ಬಡಮಕ್ಕಳಿಗೆ ಪವರ್​​ ನೀಡುತ್ತಿರುವ 'ಐಪರ್'​​​..!

ಟೀಮ್​​ ವೈ.ಎಸ್​​.

0

ಸ್ವಯಂ ಸೇವಾ ಸಂಸ್ಥೆ ಮೂಲಕ ಬಡಮಕ್ಕಳಿಗೆ ದಾರಿದೀಪವಾಗಿದ್ದಾರೆ, ಡಾ.ಬಿಜಲಿ ಮಲಿಕ್. ಮಾನಸಿಕ ಮತ್ತು ಶೈಕ್ಷಣಿಕ ಸಂಶೋಧನಾ (ಐಪರ್) ಸಂಸ್ಥೆಯ ನಿರ್ದೇಶಕಿಯಾಗಿರುವ ಇವರು, ಬಡಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಐಪರ್ ಪ್ರಸ್ತುತ ದಕ್ಷಿಣ ಕೊಲ್ಕತಾದ ಕೊಳಚೆ ಪ್ರದೇಶದಲ್ಲಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆ ನಡೆಸುತ್ತಿದ್ದು, 682 ಹುಡುಗರು ಮತ್ತು 763 ಹುಡುಗಿಯರು ಸೇರಿದಂತೆ 1445 ಮಕ್ಕಳು ನೇರ ಶಿಕ್ಷಣ ಪಡೆಯುತ್ತಿದ್ದಾರೆ. ಒಟ್ಟು 30 ಕೇಂದ್ರಗಳಿದ್ದು ,39 ಉತ್ತಮ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳ ಅಭಿವೃದ್ಧಿಗೆ ಐಪರ್ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಬೀದಿ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವ ಗುರಿಯನ್ನು ಹೊಂದಲಾಗಿದೆ. ಶಿಕ್ಷಣ,ಪೋಷಣೆ, ನೈರ್ಮಲ್ಯ ಮತ್ತು ಸ್ವಚ್ಛತೆ, ಶುದ್ಧ ಕುಡಿಯುವ ನೀರು, ಮನರಂಜನಾ ಸೌಲಭ್ಯಗಳನ್ನು ಒದಗಿಸುವುದು, ನಿಂದನೆ ಮತ್ತು ಶೋಷಣೆ ವಿರುದ್ಧ ಮಕ್ಕಳನ್ನು ರಕ್ಷಿಸುವ ಅಂಶಗಳನ್ನು ಈ ಯೋಜನೆ ಒಳಗೊಂಡಿದೆ. ಕಳೆದ ಒಂದು ವರ್ಷದಲ್ಲಿ ಐಪರ್ 16 ಕೇಂದ್ರಗಳ ಮೂಲಕ ಕೋಲ್ಕತಾದಲ್ಲಿ 500 ಮಕ್ಕಳನ್ನು ತಲುಪಿದೆ. ಶಿಕ್ಷಣದಿಂದ ವಂಚಿತಾರ ಮಕ್ಕಳಿಗೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವುದು, ಪೌಷ್ಠಿಕಾಂಶ ಒದಗಿಸುವುದ ಮತ್ತು ಬಾಲಕಾರ್ಮಿಕರ ರಕ್ಷಣೆ ಇದರ ಮತ್ತಷ್ಟು ಕಾರ್ಯಗಳಾಗಿವೆ. ಮಕ್ಕಳ ಹಕ್ಕುಗಳ ಆಯೋಗ ಮತ್ತು ಇಂಟರ್​​ನ್ಯಾಷನಲ್ ಲೇಬರ್ ಆರ್ಗನೈಸೇಶನ್ ಅಡಿಯಲ್ಲಿ ಬಾಲಕಾರ್ಮಿಕರ ರಕ್ಷಣೆ ನಡೆಯುತ್ತಿದೆ. ಈ ಯೋಜನೆಯ ಅಡಿಯಲ್ಲಿ ಸುಮಾರು 350 ಮಕ್ಕಳನ್ನು ರಕ್ಷಿಸಲಾಗಿದೆ.

ಡಾ.ಮಲಿಕ್​​ರ ರೆಸ್ಯೂಮ್ ತುಂಬ ಆಕರ್ಷಣೀಯವಾಗಿದೆ. ದಕ್ಷಿಣ ಕೋಲ್ಕತಾದ Soroptimist ಇಂಟರ್​​ನ್ಯಾಷನಲ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿದ್ದಾರೆ. ವೃತ್ತಿಪರ ಮಹಿಳೆಯರ ಅಭಿವೃದ್ಧಿ ಮತ್ತು ವಂಚಿತ ಮಹಿಳೆಯರ, ಮಕ್ಕಳ ಕಲ್ಯಾಣ ಇದರ ಗುರಿಯಾಗಿದೆ. 1991ರಿಂದ ಇವರು ISPCANನ ಸದಸ್ಯರಾಗಿದ್ದಾರೆ. ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಕಾಯ್ದೆ 2009ರ ನಿಬಂಧನೆಗಳ ಮೇಲ್ವಿಚಾರಣೆ ಮತ್ತು ರಾಜ್ಯಮಟ್ಟದಲ್ಲಿ ಅನುಷ್ಠಾನಕ್ಕೆ ತರುವ ಕಾರ್ಯಪಡೆಯ ಸದಸ್ಯರಾಗಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕಾಯ್ದೆ 2008, ನಿಯಮಗಳನ್ನು ಅನುಷ್ಠಾನಕ್ಕೆ ತರುವ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಾ ಮಲ್ಲಿಕ್, ಶಿಕ್ಷಕರ ಕಾರ್ಯನಿರತ ಗುಂಪಿನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿ (CWC) ಅಧ್ಯಕ್ಷೆಯಾಗಿದ್ದಾರೆ.

ಐಪರ್ ನ ಪ್ರಮುಖ ಚಟುವಟಿಕೆಗಳು :

• ಸಮುದಾಯದ ಮಕ್ಕಳು ಮತ್ತು ಮಹಿಳೆಯರಿಗೆ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು.

• ಮಧ್ಯವರ್ತಿಗಳ ವಕಾಲತ್ತು ತಪ್ಪಿಸಿ, ರಕ್ಷಣೆಗಾಗಿ ಮಕ್ಕಳ ಗುಂಪುಗಳ ರಚನೆ

• ಅಪಾಯದ ಸ್ಥಿತಿಯಲ್ಲಿರುವ ಮಕ್ಕಳಿಗೆ ಅನೌಪಚಾರಿಕ ಶಿಕ್ಷಣ

• ವಯಸ್ಕರಿಗೆ ಕ್ರಿಯಾತ್ಮಕ ಶಿಕ್ಷಣ, ವಿಶೇಷವಾಗಿ ಮಹಿಳೆಯರಿಗೆ ಶಿಕ್ಷಣ

• ಅನೌಪಚಾರಿಕ ಕೇಂದ್ರಗಳಲ್ಲಿ ಪೌಷ್ಟಿಕತೆಯ ಕೊರತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕಾಂಶ ಪೂರೈಕೆ

• ಸ್ಥಿರ ಮತ್ತು ಮೊಬೈಲ್ ಕ್ಲಿನಿಕ್ ಮೂಲಕ ಆರೋಗ್ಯ ಕಾಪಾಡುವುದು.

• ಔಪಚಾರಿಕ ಶಿಕ್ಷಣದ ಮೂಲಕ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದು ಮತ್ತು ಮರಳಿ ಶಾಲೆಗೆ ಬರುವವರಿಗೆ ಸದಾ ಬೆಂಬಲ ನೀಡುವುದು

• ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರಿಗೆ ತರಬೇತಿ ನೀಡುವುದು

• ಅಗತ್ಯವಿರುವವರ ಜೊತೆ ಆಪ್ತ ಸಮಾಲೋಚನೆ ನಡೆಸುವುದು.

• ಮಕ್ಕಳ ಶಿಕ್ಷಣ, ಆಹಾರ ಮತ್ತು ಆರೋಗ್ಯ, ರಕ್ಷಣೆಯ ಜವಾಬ್ದಾರಿ ಹೊತ್ತುಕೊಳ್ಳುವುದು.

• ಪರ್ಯಾಯ ಜೀವನಾಧಾರ ನೀಡುವ ನಿಟ್ಟಿನಲ್ಲಿ ಯುವತಿಯರ ಕೌಶಲ್ಯ ವೃದ್ಧಿಗೆ ಒತ್ತು

• ಪರಿಸರ ಸುಧಾರಣೆ ಮತ್ತು ಮಾಲಿನ್ಯ ನಿಯಂತ್ರಣದ ಬಗ್ಗೆ ಜಾಗೃತಿ.

• ಪಶ್ಚಿಮ ಬಂಗಾಳ ಪ್ರಾಥಮಿಕ ಶಿಕ್ಷಣ ಬೋರ್ಡ್'ನ ಅಡಿಯಲ್ಲಿ ಪ್ರಾಥಮಿಕ ಶಿಕ್ಷಕರಿಗೆ ತರಬೇತಿ.

• ಕಲ್ಯಾಣಿ ವಿವಿ ಸಂಯೋಜನೆಯಲ್ಲಿ ಸಮಾಜ ಕಲ್ಯಾಣ ಮತ್ತು ಮ್ಯಾನೇಜ್​​ಮೆಂಟ್​​​​ ಡಿಪ್ಲೊಮಾ ಕೋರ್ಸ್

ಐಪರ್, ಸಮಾಲೋಚನೆ ಮತ್ತು ಸ್ವಯಂ ಅರಿವು ಮೂಡಿಸುವ ಮೂಲಕ ಮದ್ಯಪಾನ ಮತ್ತು ಮಾದಕವಸ್ತು ತಡೆಗಟ್ಟುವ ಕೆಲಸ ಮಾಡುತ್ತಿದೆ.

ಅನುಭವಿಗಳ ಮಾತು

"ಏಕಾಂಗಿಯಾಗಿ ಎರಡು ಹೆಣ್ಣು ಮಕ್ಕಳ ಆರೈಕೆ ಮಾಡುವುದು ನನಗೆ ತುಂಬಾ ಕಷ್ಟವಾಗುತ್ತಿತ್ತು. ಐಪರ್, ನನ್ನ ಕಿರಿಯ ಮಗಳನ್ನು ಅವರ ಆರೈಕೆಗೆ ತೆಗೆದುಕೊಂಡು, ಆಹಾರ, ಆಶ್ರಯ ಮತ್ತು ಶೈಕ್ಷಣಿಕ ಬೆಂಬಲ ಒದಗಿಸಿ ನನ್ನ ಸಮಸ್ಯೆಗೆ ಪರಿಹಾರ ನೀಡಿದೆ" ಎಂದು ಮನೆ ಕೆಲಸ ಮಾಡುವ ದಕ್ಷಿಣ ಕೋಲ್ಕತಾದ ಮಿಥು ಮೊಂಡಲ್ ಹೇಳ್ತಾರೆ.

ಸುಭದ್ರಾ ಹೇಳುವ ಕಥೆಯೇ ಬೇರೆ. " ನನ್ನ ಗಂಡ ಮದ್ಯವ್ಯಸನಿ ಮತ್ತು ಕುಟುಂಬ ನಿರ್ವಹಣೆಗೆ ಯಾವುದೇ ಸಹಾಯ ಮಾಡುವುದಿಲ್ಲ. ನಾನು ಎಷ್ಟು ಕೆಲಸ ಮಾಡಿದರೂ ನನ್ನ ಇಬ್ಬರು ಮಕ್ಕಳನ್ನು ಸಾಕಲು ಕಷ್ಟವಾಗುತ್ತಿತ್ತು. ನನ್ನ ನೆರೆಹೊರೆಯವರಿಂದ ಐಪರ್ ಬಗ್ಗೆ ತಿಳಿದೆ ಮತ್ತು ನನ್ನ ಒಬ್ಬ ಮಗಳನ್ನು ಅವರ ಆರೈಕೆಗೆ ನೀಡಿದೆ. ಈಗ ಒಂದು ಮಗುವನ್ನು ನೋಡಿಕೊಂಡು, ಕುಟುಂಬ ನಿರ್ವಹಿಸುವುದು ಸುಲಭವಾಗಿದೆ’’ ಎನ್ನುತ್ತಾರೆ ಮನೆ ಕೆಲಸ ಮಾಡುವ ಸುಭದ್ರಾ.

ಶಿಕ್ಷಣವಿಲ್ಲದೇ ಯಾವ ಅಭಿವೃದ್ಧಿಯೂ ಸಾಧ್ಯವಿಲ್ಲ.ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಈ ಉದ್ದೇಶದಿಂದಲೇ ಸಮುದಾಯದ ಮಕ್ಕಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಉತ್ತಮ ಶಿಕ್ಷಣ ನೀಡುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ. ಶೈಶಾವಸ್ಥೆ ಮತ್ತು ಮಕ್ಕಳ ಅಭಿವೃದ್ಧಿ ಬಗ್ಗೆ ತಿಳಿಸಿಕೊಡುವ ನಿಟ್ಟಿನಲ್ಲಿ 2-6 ವರ್ಷದ ಮಕ್ಕಳನ್ನು ನಿಭಾಯಿಸುವ ಶಿಕ್ಷಕರು ಹಾಗೂ ಪಾಲಕರಿಗೆ 6 ತಿಂಗಳ ಕೋರ್ಸ್ ಕೂಡ ಆರಂಭಿಸಲಾಗಿದೆ. ತರಬೇತಿ, ಮಕ್ಕಳ ಮನೋವಿಜ್ಞಾನ ಮತ್ತು ಮಕ್ಕಳ ನಡವಳಿಕೆಯ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗಿದೆ.

ಐಪರ್ ಸಮುದಾಯದ ಯುವಕರಿಗೆ ವಿವಿಧ ಕ್ಷೇತ್ರಗಳಲ್ಲಿ ತರಬೇತಿ ನೀಡುವ ಕೇಂದ್ರವನ್ನು ತೆರೆದಿದೆ. ಬೀದಿಗಳಲ್ಲಿ ವಾಸಿಸುವ 28 ಹುಡುಗಿಯರಿಗೆ ಐಪರ್, ಆಶ್ರಯ ನೀಡಿದೆ. ಅನಾಥ ಯುವಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಂಪ್ಯೂಟರ್ ತರಬೇತಿಯನ್ನೂ ಆರಂಭಿಸಲಾಗಿತ್ತು. ಮೊಬೈಲ್ ವ್ಯಾನ್ ನಲ್ಲಿ ಕಂಪ್ಯೂಟರ್ಡೊ ಕೊಂಡೊಯ್ದು ಯುವಕರಿಗೆ ಆನಿಮೇಷನ್ ಸೇರಿದಂತೆ ಇತರ ತರಬೇತಿ ನೀಡಲಾಗುತ್ತಿತ್ತು. ಕೆಲ ಸಮಸ್ಯೆಗಳಿಂದಾಗಿ ಸದ್ಯ ತರಬೇತಿಯನ್ನು ಸ್ಥಗಿತಗೊಳಿಸಲಾಗಿದೆ. ಶೀಘ್ರ ತಮ್ಮ ಪ್ರಯತ್ನದಲ್ಲಿ ಯಶಸ್ಸು ಕಾಣುವುದಾಗಿ ಮಲ್ಲಿಕ್ ಭರವಸೆ ವ್ಯಕ್ತಪಡಿಸಿದ್ದಾರೆ. ದುರ್ಬಲ ಹುಡುಗಿಯರಿಗಾಗಿ ಟೇಕ್ವಾಂಡೋ ತರಬೇತಿಯನ್ನು ಸಂಸ್ಥೆ ನೀಡುತ್ತಿದೆ. ಇಲ್ಲಿ ತರಬೇತಿ ಪಡೆದ ಐದು ಹುಡುಗಿಯರು, ಬೆಂಗಳೂರು ಮತ್ತು ನೇಪಾಳದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಒಟ್ಟಿನಲ್ಲಿ ಐಪರ್​ ಪವರ್​​ಫುಲ್​​ ಸಮಾಜ ನಿರ್ಮಾಣದ ಕಾರ್ಯದಲ್ಲಿ ತೊಡಗಿಕೊಂಡಿದೆ.

Related Stories

Stories by YourStory Kannada