ಉದ್ಯಮಿಗಳನ್ನು ಕೈ ಬೀಸಿ ಕರೆಯುತ್ತಿದೆ ಹಾವೇರಿ

ಟೀಮ್​ ವೈ.ಎಸ್​. ಕನ್ನಡ

0

ರಾಜ್ಯದ ಯಾವುದೇ ಜಿಲ್ಲೆ ತನ್ನದೆಂದು ಹೇಳಿಕೊಳ್ಳಲು ಅಸಾಧ್ಯವಾಗಿರುವ ಒಂದು ಕೃಷಿ ಉತ್ಪನ್ನಕ್ಕೆ ಹಾವೇರಿ ಜಿಲ್ಲೆ ಪಾತ್ರವಾಗಿದೆ. ಅದುವೇ ಬ್ಯಾಡಗಿ ಮೆಣಸಿನ ಕಾಯಿ. ಅದು ಈಗಾಗಲೇ ವಿಶ್ವದಾದ್ಯಂತ ಜನ ಮೆಚ್ಚುಗೆ ಗಳಿಸಿದೆ. ಅದರ ಗುಣಮಟ್ಟವನ್ನು ಮೀರಿಸಲು ಯಾವುದೇ ಮೆಣಸಿನ ತಳಿಗೂ ಸಾಧ್ಯವಾಗಿಲ್ಲ. ಇದು ಹಾವೇರಿಯ ಹೆಗ್ಗಳಿಕೆ

ಹಾವೇರಿ ಜಿಲ್ಲೆಯ ಸಂಕ್ಷಿಪ್ತ ಪರಿಚಯ

ಮುಂಬೈ ಕರ್ನಾಟಕದ ಭಾಗವಾಗಿ ಗುರುತಿಸಲಾಗುತ್ತಿರುವ ಹಾವೇರಿ, ಮುಂಬೈ ಮತ್ತು ಬೆಂಗಳೂರು ಕೈಗಾರಿಕಾ ಪ್ರದೇಶಗಳಿಗೆ ಕೊಂಡಿಯಂತಿದೆ. ಇದರಿಂದ ಸಹಜವಾಗಿಯೇ ಹಲವು ಸವಲತ್ತುಗಳನ್ನು ಪಡೆದಿದೆ. ಇತ್ತೀಚಿನ ದಿನಗಳಲ್ಲಿ ಹಾವೇರಿ ಜಿಲ್ಲೆ ಕೈಗಾರಿಕಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರೂ ಹಾವೇರಿ ಮುಖ್ಯವಾಗಿ ಕೃಷಿ ಕೇಂದ್ರೀತ ಆರ್ಥಿಕ ಚಟುವಟಿಕೆಯ ಜಿಲ್ಲೆಯಾಗಿದೆ. ಆಡಳಿತಾತ್ಮಕ ದೃಷ್ಟಿಯಿಂದ ಹಾವೇರಿ ಜಿಲ್ಲೆಯನ್ನು ಏಳು ತಾಲೂಕುಗಳಾಗಿ ವಿಭಜಿಸಲಾಗಿದೆ. ಪ್ರತಿಯೊಂದು ತಾಲೂಕು ಒಂದೊಂದು ವಿಶೇಷತೆ ಹೊಂದಿದೆ.

ಕೈಗಾರಿಕಾ ಚಿತ್ರಣ

ಇತ್ತೀಚಿನ ದಿನಗಳಲ್ಲಿ ಮೂಲ ಸೌಲಭ್ಯ ಕ್ಷೇತ್ರದಲ್ಲಿ ಬೆಳವಣಿಗೆ ದಾಖಲಿಸುತ್ತಿರುವ ಹಾವೇರಿ, ಒಂದು ಮೆಗಾ ಕೈಗಾರಿಕೆ ಮತ್ತು 9 ಮಧ್ಯಮ ಮತ್ತು ದೊಡ್ಡ ಕೈಗಾರಿಕೆಗಳನ್ನು ಹೊಂದಿದೆ. ಕೃಷಿ ಸಂಬಂಧಿತ ಕೈಗಾರಿಕೆಗಳ ಸಂಖ್ಯೆ ಹೆಚ್ಚಾಗಿದೆ. ಮೆಣಸಿನ ಕಾಯಿ ಸಂಸ್ಕರಣೆ ಸೇರಿದಂತೆ ಈ ಕ್ಷೇತ್ರದಲ್ಲಿ ಉದ್ಯೋಗದ ಅವಕಾಶ ಹೆಚ್ಚಾಗಿದೆ. ಅದೇ ರೀತಿ ಈ ವಲಯಕ್ಕೆ ಬಂಡವಾಳ ಹೆಚ್ಚಿನ ಸಂಖ್ಯೆಯಲ್ಲಿ ಹರಿದು ಬರುತ್ತಿದೆ.

ಬ್ಯಾಡಗಿ ಮೆಣಸಿನ ಕಾಯಿ ಮಹಿಮೆ..!

ಯಾವುದೇ ವಿಷಯದ ಬಗ್ಗೆ ದಿನವಿಡಿ ಚರ್ಚೆ ನಡೆಸಲು ಸಾಧ್ಯವಿದ್ದರೇ ಅದುವೇ ಬ್ಯಾಡಗಿ ಮೆಣಸಿನ ಕಾಯಿ. ಇದು ಅಲ್ಲಿನ ಜನರ ಜೀವನದಲ್ಲಿ ಇನ್ನಿಲ್ಲದ ಪ್ರಭಾವ ಬೀರಿದೆ. ಬ್ಯಾಡಗಿ ಮೆಣಿಸಿನ ಕಾಯಿ ಹಾವೇರಿ ಬದುಕನ್ನು ಕಲ್ಪಿಸಲು ಸಾಧ್ಯವಿಲ್ಲ. ಈ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಆಧುನಿಕ ತಂತ್ರಜ್ಞಾನದ ಬಳಕೆಯಾಗುತ್ತಿದೆ. 120 ಎಕರೆಯಲ್ಲಿ ಸ್ಪೈಸ್ ಪಾರ್ಕ್ ಸ್ಥಾಪನೆಗೆ ಚಿಂತನೆ ನಡೆಸಲಾಗಿದ್ದು, ಇದು ಜಿಲ್ಲೆಯ ಕೈಗಾರೀಕರಣದ ಚಿತ್ರಣವನ್ನೇ ಬದಲಾಯಿಸಲಿದೆ.

ಬಂಡವಾಳ ಹೂಡಿಕೆಗೆ ಹಲವು ಆಯ್ಕೆ

ಹಾವೇರಿಯಲ್ಲಿ ಬಂಡವಾಳ ಹೂಡಿಕೆಗೆ ಉತ್ತಮ ಅವಕಾಶ ಇದೆ. ಮೆಣಸಿನ ಕಾಯಿಯ ಜೊತೆ ಜೊತೆಗೆ ಕೃಷಿ ಸಂಬಂಧಿತ ಇನ್ನಿತರ ಕ್ಷೇತ್ರದಲ್ಲಿ ಕೂಡ ಜನರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕುಕ್ಕಟ ಉದ್ಯಮ ಇದರಲ್ಲಿ ಪ್ರಮುಖವಾಗಿದೆ. ಅದೇ ರೀತಿ ಕ್ಷೀರೋದ್ಯಮ ಕೂಡ ಜಿಲ್ಲೆಯ ಜನರ ಆರ್ಥಿಕ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡಿದೆ.

ನೀರಿನ ಮೂಲ - ಕೈಗಾರಿಕೆಗಳಿಗೆ ವರದಾನ

ಮೂರು ಪ್ರಮುಖ ನದಿಗಳು ಹಾವೇರಿ ಜಿಲ್ಲೆಯ ನೀರಿನ ಪ್ರಮುಖ ಮೂಲಗಳಾಗಿವೆ. ಇದು ಕೈಗಾರಿಕೆಗಳ ಬೇಡಿಕೆ ಈಡೇರಿಸಲು ಕೂಡ ನೆರವಾಗಲಿದೆ. ಜಿಲ್ಲೆಯ ಫಲವತ್ತಾದ ಮಣ್ಣು, ಕೃಷಿ ಚಟುವಟಿಕೆಗೆಗೆ ಹೇಳಿ ಮಾಡಿಸಿದ್ದಾಗಿದೆ. ಅತ್ಯುನ್ನತ ಗುಣಮಟ್ಟದ ಹತ್ತಿಗೆ ಹಾವೇರಿ ಹೆಸರುವಾಸಿಯಾಗಿದೆ. ಇದರಿಂದಾಗಿ ಬಟ್ಟೆ ಉದ್ಯಮಕ್ಕೆ ಸಂಬಂಧಿಸಿದ ಹಲವು ಮಿಲ್ ಗಳು ಇಲ್ಲಿ ಕಾರ್ಯಾರಂಭಿಸಿವೆ. ಹಾವೇರಿ ಐದು ಕೈಗಾರಿಕಾ ಎಸ್ಟೇಟ್ ಗಳನ್ನು ಹೊಂದಿದ್ದು, ಆರ್ಥಿಕ ಚಟುವಟಿಕೆಯ ವೇಗ ಹೆಚ್ಚಿಸಲು ನೆರವಾಗಿದೆ.

ಮಾನವ ಸಂಪನ್ಮೂಲ

ಒಂದು ಮೆಡಿಕಲ್ ಕಾಲೇಜು ಸೇರಿದಂತೆ ಉತ್ತಮ ಶಿಕ್ಷಣ ಮಟ್ಟ ಖಾತರಿಪಡಿಸುವ ಹಲವು ಶಿಕ್ಷಣ ಸಂಸ್ಥೆಗಳ ತವರು ಜಿಲ್ಲೆ ಹಾವೇರಿಯಾಗಿದೆ. ಇದು ಕೈಗಾರಿಕೆಗಳ ಬೇಡಿಕೆ ಈಡೇರಿಸುತ್ತಿದೆ. ಒಟ್ಟಿನಲ್ಲಿ ಬಂಡವಾಳ ಹೂಡಿಕೆಗೆ ಹಾವೇರಿ ಅತ್ಯುತ್ತಮ ಜಿಲ್ಲೆಯಾಗಿ ಹೊರಹೊಮ್ಮಿದೆ.

Related Stories