ಛಾವಣಿ ಮೇಲೆ ಹಾರಿತು ಹತ್ತಿ ತುಣುಕು

ಟೀಮ್​ ವೈ.ಎಸ್​​.

0

ನಮ್ಮ ಮನೆ ತುಂಬಾ ಚಿಕ್ಕದಾಗಿತ್ತು.. ಅದರಲ್ಲಿ ವಾಸಿಸುವರ ಸಂಖ್ಯೆ ಮಾತ್ರ ಜಾಸ್ತಿ. ಎಲ್ಲರ ಕೈ ಕಾಲುಗಳ ಮೇಲೆ ಗಾಯದ ಕಲೆ ಮಾಮೂಲಿ. ಮುರಿದ ಖುರ್ಚಿ, ಬೀರುಗಳು ತಾಗಿ ಹೀಗಾಗುತ್ತೆ. ಅಮ್ಮ ಮನೆಯಲ್ಲಿ ಸಾಕಷ್ಟು ಡಬ್ಬಿಗಳನ್ನು ಸಂಗ್ರಹಿಸಿಟ್ಟಿದ್ದರು. ನನಗೆ ನೆನಪಿದೆ ಒಮ್ಮೆ ಅಪ್ಪ ಊಟಕ್ಕೆ ಕುಳಿತಾಗ ಅವರ ಮೇಲೆ ಹಿಟ್ಟಿನ ಡಬ್ಬದ ಮುಚ್ಚಳ ಬಿದ್ದಿತ್ತು. ಅವರ ಕಾಲಿನಿಂದ ರಕ್ತ ಬಂತು.

ಮನೆಯಲ್ಲಿ ಅಮ್ಮ ಕ್ಯಾನುಗಳನ್ನ ಒಂದರ ಮೇಲೆ ಒಂದರಂತೆ ಇಟ್ಟಿದ್ದರು. ಕಡಿಮೆ ಜಾಗದಲ್ಲಿ ಜಾಸ್ತಿ ಕ್ಯಾನ್ ಜೋಡಿಸಿಟ್ಟಿದ್ದರು. ಗೃಹ ಬಳಕೆ ವಸ್ತುಗಳು ಸುಲಭವಾಗಿ ಸಿಗುವುದಿಲ್ಲ ಎಂಬುದು ಅವರು ನಂಬಿಕೆಯಾಗಿತ್ತು.

ಕೆಲವೊಮ್ಮೆ ಅರಿಶಿಣದ ಡಬ್ಬ ತೆಗೆಯಲು ಹೋದ ತಾಯಿ, ಮೆಣಸಿನ ಡಬ್ಬವನ್ನು ಕೆಳಗೆ ಬೀಳಿಸ್ತಾ ಇದ್ದರು. ಮನೆಯಲ್ಲ ಮೆಣಸಿನ ಪುಡಿಯಿಂದ ತುಂಬಿ ಹೋಗ್ತಾ ಇತ್ತು. ಇದನ್ನು ನೋಡಿ ಅಪ್ಪ ಬಡಬಡಾಯಿಸ್ತಾ ಇದ್ದರು. ಅವರನ್ನು ನಿಧಾನವಾಗಿ ನೋಡ್ತಿದ್ದರು ಅಮ್ಮ. ಅವರಿಬ್ಬರನ್ನು ನೋಡಿ ನಾವು ನಗ್ತಾ ಇದ್ದವಿ. ನಮ್ಮನ್ನು ನೋಡಿ ಅವರು ನಿಧಾನವಾಗಿ ನಗಲು ಶುರುಮಾಡ್ತಾ ಇದ್ದರು. ಅವರನ್ನು ನೋಡಿ ನಾವು ಜೋರಾಗಿ ನಗ್ತಾ ಇದ್ದವಿ. ನಮ್ಮನ್ನು ನೋಡಿ ಅವರು. ಹೀಗೆ ಮನೆಯೆಲ್ಲ ನಗುವಿನಿಂದ ತುಂಬಿ ಹೋಗ್ತಾ ಇತ್ತು. ನಗುವಿನಲ್ಲಿ ನಮ್ಮ ದುಃಖಗಳೆಲ್ಲ ಹಾರಿ ಹೋಗ್ತಾ ಇದ್ದವು. ಆಗ ಹತ್ತಿ ತುಂಡುಗಳು ಹಾರಿದ ಅನುಭವವಾಗ್ತಾ ಇತ್ತು. ನಮ್ಮ ಮನೆಯ ಛಾವಣಿ ಹಾಗೂ ಗೋಡೆಗಳ ಮೇಲೆ ಹತ್ತಿಯ ತುಂಡುಗಳಿವೆಯೆಂದು ನಾನು ಭಾವಿಸುತ್ತಿದ್ದೆ. ದೀಪಾವಳಿ, ದಸರಾದಲ್ಲಿ ಮನೆಯನ್ನು ಕ್ಲೀನ್ ಮಾಡ್ತಾ ಇದ್ದರು. ಆದ್ರೆ ಆ ವೇಳೆ ಹತ್ತಿ ತುಂಡುಗಳು ಮಾತ್ರ ಕಾಣ್ತಾ ಇರಲಿಲ್ಲ.

ರಾತ್ರಿ ವೇಳೆ ಅಪ್ಪ-ಅಮ್ಮ ಗೊಣಗಾಡುವುದು ಕೇಳಿಸ್ತಾ ಇತ್ತು. ಅವರಿಗೆ ನಮ್ಮ ಬಟ್ಟೆ-ಪುಸ್ತಕದ ಬಗ್ಗೆ ಚಿಂತೆಯಾಗ್ತಾ ಇತ್ತು. ಅಜ್ಜಿಯ ರೋಗ ಹಾಗೂ ಚಿಕ್ಕಪ್ಪಂದಿರ ಗಲಾಟೆ ಬಗ್ಗೆ ಮಾತನಾಡ್ತಾ ಇದ್ದರು. ಅವರು ಗೋಡೆಗೂ ಕೇಳಿಸದಷ್ಟು ಚಿಕ್ಕದಾಗಿ ಮಾತನಾಡಿಕೊಳ್ತಾ ಇದ್ದರು. ಅವರ ಈ ಮಾತುಗಳು ನನಗೆ ಪ್ರಾರ್ಥನೆಯಂತೆ ಕೇಳಿಸ್ತಾ ಇತ್ತು.

ನಮಗೆ ಚಿತ್ರಹಿಂಸೆ ನೀಡುವ ಸಮಯ ಅಂದ್ರೆ ಮಳೆಗಾಲ. ಮಳೆ ಬಂದರೆ ಮನೆಯೆಲ್ಲ ಹೊಳೆಯಾಗ್ತಾ ಇತ್ತು. ಟಪಕ್ ಟಪಕ್ ಅಂತಾ ಬೀಳುವ ನೀರಿನ ಹನಿ ಮನೆಯನ್ನು ಒದ್ದೆ ಮಾಡಿಬಿಡುತ್ತಿದ್ದವು. ಹನಿ ಹನಿ ಬೀಳುವ ನೀರಿನಿಂದ ಮನೆಯನ್ನು ರಕ್ಷಿಸಲು ಅಮ್ಮ ಸೋರುತ್ತಿರುವ ಜಾಗದಲ್ಲಿ ಬಕೆಟ್, ಗ್ಲಾಸ್, ಪಾತ್ರೆಗಳನ್ನು ಇಡ್ತಾ ಇದ್ದರು. ಮನೆಯಲ್ಲಿ ಸಾಕಷ್ಟು ಪಾತ್ರೆಗಳು ಇರ್ತಾ ಇರಲಿಲ್ಲ. ಒಮ್ಮೆ ನಾನು ಉಪ್ಪಿನ ಬಾಕ್ಸನ್ನು ಖಾಲಿ ಮಾಡಿ ಅದನ್ನು ಛಾವಣಿ ಕೆಳಗೆ ಇಟ್ಟಿದ್ದೆ. ಮಳೆ ಜಾಸ್ತಿಯಾದಂತೆ ಅಪ್ಪ-ಅಮ್ಮ ಮುಂದಿನ ಬಾರಿ ಛಾವಣಿ ಬದಲಾಯಿಸಬೇಕೆಂದು ಮಾತನಾಡಿಕೊಳ್ಳುತ್ತಿದ್ದರು. ಸೋರುತ್ತಿರುವ ಮನೆ ಒಂದು ಕಡೆ, ಅಪ್ಪ,ಅಮ್ಮನ ನೋವು ಇನ್ನೊಂದು ಕಡೆ. ಈ ನಡುವೆ ಬೀಳ್ತಾ ಇರುವ ಗೋಡೆಯ ಚೂರಿನ ಶಬ್ಧ ನಮಗೆ ಕೇಳ್ತಾ ಇತ್ತು.

ಬೆಳಗಾಗ್ತಾ ಇದ್ದಂತೆ ಅಪ್ಪ-ಅಮ್ಮನ ದುಃಖ ಜಾಸ್ತಿಯಾಗುತ್ತಿತ್ತು. ಮುರಿದ ಗೋಡೆಗೆ ಪ್ಯಾಚ್ ವರ್ಕ್ ಕಾರ್ಯ ಶುರು. ಇತ್ತು. ಸಗಣಿ, ಮಣ್ಣಿನಿಂದ ಅಮ್ಮ ತೂತನ್ನು ತುಂಬ್ತಾ ಇದ್ದರು. ಮನೆಯ ಅಲ್ಲಲ್ಲಿ ಇದರ ಕುರುಹುಗಳಿದ್ದವು. ಮಳೆ ಜಾಸ್ತಿ ಬಂದಾಗ ಗೋಡೆಗಳು ಒದ್ದೆಯಾಗ್ತಾ ಇದ್ದವು. ಅದರ ಬಳಿ ಇಟ್ಟ ನಮ್ಮ ಪುಸ್ತಕ ಒದ್ದೆಯಾಗ್ತಿದ್ದವು. ಬಟ್ಟೆ ಒದ್ದೆಯಾಗ್ತಾ ಇತ್ತು. ಹಾಸಿಗೆ ಒದ್ದೆಯಾಗ್ತಾ ಇತ್ತು. ಮನೆಯಲ್ಲ ನೀರಿನಿಂದ ತುಂಬಿ ಹೋಗ್ತಾ ಇತ್ತು. ಇದನ್ನು ನೋಡಲು ದೀಪ ಹಚ್ಚಲು ಬಂದ್ರೆ ಯಾರದ್ದೂ ಕೈ ಇನ್ನೊಬ್ಬರ ಮುಖಕ್ಕೆ, ಇನ್ನೊಬ್ಬರ ತಲೆ ಮತ್ತೊಬ್ಬರ ಕೈಗೆ ತಾಗ್ತಾ ಇತ್ತು. ರಾತ್ರಿ ಆದ ಈ ಘಟನೆಯನ್ನು ನೆನೆದು ಬೆಳಿಗ್ಗೆ ನಾವು ನಗ್ತಾ ಇದ್ದವಿ. ಹತ್ತಿಯ ತುಂಡೊಂದು ಹಾರಿ ಹೋದ ಅನುಭವವಾಗ್ತಾ ಇತ್ತು. ಕೆಲವೊಮ್ಮೆ ನನಗೆ ಅಪ್ಪ –ಅಮ್ಮ ನಗ್ತಿಲ್ಲ ಅಳ್ತಿದ್ದಾರೆ ಅನ್ನಿಸುತ್ತಿತ್ತು.

ಚಳಿಗಾಲ ಬಂದ್ರೆ ಖುಷಿ. ಚಳಿಗಾಲದಲ್ಲಿ ಸಹೋದರ-ಸಹೋದರಿಯರ ಮಧ್ಯೆ ನಾನು ಮಲಗ್ತಾ ಇದ್ದೆ. ಶೀತದಿಂದ ರಕ್ಷಿಸಿಕೊಳ್ಳಲು ಎಲ್ಲರೂ ಗಾದಿ ಬಳಸ್ತಾ ಇದ್ವಿ. ಇದ್ದಿದ್ದು ಒಂದೇ ಚಿಕ್ಕ ಗಾದಿ. ಆ ಕಡೆ,ಈ ಕಡೆ ಹೊರಳಾಡಿದಾಗ ಗಾದಿ ಒಬ್ಬರಿಗೆ ಸಿಗ್ತಾ ಇತ್ತು. ಇನ್ನೊಬ್ಬರಿಗೆ ಸಿಗ್ತಾ ಇರಲಿಲ್ಲ. ಆದ್ರೆ ಮಧ್ಯ ಮಲಗಿದವ ಸುಖವಾಗಿ ನಿದ್ರಿಸಬಹುದಿತ್ತು.

ನನಗೆ ಕಸನು ಬೀಳ್ತಾ ಇರಲಿಲ್ಲ. ಅದೊಂದು ದಿನ ಕನಸು ಬಿತ್ತು. ಹಿಮಾಲಯದಲ್ಲಿ ನನ್ನ ತಂದೆ ನಡೆದುಕೊಂದು ಬರ್ತಾ ಇದ್ದರು. ಅವರ ದೇಹ ಹತ್ತಿಯಿಂದ ಮುಚ್ಚಲ್ಪಟ್ಟಿತ್ತು. ನಮ್ಮ ಮನೆಯ ನೋವನ್ನು ದೂರ ಮಾಡಿ ಅಪ್ಪ-ಅಮ್ಮನ ಮುಖದಲ್ಲಿ ನಗು ಮೂಡಿದಾಗ ಕಾಣುವ ಅದೇ ಹತ್ತಿ ತುಂಡುಗಳು ಅಪ್ಪನ ಮೈಮೇಲಿದ್ದವು. ಮೊದಲು ನನಗೆ ಅದು ಅಪ್ಪ ಎಂದು ತಿಳಿಯಲಿಲ್ಲ. ಅವರ ಕಣ್ಣುಗಳನ್ನು ನೋಡಿ ನಾನು ಗುರುತು ಹಿಡಿದೆ. ಅವರು ಮುಂದೆ ಹೋಗ್ತಾನೇ ಇದ್ದರು. ಅವರಿಗೆ ಕೊನೆ ತಲುಪಬೇಕಿತ್ತು.ಅಲ್ಲೊಂದು ಸುಂದರವಾದ ಮರವಿತ್ತು. ಅದರಲ್ಲಿ ಸೇಬು ಹಣ್ಣುಗಳಿದ್ದವು. ನಮ್ಮ ಮನೆಗಾಗಿ, ನಮಗಾಗಿ ತಂದೆ ಅದನ್ನು ಕಿತ್ತು ತರಬೇಕಿತ್ತು, ಅವರು ಎಷ್ಟೇ ಪ್ರಯತ್ನ ಮಾಡಿದರೂ ಗುರಿ ಮುಟ್ಟಲು ಆಗ್ತಾ ಇರಲಿಲ್ಲ. ಇದ್ದಕ್ಕಿದ್ದಂತೆ ಹತ್ತಿಯೆಲ್ಲ ಮಾಯವಾಯ್ತು. ಹಿಮ ಕರಗಿ ತಂದೆ ಅದರೊಳಗೆ ಸಿಲುಕಿಕೊಂಡ್ರು. ಮೊದಲು ಕಾಲು ನಂತರ ಕುತ್ತಿಗೆಯವರೆಗೆ ಹಿಮ ಅವರನ್ನು ಆವರಿಸ್ತು. ಅವರ ಕಣ್ಣಿನಲ್ಲಿದ್ದ ಹೊಳಪು ಮಾಯವಾಯ್ತು. ನಂತರ ನಾನು ಚಲಿಸುತ್ತಿದ್ದ ಹಾಗೂ ಕಂಪಿಸುತ್ತಿದ್ದ ಅವರ ಕೈಗಳನ್ನು ನೋಡಿದೆ.

ಆತಂಕದಲ್ಲಿದ್ದ ನನಗೆ ತಕ್ಷಣ ಎಚ್ಚರವಾಯ್ತು. ಬೆಳಿಗ್ಗೆ ಈ ಬಗ್ಗೆ ಮನೆಯವರಿಗೆ ಹೇಳಿದೆ. ನನ್ನ ಕನಸು ಕೇಳಿ ಸಹೋದರ-ಸಹೋದರಿಯರು ನಗ್ತಾ ಇದ್ದರು. ನಮ್ಮ ನಗು ನೋಡಿ ಅಪ್ಪ-ಅಮ್ಮ ನಗ್ತಾ ಇದ್ದರು. ಹತ್ತಿಯ ತುಣುಕುಗಳು ಹಾರ್ತಾ ಇರೋದನ್ನು ನಾನು ನೋಡಿದೆ. ಅದು ನಗುತ್ತಿರುವ ನಮ್ಮನ್ನು ನೋಡ್ತು. ಗೋಡೆ, ಛಾವಣಿಯಲ್ಲಿ ಅಡಗಿದ್ದ ಹತ್ತಿಯ ತುಣುಕುಗಳೂ ನನಗೆ ಕಂಡವು. ರಾಶಿ, ರಾಶಿ, ಹೇಳಲಾರದಷ್ಟು ಹತ್ತಿ ತುಂಡುಗಳು ಹಾರುವುದನ್ನು ನಾನು ನೋಡಿದೆ.

ಅದು ಹತ್ತಿ ತುಂಡುಗಳಲ್ಲ, ಬದಲಾಗಿ ನಮ್ಮ ಮನೆಯಿಂದ ಹಾರಿ ಹೋಗ್ತಾ ಇದ್ದ ದುಃಖ ಎಂಬುದು ಬುದ್ದಿ ಬೆಳೆದಂತೆ ನನಗೆ ಗೊತ್ತಾಯ್ತು.

ಲೇಖಕರು : ರವೀಂದ್ರ ವ್ಯಾಸ್

ಅನುವಾದಕರು: ರೂಪಾ ಹೆಗಡೆ