ಕಸ ಆಯುವವನ ಪ್ಯಾರಿಸ್ ಪಯಣ- ಕಸದಿಂದ ಕಾಸು, ಈತ ತ್ಯಾಜ್ಯೋದ್ಯಮಿ..!

ವಿಶಾಂತ್​​

0

ಯುವರ್‍ಸ್ಟೋರಿಯಲ್ಲಿ ಉದ್ಯಮಿಗಳು, ಸಾಧಕರು, ಪ್ರಶಸ್ತಿ ವಿಜೇತರು, ಸಮಾಜ ಸೇವಕರು, ಸೇರಿದಂತೆ ಹಲವರ ಕಥೆಗಳನ್ನು ಓದಿದ್ದೀರಿ. ಅವರ ಯಶೋಗಾಥೆಯ ಬಗ್ಗೆ ತಿಳಿದುಕೊಂಡಿದ್ದೀರಿ. ಪ್ರೇರೇಪಣೆ ಪಡೆದುಕೊಂಡಿದ್ದೀರಿ. ಆದ್ರೆ ಇವತ್ತಿನ ಸ್ಟೋರಿಯಲ್ಲಿ ನಮ್ಮ ಕಥಾನಾಯಕ ಒಬ್ಬ ಪೇಪರ್ ಆಯುವವನು ಅರ್ಥಾತ್ ಕಸ ಆಯುವವನು. ಇದನ್ನು ನೋಡಿ ನಿಮಗೆ ಆಶ್ಚರ್ಯ ಅನ್ನಿಸಬಹುದು. ಆದ್ರೂ ಇದು ನಿಜ. ಹಾಗೇ ಓದುತ್ತಾ ಹೋಗಿ, ಅದಕ್ಕೆ ಕಾರಣ ನಿಮಗೇ ಗೊತ್ತಾಗುತ್ತೆ...

ಇವರು ಮನ್ಸೂರ್ ಅಹ್ಮದ್

ಮನ್ಸೂರ್ ಅಹ್ಮದ್. ಬೆಂಗಳೂರಿನ ಜಯನಗರ 168ನೇ ವಾರ್ಡ್‍ನಲ್ಲಿ ಒಣ ತ್ಯಾಜ್ಯ ಸಂಗ್ರಹಣಾ ಘಟಕವನ್ನು ನೋಡಿಕೊಳ್ಳುತ್ತಾರೆ. ಹಾಗಂತ ಬೇರೆಯವರಂತೆ ಮನ್ಸೂರ್ ಮನೆ ಮನೆಗೆ ಹೋಗಿ ಕಸ ತಂದು ವಿಲೇವಾರಿ ಮಾಡೋದಕ್ಕಷ್ಟೇ ಸೀಮಿತವಾಗಲಿಲ್ಲ. ಬದಲಿಗೆ ತನ್ನ ಕೆಲಸವನ್ನು ಗಂಭೀರವಾಗಿ ಪರಿಗಣಿಸಿ ಒಂದು ವ್ಯವಸ್ಥಿತ ಉದ್ಯಮದಂತೆ ನಡೆಸುತ್ತಿದ್ದಾರೆ. ಈ ಮೂಲಕ ಹಲವಾರು ಕಸ ಆಯುವ ಮಂದಿಗೆ ಕೆಲಸ ಕೊಟ್ಟು, ಅವರೂ ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಮಾಡಿದ್ದಾರೆ. ಬೆಂಗಳೂರಿನ ಕಸದ ಸಮಸ್ಯೆಯನ್ನು ಕೇವಲ ಒಬ್ಬ ವ್ಯಕ್ತಿಯಿಂದ ಬಗೆಹರಿಸಲು ಸಾಧ್ಯವಿಲ್ಲ. ಹೀಗಾಗಿಯೇ ಕಸ ಆಯುವ ಒಂದು ಸಮುದಾಯವನ್ನೇ ತನ್ನೊಂದಿಗೆ ಸೇರಿಸಿಕೊಳ್ಳುವ ಮೂಲಕ ವ್ಯವಸ್ಥಿತವಾಗಿ ಕಸದ ಸಮಸ್ಯೆಯನ್ನು ಬಗೆಹರಿಸಬಹುದು ಅನ್ನೋದು ಮನ್ಸೂರ್ ಅಭಿಪ್ರಾಯ.

‘ನನ್ನ ತಂದೆ 30 ವರ್ಷಗಳ ಹಿಂದೆ ಸ್ಕ್ರ್ಯಾಪ್ ಡೀಲರ್ ಕೆಲಸ ಪ್ರಾರಂಭಿಸಿದ್ರು. ಆಗ ಸಂಸ್ಕರಣೆ ಅಂದ್ರೆ ಏನು ಅನ್ನೋದೇ ಗೊತ್ತಿರಲಿಲ್ಲ. ಆದ್ರೂ ಪ್ಲ್ಯಾಸ್ಟಿಕ್, ಕಬ್ಬಿಣ, ಕವರ್, ಪೇಪರ್ ಎಲ್ಲವನ್ನೂ ಸಂಸ್ಕರಣೆ ಮಾಡುತ್ತಿದ್ದರು. ನಾನೂ ನನ್ನ ತಂದೆ ಜೊತೆ ಕೆಲಸ ಮಾಡುತ್ತಿದ್ದೆ. ಪ್ರತಿ ತಿಂಗಳು ಸುಮಾರು 500 ಕೆಜಿಯಷ್ಟು ಕಸವನ್ನು ಸಂಸ್ಕರಿಸಿ ಮಾರಾಟ ಮಾಡುತ್ತಿದ್ದೆವು. ನಾನು ನನ್ನ ತಂದೆಯಿಂದ ಸ್ಫೂರ್ತಿ ಪಡೆದು, ಅವರ ದಾರಿಯಲ್ಲೇ ಮುಂದುವರಿಯುತ್ತಿದ್ದೇನೆ’ ಅಂತಾರೆ ಮನ್ಸೂರ್ ಅಹ್ಮದ್.

ಹಸಿರು ದಳ

ಇದೇ ಸಂದರ್ಭದಲ್ಲಿ ಮನ್ಸೂರ್ ಅಹ್ಮದ್‍ಗೆ, ಕಸ ಆಯುವವರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಹಸಿರು ದಳ ಎಂಬ ಸ್ವಯಂ ಸೇವಾ ಸಂಸ್ಥೆಯ ಸದಸ್ಯರ ಪರಿಚಯವಾಯ್ತು. ಅವರು ಮನ್ಸೂರ್‍ಗೆ ಪ್ರಾರಂಭದಲ್ಲಿ ಆರ್ಥಿಕ ಸಹಾಯ ಮಾಡುವ ಮೂಲಕ ಬೆಂಬಲಕ್ಕೆ ನಿಂತರು. ಈ ಮೂಲಕ ಮನ್ಸೂರ್ ಹಂತ ಹಂತವಾಗಿ ಕಸ ಆಯುವುದನ್ನೇ ವ್ಯವಸ್ಥಿತವಾಗಿ ಮಾಡತೊಡಗಿದರು. ಇವತ್ತು ಮನ್ಸೂರ್ ಬಳಿ ಜಯನಗರ ಒಣ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ 10 ಜನ ಕೆಲಸ ಮಾಡುತ್ತಿದ್ದಾರೆ. ಈಗ ಪ್ರತಿ ತಿಂಗಳು ಅವರ ತಂಡ 10ರಿಂದ 12 ಟನ್‍ನಷ್ಟು ಕಸ ಸಂಸ್ಕರಿಸುತ್ತೆ. ತ್ಯಾಜ್ಯ ಪುನರ್‍ಬಳಕೆಗೆ ಹೋಗುವ ಮುನ್ನ ಪ್ಲ್ಯಾಸ್ಟಿಕ್, ಪೇಪರ್, ಕವರ್, ಗಾಜು, ಬಟ್ಟೆ, ಕಬ್ಬಿಣ ಸೇರಿದಂತೆ ಸುಮಾರು 72 ಬೇರೆ ಬೇರೆ ವಿಭಾಗದಲ್ಲಿ ಕಸವನ್ನು ವಿಂಗಡಿಸಲಾಗುತ್ತಿದೆ.

ಕ್ಲೀನ್ ಸಿಟಿ ರೀಸೈಕ್ಲರ್ಸ್ ಅಸೋಸಿಯೇಷನ್

ಇಷ್ಟು ಮಾತ್ರವಲ್ಲ ಮನ್ಸೂರ್ ಕ್ಲೀನ್ ಸಿಟಿ ರೀ-ಸೈಕ್ಲರ್ಸ್ ಅಸೋಸಿಯೇಷನ್‍ ಅನ್ನೂ ಹುಟ್ಟುಹಾಕಿದ್ದಾರೆ. ಈ ಮೂಲಕ ಕೆಲ ಎಮ್‍ಬಿಎ ಪದವೀಧರರ ಸಹಾಯದೊಂದಿಗೆ ತಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ‘ಕಸ ಆಯೋದು ಅಂದ್ರೆ ಕೀಳು ಕೆಲಸವಲ್ಲ. ಹಸಿರು ದಳಕ್ಕೆ ಧನ್ಯವಾದ ಹೇಳಲೇಬೇಕು. ಈಗ ಜನರೂ ನನ್ನ ಕೆಲಸವನ್ನು ಕೀಳಾಗಿ ನೋಡೋದಿಲ್ಲ, ಬದಲಾಗಿ ಗೌರವದಿಂದ ಕಾಣ್ತಾರೆ. ಈಗ ಕಸ ಆಯುವವರಿಗೆ ಗುರುತಿನ ಚೀಟಿಗಳನ್ನು ನೀಡಲಾಗಿದೆ. ಯೂನಿಫಾರ್ಮ್‍ಅನ್ನೂ ಕೊಡಲಾಗುತ್ತಿದೆ. ಇದನ್ನೆಲ್ಲಾ ನೋಡಿದ್ರೆ ನಾವೂ ಯಾವುದೋ ಒಂದೊಳ್ಳೆ ಕಾರ್ಯದಲ್ಲಿ ತೊಡಗಿದ್ದೇವೆ ಅನ್ನೋ ಭಾವನೆ ಮೂಡಿಸುತ್ತೆ’ ಅಂತ ಸಂತಸದ ನಗೆ ಬೀರ್ತಾರೆ ಮನ್ಸೂರ್.

ಒಣ ಹಾಗೂ ಹಸಿ ಕಸವನ್ನು ಮೂಲದಲ್ಲಿಯೇ ವಿಂಗಡಿಸಬೇಕು. ಇಲ್ಲದಿದ್ದಲ್ಲಿ ಸಂಸ್ಕರಣಾ ಘಟಕಕ್ಕೆ ತಂದರೂ ಉಪಯೋಗವಿಲ್ಲ. ಪ್ರಾರಂಭದಲ್ಲಿ ಜನ ಕಸವನ್ನು ವಿಂಗಡಣೆ ಮಾಡುತ್ತಿರಲಿಲ್ಲ. ಹೀಗಾಗಿ ಪೌರ ಕಾರ್ಮಿಕರು ಇವರ ಸಂಸ್ಕರಣಾ ಘಟಕಕ್ಕೆ ಕಸ ತಂದು ಹಾಕಿದಾಗ ದುರ್ನಾತದಿಂದಾಗಿ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದವು. ಹೀಗಾಗಿಯೇ ವಿಂಗಡಣೆಯಾಗದ ಕಸವನ್ನು ಪಡೆಯದೇ ಜನರಲ್ಲಿ ಅರಿವು ಮೂಡಿಸಲಾಯ್ತು. ಈಗ ಜಯನಗರದ ಶೇಕಡಾ 75ರಷ್ಟು ಮಂದಿ ಒಣ ಮತ್ತು ಹಸಿ ತ್ಯಾಜ್ಯ ವಿಂಗಡಿಸಿ ನೀಡುತ್ತಿದ್ದಾರೆ.

‘ಐ ಗಾಟ್ ಗಾರ್ಬೇಜ್’ ಮೊಬೈಲ್ ಅಪ್ಲಿಕೇಶನ್

ವಿಶೇಷ ಅಂದ್ರೆ ಮೈಂಡ್ ಟ್ರೀ ಸಂಸ್ಥೆಯ ಸಹಾಯದೊಂದಿಗೆ ಐ ಗಾಟ್ ಗಾರ್ಬೇಜ್ ಎಂಬ ಆಂಡ್ರಾಯ್ಡ್ ಮೊಬೈಲ್ ಅಪ್ಲಿಕೇಶನ್‍ಅನ್ನು ಡೆವೆಲಪ್ ಮಾಡಲಾಗಿದೆ. ಆ ಮೂಲಕ ಮನೆ ಮನೆಯಿಂದ ಕಸ ವಿಲೇವಾರಿ ಮಾಡುವುದು ಹಾಗೂ ದೈನಂದಿನ ಕೆಲಸಗಳನ್ನು ಸರಳವಾಗಿಸಿದೆ ಅಂತಾರೆ ಮನ್ಸೂರ್.

ವಿಶೇಷ ಅಂದ್ರೆ ಮನ್ಸೂರ್ ಅಹ್ಮದ್ ಅವರ ಬುದ್ಧಿವಂತಿಕೆ ಹಾಗೂ ಶ್ರಮದಿಂದಾಗಿ, ಇವರ ಬಳಿ ಕೆಲಸ ಮಾಡುತ್ತಿರುವ ಕಸ ಆಯುವವರು ಪ್ರತಿ ತಿಂಗಳು 9 ಸಾವಿರ ರೂಪಾಯಿಯಿಂದ 12 ಸಾವಿರ ರೂಪಾಯಿವರೆಗೂ ಗಳಿಸುತ್ತಿದ್ದಾರೆ. ಇದು ಸಾಮಾನ್ಯವಾಗಿ ಬೀದಿ ಬೀದಿ ಗಳಲ್ಲಿ ಅಲೆಯುವ ಕಸ ಆಯುವವರ ಆದಾಯಕ್ಕಿಂತ ಎರಡು ಮೂರು ಪಟ್ಟು ಹೆಚ್ಚು.

ಪ್ಯಾರಿಸ್‍ಗೆ ಮನ್ಸೂರ್..!

ವಿಶೇಷ ಅಂದ್ರೆ ಮನ್ಸೂರ್ ಅಹ್ಮದ್ ಸಾಧನೆಯನ್ನು ಗುರುತಿಸಿ ಅವರನ್ನು ಇದೇ ನವೆಂಬರ್ 30ರಿಂದ ಡಿಸೆಂಬರ್ 11ರವರೆಗೆ ಪ್ಯಾರಿಸ್‍ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಹವಾಮಾನ ವೈಪರೀತ್ಯ ಕುರಿತ ಶೃಂಗಸಭೆಗೆ ಆಮಂತ್ರಣ ನೀಡಲಾಗಿದೆ. ಮನ್ಸೂರ್ ಕಾನ್ಫರೆನ್ಸ್ ಆಫ್ ಪಾರ್ಟೀಸ್‍ನಲ್ಲಿ ಭಾಗವಹಿಸಲಿದ್ದಾರೆ.

ಮನ್ಸೂರ್ ಶಿಕ್ಷಣ ಪಡೆಯದಿದ್ದರೂ ಕನ್ನಡ, ಹಿಂದಿ ಹಾಗೂ ತಮಿಳು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು. ಆದ್ರೆ ಇಂಗ್ಲೀಷ್ ಬರದ ಕಾರಣ ಅನುವಾದಕರ ಸಹಾಯದಿಂದ ಈ ಸಭೆಯನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ. ‘ಇಂಗ್ಲೀಷ್ ಸಮಸ್ಯೆಯೇ ಅಲ್ಲ. ಯಾಕಂದ್ರೆ ನನ್ನ ಪ್ರಾಮಾಣಿಕತೆ ಹಾಗೂ ಪ್ರಾಮಾಣಿಕ ಕೆಲಸಗಳೇ ನನ್ನ ಬಗ್ಗೆ ಮಾತನಾಡುತ್ತವೆ. ಪ್ಯಾರಿಸ್‍ನಲ್ಲಿ ನಾನು ನನ್ನ ವೃತ್ತಿಜೀವನದ ಪಯಣವನ್ನು ಹೇಳಿಕೊಳ್ಳಲಿದ್ದೇನೆ. 7 ವರ್ಷದವನಿದ್ದಾಗ ನಾನು ಈ ಕೆಲಸ ಪ್ರಾರಂಭಿಸಿದ್ದೆ, ಈಗ ನನಗೆ 33 ವರ್ಷ.’ ಅಂತ ನಗುತ್ತಾರೆ ಮನ್ಸೂರ್.

10 ದಿನಗಳ ಕಾಲ ಮನ್ಸೂರ್ ಪ್ಯಾರಿಸ್‍ನಲ್ಲಿರಲಿದ್ದಾರೆ. ಈ ನಿಟ್ಟಿನಲ್ಲಿ ವೀಸಾ, ಪಾಸ್‍ಪೋರ್ಟ್‍ಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಅದೇನೇ ಇರಲಿ ಕಸದಿಂದ ರಸ ಅನ್ನೋದನ್ನ ನೋಡಿದ್ವಿ. ಈಗ ಕಸದಿಂದಲೇ ಬದುಕು ಕಟ್ಟಿಕೊಂಡಿರುವ ಮನ್ಸೂರ್ ಈಗ ಹಲವರಿಗೆ ಮಾದರಿಯಾಗಿದ್ದಾರೆ. ತನ್ನ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಹಾಗೂ ಬುದ್ಧಿವಂತಿಕೆಗಳಿಂದ ಕಸ ಆಯುತ್ತಿದ್ದ ಮನ್ಸೂರ್ ಈಗ ಪ್ಯಾರಿಸ್‍ನಲ್ಲಿ ಹಲವು ರಾಷ್ಟ್ರಗಳ ಪ್ರಮುಖರ ಮುಂದೆ ತ್ಯಾಜ್ಯ ವಿಂಗಡಣೆ ಮತ್ತು ಪರಿಸರ ಸಂರಕ್ಷಣೆಯ ನೀತಿ ಪಾಠ ಹೇಳಲಿದ್ದಾರೆ. ಅದೇನೇ ಇರಲಿ, ಮನ್ಸೂರ್ ಅಹ್ಮದ್ ಅವರಿಗೆ ಶುಭವಾಗಲಿ ಅಂತ ನಾವೂ ಹಾರೈಸೋಣ.

Related Stories