ಕಂಪ್ಯೂಟರಿನ ಒಂದು ಬಟನ್ ಒತ್ತಿ... ಚೆನ್ನೈನಲ್ಲಿ ಬಾಡಿಗೆಗೆ ಕಟ್ಟಡ ಕ್ಷಣಾರ್ಧದಲ್ಲಿ ಪಡೆಯಿರಿ..!

ಟೀಮ್​​ ವೈ.ಎಸ್​​.ಕನ್ನಡ

0

ಭಾರತದಲ್ಲಿ ಅತ್ಯಂತ ವೇಗದಲ್ಲಿ ಬೆಳೆಯುವ ಕ್ಷೇತ್ರದಲ್ಲಿ ರಿಯಲ್ ಎಸ್ಟೇಟ್ ಒಂದಾಗಿದೆ. ಕೃಷಿ ಬಳಿಕ ಅತ್ಯಧಿಕ ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಉದ್ಯೋಗಾವಕಾಶ ಒದಗಿಸುತ್ತಿದೆ. ಈ ಕ್ಷೇತ್ರ ಮುಂದೆ ಉಜ್ವಲ ಭವಿಷ್ಯದ ಮುನ್ಸೂಚನೆ ಕೂಡ ನೀಡಿದೆ. 2021ರ ಹೊತ್ತಿಗೆ ಭಾರತದ ರಿಯಲ್ ಎಸ್ಟೇಟ್ ವ್ಯವಹಾರ 1.2ಶತಕೋಟಿ ಅಂದರೆ ಟ್ರಿಲಿಯನ್ ಡಾಲರ್ ತಲುಪಲಿದೆ ಎಂದು ಪ್ರಾವಿಡೆನ್ಸಿಯಲ್ ರಿಯಲ್ ಎಸ್ಟೇಟ್ ಅಂದಾಜಿಸಿದೆ. ಮಾರುಕಟ್ಟೆ ಇಷ್ಟು ವಿಶಾಲವಾಗಿ ಬೆಳೆಯುವ ಸಾಧ್ಯತೆಗಳಿದ್ದರೂ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಒಂದು ಸಂಸ್ಥೆ ಅಥವಾ ಪೋರ್ಟಲ್ ಇದುವರೆಗೂ ಅಸ್ತಿತ್ವಕ್ಕೆ ಬಂದಿಲ್ಲ. ವಾಣಿಜ್ಯ ಜಾಗಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಗುರಿಯೊಂದಿಗೆ ಆಫೀಸ್ ಜುವೋ ಜನ್ಮ ತಾಳಿದೆ

ಆಫೀಸ್ ಜುವೋ- office juvo

ಆಫೀಸ್ ಜುವೋ , ಚೆನ್ನೈನಲ್ಲಿ ಜನ್ಮ ತಳೆದಿರುವ ಒಂದು ವಿನೂತನ, ಹೊಸ ಸಂಸ್ಥೆಯಾಗಿದೆ. ಜನಪ್ರಿಯ ಭಾಷೆಯಲ್ಲಿ ಇದನ್ನು ಸ್ಟಾರ್ಟ್ಸ್ ಅಪ್ ಎಂದೇ ಕರೆಯುತ್ತಾರೆ. ವಾಣಿಜ್ಯ ಬಳಕೆಗೆ, ಗೋದಾಮು ಬಳಕೆಗೆ, ಕಚೇರಿ ಬಳಕೆಗೆ ಹೀಗೆ ಎಲ್ಲ ರೀತಿಯ ಬೇಡಿಕೆ ಇರುವ ಸ್ಪೇಸ್ ಅಥವಾ ತಾಣವನ್ನು ಆಫೀಸ್ ಜುವೋ ಪೂರೈಕೆ ಮಾಡುತ್ತದೆ. ತಲೆ ಬಿಸಿಯಿಲ್ಲ. ಕ್ಷಣಾರ್ಧದಲ್ಲಿ ಎಲ್ಲ ಬೇಡಿಕೆ ಈಡೇರಿಸುತ್ತದೆ.

ಆಫೀಸ್ ಜುವೋ - ಐಟಿ ಪರಿಣಿತ ಟಿ. ಶ್ರೀಕಾಂತ ಅವರ ಕನಸಿನ ಕೂಸು. ಸಿಫಿ ಟೆಕ್ನೋಲಜಿಸ್ ನಲ್ಲಿ ವೃತ್ತಿ ಜೀವನ ಆರಂಭಿಸಿದ ಶ್ರೀಕಾಂತ್, ಅನಿರೀಕ್ಷಿತವಾಗಿ ಹೊಸ ಕನಸನ್ನು ಸಾಕಾರಗೊಳಿಸಿದರು. ಬಳಿಕ ಇಂಡಿಯಾ ಪ್ರಾಪರ್ಟಿ ಸಂಸ್ಥೆ ಸೇರಿದ ಅವರು, ತಮ್ಮ ಕನಸನ್ನು ಇನ್ನಷ್ಟು ಗಟ್ಟಿಗೊಳಿಸಿದರು. ಬಳಿಕ ಸುಲೇಖ ಪ್ರಾಪರ್ಟಿಸ್ ಜೊತೆ ಗುರುತಿಸಿಕೊಂಡರು. ಈ ಹೊತ್ತಲ್ಲಿ ಅವರಲ್ಲಿದ್ದ ಹೊಸ ಚಿಂತನೆ ಇನ್ನಷ್ಟು ಗಾಢವಾಯಿತು. ಹೊಸದಾಗಿ ಮಾರ್ಕೆಟಿಂಗ್ ಮಾಡಬೇಕೆಂಬ ಅವರ ಬಯಕೆ ಹೆಮ್ಮರವಾಗಿ ಬೆಳೆಯಿತು. ಇದೇ ಸಂದರ್ಭದಲ್ಲಿ ಅವರ ಜೊತೆ ಕೈ ಜೋಡಿಸಿದವರು ಆದಿತ್ಯ ರಾಘವ್. ವಿದೇಶದಲ್ಲಿ ಕೆಲಸ ನಿರ್ವಹಿಸಿದ್ದ ಆದಿತ್ಯ, ತಮ್ಮ ಕನಸುಗಳನ್ನು ಹಂಚಿಕೊಂಡರು. ಶ್ರೀಕಾಂತ್ ಕನಸಿಗೆ ಹೊಸ ರೂಪ ನೀಡಿದರು. ತಾವೇ ಹೊಸ ಸಂಸ್ಥೆಯೊಂದನ್ನು ಯಾಕೆ ಹುಟ್ಟು ಹಾಕಬಾರದು ಎಂದು ನಿರ್ಧರಿಸಿದರು. ಅದರ ಫಲವಾಗಿ ಹೊರಹೊಮ್ಮಿದೆ www.housejuvo.com. ದಕ್ಷಿಣ ಏಷ್ಯಾದಲ್ಲಿ ಬೆಳವಣಿಗೆ ದಾಖಲಿಸುತ್ತಿರುವ ರಿಯಲ್ ಎಸ್ಟೇಟ್ ಕ್ಷೇತ್ರದ ಸಮಗ್ರ ಮಾಹಿತಿ ಹಾಗೂ ಅದರ ಪ್ರಯೋಜನ ಪಡೆಯಲು ಕಾರ್ಯತಂತ್ರ ಹೆಣೆದರು. ಶ್ರೀಲಂಕಾವನ್ನು ಮೊದಲ ಗುರಿಯಾಗಿ ಆಯ್ಕೆ ಮಾಡಿಕೊಂಡರು. ಇದಲ್ಲದೆ ಬಾಂಗ್ಲಾ ದೇಶದಲ್ಲಿನ ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ಕಣ್ಣು ನೆಟ್ಟರು. ಎಲ್ಲ ರಿಯಲ್ ಎಸ್ಟೇಟ್ ಏಜೆಂಟ್​​ಗಳನ್ನು ಒಂದೇ ಪೋರ್ಟಲ್ ಅಡಿಯಲ್ಲಿ ತಂದರು. ಇದರಿಂದಾಗಿ ಆಸ್ತಿ ಖರೀದಿದಾರರಿಗೆ ಎಲ್ಲ ಮಾಹಿತಿ ಒಂದೆಡೆ ದೊರೆಯುವಂತಾಯಿತು. ಬಳಿಕ ಕಚೇರಿಗಾಗಿ ಜಾಗದ ಹುಡುಕಾಟ ಆರಂಭಿಸಿದಾಗ ಅವರ ಕಣ್ಮುಂದೆ ವಾಸ್ತವ ಚಿತ್ರಣ ಅನಾವರಣಗೊಂಡಿತು. ಯಾವುದು ಕೂಡ ವ್ಯವಸ್ಥಿತವಾಗಿರಲಿಲ್ಲ. ದಲ್ಲಾಳಿಗಳು ಎಲ್ಲವನ್ನು ನಿಯಂತ್ರಿಸುತ್ತಿದ್ದರು. 2015ರಲ್ಲಿ ಕಾಫಿ ಕುಡಿಯುತ್ತಾ ನಡೆದ ಚರ್ಚೆ ಸಂದರ್ಭದಲ್ಲಿ office juvo ಜನ್ಮ ತಳೆಯಿತು.

ಸೂಕ್ತ ಜಾಗ ಪತ್ತೆ ಹಚ್ಚಲು ಎದುರಾಗುವ ಸಮಸ್ಯೆಗಳಿಗೆ ಹಲವು ಕಾರಣಗಳಿವೆ. ಮುಖ್ಯವಾಗಿ ಸೂಕ್ತ ಮಾಹಿತಿ ಇಲ್ಲದಿರುವುದು. ಇದು ನಮ್ಮ ಅನುಭವಕ್ಕೆ ಬಂದು ಎನ್ನುತ್ತಾರೆ ಶ್ರೀಕಾಂತ್. ಈ ಅನುಭವದ ಆಧಾರದಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ಕ್ರಿಯಾಶೀಲ ಯೋಜನೆಯೊಂದನ್ನು ಸಿದ್ಧಪಡಿಸಿದೆವು. ನೇರವಾಗಿ ಕಟ್ಟಡದ ಮಾಲಿಕರೊಂದಿಗೆ ಸಂಪರ್ಕ ಬೆಳೆಸಿದೆವು. ನೇರ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆವು. ಆಫ್ ಲೈನ್, ಆನ್ ಲೈನ್ ಹೀಗೆ ಎಲ್ಲ ವಿಧದ ಮೂಲಕ ಮಾಹಿತಿ ಕಲೆ ಹಾಕಲಾಯಿತು. ಚಿತ್ರಗಳನ್ನು ತೆಗೆದೆವು.ಮೊದಲಿಗೆ ಮಾಲೀಕರ ವಿಶ್ವಾಸ ಗಳಿಸಿದೆವು. ಇದು ಯಶಸ್ಸಿನ ಮೊದಲ ಹೆಜ್ಜೆ ಯಾಯಿತು. ನಾನೇ ಸೈಟ್ ಗಳಿಗೆ ಹೋಗಿ ಅನುಭವ ಪಡೆದುಕೊಂಡೆ ಎಂದು ತಮ್ಮ ಮನದಾಳ ಬಿಟ್ಟಿಟ್ಟರು ಶ್ರೀಕಾಂತ್.

ಹೀಗೆ ಸಂಗ್ರಹಿಸಲಾದ ಎಲ್ಲ ಮಾಹಿತಿಯನ್ನು ಪೋಟೋ ಸಮೇತ OFFICE.JUVO ವೈಬ್ ಸೈಟ್ ನಲ್ಲಿ ದಾಖಲಿಸಿದೆವು. ಯಾವ ರೀತಿಯ ಬೇಡಿಕೆ ಇದೆಯೋ ಅದೇ ರೀತಿ ಮಾಹಿತಿಯನ್ನು ವರ್ಗೀಕರಣ ಮಾಡಲಾಯಿತು. ಗೋದಾಮು ಪ್ರದೇಶ, ವಾಣಿಜ್ಯ ಬಳಕೆ, ಜೊತೆ ಯಾಗಿ ಬಳಕೆ ಹೀಗೆ ವಿವಿಧ ರೀತಿಯಲ್ಲಿ ಇದರ ವರ್ಗೀಕರಣ ಕೆಲಸ ನಡೆಸಲಾಯಿತು. ಮುಖ್ಯವಾಗಿ ಕಾಪೋರೇಟ್ ಸಂಸ್ಥೆ ನಮ್ಮ ಬಳಕೆದಾರರಾದರೂ ಕೂಡ ಸಣ್ಣ ಮತ್ತು ಮಧ್ಯಮ ಬಳಕೆದಾರರು ನಮ್ಮ ಸಂಸ್ಥೆಯ ಕೈ ಹಿಡಿದರು. ಅವರ ಅಗತ್ಯಗಳನ್ನು ಪೂರೈಸಲು ಆದ್ಯತೆ ನೀಡಲಾಯಿತು. 3 ಮಿಲಿಯನ್ ಚದರಡಿ ಪ್ರದೇಶ ನಮ್ಮ ಸಂಸ್ಥೆಯ ಬಳಕೆ ವ್ಯಾಪ್ತಿಗೆ ಬಂದವು ಎನ್ನುತ್ತಾರೆ ಶ್ರೀಕಾಂತ್. ಇದುವರೆಗೆ 20 ವ್ಯವಹಾರಗಳನ್ನು ಸಮರ್ಥವಾಗಿ ನಿಭಾಯಿಸಲಾಗಿದ್ದು, ದಿನದಿಂದ ದಿನಕ್ಕೆ ಜನಪ್ರಿಯತೆ ಹೆಚ್ಚಾಗುತ್ತಿದೆ. ಸಂಸ್ಥೆ 10 ಸಿಬ್ಬಂದಿಯನ್ನು ಕೂಡ ಹೊಂದಿದೆ.

ಆರಂಭದಲ್ಲಿ ಗ್ರಾಹಕರು ಯಾವುದೇ ಶುಲ್ಕ ನೀಡುತ್ತಿರಲಿಲ್ಲ. ಆದರೆ ಇದೀಗ ಬದಲಾಗಿದ್ದಾರೆ. ತಮ್ಮ ಅಗತ್ಯಗಳಿಗೆ ತಕ್ಕಂತೆ ಮಾಹಿತಿ ಲಭಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಕೂಡ ಸಂತೋಷರಾಗಿದ್ದಾರೆ. ಸೇವೆಗೆ ತಕ್ಕಂತೆ ಪ್ರತಿಫಲ ಕೂಡ ನೀಡುತ್ತಿದ್ದಾರೆ.ಬಳಕೆದಾರರ ಬೇಡಿಕೆಯನ್ನು ಗಮನಿಸಲಾಗುತ್ತದೆ. ಅವರ ನೀರಿಕ್ಷೆಗಳ ಪಟ್ಟಿ ಮಾಡಲಾಗುತ್ತದೆ. ಬಳಿಕ ಅವರ ಬೇಡಿಕೆಗೆ ಸ್ಪಂದಿಸಿ ಸೇವೆ ನೀಡಲಾಗುತ್ತದೆ ಎನ್ನುತ್ತಾರೆ ಶ್ರೀಕಾಂತ್.

ಒಂದಕ್ಕಿಂತ ಹೆಚ್ಚು ಕಟ್ಟಡಗಳಿದ್ದರೆ ಅದಕ್ಕೆ ಸೂಕ್ತ ಗ್ರಾಹಕರನ್ನು ಹುಡುಕಿಕೊಡುವಲ್ಲಿಯೂ office.juvo ನೆರವಾಗುತ್ತದೆ. ಈ ಸೇವೆಗಾಗಿ 15 ದಿನಗಳ ಬಾಡಿಗೆಯನ್ನು ಬ್ರೋಕರೇಜ್ ಫೀಸ್ ಎಂದು ವಸೂಲಿ ಮಾಡಲಾಗುತ್ತದೆ. ಬಳಕೆದಾರರಿಗೆ ಪರಿಪೂರ್ಣ ಮಾಹಿತಿ ಒಂದೇ ಫೋರ್ಟಲ್ ನಲ್ಲಿ ದೊರೆಯುತ್ತಿರುವುದರಿಂದ ಅವರು ಬಹಳ ಸಂತುಷ್ಟರಾಗಿದ್ದಾರೆ. ಸಂಸ್ಥೆ ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆಗಳನ್ನು ಹಮ್ಮಿಕೊಂಡಿದೆ. ಎಲ್ಲ ರಿಯಲ್ ಎಸ್ಟೇಟ್ ವ್ಯವಹಾರದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ನಿಟ್ಟಿನತ್ತ ಹೆಜ್ಜೆ ಇಟ್ಟಿದೆ.

Related Stories