ಕ್ಯಾಶ್​ಲೆಸ್​ ವಹಿವಾಟಿನಲ್ಲೂ ಮಿಂಚಿದ ಬಿಎಂಟಿಸಿ - ಪ್ರಯಾಣಿಕರಿಗೆ ತಟ್ಟಿಲ್ಲ ಪ್ರಯಾಣದ ಬಿಸಿ

ಟೀಮ್​ ವೈ.ಎಸ್​. ಕನ್ನಡ

0

500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳು ಬ್ಯಾನ್ ಆದ ಬಳಿಕ ಹಂತ ಹಂತವಾಗಿ ಜನರು ಆ ಬದಲಾವಣಿಗೆ ಒಗ್ಗಿಕೊಳ್ಳುತ್ತಿದ್ದಾರೆ. ಆದರೂ ಎಟಿಎಮ್ ಹಾಗೂ ಬ್ಯಾಂಕ್‍ಗಳ ಮುಂದಿನ ಕ್ಯೂ ನಿಲ್ಲುವ ಲಕ್ಷಣಗಳು ಈಗಲೇ ಕಾಣುತ್ತಿಲ್ಲ. ಕಾರಣ, ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿ ಬ್ಯಾಂಕ್ ಹಾಗೂ ಎಟಿಎಮ್ ಮೂಲಕ ಸಾಮಾನ್ಯ ಜನರ ಕೈ ಸೇರಬೇಕಾದ ಹಣ, ಬ್ಲ್ಯಾಕ್ ಮತ್ತು ವೈಟ್ ಆಗಿ ಬದಲಾಗಿ ಉಳ್ಳವರ ಪಾಲಾಗುತ್ತಿದೆ.

ನೋಟ್ ಬ್ಯಾನ್ ನಂತರ ನಗದು ರಹಿತ ವಹಿವಾಟಿಗೆ ಒತ್ತು ನೀಡಲಾಗುತ್ತಿದೆ. ಸರ್ಕಾರಿ ಸಂಸ್ಥೆಗಳು ಹಾಗೂ ಖಾಸಗಿ ಕಂಪನಿಗಳೂ ಕ್ಯಾಶ್‍ಲೆಸ್ ಆಗುತ್ತಿವೆ. ಈಗ ಬಿಎಂಟಿಸಿ ಕೂಡ ಕ್ಯಾಶ್‍ಲೆಸ್ ಆಗಿದೆ. ವ್ಯವಸ್ಥಿತ ಸೇವೆಯಿಂದ ರಾಷ್ಟ್ರಾದ್ಯಂತ ಹೆಸರು ಮಾಡಿರುವ ಬಿಎಂಟಿಸಿ (ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ಈಗ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಕೇವಲ 10 ದಿನಗಳಲ್ಲಿ 31 ಸಾವಿರಕ್ಕೂ ಹೆಚ್ಚು ಜನ ಬಿಎಂಟಿಸಿ ಪಾಸ್‍ಗಳನ್ನು ಡೆಬಿಟ್/ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದ್ದಾರೆ.

ಹೌದು, ಬಿಎಂಟಿಸಿ ಪ್ರಯಾಣಿಕರು ಹಂತ ಹಂತವಾಗಿ ನಗದುರಹಿತ ವಹಿವಾಟಿನತ್ತ ಒಲವು ತೋರಲಾರಂಭಿಸಿದ್ದಾರೆ. 30,852 ಪ್ರಯಾಣಿಕರು ಡೆಬಿಟ್/ ಕ್ರೆಡಿಟ್ ಕಾರ್ಡ್ ಬಳಸಿ ತಿಂಗಳ ಪಾಸ್ ಪಡೆದಿದ್ದಾರೆ. ಚಿಲ್ಲರೆ ಸಮಸ್ಯೆ ಇರುವ ಈ ಸಂದರ್ಭದಲ್ಲಿ ಪ್ರಯಾಣೀಕರು ನಗದನ್ನು ಬಳಸದೆ ಸುಮಾರು 31 ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಪಾಸ್ ಖರೀದಿಸಿದ್ದಾರೆ. ನವೆಂಬರ್ 8ರಂದು ನೋಟ್ ಬ್ಯಾನ್‍ ಆದ ಬಳಿಕ ಚಿಲ್ಲರೆ ಸಮಸ್ಯೆ ಪರಿಹರಿಸಲು ನವೆಂಬರ್​ 27ರಂದು ಬೆಂಗಳೂರಿನ 56 ನಿಲ್ದಾಣಗಳಲ್ಲಿ ಪಾಯಿಂಟ್ ಆಫ್ ಸೇಲ್ ಅರ್ಥಾತ್ ಪಿಒಎಸ್ ಬಿಎಂಟಿಸಿ ಅಳವಡಿಸಿತ್ತು. ತಿಂಗಳ ಪಾಸ್ ಖರೀದಿಸುವ ಬಿಎಂಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ. ಅದರಂತೆ ಜನಸಾಮಾನ್ಯರು ಇದರ ಸಂಪೂರ್ಣ ಲಾಭ ಪಡೆದಿದ್ದಾರೆ. ಬಿಎಂಟಿಸಿ ಅಧಿಕಾರಿಗಳೇ ನೀಡಿರುವ ಮಾಹಿತಿ ಪ್ರಕಾರ ನ. 28ರಿಂದ ಡಿ. 8ರವರೆಗೆ 30,852 ಮಾಸಿಕ ಪಾಸ್‍ಗಳು ಈ ಪಿಒಎಸ್ ಕೇಂದ್ರಗಳಲ್ಲಿ ಮಾರಾಟವಾಗಿವೆ.

ಇದನ್ನು ಓದಿ: Posಗಳಿಗೆ ದಿಢೀರ್​ ಬೇಡಿಕೆ- ಬ್ಯಾಂಕ್​ಗಳಿಗೆ ಹೆಚ್ಚಿದ ತಲೆನೋವು

ಬಿಎಂಟಿಸಿಯಲ್ಲಿ ಒಟ್ಟು 4 ಬಗೆಯ ಮಾಸಿಕ ಪಾಸ್‍ಗಳಿವೆ. 1,050 ರೂ. ಮೊತ್ತದ ಪಾಸ್‍ನಲ್ಲಿ ವೋಲ್ವೋ ಬಸ್‍ಗಳನ್ನು ಹೊರತುಪಡಿಸಿ ಉಳಿದೆಲ್ಲ ಬಿಎಂಟಿಸಿ ಬಸ್‍ಗಳಲ್ಲಿ ಪ್ರಯಾಣ ಮಾಡಬಹುದು. 2250 ರೂ. ಮೊತ್ತದ ವಜ್ರ ಗೋಲ್ಡ್ ಮಾಸಿಕ ಪಾಸ್‍ನಲ್ಲಿ ವಾಯುವಜ್ರ ಬಸ್ ಹೊರತುಪಡಿಸಿ ಉಳಿದ ವೋಲ್ವೋ ಮತ್ತು ಸಾಮಾನ್ಯ ಬಸ್‍ಗಳಲ್ಲಿ ಪ್ರಯಾಣಿಸಬಹುದು. 2,950 ರೂ.ನಿಂದ 3,350 ರೂ. ಮೊತ್ತದ ವಾಯುವಜ್ರ ಮಾಸಿಕ ಪಾಸ್ ಪಡೆದರೆ ಬೆಂಗಳೂರು ರೌಂಡ್ಸ್ ಹೊರತುಪಡಿಸಿ ಉಳಿದೆಲ್ಲ ಬಿಎಂಟಿಸಿ ಬಸ್‍ಗಳಲ್ಲಿ ಸಂಚಾರ ಮಾಡಬಹುದು. ಉಳಿದಂತೆ ಐಟಿ-ಬಿಟಿ ಪ್ರದೇಶಗಳಿಗೆ ಹೋಗುವ ವಜ್ರ ಹಾಗೂ ವಾಯುವಜ್ರ ಬಸ್‍ಗಳಲ್ಲೇ ಹೆಚ್ಚಿನ ಮಾಸಿಕ ಪಾಸ್‍ಗಳನ್ನು ಪಿಒಎಸ್ ಯಂತ್ರದ ಮೂಲಕ ಮಾರಾಟ ಮಾಡಲಾಗಿದೆ ಎಂದು ಮತ್ತಷ್ಟು ಮಾಹಿತಿ ಹಂಚಿಕೊಳ್ಳುತ್ತಾರೆ ಬಿಎಂಟಿಸಿ ಅಧಿಕಾರಿಗಳು.

ಸುಮಾರು 6,200 ಬಸ್‍ಗಳನ್ನು ಹೊಂದಿರುವ ಬಿಎಂಟಿಸಿಯಲ್ಲಿ ಪ್ರತಿದಿನ 52 ಲಕ್ಷ ಮಂದಿ ಪ್ರಯಾಣಿಸುತ್ತಾರೆ. ಪ್ರತಿದಿನ 74 ಸಾವಿರದಷ್ಟು ಟ್ರಿಪ್ ಮಾಡುವ ಬಸ್‍ಗಳು ಬರೋಬ್ಬರಿ 12 ಲಕ್ಷ ಕಿಲೋಮೀಟರ್ ಸಂಚರಿಸುತ್ತವೆ. ಪ್ರತಿದಿನ 4 ಕೋಟಿ ರೂಪಾಯಿಗಿಂತ ಹೆಚ್ಚು ವಹಿವಾಟು ನಡೆಸುವ ಬಿಎಂಟಿಸಿಯಲ್ಲಿ 35 ಸಾವಿರ ಮಂದಿ ನೌಕರರಿದ್ದಾರೆ. ಇಂತಹ ಬಿಎಂಟಿಸಿ ಈಗಾಗಲೇ ಹಲವಾರು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು, ಭಾರತದಲ್ಲೆ ಮಾದರಿ ಸಾರಿಗೆ ಸಂಸ್ಥೆ ಎಂಬ ಹೆಸರು ಪಡೆದಿದೆ. ಈಗ ಕ್ಯಾಶ್‍ಲೆಸ್ ಆಗಿರುವ ಬಿಎಂಟಿಸಿಗೆ ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ನಗದು ರಹಿತ ವಹಿವಾಟು ನಡೆಸುವ ನಿರೀಕ್ಷೆ ಇದೆ. 

ಇದನ್ನು ಓದಿ:

1. ಇಲ್ಲಿ ನಮಗೆ ನಾವೇ ಬಾಸ್​..!ಉದ್ಯಮಿ ಆಗುವುದರ ಹಿಂದಿದೆ ನೂರಾರು ಕನಸು..!

2. KSRTC ಬಸ್​ಗಳಿಗೆ ಬಯೋ ಟಾಯ್ಲೆಟ್ ಭಾಗ್ಯ..!-ದೇಶದ ನಂಬರ್​ ವನ್​ ಸಾರಿಗೆ ಸಂಸ್ಥೆಯಿಂದ ಹೊಸ ಪ್ರಯೋಗ

3. ಪೇವರ್ಲ್ಡ್​ ಎಂಪೋಸ್: ಸಣ್ಣ ವ್ಯಾಪಾರಿಗಳಿಗೆ ಅನುಕೂಲಕರ ಸಾಧನ

Related Stories

Stories by YourStory Kannada