗಿಗಳಿಂದ ಒಂದೇ ರೀತಿಯ ಕಾರ್ಯ ಶ್ರದ್ಧೆ, ನೈತಿಕತೆ ಹಾಗೂ ಪ್ರಾಮಾಣಿಕತೆ ನಿರೀಕ್ಷಿಸಲಾಗುತ್ತಿದೆ.

ತೊಡಕುಗಳು

ಮೆಟ್ರೋಪೋಲೀಸ್ ಸಂಸ್ಥೆಯ ಯಶಸ್ಸಿನ ಜೊತೆ ಅಷ್ಟೇ ಪ್ರಮಾಣದ ವೈಫಲ್ಯವೂ ಇದೆ. ಅದರ ಎಲ್ಲಾ ಪಾರ್ಟ್​ನರ್ ಸಂಸ್ಥೆಗಳು ವೇಗವಾಗಿ ತ್ವರಿತಗತಿಯಲ್ಲಿ ಕೆಲಸ ಮಾಡುತ್ತಿಲ್ಲ. ಕೆಲವು ನಿರೀಕ್ಷಿತ ಪ್ರಮಾಣಕ್ಕಿಂತ ಕುಂಠಿತ ಪ್ರಗತಿ ಕಾಣುತ್ತಿವೆ. ಅವುಗಳನ್ನು ಮೇಲೆತ್ತುವ ಅಥವಾ ಅವುಗಳಿಂದ ಹೊರಬರುವ ಎರಡೇ ಆಯ್ಕೆ ಸಧ್ಯ ಅವರ ಮುಂದಿದೆ.

ಪುರುಷರ ಜಗತ್ತಿನಲ್ಲಿ ಮಹಿಳೆಯರು

ಮಹಿಳಾ ಉದ್ಯಮಿಯಾಗಿ ಪುರುಷ ಪ್ರಧಾನ ಉದ್ಯಮ ಕ್ಷೇತ್ರದಲ್ಲಿ ಅಮೀರಾ ಸಾಕಷ್ಟು ಅಡೆತಡೆಗಳನ್ನು ಅನುಭವಿಸಿದ್ದಾರೆ. ಅವರ ಕಿರಿಯ ಪುರುಷ ಸಹುದ್ಯೋಗಿಗಳಿಂದ ಸಾಕಷ್ಟು ಬಾರಿ ಹಿನ್ನಡೆ ಹಾಗೂ ಕ್ಷುಲ್ಲಕ ಟೀಕೆಗಳನ್ನು ಎದುರಿಸಿದ್ದಾರೆ. ಮಹಿಳೆಯಾದರೂ ಯುದ್ಧದ ಕಡೆಗೆ ಗಮನಹರಿಸಿದರೇ ಗೆಲ್ಲಬಹುದು ಅನ್ನುವ ಮಾತಿದೆ. ಆದರೆ ಉದ್ಯಮದಲ್ಲಿ ಅವೆಲ್ಲವನ್ನೂ ಮೀರಿದ ಶ್ರದ್ಧೆ ಸಂಯಮ ಹಾಗೂ ಕ್ಷಿಪ್ರಗತಿಯ ವ್ಯಾವಹಾರಿಕ ಯೋಜನೆಗಳ ಅಗತ್ಯವಿದೆ. ಇಲ್ಲಿ ಲಿಂಗ ತಾರತಮ್ಯವಿದ್ದರೇ ಯಾವ ಯಶಸ್ಸು ಸಿದ್ಧಿಸುವುದಿಲ್ಲ. ಮಹಿಳಾ ಉದ್ಯಮಿಯಾಗಿ ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸುವುದು ವಿಭಿನ್ನ ರೀತಿಯ ಸವಾಲಾಗಿರುತ್ತದೆ. ಆದರೆ ಲಿಂಗ ತಾರತಮ್ಯವನ್ನು ಮೀರಿ ಗೆಲುವು ಸಾಧಿಸುವುದು ಮಹಿಳಾ ಉದ್ಯಮಿಗಳ ನಿಜವಾದ ಯಶೋಗಾಥೆ ಅನ್ನುವುದು ಅಮೀರಾರ ಅಭಿಪ್ರಾಯ.

ಅಮೀರಾ ಗುರುತಿಸಿರುವಂತೆ ಅವರ ಅನುಭವದಲ್ಲಿ ಯಾವುದಾದರೂ ಮುಖ್ಯವಾದ ಸಭೆಗಳಲ್ಲಿ ಅವರ ಸರಿಸಮ ಕುಳಿತು ಮಾತಾಡಲು ಕೆಲವು ಪುರುಷ ಸಹುದ್ಯೋಗಿಗಳು ಹಿಂದೇಟು ಹಾಕುತ್ತಾರೆ. ಅವರಲ್ಲಿ ಅದೇನೋ ಒಂದು ಭಗೆಯ ನಿರ್ಲಕ್ಷ್ಯದ ಧೋರಣೆ ಇರುತ್ತದೆ. ಆದರೆ ಮಹಿಳಾ ಉದ್ಯಮಿ ಯಶಸ್ವಿಯಾಗಬೇಕಿದ್ದರೇ ಇಂತಹ ನೂರಾರು ಚಿಕ್ಕಪುಟ್ಟ ಸಂಗತಿಗಳನ್ನು ನಿರ್ಲಕ್ಷಿಸಿ ಮುನ್ನಡೆಯಬೇಕು ಅನ್ನುವುದು ಅವರ ಅನುಭವ ಮಾತ್ರವಲ್ಲ ಸಲಹೆಯೂ ಹೌದು.

ಭವಿಷ್ಯದ ಯೋಜನೆಗಳು

ತಮ್ಮ ಭವಿಷ್ಯದ ಕಾರ್ಯಯೋಜನೆಗಳ ಬಗ್ಗೆ ಅಮೀರಾ ಸಾಕಷ್ಟು ಉತ್ಸುಕರಾಗಿದ್ದಾರೆ. ಕಳೆದೆರಡು ವರ್ಷಗಳಿಂದ ಮೆಟ್ರೋಪೋಲೀಸ್ ಸಂಸ್ಥೆ ಹೊಸ ನೇಮಕಾತಿ, ಮೂಲಸೌಕರ್ಯ, ವಿತರಣೆ, ನೆಟ್​​ವರ್ಕ್ ಹಾಗೂ ಮಾರಾಟದ ವಿಚಾರದಲ್ಲಿ ಖರ್ಚು ಹಾಗೂ ಹೂಡಿಕೆ ಹೆಚ್ಚು ಮಾಡಿದೆ. ಫಲಿತಾಂಶ ಉತ್ತಮವಾಗಿ ಬರುತ್ತದೆ ಅನ್ನುವ ನಿರೀಕ್ಷೆಯಂತೂ ಅವರದ್ದಾಗಿದೆ.

image


ದೀರ್ಘಕಾಲಿಕ ಯೋಜನೆಗಳನ್ನು ರೂಪಿಸಿರುವ ಅವರು ಮುಂಬರುವ ದಿನಗಳಲ್ಲಿ ಬದಲಾಗುವ ವ್ಯವಹಾರ ಕ್ಷೇತ್ರಕ್ಕೆ ಅನುಗುಣವಾಗಿ ನೀತಿಗಳನ್ನು ಬದಲಾಯಿಸಿಕೊಳ್ಳುವ ತೀರ್ಮಾನ ಮಾಡಿದ್ದಾರೆ. ಹೊಸ ತಂತ್ರಜ್ಞಾನ ಹಾಗೂ ಆವಿಷ್ಕಾರಗಳ ಮುಖೇನ ಸಂಸ್ಥೆಯ ಪ್ರಗತಿಗೆ ನೀಲನಕ್ಷೆ ಸಿದ್ಧಪಡಿಸಿಕೊಂಡಿದ್ದಾರೆ. ಈ ಮೂಲಕ ಜಗತ್ತಿನಾದ್ಯಂತ ಹೊಸ ಹೊಸ ರಾಷ್ಟ್ರಗಳಲ್ಲಿ ಪ್ರಯೋಗಾಲಯಗಳ ಸ್ಥಾಪನೆ, ಮೈತ್ರಿ ಹಾಗೂ ವಿಲೀನದಂತಹ ಪ್ರಕ್ರಿಯೆ ಮುಂದುವರೆಸಲು ಯೋಜಿಸುತ್ತಿದ್ದಾರೆ.

ಅಮೀರಾ ಸದಾ ಸ್ವತಂತ್ರವಾಗಿ ಸುತ್ತಾಡುವ ಮನಸ್ಥಿತಿಯವರು. ಅವರಿಗೆ ಕಚೇರಿಯ ಒಳಗೆ ಕೂತು ಸದಾ ಕಾರ್ಯನಿರ್ವಹಿಸುವುದು ಇಷ್ಟವಿಲ್ಲ. ಹಾಗಾಗಿ ಅವರು ವಾರದಲ್ಲಿ ಮೂರು ಬಾರಿಯಾದರೂ ಟೆನ್ನಿಸ್ ಕೋರ್ಟ್​ನಲ್ಲಿ ಕಾಲಕಳೆಯುತ್ತಾರೆ. ಎರಡು ದಿನ ಜಿಮ್​​ಗೆ ಹೋಗುತ್ತಾರೆ. ಅವಕಾಶ ಸಿಕ್ಕಾಗಲೆಲ್ಲಾ ಹೊರಗೆ ತಿರುಗಲು ಹೊರಡುತ್ತಾರೆ. ಕ್ಯಾಂಪ್, ಟ್ರಕ್ಕಿಂಗ್ ಹಾಗೂ ಸುತ್ತಾಟ ಅವರ ಅಚ್ಚುಮೆಚ್ಚಿನ ಹವ್ಯಾಸ. ಬಾಹ್ಯ ಹಾಗೂ ಮಾನಸಿಕ ಚಟುವಟಿಕೆಗಳಿಂದ ಸದಾ ಮಾನಸಿಕವಾಗಿ ಆರೋಗ್ಯವಾಗಿರಬೇಕು. ಹಾಗಿದ್ದಾಗ ಮಾತ್ರ ಹೊಸತನ್ನು ಯೋಚಿಸಲು ಹಾಗೂ ಯೋಜಿಸಲು ಸಾಧ್ಯ ಅನ್ನುವುದು ಅವರ ಧೋರಣೆ.

ಸಲಹೆ

ಈ 14 ವರ್ಷಗಳ ಅವರ ವ್ಯಾವಹಾರಿಕ ಅನುಭವದಲ್ಲಿ ಅವರು ಸಾಕಷ್ಟು ಅತ್ಯುತ್ತಮ ಸಲಹೆಗಳನ್ನು ಕೊಡುತ್ತಾರೆ. ನಿಮ್ಮ ವ್ಯಾಪ್ತಿಗಳನ್ನು ಸದಾ ವಿಸ್ತರಿಸುತ್ತಲೇ ಇರಿ. ಸದಾ ರಕ್ಷಣಾತ್ಮಕ ವೃತ್ತದೊಳಗೇ ಇರುವುದು ಮನುಷ್ಯ ಸ್ವಭಾವ. ಇಂತಹ ಸಂದರ್ಭದಲ್ಲಿ ಎದುರಾಗುವ ಯಾವುದೋ ಆಕಸ್ಮಿಕ ನಿಮ್ಮನ್ನು ಹೆದರಿಸುತ್ತದೆ. ಆದರೆ ಅಂತಹ ಸೂಕ್ಷ್ಮ ಹಾಗೂ ಒತ್ತಡದ ಸಂದರ್ಭದಲ್ಲೇ ನಿಮ್ಮನ್ನು ನೀವು ಹುಡುಕಿಕೊಳ್ಳಬಹುದು. ನೀವು ನಿಮ್ಮ ವಿಸ್ತಾರವನ್ನು ಹೆಚ್ಚಿಸಿಕೊಂಡಷ್ಟೂ ನಿಮ್ಮ ಸಾಮರ್ಥ್ಯದ ಆಳ ಅಗಲ ನಿಮಗೆ ಅರಿವಾಗುತ್ತದೆ ಅನ್ನುವುದು ಅಮೀರಾರ ಅಮೂಲ್ಯ ಸಲಹೆ.