ಸೌರಶಕ್ತಿ – ಮಾಲಿನ್ಯ ಮುಕ್ತಿ - ದೇಶದ ಪ್ರಗತಿಗೆ ಇದುವೆ ಯುಕ್ತಿ...

ಟೀಮ್​​ ವೈ.ಎಸ್​​. ಕನ್ನಡ

ಸೌರಶಕ್ತಿ – ಮಾಲಿನ್ಯ ಮುಕ್ತಿ - ದೇಶದ ಪ್ರಗತಿಗೆ ಇದುವೆ ಯುಕ್ತಿ...

Thursday November 19, 2015,

4 min Read

ಭಾರತ. ಜಗತ್ತಿನ ಎರಡನೇ ಅತೀ ಹೆಚ್ಚು ಜನಸಂಖ್ಯೆ ಇರುವ ದೇಶ. ಅಭಿವೃದ್ಧಿ ಪಥದಲ್ಲಿ ಅತಿ ವೇಗವಾಗಿ ಸಾಗ್ತಿರೋ ರಾಷ್ಟ್ರ ಅಂತಲೂ ಭಾರತವನ್ನು ಗುರುತಿಸಲಾಗುತ್ತೆ. ಆದ್ರೆ ಇಂದಿಗೂ ಕೂಡ ಅದೆಷ್ಟೋ ಗ್ರಾಮಗಳಿಗೆ ವಿದ್ಯುತ್ ಸೌಲಭ್ಯವಿಲ್ಲ. ಲಕ್ಷಾಂತರ ಜನ ಈಗಲೂ ಕತ್ತಲಲ್ಲೇ ದಿನ ದೂಡುವ ದುಸ್ಥಿತಿಯಲ್ಲಿದ್ದಾರೆ. ಆದ್ರೆ ಸ್ವಲ್ಪ ಶ್ರಮ, ಸ್ವಲ್ಪ ಹಣ ಹಾಗೂ ಕೊಂಚ ತಲೆ ಉಪಯೋಗಿಸಿದ್ರೆ ಕತ್ತಲಿನಿಂದ ಬೆಳಕಿನೆಡೆ ಸಾಗಬಹುದು ಅನ್ನೋದಕ್ಕೆ ಇಲ್ಲಿ ಎರಡು ಉದಾಹರಣೆಗಳಿವೆ.

ಉದಾಹರಣೆ 1:

ರಜನೀಶ್ ಜೈನ್ ಮತ್ತವರ ಪತ್ನಿ ಹಲವು ವರ್ಷಗಳಿಂದ ಓಶೋ ಕೇಂದ್ರದಲ್ಲಿ ವಾಸಿಸುತ್ತಿದ್ದರು. ಆದ್ರೆ 1996ರಲ್ಲಿ ಅವರಿಗೆ ತಮ್ಮ ಜೀವನದಲ್ಲಿ ಏನಾದ್ರೂ ಅರ್ಥಪೂರ್ಣವಾದುದನ್ನು ಮಾಡಬೇಕು ಅಂತನಿಸಿತು. ಹೀಗಾಗಿಯೇ ಅವರು ಹಿಮಾಲಯಕ್ಕೆ ಬಂದು ಅಲ್ಲಿಯೇ ನೆಲೆಯೂರಿದರು. ಕ್ರಮೇಣ ಅಲ್ಲಿನ ಗ್ರಾಮಗಳಿಗೆ ಭೇಟಿ ಕೊಟ್ಟು ಅಲ್ಲಿನ ಬಡ ಜನರ ದೈನಂದಿನ ಬದುಕು ಹಾಗೂ ಆಗು-ಹೋಗುಗಳ ಬಗ್ಗೆ ಗಮನ ಹರಿಸತೊಡಗಿದರು. 2005ರ ಒಳಗೆ ಉತ್ತರಾಖಂಡದಲ್ಲಿ ಶೇಕಡಾ 85ರಷ್ಟು ಗ್ರಾಮಗಳಿಗೆ ವಿದ್ಯುತ್ ಗ್ರಿಡ್ ಸಂಪರ್ಕ ಕಲ್ಪಿಸಲಾಗಿತ್ತಾದ್ರೂ, ದುಡ್ಡಗಾಡು ಪ್ರದೇಶಗಳು, ಕಳಪೆ ಮೂಲಸೌಕರ್ಯಗಳಿಂದಾಗಿ ನಿರಂತರ ವಿದ್ಯುತ್ ಕಡಿತದ ಸಮಸ್ಯೆ ಎದರಿಸಬೇಕಾಗಿತ್ತು. ಇದರಿಂದಾಗಿ ಅಲ್ಲಿನ ಗ್ರಾಮಸ್ಥರು ತಮ್ಮ ಯಾವುದೇ ಕೆಲಸಗಳಿಗೂ ವಿದ್ಯುತ್ ಮೇಲೆ ನಂಬಿಕೆ ಇಟ್ಟಿರಲಿಲ್ಲ.

image


ಇವತ್ತು ವಿದ್ಯುತ್ ಇಲ್ಲದೆ ಯಾವ ಕೆಲಸಗಳೂ ನಡೆಯುವುದಿಲ್ಲ ಎಂಬುದನ್ನು ಅರಿತ ಜೈನ್ ದಂಪತಿ ‘ಅವನಿ’ ಎಂಬ ಸಂಸ್ಥೆ ಪ್ರಾರಂಭಿಸಲು ನಿರ್ಧರಿಸಿದ್ರು. ಈ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಜನರು ಎದುರಿಸುತ್ತಿರುವ ನಾನಾ ಸಮಸ್ಯೆಗಳಿಗೆ ಪರಿಹಾರ ನೀಡಲು ಮುಂದಾದ್ರು. 25 ಹಳ್ಳಿಗಳಿಗೆ ಸೌರಶಕ್ತಿಯಿಂದ ವಿದ್ಯುತ್ ಕಲ್ಪಿಸುವುದರೊಂದಿಗೆ ಅವನಿಗೆ ಚಾಲನೆ ನೀಡಿತು ಈ ಜೋಡಿ. ‘ಆದ್ರೆ ಏನೇ ಮಾಡಿದ್ರೂ ಅದನ್ನು ವಿಭಿನ್ನವಾಗಿ ಮಾಡಬೇಕಾದ ಅನಿವಾರ್ಯದ ಅರಿವು ನಮಗಾಯ್ತು. ಕಾರಣ ಅದಾಗಲೇ ಸರ್ಕಾರ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸಲು ಸಾಕಷ್ಟು ಹಣವನ್ನು ವ್ಯಯಿಸುತ್ತಿತ್ತು. ಆದ್ರೆ ಅದರಿಂದ ಅಷ್ಟಾತಿ ಉಪಯೋಗವಾಗುತ್ತಿರಲಿಲ್ಲ. ಹೀಗಾಗಿಯೇ ಜನರೂ ಕೂಡ ಆರ್ಥಿಕವಾಗಿ ಹಾಗೂ ವೈಯಕ್ತಿಕವಾಗಿ ಪಾಲ್ಗೊಳ್ಳುವಂತಹ ಯೋಜನೆಯನ್ನು ರೂಪಿಸಲು ನಾವು ತೀರ್ಮಾನಿಸಿದೆವು.’ ಅಂತ ಹೇಳಿಕೊಳ್ತಾರೆ ರಜನೀಶ್.

ಅರಣ್ಯ ಪ್ರದೇಶದ ಮಧ್ಯಭಾಗದಲ್ಲಿದ್ದ ಗ್ರಾಮಗಳ ಸುತ್ತ ಪೈನ್ ಮರಗಳು ಹೇರಳವಾಗಿದ್ದವು. ಆದ್ರೆ ನೆಲಕ್ಕೆ ಬಿದ್ದ ಈ ಪೈನ್ ಮರಗಳ ಒಣಗಿದ ಗರಿಗಳಿಂದಾಗಿ ಆಗಾಗ ಕಾಡ್ಗಿಚ್ಚು ಹಬ್ಬುತ್ತಿತ್ತು. ಇದರಿಂದಾಗಿ ಕಾಡಿನ ಹಸಿರು, ಪ್ರಾಣಿಗಳು ಮಾತ್ರವಲ್ಲ ಗ್ರಾಮಸ್ಥರ ಪ್ರಾಣ ಮತ್ತು ಆಸ್ತಿಗಳಿಗೂ ನಷ್ಟವಾಗುತ್ತಿತ್ತು. ‘ಗ್ರಾಮಸ್ಥರು ಹೆಚ್ಚಾಗಿ ಅವಲಂಬಿತರಾಗಿದ್ದ ನೀರು, ಸೌದೆ, ಹುಲ್ಲು, ತೋಟ ಎಲ್ಲವೂ ನಾಶವಾಗುತ್ತಿದ್ದವು. ಹೀಗಾಗಿಯೇ ಪೈನ್ ಮರಗಳು ಹಾಗೂ ಉದುರಿದ ಒಣ ಗರಿಗಳನ್ನು ಉಪಯೋಗಿಸಿಕೊಂಡೇ ಏನಾದ್ರೂ ಮಾಡಬೇಕು ಅಂತ ಐಡಿಯಾ ಮಾಡಿದೆವು. ಕ್ರಮೇಣ ಅವುಗಳನ್ನು ಉಪಯೋಗಿಸಿಕೊಂಡೇ ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆವು. ನಾವು ಹೀಗೊಂದು ಸಾಧನೆ ಮಾಡ್ತೀವಿ ಅಂತ ಯಾರೂ ಅಂದುಕೊಂಡೇ ಇರಲಿಲ್ಲ. ಆದ್ರೆ ನಾವು ಇದನ್ನು ಸಾಧಿಸಿ ತೋರಿಸಿದೆವು’ ಅಂತಾರೆ ರಜನೀಶ್.

ಮೊದಲು ಅವರು ಈ ತಂತ್ರಜ್ಞಾನದ ಮೂಲಕ ಒಣಗಿದ ಪೈನ್ ಗರಿಗಳನ್ನು ಉಪಯೋಗಿಸಿಕೊಂಡು 9 ಕಿಲೋವ್ಯಾಟ್ಸ್ ವಿದ್ಯುತ್ ಉತ್ಪಾದಿಸುವಲ್ಲಿ ಯಶಸ್ವಿಯಾದ್ರು. 1.5 ಕಿಲೋವ್ಯಾಟ್ಸ್‍ನಷ್ಟು ವಿದ್ಯುತ್‍ಅನ್ನು ಈ ವ್ಯವಸ್ಥೆಯೇ ಬಳಸಿಕೊಳ್ಳುತ್ತಿತ್ತು. ಉಳಿದ 7.5 ಕಿಲೋವ್ಯಾಟ್ಸ್ ವಿದ್ಯುತ್‍ಅನ್ನು ಗ್ರಾಮಸ್ಥರಿಗೆ ಲಭ್ಯವಿತ್ತು. ಇದರ ಯಶಸ್ಸಿನಿಂದ ಆತ್ಮವಿಶ್ವಾಸ ಇಮ್ಮಡಿಗೊಂಡಿತ್ತು. ಕ್ರಮೇಣ ಸ್ಥಳೀಯರ ಸಹಾಯದೊಂದಿಗೆ 120 ಕಿಲೋವ್ಯಾಟ್ಸ್ ಉತ್ಪಾದನೆ ಸಾಮಥ್ರ್ಯದ ವ್ಯವಸ್ಥೆಯನ್ನು ಸ್ಥಾಪಿಸಲಾಯ್ತು.

image


ಈ ಜೈವಿಕ ಇಂಧನದಿಂದ ಹಲವು ಉಪಯೋಗಗಳಿವೆ. ‘ನಾವು ಇಂಗಾಲ ಹೊರಸೂಸುವಿಕೆಯನ್ನು ಹಲವು ಪಟ್ಟು ಕಡಿಮೆ ಮಾಡಿದ್ದೇವೆ. ಮೊದಲು ಸ್ವಚ್ಛ ವಿದ್ಯುತ್ ಉತ್ಪಾದಿಸುವುದು, ಹಾಗೂ ಪೈನ್ ಮರದ ಒಣಗಿದ ಗರಿಗಳನ್ನು ಸಂಗ್ರಹಿಸುವ ಮೂಲಕ ಕಾಡ್ಗಿಚ್ಚನ್ನು ತಪ್ಪಿಸುವುದು, ದುಬಾರಿ, ಮಾಲಿನ್ಯಕಾರಕವಾದ ಸೀಮೆ ಎಣ್ಣೆ, ಡೀಸಲ್‍ನಂತಹ ಇಂಧನದ ಬಳಕೆಯನ್ನು ಕಡಿಮೆ ಮಾಡುವ ಮೂಲಕ ನೈಸರ್ಗಿಕವಾಗಿ ವಿದ್ಯುತ್ ಉತ್ಪಾದಿಸುತ್ತಿದ್ದೇವೆ’ ಅಂತಾರೆ ರಜನೀಶ್.

ಇದರಿಂದ ಸುಮಾರು 7,500 ಗ್ರಾಮಸ್ಥರು ಕಾಡ್ಗಿಚ್ಚಿನ ಹಾವಳಿಯಿಂದ ತಪ್ಪಿಸಿಕೊಂಡಿದ್ದಾರೆ. ಸ್ಥಳೀಯರೂ ಕೂಡ ನರೇಗಾದಲ್ಲಿ ಗಳಿಸುವುದಕ್ಕಿಂತ ಹೆಚ್ಚು ಅರ್ಥಾತ್ 20 ರಿಂದ 25 ಸಾವಿರ ರೂಪಾಯಿಯಷ್ಟು ಹಣ ಗಳಿಸುತ್ತಿದ್ದಾರೆ. ಜೊತೆಗೆ ಇಲ್ಲಿನ ಜನ ಪ್ರತಿದಿನ ಸೌದೆ ತರಲು ನಾಲ್ಕಾರು ಕಿಲೋಮೀಟರ್ ನಡೆಯಬೇಕಿತ್ತು. ಆದ್ರೆ ಈಗ ಅವರ ಮನೆಬಾಗಿಲಿಗೇ ವಿದ್ಯುತ್ ಉತ್ಪಾದನೆ ಬಳಿಕ ಉಳಿಯುವ ಪೈನ್ ಮರದ ಸುಟ್ಟ ಇದ್ದಿಲನ್ನು ಸಾಗಿಸಲಾಗುತ್ತಿದೆ. ಈ ಮೂಲಕ ಇಲ್ಲಿ ಕಸದಿಂದ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

ಉದಾಹರಣೆ 2

ಮನೋಜ್ ಸಿನ್ಹಾ. ನ್ಯೂ ಯಾರ್ಕ್‍ನಲ್ಲಿರುವ ಬಿಹಾರ ಮೂಲಕ ಎಲೆಕ್ಟ್ರಿಕಲ್ ಎಂಜಿನಿಯರ್. ತನ್ನ ಹುಟ್ಟೂರಿನ ವಿದ್ಯುತ್ ಸಮಸ್ಯೆಯನ್ನು ನೆನಪಿಸಿಕೊಂಡು ಹಲವು ರಾತ್ರಿಗಳು ಮನೋಜ್‍ಗೆ ನಿದ್ರೆಯೇ ಬರುತ್ತಿರಲಿಲ್ಲ. ‘ನಮ್ಮ ದೇಶದಲ್ಲಿ ಸಾಕಾಗುವಷ್ಟು ವಿದ್ಯುತ್ ಉತ್ಪಾದನೆ ಮಾಡಲಾಗ್ತಿಲ್ಲ. ಭಾರತದ 1.25 ಲಕ್ಷ ಹಳ್ಳಿಗಳ 40 ಕೋಟಿಗೂ ಹೆಚ್ಚು ಜನರು ಈಗಲೂ ವಿದ್ಯುತ್ ಸೌಲಭ್ಯವಿಲ್ಲದೇ ಜೀವನ ಸಾಗಿಸುತ್ತಿದ್ದಾರೆ. ಈ ಮೂಲಕ ನಮ್ಮ ದೇಶ ಅತಿ ಹೆಚ್ಚು ವಿದ್ಯುತ್ ಸೌಲಭ್ಯ ವಂಚಿತ ದೇಶಗಳ ಸಾಲಿನಲ್ಲಿದೆ. ಅದರಲ್ಲಿ ಶೇಕಡಾ 20 ಪ್ರತಿಶತಃ ಜನ ಬಿಹಾರದಲ್ಲಿದ್ದಾರೆ. ವಿದ್ಯುತ್ ಇದ್ದರೂ ಸರಬರಾಜು ಮಾಡುವಲ್ಲಿ ಹಲವು ಸಮಸ್ಯೆಗಳಿವೆ.’ ಅಂತ ಮತ್ತಷ್ಟು ಮಾಹಿತಿ ನೀಡ್ತಾರೆ ಮನೋಜ್.

ಆಗಲೇ ಮನೋಜ್ ತಮ್ಮ ಕೆಲಸದ ಒತ್ತಡದ ನಡುವೆಯೂ ಈ ಸಮಸ್ಯೆಗೊಂದು ಪರಿಹಾರ ನೀಡಲು ತೀರ್ಮಾನಿಸಿದರು. ಆಗ ಅವರೊಂದಿಗೆ ಕಂಪನಿಯೊಂದರ ಸಿಇಒ ಆಗಿದ್ದ ಅವರ ಗೆಳೆಯ ಜ್ಞಾನೇಶ್ ಪಾಂಡೆ ಕೂಡ ತಮ್ಮ ಕೆಲಸವನ್ನೇ ತೊರೆದು ಬಂದು ಮನೋಜ್ ಜೊತೆ ಕೈ ಜೋಡಿಸಿದರು. ‘ಇದು ನನ್ನ ಜೀವನದಲ್ಲಿ ಪ್ರಮುಖ ನಿರ್ಧಾರವಾಗಿತ್ತು. ನಾನು ನ್ಯೂ ಯಾರ್ಕ್‍ನಲ್ಲಿ ಇದ್ದುಕೊಂಡೇ ಕೋಟ್ಯಾಂತರ ರೂಪಾಯಿ ದುಡಿಯಬಹುದಿತ್ತು. ಆದ್ರೆ ನಾನು ಕನಿಷ್ಠ ಪಕ್ಷ ನಾನು ಪ್ರಯತ್ನವನ್ನಾದ್ರೂ ಮಾಡಿದೆ ಅನ್ನೋ ಸಮಾಧಾನ ಸಿಗುತ್ತೆ ಅಂತ ಅದನ್ನೆಲ್ಲಾ ಬಿಟ್ಟು ಭಾರತಕ್ಕೆ ಮರಳಲು ತೀರ್ಮಾನಿಸಿದೆ.’ ಅಂತ ಹೇಳಿಕೊಳ್ಳುತ್ತಾರೆ ಮನೋಜ್.

ಕ್ರಮೇಣ ಮನೋಜ್ ಮತ್ತು ಜ್ಞಾನೇಶ್ ಜೊತೆ ರತ್ನೇಶ್ ಯಾದವ್ ಕೂಡ ಸೇರಿಕೊಂಡರು. ಮೂವರೂ ಸೇರಿ ವಿವಿಧ ತಂತ್ರಜ್ಞಾನಗಳ ಕುರಿತು ಶೋಧನೆ ನಡೆಸತೊಡಗಿದರು. ಕ್ರಮೇಣ ಅನಿಲೀಕರಣವೇ ವಿದ್ಯುತ್ ಸಮಸ್ಯೆಗೆ ಉತ್ತಮ ಪರಿಹಾರ ಅಂತ ತೀರ್ಮಾನಿಸಿದರು. ಅದರಲ್ಲೂ ಕೆಲ ನ್ಯೂನ್ಯತೆಗಳಿದ್ದವು. ಆದ್ರೆ ಅದನ್ನು ಪ್ರಾರಂಭಿಸಿದ್ರೇ ತಾನೆ ಸಮಸ್ಯೆಗಳು ಗೊತ್ತಾಗೋದು. ಕ್ರಮೇಣ ಸಮಸ್ಯೆಗಳನ್ನು ಪರಿಹರಿಸಬಹುದು.

‘ಮೊದಲು ಸೌರ ವಿದ್ಯುತ್ ಪ್ರಾರಂಭಿಸುವ ಯೋಜನೆ ಹಾಕಿಕೊಂಡೆವು. ಆದ್ರೆ ಅದು ತುಂಬಾ ದುಬಾರಿ ಅಂತ ಗೊತ್ತಾಯ್ತು. ಹೀಗಾಗಿಯೇ ಜೈವಿಕ ಅನಿಲವನ್ನು ಉತ್ಪಾದಿಸುವ ಪ್ಲ್ಯಾನ್ ಮಾಡಿದೆವು. ಹೀಗಾದಲ್ಲಿ ನಗರದಿಂದ ಎಂಜಿನಿಯರ್‍ಗಳೇ ಇಲ್ಲಿಗೆ ಬಂದು ಈ ಘಟಕವನ್ನು ನೋಡಿಕೊಳ್ಳಬೇಕು ಅಂತೇನಿರಲಿಲ್ಲ. ಬದಲಿಗೆ ಸ್ಥಳೀಯರೇ ಇದರ ಉಸ್ತುವಾರಿ ವಹಿಸಿಕೊಂಡು ನೋಡಿಕೊಳ್ಳಬಹುದು.’ ಅಂತಾರೆ ಮನೋಜ್.

ಜೈವಿಕ ಅನಿಲ ತಯಾರಿಸಲು ನಮಗೆ ಬಿಹಾರದಲ್ಲಿ ಅಕ್ಕಿ ಹೊಟ್ಟು ಮತ್ತು ತೌಡು ಹೇರಳವಾಗಿ ಲಭ್ಯವಿತ್ತು. ಈ ಮೂಲಕ ಅನಿಲ ಉತ್ಪಾದಿಸುವಲ್ಲಿ ಯಶಸ್ವಿಯಾದೆವು. ಕ್ರಮೇಣ 25 ಕಿಲೋವ್ಯಾಟ್ಸ್ ಸಾಮಥ್ರ್ಯದ 84 ಸಣ್ಣ ಘಟಕಗಳನ್ನು ಸ್ಥಾಪಿಸಿದೆವು. ಇವು ಪ್ರತಿದಿನ 6 ತಾಸಿನಂತೆ, 340 ದಿನಗಳ ಕಾಲ ವಿದ್ಯುತ್ ಉತ್ಪಾದಿಸುತ್ತವೆ. ಪ್ರತಿ ಘಟಕವೂ ಸುಮಾರು 400 ಮನೆಗಳಿಗೆ ವಿದ್ಯುತ್ ಪೂರೈಸುತ್ತವೆ. ಈ ಮೂಲಕ 300 ಹಳ್ಳಿಗಳ 2 ಲಕ್ಷಕ್ಕೂ ಹೆಚ್ಚು ಜನರು ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದಾರೆ. ಇದರಿಂದ 42 ಸಾವಿರ ಲೀಟರ್ ಸೀಮೆ ಎಣ್ಣೆ ಹಾಗೂ 18 ಸಾವಿರ ಲೀಟರ್ ಡೀಸಲ್ ಬಳಕೆ ಕಡಿಮೆಯಾಗಿದೆ. ಈ ಮೂಲಕ ನಿಸರ್ಗದೊಳಗೆ ಸೇರಿ ಸ್ವಚ್ಛ ಗಾಳಿಯನ್ನು ಮಾಲಿನ್ಯಗೊಳಿಸುತ್ತಿತ್ತ 215 ಟನ್‍ನಷ್ಟು ಇಂಗಾಲವೂ ನಿಂತಿದೆ. ಹೀಗೆ ಇಂಗಾಲದ ಹೊರಸೂಸುವಿಕೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದ ಮನೋಜ್ ಮತ್ತು ತಂಡದ ಈ ಯೋಜನೆಗೆ ಯುಎನ್‍ಎಫ್‍ಸಿಸಿಸಿ ಇಂದ ಮಾನ್ಯತೆ ಕೂಡ ದೊರಕಿದೆ. ಅನಿಯಮಿತ ಲೋಡ್ ಶೆಡ್ಡಿಂಗ್ ಮತ್ತು ವಿದ್ಯುತ್ ಕಡಿತದಿಂದ ಹೈರಾಣಾಗಿದ್ದ ಇಲ್ಲಿನ ಗ್ರಾಮಸ್ಥರು ಅದರಿಂದಾಗಿಯೇ ಬಿಲ್‍ಅನ್ನು ಸರಿಯಾಗಿ ಕಟ್ಟುತ್ತಿರಲಿಲ್ಲ. ಆದ್ರೆ ಈಗ ಬೆಳಗ್ಗೆ 8 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಶೇಕಡಾ 95ರಷ್ಟು ಅವಧಿ ಅವರಿಗೆ ವಿದ್ಯುತ್ ಲಭ್ಯವಿರುತ್ತದೆ. ಇದು ಗ್ರಾಮಸ್ಥರಲ್ಲೂ ಸಂತಸ ಉಂಟು ಮಾಡಿದ್ದು, ಈಗ ಅವರು ವಿದ್ಯುತ್ ಬಿಲ್ ಕಟ್ಟುವುದನ್ನು ತಪ್ಪಿಸುತ್ತಿಲ್ಲ’ ಅಂತಾರೆ ಮನೋಜ್.

image


ಪ್ರತಿ ಘಟಕದಲ್ಲೂ ಸುಮಾರು 50 ಮಹಿಳೆಯರಿಗೆ ಉದ್ಯೋಗ ಸೃಷ್ಟಿಸಲಾಗಿದೆ. ಅವರು ಈ ಜೈವಿಕ ಅನಿಲದಿಂದ ಹೊರಬರುವ ತ್ಯಾಜ್ಯದಿಂದ ಊದುಕಡ್ಡಿ ತಯ್ಯಾರಿಸುತ್ತಿದ್ದಾರೆ. ಅದನ್ನು ‘ಗಂಗಾ ಅಗರ್‍ಬತ್ತೀಸ್’ ಬ್ರ್ಯಾಂಡ್‍ನಲ್ಲಿ ಬಿಹಾರದ ನಾನಾ ಭಾಗಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಮೂಲಕ ನಗರ ಪ್ರದೇಶಗಳಿಂದಲೂ ಈ ಗ್ರಾಮಕ್ಕೆ ಹಣ ಹರಿದುಬರುತ್ತಿದೆ. ‘ಮಹಿಳೆಗೆ ಉದ್ಯೋಗ ನೀಡಿದ್ರೆ, ಆ ಕುಟುಂಬದ ಆರ್ಥಿಕ ಸ್ಥಿತಿಗತಿಗಳು ಬದಲಾಗುತ್ತವೆ. ಮಹಿಳಾ ಸಬಲೀಕರಣದಿಂದ ಆಕೆಗೆ ಗೌರವ ಸಿಗುತ್ತದೆ ಹಾಗೂ ಆಕೆ ಬಲಾಢ್ಯಳಾಗುತ್ತಾಳೆ’ ಅಂತ ತಮ್ಮ ಮಾತು ಮುಗಿಸುತ್ತಾರೆ ಮನೋಜ್ ಸಿನ್ಹಾ.

ಲೇಖಕರು: ಬಿಂಜಾಲ್​​ ಷಾ

ಅನುವಾದಕರು: ವಿಶಾಂತ್​​​