ಉದ್ಯೋಗಿ ತಾಯಂದಿರಿಗೆ ವರದಾನ-`ಹ್ಯಾಪಿ ಮೈಂಡ್ಸ್ ಇಂಟರ್‍ನ್ಯಾಶನಲ್' ಡೇ ಕೇರ್ ಸೆಂಟರ್

ಟೀಮ್​​ ವೈ.ಎಸ್​​.

ಉದ್ಯೋಗಿ ತಾಯಂದಿರಿಗೆ ವರದಾನ-`ಹ್ಯಾಪಿ ಮೈಂಡ್ಸ್ ಇಂಟರ್‍ನ್ಯಾಶನಲ್' ಡೇ ಕೇರ್ ಸೆಂಟರ್

Monday November 09, 2015,

2 min Read

`ಹ್ಯಾಪಿ ಮೈಂಡ್ಸ್ ಇಂಟರ್‍ನ್ಯಾಶನಲ್' ಸೋನಿಯಾ ಚುಘ್ ಅವರ ಕನಸಿನ ಕೂಸು. `ಹ್ಯಾಪಿ ಮೈಂಡ್ಸ್ ಇಂಟರ್‍ನ್ಯಾಶನಲ್' ಮೂಲಕ 70 ಕ್ಕೂ ಹೆಚ್ಚು ಮಹಿಳೆಯರು ತಮ್ಮ ವೃತ್ತಿ ಜೀವನವನ್ನು ಯಶಸ್ವಿಯಾಗಿ ಮುಂದುವರಿಸ್ತಿದ್ದಾರೆ. ಮುಂಬೈನ `ಹ್ಯಾಪಿ ಮೈಂಡ್ಸ್ ಇಂಟರ್‍ನ್ಯಾಶನಲ್' ಡೇ ಕೇರ್ ಕೇಂದ್ರದಲ್ಲಿ ಅವರ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ಧಾರಿಯನ್ನು ಸೋನಿಯಾ ಚುಘ್ ಹೊರದೇ ಇದ್ದಿದ್ರೆ ಇವರ್ಯಾರೂ ತಮ್ಮ ವೃತ್ತಿಯನ್ನು ಇಷ್ಟು ಸುಲಭವಾಗಿ ಮುಂದುವರಿಸಲು ಸಾಧ್ಯವಾಗ್ತಿರ್ಲಿಲ್ಲ. ಡೇ ಕೇರ್‍ನಲ್ಲಿ ಮಕ್ಕಳನ್ನು ಬಿಡ್ತಾ ಇರೋ ಮಹಿಳೆಯರಿಂದ ಸಿಗುವ ಪ್ರತಿಕ್ರಿಯೆ ಕೂಡ ಅತ್ಯಮೂಲ್ಯ ಎನ್ನುತ್ತಾರೆ ಸೋನಿಯಾ. ತಾವೊಬ್ಬ ಶಿಕ್ಷಕಿಯಾಗಬೇಕಿತ್ತು ಎನ್ನುವ ಸೋನಿಯಾ, ಪೋಷಕರ ಜೊತೆಗೆ ಬೆರೆಯುವುದು ಕೂಡ ನಿರಂತರ ಕಲಿಕೆ ಎಂಬ ಅಭಿಪ್ರಾಯ ಹೊಂದಿದ್ದಾರೆ.

2011ರಲ್ಲಿ ಸೋನಿಯಾ, ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ ಆಗಿ `ಜೆಪಿ ಮೊರ್ಗನ್' ಕಂಪನಿ ಸೇರಿದ್ರು. 2012ರ ಮಾರ್ಚ್‍ನಲ್ಲಿ ಕೆಲಸಕ್ಕೆ ಗುಡ್ ಬೈ ಹೇಳಿ ಸ್ವಂತ ಉದ್ಯಮ ಆರಂಭಿಸಲು ಯೋಜನೆ ಹಾಕಿಕೊಳ್ತಿದ್ರು. ಇದರ ಫಲವಾಗಿ 2012ರ ಆಗಸ್ಟ್​​ನಲ್ಲಿ `ಹ್ಯಾಪಿ ಮೈಂಡ್ಸ್ ಇಂಟರ್‍ನ್ಯಾಶನಲ್' ಡೇ ಕೇರ್ ಸೆಂಟರ್ ಜನ್ಮ ತಳೆದಿತ್ತು. ಸೋನಿಯಾ ಕಂಪ್ಯೂಟರ್ ಎಕ್ಸ್​​ಪರ್ಟ್ ಸೇರಿದಂತೆ 6 ಸಿಬ್ಬಂದಿಯನ್ನೂ ನೇಮಿಸಿಕೊಂಡಿದ್ದಾರೆ. ಆಗ್ರಾ ಸೋನಿಯಾ ಚುಘ್ ಅವರ ತವರು. ತಂದೆ ಒಬ್ಬ ಮಾಜಿ ಬ್ಯಾಂಕರ್. ಮದುವೆ ಬಳಿಕ ಸ್ವಲ್ಪ ಸಮಯ ಅಮೆರಿಕದಲ್ಲಿ ಕೆಲಸ ಮಾಡಿದ್ದ ಸೋನಿಯಾ ಬಳಿಕ ಭಾರತಕ್ಕೆ ವಾಪಸ್ಸಾದ್ರು. 6 ತಿಂಗಳ ಮಗುವನ್ನಿಟ್ಟುಕೊಂಡು ಕೆಲಸ ಮಾಡೋದು ಕಷ್ಟ ಅಂದ್ಕೊಂಡ ಸೋನಿಯಾ ಪೋಷಕರನ್ನೂ ಮನೆಯಲ್ಲಿರಿಸಿಕೊಂಡಿದ್ರು. ಸುಮಾರು ಒಂದು ವರ್ಷ ಕೆಲಸದಲ್ಲಿ ಬ್ಯುಸಿಯಾಗಿದ್ರೂ ಸೋನಿಯಾಗೆ ಅದು ತೃಪ್ತಿ ತಂದಿರ್ಲಿಲ್ಲ. ಕೊನೆಗೂ ಡೇ ಕೇರ್ ಸೆಂಟರ್ ಒಂದರ ಅಗತ್ಯವಿದೆ ಅನ್ನೋದು ಆಗ ಅವರಿಗೆ ಅರಿವಾಗಿತ್ತು. ಆದ್ರೆ ಅಮೆರಿಕದಂತಲ್ಲ, ಭಾರತದಲ್ಲಿ ಡೇ ಕೇರ್ ಅನ್ನೋದು ಅಸಂಘಟಿತ ವ್ಯವಸ್ಥೆ ಅನ್ನೋದನ್ನು ನೋಡಿ ಸೋನಿಯಾಗೆ ಅಚ್ಚರಿಯಾಗಿತ್ತು.

image


ಬೇರೆ ಬೇರೆ ದೇಶಗಳ ಡೆ ಕೇರ್ ಸೆಂಟರ್‍ಗಳಲ್ಲಿ ಯಾವ ರೀತಿ ವ್ಯವಸ್ಥೆ ಇದೆ? ಅದರಲ್ಲಿ ಯಾವುದನ್ನು ಭಾರತದಲ್ಲಿ ಅಳವಡಿಸಬಹುದು ಎಂಬುದನ್ನೆಲ್ಲ ಸೋನಿಯಾ ತಿಳಿದುಕೊಂಡಿದ್ರು. ಆರು ತಿಂಗಳು ಸತತ ಪರಿಶ್ರಮಪಟ್ಟು ಅವರು `ಹ್ಯಾಪಿ ಮೈಂಡ್ಸ್ ಇಂಟರ್‍ನ್ಯಾಶನಲ್' ವೆಬ್‍ಸೈಟನ್ನು ಲಾಂಚ್ ಮಾಡಿದ್ರು.

ಒಂದು ನಿಲುಗಡೆಯ ಡೇ ಕೇರ್ ಕೇಂದ್ರ...

`ಹ್ಯಾಪಿ ಮೈಂಡ್ಸ್ ಇಂಟರ್‍ನ್ಯಾಶನಲ್' ಮಕ್ಕಳ ಪಾಲಿಗೆ ಶಾಲೆಯಿದ್ದಂತೆ, ಕಾಳಜಿ ವಹಿಸುವ ಒಂದು ನಿಲುಗಡೆಯಿದ್ದಂತೆ. ವರ್ಷದಲ್ಲಿ 14 ದಿನಗಳು ಹಾಗೂ ಭಾನುವಾರಗಳನ್ನು ಹೊರತುಪಡಿಸಿದ್ರೆ ಬೇರೆಲ್ಲಾ ದಿನ ಡೇ ಕೇರ್ ಸೆಂಟರ್ ತೆರೆದಿರುತ್ತೆ. ಇಲ್ಲಿನ ಸಿಬ್ಬಂದಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಹೆಚ್ಚು ಒತ್ತು ನೀಡ್ತಿದ್ದಾರೆ. ಈ ಡೇ ಕೇರ್ ಸೆಂಟರ್‍ನಲ್ಲಿ 3 ವಿಭಾಗಗಳಿವೆ. 4 ತಿಂಗಳಿನಿಂದ 1.5 ವರ್ಷದೊಳಗಿನ ಮಕ್ಕಳಿಗಾಗಿ ಬೇಬಿ ಝೋನ್, 4.5 ವರ್ಷದೊಳಗಿನ ಮಕ್ಕಳಿಗಾಗಿ ಟೊಡ್ಲರ್ ಝೋನ್ ತೆರೆಯಲಾಗಿದೆ. ಶಾಲೆ ಮುಗಿದ ಬಳಿಕ 8 ವರ್ಷದೊಳಗಿನ ಮಕ್ಕಳು ಕೂಡ ಇಲ್ಲಿ ಸಮಯ ಕಳೆಯಬಹುದು. ರಾತ್ರಿ 8.30 ರವರೆಗೂ ಇಲ್ಲಿ ಮಕ್ಕಳನ್ನು ನೋಡಿಕೊಳ್ಳಲಾಗುತ್ತೆ. ಸುಮಾರು 150 ಮಕ್ಕಳು ಡೇ ಕೇರ್ ಸೆಂಟರ್‍ಗೆ ಬರ್ತಾರೆ. ಮಕ್ಕಳ ನಿತ್ಯದ ಕಲಿಕೆಗೆ ಬೇಕಾದ ಎಲ್ಲ ವ್ಯವಸ್ಥೆಯೂ ಡೇ ಕೇರ್ ಸೆಂಟರ್‍ನಲ್ಲಿದೆ. ಮಕ್ಕಳ ಸಾಮಾಜಿಕ ಹಾಗೂ ಭಾವನಾತ್ಮಕ ಬೆಳವಣಿಗೆಗೆ ಸಹಕಾರಿಯಾಗುವಂಥ ಪರಿಸರವನ್ನು `ಹ್ಯಾಪಿ ಮೈಂಡ್ಸ್ ಇಂಟರ್‍ನ್ಯಾಶನಲ್'ನಲ್ಲಿ ನಿರ್ಮಾಣ ಮಾಡಲಾಗಿದೆ.

image


ಮಕ್ಕಳ ಬಗ್ಗೆ ತಾವು ತೆಗೆದುಕೊಳ್ಳುವ ತೀರ್ಮಾನಗಳಿಗೆಲ್ಲ ಸೋನಿಯಾ ಪೋಷಕರ ಸಮ್ಮತಿ ಪಡೆಯುತ್ತಾರೆ. ಆಗಾಗ ಪೋಷಕರೊಂದಿಗೆ ಚರ್ಚೆ ನಡೆಸ್ತಾರೆ. ಸೋನಿಯಾ ಚುಘ್ ಅವರ ಪುತ್ರಿಗೆ ಈಗ ಐದು ವರ್ಷ. ತಮ್ಮ ಮಗಳೇ `ಹ್ಯಾಪಿ ಮೈಂಡ್ಸ್ ಇಂಟರ್‍ನ್ಯಾಶನಲ್' ನ ಮೊದಲ ಸದಸ್ಯೆ ಅಂತಾ ಸೋನಿಯಾ ಹೆಮ್ಮೆಯಿಂದ ಹೇಳಿಕೊಳ್ತಾರೆ. ಪೋಷಕರಿಗೆ ನೆರವಾಗುವ ನಿಟ್ಟಿನಲ್ಲಿ ಡಿಸೆಂಬರ್‍ನಿಂದ ನೈಟ್ ಕೇರ್ ವಿಭಾಗ ಅಂದ್ರೆ ರಾತ್ರಿ ಕೂಡ ಮಕ್ಕಳನ್ನು ನೋಡಿಕೊಳ್ಳುವ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ. ಪೋಷಕರು ಹಾಗೂ ನುರಿತ ತಜ್ಞರ ನೆರವಿನೊಂದಿಗೆ ಮಕ್ಕಳನ್ನು ಸರಿಯಾದ ದಾರಿಯಲ್ಲಿ ಸಾಗುವಂತೆ ಮಾಡುವುದು ಸೋನಿಯಾ ಅವರ ಉದ್ದೇಶ. ಮಕ್ಕಳ ಸಕಾರಾತ್ಮಕ ಬೆಳವಣಿಗೆಗೆ ಬೇಕಾದ ಅಗತ್ಯ ಕ್ರಮಗಳನ್ನೆಲ್ಲ ಅವರು ಕೈಗೊಂಡಿದ್ದಾರೆ. ವೃತ್ತಿ ಮುಂದುವರಿಸುವ ತಾಯಂದಿರಿಗಂತೂ ಈ ಡೇ ಕೇರ್ ಸೆಂಟರ್ ವರದಾನವಾಗಿದೆ. ಕೆಲಸಕ್ಕೆ ಹೋದ್ಮೇಲೆ ತಾಯಂದಿರು ಮಕ್ಕಳ ಬಗ್ಗೆ ಚಿಂತೆ ಮಾಡೋ ಅಗತ್ಯವಿಲ್ಲ. ಊಟ, ಆಟ, ಪಾಠ ಎಲ್ಲವೂ ಇಲ್ಲಿದೆ. `ಹ್ಯಾಪಿ ಮೈಂಡ್ಸ್ ಇಂಟರ್‍ನ್ಯಾಶನಲ್' ಡೇ ಕೇರ್ ಸೆಂಟರ್‍ನಲ್ಲಿ ಮಕ್ಕಳನ್ನು ಬಿಡಿ, ನಿಶ್ಚಿಂತೆಯಿಂದ ಕೆಲಸ ಮಾಡಿ.