ಎನ್‌ಜಿಓ ಹಾಗೂ ಸಾಮಾಜಿಕ ಸೇವಾವಲಯಗಳಿಗೆ ವೇದಿಕೆ ಕಲ್ಪಿಸಿಕೊಡುವತ್ತ ಸಿಎಸ್‌ಜಿ ಹೆಜ್ಜೆ

ಟೀಮ್​​ ವೈ.ಎಸ್​​.

ಎನ್‌ಜಿಓ ಹಾಗೂ ಸಾಮಾಜಿಕ ಸೇವಾವಲಯಗಳಿಗೆ ವೇದಿಕೆ ಕಲ್ಪಿಸಿಕೊಡುವತ್ತ ಸಿಎಸ್‌ಜಿ ಹೆಜ್ಜೆ

Thursday October 22, 2015,

4 min Read

ಸೌತ್ ಏಷಿಯನ್ ಬ್ಯಾಂಬೂ ಫೌಂಡೇಶನ್(ಎಸ್‌ಎಬಿಎಫ್‌)ನ ಸಂಸ್ಥಾಪಕರಾದ ಕಾಮೇಶ್ ಸಲಾಮ್ ಸೈಕಲ್‌ಗಳನ್ನು ನಿರ್ಮಿಸಲು ಬಿದಿರನ್ನು ಬಳಸುವ ಮಣಿಪುರದ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಈ ಸೈಕಲ್‌ಗಳಿಗೆ ವಾಣಿಜ್ಯ ಆಧಾರದ ಮೇಲೆ ಮಾರುಕಟ್ಟೆ ಒದಗಿಸುವುದು ಮತ್ತು ಬಿದಿರಿನ ಬಳಕೆಯನ್ನು ಪ್ರೋತ್ಸಾಹಿಸುವುದು ಇವರ ಉದ್ದೇಶ. ಇವರಿಗೆ ಈ ಕಾರ್ಯದಲ್ಲಿ ನೆರವಾಗಿದ್ದು ಕನ್ಸಲ್ಟಿಂಗ್ ಫಾರ್ ಸೋಷಿಯಲ್ ಗುಡ್(ಸಿಎಸ್‌ಜಿ) ಎಂಬ ಸಂಸ್ಥೆ. ಈ ಸಂಸ್ಥೆಯ ಸಂಸ್ಥಾಪಕ ಶಿವಧವನ್.

ಎಸ್‌ಎಬಿಎಫ್‌ ಜೊತೆ ಕೈ ಜೋಡಿಸಿದ್ದರ ಕುರಿತು ಶಿವ ಧವನ್ ಹೀಗೆ ಹೇಳುತ್ತಾರೆ. ಪ್ರಪಂಚದಾದ್ಯಂತವಿರುವ ಯಶಸ್ವಿ ವ್ಯಾವಹಾರಿಕ ಹಾಗೂ ಔದ್ಯಮಿಕ ಮಾದರಿಗಳನ್ನು ಅಭ್ಯಸಿಸಿದ್ದೇವೆ. ಬಿದಿರಿನ ತಂತ್ರಜ್ಞಾನದ ಪರಿಣಿತರಾದ ಪ್ರೊ.ವಿ.ಎಂ.ಚಾರಿಯರ್ (ದೆಹಲಿ ಐಐಟಿಯ ಗ್ರಾಮೀಣಾಭಿವೃದ್ಧಿ ಮತ್ತು ತಂತ್ರಜ್ಞಾನ ವಿಭಾಗದ ಸಿಬ್ಬಂದಿ) ಅವರನ್ನು ಭೇಟಿಯಾಗಿ, ಆದಾಯವನ್ನು ಉತ್ಪತ್ತಿ ಮಾಡುವ ಉದ್ಯಮದ ಮಾದರಿಯಲ್ಲಿ ಸಹಭಾಗಿತ್ವದ ಆಧಾರದಲ್ಲಿ ಆದಾಯವನ್ನು ಹಂಚಿಕೊಳ್ಳುವ ಒಡಂಬಡಿಕೆ ಮಾಡಿಕೊಂಡೆವು. ಇಂತಹ ಬಿದಿರಿನ ಮಾದರಿಗಳನ್ನು ತಾಜ್ ಮಹಲ್ ಮುಂತಾದ ಕಡೆ ನಿರ್ಮಿಸಲು ಪುರಾತತ್ವ ಇಲಾಖೆ ಜಾಗಗಳನ್ನು ಗುರುತಿಸುತ್ತಿದ್ದ ವಿಚಾರ ನಮಗೆ ತಿಳಿದಿತ್ತು. ಅದಕ್ಕೆ ಸೂಕ್ತವಾದ, ಅಗತ್ಯವಾದ ಮಾಹಿತಿಗಳನ್ನು ಒಗ್ಗೂಡಿಸಿ ಪುರಾತತ್ವ ಇಲಾಖೆಗೆ ನೀಡಿದೆವು. ಅಲ್ಲದೇ ಉತ್ತರಪ್ರದೇಶ ಸರ್ಕಾರದೊಂದಿಗೂ ಮಾತುಕತೆ ನಡೆಸಿದ್ದೇವೆ.

image


ಇನ್ನು ಸಿಎಸ್‌ಜಿ ಜೊತೆ ಕಾರ್ಯನಿರ್ವಹಿಸಿದ್ದ ಅನುಭವವನ್ನು ಕಾಮೇಶ್ ಹೀಗೆ ಹಂಚಿಕೊಳ್ಳುತ್ತಾರೆ. ಸಿಎಸ್‌ಜಿ ನನಗೆ ಬಿದಿರಿನ ಉತ್ಪನ್ನಗಳ ಮಾರುಕಟ್ಟೆಯನ್ನು ಗುರುತಿಸಲು ಸಹಾಯ ಮಾಡಿತು. ಈಗಿನ ಬುದ್ಧಿವಂತ ಯುವಜನರಿಗೆ ಪ್ರಪಂಚದಾದ್ಯಂತ ಏನು ನಡೆಯುತ್ತಿದೆ, ಯುವಜನತೆ ಏನನ್ನು ಬಯಸುತ್ತಿದೆ, ಯಾವ ವಿಚಾರದ ಬಗ್ಗೆ ವಿಭಿನ್ನ ಮಾರ್ಗದರ್ಶನ ನೀಡಬಹುದು ಎಂಬುದರ ಬಗ್ಗೆ ಸರಿಯಾಗಿ ತಿಳಿದಿದೆ ಎಂಬ ಶ್ಲಾಘನೆಯ ಮಾತುಗಳನ್ನಾಡುತ್ತಾರೆ ಕಾಮೇಶ್.

ಅವರ ಕಥೆ

ದೆಹಲಿಯ ಐಐಟಿಯಲ್ಲಿ ಓದುತ್ತಿದ್ದ ದೇವ್ ಪ್ರಿಯಾ ಮತ್ತು ಶಿವಧವನ್‌ 2014ರಲ್ಲಿ ಕನ್ಸಲ್ಟಿಂಗ್ ಫಾರ್ ಸೋಶಿಯಲ್ ಗುಡ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಸಿಎಸ್‌ಜಿ ಆರಂಭಿಸುವುದಕ್ಕೂ ಮೊದಲು ಅನೇಕ ಎನ್‌ಜಿಓಗಳ ಜೊತೆ ಸಂಪರ್ಕದಲ್ಲಿದ್ದರು. ಎನ್‌ಜಿಓಗಳ ವಿದ್ಯಾರ್ಥಿ ಕಾರ್ಯಕ್ರಮಗಳು ಅದಕ್ಷವಾಗಿವೆ ಎಂಬ ಅನುಭವ ಇವರಿಗೆ ದೊರಕಿತು. ನಿರ್ದಿಷ್ಟ ಮತ್ತು ತಾಂತ್ರಿಕ ನೈಪುಣ್ಯ ಮತ್ತು ಪರಿಣಿತ ವಿದ್ಯಾರ್ಥಿಗಳನ್ನು ಆಯಾ ಎನ್‌ಜಿಓಗಳ ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡಾಗ ಮಾತ್ರ ಸಾಮಾಜಿಕ ಪರಿವರ್ತನೆ ಸಾಧ್ಯ ಎನ್ನುವುದು ಶಿವಧವನ್‌ರ ಅಭಿಪ್ರಾಯ.

ಇದಕ್ಕೆ ತಮ್ಮ ಅಭಿಪ್ರಾಯವನ್ನು ಸೇರಿಸುವ ದೇವ್ ಬೇಸಿಗೆಯಲ್ಲಿ ಎನ್‌ಜಿಓಗಳ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳನ್ನು ಮಾತನಾಡಿಸಿದಾಗ ಅವರ ಅನುಭವ ಅಷ್ಟೇನೂ ಹಿತಕರವಾಗಿಲ್ಲದ್ದು, ಕಡಿಮೆ ಸಾಮಾಜಿಕ ಪರಿಣಾಮವಿದ್ದದ್ದು ಕಂಡುಬಂತು ಎಂದಿದ್ದಾರೆ. ಎನ್‌ಜಿಓಗಳ ಅಗತ್ಯತೆಗಳನ್ನು ಗುರುತಿಸುವ ಮತ್ತು ವಿದ್ಯಾರ್ಥಿಗಳ ನೈಪುಣ್ಯತೆಯನ್ನು ಪರಿಗಣಿಸುವ ಅಗತ್ಯ ಬಹಳವಿದೆ ಎನ್ನುತ್ತಾರೆ ದೇವ್.

ಸಿಎಸ್‌ಜಿಯ ಉದ್ದೇಶ

ನುರಿತ ಕಾರ್ಪೋರೇಟ್ ಕನ್ಸಲ್ಟೆಂಟ್ಸ್ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಂಡು ಸಾಮಾಜಿಕ ಪರಿಣಾಮ ಉಂಟು ಮಾಡಲು ಪ್ರೋ-ಬೋನೋ ಮೆಕ್ಯಾನಿಸಂ ಮಾದರಿಯಲ್ಲಿ ಕಾರ್ಯನಿರ್ವಹಿಸುವುದು ಸಿಎಸ್‌ಜಿಯ ಗುರಿ. ಎನ್‌ಜಿಓಗಳ ಕಾರ್ಯಾಚರಣೆಯನ್ನು ಸುಧಾರಿಸುವುದು ಮತ್ತು ಸಾಮಾಜಿಕ ಉದ್ದಿಮೆಗಳು ಮತ್ತು ಉದ್ದಿಮೆಗಳ ಆರ್ಥಿಕ ಸಬಲೀಕರಣದ ಮೂಲಕ ತಮ್ಮ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಸಿಎಸ್‌ಜಿ.

ಇಂತಹ ಸಾರ್ವಜನಿಕ ಉದ್ದಿಮೆಗಳ ಸಂಘಟನೆಗಳು, ಉದ್ಯಮದ ಸಂಶೋಧನೆ ಮತ್ತು ಡಾಟಾಅನಾಲಿಸಿಸ್ ಮೂಲಕ ತೆಗೆದುಕೊಳ್ಳುವ ನಿರ್ಧಾರಗಳನ್ನು ಕಾರ್ಯರೂಪಕ್ಕೆ ಇಳಿಸುತ್ತವೆ. ಇಂಥವರಿಗೆ ಸಹಾಯ ಮಾಡುವುದು ಸಿಎಸ್‌ಜಿಯ ಉದ್ದೇಶ. ಅಲ್ಲದೇ ಇಂತಹ ಉದ್ದಿಮೆಗಳ ಹೂಡಿಕೆ ಹೆಚ್ಚಿಸಲು ಮತ್ತು ಜಾಲವನ್ನು ಪ್ರಚಾರಪಡಿಸಲು ಸಂಘಟನೆಗಳ ಪ್ರತಿನಿಧಿಯಾಗಿ ವಿದ್ಯಾರ್ಥಿಗಳು ಭಾಗಿಯಾಗುವ ಒಂದು ಕಾರ್ಯತಂತ್ರವನ್ನೂ ಸಹ ಅಭಿವೃದ್ಧಿಪಡಿಸಲಾಗಿದೆ.

ಸಿಎಸ್‌ಜಿಯ ಸದಸ್ಯರು ಮೊದಲಿನಿಂದಲೂ ಸಾಮಾಜಿಕ ಉದ್ದಿಮೆಗಳು ಎನ್‌ಜಿಓಗಳ ಜೊತೆ ಕಾರ್ಯನಿರ್ವಹಿಸಿದ್ದವರೇ ಆಗಿದ್ದಾರೆ. ದೆಹಲಿ ಐಐಟಿಯ 3ನೇ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಪ್ರಿಯಾಲ್ ಮೋಟ್ವಾನಿ ಉರವು ಸಂಸ್ಥೆಯ ಕಾರ್ಯಗಳ ಮುಂದಾಳತ್ವ ವಹಿಸಿದ್ದಾರೆ. ಉರವು, ಸರ್ಕಾರೇತರ ಸಂಘಟನೆಯಾಗಿದ್ದು ಜನರ ಜೊತೆ ಕಾರ್ಯನಿರ್ವಹಿಸುತ್ತಾ, ಸುಸ್ಥಿರ ಉದ್ಯೋಗ ಅವಕಾಶ ನೀಡಲು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆದಾಯವನ್ನು ಉತ್ಪಾದಿಸಲು ಸರ್ಕಾರ ಮತ್ತು ಉದ್ಯಮಗಳು ಹಾಕಿಕೊಂಡಿರುವ ಯೋಜನೆಯನ್ನು ಜಾರಿಗೆ ತರಲು ಇರುವ ಸಂಸ್ಥೆಯಾಗಿದೆ.

ಸಿಎಸ್‌ಜಿಯ ಮತ್ತೊಬ್ಬ ಸದಸ್ಯೆ ಸುಕೃತಿ ಗೋಯೆಲ್. ಶಹೀದ್ ಸುಖದೇವ್ ಕಾಲೇಜ್ ಆಫ್‌ ಬಿಸಿನೆಸ್‌ ಸ್ಟಡೀಸ್‌ನಲ್ಲಿ ಪದವಿಪೂರ್ವ ನಿರ್ವಹಣಾ ಶಾಸ್ತ್ರದ ವಿದ್ಯಾರ್ಥಿಯಾಗಿದ್ದಾರೆ. ಪ್ರಸ್ತುತ ಸುಕೃತಿ ಆರೋಹಣ್ ಲರ್ನಿಂಗ್ ಸೆಂಟರ್ ಫೌಂಡೇಶನ್‌ನ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಲ್ಲದೇ ಪೀಪಲ್ ಫಾರ್ ಪ್ಯಾರಿಟಿ, ಸೇವ್‌ ದ ಚಿಲ್ಡ್ರನ್, ಯೂತ್ ಫಾರ್ ಸೇವಾದಂತಹ ಹಲವು ಸಂಸ್ಥೆಗಳೊಂದಿಗೆ ಕೈಜೋಡಿಸಿದೆ ಸಿಎಸ್‌ಜಿ.

23 ಮತ್ತು 22 ವರ್ಷದ ದೇವ್, ಶಿವ ಎನ್‌ಜಿಓ ಮತ್ತು ಸಾಮಾಜಿಕ ಉದ್ದಿಮೆಗಳ ಜೊತೆ ಕಾರ್ಯನಿರ್ವಹಿಸುತ್ತಿದ್ದು, ಭಾರತದ ಅತೀ ದೊಡ್ಡ ಸಲಹಾಕೇಂದ್ರದಲ್ಲಿಯೂ ಪೂರ್ಣಕಾಲಿಕ ಕೆಲಸ ಮಾಡುತ್ತಿದ್ದಾರೆ.

ಇದರಿಂದ ಕಾರ್ಯಾಚರಣೆ ಸಾಧ್ಯವೇ?

ಈಗ ಶಿವ ಮತ್ತು ದೇವ್ ಕಾಲೇಜು ವಿದ್ಯಾರ್ಥಿಗಳಲ್ಲ. ಕಾಲೇಜಿನಲ್ಲಿದ್ದಾಗ ದೊರೆಯುತ್ತಿದ್ದಷ್ಟು ಸಮಯವೂ ಅವರಿಗೆ ಸಿಗುತ್ತಿಲ್ಲ. ಆದರೂ ಸಿಎಸ್‌ಜಿ ಕಾರ್ಯಕಲಾಪ ಮಾತ್ರ ನಿಂತಿಲ್ಲ. ವಿದ್ಯಾರ್ಥಿಗಳು ಸಿಎಸ್‌ಜಿ ಕೋರ್ ಟೀಂ ಮಾಡಿಕೊಂಡಿದ್ದಾರೆ. ಅಲ್ಲದೇ, ಸಂಘಟನೆಯ ಪೋಷಣೆಯ, ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಸಂಘಟನೆಗೆ ಹೊಸಬರ ಸೇರ್ಪಡೆ ನಿರಂತರವಾಗಿ ನಡೆಯುತ್ತಲೇ ಇದೆ. ಪ್ರತಿವರ್ಷವೂ ಸಿಎಸ್‌ಜಿಗೆ ಹೊಸ ಅಧ್ಯಕ್ಷರು ಹಾಗೂ ಕೋರ್ ಟೀಂ ರಚಿಸಲಾಗುತ್ತದೆ. ವಿದ್ಯಾರ್ಥಿಗಳು ಕಾರ್ಪೋರೇಟ್ ವಲಯಕ್ಕೆ ಕಾಲಿಟ್ಟ ನಂತರವೂ ಸಿಎಸ್‌ಜಿಯ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ.

ವಿದ್ಯಾರ್ಥಿಗಳ ತಂಡಕ್ಕೆ ಸರಿಯಾದ ಕಾರ್ಯನಿರ್ವಹಣೆಗೆ ಸಮರ್ಪಕ ಮಾರ್ಗದರ್ಶನ ಮಾಡುವುದು ಮಾತ್ರ ಶಿವ ಹಾಗೂ ದೇವ್. ಮಾರ್ಗದರ್ಶಕರ ಯಶಸ್ವಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ ಮತ್ತು ಗ್ರಾಹಕರಿಗೆ ತೃಪ್ತಿಯಾಗುವಂತೆ ಯೋಜನೆಗಳನ್ನು ನಿರ್ವಹಿಸುತ್ತಿದ್ದಾರೆ. ಪ್ರತಿ ವಾರಾಂತ್ಯದಲ್ಲೂ ಈ ತಂಡದ ಸದಸ್ಯರು ಭೇಟಿಯಾಗುತ್ತಿದ್ದಾರೆ. ನಿಗದಿತ ವಾರಾಂತ್ಯದಲ್ಲಿ ಗ್ರಾಹಕರನ್ನು ಭೇಟಿಯಾಗುತ್ತಿದ್ದಾರೆ. ಈ ಮೂಲಕ ಶಿವ ಹಾಗೂ ದೇವ್ ಹುಟ್ಟುಹಾಕಿದ ಸಿಎಸ್‌ಜಿ ಚಟುವಟುಕೆಯಿಂದ ಕೂಡಿದೆ.

ಸಂಪನ್ಮೂಲ ಹಾಗೂ ಸವಾಲುಗಳು

ಆರ್ಥಿಕ ಆಯಾಮವನ್ನು ಪರಿಗಣಿಸುವುದಾದರೆ ಸಿಎಸ್‌ಜಿ ಪಾದಾರ್ಪಣೆಯ ಹಂತದಲ್ಲಿದೆ. ದೇವ್ ಹೇಳುವಂತೆ ಆರ್ಥಿಕವಾಗಿ ಸಬಲೀಕರಣ ಹೊಂದಬೇಕಾದರೆ ಅವರಿಗೆ ಬದ್ಧತೆ ಇರುವ ಸಹಭಾಗಿ ಸಂಸ್ಥೆಗಳ ಅಗತ್ಯವಿದೆ. ಜೊತೆಗೆ ಆದಾಯ ಮಾದರಿಯನ್ನು ಸೂಕ್ತವಾಗಿ ಮಾರ್ಗದರ್ಶಿಸಬೇಕಾದ ಸಂಸ್ಥೆಗಳು ಸಿಎಸ್‌ಜಿ ಜೊತೆ ಕೈಜೋಡಿಸಬೇಕಿದೆ. ಸಿಎಸ್‌ಜಿಯ ದೀರ್ಘಕಾಲಿಕ ಗಮ್ಯ ಅದರ ಸಮರ್ಥ ಹಾಗೂ ಸಕಾರಾತ್ಮಕ ಆದಾಯದ ಮಾದರಿಯ ಮೇಲೆ ಅವಲಂಬಿತವಾಗಿದೆ.

ತಮ್ಮ ಮುಂದಿರುವ ಮಹತ್ತರ ಸವಾಲುಗಳನ್ನು ಗುರುತಿಸಿರುವ ದೇವ್ ಕೌಶಲ್ಯ ಹಾಗೂ ಪರಿಣಿತಿ ಹೊಂದಿರುವ ತಂಡದ ತರಬೇತಿ ಹಾಗೂ ನಿರ್ಮಾಣ ಅತೀಮುಖ್ಯ ಎಂದಿದ್ದಾರೆ. ಪ್ರತಿವರ್ಷ ನೇಮಕಾತಿ ಮಾಡಿಕೊಳ್ಳುವ ಮತ್ತು ಪದವಿ ಮುಗಿಸಿ ಹೊರಬಂದ ವಿದ್ಯಾರ್ಥಿಗಳಿಗೆ ಈ ಕೌಶಲ್ಯಗಳ ಸಮರ್ಪಕ ತರಬೇತಿ ನೀಡಿ ವೃತ್ತಿಪರತೆ ಹಾಗೂ ಅನುಭವಗಳನ್ನು ಹೇಳಿಕೊಡಬೇಕಾಗಿದೆ. ಇದು ಸಿಎಸ್‌ಜಿಯ ಅಭಿವೃದ್ಧಿ ಮಾನದಂಡದಲ್ಲೊಂದಾಗಿದೆ.

ಅವರಿಬ್ಬರೂ ಹೇಳುವಂತೆ ವಿದ್ಯಾರ್ಥಿ ಸಮುದಾಯಕ್ಕೆ ವಿಶ್ವದ ಅಸಂಖ್ಯಾತ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿ ಸಲಹೆ ಸೂಚನೆ ನೀಡುವುದು ನಿಜಕ್ಕೂ ಉತ್ಸಾಹಕಾರಿ ಕೆಲಸವಾಗಿದೆ. ಇದರಿಂದ ಆ ವಿದ್ಯಾರ್ಥಿಗಳ ಯೋಚನಾವ್ಯಾಪ್ತಿ ವಿಸ್ತಾರಗೊಳ್ಳುವುದರ ಜೊತೆಗೆ ಅವರ ಭವಿಷ್ಯದ ಆಯ್ಕೆಗಳನ್ನು ನಿರ್ಧರಿಸಿಕೊಳ್ಳಲು ಸಹಾಯಕವಾಗುತ್ತಿದೆ. ಸಾಮಾಜಿಕ ಹಾಗೂ ಕಾರ್ಪೋರೇಟ್ ವಲಯದಲ್ಲಿ ಮತ್ತಷ್ಟು ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳುವ ಆಶಯ ದೇವ್ ಹಾಗೂ ಶಿವ ಹೊಂದಿದ್ದಾರೆ.

ಸಣ್ಣ ಪುಟ್ಟ ಎನ್‌ಜಿಓಗಳು ಹಾಗೂ ಸಾಮಾಜಿಕ ಸೇವಾ ಸಂಸ್ಥೆಗಳಿಗೆ ಅತ್ಯುತ್ತಮ ವೇದಿಕೆ ನಿರ್ಮಿಸಿಕೊಡುವುದು ಇವರಿಬ್ಬರ ಕನಸಾಗಿದೆ. ತನ್ಮೂಲಕ ವೃತ್ತಿಪರರು ಹಾಗೂ ವಿದ್ಯಾರ್ಥಿಗಳನ್ನು ಜೊತೆಯಲ್ಲಿಟ್ಟುಕೊಂಡು ಭಾರತದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ಪರಿಪೂರ್ಣ ಮಾದರಿಯೊಂದನ್ನು ಹುಟ್ಟುಹಾಕುವ ಮಹತ್ವಾಕಾಂಕ್ಷೆಯನ್ನು ಇವರಿಬ್ಬರೂ ಹೊಂದಿದ್ದಾರೆ.