ಮಾಲಿನ್ಯದಿಂದ ಮುಕ್ತಿಗಾಗಿ 'ಸಮ-ಬೆಸ' ಸೂತ್ರ - 'ಆಪ್' ಸರ್ಕಾರದ ಮಾದರಿ ಆಡಳಿತ!

ಟೀಮ್​ ವೈ.ಎಸ್​.

ಮಾಲಿನ್ಯದಿಂದ ಮುಕ್ತಿಗಾಗಿ 'ಸಮ-ಬೆಸ' ಸೂತ್ರ - 'ಆಪ್' ಸರ್ಕಾರದ ಮಾದರಿ ಆಡಳಿತ!

Monday January 11, 2016,

3 min Read

ಪ್ರಚಾರಕರು ಮತ್ತು ಕುರುಡು ವಿಮರ್ಷಕರು ಕೆಲ ಕಾಲ ಬಾಯಿ ಮುಚ್ಚಿಕೊಂಡಿರುತ್ತಾರೆ ಅನ್ನೋ ನಿರೀಕ್ಷೆಯಿದೆ. ಎಎಪಿ ಸರ್ಕಾರ ಪ್ರತಿಭಟನೆಯಲ್ಲಿ ಸೂಪರ್, ಆದ್ರೆ ಆಡಳಿತದಲ್ಲಿ ಸೊನ್ನೆ ಎಂಬಂತೆ ಪ್ರತಿಬಿಂಬಿಸಲು ಪ್ರಯತ್ನಿಸಿದವರೂ ಇದ್ದಾರೆ. ಅತ್ಯಂತ ಮಹತ್ವಾಕಾಂಕ್ಷಿ ಸಾರ್ವಜನಿಕ ಯೋಜನೆಯನ್ನು ಜಾರಿ ಮಾಡುವ ಮೂಲಕ ಆಪ್ ಸರ್ಕಾರ ಅವರ ಬಾಯಿ ಮುಚ್ಚಿಸಿದೆ. ಮಾಲಿನ್ಯ ನಿಯಂತ್ರಣಕ್ಕಾಗಿ ಎಎಪಿ ಸರ್ಕಾರ ಸಮ-ಬೆಸ ಸಂಖ್ಯೆ ಸೂತ್ರವನ್ನು ಅಳವಡಿಸಿದಾಗ ದೆಹಲಿಯ ಜನತೆ ಅದನ್ನು ಅಷ್ಟೇನೂ ಖುಷಿಯಾಗಿ ಸ್ವಾಗತಿಸಲಿಲ್ಲ. ಕಳೆದ ಕೆಲವು ದಿನಗಳಿಂದ ಮೆಟ್ರೋ ಸವಾರಿ ಮಾಡುತ್ತಿರುವ ನಾನು ಹಲವು ಸಾರ್ವಜನಿಕರಿಂದ ಈ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಅವರೆಲ್ಲರೂ ಸಮ-ಬೆಸ ಸೂತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಕೆಲವರು ಬಹಿರಂಗವಾಗಿ ಈ ದಿಟ್ಟ ನಿರ್ಧಾರವನ್ನು ಶ್ಲಾಘಿಸಿದ್ದಾರೆ, ಆಪ್ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಜನರ ಅಭೂತಪೂರ್ವ ಬೆಂಬಲವಿಲ್ಲದೆ ಈ ಕಾರ್ಯ ಅಸಾಧ್ಯ ಹಾಗಾಗಿ, ದೆಹಲಿ ಜನತೆಗೆ ಥ್ಯಾಂಕ್ಸ್ ಹೇಳಲೇಬೇಕು.

image


ದೆಹಲಿಯನ್ನು ಹೈಕೋರ್ಟ್ ಗ್ಯಾಸ್ ಚೇಂಬರ್ ಎಂದು ಕರೆದಾಗ್ಲೇ, ರಾಷ್ಟ್ರರಾಜಧಾನಿಯನ್ನು ಮಾಲಿನ್ಯ ಮುಕ್ತ ಮಾಡಬೇಕೆಂಬ ಸವಾಲನ್ನು ಎಎಪಿ ಸರ್ಕಾರ ಸ್ವೀಕರಿಸಿತ್ತು. ಸಮ-ಬೆಸ ಸೂತ್ರ ಮಾತ್ರವಲ್ಲ, ಪ್ರತಿ ತಿಂಗಳ 22ರಂದು ಮಾಲಿನ್ಯ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ `ಕಾರ್ ಫ್ರೀ ಡೇ ಕ್ಯಾಂಪೇನ್' ಅನ್ನು ಆಯೋಜಿಸುತ್ತಿದೆ. ಇದು ತುರ್ತು ಸಂದರ್ಭವಾಗಿದ್ರಿಂದ ಸರ್ಕಾರ ತೀವ್ರಗತಿಯ ಯೋಜನೆಗಳನ್ನು ಹಮ್ಮಿಕೊಳ್ಳಲೇಬೇಕಾದ ಅನಿವಾರ್ಯತೆಯಿದೆ. ಇದು ನಮ್ಮ ನಿಮ್ಮೆಲ್ಲರ ಆರೋಗ್ಯದ ಪ್ರಶ್ನೆ, ಸರ್ಕಾರ ಮೃದು ಧೋರಣೆ ತಳೆದ್ರೆ ಮುಂದಿನ ಪೀಳಿಗೆಗೆ ದ್ರೋಹ ಬಗೆದಂತಾಗುತ್ತದೆ. ಸಮ-ಬೆಸ ಸೂತ್ರವನ್ನು ಅಳವಡಿಸಲು ಮುಂದಾದಾಗ, ಅದರಲ್ಲಿ ಅಪಾಯವೇ ಹೆಚ್ಚು, ಈ ಯೋಜನೆ ವಿಫಲವಾಗುತ್ತದೆ ಎಂದವರೇ ಹೆಚ್ಚು. ಇದು ಎಎಪಿ ಸರ್ಕಾರದ ಆಡಳಿತಕ್ಕೆ ಕಪ್ಪು ಚುಕ್ಕೆಯಾಗಲಿದೆ ಅಂತಾನೂ ಕೆಲವರು ಭವಿಷ್ಯ ನುಡಿದಿದ್ದರು. ಆದ್ರೆ ನಮಗೆ, ನಮ್ಮ ಪಕ್ಷದ ಮೇಲೆ, ಸಾಮರ್ಥ್ಯದ ಮೇಲೆ ನಂಬಿಕೆಯಿತ್ತು. ಜನರ ಬೆಂಬಲ ಪಡೆದೇ ತೀರುತ್ತೇವೆಂಬ ವಿಶ್ವಾಸವಿತ್ತು, ನಾವದನ್ನು ಸಾಧಿಸಿ ತೋರಿಸಿದ್ದೇವೆ.

ಸಮ-ಬೆಸ ಸೂತ್ರ ಆಡಳಿತದ ವಿಚಾರದಲ್ಲಿ ಕಟ್ಟು ಕಥೆಗಳನ್ನೆಲ್ಲ ಸುಳ್ಳು ಮಾಡಿದೆ, ಹೊಸ ಮೈಲುಗಲ್ಲನ್ನು ಸ್ಥಾಪಿಸಿದೆ. ಆಪ್ ಸರ್ಕಾರ ಇಂತಹ ದಿಟ್ಟ ನೀತಿಯ ಚೌಕಟ್ಟನ್ನು ವಾಸ್ತವವಾಗಿ ಅರ್ಥಮಾಡಿಕೊಳ್ಳಬಲ್ಲದು ಎಂಬುದು ಸಾಬೀತಾಗಿದೆ. ಸ್ವತಂತ್ರ ಭಾರತದಲ್ಲಿ ಅಭಿವೃದ್ಧಿಗೆ ಎದುರಾಗುವ ಏಕೈಕ ತೊಡುಕೆಂದ್ರೆ ಯೋಜನೆಗಳ ಅನುಷ್ಠಾನ. ಸರ್ಕಾರಗಳು ಅದ್ಭುತ ಯೋಜನೆಗಳನ್ನು ರೂಪಿಸುತ್ತವೆ, ಆದ್ರೆ ಅದನ್ನು ಜಾರಿ ಮಾಡುವಲ್ಲಿ ಎಡವುತ್ತಿವೆ. ಈ ಪರಿಪಾಠವನ್ನು ಸಮ-ಬೆಸ ಯೋಜನೆ ಹುಸಿಗೊಳಿಸಿದೆ. ಈ ಯೋಜನೆಗೆ ವಿವಿಧ ಏಜೆನ್ಸಿಗಳಿಂದಲೂ ಸಹಕಾರ ಬೇಕು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಸರ್ಕಾರ ಅಗತ್ಯವಿರುವ ಎಲ್ಲ ಇಲಾಖೆಗಳೊಂದಿಗೂ ಸಭೆಗಳನ್ನು ನಡೆಸಿದೆ, ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದೇವೆ.

ಜನರ ಬೆಂಬಲವಿಲ್ಲದೆ ಈ ನಿಯಮ ಯಶಸ್ವಿಯಾಗಲು ಸಾಧ್ಯವಿಲ್ಲ ಅನ್ನೋದು ನಮಗೆ ಅರಿವಿದೆ. ಇದು ತಮಗಾಗಿಯೇ ಮಾಡಿದ ನಿಯಮ, ಅವರ ಆರೋಗ್ಯಕ್ಕಾಗಿ, ಕುಟುಂಬ ಮತ್ತು ಮಕ್ಕಳಿಗಾಗಿ, ಮುಂದಿನ ಪೀಳಿಗೆಯ ಒಳಿತಿಗಾಗಿ ಅನ್ನೋದನ್ನು ಜನರು ಅರ್ಥಮಾಡಿಕೊಳ್ಳಬೇಕಿದೆ. ಶ್ರೀಮಂತನಾಗಿರಲಿ, ಬಡವನಾಗಿರಲಿ, ಯುವಕರಾಗ್ಲಿ, ವೃದ್ಧರಾಗ್ಲಿ, ಮಕ್ಕಳೇ ಆಗಿರಲಿ ಮಾಲಿನ್ಯ ಪ್ರತಿಯೊಬ್ಬರಿಗೂ ಅನಾರೋಗ್ಯವನ್ನು ಹೊತ್ತು ಬರುತ್ತಿದೆ. ಈ ಸಂದೇಶವನ್ನು ಪ್ರತಿಯೊಬ್ಬರಿಗೂ ತಲುಪಿಸಿದ ಮಾಧ್ಯಮಗಳಿಗೆ ಧನ್ಯವಾದ ಹೇಳಲೇಬೇಕು. ಸಮ-ಬೆಸ ಸೂತ್ರ ಎಲ್ಲೆಡೆ ಚರ್ಚೆಯ ವಿಷಯವಾಗಿತ್ತು. ಈ ಯೋಜನೆಯ ಸಾಧಕ ಬಾಧಕಗಳ ಬಗ್ಗೆ, ವಿಸ್ತ್ರತ ಚರ್ಚೆ ನಡೆದಿದೆ.

ಒಂದು ವಿಚಾರವನ್ನು ನಾನು ನಿಮ್ಮ ಹೊತೆ ಹಂಚಿಕೊಳ್ಳಲೇಬೇಕು. ಕಳೆದ ತಿಂಗಳು ಸರ್ಕಾರಿ ಅಧಿಕಾರಿಗಳು ಮತ್ತು ಸಚಿವರೊಂದಿಗೆ ನಡೆದ ಸಭೆಯಲ್ಲಿ ಈ ಯೋಜನೆಯನ್ನು ಇನ್ನಷ್ಟು ಉತ್ತಮಪಡಿಸಬೇಕೆಂಬ ಸಲಹೆ ಕೇಳಿ ಬಂದಿತ್ತು. ಆದ್ರೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇದನ್ನು ಒಪ್ಪಿರಲಿಲ್ಲ, ಚರ್ಚೆಗಳು ನಡೆಯಲಿ, ಸರ್ಕಾರಕ್ಕೆ ಇನ್ನಷ್ಟು ಉತ್ತಮ ಸಲಹೆಗಳು ಬರಲಿ, ತರಾತುರಿ ಬೇಡ ಎಂದಿದ್ದರು. ಈ ಚರ್ಚೆ, ಸರ್ಕಾರ ಜನರ ಜೊತೆಗಿದೆ ಅನ್ನೋ ನಂಬಿಕೆಯನ್ನು ಮೂಡಿಸಿದೆ. ಸಮಾಜದ ಎಲ್ಲ ವರ್ಗದವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸರ್ಕಾರಕ್ಕೆ ನೆರವಾಗಿದೆ. ಸಮ-ಬೆಸ ಸೂತ್ರವನ್ನು ಪಾಲಿಸಲು ಜನರು ಕೂಡ ಮಾನಸಿಕವಾಗಿ ಸಿದ್ಧರಾಗಿದ್ದರು. ದೆಹಲಿ ಸರ್ಕಾರದ ಬದಲು ದೆಹಲಿಯ ಜನತೆಯೇ ಸಮ-ಬೆಸ ಯೋಜನೆಯ ಹೊಣೆ ಹೊತ್ತಿದ್ದಾರೆ. ಜನರು ಯೋಜನೆಗಳಲ್ಲಿ ತೊಡಗಿಕೊಂಡ್ರೆ ಯಶಸ್ಸು ಅಸಾಧ್ಯವಲ್ಲ ಅನ್ನೋದಕ್ಕೆ ಇದೇ ಸಾಕ್ಷಿ, ಎಲ್ಲ ಸರ್ಕಾರಗಳಿಗೂ ಇದೊಂದು ಪಾಠ.

ಎಎಪಿ ನುಡಿದಂತೆ ನಡೆದಿದೆ ಅನ್ನೋದನ್ನು ಸಮ-ಬೆಸ ಸೂತ್ರ ಸಾಬೀತುಪಡಿಸಿದೆ. ನಮ್ಮ ಉದ್ದೇಶ ಪ್ರಾಮಾಣಿಕವಾದದ್ದು ಅನ್ನೋದಕ್ಕೆ ಇದೇ ಸಾಕ್ಷಿ. ನಾವು ಯಾರ ಜೊತೆಗೂ ಹೋಲಿಕೆ ಮಾಡಿಕೊಳ್ಳಲು ಇಚ್ಛಿಸುವುದಿಲ್ಲ. ಆದ್ರೆ ಕಳೆದ 20 ತಿಂಗಳುಗಳಲ್ಲಿ ಮೋದಿ ಸರ್ಕಾರ ಕೈಗೊಂಡ ಬೃಹತ್ ಯೋಜನೆಗಳ ಸ್ಥಿತಿ ಏನಾಗಿದೆ ಅನ್ನೋದನ್ನು ನೀವೇ ನೋಡಿ. ಸ್ವಚ್ಛ ಭಾರತ ಅಭಿಯಾನ ನಿಜಕ್ಕೂ ಒಳ್ಳೆಯ ಯೋಜನೆ, ಎಲ್ಲೆಡೆ ಇದಕ್ಕೆ ಬೆಂಬಲ ಕೂಡ ದೊರೆತಿತ್ತು, ಆದ್ರೂ ಯಶಸ್ವಿಯಾಗಿಲ್ಲ. ಮಾಧ್ಯಮಗಳ ಈವೆಂಟ್ ಆಗಿ, ಪ್ರಚಾರ ತಂತ್ರವಾಗಷ್ಟೆ ಉಳಿದುಕೊಂಡಿದೆ. ಜನರ ಕೋಟ್ಯಾಂತರ ರೂಪಾಯಿ ಹಣ ಜಾಹೀರಾತಿಗೆ ವ್ಯರ್ಥವಾಗಿದೆ, ಪ್ರಯೋಜನ ಮಾತ್ರ ಶೂನ್ಯ. 'ಡಿಜಿಟಲ್ ಇಂಡಿಯಾ', 'ಮೇಕ್ ಇನ್ ಇಂಡಿಯಾ' ಯೋಜನೆಗಳ ಹಣೆಬರಹ ಕೂಡ ಇಷ್ಟೇ, ಅವುಗಳ ಬಗೆಗೂ ಜನರಿಗೆ ವಿಶ್ವಾಸವಿಲ್ಲ.

ಒಳ್ಳೆಯ ಆರಂಭ ಸಿಕ್ಕಿದೆ, ಆದ್ರೆ ಮುಂದಿರುವುದು ಕಠಿಣ ಹಾದಿ ಅನ್ನೋ ಅರಿವು ನಮಗಿದೆ. ನಾವೆಲ್ಲ ಒಟ್ಟಾಗಿ ದೆಹಲಿಯನ್ನು ಮಾಲಿನ್ಯ ಮುಕ್ತವನ್ನಾಗಿ ಮಾಡಬೇಕು. ಜನವರಿ 15ರ ನಂತರ ಸಮ-ಬೆಸ ಸೂತ್ರದ ಆಗುಹೋಗುಗಳ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಲಿದೆ. ಅಗತ್ಯ ಬಿದ್ದಲ್ಲಿ ಬದಲಾವಣೆಗಳನ್ನು ಕೂಡ ಮಾಡಲಾಗುತ್ತದೆ. ಉತ್ತಮ ಸಮಾಜಕ್ಕಾಗಿ ಇನ್ನಷ್ಟು ದಿಟ್ಟ ಯೋಜನೆಗಳನ್ನೂ ಹಮ್ಮಿಕೊಳ್ಳಲು ಸರ್ಕಾರ ಸಿದ್ಧ. ಸ್ವಚ್ಛ ಗಾಳಿಯುಳ್ಳ, ಮಕ್ಕಳಿಗೆ ಉಸಿರಾಟದ ಸಮಸ್ಯೆ ಎದುರಾಗದಂತಹ, ಹಿರಿಯ ನಾಗರೀಕರು ಮಾಸ್ಕ್ ನೆರವಿಲ್ಲದೆ ಆರಾಮಾಗಿ ಹೋಗಬಲ್ಲ ಉತ್ತಮ ಸಮಾಜದ ನಿರ್ಮಾಣವೇ ನಮ್ಮ ಗುರಿ. ಸಮ-ಬೆಸ ಯೋಜನೆ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ, ಹೊಸ ಕ್ರಾಂತಿಗೆ ನಾಂದಿ ಹಾಡಿದೆ, ಒಳ್ಳೆಯ ಆಡಳಿತಕ್ಕೆ ಮಾದರಿಯಾಗಿದೆ. ಜನರು ಕೈಜೋಡಿಸಿದ್ರೆ ಯಾವುದೂ ಅಸಾಧ್ಯವಲ್ಲ ಅನ್ನೋದಕ್ಕೆ ಇದೊಂದು ನಿದರ್ಶನ. ಸದ್ಯದಲ್ಲೇ ದೆಹಲಿ ಮಾಲಿನ್ಯ ಮುಕ್ತ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂಬ ವಿಶ್ವಾಸ ನನಗಿದೆ. ಭಾರತದ ಮೊದಲ ಮಾಲಿನ್ಯ ಮುಕ್ತ ನಗರ ದೆಹಲಿಯೇ ಆಗಬಹುದು.

ಲೇಖಕರು : ಆಶುತೋಷ್​, ಎಎಪಿ ನಾಯಕ