ತಂಪು ತಂಪು ಕೂಲ್ ಕೂಲ್- ಇದು ಶ್ರೀರಾಜ್ ಲಸ್ಸಿ ಬಾರ್ ಕಮಾಲ್

ಹರ್ಷ ಎಸ್​​.ಆರ್​​.

ತಂಪು ತಂಪು ಕೂಲ್ ಕೂಲ್- ಇದು ಶ್ರೀರಾಜ್ ಲಸ್ಸಿ ಬಾರ್ ಕಮಾಲ್

Wednesday October 28, 2015,

3 min Read

ಜಾಗತೀಕರಣದ ಭರಾಟೆಯಲ್ಲಿ, ಮೆರೆಯುತ್ತಿರೋ ವಿದೇಶಿ ಪಾನೀಯಗಳ ನಡುವೆ ದೇಸಿ ಪಾನೀಯ ಸಂಸ್ಥೆಯೊಂದು ಗ್ರಾಹಕರಿಗೆ ಗುಣಮಟ್ಟದ, ತಂಪಾದ ಪಾನೀಯಗಳನ್ನು ನೀಡ್ತಾ ಇದೆ. ಜಾಗತಿಕ ದಿಗ್ಗಜ ಪಾನೀಯ ಸಂಸ್ಥೆಗಳಾದ ಪೆಪ್ಸಿ, ಕೋಲಾದ ಎದುರಿಗೆ ತೊಡೆ ತಟ್ಟಿ ನಿಂತಿದೆ ಸಿಲಿಕಾನ್ ಸಿಟಿಯ ಈ ಲಸ್ಸಿ ಬಾರ್. ಇಲ್ಲಿಗೆ ಭೇಟಿ ನೀಡುವ ಗ್ರಾಹಕರ ಒಡಲು ತಂಪು ಮಾಡುವ ಜೊತೆಗೆ ಸಾಕಷ್ಟು ವೆರೈಟಿಯ ಪಾನೀಯಗಳನ್ನು ನೀಡುತ್ತೆ. ಇಲ್ಲಿಗೆ ಒಮ್ಮೆ ಬಂದ ಗ್ರಾಹಕರು ಮತ್ತೆ ಮತ್ತೆ ಬರುವಷ್ಟು ಅತ್ಯುತ್ತಮ ದರ್ಜೆಯ ಪಾನೀಯಗಳು ಇಲ್ಲಿ ಲಭ್ಯವಿದೆ.

image


ಸಾಲು-ಸಾಲು ತಂಪು ಪಾನೀಯಗಳು, ವಿವಿಧ ಹಣ್ಣುಗಳ ಜ್ಯೂಸ್, ಬಾಯಲ್ಲಿ ಇಟ್ರೆ ಸಾಕು ಕರಗೋ ಕುಲ್ಫಿಗಳು, ಪ್ರತಿಯೊಂದು ಪಾನೀಯಕ್ಕೂ ಡ್ರೈ ಫ್ರುಟ್ಸ್ ಅಲಂಕಾರ.. ಇವುಗಳ ಸವಿ ಸವಿಯೋಕೆ ಜನರು ಮತ್ತೆ ಮತ್ತೆ ಬರ್ತಾರೆ. ಇನ್ನು ಗ್ರಾಹಕರೇ ದೇವರು ಅನ್ನೋ ಮಾತಿನಂತೆ ಈ ಕಡೆ ಆರ್ಡರ್ ಮಾಡಿದ್ರೆ ಸಾಕು, ಕೆಲವೇ ನಿಮಿಷಗಳಲ್ಲಿ ನಿಮ್ಮಿಷ್ಟದ ತಂಪು ಪಾನೀಯ ನಿಮ್ಮೆದುರಿಗಿರುತ್ತೆ. ಪುಟಾಣಿ ಮಕ್ಕಳು ಕೂಡ ಐಸ್‍ಕ್ರೀಮ್‍ಗಳ ಸವಿ ಸವಿದು ಖುಷಿಪಡ್ತಾರೆ. ಇಂತಹ ಸವಿ, ಸವಿ, ತಂಪು, ಪಾನೀಯಗಳನ್ನು ಗ್ರಾಹಕರಿಗೆ ಒದಗಿಸ್ತಿರೋ ಆ ಸ್ಥಳವೇ ಬೆಂಗಳೂರಿನ ಜನನಿಬಿಡ ಶಿವಾಜಿನಗರ ಗಲ್ಲಿಯಲ್ಲಿರೋ ಶ್ರೀ ರಾಜ್ ¯ಲಸ್ಸಿ ಬಾರ್.

ಇಷ್ಟೊಂದು ವಿಶೇಷತೆಗಳುಳ್ಳ ಲಸ್ಸಿ ಬಾರ್ ಹುಟ್ಟಿಕೊಂಡಿದ್ದೇ ಒಂದು ಕುತೂಹಲಕಾರಿ ಕಥೆ. ಕೇರಳದಿಂದ ಬೆಂಗಳೂರಿಗೆ ಬದುಕು ಕಟ್ಟಿಕೊಳ್ಳಲು ವಲಸೆ ಬಂದ ಕೆ.ಅಬ್ದುಲ್ ರೆಹಮಾನ್ ಇಲ್ಲಿ ಚಿಕ್ಕದಾಗಿ ಕುಲ್ಫಿ ವ್ಯಾಪಾರ ಆರಂಭಿಸಿದ್ರು. ಆ ದಿನಗಳಲ್ಲಿ ಒಂದು ತಳ್ಳೊ ಗಾಡಿಯನ್ನೂ ಖರೀದಿಸಲು ಆಗದ ಸ್ಥಿತಿಯಲ್ಲಿದ್ದ ರೆಹಮಾನ್ ಕುಲ್ಫಿಗಳನ್ನು ಒಂದು ಬಾಕ್ಸ್​​​ನಲ್ಲಿಟ್ಟು ಮಾರಾಟ ಮಾಡ್ತಿದ್ರು. ಶನಿವಾರ ಮತ್ತು ಭಾನುವಾರ ಅವರು ವಿಧಾನ ಸೌಧದ ಎದುರು ನಿಂತು ಕೇವಲ 25 ಪೈಸೆಗೆ ಕುಲ್ಫಿಗಳನ್ನು ಮಾರುತ್ತಿದ್ದರಂತೆ. ಜೊತೆಗೆ ತಾವು ತಯಾರಿಸಿದ ಕುಲ್ಫಿಗಳನ್ನ ಬನ್ನೇರುಘಟ್ಟ ಉದ್ಯಾನವನಕ್ಕೂ ರೆಹಮಾನ್ ತಳ್ಳೋ ಗಾಡಿಯಲ್ಲಿ ತೆಗೆದುಕೊಂಡು ಹೋಗ್ತಿದ್ರಂತೆ. ಹಾಗೇ ಕುಲ್ಫಿ ವ್ಯಾಪಾರಕ್ಕೆ ಇವ್ರು ಹುಡುಕಿಕೊಂಡ ಇನ್ನೊಂದು ಸ್ಥಳ, ಜ್ಯೋತಿ ನಿವಾಸ ಕಾಲೇಜು. ದಿನ ಕಳೆದಂತೆ ಅಭಿವೃದ್ಧಿಗೊಂಡ ಕುಲ್ಫಿ ವ್ಯಾಪಾರ, ಕೇವಲ ಒಂದು ತಳ್ಳೋ ಗಾಡಿಯಿಂದ ಸುಮಾರು 14 ತಳ್ಳೊ ಗಾಡಿಗಳನ್ನು ಸಂಪಾದಿಸಿಕೊಡ್ತು. ಹೀಗೆ ರೆಹಮಾನ್ ಅವರ ಕುಲ್ಫಿ ವ್ಯಾಪಾರ 1973ರಲ್ಲಿ ಮತ್ತೊಂದು ಪ್ರಮುಖ ಹಂತ ತಲುಪಿತು. ಲ್ಯಾವೆಲ್ಲೆ ರೋಡಿನ ಶ್ರೀರಾಜ್É ಹೋಟೆಲಿನಲ್ಲಿ ಕುಲ್ಫಿಯೊಂದಿಗೆ ಲಸ್ಸಿ ಮಾರಾಟವೂ ಪ್ರಾರಂಭವಾಯ್ತು. ಆಗ ಇವರಿಗೆ ಬರುತ್ತಿದ್ದ ಸಂಬಳ ಕೇವಲ 300 ರೂಪಾಯಿ. ಅಂದಿನಿಂದಲೂ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಾ ಬಂದ ರೆಹಮಾನ್ ಇಂದಿಗೂ ಅದನ್ನ ಉಳಿಸಿಕೊಂಡು ಬಂದಿದ್ದಾರೆ.

image


ಆರಂಭದಲ್ಲಿ ಏಲಕ್ಕಿ ಮತ್ತು ಚಾಕೋಲೇಟ್‍ನಿಂದ ಕುಲ್ಫಿಗಳನ್ನು ತಯಾರಿಸಲಾಗ್ತಿತ್ತು. ಈಗ ಕೇಸರ್ ಬಾದಾಮ್ ಕುಲ್ಫಿ, ಕಾಜೂ ಬಾದಾಮ್, ಮೆವಾ ಮಿಸ್ರಿ, ಮ್ಯಾಂಗ್ಯೋ, ಪಿಸ್ತಾ ಮತ್ತು ಬಹು ವಿಶೇಷವಾದ ಮಟ್ಕಾ ಕುಲ್ಫಿ ಸೇರಿದಂತೆ ವೆರೈಟಿಗಳ ಸಂಖ್ಯೆ 25ಕ್ಕೆ ಏರಿದೆ. ಕುಲ್ಫಿಗಳನ್ನು ಸೌದೆ ಉರಿಯಲ್ಲಿ ತಯಾರಿಸಲಾಗುತ್ತೆ. ಇದೇ ಇವರು ತಯಾರಿಸುವ ಕುಲ್ಫಿಗಳ ವಿಶೇಷತೆ. ಇದಕ್ಕಾಗಿ ತಮಿಳುನಾಡಿನಿಂದ ಹಾಲನ್ನು ತರಿಸಲಾಗುತ್ತೆ. ಮೊದಲು ಚಿಕ್ಕದಾಗಿ ಪ್ರಾರಂಭವಾದ ಕುಲ್ಫಿ ವ್ಯಾಪಾರ ಕಾಮರಾಜ್ ರೋಡ್, ಮಲ್ಲೇಶ್ವರಂ, ಆರ್ ಟಿ.ನಗರ ಸೇರಿದಂತೆ ಇದೀಗ 9 ಶಾಖೆಗಳ ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ. ಶಾಂತಿ ನಗರದಲ್ಲಿ ಶ್ರೀರಾಜ್ ಲಸ್ಸೀ ಬಾರ್‍ನ ಕುಲ್ಫಿ ತಯಾರಿಕಾ ಘಟಕವಿದೆ. ಗ್ರಾಹಕರ ಹಿತದೃಷ್ಟಿಯೇ ಇವರ ಪ್ರಮುಖ ಉದ್ದೇಶ. ಇವರ ಲಸ್ಸಿ ಬಾರ್‍ನಲ್ಲಿ ಪ್ರತಿಯೊಂದು ಪಾನೀಯ, ಫಾಲೂಡಾ, ಲಸ್ಸಿ ಹಾಗೂ ಕುಲ್ಫಿಯನ್ನೂ ಗ್ರಾಹಕರ ಬೇಡಿಕೆಗೆ ತಕ್ಕಂತೆ ಸಿದ್ಧಪಡಿಸಿಕೊಡಲಾಗುತ್ತದೆ. ಇದರ ಸವಿ ಸವಿಯೋಕೆ ಗ್ರಾಹಕರು ತಮ್ಮ ಕುಟುಂಬದೊಂದಿಗೆ ಭೇಟಿ ನೀಡ್ತಾರೆ. ಬಹು ವರ್ಷಗಳಿಂದಲೂ ಗ್ರಾಹಕರು ಇಲ್ಲಿನ ಪಾನೀಯಗಳ ಟೇಸ್ಟ್​ಗೆ ಮನ ಸೋತಿದ್ದಾರೆ. ಚಿಕ್ಕ ಮಕ್ಕಳಂತೂ ಮುಗಿಬಿದ್ದು ಫಾಲೂದಾ ಸವಿಯನ್ನು ಚಪ್ಪರಿಸ್ತಾರೆ.

image


ಇಲ್ಲಿನ ಪ್ರತಿಯೊಂದು ಪಾನೀಯವೂ ತುಂಬಾ ರುಚಿಕರವಾಗಿರುತ್ತೆ. ಹಾಗೆ ಇಲ್ಲಿನ ಮಟ್ಕಾ ಕುಲ್ಫಿಗೆ ಸಾಕಷ್ಟು ಬೇಡಿಕೆಯಿದೆ. ಕುಲ್ಫಿಯನ್ನು ತಯಾರಿಸಿ ಮಡಿಕೆಯಲ್ಲಿ ಸಂಗ್ರಹಿಸಿಡ್ತಾರೆ. ಮಡಿಕೆಯಲ್ಲಿ ಇಡೋದ್ರಿಂದ ತಂಪಾಗಿಯೂ ಇರುತ್ತೆ ಹಾಗೇ ಆರೋಗ್ಯಕ್ಕೂ ಉತ್ತಮ ಅನ್ನೋದು ತಯಾರಕರ ಅಂಬೋಣ. ಇವರು ತಯಾರಿಸೋ ಪಾನೀಯದಲ್ಲಿ ಲಸ್ಸಿಗೆ ಪ್ರಮುಖ ಸ್ಥಾನ. ಈ ಲಸ್ಸಿಯಲ್ಲೂ ಹಲವು ವಿಧಗಳಿವೆ. ಗ್ರೇಪ್ ಲಸ್ಸಿ, ಫ್ರೂಟ್ ಲಸ್ಸಿ, ಡ್ರೈ ಫ್ರೂಟ್, ಸ್ಟ್ರಾಬೆರಿ, ಮ್ಯಾಂಗೋ, ಸ್ವೀಟ್ ಲಸ್ಸಿ ಹೀಗೆ ಹೇಳ್ತಾ ಹೋದ್ರೆ ಇವುಗಳ ಪಟ್ಟಿ ಬೆಳೀತಾನೆ ಹೋಗುತ್ತೆ. ಇಲ್ಲಿ ಒಂದು ವಿಶೇಷ ಚಾಕೋಲೇಟ್ ಕೂಡ ಸಿಗುತ್ತೆ. ಆದ್ರೆ ಇದು ಚಾಕೋಲೇಟ್ ಮಾತ್ರ ಅಲ್ಲ, ಐಸ್‍ಕ್ರೀಮ್ ಕೂಡ ಇದ್ರಲ್ಲಿದೆ. ಬಿಸಿ ಬಿಸಿಯಾಗಿರೋ ಹಾಟ್ ಚಾಕೋಲೇಟ್ ಐಸ್‍ಕ್ರೀಮ್ ಇಲ್ಲಿ, ಬಿಸಿ ಬಿಸಿಯಾಗೇ ಸೇಲ್ ಆಗುತ್ತೆ. ರಾಜ್ ಲಸ್ಸಿ ಬಾರ್‍ನಲ್ಲಿ ಪ್ರತಿಯೊಂದೂ ಪಾನೀಯಕ್ಕೂ ಡ್ರೈ ಫ್ರೂಟ್‍ಗಳಿಂದ ಮಾಡಿದ ಒಂದೊಂದು ವಿಶೇಷ ಅಲಂಕಾರವಿರುತ್ತೆ. ಇದ್ರಿಂದ ಇವುಗಳ ಅಂದ ಇನ್ನೂ ಹೆಚ್ಚಾಗುತ್ತೆ. ಡ್ರೈ ಫ್ರೂಟ್ಸ್ ಹಾಕಿದ ಮೇಲೆ ಕೇಳ್ಬೇಕೆ, ಅದರ ರುಚಿ ಕೂಡಾ ಹೆಚ್ಚಾಗುತ್ತೆ.

ಏಕ್ ಬಾರ್ ಖಾವೋ, ಬಾರ್ ಬಾರ್ ಬುಲಾವೋ.. ಇದು ಶ್ರೀರಾಜ್ ಲಸ್ಸಿ ಬಾರ್ ಸ್ಲೋಗನ್.. ಇಲ್ಲಿನ ಲಸ್ಸಿ, ಕುಲ್ಫಿ ಹಾಗೂ ತಂಪು ಪಾನೀಯಗಳ ಸವಿ ಸವಿದ್ರೆ ಖಂಡಿತವಾಗ್ಲೂ ನೀವು ಕೂಡ ಪುನಃ ,ಪುನಃ ಇಲ್ಲಿಗೆ ಬಂದೇ ಬರ್ತೀರಾ. ಶ್ರೀ ರಾಜ್ ಲಸ್ಸಿ ಬಾರ್‍ನ ಇನ್ನೊಂದು ವಿಶೇಷತೆ ಫಾಲೂಡಾ. ಇದ್ರಲ್ಲಿ ನಿಮಗೆ ಐಸ್‍ಕ್ರೀಮ್, ಡ್ರೈ ಫ್ರೂಟ್ಸ್, ಹಣ್ಣುಗಳ ಸವಿಯನ್ನೂ ಇದೊಂದೆ ಫಾಲೂಡಾದಲ್ಲಿ ಸವಿಯಬಹುದು. ರೋಜ್ ಫಾಲೂಡಾ, ಬಾದಾಮ್, ಮತ್ತು ಹಣ್ಣುಗಳಿಂದಲೇ ಕೂಡಿದ ಫ್ರೂಟ್ಸ್ ಫಾಲೂಡಾಗಳಿಗೆ ಬಹು ಬೇಡಿಕೆ ಕೂಡಾ ಇದೆ. ಬೆಳಿಗ್ಗೆ 11 ರಿಂದ ಮಧ್ಯರಾತ್ರಿ 12.30ರವರೆಗೂ ಗ್ರಾಹಕರಿಗೆ ಪಾನೀಯಗಳ ರುಚಿಯನ್ನು ಇದು ಸರ್ವ್ ಮಾಡುತ್ತದೆ. ಬೇಸಿಗೆ ಸಮಯದಲ್ಲಿ ತಂಪೆರೆಯುವ ಈ ಪಾನೀಯಗಳಿಗೆ ಭಾರೀ ಬೇಡಿಕೆ ಇದೆ. ಗ್ರಾಹಕರನ್ನು ಮತ್ತಷ್ಟು ಸಂತೋಷ ಪಡಿಸೋಕೆ ಮುಂದಿನ ದಿನಗಳಲ್ಲಿ ಹೊಸ ಹೊಸ ಪಾನೀಯಗಳನ್ನು ಸೇರಿಸುವ ಐಡಿಯಾ ಇವರದ್ದು.

image


ಶ್ರೀರಾಜ್ ಲಸ್ಸಿ ಬಾರ್ ದಶಕಗಳ ಕಾಲದಿಂದಲೂ ಗುಣಮಟ್ಟದ, ರುಚಿ ರುಚಿಯಾದ, ತಂಪಾದ ಪಾನೀಯಗಳನ್ನು ಗ್ರಾಹಕರಿಗೆ ನೀಡುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹಾಗೆ ಮುಂದಿನ ದಿನಗಳಲ್ಲಿ ಹೈದರಾಬಾದ್ ಮತ್ತು ಕರಾವಳಿ ತೀರ ಮಂಗಳೂರಿಗೂ ಲಸ್ಸಿ ಬಾರ್ ವಿಸ್ತರಿಸೋ ಯೋಜನೆ ಹೊಂದಿದ್ದಾರೆ. ಒಟ್ಟಿನಲ್ಲಿ ಶ್ರೀರಾಜ್ ಲಸ್ಸಿ ಬಾರ್ ತಂಪು ಪಾನೀಯ, ಐಸ್‍ಕ್ರೀಮ್​​​ಗಳನ್ನು ಪೂರೈಸ್ತಾ ದಿನಕಳೆದಂತೆ ಗ್ರಾಹಕರಿಗೆ ಹತ್ತಿರವಾಗುತ್ತಿದೆ. ಈ ಮೂಲಕ ವಿದೇಶಿ ಪಾನೀಯ ಕಂಪೆನಿಗಳ ನಡುವೆ ಅತಿ ವಿಭಿನ್ನವಾಗಿ ನಿಲ್ಲುತ್ತೆ ಶ್ರೀ ರಾಜ್ ಲಸ್ಸಿ ಬಾರ್.