ಪ್ರಾಧ್ಯಾಪಕ ವೃತ್ತಿ ಬಿಟ್ಟು ಬ್ರೆಡ್ ಉದ್ಯಮದಲ್ಲಿ ಸೈ ಎನಿಸಿಕೊಂಡ ಎಂ.ಮಹಾದೇವನ್..

ಟೀಮ್ ವೈ.ಎಸ್.ಕನ್ನಡ 

1

ಎಂ.ಮಹಾದೇವನ್ ಹೆಸರು ತಮಿಳುನಾಡಿನ ಚೆನ್ನೈನಲ್ಲಿ ಚಿರಪರಿಚಿತ. ಇವರೊಬ್ಬ ಪ್ರಸಿದ್ಧ ರೆಸ್ಟೋರೆಂಟ್ ಮಾಲೀಕ ಜೊತೆಗೆ ಬೇಕರ್ ಕೂಡ ಹೌದು. ಇವರನ್ನು ಎಲ್ಲರೂ 'ಹಾಟ್ ಬ್ರೆಡ್ ಮಹಾದೇವನ್' ಅಂತಾನೇ ಪ್ರೀತಿಯಿಂದ ಕರೀತಾರೆ. ಸಾಮಾನ್ಯರಲ್ಲಿ ಸಾಮಾನ್ಯರಂತೆ ಬ್ಯುಸಿನೆಸ್ ಆರಂಭಿಸಿದ್ದ ಎಂ.ಮಾಧವನ್ ಈಗ ಮಲ್ಟಿ ಮಿಲಿಯನ್ ಡಾಲರ್ ಬ್ರೆಡ್ ಉದ್ಯಮದ ಒಡೆಯ.

ಕೊಯಮತ್ತೂರಿನಿಂದ 65 ಕಿಲೋ ಮೀಟರ್ ದೂರದಲ್ಲಿರುವ ಉಡುಮಲ್ಪೇಟ್ ಅವರ ಹುಟ್ಟೂರು. ಈ ಚಿಕ್ಕ ಪಟ್ಟಣದಲ್ಲೇ ಹುಟ್ಟಿ ಬೆಳೆದವರು ಮಹಾದೇವನ್. ಅವರ ತಂದೆ-ತಾಯಿ ಇಬ್ಬರೂ ವೈದ್ಯರು. ಆದ್ರೆ ಮಹಾದೇವನ್ ಯಾಕೋ ವೈದ್ಯ ವೃತ್ತಿ ಆರಿಸಿಕೊಳ್ಳಲಿಲ್ಲ. ಅವರಿಗೆ ಮೊದಲಿನಿಂದ್ಲೂ ಉದ್ಯಮದ ಬಗ್ಗೆ ಆಸಕ್ತಿ. ವಾಣಿಜ್ಯ ವಿಷಯದಲ್ಲೇ ಮಹಾದೇವನ್ ಪೋಸ್ಟ್ ಗ್ರಾಜ್ಯುಯೇಶನ್ ಮುಗಿಸಿದ್ರು. 1979ರಲ್ಲಿ ಸಹ ಪ್ರಾಧ್ಯಾಪಕರಾಗಿ ಮದ್ರಾಸ್ ವಿಶ್ವವಿದ್ಯಾನಿಲಯ ಸೇರಿದ ಮಹಾದೇವನ್ ಅವರಿಗೆ, ನಿಧಾನವಾಗಿ ರೆಸ್ಟೋರೆಂಟ್ ಆರಂಭಿಸಬೇಕೆಂಬ ಆಸೆ ಚಿಗುರಿತ್ತು. ಬಳಿಕ ಅವರು ಪ್ರಾಧ್ಯಾಪಕ ವೃತ್ತಿಗೆ ರಾಜೀನಾಮೆ ಕೊಟ್ಟು ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡ್ರು.

ಟೇಬಲ್ ಸ್ವಚ್ಛಗೊಳಿಸುವುದು, ಆಹಾರ ಸರ್ವ್ ಮಾಡೋದು ಅವರ ಕೆಲಸ. ಇದರ ಜೊತೆಜೊತೆಗೆ ರೆಸ್ಟೋರೆಂಟ್ ಉದ್ಯಮ ಹೇಗೆ ಕಾರ್ಯನಿರ್ವಹಿಸುತ್ತದೆ ಅನ್ನೋದನ್ನೂ ಅರ್ಥಮಾಡಿಕೊಂಡ್ರು. ಇವನ್ನೆಲ್ಲ ಮಾಧವನ್ ಮತ್ತೆ ನೆನಪಿಸಿಕೊಂಡಿದ್ದಾರೆ. ''ಆರ್ಥರ್ ಹೈಲಿ ಅವರ ಹೋಟೆಲ್ ಪುಸ್ತಕವನ್ನು ಓದಿದಾಗಿನಿಂದ ಹೋಟೆಲ್ ಇಂಡಸ್ಟ್ರಿ ಬಗ್ಗೆ ನನ್ನಲ್ಲಿ ಆಸಕ್ತಿ ಮೂಡಿತ್ತು. ನನಗೆ ಜನರನ್ನು ಭೇಟಿಯಾಗುವುದಂದ್ರೆ ಇಷ್ಟ. ಹೋಟೆಲ್ ಉದ್ಯಮದಲ್ಲಿ ಇದು ಸಾಧ್ಯವಿದೆ. ನನ್ನ ಪೋಷಕರು ಕೂಡ ಜನರನ್ನು ಭೇಟಿಯಾಗ್ತಾರೆ, ಆದ್ರೆ ಯಾರು ನೋವಿನಲ್ಲಿರ್ತಾರೋ, ದುಖಃದಲ್ಲಿರ್ತಾರೋ ಅವರನ್ನು ಮಾತ್ರ. ನನಗೆ ಸಂತೋಷವಾಗಿರುವವರನ್ನು ಭೇಟಿಯಾಗಬೇಕೆಂಬ ಆಸೆ. ಬೇಕರಿ ಅಥವಾ ರೆಸ್ಟೋರೆಂಟ್ಗೆ ಬರುವವರೆಲ್ಲ ಯಾವಾಗಲೂ ಖುಷಿಯ ಮೂಡ್ನಲ್ಲಿರ್ತಾರೆ'' ಅನ್ನೋದು ಮಹಾದೇವನ್ ಅವರ ಮನದಾಳದ ಮಾತು.

ಮೊದಲು ಸಣ್ಣದಾಗಿ ಆರಂಭವಾದ ಅವರ ಉದ್ಯಮ ಈಗ ಬೃಹದಾಕಾರದಲ್ಲಿ ಬೆಳೆದಿದೆ. ದಕ್ಷಿಣ ಭಾರತದಲ್ಲಿ 3 ಬಹುದೊಡ್ಡ ಕಂಪನಿಗಳ ಒಡೆಯ ಎಂ.ಮಹಾದೇವನ್. ``ಹಾಟ್ ಬ್ರೆಡ್ಸ್'', ``ಕಾಪರ್ ಚಿಮ್ನಿ ಸೌತ್ ಇಂಡಿಯಾ'' ಮತ್ತು ``ಓರಿಯಂಟಲ್ ಕ್ವಿಸಿನ್ಸ್''. ಸದ್ಯ ಚೆನ್ನೈನಲ್ಲಿ 30 ಹಾಟ್ ಬ್ರೆಡ್ಸ್ ಔಟ್ಲೆಟ್ಗಳಿವೆ. ಮಹಾದೇವನ್ ಪುದುಚೆರಿಯಲ್ಲಿ 2, ಪಶ್ಚಿಮ ಏಷ್ಯಾದಲ್ಲಿ 14, ಯುರೋಪ್ನಲ್ಲಿ 1 ಔಟ್ಲೆಟ್ ತೆರೆದಿದ್ದಾರೆ.

ಇನ್ನು ಕಾಪರ್ ಚಿಮ್ನಿ ಸೌತ್ ಇಂಡಿಯಾ ಅಡಿಯಲ್ಲಿ ಹಲವು ಬೇಕರಿ ಹಾಗೂ ರೆಸ್ಟೋರೆಂಟ್ಗಳು ಕಾರ್ಯನಿರ್ವಹಿಸುತ್ತಿವೆ. ಕಾಪರ್ ಚಿಮ್ನಿ, ಬಾಂಬೆ ಬ್ರಾಸ್ಸೆರಿ ಮತ್ತು ಮರೀನಾ ಇವುಗಳಲ್ಲಿ ಪ್ರಮುಖವಾದವು. ಬೆಂಜರೊಂಗ್, ಝಾರಾ, ಎಂಟೆ ಕೇರಳಮ್, ವಾಂಗ್ಸ್ ಕಿಚನ್, ತೆಪ್ಪನ್, ಫ್ರೆಂಚ್ ಲೋಫ್ ಮತ್ತು ಪ್ಲಾನೆಟ್ ಯಮ್ ಬ್ರಾಂಡ್ಗಳು ಓರಿಯಂಟಲ್ ಕ್ವಿಸಿನ್ಸ್ ಅಡಿಯಲ್ಲಿ ಬರುತ್ತವೆ.

ಹತ್ತಾರು ರೆಸ್ಟೋರೆಂಟ್ ಮತ್ತು ಬೇಕರಿಯನ್ನು 60ರ ಹರೆಯದಲ್ಲೂ ಮಹಾದೇವನ್ ಚಾಕಚಕ್ಯತೆಯಿಂದ ಮುನ್ನಡೆಸುತ್ತಿದ್ದಾರೆ. ಅವರ ಕೀರ್ತಿ ಆಗಸದೆತ್ತರಕ್ಕೆ ಚಾಚಿದೆ ಅಂದ್ರೂ ತಪ್ಪಾಗಲಾರದು. ಭಾರತದ ಪ್ರಮುಖ ಉದ್ಯಮಿಗಳಲ್ಲಿ ಮಹಾದೇವನ್ ಕೂಡ ಸ್ಥಾನ ಪಡೆಯುತ್ತಾರೆ.

ಇದನ್ನೂ ಓದಿ...

ಮೆಡಿಕಲ್​ಗೆ ಹೋಗೋ ಚಿಂತೆ ಬಿಟ್ಟುಬಿಡಿ- ಆನ್​ಲೈನ್​ನಲ್ಲೇ ಆರ್ಡರ್​ ಮಾಡಿ

ಮನೆ ಮನೆಗೆ ಡಿಟರ್ಜೆಂಟ್ ಮಾರುತ್ತಿದ್ದ ''ಎಲ್ಲರ ನೆಚ್ಚಿನ ನಿರ್ಮಾ''ದ ಸೃಷ್ಟಿಕರ್ತ