ಕಿಶನ್​​ಗಂಜ್​​ನಿಂದ ನಿರ್ಮಾಣ ಕ್ಷೇತ್ರದ ಮುಂಚೂಣಿಯವರೆಗೆ -ಸಲಾರ್​​ಪುರಿಯ ಸತ್ವ ಗ್ರೂಪ್​​ನ ಸಾಹಸಗಾಥೆ

ಟೀಮ್​ ವೈ.ಎಸ್​​.

0

ಬೆಂಗಳೂರಿನಲ್ಲಿ ಓಡಾಡಿದವರ ಕಣ್ಣಿಗೆ ದೊಡ್ಡ ದೊಡ್ಡ ಕಟ್ಟಡಗಳ ಮೇಲೆ ಸಲಾರ್​ಪುರಿಯ ಸತ್ವ ಎನ್ನುವ ಹೆಸರು ಬಿದ್ದೇ ಇರುತ್ತದೆ. ಅದನ್ನವರು ಮಿಸ್ ಮಾಡಿಕೊಳ್ಳುವ ಚಾನ್ಸೇ ಇಲ್ಲ. 1986ರಲ್ಲಿ ಸ್ಥಾಪಿಸಲ್ಪಟ್ಟ ಸಲಾರ್​ಪುರಿಯ ಸತ್ವ ಗ್ರೂಪ್, ಈಗ ದೇಶದ ಅತ್ಯಂತ ಪ್ರಸಿದ್ಧ ಬಿಲ್ಡರ್​​ಗಳಲ್ಲಿ ಒಂದು. ತನ್ನ ಕೇಂದ್ರಸ್ಥಾನವಾದ ಬೆಂಗಳೂರಿನಲ್ಲಂತೂ ಗಟ್ಟಯಾದ ಇರುವಿಕೆ ಹೊಂದಿದೆ. ಕೋಲ್ಕತ್ತಾ, ಪುಣೆ, ಜೈಪುರ, ವಿಶಾಖಪಟ್ಟಣಂ ಮತ್ತು ಹೈದ್ರಾಬಾದ್​​ಗಳಲ್ಲೂ ಭಾರೀ ಯಶಸ್ಸು ಗಳಿಸಿದೆ. ಈಗಾಗಲೇ 15 ಮಿಲಿಯನ್ ಚದರ ಅಡಿ ನಿರ್ಮಾಣ ಮಾಡಿರುವ ಈ ಸಂಸ್ಥೆಯ ಇನ್ನೂ 30 ಮಿಲಿಯನ್ ಚದರ ಅಡಿಯ ಕಟ್ಟಡಗಳ ಕಾಮಗಾರಿ ಯೋಜನೆಗಳು ವಿವಿಧ ಹಂತದಲ್ಲಿವೆ. ಅಷ್ಟೇ ಅಲ್ಲ, ರಿಯಲ್ ಎಸ್ಟೇಟ್ ವಲಯದ ಕಂಪನಿಗಳ ಸಾಧನೆ, ಸಾಮರ್ಥ್ಯವನ್ನು ಆಧರಿಸಿ ರೇಟಿಂಗ್ಸ್ ನೀಡುವ ಅಂತಾರಾಷ್ಟ್ರೀಯ ಸ್ವತಂತ್ರ ಸಂಘಟನೆಯಾದ ಕ್ರಿಸಿಲ್, ಸಲಾರ್​ಪುರಿಯ ಗ್ರೂಪ್​​ಗೆ “ಎ ಸ್ಟೇಬಲ್” ರೇಟಿಂಗ್ ನೀಡಿದೆ. ಈ ರೇಟಿಂಗ್ ಸಲಾರ್​​ಪುರಿಯ ಕಿರೀಟಕ್ಕೆ ಗರಿ ಇಟ್ಟಂತಿದೆ.

ಬಿಜಯ್ ಕುಮಾರ್ ಅಗರ್ವಾಲ್, ಮೊದಲ ದಿನದಿಂದಲೂ ಇಲ್ಲಿಯವರೆಗೆ, ವ್ಯವಸ್ಥಾಪಕ ನಿರ್ದೇಶಕರಾಗಿ ಸಂಸ್ಥೆಯನ್ನು ಮುನ್ನಡೆಸಿದ್ದಾರೆ. ಅತ್ಯಂತ ವಿನಯದಿಂದ ನಡೆದುಕೊಳ್ಳುವ ಬಿಜಯ್ ಕುಮಾರ್ ಅಗರ್ವಾಲ್ , ತಮ್ಮ ಸಿದ್ಧಾಂತಗಳನ್ನು ವ್ಯವಹಾರದಲ್ಲೂ ಅಳವಡಿಸಿದ್ದರು. ಅವುಗಳನ್ನೇ ಸಂಸ್ಥೆಯ ಆಧಾರಸ್ತಂಭವನ್ನಾಗಿಸಿದ್ದರು. ನಮ್ಮ ಜೊತೆ ಅವರ ಜೀವನ, ಕಲಿಕೆ ಮತ್ತು ಸಿದ್ಧಾಂತಗಳನ್ನು ಹಂಚಿಕೊಂಡಿದ್ದಾರೆ.

ಆರಂಭ

ಬಿಜಯ್ ಅವರು ಮಹತ್ವಾಕಾಂಕ್ಷೆಯ ವ್ಯಕ್ತಿ. ಪ್ರತಿದಿನವೂ ಇನ್ನಷ್ಟು ಬೆಳೆಯಬೇಕು ಎನ್ನುವ ಉತ್ಸಾಹದೊಂದಿಗೆ ಏಳುವ ಅವರು, ಏನಾದರೂ ಸಾಧಿಸಲೇ ಬೇಕು ಎಂಬ ತುಡಿತಹೊಂದಿದ್ದರು. ಏನಾದರೊಂದು ಮಾಡಲೇ ಬೇಕು ಎಂಬ ಕಿಚ್ಚು ಹೊಂದಿದ್ದ ಬಿಜಯ್ಉದ್ಯಮಿಯಾಗುತ್ತೇನೆ ಎಂದು ಕನಸಲ್ಲೂ ಎಣಿಸಿರಲಿಲ್ಲವಂತೆ. “ನಾನು ಇಲ್ಲಿಯವರೆಗೆ ಬರುತ್ತೇನೆ ಎಂದು ಯಾವತ್ತೂ ಕನಸು ಕಂಡಿರಲಿಲ್ಲ. ಮುಂದಿನ ಹಂತಕ್ಕೆ ಹೋಗಬೇಕು ಎನ್ನುವ ಲೆಕ್ಕಾಚಾರವೇ ಇಲ್ಲಿಯವರೆಗೆ ಕರೆದುತಂದಿದೆ.” ಎನ್ನುತ್ತಾರೆ ಬಿಜಯ್.

ಬಿಜಯ್ ಪೋಷಕರು 1965ರಲ್ಲಿಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದಿದ್ದರು. ಬಿಹಾರದ ಚಿಕ್ಕ ಪಟ್ಟಣ ಕಿಶನ್​​ಗಂಜ್​ನಲ್ಲಿ ವಾಸಿಸುತ್ತಿದ್ದರು. 9 ಸೋದರ-ಸೋದರಿಯರೊಂದಿಗೆ ಬೆಳೆದವರೇ ಬಿಜಯ್. ಕುಟುಂಬವು ನಿಯಮಿತ ಆದಾಯ ಹೊಂದಿದ್ದರಿಂದ, ಬಿಜಯ್​​ಗೆ ಬಾಲ್ಯದಿಂದಲೇ ಪೈಸೆಗೆ ಪೈಸೆ ಲೆಕ್ಕ ಹಾಕಿ ಬದುಕು ಸಾಗಿಸುವುದು ರೂಢಿಯಾಗಿ ಹೋಗಿತ್ತು. ದುಡ್ಡಿನ ಮೌಲ್ಯದ ಅರಿವಾಗಿತ್ತು. ಹತ್ತನೇ ತರಗತಿಯ ಬಳಿಕ, ತನ್ನ ದೊಡ್ಡ ಸೋದರಿ ಮತ್ತು ಭಾವನ ಜೊತೆ ಅವರು ಪಶ್ಚಿಮ ಬಂಗಾಳದ ರಾಣಿಗಂಜ್​​ಗೆ ತೆರಳಿದರು. ತನ್ನ ಶಾಲೆಯ ಬಳಿಕ, ಭಾವನಿಗೆ ಅವರ ನೋವೆಲ್ಟಿ ಸ್ಟೋರ್​​ನಲ್ಲಿ ಸಹಾಯ ಮಾಡುತ್ತಿದ್ದರು.

ವ್ಯವಹಾರದ ಥಿಯರಿ ಒಂದೇ !

ಈ ಚಿಕ್ಕ ನೋವೆಲ್ಟಿ ಸ್ಟೋರ್​​ನಲ್ಲೇ ಬಿಜಯ್ ವ್ಯವಹಾರದ ಚಿಕ್ಕ ಚಿಕ್ಕ ಪಾಠಗಳನ್ನು ಕಲಿಯತೊಡಗಿದರು. “ಇದು ನನಗೆ ಮಾರ್ಕೆಟಿಂಗ್ ತಂತ್ರ ಮತ್ತು ಚೌಕಾಶಿ ಕಲೆಯನ್ನು ಕಲಿಸಿತು. ಒಬ್ಬ ವ್ಯಾಪಾರಿಯ ಜೀವನದಲ್ಲಿ ಗ್ರಾಹಕನ ಸಂತೃಪ್ತಿಯೇ ಎಲ್ಲದಕ್ಕಿಂತ ಮಿಗಿಲಾದುದು. ನಾನು ಪ್ರತಿ ವೀಕೆಂಡ್​​ನಲ್ಲಿ ಕೋಲ್ಕತ್ತಾಗೆ ಹೋಗಿ, ನಮ್ಮ ಗ್ರಾಹಕರಿಗಾಗಿ ಹೊಸ ಹೊಸ ಉತ್ಪನ್ನಗಳನ್ನು ತರುತ್ತಿದ್ದೆ. ಕೆಲವೊಮ್ಮೆ ಸ್ಟಾಕ್ 2-3 ದಿನಗಳಲ್ಲೇ ಖಾಲಿಯಾಗುತ್ತಿತ್ತು. ನಮ್ಮ ಗ್ರಾಹಕರನ್ನು ಸಂತೃಪ್ತರನ್ನಾಗಿಡಲು ನಾನು ಮತ್ತೆ ಹೋಗಿ ಐಟಮ್ಸ್ ತರುತ್ತಿದ್ದೆ. ನಾನು ಕೋಲ್ಕತ್ತಾದಲ್ಲಿ ಅತ್ಯುತ್ತಮ ಬೆಲೆಗಾಗಿ ಚೌಕಾಶಿ ಮಾಡುತ್ತಿದ್ದೆ. ರಾಣಿಗಂಜ್​​ನಲ್ಲಿ ಆದಷ್ಟು ಒಳ್ಳೆಯ ಬೆಲೆಗೆ ಮಾರಾಟ ಮಾಡುತ್ತಿದ್ದೆ. ನಾಲ್ಕೈದು ವರ್ಷಗಳಲ್ಲಿ ನಮ್ಮ ಸ್ಟೋರ್ ತುಂಬಾ ಫೇಮಸ್ ಆಯಿತು. ನಾನು ಅಲ್ಲಿ ಕಲಿತ ಪಾಠದಿಂದ ಇವತ್ತಿಗೂ ಖುಷಿಯಾಗಿದ್ದೇನೆ. ವ್ಯವಹಾರ 5 ಸಾವಿರದ್ದೇ ಆಗಲಿ, 5 ಸಾವಿರ ಕೋಟಿಯದ್ದೇ ಆಗಲಿ, ಸಿದ್ದಾಂತ ಮಾತ್ರ ಒಂದೇ.” ಎಂದು ಆರಂಭದ ದಿನಗಳನ್ನು ಮೆಲುಕು ಹಾಕುತ್ತಾರೆ ಬಿಜಯ್.

1985ರಲ್ಲಿ ಕೋಲ್ಕತ್ತಾಗೆ ತೆರಳಿದ ಬಿಜಯ್ ಫೈನಾನ್ಸ್ ಕಾರ್ಪೋರೇಷನ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಅವರ ಅವಧಿಯಲ್ಲಿ, ಆ ಸಂಸ್ಥೆಯು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಅರ್ಧಕ್ಕೆ ಕಾಮಗಾರಿ ನಿಲ್ಲಿಸಿದ್ದ ಬಿಲ್ಡರ್ ಒಬ್ಬರಿಂದ ಕಟ್ಟಡವನ್ನು ಖರೀದಿಸಬೇಕಾಗಿ ಬಂತು. ಸಂಸ್ಥೆ ಹಾಕಿದ ಬಂಡವಾಳವನ್ನು ವಾಪಸ್ ಪಡೆಯಲು ಆ ಬಿಲ್ಡರ್ ಕೈಯಿಂದ ಕಟ್ಟಡವನ್ನು ಪಡೆಯುವ ಈ ಪ್ರಕ್ರಿಯೆ, ತನ್ನನ್ನು ಮುಂದೊಂದು ದಿನ ಕನ್ಸ್ಟ್ರಕ್ಷನ್​​​, ಮ್ಯಾಗ್ನೆಟ್ ಮಾಡುತ್ತೆ ಎನ್ನುವುದು ಆಗಲೂ ಅವರ ಅರಿವಿಗೆ ಬಂದಿರಲಿಲ್ಲ.

“ನನಗೆ ನಿರ್ಮಾಣ ಕ್ಷೇತ್ರದ ಎಬಿಸಿಡಿ ಕೂಡಾ ಗೊತ್ತಿರಲಿಲ್ಲ. ನಾವು ಅರೆ ನಿರ್ಮಿತ ಪ್ರಾಜೆಕ್ಟ್​​ಗಳ ಮೇಲೆ ಕೆಲಸ ಆರಂಭಿಸಿದೆ. ಎರಡೂವರೆ ವರ್ಷ ಬೇಕಾಯಿತು ಪೂರ್ಣಗೊಳಿಸಲು. ನಾವು ಅದನ್ನು ಪೂರ್ಣಗೊಳಿಸಿದೆವು. ನಮ್ಮ ಬಂಡವಾಳವನ್ನು ವಾಪಸ್ ಪಡೆದೆವು. ಲಾಭ ಕೂಡಾ ಆಯಿತು. ಈ ಅಪೂರ್ಣ ಪ್ರಾಜೆಕ್ಟ್ ನನಗೆ ಬಹಳಷ್ಟನ್ನು ಕಲಿಸಿತು. ಆಮೇಲೆ ನಾನು ಯಾವತ್ತೂ ಹಿಂತಿರುಗಿ ನೋಡಲಿಲ್ಲ.”

ಹಂತ ಹಂತವಾಗಿ ಬೆಳವಣಿಗೆ

ಅಲ್ಲಿಂದಾಚೆಗೆ ನಿರ್ಮಾಣ ಪ್ರಾಜೆಕ್ಟ್​​ಗಳನ್ನು ತೆಗೆದುಕೊಳ್ಳಲಾರಂಭಿಸಿದರು. ದಿವಂಗತ ಜಿ ಡಿ ಸಲಾರ್​​ಪುರಿಯಾ ಇವರನ್ನು ಬೆಳೆಸಿದರು. 1993ರಲ್ಲಿ ಬಿಜಯ್ ಮತ್ತು ಸಲಾರ್​ಪುರಿಯಾ ಅವರು ಬೆಂಗಳೂರಿಗೆ ಬಂದು ಅವರ ಮೊದಲ ಪ್ರಾಪರ್ಟಿಯನ್ನು ಖರೀದಿಸಿದರು. ಮನಿ ಚೇಂಬರ್ಸ್ ಎನ್ನುವ ಮೊದಲ ಪ್ರಾಜೆಕ್ಟನ್ನು ಪೂರ್ತಿಗೊಳಿಸಿದರು. ಸಣ್ಣಪುಟ್ಟ ನಿರ್ಮಾಣ ಪ್ರಾಜೆಕ್ಟ್​​ಗಳನ್ನು ಮಾಡಲಾರಂಭಿಸಿದರು. ಬಹುರಾಷ್ಟ್ರೀಯ ಕಂಪನಿಗಳ ಆಗಮನದೊಂದಿಗೆ 2000ದಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆ ದೊಡ್ಡ ಓಪನಿಂಗ್ ಪಡೆಯಿತು. ಹಿಂದೆ ಮುಂದೆ ನೋಡದ ಬಿಜಯ್ ದೊಡ್ಡ ಹೆಜ್ಜೆಗಳೊಂದಿಗೆ, ಅವಕಾಶಗಳನ್ನು ಬಾಚಿಕೊಂಡರು. ದೊಡ್ಡ ದೊಡ್ಡ ಪ್ರಾಜೆಕ್ಟ್​​ಗಳಿಗೆ ಕೈ ಹಾಕಿದರು. ಯಾವುದೇ ಪೂರ್ವ ಮಾರಾಟವಿಲ್ಲದೆ, ಗ್ರಾಹಕರಿಲ್ಲದೆ ಪ್ರಾಜೆಕ್ಟ್​​ಗಳನ್ನು ಪೂರ್ಣಗೊಳಿಸುವುದರಲ್ಲಿ ಯಶಸ್ವಿಯಾದರು. ಲುಸೆಂಟ್ ಟೆಕ್ನಾಲಜಿ, ಬಿಗ್​​ಬಜಾರ್, ಇಂಟೆಲ್ ಟೆಕ್ನಾಲಜಿ ಮೊದಲಾದ ಸಂಸ್ಥೆಗಳಿಗೆ ಕಟ್ಟಡಗಳನ್ನು ಲೀಸ್ ನೀಡಿದರು.

“ಇಂಟೆಲ್ ಅವರು ಪ್ಲಗ್ ಅಂಡ್ ಪ್ಲೇ ವ್ಯವಸ್ಥೆ ಬೇಕು ಎಂದಿದ್ದರು. ಇದು ನಮಗೆ ತುಂಬಾ ಹೊಸ ವಿಷಯವಾಗಿತ್ತು. ಅದನ್ನು 90 ದಿನಗಳಲ್ಲಿ ಮುಗಿಸುವುದು ದೊಡ್ಡ ಚಾಲೆಂಜ್ ಆಗಿತ್ತು. ಇಲ್ಲದಿದ್ದರೆ ಪ್ರತಿದಿನಕ್ಕೆ 1.5 ಲಕ್ಷ ದಂಡ ಪಾವತಿಸಬೇಕಿತ್ತು. ಇದು ನಮಗೆ ಸಂಪೂರ್ಣ ಹೊಸ ಕಾನ್ಸೆಪ್ಟ್ ಆಗಿತ್ತು. ನಾವು ಬೇಕಾದರೆ ಅವರಿಗೆ ಬ್ಯಾಂಕ್ ಗ್ಯಾರಂಟಿ ಕೊಡಲು ರೆಡಿ ಇದ್ದೆವು. ಆದರೆ, ಎಂಎನ್​​ಸಿ ಕಂಪನಿಗಳು ಹಾಗೆ ಕೆಲಸ ಮಾಡುವುದಿಲ್ಲ. ಇದು ನಮಗೆ ಹೊಸ ಸವಾಲಿನ ಅನುಭವವಾಗಿತ್ತು. ಆರಂಭದಲ್ಲಿ ನಮಗೆ ಅಳುಕಿತ್ತು. ಕೊನೆಗೆ ನಾವೂ ಕೂಡಾ ಒಂದು ಕಂಡೀಷನ್ ಹಾಕಿದೆವು. ನಾವು ನಿಗದಿತ ಅವಧಿಗಿಂತ ಮುನ್ನವೇ ಮುಗಿಸಿದರೆ, ನಮಗೆ ಅವರು ಪ್ರತಿದಿನಕ್ಕೆ 1.5 ಲಕ್ಷ ಬೋನಸ್ ಕೊಡಬೇಕು ಎಂದು. ನಾವು ಕೇವಲ 67 ದಿನಗಳಲ್ಲಿ ಪ್ರಾಜೆಕ್ಟ್ ಮುಗಿಸಿದೆವು. ನಮಗೆ ಆಗ ಸಿಕ್ಕ ಬೋನಸ್ 2002ನೇ ಇಸವಿಯಲ್ಲಿ ದೊಡ್ಡ ಮೊತ್ತವಾಗಿತ್ತು.”

ಅತ್ಯಂತ ಕಷ್ಟದ ದಿನಗಳು

2003, ಸೆಪ್ಟಂಬರ್ 9ರಂದು ನನ್ನ ಮಾರ್ಗದರ್ಶಕ, ಗೆಳೆಯ ಸಲಾರ್​ಪುರಿಯ ಇದ್ದಕ್ಕಿದ್ದಂತೆ ಇಹಲೋಕ ತ್ಯಜಿಸಿದರು. ನನ್ನ ಸುತ್ತಮುತ್ತ ಎಲ್ಲವೂ ಶೂನ್ಯ ಆವರಿಸಿರುವಂತೆ ನನಗೆ ಭಾಸವಾಯಿತು. ಎಲ್ಲಿಗೆ ಹೋಗಬೇಕು? ಹೇಗೆ ಹೋಗಬೇಕು? ಯಾವುದೂ ನನಗೆ ತಿಳಿಯಲಿಲ್ಲ. ಇದೆಲ್ಲವೂ ಇದ್ದಕ್ಕಿದ್ದಂತೆ ಆಗಿ ಹೋಯಿತು. ಅವೆಲ್ಲವನ್ನೂ ಸಂಭಾಳಿಸಲು ನಾನು ಸಿದ್ಧನಾಗಿರಲಿಲ್ಲ. ಕ್ಷಣದಲ್ಲಿ ಎಲ್ಲವೂ ಆಗಿ ಹೋಯಿತು. ಆ ವರ್ಷ ನಮಗೆ ತುಂಬಾ ಸವಾಲಿನದ್ದಾಗಿತ್ತು. ನಾವೆಲ್ಲರೂ ಆ ಕುಟುಂಬದ ಜೊತೆ ಕುಳಿತು ಮಾತನಾಡಿದೆವು. ಮುಂದೆ ಹೇಗೆ ಸಾಗುವುದು ಎಂದು ಚರ್ಚೆ ಮಾಡಿದೆವು. ಅವರ ಆಶೀರ್ವಾದ ಮತ್ತು ಮಾರ್ಗದರ್ಶನವೇ ನನ್ನನ್ನು ಮುನ್ನಡೆಸಿದೆ,”

ಜಿ ಡಿ ಸೋಲಾರ್ಪುರಿಯಾ ಅವರ ಬುದ್ಧಿಶಕ್ತಿಯೇ ಮುತ್ತು..!

ಉಳಿಸಿದ ಪ್ರತಿ ಪೈಸೆಯೂ ಗಳಿಕೆಗೆ ಸಮಾನ. ಆದಾಯವು ನಿಮ್ಮ ಕೈಯಲ್ಲಿಲ್ಲ. ನೀವು ಎಷ್ಟು ಆದಾಯ ಗಳಿಸುತ್ತೀರಿ ಎನ್ನುವುದು ನಿಮಗೆ ಗೊತ್ತಿರುವುದಿಲ್ಲ. ಆದರೆ, ನಿಮ್ಮ ಖರ್ಚನ್ನು ಕಡಿಮೆ ಮಾಡಿದರೆ, ಕನಿಷ್ಟ ಅಷ್ಟನ್ನಾದರೂ ನೀವು ಸಂಪಾದಿಸಬಹುದು.

ಹಾಸಿಗೆ ಇದ್ದಷ್ಟೇ ಕಾಲು ಚಾಚು

ಸಾಲದ ಮೇಲೆ ಅವಲಂಬಿಸಬೇಡಿ

2001ರಲ್ಲಿ ಬ್ಯಾಂಕ್​​ನಲ್ಲಿ ನಮ್ಮ ಓವರ್​​ಲಿಮಿಟ್ ಅನ್ನು 50 ಲಕ್ಷದಿಂದ 1 ಕೋಟಿಗೆ ಏರಿಸಲಾಗಿತ್ತು. ನಾನು ತುಂಬಾ ಎಕ್ಸೈಟ್ ಆಗಿದ್ದೆ. ಈ ಖುಷಿ ಸುದ್ಧಿ ಹೇಳಲು ಸಲಾರ್​ಪುರಿಯಾ ಬಳಿ ಹೋಗಿದ್ದೆ. ಅವರು ಏನಂದರು ಗೊತ್ತಾ? ಇದು ಗುಡ್ ನ್ಯೂಸ್ ಅಲ್ಲ, ಬ್ಯಾಡ್ ನ್ಯೂಸ್. ಇದರರ್ಥ, ನಿಮ್ಮ ಹೊರೆ ಇನ್ನೂ 50 ಲಕ್ಷ ಹೆಚ್ಚಾಗಿದೆ ಎಂದು. ಅವರು ಓ.ಡಿ.ಯನ್ನು 25 ಲಕ್ಷಕ್ಕೆ ಇಳಿಸುತ್ತಿದ್ದರೆ, ಅದು ನಮಗೆ ಗುಡ್ ನ್ಯೂಸ್ ಆಗುತ್ತಿತ್ತು.” ಎಂದು ಹಳೆಯದನ್ನು ಹೇಳುತ್ತಾರೆ ಬಿಜಯ್.

ನಿಮಗೆ ದಾನ ಮಾಡಬೇಕು ಎನ್ನಿಸಿದರೆ, ತಕ್ಷಣವೇ ಮಾಡಿ ಬಿಡಿ, ನಾಳೆಗೆ ಅದನ್ನು ಮುಂದೂಡಬೇಡಿ. ನೀವು ಮನಸ್ಸು ಬದಲಾಯಿಸಬಹುದು. ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಮಾಡಬೇಕು ಎನ್ನಿಸಿದ್ದನ್ನು ತಕ್ಷಣವೇ ಮಾಡಿಬಿಡಿ.

ಕುಟುಂಬ ಮತ್ತು ಭವಿಷ್ಯದ ನಿರ್ಮಾಣ

ಸಂಸ್ಥೆ ಒಂದು ಕುಟುಂಬದಂತೆ ಕೆಲಸ ಮಾಡುತ್ತದೆ ಎನ್ನುತ್ತಾರೆ ಬಿಜಯ್. ಶೇಕಡಾ 97ರಷ್ಟು ಉದ್ಯೋಗಿಗಳನ್ನು ಸಂಸ್ಥೆ ನಿರಂತರವಾಗಿ ಉಳಿಸಿಕೊಂಡಿದೆ. ಕೆಲವು ಉದ್ಯೋಗಿಗಳು ಆರಂಭದ ದಿನದಿಂದಲೂ ಜೊತೆಗಿದ್ದಾರೆ. 5 ಜನರ ತಂಡದೊಂದಿಗೆ ಆರಂಭಗೊಂಡ ಸಂಸ್ಥೆಯಲ್ಲಿ ಈಗ 1600 ಉದ್ಯೋಗಿಗಳಿದ್ದಾರೆ. 700 ಸದಸ್ಯರ ತಂಡವಿದೆ. ಬಿಜಯ್ ಅವರು ವೈವಿಧ್ಯಮಯ ಕ್ಷೇತ್ರಗಳಲ್ಲಿ ಸಂಸ್ಥೆಯನ್ನು ಮುನ್ನಡೆಸಿದ್ದಾರೆ. ಏರೋ ಅಸೆಸರೀಸ್, ಫೆಸಿಲಿಟಿ, ಉಗ್ರಾಣ, ಐಟಿ ಹೀಗೆ ಬೇರೆ ಬೇರೆ ವಿಧದ ಗ್ರಾಹಕರನ್ನು ತೃಪ್ತಿಪಡಿಸಿದ್ದಾರೆ. ಬೆಂಗಳೂರಿನ ದಿ ಗ್ರೀನ್ ವುಡ್ ಇಂಟರ್​​ನ್ಯಾಷನಲ್ ಸ್ಕೂಲ್ ಮೂಲಕ ಶಿಕ್ಷಣ ಕ್ಷೇತ್ರದ ಲ್ಲಿ ನಿರ್ಮಾಣಕ್ಕೂ ಕೈ ಹಾಕಿದ್ದಾರೆ.

ಉದ್ಯೋಗಿಗಳ ಜೊತೆಗೆ ವೈಯುಕ್ತಿಕ ಸಂಬಂಧ ತುಂಬಾ ಮುಖ್ಯವಾದದ್ದು. ಯಾರೂ ಕೂಡಾ ಮಾತನಾಡಲು ಹಿಂಜರಿಕೆ ವ್ಯಕ್ತಪಡಿಸಬಾರದು. ಜೊತೆಗಾರರನ್ನು, ಸಹೋದ್ಯೋಗಿಗಳನ್ನು ಕುಟುಂಬದಂತೆ ಪರಿಗಣಿಸುವುದು ತುಂಬಾ ಅಗತ್ಯ. “ಉದ್ಯೋಗಿಗಳು ತುಂಬಾ ಸ್ಮಾರ್ಟ್, ಮತ್ತು ಅವರಿಗೆ ಎಲ್ಲಾ ಗೊತ್ತಿದೆ. ನೀವು ಕುಟುಂಬದವರಂತೆ ಪ್ರೀತಿಸಿ, ಅವರೂ ನಿಮ್ಮನ್ನು ಕುಟುಂಬದಂತೆ ಪರಿಗಣಿಸುತ್ತಾರೆ,”ಎನ್ನುತ್ತಾರೆ ಬಿಜಯ್.

ಒಮ್ಮೆಗೆ ಒಂದೇ ಮಹಡಿ ಹತ್ತಿ

ಎಲ್ಲಾ ಮನುಷ್ಯರೂ ಸ್ವತಂತ್ರವಾಗಿ ಮತ್ತು ಸಮಾನವಾಗಿ ಹುಟ್ಟುತ್ತಾರೆ. ಯಾರು ಸವಾಲುಗಳನ್ನು ಅವಕಾಶವಾಗಿ ಪರಿವರ್ತಿಸುತ್ತಾರೋ, ಗುರಿಗಳನ್ನು ತಲುಪುತ್ತಾರೋ ಅವರೇ ನಿಜವಾದ ಜಯಶಾಲಿಗಳು. ಪ್ರತಿಯೊಂದು ಸಂಸ್ಥೆ ಕೂಡಾ ಸವಾಲುಗಳನ್ನು ಎದುರಿಸುತ್ತದೆ. ಸವಾಲುಗಳೇ ಅವರನ್ನು ಗಟ್ಟಿಗೊಳಿಸುತ್ತವೆ. “ಯಾರಾದರೂ ಕಾರು ಚಾಲಕರು ತಾವು ಎಂದೂ ಅಪಘಾತ ಮಾಡಿಲ್ಲ ಎಂದು ಹೇಳಿದರೆ ಅದರ ಅರ್ಥ, ಅವರು ಕಾರನ್ನು ಕಾರಿನ ರೀತಿ ಚಲಾಯಿಸಿಲ್ಲ ಎಂದರ್ಥ. ವ್ಯವಹಾರದಲ್ಲೂ ಹಾಗೆಯೇ. ನೀವು ತಪ್ಪು ಮಾಡಿಲ್ಲ ಎಂದಾದರೆ, ನೀವು ನಿಜಕ್ಕೂ ವ್ಯವಹಾರ ಮಾಡಿಲ್ಲ ಎಂದರ್ಥ.

ನಿಮ್ಮ ಕರ್ತವ್ಯವನ್ನು ನೀವು ಮಾಡಿ, ಚಿಕ್ಕದು ದೊಡ್ಡದು ಎಂದು ಯೋಚಿಸುತ್ತಾ ಕೂರಬೇಡಿ. ನೀವು ನಂಬಿಕೆಯಿಂದ ಚಿಕ್ಕ ಕೆಲಸ ಮಾಡಿದರೂ, ಒಂದು ದಿನ ದೊಡ್ಡ ಕೆಲಸ ಮಾಡಲು ಹಾದಿ ತೋರುತ್ತದೆ. ಒಂದು ಬಾರಿಗೆ ಒಂದೇ ಮಹಡಿಯನ್ನು ಹತ್ತಿ, ಹತ್ತು ಮಹಡಿಯನ್ನು ಹತ್ತುವ ಪ್ರಯತ್ನ ಬೇಡ. ನಿಮಗೆ ಉಸಿರಾಟದ ತೊಂದರೆ ಶುರುವಾದೀತು ಎಂದು ಅರ್ಥಗರ್ಭಿತವಾಗಿ ಜೋಕ್ ಮಾಡುತ್ತಾರೆ ಬಿಜಯ್.