ಬದುಕು ಕಟ್ಟಿಕೊಟ್ಟ `ವಿನ್ಯಾಸ'..ದಿಯಾ ಶರ್ಮಾ `ದಿ ಡಿಸೈನರ್'..!

ಟೀಮ್​ ವೈ.ಎಸ್​​.

0

ಶಿಕ್ಷಣದ ಅಂದ್ರೆ ಸಾಕು.. ಈಗ ಇರೋದು ಎರಡೇ ಕಲ್ಪನೆ. ಒಂದೋ ಡಾಕ್ಟರ್, ಇಲ್ಲಾ ಎಂಜಿನಿಯರ್. ಅದನ್ನು ಬಿಟ್ಟರೆ ಕಾಮರ್ಸ್ ಓದ್ತಾರೆ. ಇವನ್ನು ಬಿಟ್ಟು ಬೇರೆ ಬೇರೆ ಕ್ಷೇತ್ರಗಳತ್ತ ಮುಖಮಾಡುವವರು ಅಪರೂಪ. ಅದರಲ್ಲೂ ಕೈಗಾರಿಕಾ ವಿನ್ಯಾಸ ಅನ್ನೋ ಪರಿಕಲ್ಪನೆ ಬಹುತೇಕ ಜನರಿಗೆ ಗೊತ್ತೇ ಇಲ್ಲ. ಇಂತಹ ಅಪರೂಪದ ವಿಭಾಗದಲ್ಲೂ ಸಾಧನೆ ಮಾಡುತ್ತಿದ್ದಾರೆ ದಿಯಾ ಶರ್ಮಾ. ಡಿಸೈನ್ ಮೂಲಕವೇ ಸಮಸ್ಯೆಗಳನ್ನು ಬಗೆಹರಿಸಬಹುದು ಅನ್ನೋದು ದಿಯಾ ಶರ್ಮಾ ಅವರ ಆತ್ಮವಿಶ್ವಾಸದ ನುಡಿ. ಈ ಕ್ಷೇತ್ರಕ್ಕೆ ದಿಯಾ ಎಂಟ್ರಿಯಾಗಿದ್ದೇ ಒಂದು ರೋಚಕ ಕಹಾನಿ. ಸದ್ಯ ಸ್ಯಾನ್‍ಫ್ರಾನ್ಸಿಸ್ಕೋ ಮೂಲದ ಸಿಂಡಿಯೋ ಎನ್ನುವ ಕಂಪನಿಯಲ್ಲಿ ದಿಯಾ ಕೆಲಸ ನಿರ್ವಹಿಸುತ್ತಿದ್ದಾರೆ.

ದೊಡ್ಡ ಕಸಸು ಕಂಡಿದ್ದ ದಿಯಾ:

ಸಿಂಡಿಯೋ ಒಂದು ಅಡಮಾನ (mortgage) ಇಂಡಸ್ಟ್ರಿ. ಈ ಪರಿಕಲ್ಪನೆಯನ್ನು ಆಧುನಿಕ ಜಗತ್ತಿಗೆ ವಿಭಿನ್ನವಾಗಿ ಪರಿಚಯಿಸುವುದರ ಜೊತೆಗೆ ಅಡಮಾನ ಪ್ರಕ್ರಿಯೆಯನ್ನು, ಸುಲಭ, ಸರಳ ಮತ್ತು ವೈಯಕ್ತೀಕರಿಸಲು ಸ್ಯಾನ್‍ಫ್ರಾನ್ಸಿಸ್ಕೋದ ಸಿಂಡಿಯೋ ಶ್ರಮಿಸುತ್ತಿದೆ. ಅಡಮಾನ ಸಲಹೆಗಾರರು ಮತ್ತು ಗ್ರಾಹಕರಿಗಾಗಿ ದಿಯಾ ಶರ್ಮಾ ಡಿಜಿಟಲ್ ಉಪಕರಣಗಳು ಮತ್ತು ಉತ್ಪನ್ನಗಳನ್ನು ತಯಾರಿಸುತ್ತಾರೆ. ಅವರ ಇಡೀ ಕುಟುಂಬದಲ್ಲಿ ದಿಯಾ ಶರ್ಮಾ ಒಬ್ಬರೇ ಕೈಗಾರಿಕಾ ವಿನ್ಯಾಸಗಾರ್ತಿ. ಬಾಲ್ಯದಿಂದ್ಲೇ ಹೊಸದೇನನ್ನಾದರೂ ಬಾಡಬೇಕೆಂಬ ಹಂಬಲ ದಿಯಾ ಅವರಿಗಿತ್ತು. ದೆಹಲಿ ಮೂಲದ ಈ ಡ್ರೀಮ್ ಗರ್ಲ್ 2009ರಲ್ಲಿ ಬೆಂಗಳೂರಿನ ಶಾಸ್ತ್ರಿ ಸ್ಕೂಲ್ ಆಫ್ ಆರ್ಟ್ ಡಿಸೈನ್ & ಟೆಕ್ನಾಲಜಿ ಕಾಲೇಜು ಸೇರಿಕೊಂಡರು. ದಿಯಾ ರೋಡ್ ಐಲ್ಯಾಂಡ್ ಸ್ಕೂಲ್ ಆಫ್ ಡಿಸೈನ್‍ನಲ್ಲಿ ಓದಬೇಕೆಂಬ ಕನಸು ಕಾಣುತ್ತಿದ್ದರು. ಬೇಸಿಗೆ ರಜೆಯಲ್ಲಿ ಮನೆಯಲ್ಲಿ ಕೂರದೇ ಪ್ರಾಜೆಕ್ಟ್​​​ನಲ್ಲಿ ಬ್ಯುಸಿಯಾಗಿರುತ್ತಿದ್ದ ದಿಯಾ ಶರ್ಮಾ ಅವರ ಕನಸು 2011ರಲ್ಲಿ ನನಸಾಗಿತ್ತು. ದಿಯಾ ವಿಶ್ವದ ಬೆಸ್ಟ್ ಡಿಸೈನ್ ಸ್ಕೂಲ್ ಆರ್‍ಐಎಸ್‍ಡಿಯಲ್ಲಿ ಪ್ರವೇಶ ಪಡೆದರು.

ಹೊಸ ಜಗತ್ತಿಗೇ ಕಾಲಿಟ್ಟಿದ್ದ ದಿಯಾ ಅವರಿಗೆ ಸಾಲು ಸಾಲು ಸವಾಲುಗಳು ಎದುರಾದವು. ವಿಶ್ವದ ಮೂಲೆ ಮೂಲೆಯನ್ನು ಸುತ್ತಿ ಬಂದ ದಿಯಾ ಅದ್ಯಾವುದಕ್ಕೂ ಜಗ್ಗಲಿಲ್ಲ, ಬಗ್ಗಲಿಲ್ಲ. ಕಷ್ಟದ ದಿನಗಳನ್ನೂ ಒಂಟಿಯಾಗಿ ಎದುರಿಸುವುದನ್ನು ಕಲಿತರು. ಪ್ರತಿದಿನ ಕಲಿಯಬೇಕು, ಪ್ರತಿದಿನ ಬೆಳೆಯಬೇಕು ಅನ್ನೋದು ದಿಯಾ ಶರ್ಮಾ ಅವರ ಪಾಲಿಸಿ. ಬೇರೆ ಬೇರೆ ದೇಶಗಳಿಗೆ ಹೋದಾಗಲೆಲ್ಲ ಅಲ್ಲಿನ ಆಹಾರ ವ್ಯವಸ್ಥೆ ಹಾಗೂ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುತ್ತಿತ್ತು. ಅದೆಷ್ಟೋ ಬಾರಿ ದಿಯಾ ಅವರಿಗೆ ಅನಾರೋಗ್ಯ ಕಾಡಿದ್ದೂ ಇದೆ. ಹುಷಾರು ತಪ್ಪಿದಾಗಲೆಲ್ಲ ಅವರಿಗೆ ಅವರೇ ಡಾಕ್ಟರ್. ಖುದ್ದು ಔಷಧ ತೆಗೆದುಕೊಳ್ಳುತ್ತಿದ್ದ ದಿಯಾ, ಹೊಸ ಬೆಳಗಿನ ನಿರೀಕ್ಷೆಯಲ್ಲಿರುತ್ತಿದ್ದರು. ತಮಗೆ ತಾವೇ ಉತ್ಸಾಹ ತುಂಬಿಕೊಳ್ಳುತ್ತಿದ್ದರು.

ದಿಯಾ ಅವರ ವೃತ್ತಿ ಜೀವನ ಆರಂಭವಾಗಿದ್ದು ಸಿಂಡಿಯೋ ಅಡಮಾನ ಇಂಡಸ್ಟ್ರಿಯಲ್ಲಿ. 6 ತಿಂಗಳು ಕಷ್ಟಪಟ್ಟು ಅಡಮಾನ ಇಂಡಸ್ಟ್ರಿಯ ಇಂಚಿಂಚನ್ನೂ ಅರ್ಥಮಾಡಿಕೊಂಡ ದಿಯಾಗೆ, ಈಗ ಆ ಕೆಲಸ ಎಂದರೆ ಪಂಚಪ್ರಾಣ. ಗ್ರಾಹಕರಿಗೆ ಇಷ್ಟವಾಗುವಂತಹ ಉಪಕರಣ ತಯಾರಿಸುವುದರಲ್ಲಿ ದಿಯಾ ಶರ್ಮಾಗೆ ಅವರೇ ಸಾಟಿ. ಮೆಡಿಕಲ್ ಓದಿದರೆ ಡಾಕ್ಟರ್ ಆಗಬಹುದು. ಆದರೆ ಇಂಡಸ್ಟ್ರಿಯಲ್ ಡಿಸೈನಿಂಗ್ ಕಲಿತರೆ ವೈದ್ಯಕೀಯ ಉಪಕರಣಗಳನ್ನು ನೀವೇ ಮಾಡಬಹುದು. ಪ್ರತಿನಿತ್ಯ ಹೊಸದನ್ನು ಕಲಿಯುತ್ತ ಹೊಸದನ್ನೇನಾದರೂ ಮಾಡಬಹುದು ಅನ್ನೋದು ದಿಶಾ ಶರ್ಮಾ ಅವರ ಸಲಹೆ.

ಯಶಸ್ಸಿನ ರಹಸ್ಯ:

ವೃತ್ತಿಯ ಹುಡುಕಾಟದಲ್ಲಿರುವ ಯುವತಿಯರಿಗೆ ದಿಯಾ ಶರ್ಮಾ ಮಾದರಿ. ಯಾಕಂದ್ರೆ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೆ ಜೀವನದಲ್ಲಿ ಹೇಗೆ ಮುಂದೆ ಬರಬಹುದು ಅನ್ನೋದಕ್ಕೆ ದಿಯಾ ಸ್ಪಷ್ಟ ಉದಾಹರಣೆ. ಇಲ್ಲಿರುವ ಅವಕಾಶಗಳು ಹೇಗೆ ಸಹಾಯಕಾರಿ ಅನ್ನೋದನ್ನು ದಿಯಾ ನಿರೂಪಿಸಿದ್ದಾರೆ. ಜೀವನದಲ್ಲಿ ನಾವು ಹೇಗಿರಬೇಕು ಅನ್ನೋದನ್ನೂ ಕೆಲಸದಿಂದಲೇ ಕಲಿಯಬಹುದು. ವಿನ್ಯಾಸದಿಂದ ಹಿಡಿದು ಪ್ರತಿಯೊಂದನ್ನೂ ಮಾಡುವ ಅವಕಾಶ ಇಲ್ಲಿದೆ. ನೀವೇ ಉತ್ಪನ್ನಗಳ ತಯಾರಕರಾಗಿರುವುದರಿಂದ ಸ್ವಂತ ಉದ್ಯಮವನ್ನು ಆರಂಭಿಸಲು ವಿಪುಲ ಅವಕಾಶಗಳಿರುತ್ತವೆ. ಅದಕ್ಕೆ ಬೇಕಾದ ಅನುಭವವೂ ಇರುತ್ತದೆ. ಹಾಗಾಗಿ ಶ್ರೀಘ್ರದಲ್ಲೇ ಉದ್ಯಮಿಯಾಗುವ ಆಸೆಯನ್ನೂ ದಿಯಾ ಶರ್ಮಾ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿರುವ ಕ್ಷೇತ್ರಗಳನ್ನು ಬಿಟ್ಟು ವಿರಳಾತಿವಿರಳವಾಗಿರೋದನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಯಶಸ್ವಿಯಾಗುವುದು ಹೇಗೆ ಎಂಬುದನ್ನು ದಿಯಾ ವಿವರಿಸುತ್ತಾರೆ. ಯುವತಿಯರಿಗೆ ಹೊಸದೇನನ್ನಾದರೂ ಸಾಧಿಸಲು ಪ್ರೋತ್ಸಾಹಿಸುತ್ತಿದ್ದಾರೆ. ಈ ಆಧುನಿಕ ಜಗತ್ತಿನಲ್ಲಿ ಒಂಟಿಯಾಗಿಯೇ ಸವಾಲುಗಳನ್ನು ಮೆಟ್ಟಿ ನಿಂತು ಸಾಧನೆಯ ಹೊಸ್ತಿಲಲ್ಲಿರುವ ದಿಯಾ ಶರ್ಮಾ, ಇನ್ನಷ್ಟು ಹೆಸರು ಗಳಿಸಲಿ ಅನ್ನೋದೇ ಎಲ್ಲರ ಹಾರೈಕೆ.

Related Stories