ಬೆಂಗಳೂರಲ್ಲೊಬ್ಬ ‘ರೆಡಿ ಟು ಈಟ್’ ಎಕ್ಸ್​​ಪರ್ಟ್..!

ಕೃತಿಕಾ

ಬೆಂಗಳೂರಲ್ಲೊಬ್ಬ ‘ರೆಡಿ ಟು ಈಟ್’ ಎಕ್ಸ್​​ಪರ್ಟ್..!

Thursday December 17, 2015,

3 min Read

image


ಈಗ ಎಲ್ಲರದ್ದೂ ಬ್ಯುಸಿ ಶೆಡ್ಯೂಲ್. ಗಂಡ ಮನೆಗೆ ಬರುವ ಸಮಯಕ್ಕೆ ಹೆಂಡತಿ ಕೆಲಸಕ್ಕೆ ಹೊರಟರೆ, ಹೆಂಡತಿ ಕೆಲಸ ಮುಗಿಸಿ ಮನೆಗೆ ಬರುವ ಹೊತ್ತಲ್ಲಿ ಗಂಡ ಕೆಲಸಕ್ಕೆ ಹೊರಡುವ ಕಾಲ. ಇದರ ಜೊತೆಗೆ ದುಡಿಮೆಯ ಹಿಂದೆ ಬಿದ್ದಿರುವ ಯುವ ಸಮೂಹ. ಈ ಎಲ್ಲರದ್ದೂ ಒಂದೇ ಆರ್ತನಾದ..! ಉತ್ತಮ ಗುಣಮಟ್ಟದ ರುಚಿಕರ ಆಹಾರ ಸಿಗುತ್ತಿಲ್ಲ ಅನ್ನೋದು. ಗುಣಮಟ್ಟ, ರುಚಿ ಎರೆಡೂ ಇದ್ದರೆ ಅದು ಆರೋಗ್ಯಕರವಾಗಿರಬೇಕಲ್ಲ. ಅದಕ್ಕಾಗಿಯೇ ಇಲ್ಲೊಂದು ರಡಿ ಟು ಈಟ್ ಬ್ರಾಂಡ್ ಇದೆ ‘ಸಂಕೇತಿಸ್ ಅಡುಕಲೆ’. ‘ಸಂಕೇತಿಸ್ ಅಡುಕಲೆ' ಅನ್ನೋ ಬ್ರಾಂಡ್ ಈಗ ರೆಡಿ ಟು ಈಟ್ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿಬರುವ ಹೆಸರು. ಸಂಕೇತಿಸ್ ಅಡುಕಲೆ ಅನ್ನೋ ಬ್ರಾಂಡ್ ನ ಹಿಂದಿರಿವ ಹೆಸರು ರವೀಂದ್ರ.

image


ಇಂದಿನ ಜನರಿಗೆ ಮನೆಯಲ್ಲಿ ಅಡುಗೆ ಮಾಡಲು ಸಮಯವೇ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಉದ್ಯೋಗಸ್ಥ ದಂಪತಿಗಳು, ಬ್ಯಾಚುಲರ್ ಗಳು, ಐಟಿ ಬಿಟಿ ಮಂದಿಗೆ ರುಚಿಯುಕ್ತ ಮತ್ತು ಆರೋಗ್ಯಕಾರಿ ಆಹಾರಗಳನ್ನು ರೆಡಿ ಟು ಈಟ್ ಸ್ಥಿತಿಯಲ್ಲಿ ನೀಡಬೇಕು ಅನ್ನೊ ಕಾರಣದಿಂದ ನಾನು ಈ ಸಂಕೇತಿಸ್ ಅಡುಕಲೆ ಆರಂಭಿಸಿದೆ ಅಂತಾರೆ ರವೀಂದ್ರ.

image


ಮೈಸೂರು ಮೂಲದವರಾದ ರವೀಂದ್ರ ಅವರ ತಂದೆ ಶಿಕ್ಷಕ. ತಾಯಿ ಗೃಹಿಣಿ. ಮಧ್ಯಮವರ್ಗದ ಕೂಡು ಕುಟುಂಬದಲ್ಲಿ ಜನಿಸಿದ ಅವರಲ್ಲಿ ಬಾಲ್ಯದಲ್ಲಿ ಆಸಕ್ತಿಯಿದ್ದದ್ದು ಕೃಷಿಯತ್ತ. ಜತೆಗೆ ಓಡಾಟದ ಹುಚ್ಚು. ಬಿ.ಎಸ್ಸಿ ಪದವಿ ಬಳಿಕ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಬಹುರಾಷ್ಟ್ರೀಯ ಆಹಾರ ಉತ್ಪನ್ನ ಕಂಪೆನಿಯೊಂದರಲ್ಲಿ ರವೀಂದ್ರ ದಕ್ಷಿಣ ಭಾರತದ ಪ್ರಾದೇಶಿಕ ವಿಭಾಗದ ಮುಖ್ಯಸ್ಥರಾಗಿದ್ದವರು. ಕೈತುಂಬಾ ಸಂಬಳವೇನೋ ಇತ್ತು. ಆದ್ರೆ ಮನಸ್ಸಿಗೆ ತೃಪ್ತಿಯಿರಲಿಲ್ಲ ಅಷ್ಟೆ. ನಮ್ಮ ದೇಶದ ರುಚಿಕರ ಆಹಾರ ಪದಾರ್ಥಗಳ ಬದಲಿಗೆ ಪರದೇಶದ ನ್ಯೂಡಪ್ಸ್, ಪಿಜ್ಜಾ, ಬರ್ಗರ್ ತಯಾರಿಸುತ್ತಿದ್ದದ್ದು ರವೀಂದ್ರ ಅವರಿಗೆ ಬೇಸರ ತರಿಸಿತ್ತು. ದೇಶೀಯ ಘಮವಿರುವ ಆಹಾರ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡಿದರೆ ಹೇಗೆ ಅನ್ನೋ ಯೋಜನೆ ಹೊಳೆದದ್ದೇ ತಡ, ನೆನಪಾಗಿದ್ದು ಅಮ್ಮ ಮಾಡುತ್ತಿದ್ದ ಅಡುಗೆ. ಏನನ್ನಾದರೂ ಸಾಧಿಸಬೇಕು ಅಂದುಕೊಂಡವರಿಗೆ ಅಮ್ಮ ಮಾಡುತ್ತಿದ್ದ ಅಡುಗೆಯೇ ಸ್ಫೂರ್ತಿಯಾಗಿತ್ತು.

image


ಹಾಗೆ ಆರಂಭವಾದ‘ಸಂಕೇತಿಸ್ ಅಡುಕಲೆ’ ಬ್ರಾಂಡ್ ಇವತ್ತು ಮೂವತ್ತಕ್ಕೂ ಹೆಚ್ಚು ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದೆ. ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು ಮುಂತಾದ ಕುರುಕಲು ತಿಂಡಿಗಳು, ಸಾಂಬಾರ್, ರಸಂ, ಪುಳಿಯೋಗರೆ, ವಾಂಗಿಬಾತ್, ಗೊಜ್ಜಿನ ಪುಡಿ ಮುಂತಾದ ಮಸಾಲಾ ಪುಡಿಗಳು ಹಾಗೂ ಉಪ್ಪಿಟ್ಟು, ಗೊಜ್ಜವಲಕ್ಕಿ, ಖಾರಾಬಾತ್, ಅವಲಕ್ಕಿ ಬಿಸಿ ನಿಂಬೆ ಬಾತ್ ಹೀಗೆ ‘ರೆಡಿ ಟು ಈಟ್’ ಮಿಕ್ಸ್​​ಗಳು, ದೋಸೆ ಹಿಟ್ಟು, ಇಡ್ಲಿ ಹಿಟ್ಟು, ಅಂಬೊಡೆ ಮಿಕ್ಸ್, ಚಟ್ನಿಪುಡಿ, ನುಚ್ಚಿನುಂಡೆ ಮುಂತಾದ ಮಿಕ್ಸ್​​ಗಳಿವೆ.

ನಾಲ್ಕು ವರ್ಷಗಳ ಹಿಂದೆ ₹50 ಸಾವಿರ ವೆಚ್ಚದಲ್ಲಿ ‘ಸಂಕೇತಿಸ್ ಅಡುಕಲೆ' ಪ್ರಾರಂಭಿಸಿದ ರವೀಂದ್ರ ಈಗ ವರ್ಷಕ್ಕೆ ಸುಮಾರು ₹60–70 ಲಕ್ಷದ ವ್ಯವಹಾರ ಮಾಡುತ್ತಿದ್ದಾರೆ. ಮನೆಯಲ್ಲೇ ಚಿಕ್ಕದಾಗಿ ಆರಂಭಿಸಿದ ಆಹಾರ ತಯಾರಿ ಕೆಲಸ ಇಂದು ಉದ್ಯಮವಾಗಿದೆ. ಒಟ್ಟು ಎಂಟು ಮಂದಿ ಈಗ ಇಲ್ಲಿ ದುಡಿಯುತ್ತಿದ್ದಾರೆ. ಮೊದಲಿಗೆ ಮನೆಯಲ್ಲೇ ಇದ್ದ ಪಾತ್ರೆ,ಸ್ಟವ್ ಗಳನ್ನು ಬಳಸಿ ಆರಂಭಿಸಿದ ಸಣ್ಣ ಉದ್ಯಮ ಇವತ್ತು ಬೃಹದಾಕಾರವಾಗಿ ಬೆಳೆದಿದೆ. ಈಗ ಯಂತ್ರೋಪಕರಣಗಳ ಸಹಾಯದಿಂದ ಆಹಾರ ಪದಾರ್ಥಗಳನ್ನು ಸಿದ್ದಪಡಿಸಲಾಗುತ್ತಿದೆ. ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ಸಕ್ಕಿದ್ದರಿಂದ ರವೀಂದ್ರ ದಿನಕಳೆದಂತೆ ಉದ್ಯಮ ಮತ್ತು ಮಾರುಕಟ್ಟೆಯನ್ನು ವಿಸ್ತರಿಸತೊಡಗಿದರು. ಈಗ ಬೆಂಗಳೂರಿನಲ್ಲಷ್ಟೇ ಅಲ್ಲ ರಾಜ್ಯಾಧ್ಯಂತ ರವೀಂದ್ರ ಅವರ ಉತ್ಪನ್ನಗಳಿಗೆ ಬೇಡಿಕೆಯಿದೆ. ಇದಷ್ಟೇ ಅಲ್ಲ ನೆರೆಯ ರಾಜ್ಯಗಳು ಮತ್ತು ವಿದೇಶೀ ಭಾರತೀಯರಿಂದಲೂ ಸಂಕೇತಿಸ್ ಅಡುಕಲೆಯ ಆಹಾರ ಪದಾರ್ಥಗಳಿಗೆ ಬೇಡಿಕೆಯಿದೆ.

image


ಆರೋಗ್ಯಕ್ಕೆ ಹಾನಿಕರವಾದ ಪಿಜ್ಜಾ, ಬರ್ಗರ್ನಂತಹ ತಿನಿಸುಗಳನ್ನು ಮಾರುಕಟ್ಟೆಯಿಂದ ದೂರಮಾಡಿ ನಮ್ಮ ನೆಲದ ಮೂಲ ತಿನಿಸುಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸಬೇಕು. ಈ ತಿನಿಸುಗಳು ಮುಂದಿನ ಪೀಳಿಗೆಗೂ ವರ್ಗಾವಣೆಯಾಗಬೇಕು. ನಾವು ತಯಾರಿಸುವ ಆಹಾರದಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸುವುದಿಲ್ಲ. ಇವು ಅಪ್ಪಟ ಮನೆಯಡುಗೆಯ ಸ್ವಾದವುಳ್ಳದ್ದು ಮತ್ತು ಆರೋಗ್ಯಪೂರ್ಣವಾದದ್ದು ಎನ್ನುತ್ತಾರೆ ರವೀಂದ್ರ.

ರವೀಂದ್ರ ಅವರು ತಯಾರಿಸುವ ಉತ್ಪನ್ನಗಳಿಗೆ ಐಟಿ ಕಂಪನಿಗಳಲ್ಲಿ ಕೆಲಸ ಮಾಡುವವರಿಂದ ಹೆಚ್ಚಿನ ಬೇಡಿಕೆಯಿದೆ. ಇದರ ಜೊತೆಗೆ ಮನೆ ಅಡುಗೆ ಮಿಸ್ ಮಾಡಿಕೊಳ್ಳುವ ಬ್ಯಾಚುಲರ್ಸ್ ಗಳೇ ದೊಡ್ಡ ಗ್ರಾಹಕರು. ಇದರ ಜೊತೆಗೆ ಬೇರೆ ಬೇರೆ ಗ್ರಾಹಕರೂ ಈ ರುಚಿಕರ ತಿನಿಸುಗಳನ್ನು ಖರೀದಿಸುತ್ತಾರೆ. ಜನರ ತುರ್ತು ಆಹಾರ ಬೇಡಿಕೆಗಳನ್ನು ಈಡೇರಿಸಲು, ಆರೋಗ್ಯಯುತ ಪದಾರ್ಥಗಳನ್ನು ನೀಡುವ ಉದ್ದೇಶ ರವೀಂದ್ರ ಅವರದ್ದು.

ಬದ್ಧತೆ ಮತ್ತು ಇಚ್ಛಾಶಕ್ತಿಯಿದ್ದರೆ ಯಾರು ಬೇಕಾದರೂ ಉದ್ಯಮ ಪ್ರಾರಂಭಿಸಿ ಯಶಸ್ವಿಯಾಗಬಹುದು ಅನ್ನೋದನ್ನ ರವೀಂದ್ರ ಸಾಧಿಸಿ ತೋರಿಸಿದ್ದಾರೆ. ರವೀಂದ್ರ ಅವರ ಸಾಧನೆ ಉದ್ಯಮಗಳನ್ನು ಆರಂಭಿಸುವ ಕನಸಿಟ್ಟುಕೊಂಡವರಿಗೆ ಸ್ಫೂರ್ತಿಯ ಸೆಲೆಯಂತೂ ಹೌದು. ಈ ಉದ್ಯಮ ಇನ್ನಷ್ಟು ದೊಡ್ಡ ಮಟ್ಟಕ್ಕೆ ವಿಸ್ತರಿಸಲಿ ಅನ್ನೋದು ನಮ್ಮ ಹಾರೈಕೆ.