ದೊನ್ನೆ ಬಿರಿಯಾನಿಯ ಟೇಸ್ಟ್​ ಮಾಡಿಲ್ಲವೇ..? ಇಲ್ಲೊಂದು ಬಾರಿ ವಿಸಿಟ್​ ಕೊಡಿ..!

ಉಷಾ ಹರೀಶ್

ದೊನ್ನೆ ಬಿರಿಯಾನಿಯ ಟೇಸ್ಟ್​ ಮಾಡಿಲ್ಲವೇ..? ಇಲ್ಲೊಂದು ಬಾರಿ ವಿಸಿಟ್​ ಕೊಡಿ..!

Sunday December 06, 2015,

2 min Read

ಬಾಡಿ ಬಿಲ್ಡ್ ಮಾಡಿಕೊಂಡು ಸ್ವಚ್ಚಂದವಾಗಿ ಓಡಾಡಿಕೊಂಡಿದ್ದ ಯುವಕನೊಬ್ಬ ತನ್ನ ತಂದೆಯ ಹೊಟೇಲ್​ನ್ನು ತನ್ನ ಸುಪರ್ಧಿಗೆ ತೆಗೆದುಕೊಂಡು ಅದನ್ನು ಸಿಲಿಕಾನ್ ಸಿಟಿ ಬೆಂಗಳೂರಿನ ಉತ್ತಮ ಬಿರಿಯಾನಿ ಹೊಟೇಲ್ ಆಗಿಸಿದ್ದಾರೆ. ಹೌದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರುಚಿಯಾದ ಶುಚಿಯಾದ ಒಳ್ಳೆ ಯ ಬಿರಿಯಾನಿ ಬೇಕು ಎಂದರೆ ಮೊದಲಿಗೆ ನೆನಪಾಗೋದೇ ದೊಡ್ಡ ದೊಡ್ಡ ಹೆಸರು ಕಟ್ಟಿಕೊಂಡಿರುವ, ಸ್ಟಾರ್​​​ಪಟ್ಟವನ್ನು ಹೊಂದಿರುವ ಹೊಟೇಲ್​​ಗಳು. ಆದರೆ ತ್ಯಾಗರಾಜನಗರದ ಬನಶಂಕರಿ ದೊನ್ನೆ ಬಿರಿಯಾನಿ ಹೊಟೇಲ್​​​ಗೆ ಬಂದರೆ ಕಡಿಮೆ ಹಣದಲ್ಲಿ ರುಚಿಯಾದ ಶುಚಿಯಾದ ಬಿರಿಯಾನಿ ಸಿಗುತ್ತದೆ.

image


ಹೌದು, ಸುಮಾರು 15 ವರ್ಷಗಳ ಹಿಂದೆ ಮಾಯಣ್ಣ ಎಂಬುವವರಿಂದ ಈ ಹೊಟೇಲ್ ಪ್ರಾರಂಭವಾಯಿತು. ತಂದೆ ಹೊಟೇಲ್ನಲ್ಲಿದ್ದರೆ ಮಗ ಜಿಮ್ನಲ್ಲಿ ಬಾಡಿ ಬಿಲ್ಡ್ ಮಾಡುತ್ತಿದ್ದರು. ನಾನ್ಯಾಕೆ ಹೊಟೇಲ್ ಬಿಸ್ನೆಸ್ ಮುಂದುವೆರೆಸಬಾರದು ಎಂದು ಹೊಟೇಲ್ಗೆ ಬಂದ ಪ್ರಸಾದ್ ತಂದೆಯೊಂದಿಗೆ ಸೇರಿಕೊಂಡರು. ಅದಾಗಲೇ ತನ್ನ ವಿಶಿಷ್ಟವಾದ ರುಚಿಯಿಂದ ಬೆಂಗಳೂರಿಗರನ್ನು ಸೆಳೆದಿದ್ದ ಈ ಹೊಟೇಲ್ ಪ್ರಸಾದ್ ಬಂದಮೇಲೆ ಇನ್ನು ಹೆಚ್ಚಿನ ಖ್ಯಾತಿ ಪಡೆಯಿತು. ಇದರ ರುಚಿ ಹೇಗಿದೆಯಂದರೆ ಒಂದು ಬಾರಿ ಬಂದವರು ತಮ್ಮ ಸ್ನೇಹಿತರಿಗೆ ಬಂಧುಗಳಿಗೆ ಈ ಹೊಟೇಲ್ ಬಗ್ಗೆ ಇಲ್ಲಿನ ವಿಶಿಷ್ಟ ದೊನ್ನೆ ಬಿರಿಯಾನಿ ಬಗ್ಗೆ ತಿಳಿಸಿ ಇದನ್ನು ಫೇಮಸ್ ಮಾಡಿದ್ದಾರೆ.

ಇದುವರೆಗೂ ಯಾವುದೇ ರೀತಿಯ ಪ್ರಚಾರವನ್ನು ಈ ಪ್ರಸಾದ್ ಆಗಲಿ ಮಾಯಣ್ಣನವರಾಗಲಿ ಮಾಡಿಲ್ಲ. ಬದಲಿಗೆ ಬರೀ ಬಾಯಿಂದ ಬಾಯಿಗೆ ವಿಷಯ ಹರಡಿ ದಿನೇ ದಿನೇ ಗ್ರಾಹಕರು ಹೆಚ್ಚಾಗಿದ್ದಾರೆ. ಇಲ್ಲಿ ಕುಳಿತು ತಿನ್ನುವವರಿಗಿಂತಲೂ ಪಾರ್ಸಲ್ ತೆಗೆದುಕೊಂಡು ಹೋಗುವವರೇ ಹೆಚ್ಚು. ಪ್ರತಿ ದಿನ ಏನಿಲ್ಲವೆಂದರೂ 200 ರಿಂದ 300 ಬಿರಿಯಾನಿ ಪಾರ್ಸಲ್ ಹೋಗುತ್ತದೆ. ಕೆಲ ಬಾರಿ ಹಿಂದಿನ ದಿನವೇ ಪಾರ್ಸಲ್ ಆರ್ಡರ್​​​​ ಕೊಡುತ್ತಾರೆ ಎನ್ನುತ್ತಾರೆ ಮಾಲೀಕ ಪ್ರಸಾದ್. ಕೆಲ ಬಾರಿ ಪಾರ್ಸಲ್ ಕಟ್ಟಲಾಗದೇ ಕ್ಯಾನ್ಸಲ್ ಕೂಡಾ ಮಾಡಿದ ಸಂದರ್ಭಗಳು ಉಂಟು.

image


ನಾನು ತ್ಯಾಗರಾಜನಗರದ ಕಡೆ ಯಾವುದಾದರೂ ಕೆಲಸಕ್ಕೆಂದು ಬಂದರೆ ಬನಶಂಕರಿ ಹೊಟೇಲ್​​ಗೆ ಬಂದು ದೊನ್ನೆ ಬಿರಿಯಾನಿ ತಿನ್ನದೇ ಹೋಗುವುದಿಲ್ಲ. ನಾನು ನನ್ನ ಸಾಕಷ್ಟು ಸ್ನೇಹಿತರಿಗೂ ಇಲ್ಲಿನ ದೊನ್ನೆ ಬಿರಿಯಾನಿ ಬಗ್ಗೆ ಹೇಳಿದ್ದೇನೆ. ಇಲ್ಲಿನ ಟೇಸ್ಟ್ ಬೇರೆಲ್ಲೂ ಸಿಗುವುದಿಲ್ಲ.

-ಚೇತನ್, ಶ್ರೀನಗರ, ಗ್ರಾಹಕ

ಜನರ ಪ್ರೀತಿ ಮತ್ತು ಬಾಯಿಂದ ಬಾಯಿಯ ಪ್ರಚಾರವೇ ನಮಗೆ ಇವತ್ತಿನವರೆಗೂ ಅನ್ನ ನೀಡುತ್ತದೆ ಎಂದು ಜನರಿಗೆ ಕೃತಜ್ಞತೆ ವ್ಯಕ್ತಪಡಿಸುತ್ತಾರೆ ಪ್ರಸಾದ್. ಬಹಳಷ್ಟು ಮಂದಿ ಸಿನಿಮಾ ನಟರೂ, ಸಿರಿಯಲ್ ನಟರು ಈ ಬಿರಿಯಾನಿಗಾಗಿ ಪ್ರತೀ ವಾರ ಬರುತ್ತಾರೆ. ಇನ್ನು ಇಲ್ಲಿ ಬಿರಿಯಾನಿ ಜತೆಗೆ ಕಿಮಾ, ಚಿಕನ್ ಫ್ರೈ, ಮಟನ್​ ಪ್ರೈ ಕೂಡಾ ಸಿಗುತ್ತದೆ. ಆದರೆ ಬಿರಿಯಾನಿ ಮತ್ತು ಖುಷ್ಕಾನೇ ಫೇಮಸ್. ಪ್ರತಿ ದಿನ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಿರಂತರವಾಗಿ ದೊನ್ನೆ ಬಿರಿಯಾನಿ ವ್ಯಾಪಾರ ಆಗುತ್ತಲೇ ಇರುತ್ತದೆ. ಹೊಟೇಲ್ ಕಟ್ಟಡ ತುಂಬ ಚಿಕ್ಕದಾಗಿರುವುದರಿಂದ ಜನ ಜಾತ್ರೆಯೇ ಇಲ್ಲಿ ನೆರೆಯುತ್ತದೆ.

ಸಾಮಾನ್ಯವಾಗಿ ಮಾಂಸಾಹಾರಿ ಹೋಟೆಲ್​​​ಗಳಲ್ಲಿ ಬಿರಿಯಾನಿ ಎಂದರೆ 150 ರೂ. ಗಿಂತ ಹೆಚ್ಚಿರುತ್ತದೆ. ರುಚಿ ಕೂಡಾ ಅಷ್ಟಕಷ್ಟೇ. ಆದರೆ ಬನಶಂಕರಿ ದೊನ್ನೆ ಬಿರಿಯಾನಿ ಹೊಟೇಲ್​​ನಲ್ಲಿ ಸಾಕಷ್ಟು ಕಡಿಮೆ ಹಣಕ್ಕೆ ಸೂಪರ್ ಟೇಸ್ಟ್ ಇರುತ್ತದೆ. ನಾನಂತು ತಿಂಗಳಿಗೊಂದು ಬಾರಿ ಮನೆ ಮಂದಿಗೆಲ್ಲಾ ಪಾರ್ಸಲ್ ತೆಗೆದುಕೊಂಡು ಹೋಗುತ್ತೇನೆ. ನನ್ನ ಮಗಳಿಗಂತೂ ಇಲ್ಲಿನ ಬಿರಿಯಾನಿ ತುಂಬಾ ಇಷ್ಟ.

-ಲೋಹಿತ್ ಕಾಸರ್, ವಿಜಯನಗರ

ಬೆಲೆ ಕಡಿಮೆ, ರುಚಿ ಹೆಚ್ಚು

ಬಿರಿಯಾನಿ ಎಂದರೆ ಸಾಮಾನ್ಯವಾಗಿ 120 ರಿಂದ 150 ರೂ. ಆದರ ಇಲ್ಲಿ ಚಿಕನ್ ಬಿರಿಯಾನಿ ಕೇವಲ 90 ರೂ. ಮಟನ್ ಬಿರಿಯಾನಿ 140 ರೂ.. ಅಷ್ಟೇ ಅಲ್ಲದೇ ಬರೀ ಬಿರಿಯಾನಿ ರೈಸ್ ಅನ್ನು ಕೂಡಾ ಕೊಡುತ್ತಾರೆ. ಅದು ಕೇವಲ 45 ರೂ.ಗಳು. ಈ ಬನಶಂಕರಿ ದೊನ್ನೆ ಬಿರಿಯಾನಿ ಘಮ ಹತ್ತಿರ ಹತ್ತಿರ ಕನಕಪುರದವರೆಗೂ ಹಬ್ಬಿದೆ ಎಂದರೆ ನಂಬಲೇಬೇಕು. ಇಲ್ಲಿನ ಬಿರಿಯಾನಿಗಾಗಿ ರಾಜಾಜಿ ನಗರ, ರಾಜರಾಜೇಶ್ವರಿ ನಗರ ಹೀಗೆ ಹಲವು ಏರಿಯಾಗಳ ಗ್ರಾಹಕರು ಇಲ್ಲಿಗೆ ಆಗಾಗ ಕಾಯಂ ಆಗಿ ಬರುತ್ತಾರೆ.ಕೆ ಆರ್ ರಸ್ತೆಯ ಸುತ್ತಮತ್ತ ಈ ಬಿರಿಯಾನಿಯನ್ನು ಮೆಲ್ಲದವರೇ ಇಲ್ಲ. ಇಷ್ಟೇಲ್ಲಾ ವಿಶೇಷತೆಗಳು ಸಾಕಷ್ಟು ಗ್ರಾಹಕರನ್ನು ಸೆಳೆದಿರುವ ಈ ಹೊಟೇಲ್​​ನಲ್ಲಿ ಕಾರ್ಮಿಕ ವರ್ಗದವರಿಂದ ಹಿಡಿದು ಐಟಿ ಬಿಟಿ ವರ್ಗದವರು ದೊಡ್ಡ ದೊಡ್ಡ ಶ್ರೀಮಂತರು ಬಂದು ದೊನ್ನೆ ಬಿರಿಯಾನಿ ಮೆಲ್ಲುತ್ತಾರೆ. ಮುಂದಿನ ದಿನಗಳಲ್ಲಿ ಹೊಟೇಲ್​​ನ್ನು ದೊಡ್ಡದಾಗಿ ವಿಸ್ತರಿಸಿ ಅಭಿವೃದ್ಧಿಪಡಿಸುವ ಆಲೋಚನೆ ಪ್ರಸಾದ್ ಅವರಿಗಿದೆ.